ನೀರವ ಹಿಮಾಲಯದ
ಚಳಿಯ ರಾತ್ರಿ
ರಕ್ತ ಹೆಪ್ಪುಗಟ್ಟಿದ ಅನುಭವ
ಗಾಳಿಯೂ ಸದ್ದು ಮಾಡದೆ ಚಲಿಸಿದೆ
ಕಣ್ಣ ಎವೆಯೂ ಮುಚ್ಚಿದರೆ ಸದ್ದಾಗುವ
ಭಯದಲ್ಲಿ ತೆರೆದೇ ಇದೆ
ಎದೆಯ ಬಡಿತ ಹಿಮಗಾಳಿಗೆ
ಪೈಪೋಟಿ ನೀಡಲು
ನಿಂತಂತೆ ತಣ್ಣಗಾಗಿದೆ
ಗಾಳಿ ಹಿಮ ಮಂಜು ಹಸಿರ ಹುಲ್ಲು
ತಮ್ಮ ಎಂದಿನ ವ್ಯವಹಾರದಲ್ಲಿ ನಿಮಗ್ನ
ಬಂಕರಿನೊಳಗೆ ಕುಳಿತ ಯೋಧ
ರಷ್ಯನ್ ಕಲಷ್ನಿಕೋವ್ ಕೋವಿಯ
ಕುದುರೆ ಮೇಲೆ ಬೆರಳಾಡಿಸುತ್ತ
ಕಲ್ಲು ಉಸುಕಿನ ಚೀಲದಾಚೆಗಿದ್ದ ಜಗತ್ತನ್ನ
ಯಾವುದೋ ಬೆರಗಿನಿಂದ ನೋಡುತ್ತಿದ್ದ
ತನ್ನ ಮೇಲೆ ಬೆರಳಾಡಿಸುತ್ತ ಬೆಚ್ಚಗೆ
ಅದೇ ರಷ್ಯನ್ ಮೇಡ್ ಜರ್ಕಿನ್ ನಲ್ಲಿ
ಬೆಚ್ಚಗೆ ಕುಳಿತ ಸೈನಿಕನನ್ನ
ಕಂಡು ಈರ್ಷ್ಯೆ ಉಕ್ಕಿತು
ಶತ್ರು ಪಾಳಯದ ಬಂಕರ್ ನಲ್ಲಿದ್ದ
ಕಲಷ್ನಿಕೋವ್‌ಗೂ ಅದೇ ಭಾವ
ಕಲಷ್ನಿಕೋವ್ ನೆನಪಿಗೆ ಜಾರಿತು
ಡೈನಮೈಟ್ ಕಂಡುಹಿಡಿದ ಅಲ್ಫ್ರೆಡ್
ತನ್ನ ಶೋಧನೆ ಬಾಂಬ್ ಆದ
ಪ್ರಾಯಶ್ಚಿತ್ತಕ್ಕೆ ದತ್ತಿ ಪಾರಿತೋಷಕ,
ನೋಬಲ್ ಹುಟ್ಟುಹಾಕಿ ಸಮಾಧಾನಪಟ್ಟ
ಅದೇ ಕಲಷ್ನಿಕೋವ್‌ಗೆ ತನ್ನ
ರಕ್ತ ಬೀಜಾಸುರ ಸಂತಾನ
ಎಕೆ 47 ಗೆ ಹೆತ್ತ ತಪ್ಪಿಗೆ
ಪಶ್ಚತ್ತಾಪಕ್ಕೆ ಒಂದೂ
ನೆಪ ಸಿಗಲಿಲ್ಲ
ಹೀಗೆ ನೆನಪಿಗೆ ಜಾರಿದ ಸಮಯದಲ್ಲೇ
ಎದುರಿಗಿದ್ದ ಶತ್ರು ಸೈನಿಕನ
ಗಡ್ಡದಲ್ಲಿ ತುರಿಕೆ ಉಂಟಾಯ್ತು
ಎಷ್ಟು ಕೆರೆದರೂ ನವೆ ಇಳಿಯದಿದ್ದಾಗ
ಕೋಪದಲ್ಲೊಮ್ಮೆ ನಲವತ್ತೇಳ(47)ರ
ಕುದುರೆ ಒತ್ತಿದ
ಭೂಮ್ಯಾಕಾಶ ಬೆಟ್ಟಕಾಡು
ಗಿರಿಕಂದರ ಕಣಿವೆಯ ಮಡಿಲಲ್ಲಿ
ಆಗಿನ್ನೂ ನಿದ್ರೆಗೆ ಜಾರುತ್ತಿದ್ದ
ಶಾಂತಿ ಬೆಚ್ಚಿಬಿದ್ದಿತು
ಇತ್ತ ಸುಮ್ಮನೆ ಬಂಕರ್‌ನ ಒಳಗಿಂದ
ನಲವತ್ತೇಳರ ಮೇಲೆ ಹಾಯಾಗಿ
ಕೈಯಾಡಿಸುತ್ತ ನಕ್ಷತ್ರ ತಾರೆಗಳನ್ನ
ಎಣಿಸುತ್ತ ಸುಂದರ ಮುಂಜಾವಿಗೆ
ಕಾಯುತ್ತಿದ್ದ ಸೈನಿಕನ ಪಕ್ಕದಲ್ಲೇ
ಡಿಕ್ಕಿ ಹೊಡೆದು ಚೂರಾಯಿತು
ಸುಂದರ ಕನಸಿಗೆ ಕೊಳ್ಳಿ
ಇಟ್ಟವನಿಗೆ ಬುದ್ದಿ ಕಲಿಸಲು
ತನ್ನ ಕಲಷ್ನಿಕೋವ್ ಕುದುರೆ ಎಳೆದ
ನಲತ್ತೇಳರ ಬಾಯಿಂದ ಮತ್ತೊಂದು
ರಕ್ತಬೀಜಾಸುರನ ಕಣ ಬಲಿ
ಹುಡುಕಿ ಕ್ಷಣಮಾತ್ರದಲ್ಲಿ ಹೊರಟಿತು
ಕಲಷ್ನಿಕೋವ್ ಇನ್ನೊಂದು
ಕಲಷ್ನಿಕೋವನ್ನ ಹುಡುಕಿ ಹೊರಟಿತು
ತನ್ನವನನ್ನೇ ಕೊಲ್ಲಲು ಹುಡುಕಿ
ಹೊರಟವನಿಗೆ ತನ್ನನ್ನು
ಹುಟ್ಟುಹಾಕಿದವನನ್ನ ಒಮ್ಮೆ
ಇದೇ ವೇಗದಲ್ಲೊಮ್ಮೆ
ಭೆಟ್ಟಿಯಾಗುವ ಮನಸ್ಸಾಯ್ತು
ಅಲ್ಲೆಲ್ಲೋ ಕಲಷ್ನಿಕೋವ್ ನೊಬಲ್ ನನ್ನು
ನೆನಸಿಕೊಂಡು ಪಟ್ಟುಕೊಂಡ ಮರುಕ
ಯಾರೋ ನೆನಸಿಕೊಂಡಂತಾಗಿ ಬೆಚ್ಚಿ
ಎದ್ದು ಕುಳಿತ ನೊಬಲ್‌ಗೆ
ಕಂಡಿದ್ದು ಅದೇ ಹಳೆ ನರಕ
( ಇಮ್ಮಡಿ ಸಂತೋಷ್, ಅನೂಹ್ಯ ವಿಷಯಗಳನ್ನು ಕವಿತೆಯಾಗಿಸುವ ಅಪರೂಪದ ಕವಿ. ʻಉಗಾದಿ ಗೌಡನ ಪ್ರಣಯ ಪ್ರಸಂಗʻ ಇವರ ಪ್ರಕಟಿತ ಕಾದಂಬರಿ. ಪ್ರಸ್ತುತ ಸನ್ ಉದಯ ವಾಹಿನಿಯ ಸಾಮಾಜಿಕ ಜಾಲತಾಣದಲ್ಲಿ ಕೆಲಸ)








