ವ್ಯಕ್ತಿಯ ವೃತ್ತಿ ಅವರ ಬದುಕನ್ನು ನಡೆಸಿದರೆ ಅದೇ ವ್ಯಕ್ತಿಯಲ್ಲಿರುವ ಪ್ರವೃತ್ತಿ ತನ್ನಲ್ಲಿರುವ ಶಕ್ತಿ ಹಾಗೂ ಪ್ರತಿಭೆಯನ್ನು ಗುರುತಿಸಿ, ಪರಿಶ್ರಮದಿಂದ ಬೆಳೆಸುತ್ತದೆ.. ಹಾಗೂ ಸಮಾಜವೂ ತನ್ನನ್ನು ಗುರುತಿಸುವಂತೆ ಮಾಡುತ್ತದೆ.
ವ್ಯಕ್ತಿ ತನ್ನಲ್ಲಿರುವ ವೃತ್ತಿ ಹಾಗೂ ಪ್ರವೃತಿ ಗಳ ಸಮನ್ವಯದಿಂದ ಪ್ರವೃತ್ತಿಯನ್ನೇ ವೃತ್ತಿಯನ್ನಾಗಿ ಆರಿಸಿಕೊಂಡ ವ್ಯಕ್ತಿಗಳಿಂದ ಅವರಿರುವ ಕ್ಷೇತ್ರಕ್ಕೆ ಹೆಚ್ಚಿನ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಸಮಾಜ ನೀಡುವ ಪುರಸ್ಕಾರದಿಂದ ಆ ವ್ಯಕ್ತಿಗೂ ಅಷ್ಟೇ ಪ್ರಯೋಜನ ಸಿಗುತ್ತದೆ. ಇವೆರಡೂ ಪರಸ್ಪರ ‘ವ್ಯಕ್ತಿಯ ಪ್ರತಿಭೆ ಹಾಗೂ ಸಮಾಜದ ಅವಶ್ಯಕತೆ ‘- ಇವೆರಡರ ನಡುವಿನ ಅವಿನಾಭಾವ ಸಂಬಂಧ. ಇದಕ್ಕೆ ದೊಡ್ಡ ಉದಾಹರಣೆ ರಂಗಭೂಮಿ ದಿಗ್ಗಜ ಸಿ.ಆರ್.ಜಂಬೆ ಅವರು.
ಸಾವಿರದ ಒಂಭೈನೂರ ಎಂಬತ್ನಾಕರ ಸಮಯ. ಹೆಗ್ಗೋಡಿನಲ್ಲಿ ನಾನು ನೀನಾಸಮ್ ವಿದ್ಯಾರ್ಥಿಯಾಗಿ ಹೋದ ಮೊದಲ ಕೆಲವು ದಿನಗಳು. ಆ ದಿನಗಳಲ್ಲಿ ನೀನಾಸಮ್ ತಂಡದವರ ‘ಹ್ಯಾಮ್ಲೆಟ್ ‘ ನಾಟಕ ರೀಡಿಂಗ್ /ರಿಹರ್ಸಲ್ ಗಳನ್ನು ಆ ವರ್ಷದ ತರಬೇತಿಯ ವಿದ್ಯಾರ್ಥಿಗಳಾದ ನಾವೆಲ್ಲರೂ ಪ್ರತಿದಿನ ನೋಡುತ್ತಿದ್ದೆವು.
ಎನ್.ಎಸ್.ಡಿ.ಪದವಿ ಮುಗಿಸಿ ಬಂದ ಕೆ.ಜಿ. ಕಿಟ್ಟು ಹ್ಯಾಮ್ಲೆಟ್ ಪಾತ್ರಧಾರಿಯಾದರೆ ಪ್ರಿನ್ಸಿಪಾಲ್ ಸಿ.ಆರ್. ಜಂಬೆಯವರ ಪಾತ್ರ ಹ್ಯಾಮ್ಲೆಟ್ ನ ಆಪ್ತ ಗೆಳೆಯ ಹೊರೇಷಿಯೋ. ಹ್ಯಾಮ್ಮೆಟ್ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದವರು ರಾಮಚಂದ್ರ ದೇವ. ಆದರೆ ಅದರ ಮೂಲರೂಪ ಉಳಿಸಿಕೊಂಡು , ಇಡೀ ನಾಟಕವನ್ನು ಪುನಃ ಬರೆದು ನಿರ್ದೇಶನವನ್ನು ಮಾಡಿದವರು ನಮ್ಮೆಲ್ಲರ ಪ್ರೀತಿಯ ಕೆ.ವಿ.ಸುಬ್ಬಣ್ಣನವರು. ಅವರಿಗೆ ಸಹಾಯಕರಾಗಿ ಜೊತೆಗಿದ್ದವರು ಎನ್.ಎಸ್.ಡಿ ಪದವಿ ಪಡೆದ ಕೆ.ವಿ. ಅಕ್ಷರರವರು. ಉಳಿದ ಪಾತ್ರಧಾರಿಗಳು ಹಾಗೂ ತಾಂತ್ರಿಕ ಕಲಾವಿದರೆಲ್ಲರೂ ನೀನಾಸಮ್ ಬಳಗದವರು.
ದುರಂತ ನಾಟಕ ‘ಹ್ಯಾಮ್ಲೆಟ್ ‘ ಯಾರಿಗೆ ಗೊತ್ತಿಲ್ಲ ಹೇಳಿ!

ಅನಿಶ್ಚಿತತೆ, ಅನುಮಾನ, ಅತಿಯಾದ ಭಾವುಕತೆ, ಬದುಕಿನಲ್ಲಿ ಏನನ್ನೂ ಸ್ಪಷ್ಟವಾಗಿ ಗ್ರಹಿಸದಂಥ ದ್ವಂದ್ವ ಮನಸ್ಥಿತಿ- ಇಂಥ ಋಣಾತ್ಮಕ ಗುಣಗಳ ಸರದಾರ – ಹ್ಯಾಮ್ಲೆಟ್ . ಬದುಕಿನ ಹೆಚ್ಚಿನ ಸಂದರ್ಭಗಳಲ್ಲಿ ‘to be , or not to be ‘- ಎನ್ನುತ್ತಲೇ ತನ್ನ ಸುಂದರ ಬದುಕಿನ ಸರ್ವನಾಶಕ್ಕೆ ತಾನೇ ಕಾರಣನಾಗಿ ‘ದುರಂತವ್ಯಕ್ತಿ ‘-ಯೆಂಬ ಪಟ್ಟವನ್ನು ಇಂದಿಗೂ ತನ್ನದಾಗಿ ಉಳಿಸುಕೊಂಡು ಬಂದ ರಾಜಕುಮಾರ. ಅವನ ಗೆಳೆಯ ಹೊರೇಷಿಯೊ ಪಾತ್ರ ಸಮಚಿತ್ತ, ಸಶಕ್ತ.
ರೀಡಿಂಗ್ ಅವಧಿಯಲ್ಲಿ ನಾಟಕದ ಪಾತ್ರಗಳು, ಸಂಭಾಷಣೆಗಳು, ಹಾಗೂ ಸನ್ನಿವೇಶಗಳ ಕುರಿತಾದ ಜಂಬೆ ಸರ್ ವಿಶ್ಲೇಷಣೆಗಳು/ ಚರ್ಚೆಗಳು ತುಂಬ ಅರ್ಥಗರ್ಭಿತವಾಗಿರುತ್ತಿತ್ತು. ಹೊಸಬರಾದ ನಮಗೆ ಆ ನಾಟಕದ ಆಂತರಿಕ ಆಶಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಇವುಗಳು ನೆರವಾಗುತ್ತಿತ್ತು. ಈ ವಿಶ್ಲೇಷಣೆಯ ಸಂಧರ್ಭದಲ್ಲಿ ನಾಟಕ ತಂಡದವರ ಜೊತೆ ವಿಮರ್ಶಕ ರಾದ ಟಿ.ಪಿ. ಅಶೋಕ, ನಾಟಕಕಾರ ಪ್ರಸನ್ನ, ಪೂರ್ಣಿಮಾ, ಸುಬ್ಬಣ್ಣ ಹಾಗೂ ಇನ್ನಿತರ ಸಾಹಿತಿಗಳ ಭಾಗವಹಿಸುವಿಕೆ ಸಹ ಕೊನೆಯವರೆಗೂ ಇತ್ತು.
ನಾಟಕ ತುಂಬ ಯಶಸ್ವಿಯಾಗಿ ಪ್ರದರ್ಶನಗೊಂಡಿತು . ಮರು ಪ್ರದರ್ಶನಗಳೂ ನಡೆದವು.
ಅನುಮಾನದ ಭೂತಕ್ಕೆ ಬಲಿಯಾಗಿ, ಪ್ರೀತಿಯ ಹುಡುಗಿಯನ್ನು ಕೊಂದು, ಅರೆಹುಚ್ಚನಾದ ಹ್ಯಾಮ್ಲೆಟ್ ಕೊನೆಗೂ ಯುದ್ಧಕ್ಕೆ ಹೊರಟು ನಿಂತ ಸಂದರ್ಭ. ಆ ಕ್ಷಣದಲ್ಲಿ ಅವನ ಆಪ್ತಮಿತ್ರ ಹೊರೇಷಿಯೋನಿಗೆ ತನ್ನ ಸ್ನೇಹಿತನನ್ನು ಕಳೆದುಕೊಳ್ಳುವ ಸತ್ಯ ಅರಿವಾಗಿತ್ತು. ಹ್ಯಾಮ್ಲೆಟ್ನ ಹಿತಚಿಂತಕನಾಗಿ ಅವನ ಕಷ್ಟ-ಸುಖಗಳ ಎಲ್ಲಾ ಸಮಯಗಳ ಭಾಗೀದಾರ ಅವನು. ತನ್ನ ಸ್ನೇಹಿತನ ಕೊನೆಯ ಭೇಟಿಯಲ್ಲಿ ಸ್ವಚ್ಛ ಮನಸ್ಸಿನ ಹೊರೇಷಿಯೋ ಭಾರವಾದ ತನ್ನ ನಿಟ್ಟುಸಿರನ್ನು ಗೆಳೆಯನಿಗೆ ತೋರಿಸಿಕೊಳ್ಳಲಾರ. ಹಾಗಂತ ಅವನ ಈಗಿನ ನಿರ್ಧಾರವನ್ನೂ ತಡೆಯಲಾರ. ಅಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಗೆಳೆಯನಿಗೆ ಗೊತ್ತಾಗದ ಹಾಗೆ ತನ್ನ ತೊಳಲಾಟವನ್ನು ಬಚ್ಚಿಟ್ಟುಕೊಳ್ಳಲು ಶತಪ್ರಯತ್ನ ನಡೆಸುತ್ತಾನೆ. ಜೊತೆಗೆ ” ಜೇನು ಹುಳಗಳ ಹಾಗೆ ಮುತ್ತಿ ಬರುವ ನೂರಾರು ಸಂಶಯಗಳನ್ನು ಹತ್ತಿಕ್ಕಿಕೊಂಡು ಪ್ರಭು…ಶುಭ ಹಾರೈಸುತ್ತೇನೆ. ಗೆಲುವು ನಿನ್ನದಾಗಲಿ” ಎನ್ನುವ ಕೊನೆಯ ಶುಭ ಪ್ರಯಾಣವನ್ನು ಕೋರುತ್ತಾನೆ. ಈ ಸವಾಲನ್ನು ಜಂಬೆ ಸರ್ ನಿಭಾಯಿಸಿದ ರೀತಿ ಅನನ್ಯ. ಗೆಳೆಯ ಕಿಟ್ಟು ಕೂಡ ಅಷ್ಟೇ ಸಮರ್ಥವಾಗಿ ನಿಭಾಯಿಸಿದ್ದರು. ಎಷ್ಟೆಂದರೂ ಜೀವದ ಗೆಳೆಯನ ಹಾರೈಕೆಯಲ್ಲವೆ?
ಮೂಲ ನಾಟಕದಲ್ಲಿ ತುಂಬ ದೀರ್ಘವಿರುವ ಡೈಲಾಗಿನ ಎಲ್ಲಾ ಅರ್ಥ ಹಾಗೂ ಆಶಯಗಳಿಗೆ ಧಕ್ಕೆಯಾಗದಂತೆ ; ಅವೆಲ್ಲವನ್ನೂ ಕ್ರೋಡೀಕರಿಸಿ; ಚಿಕ್ಕದಾದ ಆದರೆ ನಟರ ಭಾವಾಭಿವ್ಯಕ್ತಿಗೆ ತುಂಬ ಸವಾಲಾಗುವ ಈ ಡೈಲಾಗ್ ಹಾಗೂ ಆಗಿನ ಸಂದರ್ಭದ ಅಭಿನಯವು ಇಬ್ಬರು ನಟರಿಗೂ ತುಂಬ ಸವಾಲಾಗಿತ್ತು. ಹ್ಯಾಮ್ಲೇಟ್ ಹಾಗೂ ಹೊರೇಷಿಯೊ ಪಾತ್ರಗಳಲ್ಲಿನ ಜೀವಂತಿಕೆಯು ಎಷ್ಟು ನಿಖರವಾಗಿತ್ತೆಂದರೆ ಇಷ್ಟು ವರ್ಷಗಳ ನಂತರವೂ ನಿಜ ಜೀವನದ ಗೆಳೆಯರಿಬ್ಬರು ನಾಟಕದ ಆಪ್ತ ಗೆಳೆಯರಾದ ಆ ದೃಶ್ಯವು ಆಗಾಗ ನನ್ನ ಕಣ್ಣೆದುರು ನಿಲ್ಲುತ್ತದೆ. ಸ್ವಚ್ಛ ಸ್ನೇಹದ ಎಲ್ಲಾ ಸ್ಥರಗಳಲ್ಲಿಯೂ ತಾನೇ ಮೈಲುಗಲನ್ನು ನೆಡುವಲ್ಲಿ ಮುಂಚೂಣಿಯಾಗಿ ನಿಲ್ಲುವ ಈ ‘ಡೈಲಾಗ್ ‘ ನನ್ನಲ್ಲಿ ಅಮೂರ್ತವಾಗಿ ತಳವೂರಿದೆ. ಆಗಾಗ ಮನಃಪಟಲದಲ್ಲಿ ಹಾದು ಹೋಗುತ್ತಿರುವ ಈ ಸಾಲುಗಳ ದನಿಯು ಸ್ನೇಹಕ್ಕಿರುವ ಬಂಧದ ಹಿತ ಹಾಗೂ ಗೊತ್ತಿದ್ದೂ ಕಳೆದುಕೊಳ್ಳುವ ಅಸಹಾಯಕತೆಯ ಯಾತನೆಯ ಜುಗಲಬಂಧಿಯನ್ನು ಪ್ರತಿಸಲವೂ ಸೃಷ್ಟಿಸಿ, ಅದರಲ್ಲಿ ಕೆಲವು ಕ್ಷಣ ಕಳೆದು ಹೋಗುವಂತೆ ಮಾಡುತ್ತದೆ. ಕಾಲಯಾನ ಮುಗಿಸಿದ ಜಂಬೆ ಸರ್ ಮತ್ತೆ ಮತ್ತೆ ನೆನಪಾಗುತ್ತಾರೆ.
ಇತ್ತೀಚೆಗಷ್ಟೇ ರಂಗಕರ್ಮಿಗಳಾದ ವಿಶ್ವೇಶ್ವರ ಹಳ್ಳಿಕೇರಿ ಮಠ್, ಲಕ್ಷ್ಮಿ ನಾಡಗೌಡ ಹಾಗೂ ನನ್ನನ್ನು ಹೆಗ್ಗೋಡಿನ ಜಂಬೆಯ ಮನೆಯಲ್ಲಿ ನೋಡಿದ ಜಂಬೆ -” ನೀವು ಮೂವರು ಒಟ್ಟಿಗೆ ಹೇಗೆ ಬಂದ್ರಿ ?”ಪ್ರಶ್ನೆ ನಲವತ್ತೆರಡು ವರುಷದ ಹಿಂದಿನ ನೀನಾಸಮ್ ಪ್ರಿನ್ಸಿಪಾಲ್ ಜಂಬೆಯನ್ನು ನೆನಪಿಸಿತು.
“ಅರೆರೆ….ಹೌದಲ್ಲವಾ”! ದಿನನಿತ್ಯದ ನಮ್ಮ ಬದುಕಿನ ಯಾವುದೋ ಘಳಿಗೆಯಲ್ಲಿ ನಮಗರಿವಿಲ್ಲದೇ ನಮ್ಮಲ್ಲಿ ಬರುವ ಉದ್ಗಾರ ಅಷ್ಟಕ್ಕೆ ನಿಲ್ಲುವುದಿಲ್ಲ. ನಮ್ಮನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡು, ನಮ್ಮಲ್ಲಿಯೇ ಇಳಿದು, ಹುಡುಕಿ ತೆಗೆದು; ನಮ್ಮೆದುರು ಅವುಗಳನ್ನು ಪುನಃ ಇದ್ದ ಹಾಗೆಯೇ ಕಣ್ಣೆದುರು ನಿಲ್ಲಿಸುತ್ತದೆ.
‘ ಓಹ್.. ಇದು ಅ ಸಾಹಿತ್ಯದ ಓದು ಅಥವಾ ನೋಡಿದ ಪ್ರದರ್ಶನದಲ್ಲಿ ಅನುಭವಿಸಿದ ಅನುಭೂತಿಯ ಕ್ಷಣಗಳು…..’ ಎಂದು ನಮ್ಮನ್ನು ಆ ನೆನಪಿನಲ್ಲಿ ಕ್ಷಣಕಾಲ ಮುಳುಗಿಸಿಡುವ ರೋಮಾಂಚನವೇ ಯಾವುದೇ ಸಾಹಿತ್ಯ ಅಥವಾ ರಂಗಭೂಮಿ ಯನ್ನೊಳಗೊಂಡ ಯಾವುದೇ ಕಲಾ ಪ್ರಾಕಾರಗಳಿಗಿರುವ ತಾಕತ್ತು.
ಜಂಬೆ ಹಾಸಿಗೆಯಲ್ಲಿ ಮಲಗಿದ್ದಾರೆ. ಆದರೆ ಅವರು ಎಚ್ಚರವಾಗಿದ್ದಾರೆ.ಅವರ ಪಕ್ಕ ಅನತಿ ದೂರದಲ್ಲಿ ಕೆ.ಜಿ. ಕಿಟ್ಟು(ಕೃಷ್ಣಮೂರ್ತಿ) ಕುಳಿತಿದ್ದಾರೆ. ಗಮನವೆಲ್ಲ ಜಂಬೆಯ ಮೇಲಿದೆ. ಅಡಿಗೆ ಮನೆಯಲ್ಲಿ ಜಂಬೆ ಪತ್ನಿ ಭಾರತಿ ಜೊತೆ ಕಿಟ್ಟು ಪತ್ನಿ ಸುಶೀಲ ಮಾತನಾಡುತ್ತಿದ್ದಾಳೆ. ಜಂಬೆಗೆ ನಿದ್ದೆ ಆವರಿಸಿರುವುದನ್ನು ತಿಳಿದ ಕಿಟ್ಟು ಹೊರಗಡೆ ಬಂದಾಗ work from home ನಲ್ಲಿದ್ದ ಜಂಬೆಯ ಮಗ ಜಕ್ಕಣ ಕೆಲಸ ನಿಲ್ಲಿಸಿ ಅವರ ಜೊತೆ ಯಾವುದೋ ಗಹನವಾದ ವಿಷಯ ಚರ್ಚಿಸುತ್ತಿದ್ದಾನೆ. ಇದು ಒಂದು ದಿನದ್ದಾಗಿರಲಿಲ್ಲ. ಜಂಬೆ ಅನಾರೋಗ್ಯಕ್ಕೆ ಒಳಗಾಗುವ ಪೂರ್ವದಿಂದಲೂ ಎರಡೂ ರಂಗಭೂಮಿ ದಿಗ್ಗಜ ಕುಟುಂಬಗಳ ಮನಸುಗಳು ಒಬ್ಬರಿಗೊಬ್ಬರು ಹೇಳದೆಯೇ ಸಮಯ ನೀಡುವ ಕುರಿತು , ಪರಸ್ಪರ ತಮಗೇ ತಾವು ಹಾಕಿಕೊಂಡ ಸ್ನೇಹಮಯ ದಿನಚರಿ. ಹಣಕ್ಕಿಂತಲೂ ಮಿಗಿಲಾಗಿ ಬೇರೆಯವರಿಗಾಗಿ ನೀಡುವ ಸಮಯವೇ ಕೋಟಿ ಬೆಲೆ ಬಾಳುವ ಇಂದಿನ ದಿನಗಳಲ್ಲಿ ಮಗ ಹಾಗೂ ಹೆಂಡತಿಯ ಅಕ್ಕರಾಸ್ಥೆಯ ಜೊತೆ ಕಿಟ್ಟು , ಸುಶೀಲಾ, ಮೇದಿನಿಯರ ಸ್ನೇಹದ ಬಾಂಧವ್ಯವೂ ಬೆಲೆ ಕಟ್ಟಲಾರದಷ್ಟು ಮಹತ್ವ ಪಡೆಯುತ್ತದೆ. ಅದು ಎರಡು ಕುಟುಂಬಗಳ ವೈಯಕ್ತಿಕ ದಿನಚರಿಯಾದರೂ ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪು ನನಗೂ ಅನುಭವಕ್ಕೆ ಬಂದಿದ್ದು ನಿಸ್ಸಂದೇಹ.

ಸಾಗರ ಹತ್ತಿರದ ಅಡ್ಡೇರಿಯ ಸಿ.ಆರ್.ಜಂಬೆ ನೀನಾಸಂ ಪ್ರಿನ್ಸಿಪಾಲ್ ಆಗಿರುವಷ್ಟು ದಿನವೂ ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ಪ್ರೀತಿಸುತ್ತಲೇ ಅವರನ್ನು ರಂಗಭೂಮಿ ಶಿಸ್ತಿನಡಿಯಲ್ಲಿ ಅಳವಡಿಸಲು ಎಷ್ಟು ಕರಾರುವಕ್ಕಾಗಿ ಇರುತ್ತಿದ್ದರೋ ಅಷ್ಟೇ ಪ್ರೀತಿ ಮತ್ತು ಕುಟುಂಬದ ಜವಾಬ್ದಾರಿಯ ಶಿಸ್ತು ಮನೆಯಲ್ಲಿಯೂ ಒಳಗೊಂಡಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಹೆಂಡತಿ ಮತ್ತು ಮಗನ ನಿರ್ವಾಜ್ಯ ಪ್ರೇಮ ಅವರ ಸೇವೆಗೆ ಮೀಸಲಾಗಿದ್ದರೆ ; ಸ್ನೇಹಿತರು ಹಾಗೂ ಕುಟುಂಬದವರ ಪ್ರೀತಿಯ ಸಮಯ ಜಂಬೆಯ ಜೊತೆಗಿದ್ದುದು ಬಹುಶಃ ತಮ್ಮ ಕೊನೆಯ ದಿನಗಳಲ್ಲಿ ಹೀಗೆಯೇ ಪ್ರೀತಿಯ ಇರುವಿಕೆಯಲ್ಲಿ ಇರಬೇಕೆಂದು ಆಶಿಸುವ ಅಮೂಲ್ಯ ಕ್ಷಣಗಳು.
ನಾವು ಬರುತ್ತೇವೆಂದು ಹೇಳಿದಾಗ “ಆಯ್ತು ಹೋಗಿ ಬನ್ನಿ”-ಹೇಳಿದ ಜಂಬೆಯಲ್ಲಿನ ಮಾತುಗಳಲ್ಲಿರುವ ಪ್ರಶಾಂತತೆಯು ನನ್ನಿಂದ ಇವೆಲ್ಲವನ್ನೂ ಬರೆಯಿಸಿದೆ. ಜೊತೆಗೆ ಧನ್ಯತೆಯ ಭಾವ ಚಿರಸ್ಥಾಯಿಯಾಗಿ ಕುಳಿತಿರುತ್ತದೆ ಮನದ ಮೂಲೆಯಲ್ಲಿ ಯಾವಾಗಲೂ.
ರಂಗದ ಮೇಲೆ ಹೊರೇಷಿಯೊ ಹ್ಯಾಮ್ಲೇಟ್ ನನ್ನು ಬೀಳ್ಕೊಡುವ ಸ್ನೇಹಬಂಧ…
ಬದುಕಿನಲ್ಲಿ ಜಂಬೆಯನ್ನು ಕೆ.ಜಿ. ಕಿಟ್ಟು ಬೀಳ್ಕೊಡುವ ಅನುಬಂಧ…
ರಂಗದಲ್ಲಿನ ನಟನೆಯಲ್ಲಾಗಲೀ ಅಥವಾ ವಾಸ್ತವ ಬದುಕಿನಲ್ಲಾಗಲೀ ಉಳಿದದ್ದು ಮಾತ್ರ ನಿಜವಾದ ಆತ್ಮೀಯ ಸ್ನೇಹದ ಅನುಬಂಧ…
ದಕ್ಕಿದ್ದು ಆ ಬಂಧದ ಅಮೂರ್ತ ಭಾವದ ಸಿಂಚನ ನನ್ನಲ್ಲಿ.
ಇದರಲ್ಲೇನು ಮಹಾ? ಎಲ್ಲರೂ ಇರುವುದು ಹಾಗೆಯೇ ಅಂತನಿಸುವ ಮುನ್ನ…
“ನಮ್ಮ ಜಗತ್ತಿನಲ್ಲಿ ಯಾವ ಮನುಷ್ಯನೂ ಪರಿಪೂರ್ಣನಾಗಿರಲು ಸಾಧ್ಯವೇ ಇಲ್ಲ. ವ್ಯಕ್ತಿತ್ವವೇ ಹಾಗೆ. ಪ್ರತಿಯೊಬ್ಬರಲ್ಲಿಯೂ positive & negative shade ಗಳು ಇದ್ದೇ ಇರುತ್ತವೆ. ಅವೆರಡು ಸೇರಿಯೇ ವ್ಯಕ್ತಿಯ ವ್ಯಕ್ತಿತ್ವ ಇರುವುದು ಸಹ ಪ್ರತಿಯೊಬ್ಬರ ಗಮನದಲ್ಲಿಯೂ ಇರುತ್ತದೆ. ನಾವು ಪ್ರೀತಿಸುವ ವ್ಯಕ್ತಿಯಲ್ಲಿನ ಈ ಎರಡೂ ಆಯಾಮಗಳನ್ನು ಸ್ವೀಕರಿಸುವ ಮೂಲಕ ನಾವು ಆ ವ್ಯಕ್ತಿಯ ಸ್ನೇಹದ ಜೊತೆಗೆ ಪ್ರೀತಿಯನ್ನೂ ಒಪ್ಪಿಕೊಳ್ಳಬೇಕು ಹಾಗೂ ಗೌರವಿಸಬೇಕು” .
ಸಣ್ಣ ಭಿನ್ನಾಭಿಪ್ರಾಯ… ಜಂಬೆಯ ಜೊತೆ ಮಾತುಬಿಟ್ಟ ದಿನಗಳು. ಸುಬ್ಬಣ್ಣ ನನ್ನನ್ನು ಕೂರಿಸಿ , ನನ್ನ ಜೊತೆ ಚರ್ಚಿಸಿದರು. ನನಗೆ ಅರ್ಥವಾಯ್ತು. ‘ಮುಂದಿನ ದಿನಗಳಲ್ಲಿ ಯಾರಿಂದಲೂ ಈ ರೀತಿ ಮಾತು ಬಿಡದಂತೆ ನನ್ನಿಂದ ಅವರು ತೆಗೆದುಕೊಂಡ ಮಾತು’ ಯಾಕಿರಬಹುದು ? ಎನ್ನುವ ಯೋಚನೆ ಆಗ ಬರಲಿಲ್ಲ. ಆದರೆ ಮುಂದೆ ನನ್ನ ಎನ್.ಜಿ.ಓ.ಬದುಕಿನಲ್ಲಿ ನನಗೆದುರಾದ ಹಲವಾರು ಸಂಧರ್ಭಗಳಲ್ಲಿ ಆ ಮಾತಿನ ಅರಿವು ಹಾಗೂ ಅವರಿಗಿರುವ ‘ಬದುಕಿನ ದೂರದೃಷ್ಟಿಯ ದೃಷ್ಟಿಕೋನದ ಮಹತ್ವದ ಸ್ಪಷ್ಟತೆ ಅರ್ಥವಾಗುತ್ತ ಹೋಯಿತು.
ಅಂದು ಜೊತೆಗಿದ್ದ ಸುಬ್ಬಣ್ಣ ಹಾಗೂ ಜಂಬೆ ಇಂದು ಅವರ ಮಾತುಗಳ, ಅವರ ಪ್ರಾಮಾಣಿಕ ಬದುಕಿನ ಸೆಲೆಯ ಮೂಲಕ ನಮ್ಮ ಜೊತೆ ಜೀವಂತವಾಗಿದ್ದಾರೆ. ಎದುರಾಗುವ ಕ್ಲಿಷ್ಟ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಗುರುವಿನ ಸ್ಥಾನದಲ್ಲಿ ನಿಂತು ದಿಕ್ಸೂಚಿಗಳಾಗುತ್ತಾರೆ.
ಅಷ್ಟೇ ಅಲ್ಲ ; ಪ್ರತಿದಿನದ ಪ್ರಾತಃಸ್ಮರಣೀಯರೂ ಕೂಡ.
* ವನಜಾ ಕೊಳಗಿ
(ವನಜಾ ಕೊಳಗಿ ನೀನಾಸಂನಲ್ಲಿ ತರಬೇತಿ ಪಡೆದು ರಾಜ್ಯಾದ್ಯಂತ ರಂಗಶಿಕ್ಷಣ ಪಸರಿಸಿದ ರಂಗಾಸಕ್ತೆ, ಕಲಾವಿದೆ, ಲೇಖಕಿ. ಮಕ್ಕಳಲ್ಲಿ ರಂಗಭೂಮಿ ಅಭಿರುಚಿ ಬೆಳೆಸುವಲ್ಲಿ ವಿಶೇಷ ಕೆಲಸ ಮಾಡಿದ್ದಾರೆ. ಸಧ್ಯ ತುಮಕೂರಿನಲ್ಲಿ ನೆಲೆಸಿದ್ದಾರೆ)







