ಕನಸುಗಳು ಕೆಕ್ಕರಿಸಿ
ನೋಡುತಿವೆ ನಿದ್ದೆಯನು
ಧಿಕ್ಕರಿಸೆಂದು
ನಾನೇ ಬಿತ್ತಿದ ಕನಸುಗಳು
ಇಂದು ನನ್ನನ್ನೇ ಆಳುತಿವೆ
ಸೆಟೆದು ನಿಂತಿವೆ ಇಂದು
ನನ್ನೇ ಆವರಿಸಿವೆ
ಅಡಗಿಸೆಂದು
ಸೋಲು ನಿರಾಶೆ ಹತಾಶೆ
ನೋವು ಅರಿಷಡ್ವರ್ಗ ಊಹೂ
ಯಾರಪ್ಪನಿಗೂ ಬಗ್ಗದೇ
ಎದೆ ಸೆಟೆಸಿ ನಿಂತಿವೆ
ಬಿತ್ತುವಾಗ
ಅಣು ರೇಣುವಿನಷ್ಟು
ಈಗ ಬಲಿತು ಬೆಳೆದು
ಬೆಟ್ಟದಷ್ಟು
ಬಿಡುವಿಲ್ಲದೇ ಕಾಡುತಿವೆ ಅಷ್ಟೂ
ಒಂದೇ ಸಮ ಬಿಡದೇ
ಕಾಡುವ ಹುಕ್ಕಿಯನು
ಎಲ್ಲಿಂದ
ಕಡ ತಂದವೋ?
ಬಿತ್ತಿದಂದೆ ನಿದ್ದೆಯನು
ಅಡ ಇಟ್ಟಾಗಿತ್ತು
ಅಪರೂಪಕ್ಕೂ ಕಡ ನೀಡದೇ
ಬಿಡದೇ ಕಾಡಿವೆ ಕನಸು
ಸ್ವೇಚ್ಛೆಯೇ ಇದರಂಕೆ
ಇದಕ್ಕಿಲ್ಲ ಯಾವ ಶಂಕೆ
ಚಲನೆಗೆ ಸಾಟಿಯಿಲ್ಲ
ಜಲ ವಾಯು ಆಕಾಶ
ಇದಕಲ್ಲವೇ ಅಲ್ಲ ಸರಹದ್ದು
ಕನಸಿಗೆ ಮೋಕ್ಷ
ಪ್ರಾಪ್ತಿ ನನಸಿಂದ
ಕನಸು ಮನಸಿಗೆ ಎರಡಕ್ಕೂ
ಇಲ್ಲ ವ್ಯಾಪ್ತಿ
ನನಸಿಂದ ಕನಸಿಗೆ ಮುಕ್ತಿ
ಈ ಕನಸಿಗೆ ರೆಕ್ಕೆಯಿಲ್ಲ;
ಮನೋವೇಗದಲ್ಲಿ ಹಾರುತ್ತದೆ
ಬೀಜವಲ್ಲ; ಅರಿಯದ ಆಳಕ್ಕಿಳಿಯುತ್ತದೆ
ನಕ್ಷತ್ರ ತಾರೆ ಕ್ಷುದ್ರವಲ್ಲ;
ನಭೋಮಂಡಲ ಕ್ರಮಿಸುತ್ತದೆ
ಕನಸುಗಳಿಗೆ ನಿದ್ದೆಯಿಲ್ಲ
- ಇಮ್ಮಡಿ ಸಂತೋಷ್





