ದೃಶ್ಯಕಾವ್ಯ
Advertisement
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
  • ಪುಸ್ತಕಗಳು
  • Cart
No Result
View All Result
 ದೃಶ್ಯಕಾವ್ಯ
No Result
View All Result
Home ಪರಂಪರೆ

ರಾಧಾಕೃಷ್ಣ ಅಡಿಗ – ಇಡ್ಲಿ ಕಾಫಿ ಪರಂಪರೆ-ಪಯಣ

Radha Krishna Adiga Kannada Biography Book front

Radha Krishna Adiga – Idli Coffee Parampara-Payana

ರಾಧಾಕೃಷ್ಣ ಅಡಿಗ – ಇಡ್ಲಿ ಕಾಫಿ ಪರಂಪರೆ ಪಯಣ

ರಾಧಾಕೃಷ್ಣ ಅಡಿಗ – ಇಡ್ಲಿ ಕಾಫಿ ಪರಂಪರೆ ಪಯಣ
ಕನ್ನಡ ಪುಸ್ತಕವು ಬ್ರಾಹ್ಮಿನ್ಸ್ ಕಾಫಿ ಬಾರ್‌ನ ಇತಿಹಾಸ, ಬೆಂಗಳೂರಿನ ಪ್ರಸಿದ್ಧ ಇಡ್ಲಿ–ಫಿಲ್ಟರ್ ಕಾಫಿ ಪರಂಪರೆ ಮತ್ತು ಸಂಸ್ಕೃತಿಯ ಕಥೆಯನ್ನು ಪರಿಚಯಿಸುತ್ತದೆ.

ರಾಧಾಕೃಷ್ಣ ಅಡಿಗ- ಇಡ್ಲಿ ಕಾಫಿ ಪರಂಪರೆ ಪಯಣʼ ಎಂಬುದು ವಿನಾಯಕ ಭಟ್ ತದ್ದಲಸೆ ಅವರು ರಚಿಸಿರುವ ಮನಮುಟ್ಟುವ ಕನ್ನಡ ಕೃತಿ. ಈ ಪುಸ್ತಕವು ಪ್ರಸಿದ್ಧ ಬ್ರಾಹ್ಮಿನ್ಸ್ ಕಾಫಿ ಬಾರ್ ಮತ್ತು ಅದರ ಅಪ್ರತಿಮ ಇಡ್ಲಿ–ಫಿಲ್ಟರ್ ಕಾಫಿ ಪರಂಪರೆಯ ಸ್ಫೂರ್ತಿದಾಯಕ ಕಥೆಯನ್ನು ಅದ್ಭುತವಾಗಿ ಅನಾವರಣಗೊಳಿಸುತ್ತದೆ. ಇದು ಕೇವಲ ಆಹಾರದ ಕುರಿತ ಪುಸ್ತಕವಲ್ಲ; ಬೆಂಗಳೂರಿನ ಸಂಸ್ಕೃತಿ, ಪರಂಪರೆ, ಶಿಸ್ತು ಮತ್ತು ಕಾಲಾತೀತ ಅಡುಗೆ ಸಂಪ್ರದಾಯಕ್ಕೆ ಸಲ್ಲಿಸುವ ಹೃದಯಸ್ಪರ್ಶಿ ಗೌರವವಾಗಿದೆ.

ದಶಕಗಳ ಕಾಲ ಬ್ರಾಹ್ಮಿನ್ಸ್ ಕಾಫಿ ಬಾರ್ ಬೆಂಗಳೂರಿನ ಅತ್ಯಂತ ಪ್ರೀತಿಪಾತ್ರ ಆಹಾರ ಕೇಂದ್ರಗಳಲ್ಲಿ ಒಂದಾಗಿ ಉಳಿದಿದೆ. 1965ರಿಂದಲೇ ಮೃದುವಾದ ಇಡ್ಲಿ, ಗರಿಗರಿ ವಡೆ ಮತ್ತು ಸುಗಂಧಭರಿತ ಫಿಲ್ಟರ್ ಕಾಫಿಯನ್ನು ನೀಡುತ್ತಾ ಅನೇಕ ತಲೆಮಾರುಗಳ ಜನರನ್ನು ತನ್ನತ್ತ ಆಕರ್ಷಿಸಿದೆ. ಸರಳ ಮೆನು, ನಿರಂತರ ಗುಣಮಟ್ಟ ಮತ್ತು ರುಚಿಯ ನಿಷ್ಠೆ ಈ ಸಣ್ಣ ಕಾಫಿ ಬಾರ್ ಅನ್ನು ಬೆಂಗಳೂರಿನ ಸಾಂಸ್ಕೃತಿಕ ಪ್ರತೀಕವನ್ನಾಗಿ ರೂಪಿಸಿದೆ.

ಈ ಪುಸ್ತಕವು ಓದುಗರನ್ನು ರಾಧಾಕೃಷ್ಣ ಅಡಿಗ ಅವರ ಪ್ರೇರಣಾದಾಯಕ ಜೀವನ ಪಯಣದೊಳಗೆ ಕರೆದೊಯ್ಯುತ್ತದೆ. ಅವರ ಪರಿಶ್ರಮ, ಶಿಸ್ತು, ಮೌಲ್ಯಗಳು ಮತ್ತು ನಿಷ್ಠೆ ಬ್ರಾಹ್ಮಿನ್ಸ್ ಕಾಫಿ ಬಾರ್ನ ವೈಶಿಷ್ಟ್ಯಮಯ ಗುರುತನ್ನು ನಿರ್ಮಿಸಿತು. ಲೇಖಕರು ಅತ್ಯಂತ ಮನೋಜ್ಞ ಶೈಲಿಯಲ್ಲಿ ಈ ಪರಂಪರೆಯ ಹಿಂದಿರುವ ಹೋರಾಟ, ದೃಢಸಂಕಲ್ಪ ಮತ್ತು ಸಮರ್ಪಣೆಯನ್ನು ಚಿತ್ರಿಸಿದ್ದಾರೆ.

 

 

ಬ್ರಾಹ್ಮಿನ್ಸ್ ಕಾಫಿ ಬಾರ್ ನ ಹಿಂದೆ ಇರುವ ಕಥೆ

Brahmins’ Coffee Barಬ್ರಾಹ್ಮಿನ್ಸ್ ಕಾಫಿ ಬಾರ್ ನ   ಪಯಣ ಕೇವಲ ವ್ಯಾಪಾರ ಯಶಸ್ಸಿನ ಕಥೆಯಲ್ಲ. ಅದು ಶಿಸ್ತು, ಪರಂಪರೆ ಮತ್ತು ಗುಣಮಟ್ಟದ ನಿಷ್ಠೆಯ ಮೇಲೆ ನಿಂತಿರುವ ಜೀವನ ಕಥೆ. ಬೆಂಗಳೂರು ಆಧುನಿಕ ನಗರವಾಗಿ ಬೆಳೆಯುತ್ತಿದ್ದ ಕಾಲದಲ್ಲಿಯೂ, ಈ ಕಾಫಿ ಬಾರ್ ತನ್ನ ಮೂಲ ದಕ್ಷಿಣ ಭಾರತೀಯ ಉಪಹಾರ ಸಂಸ್ಕೃತಿಯ ಸೊಗಡನ್ನು ಉಳಿಸಿಕೊಂಡಿದೆ.

ಅಂದಿನ ಫಿಲ್ಟರ್ ಕಾಫಿಯ ಸುವಾಸನೆ, ಹಬೆಯಾಡುವ ಬಿಸಿ ಬಿಸಿ ಇಡ್ಲಿ ಹಳೆಯ ಬೆಂಗಳೂರಿನ ಬೀದಿಗಳ ಹಳೆಯ ಕಾಲದ ಆ ವಾತಾವರಣ — ಈ ಎಲ್ಲವನ್ನೂ ಪುಸ್ತಕ ಜೀವಂತವಾಗಿ ಓದುಗರ ಮುಂದೆ ತರುತ್ತದೆ. ಪ್ರತಿಯೊಂದು ಪುಟವೂ ಓದುಗರನ್ನು ನೆನಪುಗಳ ಲೋಕಕ್ಕೆ ಕರೆದೊಯ್ಯುತ್ತದೆ.

ಬೆಂಗಳೂರಿನ ಪರಂಪರೆಗೆ ಸಲ್ಲಿಸಿದ ಗೌರವ

ರಾಧಾಕೃಷ್ಣ ಅಡಿಗ – ಇಡ್ಲಿ ಕಾಫಿ ಪರಂಪರೆ-ಪಯಣ ಪುಸ್ತಕದ ಅತ್ಯಂತ ವಿಶೇಷ ಅಂಶವೆಂದರೆ ಇದು ಬೆಂಗಳೂರಿನ ಸಾಂಸ್ಕೃತಿಕ ಪರಂಪರೆಯನ್ನು ಅತ್ಯಂತ ಮನೋಜ್ಞವಾಗಿ ದಾಖಲಿಸಿರುವುದು. ಆಹಾರ ಎಂದರೆ ಕೇವಲ ರುಚಿಯ ವಿಷಯವಲ್ಲ; ಅದು ನೆನಪು, ಭಾವನೆ ಮತ್ತು ಗುರುತಿನ ಭಾಗವಾಗಿದೆ ಎಂಬುದನ್ನು ಈ ಕೃತಿ ಸುಂದರವಾಗಿ ತೋರಿಸುತ್ತದೆ.

ಒಂದು ಸಣ್ಣ ಉಪಹಾರ ಮಂದಿರವು ಹೇಗೆ ಜನರ ನಂಬಿಕೆ, ಪ್ರೀತಿ ಮತ್ತು ಸಂಬಂಧಗಳ ಸಂಕೇತವಾಯಿತು ಎಂಬುದನ್ನು ಈ ಕಥೆ ಮನಮುಟ್ಟುವ ರೀತಿಯಲ್ಲಿ ವಿವರಿಸುತ್ತದೆ. ಅನೇಕ ಜನರಿಗೆ ಬ್ರಾಹ್ಮಿನ್ಸ್ ಕಾಫಿ ಬಾರ್ ಎಂದರೆ ಕೇವಲ ಉಪಹಾರವಲ್ಲ — ಅದು ಬೆಂಗಳೂರಿನ ಆತ್ಮದ ಒಂದು ಭಾಗ.

ಆಹಾರಪ್ರಿಯರು ಮತ್ತು ಓದುಗರಿಗಾಗಿ ವಿಶೇಷ ಕೃತಿ

ಆಹಾರವನ್ನು ಪ್ರೀತಿಸುವವರು, ಬೆಂಗಳೂರಿನ ಇತಿಹಾಸದಲ್ಲಿ ಆಸಕ್ತಿ ಹೊಂದಿರುವವರು ಅಥವಾ ಸ್ಫೂರ್ತಿದಾಯಕ ನೈಜ ಕಥೆಗಳನ್ನು ಓದಲು ಇಷ್ಟಪಡುವವರು — ಎಲ್ಲರಿಗೂ ಈ ಪುಸ್ತಕ ವಿಶಿಷ್ಟ ಅನುಭವ ನೀಡುತ್ತದೆ. ಸರಳ ಮತ್ತು ಹೃದಯಸ್ಪರ್ಶಿ ನಿರೂಪಣೆ ಓದುಗರನ್ನು ಕಥೆಯೊಳಗೆ ಸಂಪೂರ್ಣವಾಗಿ ಸೆಳೆಯುತ್ತದೆ.

ಈ ಪುಸ್ತಕದ ಮತ್ತೊಂದು ಮಹತ್ವದ ಅಂಶವೆಂದರೆ ಇದು ಕೇವಲ ಯಶಸ್ಸನ್ನು ಹೊಗಳುವುದಿಲ್ಲ; ಅದರ ಹಿಂದೆ ಇರುವ ಪರಿಶ್ರಮ, ಶಿಸ್ತು, ಹೋರಾಟ ಮತ್ತು ಮಾನವೀಯತೆಯನ್ನು ಪ್ರಾಮಾಣಿಕವಾಗಿ ಪರಿಚಯಿಸುತ್ತದೆ. ಇದೇ ಈ ಕಥೆಯನ್ನು ಇನ್ನಷ್ಟು ನೈಜ ಮತ್ತು ಪ್ರೇರಣಾದಾಯಕವಾಗಿಸುತ್ತದೆ.

ಕನ್ನಡ ಸಾಹಿತ್ಯವನ್ನು ಪ್ರೀತಿಸುವ ಓದುಗರಿಗೆ ಇದರ ಭಾವನಾತ್ಮಕ ಆಳ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಖಂಡಿತವಾಗಿಯೂ ಮೆಚ್ಚುಗೆ ಪಡೆಯುತ್ತದೆ.

ಈ ಪುಸ್ತಕವನ್ನು ಏಕೆ ಓದಬೇಕು?

Radha Krishna Adiga Kannada Biography Book Back Side
ರಾಧಾಕೃಷ್ಣ ಅಡಿಗ – ಇಡ್ಲಿ ಕಾಫಿ ಪರಂಪರೆ-ಪಯಣ ಕೇವಲ ಜೀವನಚರಿತ್ರೆಯಲ್ಲ ಅಥವಾ ಆಹಾರದ ಕಥೆಯಲ್ಲ

ರಾಧಾಕೃಷ್ಣ ಅಡಿಗ – ಇಡ್ಲಿ ಕಾಫಿ ಪರಂಪರೆ-ಪಯಣ ಕೇವಲ ಜೀವನಚರಿತ್ರೆಯಲ್ಲ ಅಥವಾ ಆಹಾರದ ಕಥೆಯಲ್ಲ. ಇದು:

• ಬೆಂಗಳೂರಿನ ಪರಂಪರೆಯ ಆಹಾರ ಸಂಸ್ಕೃತಿಯ ಆಚರಣೆ
• ಬ್ರಾಹ್ಮಿನ್ಸ್ ಕಾಫಿ ಬಾರ್ಗೆ ಸಲ್ಲಿಸಿದ ಗೌರವ
• ಸ್ಫೂರ್ತಿದಾಯಕ ಉದ್ಯಮಶೀಲ ಪಯಣ
• ಹಳೆಯ ಬೆಂಗಳೂರಿನಲ್ಲಿ ಜೀವಿಸಿದ ಅನುಭವ
• ಕನ್ನಡ ಸಾಹಿತ್ಯಕ್ಕೆ ಅರ್ಥಪೂರ್ಣ ಕೊಡುಗೆ

ಸರಳ ಆಹಾರ, ಪ್ರಾಮಾಣಿಕ ಮೌಲ್ಯಗಳು ಮತ್ತು ಸಮರ್ಪಣೆ ತಲೆಮಾರುಗಳವರೆಗೆ ಉಳಿಯುವ ನೆನಪುಗಳನ್ನು ಹೇಗೆ ನಿರ್ಮಿಸಬಹುದು ಎಂಬುದನ್ನು ಈ ಪುಸ್ತಕ ಸುಂದರವಾಗಿ ನೆನಪಿಸುತ್ತದೆ.

 

ಅಂತಿಮ ಮಾತು

ಕೆಲವು ಕಥೆಗಳು ಕಾಲ ಕಳೆದರೂ ಉಳಿಯಬೇಕು, ಏಕೆಂದರೆ ಅವು ಒಂದು ನಗರದ ಆತ್ಮ ಮತ್ತು ಅದರ ಜನರ ಭಾವನೆಗಳನ್ನು ಪ್ರತಿಬಿಂಬಿಸುತ್ತವೆ. ರಾಧಾಕೃಷ್ಣ ಅಡಿಗ – ಇಡ್ಲಿ ಕಾಫಿ ಪರಂಪರೆ-ಪಯಣ ಅಂತಹ ಅಪರೂಪದ ಕಥೆಗಳಲ್ಲಿ ಒಂದಾಗಿದೆ.

ಈ ಪುಸ್ತಕವು ಬೆಂಗಳೂರಿನ ಪ್ರಸಿದ್ಧ ಇಡ್ಲಿ–ಫಿಲ್ಟರ್ ಕಾಫಿ ಸಂಸ್ಕೃತಿಯ ಸಾರವನ್ನು ಹಿಡಿದಿಟ್ಟುಕೊಂಡು, ಬ್ರಾಹ್ಮಿನ್ಸ್ ಕಾಫಿ ಬಾರ್ನ ಹಿಂದೆ ಇರುವ ಅರ್ಪಣಾ ಮನೋಭಾವ ಮತ್ತು ದೂರದೃಷ್ಟಿಗೆ ಗೌರವ ಸಲ್ಲಿಸುತ್ತದೆ.

ಸಂಸ್ಕೃತಿ, ಪರಂಪರೆ, ಆಹಾರ ಮತ್ತು ಸ್ಫೂರ್ತಿದಾಯಕ ಜೀವನ ಕಥೆಗಳನ್ನು ಪ್ರೀತಿಸುವ ಪ್ರತಿಯೊಬ್ಬರಿಗೂ ಇದು ತಪ್ಪದೇ ಓದಲೇಬೇಕಾದ ಕೃತಿ. ಇದು ಕೇವಲ ಇಡ್ಲಿ ಮತ್ತು ಕಾಫಿಯ ಕಥೆಯಲ್ಲ — ಇದು ಪರಂಪರೆ, ರುಚಿ ಮತ್ತು ನೆನಪುಗಳ ಬಿಸುಪಿನ ಪಯಣ.

 

 

ಪುಸ್ತಕದ ಕೆಲ ಪುಟಗಳ ಝಲಕ್ !

ಚಾಮರಾಜಪೇಟೆಯಲ್ಲಿ ಹೊಟೇಲ್‌ ಉದ್ಯಮದಲ್ಲಿ ಅರವತ್ತರ ದಶಕದಲ್ಲೂ ಪೈಪೋಟಿ ಇತ್ತು. ಗಜೇಂದ್ರ ವಿಲಾಸ, ಹೊಟೇಲ್‌ ಮೆಜೆಸ್ಟಿಕ್‌ ತುಂಬ ಪ್ರಸಿದ್ಧವಾಗಿದ್ದವು. ನಾವು ಜಟಕಾ ಸ್ಟ್ಯಾಂಡ್‌ಬಳಿ 1956ರ ಸಮಯದಲ್ಲಿ ʻಸತ್ಯನಾರಾಯಣ ಭವನʼ ಎಂಬ ಹೊಟೇಲ್ ನಡೆಸುತ್ತಿದ್ದೆವು. ಆಗೆಲ್ಲ ನೆಲಕ್ಕೆ ಮಣೆ ಹಾಕಿ ಬಾಳೆ ಎಲೆಯ ಮೇಲೆ‌ಮಸಾಲೆ ದೋಸೆ ಬಡಿಸುತ್ತಿದ್ದೆವು. ಬಹಳಷ್ಟು ಸಂಪ್ರದಾಯಸ್ಥ ಗ್ರಾಹಕರು ನೆಲದ ಮೇಲೇ ಕುಳಿತು ತಿನ್ನುವ ಸವಲತ್ತು ಇದ್ದರೆ ಮಾತ್ರ ಬರುತ್ತಿದ್ದರು. ಕೆಲವರಲ್ಲಿ ಸ್ವಲ್ಪ ಮಡಿವಂತಿಕೆಯೂ ಇರುತ್ತಿತ್ತು. ಆ ಕಾರಣಕ್ಕೆ ಎಲ್ಲ ಹೊಟೇಲ್‌ಗಳಲ್ಲೂ ಟೇಬಲ್‌-ಖುರ್ಚಿ ಇದ್ದರೂ ಒಳ ಹಜಾರದಲ್ಲಿ ಒಂದು ಕಡೆ ನೆಲಕ್ಕೆ ಮಣೆ ಹಾಕಿ ಎಲೆ ಮೇಲೆ ಬಡಿಸುವ ವ್ಯವಸ್ಥೆ ಇರುತ್ತಿತ್ತು. ಆಗಿನ ಮಟ್ಟಿಗೆ ದೊಡ್ಡ ಹೊಟೇಲ್‌ಗಳ ವ್ಯಾಪಾರ ಚೆನ್ನಾಗಿ ಆಗುತ್ತಿತ್ತು. ಅವರೆಲ್ಲ ದಿನಕ್ಕೆ 1500-2000 ರೂ. ವ್ಯಾಪಾರ ಮಾಡಿದರೆ ನಮ್ಮ ಹೊಟೇಲ್‌ನದು 30 ರೂ. ವ್ಯಾಪಾರವಷ್ಟೆ.
ಆಗ ಹೊಟೇಲ್‌ಮಾಡುತ್ತೇನೆ ಅಂದರೆ ಸಾಲ ಕೊಡುವವರು, ಸಾಮಗ್ರಿ ಒದಗಿಸುವವರು ಬೇಕಾದಷ್ಟು ಇದ್ದರು. ಕಾಫಿಪುಡಿ, ಖಾರದ ಪುಡಿ, ಹಾಲು ಒದಗಿಸವವರು ಮೊದಲು ಸಾಮಗ್ರಿ ಕೊಟ್ಟು ಆಮೇಲೆ ಯಾವಾಗಲೋ ಹಣ ಪಡೆದುಕೊಳ್ಳುತ್ತಿದ್ದರು. ಕೆಲಸಕ್ಕೆ ಜನ ಬೇಕಾದರೂ ಕರೆದುಕೊಂಡು ಬರುವವರಿದ್ದರು. ಆಗೆಲ್ಲ ಸಾಕಷ್ಟು ಕೆಲಸಗಾರರು ಸಿಗುತ್ತಿದ್ದರು.
ಕಾಲೇಜು ಹುಡುಗರು ಅಂದು ಹೊಟೇಲ್‌ಗೆ ಬರುವುದು ಕಡಿಮೆಯಿತ್ತು. ಯಾಕೆಂದರೆ ಮಕ್ಕಳಿಗೆ ಪಾಕೆಟ್‌ಮನಿ ಕೊಡುವ ಪದ್ಧತಿ ಇರಲಿಲ್ಲ. ಮೇಷ್ಟ್ರುಗಳು, ಒಂದೆರಡು ಬ್ಯಾಂಕ್‌ಗಳ ನೌಕರರು, ಸರಕಾರಿ ಕಚೇರಿಗಳ ನೌಕರರು ಹೊಟೇಲ್‌ಗೆ ಬರುವಂಥವರು. ಹಾಗಾಗಿ ಹೊಟೇಲ್‌ ನಡೆಸುವುದು ಸುಲಭದ ಮಾತಾಗಿರಲಿಲ್ಲ ಎಂದು ನೆನಪುಗಳ ಬುತ್ತಿ ಬಿಚ್ಚಿಡುತ್ತಾರೆ ಹಿರಿಯ ಪುತ್ರ ಶಂಕರನಾರಾಯಣ ಅಡಿಗ.

ಹಲವು ವರ್ಷಗಳೇ ಸಂದುಹೋದವು. ಅಷ್ಟರಲ್ಲಿ ಸಂಸಾರವೂ ದೊಡ್ಡದಾಗಿತ್ತು. ಎಂಟು ಮಕ್ಕಳ ತುಂಬು ಕುಟುಂಬವಾಗಿ ಬೆಳೆದು ನಿಂತಿತ್ತು. ಈಗಾಗಲೇ ಕೊಂಡಳ್ಳಿಯಲ್ಲಿ ಜನಿಸಿದವರು ಶಂಕರನಾರಾಯಣ, ರುಕ್ಮಿಣಿ, ಬೆಂಗಳೂರಿನಲ್ಲಿ ಹುಟ್ಟಿದವರು ಗಣೇಶ, ಪರಮೇಶ್ವರ, ಪದ್ಮಾ, ರಮಾ, ವಾಸುದೇವ, ಎಂಟನೆ ಹಾಗೂ ಕೊನೆಯ ಕುಡಿ– ರಾಧಾಕೃಷ್ಣ. ಮನೆಯಲ್ಲಿ ಮಕ್ಕಳ ಕಲರವ.

ಯಾರಿಗೂ ಚಿಂತೆ ಅರಿಯುವ ವಯಸ್ಸಲ್ಲ. ಎಲ್ಲರೂ ಖುಷಿಯಾಗಿದ್ದರು. ನಾಗೇಶ ಅಡಿಗರಿಗೂ ಚಿಂತೆ ಇದ್ದಿದ್ದು ಎಲ್ಲರಿಗೂ ಹೊಟ್ಟೆ ತುಂಬ ಊಟ ಹಾಕುವುದು ಹೇಗೆ ಎಂಬುದಷ್ಟೆ. ಹೊಟೇಲ್ ಲಾಭದ ದಡ ಸೇರಲೇ ಇಲ್ಲ. ಆಗ ನೆರವಿಗೆ ಬಂದಿದ್ದು ಬಾಲ್ಯದಲ್ಲಿ ಕಲಿತಿದ್ದ ವೇದಮಂತ್ರಗಳು. ಮನೆಯಲ್ಲಿ ಶ್ರಾದ್ಧಕರ್ಮ ಮಾಡಿಸುತ್ತಿದ್ದರು. ಮನೆಯಲ್ಲೇ ಮಾಡಿಸಲು ಮುಖ್ಯ ಕಾರಣ ಮಕ್ಕಳಿಗೆ ಊಟ ಸಿಗುತ್ತದೆ ಎನ್ನುವುದಾಗಿತ್ತು. ಜೊತೆಗೆ ಪ್ರತಿ ಮಗುವಿಗೂ ನಾಲ್ಕಾಣೆ ದಕ್ಷಿಣೆ ಕೂಡ ಸಿಗುತ್ತಿತ್ತು. ಹಾಗೆ ವರ್ಷಕ್ಕೆ ಏಳೆಂಟು ಶ್ರಾದ್ಧಗಳು ಮಾತ್ರ ಸಿಗುತ್ತಿದ್ದುದು. ಇನ್ನು ಆಸ್ತಿಕರ ಮನೆಗಳಲ್ಲಿ ಪೌರೋಹಿತ್ಯಕ್ಕೂ ಕರೆ ಬರುತ್ತಿತ್ತು. ಆದರೆ ಹೇಳಿಕೊಳ್ಳುವ ಆದಾಯ ಇರಲಿಲ್ಲ. ಮಧ್ಯೆ ಮಧ್ಯೆ ಆಹ್ವಾನವಿದ್ದಾಗ ಸತ್ಯನಾರಾಯಣ ಪೂಜೆ ಇತ್ಯಾದಿಗಳನ್ನೂ ಮಾಡಿಸುತ್ತಿದ್ದರು. ಅಂಥ ದಿನಗಳಲ್ಲಿ ಮಕ್ಕಳಿಗೆಲ್ಲ ಹೊಟ್ಟೆತುಂಬ ಊಟ ಹಾಕಿಸಬಹುದಲ್ಲ ಎಂಬುದೇ ಅವರಿಗಿದ್ದ ದೊಡ್ಡ ಸಮಾಧಾನ. ಅಲ್ಲದೆ ಒಂದಿಷ್ಟು ಅಕ್ಕಿ, ಧಾನ್ಯ ಸಿಗುತ್ತದೆ ಎಂಬ ನಿರೀಕ್ಷೆ. ಕೈಗೆ ನಾಲ್ಕು ಕಾಸು ದಕ್ಷಿಣೆ ಸಿಗುತ್ತದೆ ಎಂಬ ಪ್ರತೀಕ್ಷೆ. ಪುರೋಹಿತರಿಗೆ ಆಗ ಬಹಳ ಬೇಡಿಕೆಯೇನೂ ಇರಲಿಲ್ಲ. ಇದ್ದಾಗ ಕರೆದಾರು ಕರೆದಾಗ ಹೋದೇನು ಎಂಬಂಥ ಅನಿಶ್ಚಿತತೆ. ಹಾಗಾಗಿ ಹೋಟೆಲ್ ಸ್ಥಗಿತಗೊಳಿಸಿ ಪೌರೋಹಿತ್ಯಕ್ಕೆ ಮರಳುವ ಮಾತೇ ಇರಲಿಲ್ಲ. ಎರಡನ್ನೂ ತೂಗಿಸಿಕೊಂಡು ಹೋಗುವುದು ಅನಿವಾರ್ಯವೇ ಆಗಿತ್ತು ನಾಗೇಶ ಅಡಿಗರಿಗೆ. ಅದಕ್ಕಿಂಥ ಹೆಚ್ಚಾಗಿ ಅವರಿಗೆ ಹೋಟೆಲ್ ಕೆಲಸದ ಮೇಲೆ ಹೇಳಲಾಗದ ಮಮಕಾರವಿತ್ತು.

ಆದರೆ ಇರುವ ಹೊಟೇಲ್ ನಷ್ಟದಲ್ಲಿ ಮುಚ್ಚುವ ಪರಿಸ್ಥಿತಿ ಬಂದೊದಗಿತು. ಮೈಮೇಲೆ ಸಾವಿರದ ಐನೂರು ರೂಪಾಯಿ ಸಾಲದ ಹೊರೆ!

ಆಗ ಬೇರೆ ದಾರಿ ಇಲ್ಲದೇ ಶುರು ಮಾಡಿದ್ದು ಬಾದಾಮಿ ಪೌಡರ್ ತಯಾರಿಸಿ ಪೊಟ್ಟಣ ಮಾಡಿ ಮಾರಾಟ. ರಾಧಾಕೃಷ್ಣ ಅಡಿಗರ ದೊಡ್ಡಕ್ಕ ರುಕ್ಮಿಣಿ ಹೇಳುವಂತೆ ಬಾದಾಮಿ ಪುಡಿ ಪ್ಯಾಕೆಟ್ಗೆ ಇಟ್ಟಿದ್ದ ಹೆಸರು ಶ್ರೀಕೃಷ್ಣ ಆಲ್ಮಂಡ್ ಮಾಲ್ಟ್. ʻಸೂಚನೆ: ಒಂದು ಲೋಟ ಹಾಲಿಗೆ ಒಂದು ಟೀಸ್ಪೂನ್ ಮಾಲ್ಟ್ ಉಪಯೋಗಿಸುವುದು. ಗೃಹಕೈಗಾರಿಕೆಗೆ ಪ್ರೋತ್ಸಾಹಿಸಿರಿʼ ಅಂತ ಪ್ಯಾಕೆಟ್ ನಲ್ಲಿ ಚೀಟಿ ಇರಿಸುತ್ತಿದ್ದರಂತೆ. ಹಾಲುಪುಡಿ ಡಬ್ಬಕ್ಕೆ ಪೇಪರ್ ಸುತ್ತಿ ಮೇಲೆ ಕೆಳಗೆ ರಬ್ಬರ್ ಸ್ಟಾಂಪ್ ಹೊಡೆದು ಪ್ಯಾಕ್ ಮಾಡುತ್ತಿದ್ದರು. ದೊಡ್ಡ ಅಣ್ಣ ಶಂಕರನಾರಾಯಣರಿಗೆ ಆಗ 15 ವರ್ಷ. ಜವಾಬ್ದಾರಿ ವಹಿಸಿಕೊಳ್ಳುವುದರಲ್ಲಿ ಅವರು ದೊಡ್ಡ ಅಣ್ಣನೇ ಆಗಿದ್ದರು. ಅಡಿಗರ ಕುಟುಂಬ ಒಂದು ನೆಲೆ ಕಂಡುಕೊಳ್ಳಲು ಅವರ ಶ್ರಮ ಅಪಾರ. ಓದಿದ್ದರೂ ಅಪ್ಪಯ್ಯನಿಗೆ ಹೆಗಲು ಕೊಟ್ಟು ನಿಂತರು. ಮನೆಯಲ್ಲಿ ಅತ್ಯಂತ ಕಷ್ಟದ ದಿನಗಳನ್ನು ಎದುರಿಸುವಾಗಲೂ ಅಪ್ಪಯ್ಯ-ಅಮ್ಮನ ಜೊತೆ ಅಣ್ಣನೇ ಸಾಥಿ. ಅಮ್ಮ ಮನೆಯಲ್ಲೇ ಬಾದಾಮಿ ಪುಡಿ ತಯಾರಿಸಿ ಕೊಡುತ್ತಿದ್ದಳು. ಬಾದಾಮಿ ಕುಟ್ಟಿಕುಟ್ಟಿ ಅಂಗೈ ಮೇಲೆ ಬೊಬ್ಬೆ ಏಳುತ್ತಿದ್ದವು. ಆದರೆ ಹೊಟ್ಟೆಪಾಡು ಅದಕ್ಕಿಂತ ದೊಡ್ಡ ನೋವು. ಪ್ಯಾಕೆಟ್ಗಳನ್ನು ಚೀಲದಲ್ಲಿ ತುಂಬಿಕೊಂಡು ಸೈಕಲ್ ಮೇಲೆ ಬೆಂಗಳೂರನ್ನೆಲ್ಲ ಸುತ್ತುತ್ತಿದ್ದರು ಶಂಕರನಾರಾಯಣ. ಬೇಗೂರು, ಹೊಸೂರು, ರಾಮನಗರ ಎಲ್ಲ ಕಡೆಗೂ ಹೋಗಿ ಮಾರಾಟ ಮಾಡಿ ಬರುತ್ತಿದ್ದರು. ಬಂದ ದುಡ್ಡನ್ನು ಅಮ್ಮನ ಕೈಗೆ ಇಡುತ್ತಿದ್ದರು. ಅವರಿಗೆ ಸಿನಿಮಾ ನೋಡುವುದಕ್ಕೆ 65 ಪೈಸೆ ಕೊಟ್ಟರೆ ಮುಗಿಯಿತು. ಬಹಳ ಖುಷಿ. ಮಾಡಿದ ಹೋಟೆಲ್ಗಳೆಲ್ಲ ನಷ್ಟದಿಂದ ಮುಚ್ಚಿದಾಗ ಜೀವನಾಧಾರ ಅಂದರೆ ಅಮ್ಮ ಮಾಡಿದ ಅಣ್ಣ ಮಾರಿದ ಬಾದಾಮಿ ಪೌಡರ್ ಪ್ಯಾಕೆಟ್ಗಳೇ. ಬಳಸುವವರ ಮನಸ್ಸಿನಲ್ಲಿ ಅಡಿಗರ ಬಾದಾಮ್ ಪುಡಿ ಎಂದೇ ಜನಪ್ರಿಯವೂ ಆಗಿತ್ತು. ಇವೆಲ್ಲ ಹೋರಾಟವೂ ತಾನು ಹುಟ್ಟುವುದಕ್ಕಿಂತ ಮೊದಲು; ಅಪ್ಪಯ್ಯ, ಅಮ್ಮ, ಅಣ್ಣ ಹೇಳುತ್ತಿದ್ದ ವಿಷಯಗಳು, ತನಗೂ ದೊಡ್ಡಣ್ಣನಿಗೂ 16 ವರ್ಷ ಅಂತರ ಎಂದು ನೆನೆಸಿಕೊಳ್ಳುತ್ತಾರೆ ರಾಧಾಕೃಷ್ಣ ಅಡಿಗರು.

ಹುರಿದಿದ್ದು ಹದವಾಗಿ

ನಷ್ಟದ ಮೇಲೆ ನಷ್ಟ ಅನುಭವಿಸಿದರೂ ಸದಾ ಹೊಟೇಲ್ನದೇ ಧ್ಯಾನದಲ್ಲಿರುತ್ತಿದ್ದ ನಾಗೇಶ ಅಡಿಗರಿಗೆ ಕೊನೆಗೂ ದೇವರು ಕಣ್ಣು ತೆರೆದ! ರವೆ ಹುರಿದಿದ್ದು ಹದಕೆಂಪಾಗಿ ಉಪ್ಪಿಟ್ಟು ಮಾಡಲು ಸಮಯ ಸರಿಯಾಗಿ ಕೂಡಿಬಂತು.
ಶಂಕರಪುರದಲ್ಲಿ ರಂಗರಾವ್ ರಸ್ತೆಯ ಒಂದು ಮೂಲೆಮನೆಯ ಕಾರ್ ಶೆಡ್ನಲ್ಲಿ ಪದ್ಮನಾಭ ರಾವ್ ಎನ್ನುವವರು ಹೊಟೇಲ್ ಶುರು ಮಾಡಬೇಕೆಂದು ತಯಾರಿ ನಡೆಸಿದ್ದರು. ಆದರೆ ಅವರಿಗೆ ಅನುಭವ ಇರಲಿಲ್ಲ. ಅವರು ದೂರವಾಣಿ ವಿನಿಮಯ ಕೇಂದ್ರದ ಮಾಜಿ ಅಧಿಕಾರಿ. ನಾಗೇಶ ಅಡಿಗರು ಮೊದಲು ಹೊಟೇಲ್ ಶುರು ಮಾಡಬೇಕು ಅಂತ ಅಂದುಕೊಂಡಿದ್ದು ಇನ್ನೊಬ್ಬರ ಸಹಭಾಗಿತ್ವದಲ್ಲಿ. ಜಂಟಿ ವ್ಯವಹಾರ ಪ್ರಸ್ತಾಪ ಇಟ್ಟವರು ಜಟಕಾ ಸ್ಟ್ಯಾಂಡ್ ಬಳಿ ಅಡಿಗರು ನಷ್ಟ ಅನುಭವಿಸಿದ್ದ ಹೊಟೇಲ್ ಕೊಂಡುಕೊಂಡ ವ್ಯಕ್ತಿ. ಆದರೆ ಆ ಹೊಟೇಲ್ನಲ್ಲಿ ಅವರೂ ನಷ್ಟ ಅನುಭವಿಸಿದ್ದರು. ಹಾಗಾಗಿ ಜಂಟಿಯಾಗಿ ಮತ್ತೆ ಹೊಟೇಲ್ ಶುರು ಮಾಡುವ ಪ್ರಸ್ತಾಪ ಮಾತಿನಲ್ಲೇ ಉಳಿಯಿತು. ಅತ್ತ ಪದ್ಮನಾಭ ರಾಯರು ಶುರು ಮಾಡಿ ಶುರು ಮಾಡಿ ಎಂದು ಒತ್ತಾಯಿಸತೊಡಗಿದರು. ಅಲ್ಲಿದ್ದುದು ಎರಡು ಕಟ್ಟಿಗೆ ಒಲೆ ಹಾಗೂ ಒಂದು ಮರದ ಕೌಂಟರ್ ಅಷ್ಟೆ. ಅವರಿಗೆ ಹೊಟೇಲ್ ನಡೆಸಿ ಅನುಭವ ಇರಲಿಲ್ಲ. ಇವರಿಗೆ ನಷ್ಟದ ಕಹಿ ಅನುಭವವಿತ್ತು. ಸ್ವಲ್ಪ ಹಿಂಜರಿದರು. ಅದರೆ ಆ ವ್ಯಕ್ತಿ ಅಷ್ಟಕ್ಕೇ ಬಿಡಲಿಲ್ಲ. ನಿಮ್ಮ ಕೈಲಿ ಎಷ್ಟು ಹಣ ಕೊಡಲು ಸಾಧ್ಯವೋ ಅಷ್ಟೇ ಕೊಡಿ. ಉಳಿದಿದ್ದನ್ನು ಹಂತಹಂತವಾಗಿ ಕೊಡಿ ಸಾಕು. ನಾನೇ ಲೈಸೆನ್ಸ್ ಸಹ ಮಾಡಿಸಿಕೊಡುತ್ತೇನೆ ಎಂದರು. ಆಗ ನಾಗೇಶ ಅಡಿಗರು ತನ್ನ ಬಳಿ ಇದ್ದ 500 ರೂಪಾಯಿ ಮುಂದಿಟ್ಟರು. ಅವರಿಗೆ ಹಿಂದಿನ ಹೊಟೇಲ್ಗಾಗಿ ಮಾಡಿದ್ದ 1500 ರೂ ಸಾಲ ತೀರಿಸಲೇಬೇಕಿತ್ತು. ಹಳೆಯ ಸಾಲ ತೀರಿಸಲು ಮತ್ತೊಂದು ಹೊಟೇಲ್ ಶುರು ಮಾಡಬೇಕಾದುದು ಅನಿವಾರ್ಯವೂ ಆಗಿತ್ತು. ಆಗ ಚಾಮರಾಜಪೇಟೆಯಲ್ಲಿ ವಾದಿರಾಜ ಸ್ಟೋರ್ಸ್ ಅಂತ ಸ್ಟೀಲ್ ಪಾತ್ರೆ ಅಂಗಡಿಯೊಂದಿತ್ತು. ಅದರ ಮಾಲಿಕ ನಾರಾಯಣ ರಾವ್ ಸಹೃದಯಿ. ನಾಗೇಶ ಅಡಿಗರ ನಿಸ್ಪೃಹ ಕೆಲಸವನ್ನು ಮೊದಲಿನಿಂದಲೂ ನೋಡಿಕೊಂಡು ಬಂದವರು. ಅವರ ಕಷ್ಟ ಕಂಡು ಮರುಗಿ ಹಣಕಾಸು ನೆರವು ಕೊಟ್ಟು ಸ್ಟೀಲ್ ಪಾತ್ರೆಗಳನ್ನು ಸಹ ಒದಗಿಸಿ ಹೋಟೆಲ್ ಶುರು ಮಾಡಲು ಶುಭಹಾರೈಸಿದರು. ಆದರೆ ಅವರು ಕಡ್ಡಿ ಮುರಿದ ಹಾಗೆ ಒಂದು ಮಾತು ಹೇಳಿದ್ದರು- ಇನ್ನು ನಿಮಗೆ ಸಾಲ ಕೊಡಲು ಆಗುವುದಿಲ್ಲ. ಇದೇ ಕೊನೆ. ಈ ಹೋಟೆಲ್ ಸಹ ಉದ್ಧಾರವಾಗಿಲ್ಲ ಅಂದರೆ ನೀವು ಹೆಂಡತಿ ಮಕ್ಕಳನ್ನು ಕಟ್ಟಿಕೊಂಡು ಊರಿಗೆ ಹೋಗುವುದು ಉತ್ತಮ!

ಆಗಲೇ ಶುರುವಾಗಿದ್ದು ಶಂಕರಮಠ ಪ್ರದೇಶದ ಈಗಿರುವ ಸ್ಥಳದಲ್ಲಿ 150 ಚದುರ ಅಡಿಯಲ್ಲಿ ಎರಡು ಕಟ್ಟಿಗೆ ಒಲೆ ಹೂಡಿಕೊಂಡು ಶುರು ಮಾಡಿದ ʻಬ್ರಾಹ್ಮಣರ ಕಾಫಿಬಾರ್ʼ. ಇದು ಆರಂಭಗೊಂಡಿದ್ದ ಆ ಶುಭದಿನ 1965 ಜನವರಿ 27. ಅದಕ್ಕೆ ಆ ಹೆಸರಿಡುವ ಹಿಂದೆ ಇದ್ದ ಸಣ್ಣ ಮಾರುಕಟ್ಟೆ ತಂತ್ರ ಎಂದರೆ ಆಗೆಲ್ಲ ಉಡುಪಿ ಬ್ರಾಹ್ಮಣರು ಹೋಟೆಲ್ ಉದ್ಯಮದಲ್ಲಿ ಮುಂಚೂಣಿಯಲ್ಲಿದ್ದರು. ಆಹಾರದ ಶುಚಿ-ರುಚಿಗೆ ಹೆಸರಾಗಿದ್ದರು. ಹಾಗಾಗಿ ʻಬ್ರಾಹ್ಮಣʼ ಟ್ರೇಡ್ ಮಾರ್ಕ್ ಗ್ರಾಹಕರನ್ನು ಸೆಳೆಯಲು ಸಹಾಯ ಮಾಡಬಹುದು ಎನ್ನುವ ಒಂದೇ ಒಂದು ಉದ್ದೇಶ, ತರ್ಕ. ನಾಗೇಶ ಅಡಿಗರ ಮನಸ್ಸಿನಲ್ಲಂತೂ ಮೇಲುಕೀಳು ಭೇದಭಾವ ಯಾವತ್ತೂ ಕಿಂಚಿತ್ತೂ ಸುಳಿಯುತ್ತಿರಲಿಲ್ಲ. ಮಕ್ಕಳಿಗೂ ಹಾಗೆಯೇ ನಡೆದುಕೊಳ್ಳಲು ಕಲಿಸಿದ್ದರು. ಇದಲ್ಲದೇ ಸನಿಹದಲ್ಲೇ ಟೆಲೆಕಾಂ ಆಫೀಸ್ ಇತ್ತು. ಅಲ್ಲಿಂದ ಗ್ರಾಹಕರು ಬರುತ್ತಾರೆ, ವ್ಯಾಪಾರ ಚೆನ್ನಾಗಿ ಆಗುತ್ತದೆ ಎಂಬ ನಿರೀಕ್ಷೆ.

ಇನ್ನು ಜನವರಿ 27ರ ಆರಂಭ ಮುಹೂರ್ತ ಸೂಚಿಸಿದ್ದ ಪುರೋಹಿತರು, ಇನ್ನು ನೂರು ವರ್ಷ ಇಂಥ ಮುಹೂರ್ತ ದೊರಕುವುದಿಲ್ಲ, ಅಪರೂಪದ ಮುಹೂರ್ತ, ನಿಮ್ಮ ಹೋಟೆಲ್ ಬಹಳ ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದ್ದರಂತೆ. ಹಾಗಂತ ಅಪ್ಪಯ್ಯ ಹೇಳುತ್ತಿದ್ದರೆಂದು ರಾಧಾಕೃಷ್ಣ ಅಡಿಗರು ನೆನಪಿಸಿಕೊಳ್ಳುತ್ತಾರೆ. ಆದರೆ ಒಂದೇ ವಾರದಲ್ಲಿ ಅವರ ಅಕ್ಕನ ಮದುವೆ ಮುಹೂರ್ತ ನಿಗದಿಯಾಗಿದೆ- ಫೆಬ್ರವರಿ 5, 1965. ಅದೂ ಕೊಂಡಳ್ಳಿಯಲ್ಲೇ ಮದುವೆ. ಆ ಮುಹೂರ್ತ ಬಿಡುವ ಹಾಗಿಲ್ಲ; ಈ ಮುಹೂರ್ತ ಬಿಡಲು ಮನಸ್ಸಿಲ್ಲ!
ಕೊನೆಗೂ ಎರಡನ್ನೂ ಬಿಡದೆ ನಡೆಸಿಕೊಡುವ ನಿರ್ಧಾರ ಮಾಡಲಾಯಿತು.

ಅಂತೂ ಇಂತೂ ಶುಭಮುಹೂರ್ತದಲ್ಲಿ ಹೊಟೇಲ್ ʻಬ್ರಾಹ್ಮಣರ ಕಾಫಿ ಬಾರ್ʼ ಶುರುವಾಗಿಯೇ ಬಿಟ್ಟಿತು.

ಮೂವತ್ತೈದು ವರ್ಷಗಳ ಆ ತಪಸ್ಸು, ಆ ಪರಿಶ್ರಮ ಫಲ ಕೊಡುವ ಯೋಗ ಒದಗಿದ್ದರಿಂದ ನಾಗೇಶ ಅಡಿಗರು ಮತ್ತೆ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಅಡಿಗ ಪರಿವಾರಕ್ಕೆ ಹೊಸ ದಿಕ್ಕು, ಹೊಸ ಗಾಳಿ, ಹೊಸ ಬೆಳಕು, ಹೊಸ ಚೈತನ್ಯ ದೊರೆಯುವ ಕಾಲ ಕೂಡಿ ಬಂದಿತ್ತು.

Share13Tweet8SendShareShare
Next Post

ಕನಸುಗಳಿಗೆ ನಿದ್ದೆಯಿಲ್ಲ

Leave a Reply Cancel reply

Your email address will not be published. Required fields are marked *

Recommended

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು ಬೇರೆ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್_ ಪ್ರಮಾಣ ಮಾಡಿದ ಅಜ್ಜಯ್ಯ ಯಾರು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರಮಾಣ ಮಾಡಿದ ಅಜ್ಜಯ್ಯ ಯಾರು?

Radha Krishna Adiga Kannada Biography Book front

Radha Krishna Adiga – Idli Coffee Parampara-Payana

Radha Krishna Adiga Kannada Biography Book front

ರಾಧಾಕೃಷ್ಣ ಅಡಿಗ – ಇಡ್ಲಿ ಕಾಫಿ ಪರಂಪರೆ-ಪಯಣ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್_ ಪ್ರಮಾಣ ಮಾಡಿದ ಅಜ್ಜಯ್ಯ ಯಾರು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರಮಾಣ ಮಾಡಿದ ಅಜ್ಜಯ್ಯ ಯಾರು?

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು ಬೇರೆ

ಕನಸುಗಳಿಗೆ ನಿದ್ದೆಯಿಲ್ಲ

Radha Krishna Adiga Kannada Biography Book front

ರಾಧಾಕೃಷ್ಣ ಅಡಿಗ – ಇಡ್ಲಿ ಕಾಫಿ ಪರಂಪರೆ-ಪಯಣ

Radha Krishna Adiga Idli Coffee Parampara-Payana
Radha Krishna Adiga Idli Coffee Parampara-Payana
Translate »

Added to cart

Your Cart Is Empty
0

Check out our shop to see what's available

Cart Total: Total₹0.00
Your cart is empty. Shop now →
No Result
View All Result
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
  • ಪುಸ್ತಕಗಳು
  • Cart

© 2026 JNews - Premium WordPress news & magazine theme by Jegtheme.