ದೃಶ್ಯಕಾವ್ಯ
Advertisement
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
  • ಪುಸ್ತಕಗಳು
  • Cart
No Result
View All Result
 ದೃಶ್ಯಕಾವ್ಯ
No Result
View All Result
Home ಸಿನಿಗಂಧ

ಎಸ್‌.ಜಾನಕಿ- ಹೋಲಿಕೆಯಿಲ್ಲದ ಗಾಯಕಿ

ಎಸ್‌.ಜಾನಕಿ- ಹೋಲಿಕೆಯಿಲ್ಲದ ಗಾಯಕಿ

ಚೆನ್ನಾಗಿ ಹಾಡುವ ಹುಡುಗಿಗೆ ಎಸ್.‌ ಜಾನಕಿ ಥರ ಹಾಡ್ತಿ ಅಂತ ಹೇಳುವುದು ಸರ್ವೇಸಾಮಾನ್ಯ. ನೀನೇನು ಐಶ್ವರ್ಯ ರೈಯಾ? ಅಂತ ಬೀಗುವ ಸೌಂದರ್ಯವತಿಗೆ ಕೇಳುವ ಹಾಗೆ, ಕೋಗಿಲೆಯ ದನಿಯಾದರೂ ಎಸ್‌.ಜಾನಕಿ ಅನ್ನೋದು ಒಂದು ಉನ್ನತ ಮಾಪಕ. ಅದನ್ನು ಮೀರಿ ಹಾಡುವುದು ನಿನ್ನಿಂದ ಸಾಧ್ಯವಿಲ್ಲ ಕಣೇ, ಅಬ್ಬಬ್ಬಾ ಅಂದ್ರೆ ಎಸ್‌ ಜಾನಕಿ ಥರ ಕೇಳಿಸಬಹುದು ನಿನ್ನ ಧ್ವನಿ ಎನ್ನುವುದರ ಉತ್ಕೃಷ್ಟತೆಯ ದ್ಯೋತಕ. ನಾವು, ದಕ್ಷಿಣದವರಿಗೆ ಲತಾ ಮಂಗೇಶ್ಕರ್‌ ಎಂದಿಗೂ ಒಂದು ಅನನ್ಯ ದೈವೀಕ ಸ್ವರವಾಗಿಯೇ ಉಳಿದರು ಹೊರತು ಹೋಲಿಕೆಯ ಹೆಗ್ಗುರುತಾಗಲಿಲ್ಲ. ನಮ್ಮದೇ ಹೃದಯ ಧ್ವನಿಯಾದವರು ಎಸ್‌ ಜಾನಕಿ.

ಬಾಲ್ಯದಲ್ಲಿ ರೇಡಿಯೋದಲ್ಲಿ ಬರುತ್ತಿದ್ದ ಚಿತ್ರಗೀತೆ ಕಾರ್ಯಕ್ರಮದಲ್ಲಿ ಪ್ರತಿ ಹಾಡಿಗೂ ಎಸ್‌.ಜಾನಕಿ ಮತ್ತು ಎಸ್‌.ಪಿ ಬಾಲಸುಬ್ರಹ್ಮಣ್ಯಂ ಎಂದು ಉದ್ಘೋಷಕಿ ಹೇಳುತ್ತಿದ್ದುದು, ಹಾಡುಗಾರರು ಎಂದರೆ ಅವರಿಬ್ಬರೇ ಎಂಬ ಭಾವ ಮೂಡಿಸಿತ್ತು. ಪಿ.ಬಿ.ಶ್ರೀನಿವಾಸ್‌, ಪಿ.ಸುಶೀಲಾ ಹೆಸರುಗಳು ಮೂಡಿಬರುತ್ತಿದ್ದರೂ ಅಚ್ಚೊತ್ತಿದ್ದು ಈ ಜೋಡಿ ಹೆಸರು. ಅದರಲ್ಲೂ ಯಾವುದೇ ಗಾಯಕರ ಜೊತೆ ಕೇಳಿಬರುವ ಹೆಸರಾದ ಎಸ್.ಜಾನಕಿ ಬೇರೆಯದೇ ಛಾಪು. ವಿಶೇಷ ಎಂದರೆ ಪಿ ಬಿ ಶ್ರೀ, ಎಸ್‌ ಪಿ ಬಿ, ಡಾ.ರಾಜ್‌, ಜಯಚಂದ್ರನ್‌, ಏಸುದಾಸ್‌ ಹೀಗೆ ಎಲ್ಲ ಪ್ರಮುಖ ಗಾಯಕರ ಜೊತೆ ಅವರ ನಿಜವಾದ ಜೋಡಿಯೇನೋ ಎನ್ನುವ ಹಾಗೆ ಮಿಳಿತವಾಗುತ್ತಿದ್ದುದು ಎಸ್‌ ಜಾನಕಿ ಧ್ವನಿ ಮಾತ್ರ.

ಟಿ.ವಿ. ಬರುವ ತನಕ ಹಾಡುಗಾರರ ಮುಖ ಹೇಗಿದೆ ಎಂಬುದು ನಮಗೆಲ್ಲ ಗೊತ್ತಿರಲಿಲ್ಲ. ದಿನಪತ್ರಿಕೆಗಳ ಶುಕ್ರವಾರದ ಸಿನಿಮಾ ಪುಟಗಳಲ್ಲೂ ಗಾಯಕರ ಚಿತ್ರಗಳು ಅಚ್ಚಾಗುತ್ತಿದ್ದುದು ಇರಲೇ ಇಲ್ಲ. ಹಾಗಾಗಿ ಅವರ ಧ್ವನಿಯೇ ಅವರ ವ್ಯಕ್ತಿತ್ವ. ಅವರು ಹೀಗಿರಬಹುದು ಎಂಬ ಕಲ್ಪನೆ ಒಂದೊಂದು ಹಾಡಿನಲ್ಲೂ ಒಂದೊಂದು ಭಾವದೊಂದಿಗೆ ಹೊರಹೊಮ್ಮುತ್ತಿತ್ತು. ಪಲ್ಲವಿ ಅನುಪಲ್ಲವಿ ಚಿತ್ರದ ʻನಗುವ ನಯನʼ ಕೇಳಿದಾಗ ಗಾಯಕಿ ಸ್ನಿಗ್ದಸುಂದರಿ ಆಗಿರಬಹುದೇನೋ ಎಂಬ ಭಾಸ. ಚಕ್ರವ್ಯೂಹದ ʻಚಳಿಚಳಿ ತಾಳೆನು ಈ ಚಳಿಯಾʼ ಕೇಳಿದಾಗ ಮಾದಕವಾಗಿರಬಹುದೇ ಅವರ ಮುಖ ಎನ್ನುವ ಕಲ್ಪನೆ, ʻಕರೆದರೂ ಕೇಳದೇ ಸುಂದರನೆʼ ಎಂಬ ಸನಾದಿ ಅಪ್ಪಣ್ಣನ ಹಾಡು ಕೇಳಿದಾಗ ಈಕೆ ದೇವಸುಂದರಿ ಆಗಿರಬಹುದು ಎಂಬ ಭಾವ, ನೀ ನನ್ನ ಗೆಲ್ಲಲಾರೆ ಚಿತ್ರದಲ್ಲಿ ʻನನ್ನ ನೀನು ಗೆಲ್ಲಲಾರೆ.. ತಿಳಿದೂ ತಿಳಿದೂ ಛಲವೇತಕೆ?ʼ ಎಂದು ಡಾ.ರಾಜ್‌ಗೆ ಸವಾಲು ಹಾಕಿದಾಗ, ಈಕೆ ಮಹಾ ಗಟ್ಟಿಗಿತ್ತಿಯೇ ಇರಬಹುದು ಎಂಬ ಅನಿಸಿಕೆ, ಗೀತಾ ಚಿತ್ರದ ʻನನ್ನ ಜೀವ ನೀನುʼ ಹಾಡಿನ ದ್ವಿತೀಯಾರ್ಧದಲ್ಲಿ ʻಯಾರ ಶಾಪ ತಗುಲಿತೋʼ ಎಂದು ಕರುಣಾಜನಕವಾದ ಹಾಡು ಕೇಳಿದಾಗ ರೋಗಿಷ್ಟೆಯೇ ಇರಬಹುದು ಎಂಬ ಪರಿತಾಪ!
ಆದರೆ ಎಸ್‌ ಜಾನಕಿ ಚಿಕ್ಕಮಕ್ಕಳ ಥರ ಧ್ವನಿ ಮಾಡಿಕೊಂಡು ವಸಂತ ಗೀತ ಚಿತ್ರದ ʻಹಾಯಾದ ಈ ಸಂಜೆʼ ಹಾಡಿನಲ್ಲಿ ʻಏನು ಚಂತೋಚವೋ ಏನು ಉಲ್ಲಾಸವೋʼ ಎಂದು ಹಾಡಿದಾಗ ಮಾತ್ರ ನಿರ್ಣಯಕ್ಕೇ ನಿಲುಕದ ವಿಸ್ಮಯ. ʻಚಕ್ರವ್ಯೂಹʼದಲ್ಲಿ ಪಿ ಸುಶೀಲಾ ಜೊತೆ ʻನಿಜ ಹೇಳುವೆನು ಅಮ್ಮ ನಿನ್ನ ಕಂಡರೆ ಪ್ರೀತಿʼ ಅದೆಷ್ಟು ಸಲ ಕೇಳಿದರೂ ನಾಲ್ಕು ವರ್ಷದ ಮಗುವಾಗಿಯೇ ಕಂಡರು ಎಸ್ ಜಾನಕಿ. ನೀ ಬರೆದ ಕಾದಂಬರಿ ಚಿತ್ರದ ʻನೀ ಮೀಟಿದ ನೆನಪೆಲ್ಲವೂʼ ಹಾಡನ್ನು ಮಾ.ಅರ್ಜುನ್‌ಗಾಗಿ ಹಾಡಿದಾಗ ತುಸು ಪ್ರೌಢ ದನಿಯಲ್ಲಿ ಹಾಡಿದ್ದು ಮರೆಯಲಾಗದ್ದು.

ಟಿವಿಯಿಂದಾಗಿ ಎಸ್‌ ಜಾನಕಿ ಎಂಬ ಕಾಸಗಲ ಕುಂಕುಮದ, ಸದಾ ನಗು ತುಂಬಿರುವ ಮುಖ ಮನದ ಹಸಿಗೋಡೆಯಲ್ಲಿ ಶಾಶ್ವತವಾಗಿ ಅಚ್ಚಾಯಿತು. ಆಗೆಲ್ಲ ಗಾಯಕಿಯರ ವೈಯಕ್ತಿಕ ಜೀವನ ನಿಗೂಢವಾಗಿಯೇ ಇರುತ್ತಿದ್ದುದರಿಂದ ಅವರಿಗೆ ಮದುವೆ ಆಗಿದೆಯಾ? ಸಂಸಾರವಿದೆಯಾ? ಇದ್ದರೆ ಪತಿ ಯಾರು? ಮಕ್ಕಳಿದ್ದಾರಾ ಇತ್ಯಾದಿ ವಿಷಯಗಳು ಮುನ್ನೆಲೆಗೆ ಬರುತ್ತಿರಲಿಲ್ಲ. ನಮಗೆ ಅದು ಬೇಕಾಗಿಯೂ ಇರಲಿಲ್ಲ. ನಮಗೆ ಕೇಳುವ ಸುಖ ಎಂದರೆ ಅದು ಎಸ್‌ ಜಾನಕಿ ಎನ್ನುವ ಹೆಸರು ಮತ್ತು ಅವರ ಇನಿದನಿ.

ಜಗತ್ತಿನಲ್ಲಿ ಇರುವ ನೂರಾರು ಎಫ್‌ಎಂ ಮತ್ತು ರೇಡಿಯೋ ಕೇಂದ್ರಗಳು, ಮ್ಯೂಸಿಕ್‌ ವಾಹಿನಿಗಳು ಹೀಗೆ ಒಂದಿಲ್ಲೊಂದು ಕಡೆ, ಪ್ರತಿಕ್ಷಣವೂ ಎಸ್‌ ಜಾನಕಿ ಹಾಡಿರುವ ಹಾಡು ಬರುತ್ತಲೇ ಇರಬಹುದು. ಯಾಕೆಂದರೆ ಅವರು ಹಾಡಿರುವುದು ೪೦ ಸಾವಿರಕ್ಕೂ ಅಧಿಕ ಹಾಡುಗಳು ೧೪ಕ್ಕೂ ಅಧಿಕ ಭಾಷೆಗಳಲ್ಲಿ. ಹಾಗಾಗಿ ಅದು ೨೪ ಗಂಟೆಯೂ, ೩೬೫ ದಿನವೂ ನಿಲುಗಡೆಯಿಲ್ಲದ ಹಾಡುಗಳ ಪಯಣ.

ಕನ್ನಡಿಗರೇ ಆಗಿಹೋದ ಎಸ್‌ ಜಾನಕಿ, ಕರ್ನಾಟಕ ರಾಜ್ಯ ಸರ್ಕಾರ ಕೊಡಮಾಡುವ ಪ್ರಶಸ್ತಿಗಳಲ್ಲಿ ಗಾಯನಕ್ಕಾಗಿ ಒಂದು ಪ್ರಶಸ್ತಿ ಇಲ್ಲ ಎಂದಮೇಲೆ ಕನ್ನಡ ಹಾಡನ್ನು ಹಾಡುವುದೇ ಇಲ್ಲ ಎಂದು ಘೋಷಿಸಿದ್ದು ನೆನಪಿದೆ. ಅವರಿಂದಾಗಿಯೇ ಶ್ರೇಷ್ಠ ಗಾಯಕ, ಶ್ರೇಷ್ಠ ಗಾಯಕಿ ಪ್ರಶಸ್ತಿಗಳು ಸೇರ್ಪಡೆಗೊಂಡಿರುವುದು ಎನ್ನುವುದೂ ಸತ್ಯ.

ಜೀವನ ಸಂಧ್ಯಾಕಾಲದಲ್ಲಿ ಪುತ್ರಶೋಕ ಅವರನ್ನು ಆವರಿಸಿತ್ತು, ಮಗ ಮುರಳೀಧರ ಕಳೆದ ಜನವರಿಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದರು ಎಂಬ ಸುದ್ದಿ ಓದಿದಾಗ ಮೂಡಿದ್ದು ಒಂದೇ ಪ್ರಶ್ನೆ, ಏಕೆ ಮೇರುಗಾಯಕಿಯರ ಬದುಕಲ್ಲಿ ಹೀಗಾಗುತ್ತದೆ? ಇನಿದನಿಯ ಕೆ.ಎಸ್.‌ ಚಿತ್ರಾ ಏಕಮಾತ್ರ ಪುತ್ರನಿಗೆ ಆಟಿಸಂ ಖಾಯಿಲೆ ಇತ್ತು, ದುಬೈಗೆ ಹಾಡಲು ಹೋದಾಗ, ಪಂಚತಾರಾ ಹೊಟೇಲ್‌ನ ಈಜುಕೊಳದಲ್ಲಿ ಬಿದ್ದು ತೀರಿಕೊಂಡ.. ವಾಣಿ ಜಯರಾಂ ಅವರಿಗೆ ಸಂತಾನ ಪ್ರಾಪ್ತಿಯಾಗಲಿಲ್ಲ, ಆಶಾ ಭೋಸ್ಲೆ ಪುತ್ರಿ ಆತ್ಮಹತ್ಯೆ ಮಾಡಿಕೊಂಡಳು, ಲತಾ ಮಂಗೇಶ್ಕರ್‌ ಮದುವೆಯೇ ಆಗಲಿಲ್ಲ! ‌
ವೈಯಕ್ತಿಕ ನೋವು ನಲಿವುಗಳನ್ನು ಮೀರಿ ಎಸ್.‌ ಜಾನಕಿ ಕೋಟ್ಯಂತರ ಹೃದಯಗಳಿಗೆ ತಂಪೆರೆಯುತ್ತಲೇ ಇರುತ್ತಾರೆ, ತಮ್ಮ ಧ್ವನಿಯ ಮೂಲಕ ಜೀವಂತವಾಗಿ ನಮ್ಮ ಜೊತೆ, ನಾವು ಅಳಿದ ಮೇಲೂ ಅವರ ಧ್ವನಿ ಬದುಕಿರುತ್ತದೆ.

* ವಿಭ

Share18Tweet12SendShareShare
Next Post
ವಿಶ್ವಾಸ ದ್ರೋಹಿಗಳ ನಿಜವಾದ ಮುಖ

ಮಿತ್ರ ದ್ರೋಹಿಗಳಿಂದ ಹುಷಾರಾಗಿರಿ!

Leave a Reply Cancel reply

Your email address will not be published. Required fields are marked *

Recommended

ಟಾಕ್ಸಿಕ್ ವ್ಯಕ್ತಿತ್ವ- ಸಂಬಂಧಗಳ ನಡುವೆ ನಿಧಾನ ವಿಷ !

ಟಾಕ್ಸಿಕ್ ವ್ಯಕ್ತಿತ್ವ- ಸಂಬಂಧಗಳ ನಡುವೆ ನಿಧಾನ ವಿಷ !

ಗರಗಸದ ಕಂಬನಿ

ಗರಗಸದ ಕಂಬನಿ

80ʼs Trend.. ನಾಸ್ಟಾಲ್ಜಿಯಾ ಅನ್ನೋ ಕಾಯಿಲೆ !

80ʼs Trend.. ನಾಸ್ಟಾಲ್ಜಿಯಾ ಅನ್ನೋ ಕಾಯಿಲೆ !

ಸವೆದ ಚಪ್ಪಲಿಗಳು –  ಆದೇವು ನಾವು !

ಸವೆದ ಚಪ್ಪಲಿಗಳು – ಆದೇವು ನಾವು !

ಗರಗಸದ ಕಂಬನಿ

ಗರಗಸದ ಕಂಬನಿ

ಸಮೂಹ ಸನ್ನಿಗೊಳಗಾದ ನೆಟ್ಟಿಗರು – 1980s AI

ಸಮೂಹ ಸನ್ನಿಗೊಳಗಾದ ನೆಟ್ಟಿಗರು – 1980s AI

80ʼs Trend.. ನಾಸ್ಟಾಲ್ಜಿಯಾ ಅನ್ನೋ ಕಾಯಿಲೆ !

80ʼs Trend.. ನಾಸ್ಟಾಲ್ಜಿಯಾ ಅನ್ನೋ ಕಾಯಿಲೆ !

ಕೌರವರ ಹೆಸರಿನಲ್ಲಿದ್ದ ‘ದು’ ನಮ್ಮೊಳಗಿಲ್ಲವೇ?

ಕೌರವರ ಹೆಸರಿನಲ್ಲಿದ್ದ ‘ದು’ ನಮ್ಮೊಳಗಿಲ್ಲವೇ?

Radha Krishna Adiga Idli Coffee Parampara-Payana
Radha Krishna Adiga Idli Coffee Parampara-Payana
Translate »

Added to cart

Your Cart Is Empty
0

Check out our shop to see what's available

Cart Total: Total₹0.00
Your cart is empty. Shop now →
No Result
View All Result
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
  • ಪುಸ್ತಕಗಳು
  • Cart

© 2026 JNews - Premium WordPress news & magazine theme by Jegtheme.