Story for kids
ಒಂದು ಊರಿನಲ್ಲಿ ಅನೇಕ ತುಂಟ ಮಕ್ಕಳಿದ್ದರು. ನಾಗ ಎಂಬ ಹುಡುಗ ಮಕ್ಕಳ ನಾಯಕ. ನಾಗ ಬಹಳ ಚುರುಕು. ಆದರೆ ಅಶಿಸ್ತಿನ ಬಾಲಕನಾಗಿದ್ದ. ಅವನು ಪುಸ್ತಕಗಳನ್ನು ಸರಿಯಾಗಿ ಜೋಡಿಸಿ ಇಟ್ಟುಕೊಳ್ಳುತ್ತಿರಲಿಲ್ಲ. ಎಲ್ಲೆಂದರಲ್ಲಿ ಎಸೆದುಬಿಡುತ್ತಿದ್ದ. ಅವನ ಗಮನ ಆಟದ ಕಡೆಗೇ ಇರುತ್ತಿತ್ತು. ಟಿವಿ ನೊಡುವುದು, ಅಪ್ಪನ ಮೊಬೈಲ್‌ನಲ್ಲಿ ಗೇಮ್ ಆಡುವುದು ಅವನಿಗೆ ತುಂಬ ಇಷ್ಟವಾಗಿದ್ದವು. ಕೆಲವೊಮ್ಮೆ ಮಾತ್ರ ಕಥೆಯನ್ನು ಅರ್ಧಂಬರ್ಧ ಓದುತ್ತಿದ್ದ. ಅವನ ಅಶಿಸ್ತನ್ನು ತಿದ್ದಲು ಆಗದೇ ಅಮ್ಮ ಸೋತುಹೋಗಿದ್ದಳು. ಅದಕ್ಕೆ ಅಜ್ಜಿಯನ್ನು ಊರಿನಿಂದ ಕರೆಸಿದಳು. ಅಜ್ಜಿ ಮಕ್ಕಳ ಮನಸ್ಸನ್ನು ಚೆನ್ನಾಗಿ ಅರಿತವಳಾಗಿದ್ದಳು.
ಒಂದು ದಿನ ನಾಗ ಒಂದು ಕಥೆಯನ್ನು ಓದುತ್ತಿದ್ದಾಗ ಅರ್ಧಕ್ಕೇ ನಿದ್ದೆ ಬಂತು. ಆ.. ಎಂದು ಆಕಳಿಸಿದ. ಹಾಗೆಯೇ ಹಾಸಿಗೆ ಮೇಲೆ ಮಲಗಿದ. ಪುಸ್ತಕ ಮುಚ್ಚಿಡಲು ಮರೆತುಹೋಯಿತು. ನಿದ್ದೆಯಲ್ಲಿ ನಾಗನಿಗೆ ಒಂದು ಕನಸು ಬಿತ್ತು. ಕನಸಿನಲ್ಲಿ ಒಂದು ಹಲ್ಲಿ ಬಂದಿತು. ಹಲ್ಲಿ ಆ ತೆರೆದ ಪುಸ್ತಕದ ಮೇಲೆ ಕುಳಿತು ಕಥೆಯನ್ನು ಓದಿತು. ಅಕ್ಷರಗಳನ್ನು ಕಚಕಚನೆ ತಿಂದಿತು. ಪುಸ್ತಕದ ಮೇಲೆ ಕುಣಿದು ಹಾಳೆಗಳನ್ನು ಚೂರು ಚೂರು ಮಾಡಿತು. ನಾಗ ಗಾಬರಿಯಿಂದ ಕಿರುಚುತ್ತ ಎದ್ದ. ಕಣ್ಣುಜ್ಜಿ ನೋಡಿದ. ಪುಸ್ತಕ ತೆರೆದೇ ಇತ್ತು. ಅಕ್ಷರಗಳೂ ಹಾಗೇ ಇದ್ದವು. ಅವನು ಕಥೆಯನ್ನು ಮುಂದೆ ಓದಬೇಕೆಂದು ನೋಡಿದ. ಅವನಿಗೆ ಅಕ್ಷರಗಳು ಮರೆತು ಹೋಗಿದ್ದವು.
ಅಷ್ಟರಲ್ಲಿ ಅವನ ಅಜ್ಜಿ ಬಂದಳು. ನಾಗ ಏನಾಯಿತು ? ಎಂದಳು. ಅಜ್ಜಿ ! ನನಗೆ ಅಕ್ಷರಗಳು ಮರೆತು ಹೋಗಿವೆ ಎಂದ ನಾಗ. ಅಯ್ಯೋ, ಹಲ್ಲಿ ಪುಸ್ತಕ ಓದಿದೆ ! ಅದಕ್ಕೆ ಹೀಗಾಗಿದೆ ಎಂದಳು ಅಜ್ಜಿ. ನಾಗನ ತಲೆ ನೇವರಿಸುತ್ತ, ಮಲಗುವಾಗ ನೀನು ಪುಸ್ತಕ ಮುಚ್ಚಿಡಬೇಕಿತ್ತು. ಎಲ್ಲ ಪುಸ್ತಕಗಳನ್ನೂ ಚೆನ್ನಾಗಿ ಜೋಡಿಸಿ ಇಟ್ಟುಕೊಳ್ಳಬೇಕಿತ್ತು. ಇನ್ನು ಮುಂದೆ ಪುಸ್ತಕ ತೆರೆದಿಡಬೇಡ. ಎಲ್ಲೆಂದರೆ ಅಲ್ಲಿ ಎಸೆಯಬೇಡ. ಹಲ್ಲಿ ಓದಿದ ಅಕ್ಷರಗಳು ಮರೆತು ಹೋಗುತ್ತವೆ ಎಂದಳು. ನಾಗ ಈ ಮಾತನ್ನು ನಂಬಿದ. ಯಾಕೆಂದರೆ ಅವನಿಗೆ ಬಿದ್ದ ಕನಸೂ ಅಜ್ಜಿ ಹೇಳಿದ ವಿಷಯವೂ ಒಂದೇ ಆಗಿತ್ತು.
ಇನ್ನು ಮುಂದೆ ಪುಸ್ತಕಗಳನ್ನು ಶಿಸ್ತಾಗಿ ಇಡುತ್ತೇನೆ. ಓದು ಮುಗಿದ ಮೇಲೆ ಮುಚ್ಚಿಯೇ ಇಡುತ್ತೇನೆ ಎಂದು ನಾಗ ಹೇಳಿದ.
ಆದರೆ ಒಂದು ಸಂಶಯ. ಹಲ್ಲಿ ಓದಿದರೆ ನನಗೆ ಏಕೆ ಮರೆತುಹೋಯಿತು ? ಎಂದು ಕೇಳಿದ.
ಆಗ ಅಜ್ಜಿ ಹೇಳಿದಳು- ನೀನು ನಿದ್ದೆಗಣ್ಣಿನಲ್ಲಿ ಇದ್ದೆ. ಅದಕ್ಕೇ ಅಕ್ಷರಗಳು ಕಾಣಿಸಲಿಲ್ಲ. ಅಲ್ಲದೇ ನೀನು ತುಂಬ ಕಡಿಮೆ ಓದುವೆ. ಹೀಗಾಗಿ ಅಕ್ಷರಗಳನ್ನು ಗುರುತಿಸಲು ತಡವಾಗುತ್ತದೆ. ದಿನವೂ ಸರಿಯಾಗಿ ಓದಿಕೊಂಡರೆ ಸುಲಭವಾಗುತ್ತದೆ. ಅಕ್ಷರಗಳು ಮರೆಯುವುದಿಲ್ಲ. ಹೆಕ್ಕಿ ಹೆಕ್ಕಿ ಓದುವ ಅಗತ್ಯವೇ ಇರುವುದಿಲ್ಲ. ಫಟಾಪಟ್ ಓದುವುದು ಸಾಧ್ಯವಾಗುತ್ತದೆ. ಹಲ್ಲಿ ಓದಿದ ಅಕ್ಷರಗಳು ಮರೆತುಹೋಗುತ್ತವೆ ಎನ್ನುವುದು ಒಂದು ನಂಬಿಕೆ ಅಷ್ಟೆ ಎಂದಳು.
ನಾಗ- ಇನ್ನು ಮುಂದೆ ನೀನು ಹೇಳಿದಂತೆ ಓದುತ್ತೇನೆ ಅಜ್ಜಿ, ದಿನವೂ ಓದುತ್ತೇನೆ. ಸಂಜೆ ಮಾತ್ರ ಆಡುತ್ತೇನೆ. ಈ ವಿಷಯ ಗೆಳೆಯರಿಗೂ ತಿಳಿಸಿಕೊಡುತ್ತೇನೆ ಎಂದ. ಅವನು ಬದಲಾದ. ಪುಸ್ತಕಗಳನ್ನು ಚೆನ್ನಾಗಿ ಇಟ್ಟುಕೊಳ್ಳತೊಡಗಿದ. ಚೆನ್ನಾಗಿ ಓದತೊಡಗಿದ. ಅವನಲ್ಲಿ ಆದ ಬದಲಾವಣೆ ಕಂಡು ಅಜ್ಜಿಗೆ ಸಂತೋಷವಾಯಿತು. ಅಮ್ಮನಿಗೆ ನೆಮ್ಮದಿ ತಂದಿತು.
-
-
-
-
-
-
-
-
-
-
-
-
-
-
- ಸಂಜೀವ ತದ್ದಲಸೆ
-
-
-
-
-
-
-
-
-
-
-
-
-









