ಸಮಯವನ್ನ ಹಾಗೇ ರಿವೈಂಡ್ ಮಾಡಿ… ಒಂದು ಕಾಲ ಇತ್ತು.. ಅದು 80ರ ದಶಕ… ಈಗಿನವರ ಬಾಯಲ್ಲಿ ಬರೋದೆಲ್ಲಾ ಅದೇ ಮಾತು, ಅದೇ ನಾಸ್ಟಾಲ್ಜಿಯಾ… ಆ ಬ್ಲಾಕ್ ಅಂಡ್ ವೈಟ್ ಫೋಟೋಗಳು, ಹಳೇ ಅಂಬಾಸಿಡರ್ ಕಾರು, ಫಿಯೆಟ್ ಪದ್ಮಿನಿ, ದೂರದರ್ಶನ, ಕ್ಯಾಸೆಟ್ ಪ್ಲೇಯರ್, ಕೈಯಿಂದ ಬಿಡಿಸಿದ ಪೋಸ್ಟರ್, ಬೆಲ್ ಬಾಟಮ್, ಗುಂಗುರು ಕೂದಲು, ಗಲ್ಲಿ ಕ್ರಿಕೆಟ್ಟು, ಇರಾನಿ ಕೆಫೆ… ಅಬ್ಬಬ್ಬಾ ಏನ್ ಜಮಾನ ಸರ್ ಅದು…? ಇವರ ಮುಂದೆ ಅವರು ಬಿಲ್ಡಪ್ಪು.. ಅವರ ಮುಂದೆ ಇವರು ಬಿಲ್ಡಪ್ಪು.. ಇವರಿಬ್ಬರ ಮುಂದೆ ಆ 80ರ ದಶಕದಲ್ಲಿ ಹುಟ್ಟಿದೀವಿ ಅಂತ ಮೂರನೇಯವರ ಬಿಲ್ಡಪ್ಪು.. ಪೋಷಕರಿಗೆ ತಾವು ಆ ಕಾಲದಲ್ಲಿ ಬದುಕಿದ್ವಿ ಅಂತ ಹೇಳಿಕೊಳ್ಳುವುದೇ ಒಂದು ದೊಡ್ಡಸ್ತಿಕೆ….
ಆದರೆ ಈ ನಾಸ್ಟಾಲ್ಜಿಯಾ ಅನ್ನೋ ಕಾಯಿಲೆಗೆ ಒಂದು ಸಣ್ಣ ಪ್ರಾಬ್ಲಮ್ ಇದೆ. ಇವತ್ತಿನವರನ್ನ ಎತ್ತಿ ಆ 1983ರ ಭಾರತದಲ್ಲಿ ಬಿಸಾಕಿ, ಈಗಿರೋದೆಲ್ಲ ಕಿತ್ಕೊಂಡ್ರೆ, ಈ ನಾಸ್ಟಾಲ್ಜಿಯಾದ ಹುಚ್ಚು ಕೇವಲ ಮೂರೇ ದಿನಕ್ಕೆ ಇಳಿದು ಹೋಗುತ್ತೆ ಅನ್ನೋದನ್ನ ನಾವು ಪುರಾವೆ ಸಮೇತ ನಿರೂಪಿಸಬಹುದು.
ಒಂದು ಮೋಟಾರ್ ಸೈಕಲ್ ಅಥವಾ ಮನೆಗೊಂದು ಟೆಲಿಫೋನ್ ಬೇಕಾ…? ಅಪ್ಲೈ ಮಾಡಿ ತಪಸ್ಸಿಗೆ ಕೂತ್ಕೋಬೇಕು. ಫೋನಿನ ಕನೆಕ್ಷನ್ ಬರೋಷ್ಟರಲ್ಲಿ ಮನುಷ್ಯನಿಗೆ ಮುಕುತಿ ಸಿಕ್ಕೇಬಿಡ್ತಿತ್ತು. ಇವತ್ತಿನ ಹಾಗೆ ದುಡ್ಡಿದೆ ಅಂತ ಶೋರೂಮ್‌ಗೆ ಹೋಗಿ ಇಪ್ಪತ್ತು ಬೈಕ್ ನೋಡಿ ಒಂದನ್ನೇರಿಸಿಕೊಂಡು ಬರೋ ಬಿಲ್ಡಪ್ ಆಗ್ತಿರಲಿಲ್ಲ. ಇರೋದೊಂದೇ ಬಜಾಜ್ ಸ್ಕೂಟರ್, ಅದನ್ನ ಹೆಂಡತಿ ಬಸಿರಾಗಿದ್ದಾಗ ಬುಕ್ ಮಾಡಿದ್ರೆ, ಮಗ ಕಾಲೇಜಿಗೆ ಹೋಗೋ ವಯಸ್ಸಿಗೆ ಡೆಲಿವರಿ ಸಿಗ್ತಿತ್ತು! ಯಾವುದೇ ವಿದೇಶಿ ಟಿವಿ, ಕಂಪ್ಯೂಟರ್, ಕ್ಯಾಮೆರಾ ಬೇಕು ಅಂದ್ರೆ, “ಅಮೆಜಾನ್ ನಾಳೆ ಡೆಲಿವರಿ ಮಾಡಲ್ಲ” ಅನ್ನೋ ಮಹಾನ್ ಸತ್ಯವನ್ನ ಮನದಟ್ಟು ಮಾಡಿದ್ದೇ ಆ ಕಾಲದ ಲೈಸೆನ್ಸ್ ರಾಜ್ ಮತ್ತು ಸಮಾಜವಾದಿ ನೀತಿಗಳು. ಜೀವನದಲ್ಲಿ ‘ತಾಳ್ಮೆ’ ಅನ್ನೋ ಮಹಾನ್ ತತ್ವನ ನಮ್ಮ ಜನರಿಗೆ ಉಚಿತವಾಗಿ ಕಲಿಸಿಕೊಟ್ಟಿದ್ದೇ ಆ 80ರ ದಶಕದ ಸರ್ಕಾರ. ಈ ನಿಧಾನಾನೇ ಸಮಾಧಾನ ಅಂತ, ನಿಧಾನಾನೆಲ್ಲಾ ‘ಹಿಂದು’ ಐ ಮೀನ್ ‘ಹಿಂದೂ’, ಉಳಿದಿದ್ ಜಗತ್ತೆಲ್ಲಾ ಮುಂದು ಅಂತ ‘ಹಿಂದೂ ರೇಟ್ ಆಫ್ ಗ್ರೋತ್’ ಅಂತ ಹೆಸರಿಟ್ಟು, ತಮ್ಮ ಅಸಫಲತೆಗಳಿಗೆ ರಾಜಕೀಯದೋರು ಸಗಣಿ ಸಾರ್ಸಿ ಗೋಮೆ ಹಚ್ಚಿ ಕೃತಾರ್ಥರಾದ ಕಾಲ ಅದು.
ಆ ಹೈಕಳೂ ಅಷ್ಟೇ.. ಸೈಕಲ್ ತುಳಿಯೋದು ಎಂತಾ ನಾಸ್ಟಾಲ್ಜಿಯಾ ಅಂತ ಈಗ ಫೋಸ್ ಕೊಡ್ತಾರೆ. ಸೈಕಲ್ ತುಳಿಯೋಕೆ ಇಷ್ಟಪಟ್ಟು ತುಳಿದ್ರೆ ಅದು ಖುಷಿ, ಆದ್ರೆ ಬೇರೆ ಯಾವುದೇ ವಾಹನ ಕೊಳ್ಳೋಕೆ ಯೋಗ್ಯತೆ ಇಲ್ಲದೆ, ಗತಿಯಿಲ್ಲದೆ ಅದೇ ಸೈಕಲ್ ತುಳಿಯೋದು ಬಡತನ. ಇನ್‌ಸ್ಟಾಗ್ರಾಮ್ ಫಿಲ್ಟರ್‌ಗಳಲ್ಲಿ ಈ ಸತ್ಯಾಸತ್ಯತೆಗಳು ಎಡಿಟ್ ಆಗಿಬಿಡ್ತಾವೆ ಅಷ್ಟೇ.
ಇನ್ನು ಉದ್ಯೋಗ ಮತ್ತು ಆರ್ಥಿಕತೆ! ಕೃಷಿ ಬಿಟ್ಟರೆ ಬೇರೆ ಕೆಲಸಗಳೇ ಇರಲಿಲ್ಲ. ಈಗಿನ ಹಾಗೆ ಇಷ್ಟ ಬಂದಾಗ ಕೆಲಸ ಬಿಟ್ಟು, ಬೇರೆ ಇಂಡಸ್ಟ್ರಿಗೆ ಹಾರಿ, ಸಾಫ್ಟ್ ವೇರ್ ಇಂಜಿನಿಯರ್ ಆಗಿ, ಮಲ್ಟಿ-ನ್ಯಾಷನಲ್ ಕಂಪನಿಗೆ ಸೇರಿ, ಅಮೆರಿಕಾದ ಕಂಪನಿಗೆ ಬೆಂಗಳೂರಲ್ಲಿ ಕೂತು ಫ್ರೀಲ್ಯಾನ್ಸ್ ಮಾಡೋದೆಲ್ಲಾ ಆ ಕಾಲದಲ್ಲಿ ಸೈನ್ಸ್ ಫಿಕ್ಷನ್ ಕಥೆಗಳು! ಸರ್ಕಾರಿ ಕೆಲಸ ಸಿಕ್ರೆ ಆಯಿತು, ಇಲ್ಲಾಂದ್ರೆ ಗಪ್ ಚುಪ್. ಪ್ರೈವೇಟ್ ಕಂಪನಿಗಳು ಬೆಳೆಯಬಾರದು, ಜನ ಬೇಗ ಉದ್ದಾರ ಆಗಬಾರದು ಅನ್ನೋ ಉದಾತ್ತ ಉದ್ದೇಶದಿಂದ ಲೈಸೆನ್ಸ್ ರಾಜ್, ಇಂಪೋರ್ಟ್ ರಿಸ್ಟ್ರಿಕ್ಷನ್ ತಂದು, ಬಡತನದಲ್ಲೇ ಸಂತೋಷ ಪಡೋದನ್ನ ಕಲಿಸಿಕೊಟ್ಟಿದ್ದೇ ಆ ಕಾಲದ ಸಾಧನೆ.

ಕನ್ಸ್ಯೂಮರ್ ಚಾಯ್ಸ್ ಅಂದ್ರೆ ಏನ್ ಮಹಾ? ಇರೋದನ್ನೇ ತಗೋ, ಇಲ್ಲ ಸುಮ್ಮನೆ ಮನೇಲಿರೋ. ಇವತ್ತು ಅಮೆಜಾನ್, ಸ್ವಿಗ್ಗಿ, ಯುಪಿಐ, ಗೂಗಲ್, ವಾಟ್ಸಾಪ್, ಆನ್‌ಲೈನ್ ಬ್ಯಾಂಕಿಂಗ್, ಕ್ಲೌಡ್ ಕಂಪ್ಯೂಟಿಂಗ್ ಅಂತ ಮೆರೀತೀವಿ. ಆದರೆ ಅವತ್ತು “ಆಸೆಯೇ ದುಃಖಕ್ಕೆ ಮೂಲ” ಅನ್ನೋ ತತ್ವನ ಆರ್ಥಿಕತೆಗೆ ಅಳವಡಿಸಿದ್ರು. ವಿದೇಶಿ ವಸ್ತುಗಳು ಬೇಡವೇ ಬೇಡ, ನಾವು ಯಾವುದಕ್ಕೂ ಆಸೆ ಪಡಲ್ಲ ಅಂತ ಇಡೀ ದೇಶಕ್ಕೆ ಸನ್ಯಾಸತ್ವ ಕಲಿಸಿಕೊಟ್ಟಿದ್ದೇ ಆ ಕಾಲದ ಪ್ರೊಟೆಕ್ಷನಿಸ್ಟ್ ಸರ್ಕಾರ.
ಇನ್ಫ್ರಾಸ್ಟ್ರಕ್ಚರ್ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ. ಹದಗೆಟ್ಟ ರಸ್ತೆಗಳು, ವಿಮಾನ ಪ್ರಯಾಣ ಅಂದ್ರೆ ಗಗನಕುಸುಮ, ದಿನವಿಡೀ ಕರೆಂಟ್ ಕಟ್, ನೀರಿಗೆ ಹಾಹಾಕಾರ. ಇವತ್ತಿನ ಜನ ಅಪಾರ್ಟ್ಮೆಂಟ್ ಬಾತ್ರೂಮ್ ಚೆನ್ನಾಗಿಲ್ಲ ಅಂತ ಕಂಪ್ಲೇಂಟ್ ಮಾಡ್ತಾರೆ. ಆದ್ರೆ 80ರ ದಶಕದ ಜನ ಅಪ್ಪಟ ಪ್ರಕೃತಿ ಪ್ರೇಮಿಗಳು! ಗ್ರಾಮೀಣ ಭಾರತದಲ್ಲಿ ಶೌಚಾಲಯ ಕಟ್ಕೊಳ್ಳೋ ಬದಲು, ಬೆಳ್ಳಂಬೆಳಗ್ಗೆ ಚಂಬು ಹಿಡ್ಕೊಂಡು ಬಯಲಿಗೆ ಹೋಗಿ ಪ್ರಕೃತಿಯ ಮಡಿಲಲ್ಲಿ ಧ್ಯಾನ ಮಾಡ್ತಾ ಇದ್ರು! ಇದನ್ನ ಹಳ್ಳಿಯ ಸೊಗಸು ಅಂತ ರೊಮ್ಯಾಂಟಿಸೈಸ್ ಮಾಡಬಹುದು, ಆದ್ರೆ ಬಯಲು ಶೌಚಾಲಯ ಅನ್ನೋದು ಕಾಯಿಲೆಗಳ ತವರೂರು. “ಆಗಿನ ಜನ ಖುಷಿಯಾಗಿದ್ರು” ಅನ್ನೋ ನಾಸ್ಟಾಲ್ಜಿಯಾ, ಕಲುಷಿತ ನೀರನ್ನಾಗಲೀ, ಅತಿಸಾರ ಕಾಯಿಲೆಯನ್ನಾಗಲೀ ತಡೆಯುತ್ತಾ?
ಮೆಡಿಕಲ್ ಸೈನ್ಸ್ ಕೂಡ ಉದ್ಧಾರ ಆಗಿರಲಿಲ್ಲ. ಈಗಿನ ಮಕ್ಕಳಿಗೆ ಪೋಲಿಯೋ ಅಂದ್ರೆ ಏನೆಂದೇ ಗೊತ್ತಿಲ್ಲ (2014ರಿಂದಲೇ ನಾವೀಗ ಪೋಲಿಯೋ ಮುಕ್ತ). ಆದ್ರೆ 80ರ ದಶಕದಲ್ಲಿ ಕ್ಲಾಸಿಗೆ ಇಬ್ಬರು ಪೋಲಿಯೋ ಪೀಡಿತರು ಇರ್ತಿದ್ರು. ಸೈನ್ಸ್ ಬುಕ್ಕಲ್ಲಿ ಓದೋದಕ್ಕಿಂತ, ಪ್ರಾಕ್ಟಿಕಲ್ ಆಗಿ ಕಾಯಿಲೆಗಳ ಬಗ್ಗೆ ಡೆಮೋ ಕೊಟ್ಟು ಮೆಡಿಕಲ್ ಸೈನ್ಸ್ ಕಲಿಸಿದ ಕಾಲ ಅದು. ತಾಯಂದಿರ ಸಾವು, ಮಕ್ಕಳ ಸಾವು ಇದೆಲ್ಲಾ ಜೀವನದ ನಶ್ವರತೆಯನ್ನು ಎಳೆ ವಯಸ್ಸಿನಲ್ಲೇ ಮನದಟ್ಟು ಮಾಡ್ತಿತ್ತು.
ಶಿಕ್ಷಣದಲ್ಲಂತೂ ಪ್ರೈವೇಟ್ ಯೂನಿವರ್ಸಿಟಿ, ಆನ್‌ಲೈನ್ ಕೋರ್ಸ್ ಏನೂ ಇರಲಿಲ್ಲ. ಎಲ್ಲಿ ಹುಟ್ಟಿದ್ಯೋ, ನಿನ್ನ ಫ್ಯಾಮಿಲಿ ಬ್ಯಾಕ್ ಗ್ರೌಂಡ್ ಏನೋ, ಅದೇ ನಿನ್ನ ಭವಿಷ್ಯ.
ಇನ್ನು ಬ್ಯೂರೋಕ್ರಸಿ! ಕಾಗದಪತ್ರಗಳ ಕಾಟ ಈ ಆಧಾರ್ ನಿಂದ ಶುರುವಾಗಿದ್ದಲ್ಲ. ಪರ್ಮಿಟ್, ಲೈಸೆನ್ಸ್, ಕೋಟಾ, ಫೈಲುಗಳು… ಎಲ್ಲದಕ್ಕೂ ಟೇಬಲ್ ಕೆಳಗಿಂದ ‘ಅನಧಿಕೃತ’ ಲಂಚ ಕೊಡೋ ಪದ್ಧತಿ. ‘ದಾನ ಮಾಡೋದೇ ಪರಮ ಧರ್ಮ’ ಅನ್ನೋ ತತ್ವನ ನಾವೆಲ್ಲ ಕಲ್ತಿದ್ದೇ ಆ ಕಚೇರಿಗಳಲ್ಲಿ! ಒಂದು ಸಣ್ಣ ಸೈನ್ ಹಾಕಿಸೋಕೆ ಹತ್ತು ದಿನ ಅಲೆದಾಡಿ, ಅಧಿಕಾರಿಗಳಿಗೆ ಹೇಗೆ ಭಕ್ತಿ ಸಮರ್ಪಿಸಬೇಕು ಅಂತ ಹೇಳಿಕೊಟ್ಟಿದ್ದೇ ಆ ಲೈಸೆನ್ಸ್ ರಾಜ್.
ರಾಜಕೀಯದಲ್ಲಂತೂ 70ರ ದಶಕದ ತುರ್ತು ಪರಿಸ್ಥಿತಿಯ ಹ್ಯಾಂಗೋವರ್ 80ರಲ್ಲೂ ಇತ್ತು. ಪತ್ರಿಕಾ ಸ್ವಾತಂತ್ರ್ಯ ಕಿತ್ತುಕೊಂಡು, ಸಿವಿಲ್ ರೈಟ್ಸ್ ಸಸ್ಪೆಂಡ್ ಮಾಡಿ, ವಿರೋಧಿಗಳನ್ನ ಜೈಲಿಗೆ ಹಾಕಿ, ಎಮರ್ಜೆನ್ಸಿ ಟೈಮಲ್ಲಿ ಜನಸಂಖ್ಯೆ ಕಂಟ್ರೋಲ್ ಮಾಡ್ತೀವಿ ಅಂತ ಬಲವಂತವಾಗಿ ನಸಬಂದಿ ಆಪರೇಷನ್ ಮಾಡಿ, “ಸಂತಾನಹರಣವೇ ಸಂತೋಷದ ಮೂಲ” ಅಂತ ತೋರಿಸಿಕೊಟ್ಟ ಕೀರ್ತಿಯೂ ಅದೇ ಹಳೆಯ ಕಾಲಕ್ಕೆ ಸಲ್ಲಬೇಕು. ಪಂಜಾಬ್ ಉಗ್ರವಾದ, ಆಪರೇಷನ್ ಬ್ಲೂ ಸ್ಟಾರ್, 1984ರ ಸಿಖ್ ದಂಗೆ, ಈಶಾನ್ಯ ರಾಜ್ಯಗಳ ಗಲಭೆ, ಶ್ರೀಲಂಕಾ ಯುದ್ಧ, 1984ರ ಭೋಪಾಲ್ ಅನಿಲ ದುರಂತ… ಇದೆಲ್ಲಾ ಬಿಟ್ಟು ಜನ ಬರೀ ಮನೆ ಮುಂದೆ ಕೂತು ರಜದೂತ್ ಬೈಕ್ ಮೇಲೆ ಕಿಶೋರ್ ಕುಮಾರ್ ಹಾಡು ಕೇಳ್ತಾ ಆರಾಮಾಗಿದ್ರು ಅಂತ ನಾಸ್ಟಾಲ್ಜಿಯಾ ಬಿಲ್ಡಪ್ ಕೊಡುತ್ತೆ!
ಬಡತನ ಅಂದ್ರೆ ಐಫೋನ್ ತಗೋಳೋಕೆ ಆಗಲ್ಲ ಅನ್ನೋ ಈಗಿನ ಬಿಲ್ಡಪ್ ಬಡತನ ಅಲ್ಲ, ಅಕ್ಷರಶಃ ಊಟಕ್ಕೂ ಗತಿಯಿಲ್ಲದ, ಕುಡಿಯೋಕೆ ನೀರಿಲ್ಲದ, ಮನೆಗಳಿಲ್ಲದ ಪಕ್ಕಾ ಬಡತನವನ್ನು ಜನರಿಗೆ ಉಚಿತವಾಗಿ ಹಂಚಿತ್ತು ಆ ಕಾಲ!
ಇನ್ನು ಮಹಿಳೆಯರ ಬಗ್ಗೆ ಕೇಳೋದೇ ಬೇಡ. ಈಗಿನ ಹಾಗೆ 2013ರ POSH ಕಾಯ್ದೆ, 1997ರ ವಿಶಾಖ ಗೈಡ್ ಲೈನ್ಸ್, ಇಂಟರ್ನಲ್ ಕಮಿಟಿ ಅನ್ನೋ ತಲೆನೋವೇ ಇರಲಿಲ್ಲ. ಆಫೀಸಲ್ಲಿ ಯಾರಾದ್ರೂ ಹಿರಿಯ ಅಧಿಕಾರಿ ಕಿರುಕುಳ ಕೊಟ್ರೆ, ಬಟ್ಟೆ ಸರಿ ಇಲ್ಲ ಅಂತ ಬ್ಲೇಮ್ ಮಾಡಿ, “ಸ್ವಲ್ಪ ಅಡ್ಜಸ್ಟ್ ಮಾಡ್ಕೊಳಮ್ಮ” ಅಂತ ಸಹನೆ, ಕ್ಷಮೆ ಅನ್ನೋ ಅದ್ಭುತ ಗುಣಗಳನ್ನ ಹೆಣ್ಣುಮಕ್ಕಳಿಗೆ ಬಲವಂತವಾಗಿ ಕಲಿಸ್ತಾ ಇದ್ರು. ಕಂಪ್ಲೇಂಟ್ ಕೊಡೋಕೆ ಜಾಗಾನೇ ಇಲ್ಲದಿದ್ದಾಗ, ಜೀವನದಲ್ಲಿ ಎಂಥದ್ದೇ ಕಷ್ಟ ಬಂದ್ರು ಸಹಿಸ್ಕೊಂಡು ಹೋಗೋ ಮಹಾನ್ ತ್ಯಾಗಮಯಿಗಳನ್ನಾಗಿ ಮಾಡಿದ್ದೇ ಆ ಕಾಲದ ಸಮಾಜ. ಎಂತಾ ಸಂಸ್ಕಾರ ನೋಡಿ!
ಹಾಗಾದ್ರೆ ಆ ಕಾಲದಲ್ಲಿ ಎಲ್ಲವೂ ಕೆಟ್ಟದಾಗಿತ್ತಾ? ಇಲ್ಲ. ನೆರೆಹೊರೆಯವರ ಜೊತೆ ಚೆನ್ನಾಗಿದ್ವಿ, ಡಿಜಿಟಲ್ ಡಿಸ್ಟ್ರಾಕ್ಷನ್ ಇರಲಿಲ್ಲ, ಮಕ್ಕಳು ಆಚೆ ಆಡ್ತಿದ್ರು, ಕ್ರಿಕೆಟ್, ಸಿನಿಮಾ, ಮ್ಯೂಸಿಕ್ ಅದ್ಭುತವಾಗಿತ್ತು. ಕೈಬರಹದ ಪತ್ರಗಳು, ಟ್ಯಾಂಜಿಬಲ್ ಕ್ಯಾಸೆಟ್‌ಗಳು… ಎಲ್ಲದರಲ್ಲೂ ಒಂದು ಚಾರ್ಮ್ ಇತ್ತು. ಆ ಮುಗ್ಧತೆಯನ್ನ ಮಿಸ್ ಮಾಡ್ಕೋಬಹುದು, ತಪ್ಪಿಲ್ಲ. ಆದ್ರೆ ಪದ್ಮಿನಿ ಕಾರು ಇಷ್ಟ ಅಂತ ಆಟೋಮೊಬೈಲ್ ಇಂಡಸ್ಟ್ರಿ ಮುಚ್ಚಿಹೋಗ್ಬೇಕು ಅಂತ ಬಯಸೋಕಾಗುತ್ತಾ? ಹಳೆ ರೋಟರಿ ಫೋನ್ ಇಷ್ಟ ಅಂತ ಕನೆಕ್ಷನ್ ಗೆ ವರ್ಷಗಟ್ಟಲೆ ಕಾಯೋಕಾಗುತ್ತಾ? ದೂರದರ್ಶನ ಇಷ್ಟ ಅಂತ ಇರೋದೇ ಎರಡು ಚಾನೆಲ್ ಸಾಕು ಅನ್ನೋಕಾಗುತ್ತಾ? ನಿಮ್ಮ ಯೌವನದ ಮುಗ್ಧತೆಯನ್ನು ಮಿಸ್ ಮಾಡಿಕೊಳ್ಳುವುದು ಬೇರೆ, ಆ ಕಾಲದ ಸಮಾಜವೇ ಶ್ರೇಷ್ಠ ಅಂತ ಭ್ರಮಿಸುವುದು ಬೇರೆ!
ನಾಸ್ಟಾಲ್ಜಿಯಾ ಅನ್ನೋದು ಒಂದು ಎಡಿಟಿಂಗ್ ಸಾಫ್ಟ್ವೇರ್ ಇದ್ದಂಗೆ. ಅದು ಒಳ್ಳೆ ಮ್ಯೂಸಿಕ್, ಬಟ್ಟೆ, ಫೋಟೋಗಳನ್ನ ಮಾತ್ರ ಇಟ್ಕೊಂಡು ನಿರುದ್ಯೋಗ, ಬಡತನ, ಪೋಲಿಯೋ, ಬಯಲು ಶೌಚಾಲಯ, ಕರೆಂಟ್ ಕಟ್, ಕರಪ್ಶನ್ ಎಲ್ಲವನ್ನೂ ಡಿಲೀಟ್ ಮಾಡಿಬಿಡುತ್ತೆ.
ಹೀಗೆ 80ರ ದಶಕವು ಸೈನ್ಸಿಗೆ ಮಾತ್ರ ಅಲ್ಲ… ಸಮಾಜ ವಿಜ್ಞಾನಕ್ಕೆ, ಮೆಡಿಕಲ್ ಸೈನ್ಸ್ ಗೆ, ಎಕನಾಮಿಕ್ಸ್ ಗೆ, ಈ ರೀತಿ ಎಲ್ಲಾ ಸೈನ್ಸ್ಗಳನ್ನೂ ಉದ್ಧಾರ ಮಾಡಿ ನಮ್ಮನ್ನೆಲ್ಲಾ ಉದ್ಧಾರ ಮಾಡ್ತಿದೆ. ಯಾರಾದ್ರೂ ಬಂದು, “ನಿನ್ನ ಮೊಬೈಲ್, ಯುಪಿಐ, ಸ್ವಿಗ್ಗಿ, ಉಬರ್, ಅಮೆಜಾನ್ ಎಲ್ಲ ಕಿತ್ಕೊಂಡು ನಿನಗೆ 1984ರ ಪಕ್ಕಾ ಲೈಫ್ ಕೊಡ್ತೀನಿ, ಕ್ಯೂನಲ್ಲಿ ನಿಲ್ಲು, ಪವರ್ ಕಟ್ ಅನುಭವಿಸು” ಅಂತ ಒನ್ ವೇ ಟಿಕೆಟ್ ಕೊಟ್ರೆ… ನಾವು ಎರಡು ಕೈ ಮುಗಿದು, ಯುಪಿಐ ಇರೋ ಮೊಬೈಲಲ್ಲಿ ಸ್ವಿಗ್ಗಿ ಆರ್ಡರ್ ಮಾಡ್ತಾ, ಉಬರ್ ಬುಕ್ ಮಾಡ್ತಾ, ಅಮೆರಿಕಾದಲ್ಲಿರೋ ಫ್ರೆಂಡ್ ಗೆ ಮೆಸೇಜ್ ಮಾಡ್ತಾ, ಸ್ಟಾಕ್ ಮಾರ್ಕೆಟ್ ಚೆಕ್ ಮಾಡ್ತಾ “ಬೇಡ ಸ್ವಾಮಿ, ನಾನು ಬರೀ ಫೋಟೋನೇ ನೋಡ್ಕೊಂಡಿರ್ತೀನಿ” ಅಂತೀವಿ.
ಹಳೆಯ ನೆನಪುಗಳು ಅಮರವೇ, ಆದರೆ ಪ್ರಗತಿ ಅದಕ್ಕಿಂತಲೂ ಮಧುರ! ಆ 80ರ ದಶಕದ ಬ್ಲಾಕ್ ಅಂಡ್ ವೈಟ್ ಚಿತ್ರವನ್ನ ಗೋಡೆಗೆ ನೇತು ಹಾಕಿ, ಹಾರ ಹಾಕಿ ಕುಂಕುಮ ಇಟ್ಟು ತಕ್ಕ ಸಂಸ್ಕಾರ ಮಾಡಿ ಪುಣ್ಯ ಕಟ್ಕೋಬೇಕು ಅಷ್ಟೇ.
(ಲೇಖಕ ಪೂರ್ಣಚಂದ್ರ ಕಶ್ಯಪ ಕಳೆದ ದಶಕದಿಂದ ದೃಶ್ಯಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ವಿಭಿನ್ನ ಯೋಚನಾ ಲಹರಿ ಅವರ ಲೇಖನಗಳ ತಿರುಳು. ಲೋಕವೆಲ್ಲ ಕಣ್ಮುಚ್ಚಿ ನಂಬುವುದನ್ನು ಎಕ್ಸ್ ರೇ ಕಣ್ಣಲ್ಲಿ ನೋಡುವುದೇ ಅವರ ವಿಶೇಷತೆ)









