ದೃಶ್ಯಕಾವ್ಯ
Advertisement
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
  • ಪುಸ್ತಕಗಳು
  • Cart
No Result
View All Result
 ದೃಶ್ಯಕಾವ್ಯ
No Result
View All Result
Home ಗಹನ

ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು

ಚರಿತ್ರೆಯಲ್ಲಿ ಹುಲಿ ದುರಂತ ದಾಖಲೆಗಳು

ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು

ಇಡೀ ವಿಶ್ವವೇ ಮರುಗಿದ ದೊಡ್ಡ ವನ್ಯಜೀವಿ ದುರಂತ ರಾಜ್ಯದಲ್ಲಿ ಘಟಿಸಿದೆ. ಚಾಮರಾಜ ನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯ ಜೀವಿ ವಲಯದಲ್ಲಿ ನಾಲ್ಕು ಮರಿ ಹಾಗೂ ಒಂದು ತಾಯಿ ಹುಲಿ ಸೇರಿದಂತೆ ಒಟ್ಟೂ ಐದು ಹುಲಿಗಳು ಸಾವನ್ನಪ್ಪಿವೆ. ಲಭ್ಯ ದಾಖಲೆ ಪ್ರಕಾರ ಇತ್ತೀಚಿನ ವರ್ಷಗಳಲ್ಲಿ ಒಂದೇ ದಿನ ಒಂದೇ ಸ್ಥಳದಲ್ಲಿ ಸಾವನ್ನಪ್ಪಿದ ಅತಿ ಹೆಚ್ಚು ಹುಲಿಗಳ ಸಾವು ಇದಾಗಿದೆ. ವಿಷ ಸೇವಿಸಿ ಈ ಸಾವು ನಡೆದಿದೆಯೆಂದು ಹೇಳಲಾಗಿದೆ, ಸನಿಹದಲ್ಲಿ ಹಸುವೊಂದು ಸಾವನ್ನಪ್ಪಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ, ತನಿಖೆ ನಡೆದಿದೆ.

ಮರಿ ಹಾಕಿದ ಹುಲಿಗಳು ಏಳೆಂಟು ವಾರಗಳ ಕಾಲ ಮರಿಯನ್ನು ಜೊತೆಗೆ ಒಯ್ದು ಬೇಟೆ ಆಹಾರ ಒದಗಿಸುತ್ತವೆ. ಇದಲ್ಲದೇ ಮರಿಗಳಿಗೆ ಬೇಟೆ ಕಲಿಸುವ ಕಾರಣಕ್ಕೆ ಹೆಚ್ಚು ಬೇಟೆಯಾಡುತ್ತವೆ. ಇಂಥ ಸಂದರ್ಭದಲ್ಲಿ ಮರಿಗಳ ರಕ್ಷಣೆಗೆ ಇವುಗಳು ಸಾಮಾನ್ಯವಾಗಿ ಒಂದೇ ಸ್ಥಳದಲ್ಲಿ ಇರುತ್ತವೆ. ಜಾಗ ಬದಲಿಸುವಾಗ ಕಚ್ಚಾ ಮಣ್ಣಿನ ರಸ್ತೆಯಲ್ಲಿ ಕಾಡಿನ ಇನ್ನೊಂದು ಪ್ರದೇಶಕ್ಕೆ ಮರಿಗಳ ಜೊತೆಗೆ ಸಂಚರಿಸುವ ಹೆಜ್ಜೆ ಗುರುತುಗಳು ಕಾಣುತ್ತವೆ. ಕಾಟಿ, ಹಂದಿ, ಜಿಂಕೆಗಳ ಸಾಂದ್ರತೆ ಕಡಿಮೆ ಇದ್ದರೆ ಸುತ್ತಲಿನ ದನಕರು ಹಿಡಿಯುವುದು ಸಹಜವಾಗಿದೆ. ಕಾಡಿಗೆ ಮೇಯಲು ಹೋದ ದನಕರುಗಳ ನಿರಂತರ ಸಾವು ಘಟನೆಗೆ ಕಾರಣವೇ? ಹುಲಿ ಸಾವಿನ ಘಟನೆಯನ್ನು ಈ ಹಿನ್ನಲೆಯಲ್ಲಿ ಕೂಡಾ ತನಿಖೆಗೆ ಒಳಪಡಿಸುವ ಅಗತ್ಯವಿದೆ. ವನ್ಯ ಜೀವಿ ಹಾಗೂ ಕೃಷಿ/ಜನಜೀವನ ಸಂಘರ್ಷದಲ್ಲಿ ಕಾಡಿನ ಮೇಲೆ ಸೇಡು ಹುಟ್ಟದಂತೆ ಇಲಾಖೆ ಎಚ್ಚರ ಬೇಕು. ಜನರ ಜೊತೆಗೆ ನಿರಂತರ ಸಂಪರ್ಕ, ವನ್ಯ ಜೀವಿಗಳ ಹಾನಿಗೆ ಶೀಘ್ರ ಪರಿಹಾರ ಕ್ರಮ ಮುಖ್ಯವಾಗುತ್ತವೆ. ದೂರವಿರುವ ನಮಗೆ ಹುಲಿಯ ಸಾವಿನ ವರದಿ ಕಾಣುತ್ತದೆ, ಕಾಡಂಚಿನ ಗ್ರಾಮಗಳಲ್ಲಿ ನಿತ್ಯ ಏನು ನಡೆಯುತ್ತಿದೆ? ಅರಿತು ನಡೆಯುವುದು ಭವಿಷ್ಯದ ವನ್ಯ ಜೀವಿಗಳ ಸಂರಕ್ಷಣೆಯ ಮುಖ್ಯ ಹೆಜ್ಜೆಯಾಗಿದೆ.

ಹುಲಿಗಳ ಸಾವಿನ ಹಿನ್ನಲೆಯಲ್ಲಿ ಹಳೆಯ ದಾಖಲೆ ನೆನಪಾಗುತ್ತಿದೆ. 1878 ರಲ್ಲಿ ಒಂದು ತಾಯಿ ಹುಲಿ ಹಾಗೂ ಐದು ಪುಟ್ಟ ಮರಿಗಳನ್ನು ಉತ್ತರ ಕನ್ನಡ ಜಿಲ್ಲೆಯ ತಿನೈ ಸನಿಹ ಭೇಟೆಯಾಡಲಾಗಿದೆ. 1882ರ ಏಪ್ರಿಲ್ ತಿಂಗಳಲ್ಲಿ ಸೂಪಾ ಸನಿಹದ ಪೊಟೊಲಿಯಲ್ಲಿ ತಾಯಿ ಹುಲಿ ಹಾಗೂ ಏಳು ತಿಂಗಳ ಪ್ರಾಯದ ಐದು ಮರಿಗಳು ಸೇರಿದಂತೆ ಆರು ಹುಲಿಗಳ ಭೇಟೆಯಾಡಲಾಗಿತ್ತು.

1875 ಏಪ್ರಿಲ್ 3ರಂದು ಸೂಪಾ ಸನಿಹದ ಕುಂಡಪೆ ಎಂಬಲ್ಲಿ ಎರಡು ಹುಲಿಗಳ ನಡುವೆ ಕದನ ನಡೆದು ಒಂದು ಹುಲಿ ಸಾವನ್ನಪ್ಪಿದೆ. ಘಟನೆ ವನ್ಯ ಜೀವಿ ಚರಿತ್ರೆಯಲ್ಲಿ ವಿಶೇಷವಾಗಿದೆ. ಒಂದು ಗಂಡು ಹುಲಿ ಕಾಡಲ್ಲಿ ಒಂದು ಎತ್ತನ್ನು ಬೇಟೆಯಾಡಿ ರಾತ್ರಿ ಸ್ಪಲ್ಪ ತಿಂದು ಮುಗಿಸಿತ್ತು. ಮರುದಿನ ಏಪ್ರಿಲ್ 3 ರಂದು ರಾತ್ರಿ ಹೆಣ್ಣು ಹುಲಿಯೊಂದು ಅದೇ ಮಾರ್ಗದಲ್ಲಿ ಪುಟ್ಟ ಮರಿಗಳ ಜೊತೆಗೆ ಆಕಸ್ಮಿಕವಾಗಿ ಬಂದಿತು. ಸಾವನ್ನಪ್ಪಿದ ಎತ್ತಿನ ಇನ್ನುಳಿದ ಮಾಂಸವನ್ನು ತನ್ನ ಮರಿಗಳ ಜೊತೆಗೆ ತಿನ್ನಲು ಆರಂಭಿಸಿತು. ಅಷ್ಟರಲ್ಲಿ ಹಿಂದಿನ ದಿನ ಎತ್ತನ್ನು ಬೇಟೆಯಾಡಿದ ಗಂಡು ಹುಲಿ ಅಲ್ಲಿಗೆ ಬಂದು ಕದನಕ್ಕೆ ನಿಂತಿತು. ಅರ್ಧ ಗಂಟೆ ಕಾಲ ಜೋರಾಗಿ ಕಚ್ಚಾಟ ಗಲಾಟೆಯನ್ನು ಸನಿಹದ ಹಳ್ಳಿಗರು ಆಲಿಸಿದರು. ಮರುದಿನ ಬೇಟೆಗಾರನೊಬ್ಬ ಈ ಜಾಗಕ್ಕೆ ಹೋದಾಗ ಹುಲಿ ಹುಲಿಯ ನಡುವೆ ಕದನ ನಡೆದು ಒಂದು ಹುಲಿ ಸತ್ತಿದ್ದು ದಾಖಲಾಯಿತು.

ಬ್ರಿಟಿಷ್ ಕಾಲದಲ್ಲಿ ಹುಲಿ ಬೇಟೆಗೆ ಪ್ರೋತ್ಸಾಹ ನೀಡಲಾಗುತ್ತಿತ್ತು. ಒಂದು ಹುಲಿ ಹೊಡೆದರೆ ಒಂದೆರಡು ರೂಪಾಯಿ ಬಹುಮಾನ ಸಿಗುತ್ತಿತ್ತು.1857-7 7ರ 20 ವರ್ಷಗಳಲ್ಲಿ 510ಹುಲಿಗಳ ಬೇಟೆ ನಮ್ಮ ಕೆನರಾ ಜಿಲ್ಲೆಯಲ್ಲಿ ನಡೆದಿತ್ತು. ಈಗ 2022ರ ಹುಲಿ ಗಣತಿ ಪ್ರಕಾರ ನಮ್ಮ ರಾಜ್ಯದಲ್ಲಿ ಇರೋದು 563 ಹುಲಿಗಳು ಮಾತ್ರ! ಗಮನಿಸಬೇಕಾದ ಸಂಗತಿಯೆಂದರೆ 2006ರಲ್ಲಿ 290 ಹುಲಿಗಳು ಮಾತ್ರವಿದ್ದ ನಮ್ಮ ರಾಜ್ಯದಲ್ಲಿ ಸಂರಕ್ಷಣಾ ಪ್ರಯತ್ನದಿಂದ ಏರಿಕೆ ಕಂಡಿದೆ. ಈಗ ಒಮ್ಮೆಗೇ ಐದು ಹುಲಿಗಳ ಸಾವು ಅರಣ್ಯ ಇಲಾಖೆಯ ಹುಲಿ ಸಂರಕ್ಷಣಾ ಕಾರ್ಯಗಳನ್ನು ಈಗ ಜಗತ್ತು ಮರು ಪರಿಶೀಲಿಸುವ ಸಂದರ್ಭ ತಂದಿದೆ.

ಸಂರಕ್ಷಣಾ ಅನುಕೂಲಕ್ಕೆ ನಿಗದಿತ ಅರಣ್ಯ ಪ್ರದೇಶವನ್ನು ವನ್ಯಜೀವಿ ಸಂರಕ್ಷಣಾ ವಲಯಕ್ಕೆ ಒಳಪಡಿಸಲಾಗಿದೆ. ಇವುಗಳಲ್ಲಿ ತೇಗದ ನೆಡುತೋಪು ಕೂಡಾ ಸೇರಿವೆ, ಇಲ್ಲಿ ಹುಲಿಗಳಿಗೆ ಆಹಾರವಾದ ಜಿಂಕೆ, ಕಾಟಿಗಳ ಆಹಾರ ಆವಾಸಕ್ಕೇ ಅಗತ್ಯ ಹುಲ್ಲು ಕೂಡ ಇರೋದಿಲ್ಲ. ಹೀಗಾಗಿ ಹಲವು ಕಡೆ ದನಕರು ತಿಂದೇ ಹುಲಿ ತನ್ನ ಆಹಾರ ಹುಡುಕುವ ಪರಿಸ್ಥಿತಿ ಇದೆ.

ಹುಲಿ ಸಾವುಗಳ ಘಟನೆ ಹೇಳಿದ ಮೇಲೆ ಕೊನೆಗೊಂದು ಕರುಣ ಕಥೆ ಹೇಳಬೇಕು. ಕಾರವಾರ ಜಿಲ್ಲೆಯ ದೇವಕಾರು ಎಂಬ ಊರು ಕೈಗಾ ಸ್ಥಾವರದ ಸನಿಹದಲ್ಲಿದೆ. ಅಲ್ಲಿನ ಜನಕ್ಕೆ ಪರಿಹಾರ ನೀಡಿ ಅವರೆಲ್ಲ ಆರೇಳು ವರ್ಷಗಳ ಹಿಂದೆ ಬೇರೆಡೆ ಹೋಗಿದ್ದಾರೆ. ಕದ್ರಾ ಅಣೆಕಟ್ಟಿನ ಹಿನ್ನೀರು ಪ್ರದೇಶದ ಈ ಹಳ್ಳಿಗೆ ಹೋಗಲು ದೋಣಿಯಲ್ಲಿ ಸಾಗಬೇಕು. ಕೃಷಿಕರು ಊರು ಬಿಟ್ಟು ಹೋಗುವಾಗ 200-250 ದನಕರುವನ್ನು ದ್ವೀಪವಾದ ದೇವಕಾರಿನಲ್ಲಿ ಬಿಟ್ಟು ಊರು ತ್ಯಜಿಸಿದರು. ಅಲ್ಲಿನ ಎಲ್ಲಾ ದನಕರುವನ್ನು ಹುಲಿಗಳು ತಿಂದು ಮುಗಿಸಿವೆ. ವಿಶೇಷವೆಂದರೆ ಈ ಪ್ರದೇಶದಲ್ಲಿ ಜಿಂಕೆಗಳಿವೆ, ಅವು ಕೃಷಿಕರ ಭತ್ತದ ಗದ್ದೆಗಳಲ್ಲಿ ಹುಲ್ಲು ತಿಂದು ಬದುಕಿದ್ದವು. ಈಗ ಬಯಲಾದ ಗದ್ದೆ ಬಯಲು ಇಲಾಖೆಯ ಅಕೇಶಿಯಾ ನೆಡುತೋಪು ಆಗಿದೆ. ದೋಣಿಯಲ್ಲಿ ಗಿಡ ಒಯ್ದು ವನ್ಯ ಜೀವಿಗಳ ವಲಯದಲ್ಲಿ ಅಕೇಶಿಯಾ ನಾಟಿ ಮಾಡಲಾಗಿದೆ. ಅಲ್ಲೀಗ ಅಂದಾಜು ಐದು ಹುಲಿಗಳಿರುವ ಮಾಹಿತಿ ಇದೆ. ನಮ್ಮ ಇಲಾಖೆ ವನ್ಯ ಜೀವಿ ವಲಯವೆಂದು ಘೋಷಣೆ ಮಾಡಿದರೆ ಸಾಲದು, ಅಲ್ಲಿ ಹುಲಿಗಳ ಆಹಾರವಾದ ಜಿಂಕೆಗಳಿಗೆ ಹುಲ್ಲಿದೆಯೇ? ಗಮನಿಸಬೇಕು. ಅಕೇಶಿಯ ನೆಟ್ಟು ಯಾರೂ ಇಲ್ಲದ ದ್ವೀಪದಲ್ಲಿ ತಂತಿ ಬೇಲಿ ಹಾಕಿದ ಇಲಾಖೆ ಕಾರ್ಯ ವೈಖರಿ ಕೂಡಾ ವಿಮರ್ಶೆಗೆ ಒಳಪಡಬೇಕು ಅಲ್ಲವೇ? ಅರಣ್ಯ ಸಚಿವರು ಇಂಥ ಸೂಕ್ಷ್ಮತೆ ಅರಿತು ಆಡಳಿತ ನಿರ್ಧಾರ ಮಾಡಬೇಕು.
ನೆನಪಿಡಿ ಹುಲಿ ಸಾವಿನ ಕಾರಣಗಳ ಪೊಸ್ಟ್ ಮಾರ್ಟಮ್ , ತನಿಖೆ ಸಾಗಲಿ. ಈ ಕುರಿತ ಚರ್ಚೆ ನಡೆಯಲಿ. ಆದರೆ ನಿಜವಾದ ಸಮಸ್ಯೆ ಅರಿತು ಮುಂದೆ ಸಾಯಲಿರುವ ಹುಲಿಗಳನ್ನು ಉಳಿಸಲು ಕಟ್ಟುನಿಟ್ಟಿನ ಎಚ್ಚರ ಎಲ್ಲದಕ್ಕಿಂತ ಮುಖ್ಯ.

  • ಶಿವಾನಂದ ಕಳವೆ (ಪರಿಸರ ಬರಹಗಾರರು)
Share12Tweet8SendShareShare
Next Post
ಕಚ್ಚುವ ನಾಯಿಗೆ ಬಿರಿಯಾನಿ, ಹಾಲು ಕೊಡುವ ದನಗಳಿಗೆ ಹುಲ್ಲಿಲ್ಲ!

ಕಚ್ಚುವ ನಾಯಿಗೆ ಬಿರಿಯಾನಿ, ಹಾಲು ಕೊಡುವ ದನಗಳಿಗೆ ಹುಲ್ಲಿಲ್ಲ!

Leave a Reply Cancel reply

Your email address will not be published. Required fields are marked *

Recommended

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು ಬೇರೆ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್_ ಪ್ರಮಾಣ ಮಾಡಿದ ಅಜ್ಜಯ್ಯ ಯಾರು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರಮಾಣ ಮಾಡಿದ ಅಜ್ಜಯ್ಯ ಯಾರು?

Radha Krishna Adiga Kannada Biography Book front

Radha Krishna Adiga – Idli Coffee Parampara-Payana

Radha Krishna Adiga Kannada Biography Book front

ರಾಧಾಕೃಷ್ಣ ಅಡಿಗ – ಇಡ್ಲಿ ಕಾಫಿ ಪರಂಪರೆ-ಪಯಣ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್_ ಪ್ರಮಾಣ ಮಾಡಿದ ಅಜ್ಜಯ್ಯ ಯಾರು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರಮಾಣ ಮಾಡಿದ ಅಜ್ಜಯ್ಯ ಯಾರು?

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು ಬೇರೆ

ಕನಸುಗಳಿಗೆ ನಿದ್ದೆಯಿಲ್ಲ

Radha Krishna Adiga Kannada Biography Book front

ರಾಧಾಕೃಷ್ಣ ಅಡಿಗ – ಇಡ್ಲಿ ಕಾಫಿ ಪರಂಪರೆ-ಪಯಣ

Radha Krishna Adiga Idli Coffee Parampara-Payana
Radha Krishna Adiga Idli Coffee Parampara-Payana
Translate »

Added to cart

Your Cart Is Empty
0

Check out our shop to see what's available

Cart Total: Total₹0.00
Your cart is empty. Shop now →
No Result
View All Result
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
  • ಪುಸ್ತಕಗಳು
  • Cart

© 2026 JNews - Premium WordPress news & magazine theme by Jegtheme.