ಶ್ರೀ ವೀರಗಂಗಾಧರಯ್ಯ ಅಜ್ಜನವರ ಕುರಿತ ಸಂಪೂರ್ಣ ಮಾಹಿತಿ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಮಾಣ ಮಾಡಿದ ಅಜ್ಜಯ್ಯ ಯಾರು? ಈ ಪ್ರಶ್ನೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶ್ರೀ ವೀರಗಂಗಾಧರಯ್ಯ ಅಜ್ಜ ಅವರ ಹೆಸರಿನಲ್ಲಿ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸಾವಿರಾರು ಜನರ ಮನದಲ್ಲಿ ಮೂಡಿದೆ. ಬಹಳಷ್ಟು ಜನರು ವೀರಗಂಗಾಧರಯ್ಯ ಎಂದರೆ ಡಿಕೆಶಿ ಅವರ ತಾತ ಎಂದು ಭಾವಿಸಿದ್ದರು. ಆದರೆ ವಾಸ್ತವದಲ್ಲಿ ಅದರ ಹಿನ್ನೆಲೆ ಬೇರೆಯೇ ಆಗಿದ್ದು, ಆದಿಚುಂಚನಗಿರಿ ಮಠ, ನೊಣವಿನಕೆರೆ ಮಠ, ಆಧ್ಯಾತ್ಮಿಕ ನಂಬಿಕೆ ಮತ್ತು ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಪಯಣದೊಂದಿಗೆ ಸಂಬಂಧ ಹೊಂದಿದೆ.
ಡಿ.ಕೆ.ಶಿವಕುಮಾರ್ ಅವರು ಶ್ರೀ ವೀರಗಂಗಾಧರಯ್ಯ ಅಜ್ಜಅವರ ಹೆಸರಿನಲ್ಲಿ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಬಹಳಷ್ಟು ಜನರಲ್ಲಿ ಮೂಡಿದ ಒಂದೇ ಪ್ರಶ್ನೆ ಯಾರು ಈ ಅಜ್ಜಯ್ಯ ಅವರು?
ಬಹಳಷ್ಟು ಜನ ತಿಳಿದುಕೊಂಡಿದ್ದು ವೀರಗಂಗಾಧರಯ್ಯ ಎಂದರೆ ಡಿಕೆಶಿ ಅವರ ತಾತ ಅಂತ! ಆದರೆ ಅವರ ತಾತ ವೀರಗಂಗಾಧರಯ್ಯ ಅಲ್ಲ.
ನಂತರ ಅರ್ಥೈಸಿಕೊಂಡಿದ್ದು ಡಿಕೆಶಿ ಭಯಭಕ್ತಿಯಿಂದ ನಡೆದುಕೊಳ್ಳುವ, ಚಾಚೂತಪ್ಪದೇ ಮಾತು ಕೇಳುವ, ಡಿಕೆಶಿಯನ್ನು ಕುಂಭಮೇಳಕ್ಕೆ ಕರೆದುಕೊಂಡು ಹೋಗಿ ಕೂದಲು ಹಿಡಿದು ಗಂಗೆಯಲ್ಲಿ ಮುಳುಗೇಳಿಸಿದ, ಸದ್ಗುರು ಸಮಾವೇಶಕ್ಕೆ ಕರೆದುಕೊಂಡು ಹೋದ ಶ್ರೀ ಕರಿಬಸವ ದೇಶಿಕೇಂದ್ರ ಸ್ವಾಮೀಜಿ ಅವರಿರುವ ನೊಣವಿನ ಕೆರೆ ಮಠದ ಸಂಸ್ಥಾಪಕರು ಅಂತ. ಆದರೆ ಅವರ ಹೆಸರು ವೀರಗಂಗಾಧರಯ್ಯ ಅಲ್ಲ! ಅವರು ಶ್ರೀ ಕಾಡಸಿದ್ಧೇಶ್ವರ ಸ್ವಾಮೀಜಿ. ಐನೂರು ವರ್ಷಗಳ ಹಿಂದೆ ಲಕ್ಷ್ಮೇಶ್ವರದ ಕಡೆಯಿಂದ ಬಂದು ನೊಣವಿನಕೆರೆ ಮಠವನ್ನು ಸ್ಥಾಪಿಸಿದರು.
ನೊಣವಿನಕೆರೆ ಮಠ ಮತ್ತು ಶ್ರೀ ಕರಿಬಸವ ದೇಶಿಕೇಂದ್ರ ಸ್ವಾಮೀಜಿಯವರ ಪಾತ್ರ, ಡಿ.ಕೆ. ಶಿವಕುಮಾರ್ ಅವರ ಆಧ್ಯಾತ್ಮಿಕ ನಂಬಿಕೆ ಮತ್ತು ರಾಜಕೀಯ ಪಯಣ.
ನಂಬಿದರೆ ನಂಬಿ ಬಿಟ್ಟರೆ ಬಿಡಿ, ವೀರಗಂಗಾಧರಯ್ಯ ಎನ್ನುವುದು ಆದಿಚುಂಚನಗಿರಿ ಹಿಂದಿನ ಮಠಾಧೀಶರಾಗಿದ್ದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಪೂರ್ವಾಶ್ರಮದ ಹೆಸರು. ಅಂದರೆ ಸ್ವಾಮೀಜಿಗಳಾಗುವುದಕ್ಕಿಂತ ಮೊದಲಿನ ಹೆಸರು. ಅವರು ಡಿ.ಕೆ.ಶಿವಕುಮಾರ್ ಅವರಿಗೆ ಆರಂಭದಿಂದಲೂ ಮಾರ್ಗದರ್ಶನ ಮಾಡುತ್ತ ಬಂದಿದ್ದಂತೂ ನಿಜ. ಡಿಕೆಶಿ ಅವರ ಪ್ರತಿ ಹಂತದ ಬೆಳವಣಿಗೆಯಲ್ಲೂ ಅವರ ಆಶೀರ್ವಾದ ಫಲವಿದೆ. ಆದರೆ ಅವರ ಹೆಸರಲ್ಲಿ ನೇರವಾಗಿ ಪ್ರಮಾಣವಚನ ಸ್ವೀಕರಿಸದೇ ಅವರ ಪೂರ್ವಾಶ್ರಮದ ಹೆಸರಿನಲ್ಲಿ ಯಾಕೆ ಪ್ರಮಾಣವಚನ ಸ್ವೀಕರಿಸಿದರು ಎನ್ನುವುದು ಈಗ ಯಕ್ಷಪ್ರಶ್ನೆಯಾಗಿದೆ. ಇನ್ನೊಂದು ಮೂಲದ ಪ್ರಕಾರ ಶ್ರೀ ವೀರಗಂಗಾಧರಯ್ಯ ಅಜ್ಜನವರು ದಶಕಗಳ ಹಿಂದೆ ರಂಭಾಪುರಿ ಮಠಾಧಿಪತಿಗಳಾಗಿದ್ದ ಶ್ರೀಗಳು, ಮಹಾತಪಸ್ವಿಗಳು ಎನ್ನಲಾಗಿದೆ.

ಅದೇನೇ ಇದ್ದರೂ, ಈಗ ಡಿ.ಕೆ.ಶಿವಕುಮಾರ್ ಅವರು ಸಂಪೂರ್ಣ ನಂಬಿರುವುದು ನೊಣವಿನಕೆರೆ ಮಠದ ಶ್ರೀ ಕರಿಬಸವ ದೇಶಿಕೇಂದ್ರ ಸ್ವಾಮೀಜಿ ಅವರನ್ನ. ಅವರಿಲ್ಲದೇ ಇವರ ಮನೆಯಲ್ಲಿ ಹುಲ್ಲುಕಡ್ಡಿ ಕೂಡ ಚಲಿಸುವುದಿಲ್ಲ.. ತೇನವಿನಾ ತೃಣಮಪಿ ನ ಚಲತಿ! ಸ್ವಾಮೀಜಿಯವರೂ ಅಷ್ಟೆ, ಡಿಕೆ ಶಿವಕುಮಾರ್ ಅವರ ಜೊತೆ ಆಪ್ತತೆ ಹಾಗೂ ಅಂತರ ಎರಡನ್ನೂ ಕಾಯ್ದುಕೊಂಡಂಥವರು. ಅವರು ಜಾತಕ ಓದುವುದರಲ್ಲಿ ಸಿದ್ಧಹಸ್ತರು ಎಂದೇ ಖ್ಯಾತಿ ಪಡೆದಿದ್ದಾರೆ. ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಯೋಗ ಇದೆ.. ಆದರೆ ಅಪಾರ ತಾಳ್ಮೆಯಿಂದ ಕಾಯಬೇಕಾಗುತ್ತದೆ ಎಂದು ʻದೃಶ್ಯಕಾವ್ಯʼಕ್ಕೆ ವರ್ಷಗಳ ಹಿಂದೆಯೇ ಹೇಳಿದ್ದರು. ದಾಖಲಾಗದ ಅಂಶ ಎಂದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಸಹಜವಾಗಿಯೇ ಬಿಜೆಪಿ ಬೆಂಬಲಿಸುವ ಮನಸ್ಥಿತಿಯಲ್ಲೇ ಇದ್ದರಂತೆ. ಅದರಂತೆ, ಬಿಜೆಪಿಯಿಂದ ಎರಡನೇ ಸಲ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದ ಬಸವರಾಜ ಬೊಮ್ಮಾಯಿ ಅವರನ್ನು ಮಠಕ್ಕೆ ಬರಹೇಳಿದ್ದರಂತೆ. ಆದರೆ ಅವರು ಶ್ರೀಗಳ ಕರೆಯನ್ನು ನಿರ್ಲಕ್ಷ್ಯಿಸಿದರು ಎನ್ನಲಾಗಿದೆ. ಅಲ್ಲದೇ, ಒಂದು ಹಿಡಿ ವಿಭೂತಿ ಮಂತ್ರಿಸಿಕೊಟ್ಟರೆ ನಮ್ಮ ಅದೃಷ್ಟ ಬದಲಾಗುತ್ತೇನು? ಎಂದು ಆಪ್ತರಲ್ಲಿ ವ್ಯಂಗ್ಯವಾಡಿದ್ದರಂತೆ. ಈ ವಿಷಯ ತಿಳಿದು ಬೇಸರಗೊಂಡ ಶ್ರೀಗಳು ಡಿ.ಕೆ.ಶಿವಕುಮಾರ್ ಅವರನ್ನು ಆಹ್ವಾನಿಸಿದರು. ಡಿ.ಕೆ.ಶಿ ಕೊಂಚವೂ ತಡಮಾಡಲಿಲ್ಲ. ಮಧ್ಯರಾತ್ರಿಯೇ ಓಡಿ ಬಂದರು. ಸ್ವಾಮಿಗಳ ಪಾದಕ್ಕೆ ಅಡ್ಡಬಿದ್ದರು. ಅವರ ಮಾರ್ಗದರ್ಶನದಲ್ಲಿ ಮುನ್ನಡೆಯಲು ಸಿದ್ಧರಾದರು. ಚಾಚೂ ತಪ್ಪದೇ ಅವರ ನಿರ್ದೇಶನ ಪರಿಪಾಲಿಸಿದರು. ಎಂದು ಗುರುವನ್ನು ನಂಬಿದರೋ ಅಂದಿನಿಂದ ಡಿಕೆಶಿ ಜೈತ್ರಯಾತ್ರೆ ಶುರುವಾಯಿತು. ಕಾಂಗ್ರೆಸ್ ಜಯಭೇರಿ ಬಾರಿಸಿತು, ಬೊಮ್ಮಾಯಿ ಮುಖ್ಯಮಂತ್ರಿ ಕನಸು ನುಚ್ಚುನೂರಾಯಿತು.
ಇಷ್ಟೆಲ್ಲಾ ದೈವಬಲವಿದ್ದರೂ ಡಿಕೆಶಿ ಆರಂಭದಲ್ಲೇ ಮುಖ್ಯಮಂತ್ರಿ ಆಗಲಿಲ್ಲ ಯಾಕೆ? ಎಂಬ ಪ್ರಶ್ನೆ ಈಗಲೂ ಹಲವರನ್ನು ಕಾಡುತ್ತಿದೆ. ಆದರೆ ಅವರಿಗೆ ಅಷ್ಟು ಸುಲಭದಲ್ಲಿ ಮುಖ್ಯಮಂತ್ರಿ ಪಟ್ಟ ಒಲಿಯುವುದಿಲ್ಲ ಎಂಬ ಭವಿಷ್ಯವನ್ನೂ ಶ್ರೀಗಳು ನುಡಿದಿದ್ದರು. ಅವರ ಗ್ರಹಗತಿಗಳು ಸಹಕಾರಿಯಾಗಿಲ್ಲ. ತುಂಬ ತಾಳ್ಮೆ ಮತ್ತು ಪರಿಶ್ರಮ ಎರಡೂ ಬೇಕು. ತಾಳಿದವನು ಬಾಳಿಯಾನು ಎಂದು ಹೇಳಿದ್ದರು. ಅದರಂತೆಯೇ ನಡೆದುಕೊಂಡರು ಡಿಕೆಶಿ. ಈಗ ಬಾಳುತ್ತಿದ್ದಾರೆ, ಬೆಲೆಬಾಳುತ್ತಿದ್ದಾರೆ!
ಡಿ.ಕೆ.ಶಿವಕುಮಾರ್ ಮೃದು ಹಿಂದುತ್ವ ಧೋರಣೆಯ ರಾಜಕಾರಣಿಯಾಗಿರಬಹುದು. ಆದರೆ ಕಾಂಗ್ರೆಸ್ ಯಾವತ್ತೂ ಮೃದು ಹಿಂದುತ್ವ ಧೋರಣೆ ಹೊಂದಿರಲಿಲ್ಲ. ಅಧಿಕಾರ ಕೈಗೆ ಬಂದಮೇಲೆ ಡಿಕೆಶಿ ವರಸೆ ಬದಲಾದರೆ, ಅಲ್ಪಸಂಖ್ಯಾತರ ಓಲೈಕೆಗೆ ತೊಡಗಿದರೆ, ಸನಾತನ ಧರ್ಮದ ವಿರುದ್ಧ ಮಾತನಾಡಿದರೆ ನೀವು ಬೆಂಬಲ ಮುಂದುವರಿಸುತ್ತೀರಾ? ಮಠಮಾನ್ಯಗಳು ಇರುವುದೇ ಧರ್ಮ ಉಳಿಸುವುದಕ್ಕೆ ಅಲ್ಲವೆ? ಎಂಬ ಪ್ರಶ್ನೆಯನ್ನು ದೃಶ್ಯಕಾವ್ಯ ಮುಂದಿಟ್ಟಾಗ ಸ್ವಾಮೀಜಿ ನೀಡಿದ ಸಂದೇಶ – ಹೆತ್ತ ತಾಯಿಯಂತಿರುವ ಹುಟ್ಟಿದ ಧರ್ಮಕ್ಕೆ ಎರಡು ಬಗೆಯುವಂಥವರಿಗೆ ಅಂದೇ ದೈವಬೆಂಬಲ ನಿಲ್ಲುತ್ತದೆ. ನಾವು ಬುದ್ಧಿವಾದ ಹೇಳಿ ಸರಿದಾರಿಗೆ ತರಲು ಪ್ರಯತ್ನಿಸುತ್ತೇವೆ. ಆಗದಿದ್ದಲ್ಲಿ ದೇವರು ನೋಡಿಕೊಳ್ಳುತ್ತಾನೆ !
ಮುಖ್ಯಮಂತ್ರಿ ಸ್ಥಾನಕ್ಕೆ ಡಿಕೆಶಿ ಏರಿದ ಹಾದಿ
ಇನ್ನು, ಡಿ.ಕೆ.ಶಿವಕುಮಾರ್ ಕೂಡ ಯೌವನದಲ್ಲಿ ಮಚ್ಚುಲಾಂಗುಗಳ ಹಿನ್ನೆಲೆ ಉಳ್ಳವರು. ಅವರೇ ಹೇಳಿದಂತೆ, ಸ್ವತಃ ಮಚ್ಚು ಹಿಡಿಯದಿದ್ದರೂ ಬೇರೆಯವರ ಕೈಲಿ ಹಿಡಿಸಿದ್ದುಂಟು, ಮಾಡಿಸಿದ್ದುಂಟು. ಅದನ್ನು ಮರೆತುಬಿಟ್ಟರೇ? ಎಂಬ ಪ್ರಶ್ನೆಗೆ ವಾಲ್ಮೀಕಿ ಬೇಡನಾಗಿದ್ದಾಗ ಏನು ಮಾಡಿದ್ದ? ಕೊಲೆ ದರೋಡೆಗಳೇ. ಆದರೆ ಅವನು ಬದಲಾಗಲಿಲ್ಲವೇ? ಬದಲಾಗಲು ಅವಕಾಶ ಕೊಡಬೇಕು. ಅವರು ಮಾಡಿದ ಪಾಪಕರ್ಮಗಳಿಗೆ ಅವರಿಗೆ ಶಿಕ್ಷೆ ತಪ್ಪಿದ್ದಲ್ಲ. ವಾಲ್ಮೀಕಿ ರಾಮಾಯಣ ಬರೆದ ಮೇಲೂ ಪೂರ್ವಾಶ್ರಮದಲ್ಲಿ ಮಾಡಿದ ಕರ್ಮಗಳಿಗೆ ವಿಧಿ ಶಿಕ್ಷಿಸಿರಬಹುದು. ಆದರೆ ಬದಲಾದ ಮೇಲೆ ಅವರು ಮಾಡಿದ ಕಾರ್ಯ ಅವರನ್ನು ಅಜರಾಮರರನ್ನಾಗಿಸಿತು, ಆದಿ ಕವಿಯನ್ನಾಗಿಸಿತು, ಪೂಜನೀಯರನ್ನಾಗಿಸಿತು!
ಏನೇ ಇರಲಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರದು ಡಾಂಭಿಕ ಭಕ್ತಿ ಅಲ್ಲ ಎನ್ನುವುದನ್ನು ಬಹಳಷ್ಟು ಜನ ಒಪ್ಪಿಕೊಳ್ಳುತ್ತಾರೆ. ಇಂಪ್ರೆಸ್ ಮಾಡಲು ಟೋಪಿ ಧರಿಸಿ ಇಫ್ತಾರ್ ಕೂಟದಲ್ಲಿ ಪಾಲ್ಗೊಳ್ಳುವ ನಟನಾಯಕರಲ್ಲ. ಮನಸ್ಸಿಗೆ ಒಪ್ಪಿರುವುದನ್ನು ಬಹಿರಂಗವಾಗಿ, ಯಾವುದೇ ಹಿಂಜರಿಕೆ ಇಲ್ಲದೇ, ಯಾವುದೇ ಓಟ್ ಬ್ಯಾಂಕ್‌ನ ಭಯವಿಲ್ಲದೇ ಆಚರಿಸುವಂಥವರು. ಹಾಗಾಗಿ ಕಾಂಗ್ರೆಸ್‌ನ ಮೃದುಹಿಂದುತ್ವದ ಮುಖ ಎಂದೇ ವಿಶ್ಲೇಷಿಸಲಾಗಿರುವ ಡಿ.ಕೆ.ಶಿವಕುಮಾರ್ ಅವರನ್ನು ಬಹಳಷ್ಟು ಬಲಪಂಥೀಯ ಮನಸ್ಸುಗಳು ಕೂಡ ನಾಯಕ ಎಂದು ಒಪ್ಪಿಕೊಂಡಂತೆ ಕಾಣುತ್ತದೆ. ಈ ಭಾವ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಇರಲಿಲ್ಲ ಕುಂಕುಮ ಬೊಟ್ಟು ನಿರಾಕರಣೆ, ಇಫ್ತಾರ್ ಕೂಟಗಳಲ್ಲಿ ಟೋಪಿ ಧರಿಸಿ ಪಾಲ್ಗೊಳ್ಳುತ್ತಿದ್ದುದು, ಅತಿಯಾದ ಅಲ್ಪಸಂಖ್ಯಾತ ಓಲೈಕೆ, ಅತಿಹಾದ ಹಿಂದುತ್ವ ನಿಂದನೆ ಮುಂತಾದ ನಿಲುವುಗಳಿಂದ ಅನೇಕರ ಕಣ್ಣಲ್ಲಿ ವಿಲನ್ ಆಗಿದ್ದರು. ಧಾರ್ಮಿಕ ವಿಷಯದಲ್ಲಿ ಡಿಕೆಶಿ ವರ್ತನೆ ಇದಕ್ಕೆ ತದ್ವಿರುದ್ಧವಾಗಿ, ನೇರ-ದಿಟ್ಟವಾಗಿ ಕಾಣುತ್ತದೆ. ಕಾಂಗ್ರೆಸ್‌ನಲ್ಲಿ ಅಜ್ಜಿ ಇಂದಿರಾಗಾಂಧಿ ಅವರಂತೆಯೇ ಬುದ್ಧಿವಂತೆ ಮತ್ತು ಪ್ರಜ್ಞಾವಂತೆ ಎನ್ನಿಸಿಕೊಂಡಿರುವ ಪ್ರಿಯಾಂಕಾ ಗಾಂಧಿ ಈ ಅಂಶವನ್ನು ಮನಗಂಡು ಪ್ರಸ್ತುತ ಮುಖ್ಯಮಂತ್ರಿ ಬದಲಾವಣೆಗೆ ಒಲವು ತೋರಿದ್ದಲ್ಲದೇ ಡಿಕೆಶಿ ಅವರನ್ನೇ ಹೆಚ್ಚು ಬೆಂಬಲಿಸಿದ್ದು ಎಂದು ಹೇಳಲಾಗುತ್ತಿದೆ. ರಾಜಕೀಯ ಪಂಡಿತರ ವಿಶ್ಲೇಷಣೆಯಂತೆ, ಡಿಕೆಶಿ ಮುಖ್ಯಮಂತ್ರಿ ಮಾಡಿದ್ದು ಇನ್ನೆರಡು ವರ್ಷದ ಸಲುವಾಗಿ ಅಲ್ಲ, 2028 ರ ಚುನಾವಣೆಯಲ್ಲಿ ಕರ್ನಾಟಕ ಅಧಿಕಾರದ ಚುಕ್ಕಾಣಿ ಹಿಡಿಯುವ ಮುಂದಾಲೋಚನೆಯಿಂದ!
ಇಲ್ಲಿಯವರೆಗೆ ಡಿ.ಕೆ.ಶಿವಕುಮಾರ್ ಅವರ ನಡೆನುಡಿ ಗಮನಿಸಿದವರಿಗೆ ಅವರು ನೇರ ಮನುಷ್ಯ, ಒಳಗೊಂದು ಹೊರಗೊಂದು ಕಪಟವಿಲ್ಲ ಎಂಬು ಭಾವನೆಯೇ ಇದೆ. ಅಲ್ಲದೇ ಯಾರನ್ನೋ ಮೆಚ್ಚಿಸಲು ಏನೋ ನಾಟಕವಾಡಲು ಹೋಗುವುದಿಲ್ಲ ಎಂಬ ಅರಿವೂ ಇದೆ. ತಮ್ಮ ಸಂಘಟನಾ ಶಕ್ತಿಯಿಂದಲೇ ಕಾಂಗ್ರೆಸ್ ೧೩೬ ಸ್ಥಾನ ಗೆಲ್ಲಲು ಕಾರಣರಾಗಿದ್ದಂತೂ ನಿಜ. ೨೦೨೪ ರ ಚುನಾವಣೆ ಗೆದ್ದಾಕ್ಷಣ ಮುಖ್ಯಮಂತ್ರಿಯಾಗಲು ಓಡಾಡಿದ್ದೂ ನಿಜ. ಅದಕ್ಕೆ ಪೂರ್ಣ ಅರ್ಹರಾಗಿದ್ದುದೂ ನಿಜ. ಅದು ಆಗದಿದ್ದಾಗ ಪ್ರತಿದಿನವೂ ಪ್ರತಿರಾತ್ರಿಯೂ ಮುಖ್ಯಮಂತ್ರಿ ಪದವಿಗಾಗಿ ಹಂಬಲಿಸಿ ಹಂಬಲಿಸಿ ಕೊರಗಿದ್ದೂ ನಿಜ. ನೂರಾರು ಸಲ ನೊಣವಿನಕೆರೆ ಮಠಕ್ಕೆ, ದೇಗುಲಗಳಿಗೆ ಭೇಟಿ ನೀಡಿದ್ದೂ ನಿಜ. ಆದರೂ ಸಿದ್ದರಾಮಯ್ಯ ಕುರ್ಚಿ ಬಿಡುತ್ತಿಲ್ಲವಲ್ಲ, ಎರಡೂವರೆ ವರ್ಷ ಸಂದಕೂಡಲೆ ಕುರ್ಚಿ ಬಿಟ್ಟುಕೊಡಬೇಕಿತ್ತು ಎಂದು ಭಾವಿಸಿದ್ದೂ ನಿಜ.
ತಡೆತಡೆದು ಸಿಗುವ ಅದೃಷ್ಟದ ಬಾಳಿಕೆ ಜಾಸ್ತಿಯಂತೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧಿಕಾರದ ಬಾಳಿಕೆ ಹೆಚ್ಚು ಹೆಚ್ಚು ದೀರ್ಘವಾಗಿರಲಿ ಅಂತ ಹಿತೈಷಿಗಳು ಹಾರೈಸುತ್ತಿದ್ದಾರೆ.
ಆದರೆ ಮೃದು ಹಿಂದುತ್ವ ಧೋರಣೆ ಹೊಂದಿರುವ ಡಿ.ಕೆ.ಶಿವಕುಮಾರ್ ಅವರಿಗೆ ಈಗ ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳೇ ಕಾಟ ಕೊಡುವ ಅಪಾಯವೂ ಜಾಸ್ತಿ ಇದೆ. ಆಟೋಗಳ ಹಿಂದೆ ʻಹಿತಶತ್ರುಗಳ ಆಶೀರ್ವಾದʼ ಅಂತ ಬರೆದಿರುತ್ತಲ್ಲ, ಹಾಗೆ! ಕಾಲದ ಗರ್ಭದಲ್ಲಿ ಏನೇನು ಸ್ಥಿತ್ಯಂತರಗಳಿವೆಯೋ, ಕಾದು ನೋಡೋಣ.
- ಭವಿತ






“ಧರ್ಮದಲ್ಲಿ ರಾಜಕೀಯ ಇರಬಾರದು. ಆದರೆ ರಾಜಕೀಯದಲ್ಲಿ ಧರ್ಮ ಇರಬೇಕು” -ಈ ನಿಲುವನ್ನು ಬಲವಾಗಿ ಪ್ರತಿಪಾದಿಸುವ ಶ್ರೀ ಕರಿಬಸವ ದೇಶಿಕೇಂದ್ರ ಸ್ವಾಮಿಗಳ ಆಶಿರ್ವಾದವಿರುವ ಮುಖ್ಯಮಂತ್ರಿಗಳು ಮುಂದಿನ ದಿನಗಳಲ್ಲಿ ಜನಸಾಮಾನ್ಯರ ನೋವಿಗೆ ನಿಜವಾಗಿಯೂ ಸ್ಪಂದಿಸಿ; ಉತ್ತಮ ಆಡಳಿತ ನಡೆಸಲಿ.