ನೀ
ಬರೆದ ಕಾಗದ
ನನ್ನೆದೆಯ ಭಾವದ
ಹನಿಗಳನು ಜಿನುಗಿಸುತ್ತ
ಕಣ್ಣಾ ತುಂಬಿದೆ
ನೀ
ಬರೆದ ಕಾಗದ
ಪ್ರೀತಿಯದು ಮಾಗಿದ
ಮನಸಿನಾ ಬಿಂಬವಾಗಿ
ನಸು ನಗುತಿದೆ
ಹರಿದು ಚೂರಾಗದ
ಬಹುಕಾಲ ಮಾಸದ
ಸೊಗಸಾದ ಚಿತ್ರಿಕೆಯಾಗಿ
ಎದೆಯಲುಳಿದಿದೆ
ಯಾರಲ್ಲೂ ಹೇಳದ
ಯಾರಲ್ಲೂ ಕೇಳದ
ಗುಟ್ಟುಗಳ ಮೂಟೆಯಾಗಿ
ಮನದಲುಳಿದಿದೆ
ನೀ
ಬರೆದ ಕಾಗದ
ವಿಪರೀತ ಮೋಹದ
ಅಕ್ಷರದ ಮಾಲೆಯಾಗಿ
ಕೊರಳ ತುಂಬಿದೆ
ನೀ
ಬರೆದ ಕಾಗದ
ಅಕ್ಕರೆಯು ತುಂಬಿದ
ನೆನಪುಗಳ ಬುತ್ತಿಯಾಗಿ
ಜೊತೆಗೆ ಉಳಿದಿದೆ
ನಾ
ಬರೆದ ಕಾಗದ
ನೀ ಒಡೆದು ಓದದ
ನೋಂದಣಿಯ ಅಂಚೆಯಾಗಿ
ಹಾಗೇ ಉಳಿದಿದೆ !
- ಅಚ್ಯುತಪ್ರಿಯ









