ದೃಶ್ಯಕಾವ್ಯ
Advertisement
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
  • ಪುಸ್ತಕಗಳು
  • Cart
No Result
View All Result
 ದೃಶ್ಯಕಾವ್ಯ
No Result
View All Result
Home ಗಹನ

ಪಾಕಿಸ್ತಾನ ಒಡೆದು ಚೂರಾಗಲಿ ! ಭಾರತ ನೆಮ್ಮದಿಯ ಸೂರಾಗಲಿ

ಪಾಕಿಸ್ತಾನ ಒಡೆದು ಚೂರಾಗಲಿ !  ಭಾರತ ನೆಮ್ಮದಿಯ ಸೂರಾಗಲಿ

 

 ಇತ್ತೀಚಿನ ವರ್ಷಗಳಲ್ಲಿ ಭಾರತ ಉಪಖಂಡದ ಯಾವುದೇ ಧರ್ಮ ಸಂಬಂಧಿ ಹಿಂಸಾಚಾರ, ಬಾಂಬ್‌ಸ್ಫೋಟಕ್ಕೂ ಪಾಕಿಸ್ತಾನಕ್ಕೂ ಲಿಂಕ್ ಇರುವುದು ಮಾಮೂಲಿ ಆಗಿಬಿಟ್ಟಿದೆ. ಪಾಕಿಸ್ತಾನದ ಸಾಧನೆಯೇ ಅಂತಹುದು. ಭಯೋತ್ಪಾದನೆಯ ಬೀಜ–ವೃಕ್ಷಗಳನ್ನು ಸರಕಾರಿ ಕೃಪಾಪೋಷಿತ ವ್ಯವಸ್ಥೆಯಡಿಯೇ ಪೋಷಿಸಿ ಬೆಳೆಸುತ್ತ ಜಗತ್ತಿಗೇ ಸವಾಲಾಗಿ ನಿಂತಿರುವ ಈ ದೇಶಕ್ಕೆ ತನ್ನ ನೀತಿಯೇ ಮುಳುವಾಗಿದೆ. ಪೋಷಿಸಿದ ಭಸ್ಮಾಸುರ ಒಂದಲ್ಲ ಒಂದು ದಿನ ಅದರ ತಲೆಯ ಮೇಲೆಯೆ ಕೈ ಇಡುತ್ತಾನೆ. ಆಗ ಪಾಕಿಸ್ತಾನ ನಾಲ್ಕೈದು ಹೋಳುಗಳಾಗಿ ಒಡೆದುಹೋಗುವುದು ಖಚಿತವಾಗುತ್ತದೆ; ಹೇಳಬೇಕೆಂದರೆ ಈ ವಿಭಜನೆ ಪ್ರಕ್ರಿಯೆಗೆ ವಿಶೇಷವಾಗಿ ಭಯಗ್ರಸ್ತ ಐರೋಪ್ಯ ಹಾಗೂ ಪಾಶ್ಚಾತ್ಯ ದೇಶಗಳು ಕಾತರದಿಂದ ಕಾದಿವೆ. ವಿಭಜನೆಗೆ ವಿಶ್ವಮಟ್ಟದಲ್ಲಿ ಬೆಂಬಲವಿದ್ದು ಕಾರ್ಯತಂತ್ರಗಳೂ ರೂಪುಗೊಳ್ಳುತ್ತಿವೆ. ಬಾಹ್ಯವಾಗಿ ಗೋಚರವಾಗುತ್ತಿಲ್ಲವಷ್ಟೆ. 

 ಮನಸ್ಸು ಮಾಡಿದ್ದರೆ ಉತ್ತಮ ಕೃಷಿ ಭೂಮಿ ಹೊಂದಿರುವ ಪಾಕ್ ಇಡೀ ಜಗತ್ತಿಗೆ ಕೃಷಿಯ ಹರಿಕಾರ ಆಗಬಹುದಿತ್ತು. ಸಿಂಧೂ ನಾಗರೀಕತೆಯ ತೊಟ್ಟಿಲು, ಹರಪ್ಪ ಮೊಹೆಂಜೊದಾರೊವನ್ನು ಒಡಲಲ್ಲಿಟ್ಟುಕೊಂಡು ಇಡೀ ಜಗತ್ತಿನ ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆದು ನಿಲ್ಲುವ ಸತ್ವ ಸಟ್ಲೆಜ್(ಸಿಂಧೂ) ತೀರದ ಮಣ್ಣಿನಲ್ಲಿತ್ತು. ಎಲ್ಲವೂ ಧರ್ಮದ ಅಂಧ ಅನುಸರಣೆಯ ಪ್ರವಾಹದಲ್ಲಿ ಕೊಚ್ಚಿ ಹೋದವು. ಧರ್ಮದ ಆಧಾರದ ಮೇಲೆ 1947ರಲ್ಲಿ ಭರತಖಂಡದಿಂದ ವಿಭಜನೆಗೊಂಡು ಸ್ವತಂತ್ರವಾದ ಈ ದೇಶ, ಕೊನೆಗೆ ಪರಿಪೂರ್ಣ ನೈಜ ಇಸ್ಲಾಮಿಕ್ ದೇಶವಾಗುವತ್ತವೂ ಸಾಗಲಿಲ್ಲ; ಪ್ರಜಾಪ್ರಭುತ್ವ ದೇಶವಾಗಿಯೂ ಉಳಿಯಲಿಲ್ಲ. ಷಿಯಾ ಸುನ್ನಿ ಒಳಜಗಳದಿಂದ, ಪಂಜಾಬ್, ಬಲೂಚ್, ಸಿಂಧ್ ಮೇಲಾಟದಿಂದ ಗೊತ್ತು ಗುರಿ ಇಲ್ಲದ ಹಡಗಿನಂತೆ ಸಾಗಿ ಸ್ವಯಂಘೋಷಿತ ಧರ್ಮ ವಿಸ್ತಾರಕರ `ಜೆಹಾದ್’ ಎಂಬ ಬರ್ಫದ ಗಡ್ಡೆಗೆ ಡಿಕ್ಕಿ ಹೊಡೆದು ಚೂರಾಗುವ ಹಂತದಲ್ಲಿದೆ.  

 ಮೇಲ್ನೋಟಕ್ಕೆ ಒಂದೇ ದೇಶ ! 

 ಅಸಲಿಗೆ ಪಾಕಿಸ್ತಾನ ಜಗತ್ತಿನ ದೃಷ್ಟಿಯಲ್ಲಿ ಒಂದು ದೇಶ ಅಷ್ಟೆ. ಒಳಗೊಳಗೇ ಮಾನಸಿಕವಾಗಿ ಅದು ಯಾವತ್ತೋ ಚೂರು ಚೂರಾಗಿದೆ. ಇಸ್ಲಾಮಾಬಾದ್ ನಿಯಂತ್ರಣದಲ್ಲಿ ಅಂಗೈಯಷ್ಟಗಲ ಭಾಗವಿದೆ ಅಷ್ಟೆ. ಉಳಿದಂತೆ ಅಲ್ಲಿ ಜೆಹಾದ್ ಸಂಘಟನೆಗಳ, ಸಿಡಿದು ಒಡೆದು ಕಡಿದು ಬಡಿದು ಮಾಡುವ ಮನೋಭಾವವುಳ್ಳವರ ಹಿಡಿತದಲ್ಲಿದೆ. ಕೆಲ ವರ್ಷಗಳ ಹಿಂದೆ ಸ್ವಾತ್ ಕಣಿವೆಯನ್ನು ಅಧಿಕೃತವಾಗಿ ತಾಲಿಬಾನಿಗಳಿಗೆ ಬಿಟ್ಟುಕೊಟ್ಟಿದ್ದು, ಇದಕ್ಕೊಂದು ನಿದರ್ಶನ. ಇದು ವಿಭಜನೆಯ ಆರಂಭ ಅಷ್ಟೆ.  

 ವಿದೇಶ ವ್ಯವಹಾರಗಳ ತಜ್ಞರು ಲಾಗಾಯ್ತಿನಿಂದಲೂ ಪಾಕಿಸ್ತಾನದ ಆಗುಹೋಗುಗಳನ್ನು ಗಮನಿಸುತ್ತಲೇ ಬಂದಿದ್ದಾರೆ. ಅದು ಒಡೆಯುವ ಹಂತದಲ್ಲಿರುವ ಮುನ್ಸೂಚನೆ ನೀಡುತ್ತಿರುವವರೂ ವಿಶ್ವಮಟ್ಟದ ತಜ್ಞರೇ. ಅವರು ಹೇಳುವಂತೆ, ಸ್ವತಂತ್ರ ದೇಶವಾದ ತರುವಾಯದಿಂದ ಇಲ್ಲಿಯವರೆಗೂ ಪಾಕಿಸ್ತಾನದ ನೀತಿ ನಿಯಮಗಳು ಯಾವತ್ತೂ ಅಭಿವೃದ್ಧಿಯತ್ತ, ಶಿಕ್ಷಣ ವ್ಯವಸ್ಥೆ ಉತ್ತಮಪಡಿಸುವತ್ತ, ಕೈಗಾರಿಕೆಗಳನ್ನು ಸ್ಥಾಪಿಸುವತ್ತ, ಕೃಷಿಯಲ್ಲಿ ಸ್ವಯಂಪರಿಪೂರ್ಣತೆ ಸಾಧಿಸುವತ್ತ ವಿಶ್ವಮಟ್ಟದಲ್ಲಿ ಯಾವುದಾದರೊಂದು ದೇಶದೊಂದಿಗೆ ಯಾವುದಾದರೊಂದು ವಿಷಯದಲ್ಲಾದರೂ ಆರೋಗ್ಯಕರ ಸ್ಪರ್ಧೆ ನೀಡುವತ್ತ ಯೋಚನೆ ಮಾಡಲೇ ಇಲ್ಲ. ಅಧ್ಯಕ್ಷ ಗಾದಿಗೆ ಯಾರೇ ಬಂದರೂ ಯಾರೇ ಹೋದರೂ ಅದು ಏಕಮೇವಾದ್ವಿತೀಯವಾಗಿ ಬೆಳೆಸಿದ್ದು ಜೆಹಾದಿ ಗುಂಪುಗಳನ್ನು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಪೋಷಿಸಿ, ದಾಯಾದಿ ಭಾರತದಲ್ಲಿ ಛೂ ಬಿಡುವುದರಲ್ಲಿ ಮಾತ್ರ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ವಿಪರೀತ ಸೇನಾವೆಚ್ಚ ಮಾಡುತ್ತ, ವಿದೇಶಗಳಿಂದ ಅಸ್ತ್ರ ಖರೀದಿಸುತ್ತ ಭಾರತ ಅಣು ಪರೀಕ್ಷೆ ನಡೆಸಿದರೆ ತಾನೂ ಅಣ್ವಸ್ತ್ರ ಪರೀಕ್ಷೆ ನಡೆಸಿ ಬೀಗುತ್ತ, ಭಾರತದ ಪೃಥ್ವಿಗೆ ಪ್ರತಿಯಾಗಿ ಘೋರಿ, ತ್ರಿಶೂಲ್‌ಗೆ ಪ್ರತಿಯಾಗಿ ಘಜನಿ– ಹೀಗೆ ಭರತಖಂಡವನ್ನು ಲೂಟಿ ಮಾಡಿದ ಮಹಮ್ಮದೀಯ ರಾಜರ ಹೆಸರನ್ನು ವೈಭವೀಕರಿಸುತ್ತ, ಕಾಶ್ಮೀರ ಪ್ರತ್ಯೇಕತೆಯ ಕೂಗನ್ನು ಜೀವಂತವಾಗಿರಿಸುವಲ್ಲಿ ಶ್ರಮಿಸುತ್ತ 7 ದಶಕಗಳನ್ನು ಕಳೆಯಿತು. ಇದೀಗ ಚೀನಾ ಎಂಬ ಡ್ರಾಗನ್ ಬಾಲಕ್ಕೆ ಜೋತುಬಿದ್ದು ಭಾರತದ ವಿರುದ್ಧ ತಾನೇನೋ ಸಾಧಿಸಿಬಿಟ್ಟೇನು ಎಂಬ ಭ್ರಮೆಯಲ್ಲಿದೆ.  

 ಏಳು ದಶಕಗಳ ಅವಧಿಯಲ್ಲಿ ಪಾಕ್‌ನಲ್ಲಿ ಹುಲುಸಾಗಿ ಬೆಳೆದಿದ್ದು, ಮುಗ್ದ ಯುವಕರ ರಕ್ತದ ಕಣಕಣದಲ್ಲೂ ಬೆರೆತಿದ್ದು `ಜೆಹಾದ್’. ಬೆರೆಸಿದ್ದು ಪಾಕ್ ಸೈನ್ಯ, ಗುಪ್ತಚರದಳ ಐಎಸ್‌ಐ. ಇಂಬು ನೀಡಿದ್ದು ಪಾಕ್ ಸರಕಾರ. ಜಗತ್ತಿನಲ್ಲಿ ಐವತ್ತಕ್ಕೂ ಹೆಚ್ಚು ಇಸ್ಲಾಮಿಕ್ ದೇಶಗಳಿವೆ. ಎಲ್ಲ ಮುಸ್ಲಿಮರೂ ಇಸ್ಲಾಂ ಪರಿಶುದ್ಧವಾಗಿ ಉಳಿಯಬೇಕೆಂದರೆ ಜೆಹಾದ್ ಮೊರೆ ಹೋಗಲೇಬೇಕೆಂದು ನಂಬಿದ್ದರೆ ಜಗತ್ತು ಇನ್ನೂ ಘೋರವಾಗಿರುತ್ತಿತ್ತು. ಪುಣ್ಯವಶಾತ್ ಮಲೇಷ್ಯ, ಇಂಡೋನೇಷ್ಯ ಅಷ್ಟೇ ಏಕೆ ದುಬೈ, ಟರ್ಕಿ, ಒಮನ್, ಪಾಕಿಸ್ತಾನದ ಜೊತೆ ಗಡಿ ಹಂಚಿಕೊಂಡಿರುವ ಇರಾನ್ ಮುಂತಾದ ಆಯಕಟ್ಟಿನ ದೇಶಗಳೂ ಜೆಹಾದ್‌ಅನ್ನು ಆ ಮಟ್ಟಕ್ಕೆ ಬೆಂಬಲಿಸಲಿಲ್ಲ.  

 ಆದರೆ ಭಯೋತ್ಪಾದನೆ ಮಾನವಕುಲದ ಹಿತಕ್ಕೆ ಮಾರಕ ಎಂದು ಯಾವತ್ತೂ ಪಾಕ್ ಸರಕಾರಕ್ಕೆ ಅನ್ನಿಸಲೇ ಇಲ್ಲ. ಅಲ್ಲಿನ ಜನಸಾಮಾನ್ಯರಂತೂ ಮದರಸಾ ಪ್ರಣೀತ ಪರಧರ್ಮವಿರೋಧಿ ಶಿಕ್ಷಣದಿಂದಾಗಿ ಭಯೋತ್ಪಾದನೆಯನ್ನು ಅರಿಯದೆಯೆ ಅಂತರ್ಗತಗೊಳಿಸಿಕೊಂಡುಬಿಟ್ಟಿದ್ದಾರೆ. ಪ್ರತಿಸಲ ಪ್ರಪಂಚದ ಎಲ್ಲೇ ಭಯೋತ್ಪಾದನೆಯ ದಾಳಿ ನಡೆದರೂ ಪಾಕ್‌ನತ್ತ ಎಲ್ಲರೂ ಬೊಟ್ಟು ಮಾಡುವಂತಾಗಿದೆ. ಪಾಕ್ ಸರಕಾರ ಒಂದೋ ಅಲ್ಲಗಳೆಯುತ್ತದೆ, ಇಲ್ಲ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿದ ನಾಟಕವಾಡುತ್ತದೆ; ಹೊಡೆದಂತೆ ಮಾಡುತ್ತೇನೆ, ಅತ್ತಂತೆ ನಟಿಸುವ ತಂತ್ರ. ಪಾಕ್ ಗುಪ್ತಚರದಳ ಐಎಸ್‌ಐಗೆ ಜೆಹಾದಿ ಸಂಘಟನೆಗಳನ್ನು ಪೋಷಿಸಿ ಛೂ ಬಿಡುವುದು ಕಾರ್ಯತಂತ್ರದ ಭಾಗ.  

 ಇದಕ್ಕೆ ಕಾರಣವಿದೆ. ಪಾಕಿಸ್ತಾನದಲ್ಲಿ ಮುಖ್ಯವಾಗಿ ಐದು ಪ್ರಾಂತಗಳಿವೆ. ಪಂಜಾಬ್, ಸಿಂಧ್, ಬಲೂಚ್, ಎನ್‌ಡಬ್ಲುಎಫ್‌ಪಿ (ನಾರ್ತ್ವೆಸ್ಟ್ ಫ್ರಂಟಿಯರ್ ಪ್ರಾವಿನ್ಸ್) ಮತ್ತು ಸ್ವಾತ್ ಕಣಿವೆಯಿರುವ ಎಫ್‌ಎಟಿಎ ಪ್ರಾಂತ. ಪಾಕ್ ಆಕ್ರಮಿತ ಕಾಶ್ಮೀರ ಭಾಗವೂ ಸಧ್ಯಕ್ಕೆ ಪಾಕಿಸ್ತಾನದ ವಶದಲ್ಲಿರುವುದರಿಂದ ಅದನ್ನೂ ಒಂದು ಪ್ರಾಂತ ಎಂದು ತಾನೇ ಪರಿಗಣಿಸುತ್ತದೆ. ಪಾಕಿಸ್ತಾನದ ಆಡಳಿತ, ಮಿಲಿಟರಿ ಎಲ್ಲದರಲ್ಲೂ ಪಂಜಾಬ್ ಪ್ರಾಂತದ ಜನರ ಮೇಲುಗೈ. ಈ ವಿಷಯದಲ್ಲಿ ಇತರ ಪ್ರಾಂತದವರಿಗೆ ಅಸಮಾಧಾನ ಇದ್ದೇ ಇದೆ. ಅಲ್ಲಿನ ಪಂಜಾಬಿಗಳ ವಿರುದ್ಧ ಇತರ ಪ್ರಾಂತದವರು ಕತ್ತಿ ಮಸೆಯುತ್ತಲೇ ಇದ್ದಾರೆ. ಇದನ್ನು ಮರೆಸಿ, ಬೇರೆಡೆ ಗಮನವನ್ನು ಸೆಳೆಯಲು ಪಂಜಾಬ್ ಬಾಹುಳ್ಯವಿರುವ ಸರಕಾರಿ ಯಂತ್ರ, ಮಿಲಿಟರಿ ಮತ್ತು ಐಎಸ್‌ಐ ಜೆಹಾದ್‌ಗೆ ಬೆಂಬಲ ನೀಡಲು ಆರಂಭಿಸಿತು. ಧರ್ಮದ ಆಫೀಮು ತಿನ್ನಿಸಿದರೆ ಬೇರೆ ಏನನ್ನು ಬೇಕಾದರೂ ಮರೆಯುತ್ತಾರೆ, ಸ್ವಂತ ಜೀವವನ್ನೆ ಬಲಿ ಕೊಡಲೂ ತಯಾರಾಗುತ್ತಾರೆ ಎಂಬ ಸತ್ಯ ಅರಿತ `ಬುದ್ಧಿವಂತ’ ಪಂಜಾಬಿಗಳ ರಾಜಕೀಯ ನಡೆ ಭಯೋತ್ಪಾದನೆಯನ್ನು ಅಧಿಕೃತವಾಗಿ ಬೆಳೆಯಲು ಬಿಟ್ಟಿತು.  

 ಪರಿಣಾಮ, ಮೊದಲೇ ಗಡಿ ರೇಖೆಗಳು ಅಸ್ಪಷ್ಟವಾಗಿರುವ ಪೂರ್ವಗಡಿಯಲ್ಲಿ ಅಪ್ಘಾನಿಸ್ತಾನದಿಂದ ಪಾಕಿಸ್ತಾನದೊಳಕ್ಕೆ ಲಕ್ಷಾಂತರ ಮಂದಿ ಪಶ್ತೂನ್ ಬುಡಕಟ್ಟು ಜನರ ನುಸುಳಿದರು. ಆಹಾರ ಧಾನ್ಯ ಕೃಷಿ ಬಿಟ್ಟು ಆಫೀಮು, ಗಾಂಜಾ ಬೆಳೆಯುವುದನ್ನು ಜೆಹಾದಿ ಸಂಘಟನೆಗಳು ಪ್ರೋತ್ಸಾಹಿಸಿದವು. ಅದು ಅವರ ದುಡ್ಡಿನ ದೊಡ್ಡ ಮೂಲವಾಯಿತು. ಪಶ್ತೂನರನ್ನು ದಾರಿತಪ್ಪಿಸಿ ಭಯೋತ್ಪಾದಕರನ್ನಾಗಿ ಮಾಡಿದ್ದೂ ಪಾಕಿಗಳೇ. ಪಾಕಿಸ್ತಾನದ ತುಂಬೆಲ್ಲ ಜೆಹಾದಿ ಉಗ್ರರ ನೆಲೆಗಳು ಹರಡಿ ನಿಂತಿವೆಯಾದರೂ ಆಗ್ನೇಯ ಗಡಿಯಲ್ಲಿ ತೀವ್ರತೆ ಜಾಸ್ತಿ. ಇದರಿಂದಾಗಿ ಪಾಕಿಸ್ತಾನದ ನಕ್ಷೆಯಲ್ಲಿ ನೈಋತ್ಯದಿಂದ ಈಶಾನ್ಯತುದಿಯವರೆಗೆ ಗೆರೆ ಕೊರೆದರೆ, ಪಶ್ಚಿಮ–ಉತ್ತರ ಭಾಗದಲ್ಲಿ ವಲಸಿಗರ ಅಂತೆಯೇ ಉಗ್ರ ಸಂಘಟನೆಗಳ ನೆಲೆಗಳ ಸಂಖ್ಯೆ ಹೆಚ್ಚು.  

 ಇದು ಹೀಗೆಯೇ ಮುಂದುವರಿದರೆ ಪ್ರಪಂಚಕ್ಕೇ ಉಳಿಗಾಲವಿಲ್ಲ ಎಂಬ ಭೀತಿ ವಿಶ್ವದ ಮುಂಚೂಣಿ ದೇಶಗಳಲ್ಲಿ ಆವರಿಸಿದೆ. ಜೊತೆಗೆ ಬಾಂಗ್ಲಾದೇಶವೂ ಭಯೋತ್ಪಾದನೆಗೆ ತನ್ನದೇ ಕೊಡುಗೆ ನೀಡುತ್ತಿರುವುದು ಸೆರಗಿನಲ್ಲಿನ ಕೆಂಡವಾಗಿದೆ. (ಬಾಂಗ್ಲಾದೇಶ ಮೊದಲಿನಂತೆ ಪೂರ್ವ ಪಾಕಿಸ್ತಾನವಾಗಿದ್ದಿದ್ದರೆ ಭಾರತದ ಸ್ಥಿತಿ ಇನ್ನೂ ಶೋಚನೀಯವಾಗಿರುತ್ತಿತ್ತು. ಅಂದಿನ ಶ್ರೀಮತಿ ಇಂದಿರಾಗಾಂಧಿಯವರ ದಿಟ್ಟ ನಿಲುವಿನಿಂದ 1971ರಲ್ಲಿ ಬಾಂಗ್ಲಾ, ಪಾಕಿಸ್ತಾನದಿಂದ ಸ್ವತಂತ್ರವಾಯಿತು. ಈಗಲೂ ಅಂಥ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ನಾಯಕರು ಬೇಕೆಂದು ಮತಾಂಧರ ಉಪಟಳದಿಂದ ನೊಂದ ಜನತೆ ನಿರೀಕ್ಷಿಸುತ್ತಿದ್ದಾರೆ!) 

 

ಪಾಕಿಸ್ತಾನ ವಿಭಜನೆಗೆ ಸದ್ದಿಲ್ಲದೇ ಸಜ್ಜಾಗುತ್ತಿದೆ ಜಗತ್ತು!! 

 ಸ್ವತಂತ್ರ ಪಶ್ತೂನಿಸ್ತಾನ್:  

ಗಡಿ ಗಟ್ಟಿ ಇಲ್ಲದೆ ಅನಿಯಂತ್ರಿತ ಆಪ್ಘನ್ ವಲಸಿಗರಿಂದ ನಾರ್ತ್ ವೆಸ್ಟ್ ಫ್ರಂಟಿಯರ್ ತುಂಬಿ ಹೋಗಿದ್ದು ಅಲ್ಲೀಗ ಪಶ್ತೂನರು ಬಹುಸಂಖ್ಯೆಯಲ್ಲಿದ್ದಾರೆ. ಈ ಪ್ರಾಂತದ ಮೇಲೆಯೇ ಅಲ್ ಖೈದಾ (ತಾಲಿಬಾನ್) ನಿಯಂತ್ರಣ ಬಿಗಿಯಾಗುತ್ತ ಸ್ವಾತ್ ಕಣಿವೆಯಲ್ಲಿ ಷರಿಯತ್ ಜಾರಿಗೆ ಬಂತು. ಈ ಪ್ರದೇಶವನ್ನು ಬೇರ್ಪಡಿಸಿ ಸ್ವತಂತ್ರ ಪಶ್ತೂನಿಸ್ತಾನ್ ಆಗಿಸುವುದು ಅಥವ ಆಪ್ಘಾನಿಸ್ತಾನಕ್ಕೇ ಸೇರಿಸಿ ಗ್ರೇಟರ್ ಅಫ್ಘಾನ್ ರಚನೆ ಸಂಭವನೀಯ.  

 ಸ್ವತಂತ್ರ ಬಲೂಚಿಸ್ತಾನ್: 

ಬಲೂಚಿಸ್ತಾನ್ ಅತ್ಯಂತ ವಿಸ್ತಾರ ಪ್ರಾಂತ. ಇದಕ್ಕೆ ಸ್ವತಂತ್ರ ಬಲೂಚಿಸ್ತಾನ್ ದೇಶವೆನ್ನಿಸಿಕೊಳ್ಳುವ ತಹತಹ. ಪಂಜಾಬಿಗಳನ್ನು ಕಂಡರೆ ಇವರಿಗೆ ಅಷ್ಟಕ್ಕಷ್ಟೆ. ಪಂಜಾಬಿಗಳು ತಮ್ಮ ಜಮೀನು ಕಬಳಿಸುತ್ತಿದ್ದಾರೆಂಬ ಸಿಟ್ಟಿದೆ. ಪ್ರದೇಶದ ಆಗುಹೋಗುಗಳ ಮೇಲೆ ಸಾಕಷ್ಟು ಸಂಖ್ಯೆಯಲ್ಲಿರುವ ಆಪ್ಘನ್ ವಲಸಿಗರ ಪ್ರಭಾವವಿದೆ.  

 ಸ್ವತಂತ್ರ ಸಿಂಧ್: 

ಗುಜರಾತ್ ಗಡಿಗೆ ಹೊಂದಿಕೊAಡAತೆ ಇರುವ ಸಿಂಧ್ ಪ್ರಾಂತ ವ್ಯಾಪಾರಿಗಳ ತವರೂರು. ಪಾಕ್‌ನ ಆರ್ಥಿಕತೆ ನಿರ್ಣಯಿಸಬಲ್ಲರು. ರಾಜಕೀಯ ಅಸ್ಥಿರತೆಯಿಂದ ರೋಸಿಹೋಗಿರುವ ಇವರು ಸ್ವತಂತ್ರ ಸಿಂಧ್ ದೇಶದ ಕನಸು ಕಾಣುತ್ತಿದ್ದಾರೆ. ಪಂಜಾಬಿಗಳು ತಮ್ಮಮೇಲೆ ಸವಾರಿ ಮಾಡುತ್ತಿರುವುದು ಸಿಂಧಿಗಳಲ್ಲಿ ರೋಷ ಹುಟ್ಟಿಸಿದೆ.  

 ಜಿನ್ನಾಪುರ: ಕರಾಚಿ ಸುತ್ತಮುತ್ತ ಇರುವ ಮೊಹಜರಿಗಳು ಇತರರೊಂದಿಗೆ ಬೆರೆಯಲು ಇಷ್ಟಪಡರು. ಇವರಿಗಾಗಿ ಪುಟ್ಟ ಜಿನ್ನಾಪುರ ದೇಶ ಅಸ್ತಿತ್ವಕ್ಕೆ ಬರಬಹುದು. 

 ಸ್ವತಂತ್ರ ಪಂಜಾಬ್:  

ಇತರೆ ಪ್ರಾಂತಗಳು ಸ್ವತಂತ್ರಗೊಂಡರೆ ಪಂಜಾಬ್ ತಂತಾನೆ ಸ್ವತಂತ್ರ ದೇಶವಾಗುತ್ತದೆ. ಇಡೀ ಪಾಕ್ ನೆಲವನ್ನು ಆಳುತ್ತಿದ್ದವರು ತುಂಡು ಭೂಮಿ ಆಳಲು ಒಲ್ಲರು; ಆದರೆ ಅನಿವಾರ್ಯ. 

 ಪಾಕ್ ಆಕ್ರಮಿತ ಕಾಶ್ಮೀರ ಮರಳಿ ಭಾರತದ ವಶಕ್ಕೆ : 

ಕೊನೆಗೆ ಉಳಿಯುವುದು ಪಾಕ್ ಆಕ್ರಮಿತ ಕಾಶ್ಮೀರ. ಅದನ್ನು ಭಾರತದ ಕಾಶ್ಮೀರದೊಂದಿಗೇ ವಿಲೀನಗೊಳಿಸಿ ಭಾರತಕ್ಕೇ ಸೇರ್ಪಡೆ ಮಾಡುವುದು ಮಹತ್ವಾಕಾಂಕ್ಷೆಯ ಅಂಶ. ಅಂತರಾಷ್ಟ್ರೀಯ ವಿಷಯ ತಜ್ಞರು ಹೀಗೆ ಮಾಡುವುದೇ ಸೂಕ್ತ ಹೊರತು ಸ್ವತಂತ್ರ ಕಾಶ್ಮೀರ ಪರಿಹಾರವಲ್ಲ ಎಂಬ ಅಂಶ ಪ್ರತಿಪಾದಿಸಿದ್ದಾರೆ. 

 ಪಾಕಿಸ್ತಾನ ವಿಭಜನೆಯ ವಿಭಿನ್ನ ಪ್ರಸ್ತಾಪಗಳು ಮುಂದಿವೆ. ರಾಲ್ಫ್ ಪೀಟರ್ಸ್ ಎಂಬ ತಜ್ಞ `ಬ್ಲಡ್ ಬಾರ್ಡರ್ಸ್; ಹೌ ಎ ಬೆಟರ್ ಮಿಡ್ಲ್ಈಸ್ಟ್ ವುಡ್ ಲುಕ್’ ಅಧ್ಯಯನ ಗ್ರಂಥವನ್ನೇ ಬರೆದಿದ್ದಾರೆ. ಯುರೋಪ್‌ನಲ್ಲಿ ನೆಲೆಸಿರುವ ಪಾಕ್ ಮೂಲದ ಪತ್ರಕರ್ತ ಸಯ್ಯದ್ ಜಮಾಲುದ್ದೀನ್, ಉಗ್ರವಾದದ ಮೂಲೋತ್ಪಾಟನೆಗೆ ಪಾಕ್ ವಿಭಜನೆ ಅನಿವಾರ್ಯ ಎಂದು ಬರೆದಿದ್ದಾರೆ. 

 ವಿಭಜನೆಯಿಂದ ವಿಶ್ವಕ್ಕೇನು ಲಾಭ? 

 ಈ ಪ್ರಶ್ನೆ ಸಹಜ. ದೇಶ ಒಡೆಯುವುದರಿಂದ ಉಗ್ರರನ್ನು ಒಡೆಯಲು ಆಗದು. ಆದರೆ ಉಗ್ರರಿಗೆ ಹಣ ಮತ್ತು ಆಧುನಿಕ ಶಸ್ತ್ರಾಸ್ತ್ರ ತರಬೇತಿ ನೀಡುವ ಕೇಂದ್ರೀಕೃತ ವ್ಯವಸ್ಥೆ ಒಡೆದುಹೋಗುತ್ತದೆ. ದೇಶದಲ್ಲಿ ಲಭ್ಯವಿರುವ ಯುರೇನಿಯಂ ನಿಕ್ಷೇಪಗಳು, ಸಂಸ್ಕರಣಾ ಘಟಕಗಳು, ಅಣ್ವಸ್ತ್ರ, ಅಣುಶಕ್ತಿ ತಯಾರಿಕೆ ಕೇಂದ್ರಗಳು ಒಂದೇ ದೇಶದಲ್ಲಿರದೆ ಬೇರೆ ಬೇರೆ ಆಡಳಿತಕ್ಕೆ ಹಂಚಿ ಹೋಗುತ್ತದೆ. ಆಗ ಉಗ್ರರಿಗೆ ಸುಲಭದಲ್ಲಿ ಅವುಗಳ ಮೇಲೆ ನಿಯಂತ್ರಣ ಸಾಧಿಸಲು ಆಗುವುದಿಲ್ಲ. ಯಾವುದೇ ಒಂದು ಪ್ರಾಂತದ ಮೇಲೆ ಅಮೆರಿಕ ನಿಯಂತ್ರಣ ಸಾಧಿಸಿದರೂ ಭಯೋತ್ಪಾದಕ ಸಂಘಟನೆಗಳ ಮಗ್ಗುಲು ಮುರಿದಂತಾಗುತ್ತದೆ.  

 ಏನೇ ಇರಲಿ, ವಿಶ್ವಶಾಂತಿಗೋಸ್ಕರ ನಡೆವ ಈ ಯಜ್ಞದಲ್ಲಿ ಪಾಕ್ ಆಹುತಿ ಆಗಲೇಬೇಕಿದೆ. ಪ್ರತಿಸಲ ಭಯೋತ್ಪಾದನೆ ಮಟ್ಟ ಹಾಕುವ ನೆಪದಲ್ಲಿ ಅಮೆರಿಕ, ಐರೋಪ್ಯ, ಅರಬ್ ರಾಷಗಳಿಂದ ಕೋಟ್ಯಂತರ ಡಾಲರ್ ನೆರವು ಪಡೆದು, ಅದನ್ನು ಉಗ್ರವಾದ ಪೋಷಣೆಗೆ ಹಿಂಬಾಗಿಲ ಬಳಕೆ ಮಾಡುತ್ತ, ಯದ್ವಾತದ್ವಾ ಶಸ್ತ್ರಾಸ್ತ್ರ ಖರೀದಿ ಮಾಡುತ್ತ, ಉಗ್ರರ ದಾಳಿ ನಡೆದಾಗಲೆಲ್ಲ ಪ್ರಪಂಚದ ಕಣ್ಣೊರೆಸುವ ಹೇಳಿಕೆ ಕೊಡುವ ಆಟವನ್ನು ಇನ್ನೂ ನಂಬಲು ಯಾವ ದೇಶವೂ ಸಿದ್ಧವಿಲ್ಲ. ಪಾಕ್ ನಂಬಿಕೆಗೆ ಅರ್ಹವೂ ಅಲ್ಲ. ಇದೀಗ ಚೀನವೆಂಬ ಡ್ರಾಗನ್‌ನ ಬಾಲಕ್ಕೆ ಜೋತುಬಿದ್ದು ಬದುಕಲು ಹೆಣಗಾಡುತ್ತಿದೆ. ಇಷ್ಟಾದರೂ ಭಾರತವನ್ನು ಮಟ್ಟ ಹಾಕುವುದೇ ಧ್ಯೇಯ ಎಂಬಂತೆ ಆಡುತ್ತಿದ್ದಾರೆ ಅಲ್ಲಿನ ಪ್ರಧಾನಿ.  

 ಭಾರತ ಮಟ್ಟಿಗಂತೂ ಪಾಕ್ ವಿಭಜನೆ ಆಶಾವಾದದ ಉತ್ತುಂಗ. ಹಾಗಂತ ನೆಮ್ಮದಿಯಿಂದ ನಿದ್ದೆ ಮಾಡುವಂತಿಲ್ಲ. ಮಗ್ಗುಲಲ್ಲಿ ಬಾಂಗ್ಲಾ ದೇಶವಿದೆ. ಅಲ್ಲದೆ ಪಾಕಿಸ್ತಾನ ವಿಭಜನೆ ಆದಮೇಲೂ ಅಲ್ಲಿನ ಮದರಸಾಗಳು, ಉಗ್ರವಾದವೇ ಜೀವನವೆಂದು ಭ್ರಮಿಸಿರುವ ಜನಸಾಗರ ಕರಗುವುದಿಲ್ಲ. ಇವರನ್ನೆಲ್ಲ ಸರಿದಾರಿಗೆ ತರುವ ಕೆಲಸ ಬಹುದೊಡ್ಡ ಸವಾಲಿನದಾಗಿದ್ದು ಶಿಕ್ಷಣ, ಆರ್ಥಿಕ ಬೆಳವಣಿಗೆ ಮತ್ತು ಪ್ರಪಂಚವನ್ನು ನೋಡುವ ದೃಷ್ಟಿಯನ್ನು ಬದಲಿಸಿವಂಥ ಕಠಿಣ ಸವಾಲು ಮುಂದಿರುತ್ತದೆ.  

 

 (ಲೇಖನ 2016 ರಲ್ಲಿ ವಿಜಯವಾಣಿಯಲ್ಲಿ ಪ್ರಕಟಿತ)

  •  ವಿನಾಯಕ ಭಟ್‌ ತದ್ದಲಸೆ 

 

Share16Tweet10SendShareShare
Next Post
ರಾಧೆ

ರಾಧೆ

Leave a Reply Cancel reply

Your email address will not be published. Required fields are marked *

Recommended

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು ಬೇರೆ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್_ ಪ್ರಮಾಣ ಮಾಡಿದ ಅಜ್ಜಯ್ಯ ಯಾರು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರಮಾಣ ಮಾಡಿದ ಅಜ್ಜಯ್ಯ ಯಾರು?

Radha Krishna Adiga Kannada Biography Book front

Radha Krishna Adiga – Idli Coffee Parampara-Payana

Radha Krishna Adiga Kannada Biography Book front

ರಾಧಾಕೃಷ್ಣ ಅಡಿಗ – ಇಡ್ಲಿ ಕಾಫಿ ಪರಂಪರೆ-ಪಯಣ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್_ ಪ್ರಮಾಣ ಮಾಡಿದ ಅಜ್ಜಯ್ಯ ಯಾರು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರಮಾಣ ಮಾಡಿದ ಅಜ್ಜಯ್ಯ ಯಾರು?

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು ಬೇರೆ

ಕನಸುಗಳಿಗೆ ನಿದ್ದೆಯಿಲ್ಲ

Radha Krishna Adiga Kannada Biography Book front

ರಾಧಾಕೃಷ್ಣ ಅಡಿಗ – ಇಡ್ಲಿ ಕಾಫಿ ಪರಂಪರೆ-ಪಯಣ

Radha Krishna Adiga Idli Coffee Parampara-Payana
Radha Krishna Adiga Idli Coffee Parampara-Payana
Translate »

Added to cart

Your Cart Is Empty
0

Check out our shop to see what's available

Cart Total: Total₹0.00
Your cart is empty. Shop now →
No Result
View All Result
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
  • ಪುಸ್ತಕಗಳು
  • Cart

© 2026 JNews - Premium WordPress news & magazine theme by Jegtheme.