ದೃಶ್ಯಕಾವ್ಯ
Advertisement
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
  • ಪುಸ್ತಕಗಳು
  • Cart
No Result
View All Result
 ದೃಶ್ಯಕಾವ್ಯ
No Result
View All Result
Home ಕಥೆಕಟ್ಟೆ

ಚಂದಿರನೇತಕೆ ಓಡುವನಮ್ಮ 

ಚಂದಿರನೇತಕೆ ಓಡುವನಮ್ಮ 

ಎಂಭತ್ತರ ದಶಕದಲ್ಲಿ ಬ್ಯಾಂಕುಗಳಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಗಳ ನಡುವಿನ ಗಾಸಿಪ್‌ಗಳು,  ಸ್ನೇಹ ಸಂಬಂಧಗಳು, ಹೊಟ್ಟೆಕಿಚ್ಚುಗಳ ಆ ಲೋಕವೇ ಬೇರೆ. ಹಳೆಯ ಕಾದಂಬರಿಗಳಲ್ಲಿ ಮಾತ್ರ ಕಾಣಸಿಗುವಂಥ  ಅಂದಿನ ಪರಿಸರವನ್ನು ಈ ಕಥೆಯಲ್ಲಿ ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿದ್ದಾರೆ.. ಸ್ವತಃ ಬ್ಯಾಂಕ್‌ ಉದ್ಯೋಗಿಯಾಗಿ ಈಗ ನಿವೃತ್ತರಾಗಿರುವ ಬೆಂಗಳೂರಿನ ಶಾಮಸುಂದರ್.‌

***

“ಕಂಗ್ರಾಟ್ಸ್‌ ಕಣೇ ರೇಖಾ… ನಿನ್ನ ವುಡ್‌ ಬಿ ನಮ್ಮ ಬ್ಯಾಂಕಲ್ಲಿದ್ದಾರಂತೆ. ಮದುವೆ ಯಾವಾಗ ?” 

ಎಂದು ರೇಖಾಳ ಸಹೋದ್ಯೋಗಿ  ಗೀತಾ ಅಭಿನಂದಿಸುತ್ತಾಳೆ.  “ಥ್ಯಾಂಕ್ಸ ಕಣೇ.. ಅವರು ನಮ್ಮ ಶಿವಾಜಿನಗರ ಬ್ರಾಂಚಲ್ಲಿದ್ದಾರೆ.. ಇನ್ನು ಮದುವೆ ಬರೋ ನವೆಂಬರಲ್ಲಿ” ಎಂದು ನಿರ್ಭಾವವಾಗಿಯೇ ಉತ್ತರಿಸುತ್ತಾಳೆ. 

ಆಗ ಗೀತಾ ಹೊರಡುತ್ತಾ.. “ ನೋಡು.. ಲಂಚ್‌ ಅವರ್‌ ಮುಗೀತಾ ಬಂತು.. ಸಾಯಂಕಾಲ ಸಿಕ್ಕಿ  ಎಲ್ಲಾ ಡೀಟೈಲಾಗಿ ಹೇಳಬೇಕು.. ಆಯ್ತಾ..” ಎನ್ನುತ್ತಾಳೆ.  ಇದು ಗೀತಾಳ ಈ ಮಾತಿನಲ್ಲಿ ಇರುವುದು ಸಹೋದ್ಯೋಗಿಯ ಮತ್ತು ಸ್ನೇಹಿತೆಯ ಬಗೆಗಿನ ನಿಜವಾದ ಕಾಳಜಿಯೋ ಅಥವಾ ಬರಿಯ ಕುತೂಹಲವೋ ತಿಳಿಯದಿದ್ದರೂ… ”ಬರೀ ಹೇಳೋದೇನು ಬಂತು ಗೀತಾ… ಇವತ್ತು ಸಾಯಂಕಾಲ ಐದು ಗಂಟೆಗೆ ಅವರೇ ಬರ್ತಾರೆ. ಪರಿಚಯ ಮಾಡಿ ಕೊಡ್ತೀನಿ.. ಆಗ ಏನು ಬೇಕಾದ್ರೂ ಕೇಳಿ ತಿಳ್ಕೋ..” ಎಂದಾಗ ಗೀತಾ ತಲೆಯಾಡಿಸಿ ತನ್ನ ಸೀಟಿನತ್ತ ಹೊರಡುತ್ತಾಳೆ. 

ರಾಷ್ಟ್ರೀಕೃತ ಬ್ಯಾಂಕೊಂದರ ಆಡಳಿತ ಕಚೇರಿಯಲ್ಲಿ ಕ್ಲರ್ಕ್ ಕಮ್‌ ಟೈಪಿಸ್ಟ್ ಆಗಿದ್ದ ರೇಖಾ ತನ್ನ ಜಾಗದಲ್ಲಿ ಕೆಲಸದಲ್ಲಿ ನಿರತಳಾಗಿದ್ದಾಗ “ರೇಖಾ.. ಸ್ವಲ್ಪ ಇಂದಿರಾನಗರ ಬ್ರಾಂಚಿನ ಪ್ರಿಮಿಸಸ್‌ ಫೈಲ್‌  ತರ್ತೀರಾ… ಅಂತ ಅವಳ ಹಿರಿಯ ಅಧಿಕಾರಿ ರಾವ್‌ ಇಂಟರ್‌ ಕಾಮಲ್ಲಿ ಕೇಳುತ್ತಾರೆ. ರೇಖಾ ಎದ್ದು ಫೈಲ್‌ ತರಲು ಹೊರಡುತ್ತಾಳೆ. ಆ ರೂಮಿನ ಬಾಗಿಲ ಹತ್ತಿರವೇ ಪಿಸು ಪಿಸು ಧ್ವನಿ ಅವಳನ್ನು ಎದುರುಗೊಳ್ಳುತ್ತದೆ. .  

“ಮಾಲಿನಿ.. ನೋಡಿದ್ಯಾ ಈ ರೇಖಾನ..  ಪಾಪ ಆ ರಾಜನಿಗೆ ಕೈ ಕೊಟ್ಟು ಈಗ ಬೇರೆ  ಹುಡುಗನ ಜೊತೆ ಮದುವೆ ಆಗ್ತಿದ್ದಾಳೆ. ಅವನಿಗೆ ಎಂಥಾ ಅನ್ಯಾಯ ಆಯ್ತು ಅಲ್ವಾ… ಅಂತ ಪಿಸು ಧ್ವನಿಯಲ್ಲಿ  ಕಲ್ಪನಾ ಹೇಳುತ್ತಿದ್ದಾಳೆ.. ಇದೇ ಕಲ್ಪನಾ ಬೆಳಿಗ್ಗೆ ತಾನೇ…”ಕಂಗ್ರಾಟ್ಸ್‌ ರೇಖಾ.. ಸಿಂಪಲ್ಲಾಗಿ ಎಂಗೇಜ್‌ ಮೆಂಟ್‌ ಆಯ್ತಂತೆ… ಹೋಗ್ಲಿ ಬಿಡು…  ಮದುವೆಗಾದ್ರೂ ನಮ್ಮನೆಲ್ಲಾ ಕರೀತೀಯಾ ತಾನೆ…. ವಿಷ್‌ ಯು ಆಲ್‌ ದಿ ಬೆಸ್ಟ್”‌ ಎಂದಿದ್ದಳು…   

ಆಗಲೇ ಮಾಲಿನಿಯ ಧ್ವನಿ ಕೇಳಿಸಿತು… ಮಾಡಿದೋರ ಪಾಪ ಆಡಿದೋರ ಬಾಯಲ್ಲಿ….. ಅಂತ .. ನಮಗ್ಯಾಕೆ ಬಿಡು… ಅಷ್ಟಕ್ಕೂ ಅವಳು ಯಾರ ಮಾತು ಕೇಳಲ್ಲ.. ತನಗೆ ಏನು ಬೇಕೋ ಅದನ್ನೇ ಅವಳು ಮಾಡೋದು..” ಎನ್ನುತ್ತಿದ್ದಾಳೆ…  “ ಆ ರಾಜನ ಸ್ನೇಹ ಮಾಡಬೇಡ ರೇಖಾ…ಅವನು ಒಳ್ಳೆಯವನಲ್ಲಾ.. ಗಂಡನ ಕೈಲಿ ಹೊಡೆತ ತಿನ್ನೋ ಹೆಂಡತಿ ಆಗಬೇಡಾ…ಅವನ ಕ್ಯಾರೆಕ್ಟರ್‌ ಕೂಡಾ ಸರಿಯಿಲ್ಲ” ಎಂದು ಬೆಳಿಗ್ಗೆ ತನಗೆ  ಹೇಳಿದ ಮಾಲಿನಿ ಇವಳೇನಾ ಎನಿಸಿ.. ಬೇಸರವಾಯಿತು.   ಮನಸಿನ ದುಗುಡವನ್ನೆಲ್ಲಾ ದೂರ ಸರಿಸಿ, ತನ್ನ ಕೆಲಸದತ್ತ ಗಮನ ಹರಿಸಿದ ರೇಖಾ ಫೈಲಿಂಗ್‌ ರೂಮಿನತ್ತ ನಡೆಯುತ್ತಾಳೆ. ‌ 

 ಅವಳ ಹಿರಿಯ ಅಧಿಕಾರಿ ರಾವ್‌ ಕೇಳಿದ್ದ ಫೈಲ್‌ ಅವರಿಗೆ ಕೊಟ್ಟು ತನ್ನ ಜಾಗಕ್ಕೆ ವಾಪಸ್ಸಾಗುತ್ತಾಳೆ.  ತನ್ನ ಕೆಲಸ ಮುಂದುವರಿಸಿದ್ದ ರೇಖಾಗೆ ತನ್ನ ಹೆಸರು ಕೂಗಿದಂತಾಗಿ ತಲೆ ಎತ್ತಿ ನೋಡುತ್ತಾಳೆ.  ರಾಜ ನಿಂತಿದ್ದಾನೆ. ಅವನ ಮುಖದಲ್ಲಿ ಕಾಣುತ್ತಿದ್ದುದು ಕ್ರೋಧವೋ ಬೇಸರವೋ ತಿಳಿಯಲಾಗಿಲಿಲ್ಲ.  ಅಲ್ಲದೇ ಅವನೊಂದಿಗೆ ಏನು ಮಾತಾಡಬೇಕೋ ಅದೂ ತೋಚದೆ ಸುಮ್ಮನೇ  ಕೂತಿದ್ದಾಗ.. ಅವನೇ ಮಾತು ಮುಂದುವರಿಸುತ್ತಾನೆ.  

 “ರೇಖಾ.. ನೀನು ಹೀಗೆ ಮಾಡ್ತೀಯಾಂತ ಅಂದುಕೊಂಡಿರಲಿಲ್ಲ. ನಾನು ಮಾಡಿದ ತಪ್ಪಾದರೂ ಏನು..? ಡಾಮಿನೇಟಿಂಗ್‌ ನನ್ನ ಹುಟ್ಟು ಗುಣ… ಒಬ್ಬನೇ ಮಗ ಅಂತ ನನ್ನ ಅಪ್ಪ ಅಮ್ಮ ಮುದ್ದಾಗಿ ಬೆಳೆಸಿದ್ದರಿಂದ ಬಂದಿದ್ದು..  ಬದಲಾವಣೆಗೆ ಕಾಲಾವಕಾಶ ಬೇಕು… ಅಷ್ಟರಲ್ಲಿ ನೀನು ದುಡುಕಿ ಹೀಗೆ ಮಾಡೋದಾ… “  ಎನ್ನುತ್ತಿದ್ದಾನೆ.   “ಎಲಾ ಇವನಾ… ಇವನದೇನೂ ತಪ್ಪೇ ಇಲ್ವಂತೇ.. ಯಾರಾದ್ರೂ ನೋಡಿದ್ರೇ ಕೇಳಿದ್ರೇ ನನ್ನದೇ ತಪ್ಪು ಅಂದುಕೋಬೇಕು…”ಎಂದು ಯೋಚಿಸುತ್ತಾ ಅವನ ಮಾತನ್ನು ಕೇಳಿಸಿಕೊಳ್ಳುತ್ತಿದ್ದಾಳೆ ರೇಖಾ.  ಆಗ ಅವಳ ಮನಃಪಟಲದಲ್ಲಿ  ಅವನ ದರ್ಪದ, ಹಠದ ಮಾತುಗಳು ಸುಳಿಯ ತೊಡಗುತ್ತದೆ…  “ಅವರ ಜೊತೆ ಸೇರಬೇಡ.. ಇವರ ಜೊತೆ ಮಾತಾಡಬೇಡ..  ನಾನು ಬೇಡಾ ಅಂದಿದ್ದೇ ಮಾಡ್ತೀಯ..  ಹೀಗಾದ್ರೆ.. ನಿನ್ನನ್ನು ಮದುವೆ ಮಾಡಿಕೊಳ್ಳುವುದಕ್ಕೆ ನಾನು ಯೋಚನೆ ಮಾಡಬೇಕಾಗುತ್ತದೆ..”  ಎಂದು ತನ್ನ ಅಭಿಪ್ರಾಯವನ್ನು ಭಾವನೆಗಳನ್ನು ನನ್ನ ಮೇಲೆ ಬಲವಂತವಾಗಿ ಹೇರುತ್ತಿದ್ದುದು ಇವನೇ ಅಲ್ಲವಾ..  

 ಇವನಂತೆ ಸಹೋದ್ಯೋಗಿಗಳಾಗಿ ಒಂದೇ ಕಡೆ ಕೆಲಸ ಮಾಡೋರ ಹತ್ತಿರ ಮಾತಾಡ್ಬೇಡಾ ಅಂದರೆ ಹೇಗೆ…  ಅದನ್ನೇ ತಪ್ಪಾಗಿ ಭಾವಿಸಿ ತನ್ನ ನಡತೆ ಬಗ್ಗೆ ಕೆಟ್ಟದಾಗಿ  ತಿಳಿದುಕೊಂಡು ವಾರಗಟ್ಟಲೇ ಮಾತು ಬಿಟ್ಟವನು ಇವನೇ ಅಲ್ಲವಾ…  ಈಗ ನೋಡಿದ್ರೆ ತನ್ನದೇನೂ ತಪ್ಪೇ ಇಲ್ಲವೆಂದು ಮಾತಾಡಿ ಮಿಕ್ಕ ಎಲ್ಲಾ ಸಹೋದ್ಯೋಗಿಗಳ ಸಹಾನುಭೂತಿ ಗಿಟ್ಟಿಸಿ ತನ್ನನ್ನು ಅವರೆಲ್ಲರ ದೃಷ್ಟಿಯಲ್ಲಿ ಕೆಟ್ಟವಳನ್ನಾಗಿ ಮಾಡುತ್ತಿದ್ದಾನೆ.   

 ಆದರೂ ಸಾವರಿಸಿಕೊಂಡು ಸಮಾಧಾನದ ಧ್ವನಿಯಲ್ಲಿ..” ನೋಡಿ ರಾಜ… ದಯವಿಟ್ಟು ಕ್ಷಮಿಸಿ…  ಏನೂ ಮಾಡಲಾಗದಷ್ಟು ಮುಂದುವರೆದಿದೆ ವಿಷಯ..  ನನ್ನ ತಂದೆಗೆ ನೋವುಂಟು ಮಾಡಲಾರೆ…  ಈಗ ಕೂಗಾಡಿ ಏನು ಪ್ರಯೋಜನವಿಲ್ಲ… ದಯವಿಟ್ಟು ನೀವು ನಮಗೆ ಶುಭ ಕೋರಿರಿ. ಇನ್ನು ಮುಂದೆ ನಾವು ಒಳ್ಳೆ ಸ್ನೇಹಿತರಂತೆ ಇರೋಣ” ಎಂದಳು. 

ಛಲ ಬಿಡದ ತ್ರಿವಿಕ್ರಮನಂತೆ ರಾಜ…  “ಈಗ್ಲೂ ಕಾಲ ಮಿಂಚಿಲ್ಲ… ಬರಿ ಎಂಗೇಜ್‌ ಮೆಂಟ್‌ ತಾನೇ ಆಗಿರೋದು… ನಿನ್ನ ತಂದೇನ ಹೇಗಾದರೂ ಮಾಡಿ ಒಪ್ಪಿಸು. ಮದುವೆ ಮಾಡಿಕೊಂಡು  ಹಾಯಾಗಿರೋಣ.. “ಎಂದು ಓಲೈಸಿದರೂ ರೇಖಾ ನಕಾರಾತ್ಮಕವಾಗಿ ತಲೆಯಾಡಿಸುತ್ತಾಳೆ.  

ಇದು ರಾಜನನ್ನು ಇನ್ನಷ್ಟು ಕೆರಳಿಸಿ… “ಆಂ ! ಇಷ್ಟೊಂದು ಧೈರ್ಯ ಬಂತಾ ನಿನಗೆ… ? ಇರಲಿ… ಅವನನ್ನು ಮದುವೆ ಮಾಡಿಕೊಂಡು ಅದು ಹೇಗೆ ಸುಖವಾಗಿ ಇರ್ತೀಯೋ ನಾನು ನೋಡ್ತೀನಿ…” ಎಂದು ದುರ್ದಾನ ತೆಗೆದುಕೊಂಡವನಂತೆ ದಡ ದಡ ಹೋಗುತ್ತಾನೆ.  ಅವನ ಈ ಬೆದರಿಕೆಯಿಂದ ರೇಖಾಳಿಗೆ ಜಂಘಾಬಲವೇ ಉಡುಗಿ ಹೋದಂತಾಯಿತು.  ಅದೂ ಅಲ್ಲದೇ ಅವಳ ಆಫೀಸಿನ ಎಲ್ಲರೂ ನೋಡುತ್ತಿರುವಂತೆ ಭಾಸವಾಯಿತು. “ ಅದೇನು ಮಾಡ್ತೀಯೋ ಮಾಡಿಕೋ ಹೋಗು..” ಎನ್ನಬೇಕು ಅಂತ ಅಂದುಕೊಂಡರೂ ಹೊಟ್ಟೆಯ ಕೋಪ ರಟ್ಟೆಗೆ ಬರಲಿಲ್ಲ. ಸ್ವರ ಗಂಟಲಲ್ಲೇ ಸಿಕ್ಕಿ ಹಾಕಿಕೊಂಡಂತಾಯಿತು.  ಏನು ಮಾಡಬೇಕು ಎಂದು ತೋಚದೆ ಸುಮ್ಮನೇ ತಲೆ ತಗ್ಗಿಸಿ ಕೂತಳು. ಆಗ ಅವಳನ್ನು ಫೋನ್‌ ಕರೆಯೊಂದು ಎಚ್ಚರಿಸಿತು.  

“ಹಲೋ ಯಾರು..? ಓ ಪ್ರಸಾದ್…‌  ಹೇಳಿ… ಏನು ಇವತ್ತು ಇಲ್ಲಿಗೆ ಬರೋಕೆ ಆಗಲ್ವಾ… ಹೌದಾ.. ಅದಕ್ಯಾಕೆ ಸಾರಿ… ಹೋಗ್ಲಿ ಬಿಡಿ… ಆಯ್ತು..”  ರಾಜನ ಘಟನೆಯಿಂದ ಕುಸಿದಿದ್ದ ರೇಖಾಗೆ  ಏನು ಮಾಡಬೇಕು… ಏನು ಮಾತಾಡಬೇಕು ಎಂದು ತೋಚಲಿಲ್ಲ. ಆಗ ಪ್ರಸಾದ್‌ ಸಂಜೆ ಆರು ಗಂಟೆಗೆ ಯುನಿಟಿ ಬಿಲ್ಡಿಂಗ್‌ ನ ಕಾಮತ್‌ ಹೋಟೆಲ್‌ ಗೆ ಬರೋಕೆ ಫೋನಿನಲ್ಲಿ ಹೇಳಿದ್ದು ನೆನಪಿಗೆ ಬಂತು. ಐದು ಗಂಟೆಯಾಗುವುದನ್ನೇ ಕಾದಿದ್ದು ಹೊರಟಳು. 

“ಏನಮ್ಮಾ ಏಳು ಮಲ್ಲಿಗೆ ತೂಕದ ರಾಜಕುಮಾರಿ…  ಎಲ್ಲಿ ನಿನ್ನ ರಾಜಕುಮಾರ… ಇಲ್ಲೆಲ್ಲೂ ಬಿಳಿ ಕುದುರೇನೇ ಕಾಣಿಸ್ತಾ ಇಲ್ವಲ್ಲಾ… “ ಗೀತಾ ಛೇಡಿಸುತ್ತಾ ಬಂದಳು.  “ಇಲ್ಲ ಕಣೇ… ಅವರಿಗೆ ಯಾವುದೋ ಅರ್ಜೆಂಟ್‌ ಕೆಲಸ ಬಂತಂತೆ..  ಬರೋಕೆ ಆಗಲ್ಲಾ ಅಂತ ಈಗ ತಾನೆ ಫೋನು ಮಾಡಿದ್ರು… ಎನ್ನುತ್ತಾಳೆ..   ಆಗ ಗೀತಾ  ಸ್ವಲ್ಪ ಗಂಭೀರವಾಗಿ… “ಯಾಕೆ … ಈ ರಾಜ ಏನಾದ್ರೂ…. ಆಗ್ಲೇ ತುಂಬಾ  ಜೋರಾಗಿ ಕೂಗಾಡ್ತದ್ದ ಹಾಗಿತ್ತು… ಎನ್ನುತ್ತಾಳೆ.  

 “ಹಾಗೇನಿಲ್ವೇ…ಅವರು ನನ್ನನ್ನೇ ಯುನಿಟಿ ಬಿಲ್ಡಿಂಗ್‌ ಕಾಮತ್‌ ಹೋಟೆಲ್‌ ಗೆ ಬರೋಕೆ ಹೇಳಿದ್ದಾರೆ… ನೀನೂ ಬಾರೆ…  ಪರಿಚಯ ಮಾಡಿ ಕೊಡ್ತೀನಿ… “ ಎಂದಾಗ.. ಗೀತಾ “ನಾನ್ಯಾಕಮ್ಮ ನಿಮ್ಮ ಮಧ್ಯೆ… ಶಿವ ಪೂಜೇಲಿ ಕರಡಿ ಬಿಟ್ಟ ಹಾಗೆ… ಏನೋ ಹೋಗ್ಲಿ ಬಿಡು.. ರೆಕ್ಕೆ ಇರೋ ಬಿಳಿ ಕುದುರೆ ಮೇಲೆ ಬರೋ ನಿನ್ನ ರಾಜಕುಮಾರನ್ನ ನೋಡೋ ಭಾಗ್ಯ ಇವತ್ತು ನನಗಿಲ್ಲಾಂತ ಸುಮ್ನಾಗ್ತೀನಿ… ಈಗ ನೀನು ಹೋಗು.. ಲೇಟಾಗತ್ತೆ…” ಎಂದು ಗೀತಾ ಹೊರಟಾಗ, ರೇಖಾಳೂ ಬಸ್‌ ಸ್ಟಾಪಿನತ್ತ ಹೊರಡುತ್ತಾಳೆ.  

ಹೋಟೆಲ್‌ ನಲ್ಲಿ ರೇಖಾಳ ಸೊರಗಿದ, ಹೆದರಿಕೆಯಿಂದ ಕಳೆಗುಂದಿದ ಮುಖ ಕಂಡು ಅವಳ ಆರೋಗ್ಯದ ಬಗ್ಗೆ ವಿಚಾರಿಸಿದಾಗ ರೇಖಾಳಿಗೆ ಅವನ ಕಳಕಳಿಗೆ ಹೆಮ್ಮೆ ಎನಿಸಿತು.  ತಿಂಡಿ ಏನು ಬೇಕು ಎಂಬ ಅವನ ವಿಚಾರಣೆಗೆ ಬರಿ ಕಾಫಿ ಸಾಕು ಎಂಬ ಉತ್ತರ ಬಂದಾಗ… “ಏನು ಬರಿಯ ಕಾಫಿ ಕುಡಿಯೋಕೆ ಒಂದು ಗಂಟೆ ಇಲ್ಲಿ ಕೂತಿದ್ರೆ  ಹೋಟೆಲ್‌ ನವರು ನಮ್ಮ ಕುತ್ತಿಗೆ ಹಿಡಿದು ಆಚೆ ಹಾಕ್ತಾರೆ” ಎಂದು ಹಾಸ್ಯ ಮಾಡುತ್ತಾನೆ. ಅವನ ಹಾಸ್ಯಕ್ಕೆ ಪ್ರತಿಸ್ಪಂದಿಸುತ್ತಾ ರೇಖಾ ನಗುತ್ತಾಳೆ.  “ ಪರವಾಗಿಲ್ವೇ.. ಏನೋ ಅಂತಿದ್ದೆ.. ನಾನು ಮಾಡಿದ ಈ ಸಣ್ಣ ಹಾಸ್ಯ ಅಪಹಾಸ್ಯವಾಗದೆ ಒಬ್ಬ ಹುಡುಗಿಯನ್ನು ನಗಸಿತಲ್ಲಾ.. ಅದಕ್ಕೋಸ್ಕರವಾದರೂ ಐ ಮಸ್ಟ್‌ ಸೆಲೆಬ್ರೇಟ್‌ ದಿಸ್…‌ “ ಎನ್ನುತ್ತಾ ಬೇರರ್‌ ನ ಕರೆದು ದೊಡ್ಡ ತಿಂಡಿಯ ಪಟ್ಟಿಯನ್ನೇ ಕೊಡುತ್ತಾನೆ.  

 ರೇಖಾ ಮನೆಗೆ ವಾಪಸ್ಸು ಬಂದಾಗ ರಾತ್ರಿ 8.30 ಆಗಿತ್ತು.  ರೇಖಾಳ ತಾಯಿ ಬಾಗಿಲಲ್ಲೇ ಕಾದು ನಿಂತಿದ್ದರು..:ಯಾಕೇ ಇಷ್ಟೊತ್ತು ಮಾಡಿದೆ…. ಕಾದು ಕಾದು ನಂಗಂತೂ ಉಸಿರೇ ನಿಂತು ಹೋದ ಹಾಗೆ ಆಗಿತ್ತು…” ಎನ್ನುತ್ತಾರೆ. ಯಾವ ಪ್ರತಿಕ್ರಿಯೆಯೂ ಇಲ್ಲದೇ ಮೌನವಾಗಿದ್ದ ರೇಖಾಳನ್ನು ನೋಡಿ.” ಏನಾಗಿದೆಯೇ ನಿನಗೆ… ನಾನು ವಟ ವಟ ಅಂತಾನೇ ಇದ್ದೀನಿ… ನೀನು ನೋಡಿದ್ರೆ ಒಳ್ಳೇ ಶಿಲೆ ಥರಾ ನಿಂತಿದ್ದೀಯಾ” ಎನ್ನುತ್ತಾರೆ.. “ಮೊನ್ನೆ ಎಂಗೇಂಜ್ ಮೆಂಟಲ್ಲಿ ನೀನು ಎಷ್ಟು ಮುದ್ದಾಗಿ ಕಾಣಿಸುತ್ತಾ ಇದ್ದ. ನನ್ನ ಕಣ್ಣೇ  ದೃಷ್ಟಿ ಆಗಿರಬೇಕು.. ಬಾ ಉಪ್ಪು ತೆಗೆದು ಹಾಕ್ತೀನಿ” ಎನ್ನುತ್ತಾ ಒಳಗೆ ಕರೆದುಕೊಂಡು ಹೋದರು.  

 ಬೆಳಿಗ್ಗೆ ಬಸ್‌ ಸ್ಟಾಪಿನಲ್ಲಿ ಗೀತಾ ಸಿಕ್ಕಿ .. “ ಎನಮ್ಮಾ ರಾಜಕುಮಾರಿ.. ಹೇಗಿತ್ತು ನಿನ್ನ ರಾಜಕುಮಾರನ ಆತಿಥ್ಯ “ ಎಂದು ರೇಗಿಸುತ್ತಾಳೆ. ಅದಕ್ಕೆ ರೇಖಾ… ಅಂಥಾದ್ದೇನು ಇಲ್ವೇ…ನನಗೆ ಮೂಡ್‌ ಸರಿಯಿರಲಿಲ್ಲ…”. ಇದೊಳ್ಳೆ ತಮಾಷೆ ಕಣೇ… ರಾಜಕುಮಾರ ಬಿಳಿ ಕುದುರೆ ಮೇಲೆ ಬಂದು ಹೊರಗಡೆ ಕರೆದುಕೊಂಡು ಹೋದರೆ… ಮೂಡ್‌ ಇರಲಿಲ್ಲವಂತೆ.. ಅಂಥಾದ್ದು ಏನಾಯ್ತು..” ಎಂದು ಕೇಳುತ್ತಾಳೆ.  

 ಅದಕ್ಕೆ ರೇಖಾ.. ನಿನ್ನೆ ಮಧ್ಯಾಹ್ನ ರಾಜ ಆಫೀಸಿಗೆ ಬಂದಿದ್ನಲ್ಲಾ… “ ಎನ್ನುತ್ತಿದ್ದಂತೆ…  ಗೀತಾ : ಅದೇ ಏನೋ ತುಂಬಾ ಕೂಗಾಡ್ತಾ ಇದ್ದ ಹಾಗಿತ್ತು.. “ ಎನ್ನುತ್ತಾಳೆ.   ಅವನು ಕೂಗಾಡಿದ್ದುದು ಹಾಗೂ ಅದು ಹೇಗೆ ಮುದುವೆ ಮಾಡಿಕೊಂಡು ಸುಖವಾಗಿರ್ತೀಯಾ ಎಂದಿದ್ದು ಎಲ್ಲವನ್ನೂ ಗೀತಾಳಿಗೆ ತಿಳಿಸಿ… : ಅವನೇನಾದ್ರೂ ತೊಂದರೆ ಮಾಡಿದ್ರೆ ಏನು ಗತಿ..” ಎನ್ನುತ್ತಾಳೆ.  

 “ ಅವನಿಗೆ ಏನು ಬಂತೇ ರೋಗ… ಯಾಕೇಂತ ಅವನಿಗೆ ಅಷ್ಟೊಂದು ಹಠ.. ಅಕಸ್ಮಾತ್‌ ಅವನಿಗೆ ಮದುವೆ ಆಗ್ತೀನಿ ಅಂತ ಏನಾದ್ರೂ ಹೇಳಿ ಆಸೆ ಹುಟ್ಟಿಸಿದ್ಯಾ… ಇಲ್ಲಾ ತಾನೆ… ಹೋಗ್ಲಿ ಬಿಡು…ಎಲ್ಲಾ ವಿಷಯ ತಿಳಿಸಿ ಮನಸ್ಸು ಹಗುರ ಮಾಡಿಕೋ.. ಬೊಗಳೋ ನಾಯಿ ಕಚ್ಚಲ್ಲಾ ಅಲ್ವಾ… ಏನೂ ಅಗಲ್ಲ.. ಧೈರ್ಯವಾಗಿರು.. “ ಎಂದು ಗೀತಾ ಸಮಾಧಾನ ಪಡಿಸುತ್ತಾಳೆ.  ಆಗ ರೇಖಾ  ಇವತ್ತನ ಈ ಸ್ಥಿತಿಗೆ ಕಾರಣವಾಗಿದ್ದ ಸಂದರ್ಭವನ್ನು ವಿವರಿಸುತ್ತಾಳೆ. 

 “ನಿನಗೆ ಗೊತ್ತಿರೋ ಹಾಗೆ… ಈ ಹೊಸದಾಗಿ ಈ ಆಫೀಸಿಗೆ ಕೆಲಸಕ್ಕೇ ನಾನು ಸೇರಿದಾಗ ರಾಜನ ಜೊತೆ ಕೆಲಸ ಮಾಡಬೇಕಾಯಿತು. ಅವನೋ ಹಳಬ… ಕೆಲಸ ಕಲಿಯಬೇಕು.. ಅವನ ಜೊತೆ ಸ್ವಲ್ಪ ಸಲಿಗೆಯಿಂದಲೇ ಇರಬೇಕಾಯಿತು.  ಅವನು ಅದನ್ನು ಏನು ಅರ್ಥ ಮಾಡಿಕೊಂಡನೋ.. ಒಂದು ದಿನ ಬಂದು.. “ರೇಖಾ ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತಿದ್ದೇನೆ… ನಿಮ್ಮ ಅಭಿಪ್ರಾಯನ ನಾಳೇನೇ ಹೇಳಬೇಕು..” ಎಂದು ಆರ್ಡರ್‌ ಮಾಡುವಂತೆ ಹೇಳಿದ..  

 ನನಗೆ ಅವನೊಂದಿಗೆ  ಸಹೋದ್ಯೋಗಿ ಅಂತ ಸಲಿಗೆ ಇತ್ತೇ ಹೊರತೂ ಬೇರೆ ಯಾವುದೇ ಭಾವನೆ ಇರಲಿಲ್ಲ.  ಅವನೊಂದಿಗೆ ಕೆಲಸ ಮಾಡಿದ್ದರಿಂದ.. ಅವನ ಒರಟುತನ ತಿಳಿದಿತ್ತು.  ತನಗೇನಾದ್ರೂ ಬೇಕು ಅಂದ್ರೆ ಅದನ್ನು ಪಡೆಯೋದಕ್ಕೆ ಯಾವ ಮಟ್ಟಕ್ಕೂ ಇಳಿಯೋಕೆ ಹೇಸದಂತಹವನು ಅವನು… ಬೇಡಾ ಅಂದ್ರೆ ನನಗೇನಾದ್ರೂ ಮಾಡಬಹುದು.. ಅಥವಾ ಅವನೇ ಆತ್ಮಹತ್ಯೆ ಅಂತ ಏನಾದ್ರೂ ಮಾಡಿಕೊಳ್ಳಬಹುದು… ಅಂತ ಹೆದರಿಕೆಯಿಂದ ಅವನನ್ನು ಎದುರಿಸಲಾಗದೆ… 2-3 ದಿನ ಆಫೀಸಿಗೆ ಬರಲೇ ಇಲ್ಲ.  

 ಒಂದಿನ ಸಾಯಂಕಾಲ ಅವನು ನಮ್ಮ ಮನೆಗೆ ಬಂದು ಬಿಡೋದಾ… ನನಗಂತೂ ಏನೂ ಮಾಡೋಕೂ ತೋಚಲಿಲ್ಲ.  ಅವನೇ.. “ಯಾಕ್ರೀ ಆಫೀಸಿಗೆ ಬರ್ತಾ ಇಲ್ಲಾ” ಎಂದು ಕೇಳಿದಕ್ಕೆ.. ನಮ್ಮ ತಾಯಿ ಅವಳಿಗೆ ತಲೆನೋವಿತ್ತು ಅದಕ್ಕೆ ಬರಲಿಲ್ಲ ಅಂತ ಉತ್ತರಿಸಿದರು.  ಅವನಿಗೆ ಕಾಫಿ ತರುತ್ತೇನೆಂದು ಒಳಗೆ ಹೋದರು.. ನಮ್ಮ ತಂದೆನೂ ಮನೇಲಿ ಇರಲಿಲ್ಲ. ಈ ಸಂದರ್ಭಕ್ಕೆ ಕಾಯುತ್ತಿರುವನಂತೆ… “ ನೋಡಿ ರೇಖಾ..  ನಿಮ್ಮನ್ನೇಂತಾ ಅಲ್ಲಾ… ಯಾರಾದ್ರೂ ಮನಸ್ಸಿಗೆ  ಒಪ್ಪಿಗೆ ಆದ್ರೇ ಪ್ರೀತಿಸೋ ಅಧಿಕಾರ ನನಗಿದೆ. ಹಾಗೆಯೇ ನಿಮಗೆ ಒಪ್ಪಿಕೊಳ್ಳುವ ಅಥವಾ ನಿರಾಕರಿಸುವ ಅಧಿಕಾರ ಇದೆ.. ಅದನ್ನು ಮಾಡೋದು ಬಿಟ್ಟು ಹೇಡಿ ತರಹಾ..ಮನೇಲಿ ಎಷ್ಟು ದಿನಾಂತ ಇರ್ತೀರಾ..” ಎಂದು  ಬಡಬಡಿಸಿದ.  ನನಗೆ ಏನೂ ಮಾತಾಡೋಕೆ ಅವಕಾಶ ಕೊಡದೆ.. “ ನೋಡಿ ರೇಖಾ.. ನೀವು ನನಗೆ ಇಷ್ಟ ಆಗಿದ್ದೀರಾ…  ನೀವು ಏನೂ ಹೇಳದಿದ್ದರೂ ನಿಮ್ಮ ಮೌನಾನೇ ಒಪ್ಪಿಗೆ ಅಂತ ತಿಳಿದುಕೊಳ್ಳುತ್ತೀನಿ..”ಎಂದವನೇ.. ಯಾವುದೇ ಉತ್ತರಕ್ಕೆ ಕಾಯದೇ ಹೊರಟುಹೋದ.  

 ಇದ್ಯಾವುದರ ಅರಿವಿಲ್ಲದ ಅವಳ ತಾಯಿ “ ಅಯ್ಯೋ ಅವರು ಹೊರಟುಹೋದ್ರಾ, ಕಾಫಿ ತರೋಷ್ಟರಲ್ಲಿ” ಎಂದು ಪೇಚಾಡಿಕೊಳ್ಳುತ್ತಾರೆ…ರೇಖಾ ತನ್ನ ಮಾತು ಮುಂದುವರೆಸುತ್ತಾ..  ತನಗೆ ಒಪ್ಪಿಗೆ ಎಂದು ಭಾವಿಸಿ ಅವಳನ್ನು ಸಿನಿಮಾಕ್ಕೆ, ಹೋಟೆಲ್‌ ಗೆ ಕರೆಯುತ್ತಿರುತ್ತಾನೆ. ಅವನ ಅತಿರೇಕದ ವರ್ತನೆಯ ಅರಿವಿದ್ದ ರೇಖಾ ಅದಕ್ಕೆ ಹೆದರಿ ಒಪ್ಪಿಕೊಳ್ಳಲೂ ಆಗದೆ, ನಿರಾಕರಿಸಲೂ ಆಗದೆ ಒದ್ದಾಳುತ್ತಾಳೆ. ಕೆಲವೊಮ್ಮೆ ಅಪ್ಪನದೋ, ಅಮ್ಮನದೋ ಅನಾರೋಗ್ಯದ ಕಾರಣ, ಇನ್ನು ಕೆಲವೊಮ್ಮೆ ಬಂಧುಗಳ ಮನೆಯ ಕಾರ್ಯಕ್ರಮದ ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಾಳೆ.  ಆದರೂ ಒಮ್ಮೆ ಅಥವಾ ಎರಡು ಸರ್ತಿ ಹೋಗಲೇ ಬೇಕಾದ ಅನಿವಾರ್ಯತೆ ಬರುತ್ತದೆ. ಅಷ್ಟಕ್ಕೇ ಅವನು ಈಗಲೇ ಅವಳ ಗಂಡನೆಂಬಂತೆ ..ಅವರೊಂದಿಗೆ ಮಾತಾಡಬೇಡ, ಇವರೊಂದಿಗೆ ಸೇರಬೇಡ, ಈ ಸೀರೇನೇ ಉಡು, ಆ ಡ್ರೆಸ್‌ ಹಾಕ್ಬೇಡಾ ಅಂತೆಲ್ಲಾ  ತನ್ನ ದರ್ಪ ದಬ್ಬಾಳಿಕೆ ತೋರುತ್ತಾನೆ.  ಕೆಲವೊಮ್ಮೆ ನಿರಾಕರಿಸಿದ್ದಕ್ಕೆ ಕೋಪ ಮಾಡಿಕೊಂಡು, ಕೂಗಾಡಿ, ತನ್ನ ಇಂಪೋರ್ಟೆಡ್‌ ವಾಚ್‌ ಬಿಸಾಕಿ, ತನ್ನ ಸನ್‌ ಗ್ಲಾಸ್‌ ಎಸೆಯುತ್ತಾನೆ.  

 ಹೀಗೆ ಇರಬೇಕಾದರೆ ಒಂದು ದಿನ ನಮ್ಮ ಮನೆಗೆ ಬಂದ.. ಎಂದು ಹೇಳುವಷ್ಟರಲ್ಲಿ, .. ಓ ರೇಖಾ, ಗೀತಾ.. ನಿಮಗೆ ಆಗಲೇ ಸೀಟ್‌ ಸಿಕ್ತಾ, ನನಗೆ ಈಗ ಸಿಕ್ತಾ ಇದೆ ನೋಡಿ… ಎಂಬ ಧ್ವನಿ ಬಂದ ಕಡೆಗೆ ತಿರುಗಿ ನೋಡಿದರೆ ಸುಧಾ… ಅವಳ ಮುಂದೆ  ತನ್ನ ಕಥೆ ಮುಂದುವರೆಸುವ ಇಚ್ಛೆ ಇಲ್ಲದೆ ಅಲ್ಲಿಗೆ ನಿಲ್ಲಿಸುತ್ತಾಳೆ ರೇಖಾ.  

 ಗೀತಾಳ ಬಳಿ ತನ್ನ ದುಃಖವನ್ನೆಲ್ಲಾ ತೋಡಿಕೊಂಡಿದ್ದರೂ, ಮನಸ್ಸಿನ ದುಗುಡ, ಭಾರ ಇನ್ನೂ ಕಡಿಮೆಯಾಗಿರಲಿಲ್ಲ.   ಇಷ್ಟೇ ಸಾಲದು ಎಂಬಂತೆ, ಆಫೀಸಿಗೆ ಕಾಲಿಡುತ್ತದ್ದಂತೆ, ರಾಜನ ದರ್ಶನವಾಯಿತು. ಪ್ಯೂನ್‌ ಮಂಜು ಜೊತೆ ಮಾತಾಡುತ್ತಿದ್ದ.  ಅವನ ಎದುರಿಗೆ  ಒಳಗೆ ಹೋಗಲಾಗದೆ, ನಿಂತಲ್ಲೇ ಚಡಪಡಿಸುತ್ತಿದ್ದಳು.  ಗೀತಾ ಪದೇ ಪದೇ .. ನೀನು ತುಂಬಾ ಪುಕ್ಕಲಿ ಕಣೇ… ಎಲ್ಲಾ ನೀನೇ ಊಹೆ ಮಾಡಿಕೊಂಡು ಒದ್ದಾಡ್ತೀಯಾ.. ಅದ್ಯಾವಾಗ ನಿನಗೆ ಬುದ್ಧಿ ಬರತ್ತೋ ಆ ದೇವರೇ ಬಲ್ಲ.. “ ಎನ್ನುತ್ತಿದ್ದುದು ರೇಖಾಳ ಮನಃಪಟಲದಲ್ಲಿ ಸುಳಿದಾಡಿತು.  “ ಓ ! ಅದಾ.. ಅದಕ್ಕೆ ಏನು ಮಾಡಬೇಕು ಅಂತ ನನಗೆ ಚೆನ್ನಾಗಿ ಗೊತ್ತು…” ಎಂಬ ರಾಜನ ಧ್ವನಿ ಕಿವಿಗೆ ಅಪ್ಪಳಿಸುತ್ತಿದ್ದಂತೆ.. ರೇಖಾಳಿಗೆ ಮೂರ್ಚೆ ಬರುವಂತಾಯಿತು..  

 ರಾಜ ನನ್ನ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧಾರ ಮಾಡಿದ್ದಾನೆ. ಏನಪ್ಪಾ ಗತಿ…!! ಬೇರಾವ ಕಾರಣಕ್ಕೋ ಮದುವೆ ನಿಂತು ಹೋದರೆ ಪರವಾಗಿಲ್ಲ…  ಆದರೆ.. ಅಪವಾದ…!!!  ದೇವರೇ ಆ ಸ್ಥಿತಿ ಬರದಿರಲಿ ಎಂದು ಮನಸ್ಸಿನಲ್ಲೇ ಚಿಂತಿಸಿ ಚೀರಿದಳು…  ನಂತರ ಇನ್ನೂ ಸ್ವಲ್ಪ ಸಹೋದ್ಯೋಗಿಗಳು ಬರುತ್ತಿದ್ದಂತೆ, ಅವರೊಂದಿಗೆ ತಾನೂ ಒಳಗೆ ಹೋಗುತ್ತಾಳೆ.  ಅಲ್ಲಿ ಇವಳ ಸೊರಗಿದ ಮುಖ ನೋಡಿದ ಅವಳ ಸೀನಿಯರ್‌ ಮೇನೇಜರ್‌ ರಾವ..  ಯಾಕೆ ಒಂಥರಾ ಇದ್ದೀರಿ. ಹುಷಾರಿಲ್ಲದಿದ್ರೆ, ರಜಾ ಹಾಕಿ ಮನೆಗೆ ಹೋಗಿ ರೆಸ್ಟ್‌ ತಗೊಳ್ಳಿ… ಅಂತಾರೆ.  ತಾನು ಹುಷಾರಾಗಿರುವುದಾಗಿಯೂ ಸ್ವಲ್ಪ ತಲೆನೋವು ಮಾತ್ರ ಇದೆ ಎಂದು ಅವರಿಗೆ ಹೇಳಿ ತನ್ನಸೀಟಿನಲ್ಲಿ ಕುಳಿತುಕೊಳ್ಳುತ್ತಾಳೆ.  ರೇಖಾ ಯಾಕೋ ತಲೆ ಎತ್ತಿ ನೋಡಿದಾಗ ದೂರದಲ್ಲಿ ರಾಜ ಪೀಟರ್‌ ಜೊತೆ ಮಾತಾಡುತ್ತದ್ದುದು ಕಾಣಿಸಿತು.  ಅದು ತನ್ನ ಬಗ್ಗೆಯೇ ಇರಬಹುದು ಎಂದು ಯೋಚಿಸುತ್ತಿರುತ್ತಾಳೆ.  ಲಂಚ್‌ ಅವರ್ ನಲ್ಲಿ ಗೀತಾ ಬಂದು ಕೂಗಿದಾಗಿಲೇ ಎಚ್ಚರವಾದದ್ದು.  

 ರೇಖಾಳ ಸೊರಗಿದ ಮುಖ, ಗಾಬರಿಯ ಕಣ್ಣುಗಳನ್ನು ನೋಡಿದ ಗೀತಾ…ಯಾಕೆ ರೇಖಾ.. ಏನಾಗಿದೆ ನಿನಗೆ… ಯಾವಾಗ ನೋಡಿದ್ರೂ ಆಕಾಶಾನೇ ತಲೆ ಮೇಲೆ ಬಿದ್ದೋಳ ಹಾಗೆ ಇರ್ತೀಯಾ…ಬಾ ಸ್ವಲ್ಪ ಹೊರಗೆ ಹೋಗಿ ಸುತ್ತಾಡಿಕೊಂಡು ಬರೋಣ.. ಎಂದು ಕೇಳುತ್ತಾಳೆ. “ನಾನೆಲ್ಲೂ ಬರಲ್ಲಾ..  ನನಗೆ ಈ ಜೀವನಾನೇ ಸಾಕಾಗಿ ಹೋಗಿದೆ.. ಎಲ್ಲಾದ್ರೂ ಹೋಗಿ ಆತ್ಮಹತ್ಯೆ ಮಾಡಿಕೊಳ್ಳೋಣ ಅಂತ ಅನಿಸ್ತಿದೆ…”  ಎನ್ನುತ್ತಾಳೆ  

 “ಇದೊಳ್ಳೇ ಚೆನ್ನಾಗಿದೆ ಕಣೇ… ಮದುವೆ ಗೊತ್ತಾಗಿದೆ… ರೆಕ್ಕೆ ಇರೋ ಬಿಳಿ ಕುದುರೆ ಮೇಲೋ, ಹೀರೋ ಹೊಂಡಾ ಮೋಟಾರ್‌ ಸೈಕಲ್‌ ಮೇಲೋ ಬರೋ ರಾಜಕುಮಾರನ ಕನಸು ಕಾಣೋದು ಬಿಟ್ಟು ಆತ್ಮಹತ್ಯೆ ಮಾಡಿಕೊಳ್ತಾಳಂತೆ..  ನಿನಗೆ ಅದೇ ಬೇಕೂಂದ್ರೆ ಹೇಳು..ನಾನೇ ತಂದು ಕೊಡ್ತೀನಿ… ಹಗ್ಗ, ಸೀಮೆ ಎಣ್ಣೆ….  ಹುಚ್ಚಿ…ಸುಮ್ಮನೇ ಬಾಯಿ ಮುಚ್ಚಿಕೊಂಡು ಈಗ ನನ್ನ ಜೊತೆ ಬಾ…ಹಾಗೆ ಸುತ್ತಾಡಿಕೊಂಡು ಬರೋಣ.. ನಾನೇ ಐಸ್‌ ಕ್ರೀಮ್‌ ಕೊಡಿಸ್ತೀನಿ.. ಅದನ್ನು ತಿಂದು ಸ್ವಲ್ಪ ತಣ್ಣಗೆ ಇರು..” ಬಲವಂತದಿಂದ ಗೀತಾ ರೇಖಾಳನ್ನು ಕರೆದೊಯ್ಯುತ್ತಾಳೆ.  

 ದಾರಿಯಲ್ಲಿ… ರೇಖಾ… ಗೀತಾ… ಬೆಳಿಗ್ಗೆ… ರಾಜ… ಆ ಪ್ಯೂನ್‌ ಮಂಜು ಹತ್ತಿರ ಏನಂತಿದ್ದಾ ಗೊತ್ತಾ…. “ ಎಂದು ತಾನು ಕೇಳಿಸಿಕೊಂಡಿದ್ದನ್ನು ಅವಳಿಗೆ ಹೇಳಿ… ನನಗ್ಯಾಕೋ ಭಯ ಆಗ್ತಿದೆ ಕಣೇ…” ಎನ್ನುತ್ತಾಳೆ.. ಅದಕ್ಕೆ ಗೀತಾ ಸ್ವಲ್ಪ ಕೋಪದಿಂದ… ಅಮ್ಮ ತಾಯಿ… ಸಾಕೇ… ಒಳ್ಳೇ ಗೋಳು ಸಿನಿಮಾ ಹೀರೋಯಿನ್‌ ಥರಾ ಮೂರು ಹೊತ್ತೂ ಗೋಳಾಡ್ತಾ ಇರ್ತಿಯಲ್ಲೇ…  ಹೀಗಿದ್ರೇ ಹಗ್ಗ ಕೂಡಾ ಹಾವಿನ ಥರಾನೇ ಕಾಣತ್ತೆ. ಸ್ವಲ್ಪ ಧೈರ್ಯದಿಂದ ಇರಬೇಕು ಕಣೇ.. ಏನು ಯೋಚನೆ ಮಾಡಬೇಕು.. ನಾನಂತೂ ನಿನ್ನ ಸಹಾಯಕ್ಕೆ ಇರ್ತೀನಿ.. ಆಯ್ತಾ..” ಎಂದು ಸಮಾಧಾನಗೊಳಿಸುತ್ತಾಳೆ.  

 ಆಗ ರೇಖಾಳಿಗೆ ಸ್ವಲ್ಪ ಧೈರ್ಯ ಬಂದು ಲವಲವಿಕೆಯಿಂದ ತನ್ನ ಕೆಲಸದಲ್ಲಿ ತೊಡಗಿಕೊಂಡಿರುತ್ತಾಳೆ… ಆಗ ಧುತ್ತೇಂದು ರಾಜ ಬಂದು…  ಏನ್ರೀ ರೇಖಾ.. ನಿಮ್ಮ ನಿರ್ಧಾರದಲ್ಲಿ ಏನಾದ್ರೂ ಬದಲಾವಣೆ ಇದೆಯೋ ಹೇಗೆ…” ಎಂದು ಕೇಳುತ್ತಾನೆ. ಅದಕ್ಕೆ ರೇಖಾ ತಡವರಿಸುತ್ತಾ… “ಏನು ಹೇಳೋಕೂ ತೋಚ್ತಾ ಇಲ್ಲ” ಎನ್ನುತ್ತಾಳೆ… ಅದಕ್ಕೆ ರಾಜ… ಅಯ್ಯೋ ಪಾಪ… ಏನೂ ತೋಚ್ತಾ ಇಲ್ವಾ… ಏನೂ ಯೋಚನೆ ಮಾಡಬೇಡಿ… ಎಲ್ಲಾ ತೋಚತ್ತೆ… ಗೊತ್ತೂ ಆಗತ್ತೆ… “ ಎಂದು ಒಗಟಿನಂತೆ ಹೇಳು ದುರ್ದಾನ ತೆಗೆದುಕೊಂಡವನಂತೆ ಹೊರಟುಹೋಗುತ್ತಾನೆ.  ರಾಜನ ಈ ಮಾತಿನಿಂದ ರೇಖಾಳಿಗೆ ದಿಕ್ಕೇ ತೋಚದಂತಾಗಿ.. ಯಾವಾಗ ಆಫೀಸು ಮುಗಿಯುತ್ತದೆಯೋ… ಯಾವಾಗ ಪ್ರಸಾದ್‌ ಭೇಟಿಯಾಗಿ ಎಲ್ಲಾ ವಿಷಯ ತಿಳಿಯುತ್ತೇನೆಯೋ… ಎಂಬ ಚಡಪಡಿಕೆ ಪ್ರಾರಂಭವಾಗುತ್ತದೆ.  

 ಅವಳ ಈ ಒದ್ದಾಟಕ್ಕೆ ತುಪ್ಪ ಸುರಿಯುವಂತೆ…  ಹಲೋ ಇದಾರಾ… ಸ್ವಲ್ಪ ಕರೀತೀರಾ…” ಎಂಬ ರಾಜನ ಧ್ವನಿ ಕೇಳಿಸಿ ತಲೆ ಎತ್ತಿ ನೋಡುತ್ತಾಳೆ…  ಅವಳ ಸೀಟಿನ ಹತ್ತಿರದ ಇನ್ನೊಂದು ಫೋನಿನಲ್ಲಿ ರಾಜ ಮಾತಾಡುತ್ತಿರುತ್ತಾನೆ…  ಅದು ಅಕಸ್ಮಾತ್‌ ಪ್ರಸಾದ್‌ ಆಗಿದ್ದರೆ….  ಮೈಯ್ಯೆಲ್ಲಾ ಬೆವರತೊಡಗಿತು…  “ ಓ… ಇಲ್ವಾ… ಯಾವಾಗ ಬರ್ತಾರೆ…. ಓ… ಬಂದ್ರಾ… ನಮಸ್ಕಾರ ಸಾರ್…‌ ನಾನು ರಾಜಶೇಖರ… ನಿನ್ನೆ ನಿಮ್ಮನ್ನು ಭೇಟಿಯಾಗಿದ್ದೆ… ಜ್ಞಾಪಕಕ್ಕೆ ಬಂತಾ… ಇವತ್ತು ಸಾಯಂಕಾಲ ಸಿಕ್ತೀರಾ….   ಸರಿ ಸಾರ್..‌ ನಮಸ್ಕಾರ…. “ 

 ಈಗ ರೇಖಾಗೆ ವಿಷಯದ ಸಂಪೂರ್ಣ ಅರಿವಾಯಿತು…. ಸಾಯಂಕಾಲ ಹೋಗ್ತಾನೆ… ಇರೋದು.. ಇಲ್ಲದಿರೋದು… ಎಲ್ಲಾ ಪ್ರಸಾದ್‌ ಗೆ ಹೇಳ್ತಾನೆ.. ಆಮೇಲೆ… ಇನ್ನೇನು.. ಎಲ್ಲಾ ಗೊತ್ತಿರೋದೇ… ಸಿನಿಮಾಗಳಲ್ಲಿ ನೋಡಲ್ವಾ…   ಅಕಸ್ಮಾತ್.‌ ಗಲಾಟೆ ಏನಾದ್ರೂ ಆಗಿ.. ಮದುವೆ ನಿಂತು ಹೋಗಿ… ಅಪ್ಪಂಗೆ ಏನಾದ್ರೂ ಆದ್ರೆ…  ತಾನು ಈ ಅಪವಾದ ಹೊತ್ಕೊಂಡು ಹೇಗೆ ಇರೋದು… …ಇಷ್ಟೆಲ್ಲಾ ಆಗಬೇಕಾ…. ನೋ… ನೋ… ಅದಕ್ಕೆ ಮುಂಚೇನೇ.. ಏನಾದ್ರೂ ಮಾಡಬೇಕು…  

 “ಏನ್ರೀ ರೇಖಾ… ನೋ… ನೋ… ಅಂತಾ ಇದೀರಾ.. ಫೋನ್..‌ ನಿಮಗೆ… ಅಟಂಡ್‌ ಮಾಡಲ್ವಾ… ನೋಡಿ ಕರೀತಿದಾರೆ ನೋಡಿ” ಎಂದು ಪಕ್ಕದ ಸೀಟಿನ ರವಿ ಎಚ್ಚರಿಸಿದಾಗ… ರೇಖಾ ಅತ್ತ ಹೆಜ್ಜೆ ಹಾಕುತ್ತಾಳೆ. ʼಹಲೋ ರೇಖಾ ಹಿಯರ…  ಗೊತ್ತಾಯ್ತು ಹೇಳಿ… ಇಲ್ಲ.. ಹುಷಾರಾಗಿದ್ದೀನಿ… OK̤̤   ಹೌದಾ… ಬರ್ತೀನಿ… “ ಎಂದು ಫೋನ್‌ ಇಡುತ್ತಾಳೆ. .. ನಿನ್ನೆ ತಾನೇ  ಭೇಟಿ ಆಗಿದ್ದೀವಿ.. ಪ್ರಸಾದ್‌ ನಿನ್ನೆ ಎಷ್ಟು ಜಾಲಿಯಾಗಿದ್ದರು… ಎಷ್ಟೊಂದು ಸ್ವೀಟ್‌ ತಿಂಡಿ ಎಲ್ಲಾ ತರಿಸಿದ್ದರು.. ಎಷ್ಟೆಲ್ಲಾ ಮಾತಾಡಿದ್ದೀವಿ…  ಆದರೆ ಇವತ್ತು ಅದೇನೋ ಪರ್ಸನಲ್‌ ಅಂದ್ರು… ಎರಡೇ ಮಾತಿನಲ್ಲಿ ಮಾತು ಮುಗಿಸಿದರು..  ಹೀಗೆ ಸಾಗಿದ ರೇಖಾ ಯೋಚನಾ ಲಹರಿ… ನನ್ನ ಹಣೇ ಬರಹಾನೇ ಹಾಗೇಂತ ಕಾಣತ್ತೆ… ಎಲ್ಲರೂ ಮದುವೆ ಗೊತ್ತಾದ ಮೇಲೆ… ಖುಷಿಯಾಗಿ… ಒಡವೆ.. ಬಟ್ಟೆ ಅಂತ ಓಡಾಡಿಕೊಂಡು ಇದ್ರೆ… ನಾನು… ಇಲ್ಲಿ… ದೇವರೇ ಇಂಥಾ ಪರಿಸ್ಥಿತಿ ಯಾರಿಗೂ ಬೇಡಪ್ಪಾ….  ಎನ್ನುವಲ್ಲಿಗೆ ಬಂದು ನಿಂತಿತು. 

 ಸಂಜೆ ಆಫೀಸು ಮುಗಿದ ಮೇಲೆ… ಪ್ರಸಾದ್‌ ತಿಳಿಸಿದಂತೆ… ಕಾಮಧೇನು ಹೋಟೆಲ್‌ ಗೆ ಹೋದಳು. ಪ್ರಸಾದ್‌ ಎಂದಿನಂತೆ ನಗುತ್ತಾ ಸ್ವಾಗತಿಸುತ್ತಾನೆ…  ಇವಳಿಗೋ ಗೊಂದಲ… ಏನಾಗ್ತಾ ಇದೆ ಅಂತ ಗೊತ್ತಾಗ್ತಾ ಇಲ್ಲ… ಆದರೂ ಅದೂ ಇದೂ ಮಾತಾಡ್ತಾ ಇದ್ದಾಗ.. ಬೇರರ್‌ ಬಂದು… “ ಸಾರ್ ಪ್ರಸಾದ್‌ ಅಂದ್ರೇ ನೀವೇನಾ…” ಎಂದು ಕೇಳಿದಾಗ ಹೌದೆಂದು ತಲೆಯಾಡಿಸುತ್ತಾನೆ. “ ಸಾರ್.‌  ಅಲ್ಲಿ ರಿಸೆಪ್ಷನ್‌ ನಲ್ಲಿ ಫೋನಿದೆ.. “ ಎಂದಾಗ ಪ್ರಸಾದ್‌ ಎದ್ದು ಹೊರಡುವ ಮುಂಚೆ… ಇನ್ಯಾರು .. ಅದೇ ರಾಜಾನೇ ಇರಬೇಕು..    ಇರ್ಲಿ  ಬಂದೆ ಇರಿ..” ಎನ್ನುತ್ತಾನೆ.. 

 ಈಗ ರೇಖಾಳಿಗೆ ಎಲ್ಲವೂ ಖಾತರಿ ಆಯಿತು…  ಮೈಲುಗಟ್ಟಲೆ ಈಜಿ ಬಂದವರಂತೆ ಏದುಸಿರು ಬಿಡುತ್ತದ್ದಳು..  ನಾನು ಪ್ರಸಾದ್‌ ಗೆ ಎಲ್ಲಾ ವಿಷಯ ತಿಳಿಸಬೇಕು ಅಂತ ಬಂದ್ರೆ  ತನಗಿಂತ ಮುಂಚೇನೆ ಆ ರಾಜ ಪ್ರಸಾದ್‌ ಗೆ ಫೋನಿನಲ್ಲಿ ವಿಷಯ ತಿಳಿಸುತ್ತಾನೆ… ವಾಪಸ್ಸು ಬಂದಾಗ ಪ್ರಸಾದ್‌ ಪ್ರತಿಕ್ರಿಯೆ ಹೇಗಿರಬಹುದು… ಕೋಪ ಮಾಡಿಕೊಂಡಿರಬಹುದಾ… ಕೂಗಾಡಬಹುದಾ… ಅವಮಾನ ಮಾಡಬಹುದಾ…  ಊಹಿಸಲಾಗಲಿಲ್ಲ ರೇಖಾಗೆ. ಇದ್ದ ಬದ್ದ ಧೈರ್ಯವನ್ನೆಲ್ಲಾ ಒಗ್ಗೂಡಿಸಿಕೊಂಡು ಮುಂದಿನದನ್ನು ಎದುರಿಸಲು ಸಿದ್ಧಳಾದಳು ರೇಖಾ…  

 “ಅರೇ ..! ಏನಾಶ್ಚರ್ಯ…! ಪ್ರಸಾದ್‌ ವಾಪಸ್ಸು ಬಂದಿದ್ದಾನೆ… ತಾನು ನಿರೀಕ್ಷಿಸಿದ್ದಂತೆ ಕೂಗಾಡುವ, ಕಿರಿಚಾಡುವ, ಅವಮಾನ ಮಾಡುವ ಪ್ರಸಾದ್‌ ಅಲ್ಲ… ಇಲ್ಲಿ ಎದುರಿಗೆ ನಿಂತಿರುವುದು ನಗುತ್ತಿರುವ ಪ್ರಸಾದ್..‌ ಬೆಪ್ಪಳಂತಾದಳು ರೇಖಾ… “ ಅದೇ ರಾಜ… ! ನನ್ನ ಕ್ಲೋಸ್‌ ಫ್ರೆಂಡ್.‌  ತುಂಬಾ ತರ್ಲೆ .. ತುಂಬಾ ಜಾಲಿಯೂ ಹೌದು… ನಿಮಗೆ ಯಾವ ಸ್ವೀಟ್‌ ಕೊಡಿಸಬೇಕು… ಅಂತ ತರ್ಲೆ ಮಾಡಿಕೊಂಡು ಯಾವುದೋ ಪೂರ್‌ ಜೋಕ್‌ ಹೇಳ್ತಾ ಇದ್ದ…ನಿಮ್ಮ ಆಭಂತರ ಇಲ್ಲಾ ಅಂದ್ರೇ.. ನಿಮಗೂ ಹೇಳ್ತೀನಿ.. ನಿಮಗೆ ನಗು ಬಂದ್ರೆ ನಗಬಹುದು…” ಅವನು ಜೋಕ್‌ ಹೇಳದಿದ್ರೂ ಇವಳು ಸುಮ್ಮನೇ ನಗುತ್ತಾಳೆ.  

 “ಅಂದ ಹಾಗೆ ನಿಮಗೆ ಹೇಳೋದು ಮರ್ತಿದ್ದೇ…  ಅದೇ ರಾಜ…ನನ್ನ ಕ್ಲೋಸ್‌ ಫ್ರೆಂಡ್.‌ ನಿಮ್ಮನ್ನು ಪರಿಚಯ ಮಾಡಿಕೊಡಬೇಕು ಅಂತ ಅವನಿಗೆ ಇಲ್ಲಿಗೆ ಬರ್ಲಿಕ್ಕೆ ಹೇಳಿದ್ದೇ.. ಹೊರಡೋ ಟೈಮಲ್ಲಿ ಯಾರೋ ಅವನ VIP ಕಸ್ಟಮರ್‌ ಬಂದ್ರಂತೆ… ಅದಕ್ಕೆ ಬರಲಿಕ್ಕೆ ಆಗಲಿಲ್ಲ.. ಅಂತ ಹೇಳಿ… ನಿಮ್ಮನ್ನು ನಮ್ಮ ಮನೆಗೆ ಕರ್ಕೊಂಡು ಬಾ… ಅಲ್ಲಿ ಪರಿಚಯ ಮಾಡಿಕೊಡು ಅಂತ ಹೇಳಿದ್ದಾನೆ…  ಹೋಗೋಣ್ವಾ ನಮ್ಮ ಮನೆಗೆ…. “ ಎಂದಾಗ.. ಅವಳು.. ನಾನು ಮನೇಲಿ ಹೇಳಿಲ್ಲಾ… ಎನ್ನುತ್ತಾಳೆ.. ಅದರ ಬಗ್ಗೆ ಯೋಚನೆ ಮಾಡಬೇಡಿ. ನಾನು ಆಗಲೇ ನಿಮ್ಮ ಮನೇಲಿ ಇನ್‌ ಪರಮೇಶನ್‌ ಕೊಟ್ಟು ಪರ್ಮಿಶನ್‌ ತಗೊಂಡು ಆಯ್ತು… “ ಎನ್ನುತ್ತಾನೆ.  

 ತಿಂಡಿ ಕಾಫಿ ಮುಗಿಸಿ, ಇಬ್ಬರೂ ಪ್ರಸಾದ್‌ ಮನೆಯತ್ತ ಹೊರಡುತ್ತಾರೆ…  ಹೋಟೆಲ್‌ ನಲ್ಲಿ ಬಂದ ಫೋನ್‌ ರಾಜನದ್ದು ಎಂದು ಗೊತ್ತಾದಾಗ, ನಾನು ಎಷ್ಟು ಹೆದರಿದ್ದೆ… ವಾಪಸ್ಸು ಬಂದ ಪ್ರಸಾದ್‌ ನ ಪ್ರತಿಕ್ರಿಯೆ  ತಾನು ನಿರೀಕ್ಷಿಸಿದಂತೆ ಇರಲಿಲ್ಲ. ಅದು ಬೇರೆಯೇ ಆಗಿತ್ತು.. ಈಗ ಪ್ರಸಾದ್‌ ಮನೆಯಲ್ಲಿ ಅವನ ಭೇಟಿಯಾಗಬೇಕಾಗಿದೆ…  ಅಲ್ಲಿ ಇನ್ನೂ ಏನೇನು ಆಗಬೇಕಾಗಿದೆಯೋ.. ಇದರ ಅಂತ್ಯ…  ಏನಾದರಾಗಲಿ.. ನೀರಿಗೆ ಇಳಿದಾಗಿದೆ.. ಛಳಿ ಏನು.. ಗಾಳಿ ಏನು… .. ಎಂದು ಮನಸ್ಸಿನಲ್ಲೇ ಯೋಚಿಸುತ್ತಿದ್ದಳು ರೇಖಾ…  

 :ಕೋರಾ ಕಾಗಜ್‌ ಥಾ ಏ ಮನ್‌ ಮೇರಾ… ಲಿಖ್‌ ಲಿಯಾ ನಾಮ್‌  ಇಸ್‌ ಸೇ ತೇರಾ.. ಏಂಬ ಸುಶ್ರಾವ್ಯವಾದ ಹಿಂದಿ ಹಾಡೊಂದು ಅವರಿಬ್ಬರನ್ನೂ ಸ್ವಾಗತಿಸಿತು.  

 ಬಾಮ್ಮ.. ರೇಖಾ.. ಬಾ.. ಎಂದು ಪ್ರಸಾದ್‌ ತಾಯಿ ಸ್ವಾಗತಿಸಿದರು. .. ಅಮ್ಮಾ ರಾಜ ಬಂದಿದ್ದಾನಾ… “ ಎಂದು ಪ್ರಸಾದ್‌ ಕೇಳಿದ್ದಕ್ಕೆ..  ಹೂಂ.. ಬಂದಿದ್ದಾನೆ. ಅಲ್ಲಿ ಒಳಗಿದ್ದಾನೆ.. ಕರೀತೀನಿ ತಾಳು…” ಎಂದು ಅವರು ಒಳಗೆ ನಡೆದರು..  

 ಈ ಉತ್ತರದಿಂದ ನೂರಾರು ಬಾಂಬುಗಳು ಸ್ಫೋಟವಾದಂತೆ ಆಗಬೇಕಿತ್ತು ರೇಖಾಳಿಗೆ..  ಆದರೆ ಅವಳು ನಿರ್ಲಿಪ್ತೆಯಂತೆ, ಯಾವುದೇ ಹೆದರಿಕೆ ಇಲ್ಲದೆ ಮುಂದಿನದಕ್ಕೆ ಸಿದ್ಧವಾಗಿದ್ದಳು. .. ಇನ್ನು ಸ್ವಲ್ಪ ಹೊತ್ತಿನಲ್ಲಿ ರಾಜ ಬರುತ್ತಾನೆ..  ನಂತರ ಯಾವುದೇ ಸಿನಿಮಾದ ಈ ರೀತಿಯ ದೃಶ್ಯದಂತೆ ಚಕಚಕನೆ ಆಗುತ್ತದೆ ಎಂದು ಅನಿಸಿತವಳಿಗೆ.  “ಯಾಕಮ್ಮಾ ರೇಖಾ.. ನಿಂತೇ ಇದ್ದೀಯಾ… ಕೂತ್ಕೋಮ್ಮ”  ಎಂದು ಪ್ರಸಾದ್‌ ತಂದೆ ಆತ್ಮೀಯತೆಯಿಂದ ಹೇಳಿದರು..  ರೇಖಾ ಕುಳಿತುಕೊಳ್ಳುತ್ತಾ ಇನ್ನು ಸ್ವಲ್ಪ ಹೊತ್ತಿನ ನಂತರವೂ ಇದೇ ರೀತಿಯ ಆತ್ಮೀಯತೆ ಇರುತ್ತದೆಯೇ ಎಂದು ಚಿಂತಿಸತೊಡಗಿದಳು..  ರಾಜ ಇನ್ನೂ ಬಂದಿರಲಿಲ್ಲ. ಒಂದೊಂದು ಕ್ಷಣವೂ ಒಂದೊಂದು ಯುಗದಂತೆ ಭಾಸವಾಗತೊಡಗಿತು.  ಕಾಲವೇ ನಿಂತು ಹೋದಂತಾಗಿದೆ.  

 “ನಮಸ್ಕಾರ ರೇಖಾರವರಿಗೆ”  ಎಂಬ ಅಪರಿಚಿತ ಧ್ವನಿ ಬಂದ ಕಡೆ ತಿರುಗಿ ನೋಡಿದ ರೇಖಾಳಿಗೆ ಬೆಟ್ಟದ ಹಾಗೆ ಬಂದದ್ದು ಮಂಜಿನ ಹಾಗೆ ಕರಗಿಹೋದಂತೆ ಭಾಸವಾಯಿತು.  ಈ ರಾಜ ಬೇರೆಯವನಾಗಿದ್ದ.  ಪರಸ್ಪರ ಪರಿಚಯವಾಯಿತು.. ಬಹಳ ವರ್ಷಗಳ ಪರಿಚಿತನಂತೆ ರೇಖಾಳ ಬಳಿ ಮಾತನಾಡತೊಡಗಿದ ರಾಜ. .. ಇಲ್ಲಿ ತುಂಬಾ ಸೆಖೆ ಇದೆ.. ಬನ್ನಿ ಅಲ್ಲಿ ಬಾಲ್ಕನಿಯಲ್ಲಿ ಕುಳಿತು ಮಾತನಾಡೋಣ.. “ ಎಂದು ಅಲ್ಲಿಗೆ ಕರೆದೊಯ್ದ.. ಅದೂ ಇದೂ ಮಾತನಾಡುತ್ತಾ, ಹಾಸ್ಯ ಚಟಾಕಿ ಹಾರಿಸುತ್ತಾ ಇದ್ದ ರಾಜ ಇದ್ದಕ್ಕಿದ್ದಂತೆ.. ..ರೇಖಾ .. ನಿಮ್ಮ ಕಲೀಗ್‌ ಯಾರಾದ್ರೂ ರಾಜಶೇಖರ ಅಂತ ಇದಾರಾ… “ ಎಂದು ಕೇಳಿದ.  

 ಅವಳ ಅಪ್ಪ ದೇವರ ಪೂಜೆಯ ವೇಳೆಯಲ್ಲಿ… ಪುನರಾಗಮನಾಯಚ ಎಂದು ಹೇಳುವುದನ್ನು ಕೇಳಿದ್ದಳು.. ಆದರೆ ಇಲ್ಲಿ ಆ ಖಳ ರಾಜನ ವಿಷಯ  ಹೋದೆಯಾ ಎಂದರೆ ಮತ್ತೆ ಬಂದೆ ಎಂದಂತಾಯಿತು.  ಎದೆಯಲ್ಲಿ ನೂರಾರು ನಗಾರಿ ಬಾರಿಸಲಾರಂಭಿಸಿತು. ಕೂತಿದ್ದರೂ ಕಾಲುಗಳಲ್ಲಿನ ಶಕ್ತಿಯೇ ಉಡುಗಿ ಹೋದಂತಾಗಿತ್ತು.  ಸ್ವರವೂ ಹೊರಡುತ್ತಿಲ್ಲ..  ಆದರೂ ಏನಾದರೂ ಮಾತನಾಡಲೇ ಬೇಕಾದ ಪರಿಸ್ಥಿತಿಯಲ್ಲಿ ಇದ್ದ ಧೈರ್ಯವನ್ನೆಲ್ಲಾ ಒಟ್ಟುಗೂಡಿಸಿ ಮೆಲು ದನಿಯಲ್ಲಿ… “ಹೌದು ಇದಾರೆ” ಎಂದಷ್ಟೇ ಹೇಳಿದಳು.  

 ಮುಂದಿನದ್ದು ಅವಳ ಮನಃಪಟಲದಲ್ಲಿ ಹಲವಾರು ಬಾರಿ ಸಿನಿಮಾದ ದೃಶ್ಯದಂತೆ ಅವಳು ಊಹಿಸಿದಂತೆ ಮೂಡಿ ಬಂದಿತ್ತು.. ತಂದೆಯ ಸ್ಥಿತಿ… ತನ್ನ ಮದುವೆಯ ಗತಿ..ತನ್ನ ಮೇಲೆ ಬರುವ ಅಪವಾದದಿಂದ  ತನ್ನ ತಂಗಿಯ ಮದುವೆಯ ಗತಿ.  ಹೀಗೆ.  

 “ರೇಖಾ.. ತೆಗೆದುಕೊಳ್ಳಿ… ಈ ಪತ್ರವನ್ನು.. ಓದಿ…. “ ಎಂದು ಈ ಹೊಸ ರಾಜ ಕೊಟ್ಟ ಪತ್ತವನ್ನು ತೆಗೆದುಕೊಂಡು ಅನ್ಯಮನಸ್ಸಿನಿಂದಲೇ ಅದರತ್ತ ಕಣ್ಣಾಡಿಸಿಳು. ಈ ರೀತಿಯ ಎಲ್ಲಾ ಪತ್ರಗಳಂತೆಯೇ ಅದೊಂದು : ಹಿತೈಷಿ” ಯ ಪತ್ರ. ಇದರಲ್ಲಿ ವಿಶೇಷವೆಂದರೆ ಈ “ಹಿತೈಷಿ:ಯು ಅನಾಮಧೇಯ.  ಈ ಪತ್ರ ಓದುತ್ತಿದ್ದಂತೆಯೇ ರೇಖಾಳ ಮುಖ ಕಪ್ಪಿಡುವುದಕ್ಕಿಂತ ಹೆಚ್ಚಾಗಿ ಅಸಹ್ಯ ಭಾವನೆ ಮೂಡಿ ಬರುವಂತಾಯಿತು.  ಆ ರಾಜ ಇಂತಹ ಕೀಳು ಮಟ್ಟಕ್ಕೆ ಇಳಿಯುವನೆಂಬ ಊಹೆಯೂ ಇರಲಿಲ್ಲ ರೇಖಾಳಿಗೆ. .. “ ಈ ಪತ್ರದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..”  ಎಂಬ ಪ್ರಶ್ನೆಯನ್ನು ಈ ರಾಜ ಎರಡೆರಡು ಬಾರಿ ಕೇಳಬೇಕಾಯಿತು.  

 ಅವನಿಗೆ ಉತ್ತರಿಸುವ ಗೋಜಿಗೆ ಹೋಗದೇ, ತನ್ನ ಆಲೋಚನೆಯಲ್ಲೇ ಮುಳುಗಿದಳು ರೇಖಾ.. ಇಷ್ಟಕ್ಕೂ ಈ ರಾಜನಿಗೆ ನನ್ನ ವಿಷಯದಲ್ಲಿ ಏಕೆ ಇಷ್ಟು ಆಸಕ್ತಿ. ಇವರಿಗೆ ಏನು ಸಂಬಂಧ. ನಾನು ಇವರಿಗೆ  ಏಕೆ ಉತ್ತರಿಸಬೇಕು…  ಇಂತಹ ವಿಷಯದಲ್ಲಿ ಎಲ್ಲರೂ ತಮ್ಮ “ಕೈಲಾದಷ್ಟು” ಮಾಡಲು ತಯಾರಿರುತ್ತಾರೆ. ಅಂತಹ ವ್ಯಕ್ತಿಯೇ ಇರಬಹುದೇ ಈ ರಾಜ. ಇವರಿಗೆ ತಾನು ಈಗ ಏನಾದರೂ ಅಭಿಪ್ರಾಯವನ್ನು ಹೇಳುವ ಅವಶ್ಯಕತೆ ಇದೆಯೇ…  ಇಷ್ಟಕ್ಕೂ ಏನು ಉಳಿದಿದೆ ಹೇಳಲು… ಎಲ್ಲಾ ಮುಗಿದುಹೋಗುತ್ತಿರುವ ಕಥೆ ಇದೆ…  ಎನ್ನುವ ಆಲೋಚನೆಯಲ್ಲಿದ್ದ ರೇಖಾಳಿಗೆ ಪ್ರಸಾದ್‌ ಮೂಕಪ್ರೇಕ್ಷಕನಂತೆ ಸುಮ್ಮನೇ ಕುಳಿತಿದ್ದುದು ಗಮನಕ್ಕೆ ಬಂದಿತು. ಇದ್ದ ಸ್ವಲ್ಪವೇ ಸ್ವಲ್ಪ ಭರವಸೆಯೂ ಇಲ್ಲವಾಯಿತು.  ಇವರಿಗೆ ಏನಾದರೂ ಏಕೆ ಹೇಳಬೇಕು.. ಸುಮ್ಮನೇ ಎದ್ದು ಹೋದರಾಯಿತು… ಎಂದು ಮನಸ್ಸಿನಲ್ಲಿ ನಿರ್ಧರಿಸಿದಳು..  

 ಇವಳ ಮನಸ್ಸಿನಲ್ಲಿ ಆಗುತ್ತದ್ದ ತಳಮಳ ಈ ರಾಜನಿಗೆ ಅರಿವಾಯಿತೇನೋ… “ ನೋಡಿ ರೇಖಾ.. ಈ ವಿಷಯದಲ್ಲಿ ತಲೆ ಹಾಕಲು ಈ ನಾಗರಾಜ ಯಾರು… ಎಂದು ನಿಮಗೆ ಅನಿಸಿರಬಹುದು. ಅದಕ್ಕೆ ಬಹಳ ಮುಖ್ಯವಾದ ಕಾರಣವಿದೆ. ಅದನ್ನು ನಾನು ನಿಮಗೆ ನಂತರ ಹೇಳುತ್ತೇನೆ..  ಈಗ ದಯವಿಟ್ಟು ನಿಮ್ಮ ಅಭಿಪ್ರಾಯ ತಿಳಿಸಿ” ಎಂದನು.  

 ರೇಖಾಳಿಗೆ ಈಗ ನಿಜವಾದ ಗೊಂದಲ ಶುರುವಾಯಿತು.  ಹೇಳಬೇಕೋ ಬೇಡವೋ ತಿಳಿಯದಾಯಿತು. ಬಹಳ ಮುಖ್ಯವಾದ ಕಾರಣವಿದೆಯೆಂದು  ಹೇಳುತ್ತಿದ್ದಾರೆ. ಹಾಗಾಗಿ ಹೇಳಲೇ ಬೇಕಾದ ಅನಿವಾರ್ಯತೆ ಇದೆ.  ಬಹಳ ಕಷ್ಟಪಟ್ಟು.. ಏನು ಹೇಳಬೇಕು ಅಂತಾನೆ ಗೋತ್ತಾಗ್ತಾ ಇಲ್ಲ.  ಆದರೆ ಇದರಲ್ಲಿ ನನ್ನ ತಪ್ಪೇನು ಇಲ್ಲಾ ಅಂದರೆ ನಂಬ್ತೀರಾ..” ಎಂದಷ್ಟೇ ಹೇಳಿದಳು.  

 “ಬಾರಮ್ಮಾ.. ಶೀಲಾ…ಬಾ… “ ಎಂದು ಪ್ರಸಾದ್‌ ನ ತಾಯಿ ತಂದೆ ಯಾರನ್ನೋ ಸ್ವಾಗತಿಸುತ್ತಿದ್ದಾರೆ. ಶೀಲಾ ಎಂದು ಕರೆಸಿಕೊಂಡ ಆ ಮಹಿಳೆ ಸೀದಾ ಬಾಲ್ಕನಿಗೆ ಬಂದು ಇವರನ್ನು ಸೇರಿಕೊಂಡಳು. ಅವಳತ್ತ ಪ್ರಸಾದ್‌ ಪರಿಚಯದ ಮುಗುಳ್ನಗೆ ಬೀರಿದರೆ ನಾಗರಾಜ ಆಕೆಯ ಕಡೆ ನೋಡಲೇ ಇಲ್ಲ.  “ ಇವರು ಶೀಲಾ ಅಂತ.. ನಮ್ಮ ಬ್ಯಾಂಕಲ್ಲೇ ಕೆಲಸದಲ್ಲಿದ್ದಾರೆ..” ಎಂದು ಪ್ರಸಾದ್‌ ಪರಿಚಯ ಮಾಡಿಕೊಡುತ್ತಾನೆ.  ಪರಸ್ಪರ ಪರಿಚಯವಾಗುತ್ತದೆ.  

 “ನಂಬ್ತೀನಿ.. ಖಂಡಿತ ನಂಬ್ತೀನಿ.. ವಿಷಯ ಏನಿದ್ರೂ ನೀವು  ನೇರವಾಗಿ ತಿಳಿಸಿ…” ಎಂದು ನಾಗರಾಜ ಮತ್ತೆ ರಾಜನ ವಿಷಯಕ್ಕೆ ಬರುತ್ತಾಗೆ.  

 ಅಪರಿಚಿತಳ ಮುಂದೆ ಈ ವಿಷಯದ ಪ್ರಸ್ತಾಪ ಪಂಚಾಯಿತಿ ಬೇಡವೆಂದು ಬೇಸರಿಸಿದ ರೇಖಾ ಹಿಂದು ಮುಂದು ನೋಡುತ್ತಾಳೆ. ಅದನ್ನು ಗಮನಿಸಿ ನಾಗರಾಜ… “ ಪರವಾಗಿಲ್ಲ.. ಶೀಲಾ ಏನೂ ಬೇರೆಯವರಲ್ಲಾ… ನೀವು ನಿಸ್ಸಂಕೋಚವಾಗಿ ಧೈರ್ಯವಾಗಿ ಮುಂದುವರಿಸಿ..” ಎನ್ನುತ್ತಾನೆ.  

 ರೇಖಾಳಿಗೆ ಈಗ ದಟ್ಟವಾದ ಅನುಮಾನ ಬರಲು ಪ್ರಾರಂಭವಾಯಿತು.. ಪ್ರಸಾದ್‌ ನ ಕ್ಲೋಸ್‌ ಫ್ರೆಂಡ್‌ ಅನ್ನೋದ ಬಿಟ್ರೇ ಈ ವಿಷಯದಲ್ಲಿ ಯಾವುದೇ ಸಂಬಂಧವಿಲ್ಲದ ನಾಗರಾಜ ತಲೆ ಹಾಕಿದ್ದು ಆಯಿತು. ಈಗ ಈ ಶೀಲಾ ಎನ್ನುವ ಮಹಿಳೆ…  ಇನ್ನೂ ಎಷ್ಟೆಷ್ಟು ಜನರು ಬರುತ್ತಾರೋ… ಇನ್ನೂ ಏನೇನು ಆಗಬೇಕೋ… “ ಎಂದು ಯೋಚಿಸುವ ರೇಖಾ ರಾಜನಿಗೆ ಹಿಡಿ ಶಾಪ ಹಾಕುತ್ತಾಳೆ.  ಹೇಗಿದ್ದರೂ ಈ ವಿಷಯ ಇಲ್ಲಿಯವರೆಗೂ ಬಂದಿದೆ..  ಮದುವೆ ಮುರಿದು ಬೀಳುವುದರಲ್ಲಿ ಸಂಶಯವಿಲ್ಲ.  ಇನ್ನು ಯಾರು ಯಾರು ಬಂದು ಅವರ ಮುಂದೆ ನಾನು ತಪ್ಪು ಮಾಡಿದೋಳ ಥರಾ ಸಮಜಾಯಿಶಿ ಯಾಕೆ ಕೊಡಬೇಕು.. ಹೀಗೆ ನಿರ್ಧರಿಸಿ.. ನೋಡಿ… ಇನ್ನು ನಾನು ಹೇಳುವುದು ಏನೂ ಉಳಿದಿಲ್ಲ.  ಮುದುವೆ ವಿಷಯದಲ್ಲಿ ಈ ಪತ್ರದ ಆಧಾರದ ಮೇಲೆ ನೀವು  ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ತೀರ್ಮಾನದ ಬಗ್ಗೆ ತಿಳಿಸಿದರೆ ನಾನು ಹೊರಡಬಹುದು…” ಎಂದು ಕಟುವಾಗಿ ಹೇಳುತ್ತಾಳೆ.  ಅಲ್ಲದೇ ಪ್ರತಿಕ್ರಿಯೆಯಾಗಿ ಪ್ರಸಾದ್‌ ನ ಕಡೆ ನೋಡಿದಾಗ  ಅವನೂ ಇವಳ ಕಡೆ ನೋಡುತ್ತಾನೆ. ಅವನ ಕಣ್ಣುಗಳಲ್ಲಿ ತಿರಸ್ಕಾರದ ಸುಳಿವಾಗಲಿ, ಅವಹೇಳನವಾಗಿ, ನಿರಾಕರಣದ ಸೂಚನೆಯಾಗಲಿ ಕಾಣುವುದಿಲ್ಲ. ಬದಲಾಗಿ ಅದರಲ್ಲಿ ಎಂದಿನ ಸ್ನೇಹ ವಿಶ್ವಾಸದ ಬೆಳಕಿದೆ.  ಅಲ್ಲಿ ಒಂದು ರೀತಿಯ ಮೌನ ಆವರಿಸಿತು. ಕಡೆಗೆ ಶೀಲಾಳೆ ಆ ಮೌನ ಮುರಿಯುತ್ತಾಳೆ.  

 “ಯಾಕ್ರೀ ನೀವೆಲ್ರೂ ಇವರ ಪ್ರಾಣ ತಿಂತಾ ಇದೀರಾ…  ಇಷ್ಟಕ್ಕೂ ನೀವು ಯಾರು ಇವರಿಗೆ ಅಂತ.  ನೋಡಿ ರೇಖಾ.. ನಿಮ್ಮ ಸಂಕಟ, ಗೊಂದಲ ನನಗೆ ಚೆನ್ನಾಗಿ ಅರ್ಥವಾಗುತ್ತೆ.  ಏಕೆಂದರೆ ನಾನೂ ಕೂಡಾ ಇದೇ ರೀತಿ ಸಂಕಟಾನ ಒಮ್ಮೆ ಅನುಭವಿಸಿದೋಳು… “ ಎನ್ನುತ್ತಾಳೆ.  ಆಗ ರೇಖಾಗೆ  ಮುಳುಗಿ ಹೋಗುತ್ತಿರುವವರಿಗೆ ಹುಲ್ಲು ಕಡ್ಡಿ ಆಸರೆಯಾಗಿ ಸಿಕ್ಕಿದಂತಾಗಿ ಶೀಲಾಳ ಕಡೆ ನೋಡುತ್ತಾಳೆ.  

 ಶೀಲಾ ಮುಂದುವರೆಸುತ್ತಾ… “ ಏನು ಮಾಡೋದು ಹೇಳಿ ರೇಖಾ.  ನಮ್ಮ ವಯಸ್ಸೇ ಅಂಥಾದ್ದು…  ವಿವೇಚನೆ ಮಾಡೋ ವಯಸ್ಸಲ್ಲಾ…  ಹಾಗಾಗಿ ಈ ರೀತಿಯ ಪರಿಸ್ಥಿತಿ  ಬರುತ್ತದೆ. ನನ್ನಂತೆ ಬೇರೆಯವರಿಗೂ ಈ ರೀತಿ ಆಗಿ ಅವರು ಅದನ್ನು ಧೈರ್ಯವಾಗಿ ಹೇಗೆ ಎದುರಿಸದ್ದಾರೆ ಎಂದು ತಿಳಿದಾಗ ನೀವು ಸರಿ ಹೋಗಲು ಪ್ರಯತ್ನಿಸುತ್ತೀರಾ… “ ಎಂದಾಗ ರೇಖಾ ನಿರ್ಭಾವುಕಳಾಗಿ ಅವಳತ್ತ ನೋಡುತ್ತಾಳೆ.  

 :ನಾನು ಇದೇ ರೀತಿ ಸಂಕಟಾನ ಅನುಭವಿಸಿದೋಳು ಅಂದೇ ಅಲ್ವಾ… ಆ ಸಂದರ್ಭಾನ ಹೇಳುತ್ತೇನೆ ಕೇಳಿ.. “ ಎಂದು ತನ್ನ ಕಥೆ ಹೇಳಲಾರಂಭಿಸಿದಳು..  

 “ನಿಮ್ಮ ಜೀವನದಲ್ಲಿ ಅದ್ಯಾರೋ ರಾಜ ಅನ್ನೋನು ಬಂದ ಹಾಗೆ.. ನನ್ನ ಜೀವನದಲ್ಲೂ ಒಬ್ಬ ನುಸುಳಿದ…ತಿಳಿಯಾಗಿದ್ದ ನನ್ನ ಮಾನಸ ಸರೋವರವನ್ನುಕಲಕಿದ.  ಅವನಿಗೆ ಒಳ್ಳೇ ರೂಪವನ್ನು ಕೊಟ್ಟ ದೇವರು ಹಠಮಾರಿತನವನ್ನೂ ಧಾರಾಳವಾಗಿ ಕೊಟ್ಟಿದ್ದ.  ಆದರೆ ಮಾನವನಲ್ಲಿ ಸಹಜವಾದ ಸಂವೇದನೆ, ಕರುಣೆ ಇವೆಲ್ಲವನ್ನೂ ಕೊಡಲು ಮರೆತುಬಿಟ್ಟ.  ರೂಪದ ಜೊತೆಗೆ ಒಳ್ಳೆ ಹಾಡುಗಾರಿಕೆ, ಅಲ್ಪ–ಸ್ವಲ್ಪ ಜ್ಯೋತಿಷ್ಯ ಜ್ಞಾನ .. ಇಷ್ಟೇ ಸಾಲದು ಅಂತ ಒಳ್ಳೆ ಸಂಬಳದ ಬ್ಯಾಂಕಿನ ಕೆಲಸ. ಇಷ್ಟೇ ಸಾಕಲ್ವಾ ಮನುಷ್ಯ ದೇವರ ಮೇಲೆ ಚಾಲೆಂಜ್‌ ಹಾಕೋಕೆ.  ಇವೆಲ್ಲಾ ಇದೇಂತ ಸುಮಾರು ಹುಡುಗಿಯರು ಅವನು ಕೇಳದೇ ಇದ್ರೂ ಅವನ ಹಿಂದೆ ಬಿದ್ದರು. ಅದರಿಂದ ಅವನು ಏನು ಅಂದುಕೊಂಡ ಅಂದ್ರೇ ಎಲ್ಲಾ ಹುಡುಗಿಯರೂ ಹೀಗೆ ಅಂತ. …. 

 ಆದರೆ ನನಗೆ ಅವನ ಗುಣ ಸರಿ ಹೋಗಲಿಲ್ಲ.  ಅದರಲ್ಲಿ ಸಹಜತೆ ಕಾಣಲಿಲ್ಲ.  ಆದರೂ ಸಹೋದ್ಯೋಗಿ ಅಲ್ಲವಾ… ಔಪಚಾರಿಕ ಸ್ನೇಹದಿಂದಲೇ ಇದ್ದೆ.  ಅದೇನು ವಿಚಿತ್ರಾನೋ ಗೊತ್ತಿಲ್ಲ.  ಅವನ ಹಿಂದೆ ಅಷ್ಟೊಂದು ಹುಡುಗಿಯರು  ಇದ್ರೂ ಅವರನ್ನೇಲ್ಲಾ ಬಿಟ್ಟು ಅವನು ನನ್ನ ಹಿಂದೆ ಬಿದ್ದ…  ನನ್ನ ಸಹಜ ಯಾಂತ್ರಿಕ ಸ್ನೇಹ ಕೂಡಾ ಅವನಿಗೆ ಪ್ರೀತಿಯಾಗಿ ತೋರಿತು.  ಇನ್ನು ಮುಂದೆ ಹೇಳೋದೇನಿದೆ… ಸಿನಿಮಾದಲ್ಲಿ ತೋರಿಸ್ತಾರಲ್ಲಾ.. ಅದೇ ರೀತಿ, ನನ್ನ ಮುಂದೆ ಬಂದು  “ ನೋಡಿ ಶೀಲಾ… ನಾನು ನಿಮ್ಮನ್ನು ತುಂಬಾ ಇಷ್ಟ ಪಡುತ್ತೇನೆ.. ಹಾಗೇ ತುಂಬಾ ಪ್ರೀತಿಸುತ್ತೇನೆ..  ನಿಮ್ಮ ಆಭಿಪ್ರಾಯವೂ ನನಗೆ ಫೇವರಬಲ್‌ ಅಗಿದೆ ಎಂದು ಭಾವಿಸುತ್ತೇನೆ” ಎಂದು ನನ್ನ ಉತ್ತರಕ್ಕೂ ಕಾಯದೇ ಹೊರಟುಹೋದ … ಎಂದು  ರೇಖಾಳ ಪ್ರತಿಕ್ರಿಯೆಯತ್ತ ನೋಡುತ್ತಾಳೆ. ಅಲ್ಲಿ ಯಾವುದೇ ತೀವ್ರತೆಯ ಆಸಕ್ತಿಯಾಗಲಿ, ಕಳವಳವಾಗಲಿ ಕಾಣಲಿಲ್ಲ.  ಶೀಲಾ ಮತ್ತೆ ಮುಂದುವರೆಸುತ್ತಾಳೆ.  

 ಅವನ ಬಗ್ಗೆ ಇತರರಿಂದ ಬಹಳವಾಗಿ ಕೇಳಿ ತಿಳಿದಿರುತ್ತಾಳೆ ಶೀಲಾ.. ಅವನು ಹುಡುಗಿಯರೆಂದರೆ ಭೋಗದ ವಸ್ತುಗಳೆಂದು ತಿಳಿದಿರುತ್ತಾನೆ. ಅವರೊಂದಿಗೆ ಪ್ರೀತಿಯ ನಾಟಕವಾಡಿದರೆ, ಅವರನ್ನ ಅವನ ಬಲೆಗೆ ಹಾಕಿಕೊಳ್ಳಬಹುದೆಂದು  ಅವನ ಅಭಿಪ್ರಾಯವಾಗಿರುತ್ತದೆ.  ಆದರೆ  ಮದುವೆಯ ಜವಾಬ್ದಾರಿಗೆ ಹೆದರುವ ಅವನು, ಪ್ರೀತಿಯ ನಾಟಕವಾಡಿ,, ಕೆಲವೊಮ್ಮೆ ಕೆಲವರೊಂದಿಗೆ ಇನ್ನೂ ಸ್ವಲ್ಪ ಮುಂದುವರೆದು ಏನೇನೋ ಕ್ಷುಲಕ ಕಾರಣಗಳನ್ನು ಒಡ್ಡಿ ಅವಳದ್ದೇ ತಪ್ಪು ಎನ್ನುವಂತೆ ಮಾಡಿ ಮದುವೆ ಮುರಿದು ಬೀಳುವಂತೆ ಮಾಡುತ್ತಾನೆ.  

 ಸುದೀರ್ಘ ವಿವರಣೆಯಿಂದಾಗಿ ಶೀಲಾ ಗಂಟಲು ಒಣಗಿದಂತಾಗಿ, ಅವಳು ಎದ್ದು ಹೋಗಿ ನೀರು ಕುಡಿದು ಬಂದು ಮತ್ತೇ ಮಾತನ್ನು ಮುಂದುವರೆಸುತ್ತಾಳೆ.  

 “ ಒಮ್ಮೆ ನಮ್ಮ ಬ್ರಾಂಚಿನಲ್ಲಿ ಎಲ್ಲರೂ ಟೂರು ಪ್ರೋಗ್ರಾಮ್‌ ಹಾಕದ್ರು..  ಶನಿವಾರ ಹೊರಟು ಕೆ.ಆರ್.‌ ಎಸ್.‌ ನೋಡಿಕೊಂಡು, ಅವತ್ತು ರಾತ್ರಿ ಮೈಸೂರಿನಲ್ಲಿ ಉಳಿದುಕೊಂಡು, ಬೆಳಿಗ್ಗೆ ಮೈಸೂರಿನ ಎಲ್ಲಾ ಪ್ರೇಕ್ಷಣೀಯ ಸ್ಥಳಗಳನ್ನೂ ನೋಡಿಕೊಂಡು ಸಾಯಂಕಾಲ ವಾಪಸ್ಸು ಬರುವ ಪ್ರೋಗ್ರಾಮ್.‌  ಶನಿವಾರ ರಾತ್ರಿ ಮೈಸೂರಿನಲ್ಲಿ ಈ ನಮ್ಮ ಖಳನಾಯಕ  ನನ್ನ ಹತ್ತಿರ ಬಂದು.. “ ನೋಡಿ ಶೀಲಾ… ನಾನು ನಿಮ್ಮ ಹತ್ತಿರ ತುಂಬಾ ಪರ್ಸನಲ್‌ ಆಗಿ ಮಾತಾಡಬೇಕು. ನಾವಿಬ್ಬರೇ ಬೇರೆ ಕಡೆ ಹೋಗೋಣ್ವಾ.. “ ಎಂದು ಬಹಳ ಅರ್ಥಗರ್ಭಿತ ವಾಗಿ ಕೇಳಿದ. ನನಗೆ ಅವನ ಧ್ವನಿಯಲ್ಲಿ ಅವನ ದುರುದ್ದೇಶ ತಿಳಿದು ಛಟೀರ್‌ ಎಂದು ಅವನ ಕೆನ್ನೆಗೆ ಬಾರಿಸಿದೆ. . ಇದರಿಂದ ಅವಮಾನಿತನಾದ ಅವನು ಕೋಪಗೊಂಡು… ನಾನೇ ಆ ರೀತಿ ಕೇಳಿದೆನೆಂಬತೆ ಇಲ್ಲಸಲ್ಲದ್ದನ್ನು  ಪ್ರಚಾರ ಮಾಡಿದ್ದಲ್ಲದೇ, ಮದುವೆ ಗೊತ್ತಾದ ಮೇಲೂ ವುಡ್‌ ಬಿಗೆ  ಇದೇ ರೀತಿ ನನ್ನ ಶೀಲದ ಬಗ್ಗೆ ಅನುಮಾನ ಮೂಡುವಂತೆ ಪತ್ರ ಬರೆದ.  ಆದರೆ ನಾನು ಅದಕ್ಕೆ ಹೆದರಲಿಲ್ಲ.  ಇರುವ ವಿಷಯವನ್ನು ನೇರವಾಗಿ ಅವರಿಗೆ ತಿಳಿಸಿ ನಿರ್ಧಾರವನ್ನು ಅವರಿಗೇ ಬಿಟ್ಟೆ. ನನ್ನ ವುಡ್‌ ಬಿ ಅದನ್ನು ಅರ್ಥ ಮಾಡಿಕೊಂಡು  ನನ್ನ ಪತಿಯೂ ಆದರು. ಈಗ ನಮಗೆ ಒಂದು ವರ್ಷದ ಮುದ್ದಾದ ಮಗನಿದ್ದಾನೆ.  ಈಗ ನೋಡಿದರೆ ಅದೇ ರೀತಿ ಯಾರೋ ಪುಣ್ಯಾತ್ಮ  ಮಾಡಿದ್ದಾನೆ.  ನನ್ನ ಹಾಗೇ ನೀವೂ ಇರೋ ವಿಷಯವನ್ನು ನೇರವಾಗಿ ಈ ಪ್ರಸಾದ್‌ ಗೆ ತಿಳಿಸಿ. ನಿಮ್ಮ ಮನಸ್ಸೂ ಹಗುರವಾಗುತ್ತದೆ. ಅಲ್ಲದೇ ಪ್ರಸಾದ್‌ ಗೆ ಮತ್ತು ಅವರ ಮನೆಯವರಿಗೆ ನಿರ್ಧಾರ ತೆಗೆದುಕೊಳ್ಳಲು ಸುಲಭವಾಗಿತ್ತದೆ̤.. ಎಂದು ದೊಡ್ಡ ನಿಟ್ಟುಸಿರಿನೊಂದಿಗೆ ತನ್ನ ಸುದೀರ್ಘ ವಿವರಣೆಯನ್ನು ಮುಗಿಸುತ್ತಾಳೆ ಶೀಲಾ.. 

 “ ನಿಮ್ಮ ಪುಣ್ಯ ಚೆನ್ನಾಗಿತ್ತು. ಈ ರೀತಿ ಅಪವಾದ ಇದ್ರೂ ನಿಮ್ಮ ಮೇಲೆ ನಂಬಿಕೆ ಇಟ್ಟು  ಮದುವೆ ಆದಂತಹ ನಿಮ್ಮೆಜಮಾನರಂಥವರು ಬಹಳ ಅಪರೂಪ…  ಅವರನ್ನು ನನಗೆ ಒಮ್ಮೆ ಪರಿಚಯ ಮಾಡಿಕೊಡಿ… “ ಎನ್ನುತ್ತಾಳೆ.  

 “ಒಮ್ಮೆ ಯಾಕೆ.. ಈಗಲೇ…  ನೋಡಿ ಇಲ್ಲೇ ಕುಳಿತು ಒಳ್ಳೇ ಪೊಲೀಸ್‌ ಥರಾ  ನಿಮ್ಮ ತಲೆ ತಿನ್ನುತ್ತಾ ಇದ್ದಾರಲ್ಲಾ ಈ ಮಹಾನುಭಾವ ನಾಗರಾಜ್.‌ ಇವರೇ ಆ ಅಪರೂಪದ ಪುಣ್ಯಾತ್ಮ…  ಎನ್ನುತ್ತಾಳೆ.  

 ಆಗ ರೇಖಾಗೆ ಒಂದು ಕ್ಷಣ ನಾಚಿಕೆ, ಹಿಂಜರಿಕೆ ಆವರಿಸಿತು.  ಇವರ ಬಗ್ಗೆ ಎಷ್ಟು ಕೆಟ್ಟದ್ದಾಗಿ ಯೋಚಿಸಿದ್ದೆ ತಾನು ಎಂದು ಪರಿತಪಿಸತೊಡಗಿದಳು.  ಅನಾವಶ್ಯಕವಾಗಿ ತನ್ನ ವಿಷಯದಲ್ಲಿ ತಲೆ ಹಾಕುತ್ತಿದ್ದಾರೆ ಎಂದು ಕೋಪಗೊಂಡಿದ್ದೆ.  ಈಗ ನೋಡಿದರೆ ಎಂಥ ದೊಡ್ಡ ವ್ಯಕ್ತಿತ್ವ. ತಲೆ ಎತ್ತಿ ನೋಡಲೂ ಎನೋ ಒಂದು ಥರಾ ಹಿಂಜರಿಕೆಯಾಯಿತು.  ಆಗ ನಾಗರಾಜ ವಾತಾವರಣ ತಿಳಿ ಮಾಡುತ್ತಾ…  

 “ ನೋಡಿ ರೇಖಾ… ಇವಳು ಹೇಳಿದ್ಲೂಂತ ನಾನೇನು ಅಂಥಾ ದೊಡ್ಡ ವ್ಯಕ್ತಿ ಏನಲ್ಲಾ… ಎಲ್ಲರಂತೆ ಸಾಧಾರಣ ಹಾಗೂ ಸಾಮಾನ್ಯ ವ್ಯಕ್ತಿ..  ಈ ಪತ್ರ ನಿಮ್ಮ ಎಂಗೇಜ್‌ ಮೆಂಟ್‌ ಆಯ್ತಲ್ಲಾ.. ಅವತ್ತಿಗೆ ಎರಡು ದಿನ ಮುಂಚೆ ಬಂತು. ಪ್ರಸಾದ್‌ ಅದನ್ನು ನನಗೆ ಕೊಟ್ಟು ಏನು ಮಾಡುವುದೆಂದು ಕೇಳಿದ.   ನಮ್ಮ ವಿಷಯ ಗೊತ್ತಿದ್ದ ಅವನಿಗೆ ನಿಮ್ಮ ಮೇಲೆ ಅನುಮಾನವೇನು ಬಂದಿರಲಿಲ್ಲ.  ಶೀಲಾಗೆ ಬಂದ ಪತ್ರದ ರೀತಿಯೇ ಇದೂ ಇರಬಹುದೆಂದು ಅಂದುಕೊಂಡೆವು.  ಮೊದಲು ಎಂಗೇಜ್‌ ಮೆಂಟ್‌ ಆಗಲಿ..  ಆಗ ಈ ಪತ್ರ ಬರೆದ ವ್ಯಕ್ತಿಗೆ ಅವನ ಪ್ಲಾನ್‌ ಸಕ್ಷಸ್‌ ಆಗೋ ಥರಾ ಇಲ್ಲಾಂತ ಬೇರೆ ಏನಾದ್ರೂ ಪ್ಲಾನ್‌ ಮಾಡಬಹುದು. ಅದಕ್ಕೆ ಸ್ವಲ್ಪ ಪತ್ತೇದಾರಿ ಕೆಲಸ ಮಾಡಬೇಕಾಯಿತು.  ಇರಲಿ..  ಈ ಹಿತೈಷಿ ರಾಜನನ್ನು ಏಕೆ ಮದುವೆಯಾಗಲಿಲ್ಲ  ಹೇಳ್ತೀರಾ…  

 ಆಗ ರೇಖಾ .. “ಶೀಲಾರ ಹುಡುಗನಿಗಿಂತಾ ಸ್ವಲ್ಪ ಭಿನ್ನ. ರೂಪವೇನೋ ಹೌದು… ಆದರೆ ಹಠಮಾರಿತನ, ದರ್ಪ, ದಬ್ಬಾಳಿಕೆಯಲ್ಲಿ ಇವನಲ್ಲಿ ಸ್ವಲ್ಪ ಜಾಸ್ತೀನೇ ಇತ್ತು. ನಮ್ಮಿಬ್ಬರ ಮನೆಯವರೂ ಒಪ್ಪಿದ್ದರು.  ಇಷ್ಟಾದರೂ ನಾನು ಮನೆಯವರು ಒಪ್ಪಿದ್ದಾರೇಂತ ಒಪ್ಪಿ ಮುಂದಿನ  ಅಂದರೆ ಸಂಸಾರದ ಕನಸು ಕಾಣುತ್ತಾ ಇದ್ದೆ.  

 ಒಂದು ದಿನ ಮದುವೆಯ ಮಾತುಕತೆಗೆ ಅಂತ ರಾಜ, ಅವನ ಅಪ್ಪ ಮತ್ತು ಅಮ್ಮ ನಮ್ಮ ಮನೆಗೆ ಬಂದರು.  ಆಗ ರಾಜ ಸಂಪೂರ್ಣ ಅಪರಿಚಿತನಂತೆ ಇದ್ದ.  ಮೊದಲ ಬಾರಿಗೆ ನನ್ನನ್ನು ನೋಡಲು  ಬಂದ ವರನಂತೆ ಬಿಹೇವ್‌ ಮಾಡಿದ.  ಆಗ ಅವನ ತಂದೆ ಮಾತು ಶುರು ಮಾಡಿ… “ ನೋಡಿ ರಾಯರೇ… ನನ್ನ ಮಗ, ನಿಮ್ಮ ಮಗಳು ಇಬ್ಬರೂ ಒಟ್ಟಿಗೇ ಒಂದೇ ಕಡೇ ಕೆಲಸ ಮಾಡುತ್ತಿದ್ದಾರೆ.  ಏನೋ ಹುಡುಗು ಬುದ್ಧಿ.. ನಿಮ್ಮ ಮಗಳನ್ನು ನಮ್ಮ ಹುಡುಗ ಒಪ್ಪಿಕೊಂಡಿದ್ದಾನೆ.  ಬೇರೆ ಬೇರೆ ಯಾವುದೋ ಶ್ರೀಮಂತರ ಕಡೆ ಸಂಬಂಧ ಬಂದರೂ ಅವನ ಇಷ್ಟಕ್ಕೆ ಇಲ್ಲಾ ಅನ್ನೋಕೆ ಆಗ್ದೆ ಇಲ್ಲಿಗೆ ಬಂದಿದ್ದೀವಿ… “ ಎಂದಾಗ ಅವರ ಧ್ವನಿಯಲ್ಲಿ ಬೇರೆ ಏನೋ ಯೋಜನೆಯಿದೆ ಎಂಬ ಭಾವನೆ ಮೂಡಲಾರಂಭಿಸಿತು. . ನಂತರ ಅವರೇ ಮುಂದುವರಿಸುತ್ತಾ.. “ ನನಗೂ ವಯಸ್ಸಾಯ್ತು… ಮೂರು ಹೆಣ್ಣು ಮಕ್ಕಳ ಜವಾಬ್ದಾರಿ ಬೇರೆ..  ನಾನೋ Private firm ಲ್ಲಿ ಕೆಲಸ ಮಾಡಿದೋನು..  ಹಾಗೇಂತ ಎಲ್ಲಾ ಜವಾಬ್ದಾರಿ ಮಗನ ಮೇಲೆ ಹಾಕೋಕೆ ಆಗುತ್ಯೇ…  ಏನೋ ಹೇಳ್ತಾರಲ್ಲಾ… ಹೆಣ್ಣು ಕೊಡ್ಡ ಮಾವ ಕಣ್ಣು ಕೊಟ್ಟ  ದೇವರು ಅಂತ…  ನೀವೇ ಅವನ ಈ ಜವಾಬ್ದಾರಿಯನ್ನು ಇಳಿಸಬೇಕು…  ಏನೋ ತೊಚಿದ್ದು… ಒಂದು ಐವತ್ತು ಸಾವಿರಾನೋ… ಒಂದು ಲಕ್ಷಾನೋ   ನಿಮ್ಮ ಮಗಳ ಅಕೌಂಟಿಗೆ ಹಾಕಿದ್ರೆ ನಾಳೆ.  ಅವರಿಗೇ ಅನುಕೂಲ ಆಗುತ್ತೆ… “ ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಮಾತನಾಡಿ ದೇಶಾವರಿ ನಗೆ ನಗುತ್ತಾ ಸುಮ್ಮನಾದರು.  

 ಆದರೆ ನನಗೆ ನನ್ನ ಗಂಡನಾಗುವನನ್ನು ಯಾವುದೇ ರೀತಿಯಲ್ಲಾಗಲೀ ಖರೀದಿಸುವ ಆಸಕ್ತಿಯಾಗಲೀ ಅಗತ್ಯವಾಗಲೀ ಇರಲಿಲ್ಲ. ರಾಜನತ್ತ ನೋಡಿದೆ. ಅವನಿಂದಲೂ ಯಾವುದೇ ಉತ್ತೇಜಕರ ಪ್ರತಿಕ್ರಿಯೆ ಬರಲಿಲ್ಲ.  ನನ್ನ ತಂದೆಯವರೇನು ಅಂತಹ ಸ್ಥಿತಿವಂತರಲ್ಲ. ಹಾಗಾಗಿ ಮದುವೆ ಮಾತುಕತೆಯ  ಹಂತದಲ್ಲೇ ಮುರಿದು ಬಿತ್ತು… ಇಷ್ಟಾದರೂ ರಾಜ…  ಸಿಕ್ಕಾಗಲೆಲ್ಲಾ ..ನಿಮ್ಮ ತಂದೆಯನ್ನು ಒಪ್ಪಿಸಬೇಕಾಗಿತ್ತು… ಎನ್ನುತ್ತಿದ್ದ.. ಆಗ ಅವನ ಬಗ್ಗೆ ಅಸಹ್ಯ ಭಾವನೆ ಮೂಡಿ ಬರುತ್ತಿತ್ತು. ನನ್ನ ಸ್ನೇಹಿತೆಯರೂ ಅವನಿಗೆ ಛೀಮಾರಿ ಹಾಕಿದರು. ಆ ದ್ವೇಷಕ್ಕೆ ಹೀಗೆ ಮಾಡಿದ್ದಾನೆ…  ಎಂದಳು . 

 ಆಗ ನಾಗರಾಜ್.‌.. ಆಗಲೇ ಹೇಳಿದಂತೆ ನಿಮ್ಮ ಎಂಗೇಜ್‌ ಮೆಂಟ್‌ ಆದ ನಂತರ ಸ್ವಲ್ಪ ಪತ್ತೇದಾರಿ ಮಾಡಿದೆ.  ಆಗ ತಿಳಿಯಿತು ಈ ನಿಮ್ಮ ರಾಜನೇ ಶೀಲಾಳ ಕೇಸಿನಲ್ಲೂ ವಿಲನ್‌ ಅಂತ… ನಮ್ಮ ಪತ್ತೇದಾರಿಯಲ್ಲಿ ನಿಮ್ಮದೇನೂ ತಪ್ಪಿಲ್ಲಾಂತ ತಿಳಿದು ಬಂದಿತ್ತು. ಹಾಗಾಗಿ  ನಾನು ಮತ್ತು ಶೀಲಾ ಇಬ್ಬರೂ ರಾಜನ ಮನೆಗೆ ಹೋಗಿ ಅವನ ತಂದೆಯನ್ನು ಭೇಟಿ ಮಾಡಿ ಎಚ್ಚರಿಕೆ ಕೊಟ್ಟೆವು. ಅದೂ ಅಲ್ಲದೇ ಇದೇ ರೀತಿ ಮತ್ತೊಮ್ಮೆ ಯಾರಿಗಾದ್ರೂ ಮಾಡಿದ್ರೆ ಅವನ ಬ್ಯಾಂಕಿನ ಹಿರಿಯ ಅಧಿಕಾರಿಗಳಿಗೆ ದೂರು ಕೊಟ್ಟು ಕ್ರಮ ತೆಗೆದುಕೊಳ್ಳುವಂತೆ ಮಾಡುತ್ತೇವೆ ಎಂದೂ ಹೇಳಿದ್ದೇವೆ.  

 ಆಗ ಅವನ ತಂದೆ ಗೋಳಾಡುತ್ತಾ…  ಒಂದು ಕಡೆ ಹೆಣ್ಣು ಹೆತ್ತವರು ಆದ್ರೂ ವರದಕ್ಷಿಣೆ ತೆಗೆದುಕೊಳ್ಳುವುದು ತಪ್ಪು ಎಂದು ಎಷ್ಟು  ಹೇಳಿದರೂ… ಕೇಳ್ತಾನೇ ಇರಲಿಲ್ಲ. ನಮ್ಮನ್ನು ಬಲವಂತ ಮಾಡಿ ಹಾಗೆ ಕೇಳುವಂತೆ ಮಾಡುತ್ತಾ ಇದ್ದ.  ಮುಂಚೇ ಮದುವೆ ಬೇಡಾಂತ ಇದ್ದ. ಆದರೆ ಈಗ ಒಪ್ಪಿದ್ದಾನಲ್ಲ.. ಹೀಗಾದ್ರೂ ಅವನ ಮದುವೆ ಆಗಲಿ ಅನ್ನೋ ಆಸೆಯಿಂದ ನಾವು  ಹಾಗೆ ಮಾಡ್ತಾ ಇದ್ವಿ.  ಆದರೆ ಅದರ ಒಳಗುಟ್ಟು ನಮಗೆ ತಿಳಿಯೋಕೆ ಸ್ವಲ್ಪ ನಿಧಾನವಾಯಿತು.  ಅವನು ಹಾಗೆ ವರದಕ್ಷಿಣೆ ಕೇಳುವಂತೆ ನಮ್ಮನ್ನು ಬಲವಂತ ಮಾಡುತ್ತಾ ಇದ್ದದ್ದು  ಮದುವೆ ಹಾಗಾದ್ರೂ ತಪ್ಪಲಿ ಅಂತ. ನಮಗೋ ಬಿಸಿ ತುಪ್ಪದ ಥರಾ… ನುಂಗೋ ಹಾಗಿಲ್ಲ.. ಉಗುಳೋ ಹಾಗೂ ಇಲ್ಲ.  

 ಒಟ್ಟಿನಲ್ಲಿ ಮೊದಲು ಹುಡುಗಿಯರನ್ನು ಪ್ರೀತಿ ಮಾಡೋ ನಾಟಕ ಮಾಡೋದು.. ಅವಕಾಶ ಸಿಕ್ಕಿದ್ರೇ  ಹಾಳು ಮಾಡೋದು.. ಅಥವಾ ಅವರೇನಾದ್ರೂ ಇವನ ಪ್ರೀತಿ ನಿಜ ಅಂತ ನಂಬಿ ಮದುವೆಗೆ ಬಲವಂತ ಮಾಡಿದ್ರೇ ವರದಕ್ಷಿಣೆ ಕೇಳೋ ಹಾಗೆ ಮಾಡಿ ಮದುವೆ ಮುರಿದು ಬೀಳೋ ಹಾಗೆ ಮಾಡೋದು..  

 ನೋಡಿ ರೇಖಾ.. ಇಂಥಾವ್ರೆಲ್ಲಾ ಚಂದ್ರನಿಗೆ ಮುಸುಕೋ ಮೋಡಗಳಿದ್ದ ಹಾಗೆ ಅದೂ ಎಷ್ಟು ಹೊತ್ತು..  ಚಂದ್ರನ ಕಾಂತಿಯನ್ನು ಎಷ್ಟು ಹೊತ್ತು ಮುಚ್ಚಿಡಲು ಸಾಧ್ಯ…  ಇದನ್ನೇ ಕವಿಗಳು ಚಂದ್ರ ಮೋಡಕೆ ಬೆದರಿ ಓಡಿ ಹೋಗುತ್ತಿದ್ದಾನೆ ಎಂದು ಕಲ್ಪನೆ ಮಾಡಿ ಕವಿತೆ ಬರೆದಿದ್ದಾರೆ.  

ಇದಕ್ಕೆಲ್ಲಾ ಹೆದರಬಾರದು.. ಈಗ ಪ್ರಸಾದ್‌ ನ ಕೇಳಿ.. ನಿಮ್ಮನ್ನು ಮದುವೆ ಆಗ್ತಾನೋ ಇಲ್ವೋ ಅಂತ… ಎಂದಾಗ ರೇಖಾ ಆ ಕಡೆ ನೋಡಿದಾಗ ಪ್ರಸಾದ್‌ ಮುಗುಳ್ನಗುತ್ತಾ.. ಕಣ್ಣು ಮಿಟುಕಿಸುತ್ತಾನೆ..  

“ನಿಮ್ಮ ಉಪಕಾರ / ಋಣ  ಯಾವ ರೀತಿ ತೀರಿಸಬೇಕೋ ಗೊತ್ತಾಗುತ್ತಿಲ್ಲ.  ಬೆಟ್ಟದ ಹಾಗೆ ಬಂದ ತೊಂದರೆ ಮಂಚಿನ ಹಾಗೆ ಕರಗಿ ಹೋಯಿತು. .. ಎಂದಾಗ ನಾಗರಾಜ ಮತ್ತು ಶೀಲಾ…  ನಮಗೆ ಬೇಕಾಗಿರೋದು ನಿಮ್ಮ ಮದುವೆ ಊಟ ಹಾಗೂ ನಮ್ಮ ಮಗನಿಗೆ ಯಾವುದೇ ವರದಕ್ಷಿಣೆ ಇಲ್ಲದೇ  ಒಳ್ಳೆಯ ಹೆಂಡತಿ.. ಅಷ್ಟೇ ನಮ್ಮ ಡಿಮ್ಯಾಂಡ್…‌ “ ಎಂದರು.  

 ಎಲ್ಲಿಂದಲೋ “ ಚಂದಿರನೇತಕೆ ಓಡುವನಮ್ಮಾ.. ಮೋಡಕೆ ಬೆದರಿಹನೇ.. “ ಎಂಬ ಶಿಶು ಗೀತೆ ಬರಲಾರಂಭಿಸಿತು.. 

  • ಶಾಮಸುಂದರ್

 

 

 

 

 

 

 

 

 

 

 

 

 

 

 

 

 

 

 

 

 

                                              

Share17Tweet11SendShareShare
Next Post
ಎಸ್.ಎಂ.ಕೃಷ್ಣ; ಅಪರೂಪದ ವಿವರಗಳು

ಎಸ್.ಎಂ.ಕೃಷ್ಣ; ಅಪರೂಪದ ವಿವರಗಳು

Leave a Reply Cancel reply

Your email address will not be published. Required fields are marked *

Recommended

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು ಬೇರೆ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್_ ಪ್ರಮಾಣ ಮಾಡಿದ ಅಜ್ಜಯ್ಯ ಯಾರು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರಮಾಣ ಮಾಡಿದ ಅಜ್ಜಯ್ಯ ಯಾರು?

Radha Krishna Adiga Kannada Biography Book front

Radha Krishna Adiga – Idli Coffee Parampara-Payana

Radha Krishna Adiga Kannada Biography Book front

ರಾಧಾಕೃಷ್ಣ ಅಡಿಗ – ಇಡ್ಲಿ ಕಾಫಿ ಪರಂಪರೆ-ಪಯಣ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್_ ಪ್ರಮಾಣ ಮಾಡಿದ ಅಜ್ಜಯ್ಯ ಯಾರು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರಮಾಣ ಮಾಡಿದ ಅಜ್ಜಯ್ಯ ಯಾರು?

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು ಬೇರೆ

ಕನಸುಗಳಿಗೆ ನಿದ್ದೆಯಿಲ್ಲ

Radha Krishna Adiga Kannada Biography Book front

ರಾಧಾಕೃಷ್ಣ ಅಡಿಗ – ಇಡ್ಲಿ ಕಾಫಿ ಪರಂಪರೆ-ಪಯಣ

Radha Krishna Adiga Idli Coffee Parampara-Payana
Radha Krishna Adiga Idli Coffee Parampara-Payana
Translate »

Added to cart

Your Cart Is Empty
0

Check out our shop to see what's available

Cart Total: Total₹0.00
Your cart is empty. Shop now →
No Result
View All Result
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
  • ಪುಸ್ತಕಗಳು
  • Cart

© 2026 JNews - Premium WordPress news & magazine theme by Jegtheme.