ದೃಶ್ಯಕಾವ್ಯ
Advertisement
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
  • ಪುಸ್ತಕಗಳು
  • Cart
No Result
View All Result
 ದೃಶ್ಯಕಾವ್ಯ
No Result
View All Result
Home ಸಿನಿಗಂಧ

ಧಾರಾವಾಹಿ ನೋಡುಗರ ಮನೆಯೊಳಗೇ ಇಣುಕಿ ನೋಡಿದಾಗ..

ಒಂದು ಸಮೀಕ್ಷೆ

ಧಾರಾವಾಹಿ ನೋಡುಗರ ಮನೆಯೊಳಗೇ ಇಣುಕಿ ನೋಡಿದಾಗ..

ಉದಯ ಟಿವಿಯ ʻನಾತಿ ಚರಾಮಿʼ ಧಾರಾವಾಹಿಯ ಚಿತ್ರ

ಟಿವಿ ಧಾರಾವಾಹಿಗಳು ವೀಕ್ಷಕರ ಆಶೋತ್ತರದ ಪ್ರತಿಬಿಂಬಗಳು ಎಂಬ ಮಾತೊಂದಿದೆ. ಅದರಲ್ಲೂ ಹೆಚ್ಚು ಮಹಿಳಾ ವೀಕ್ಷಕರು ಒಂದಿಲ್ಲೊಂದು ಧಾರಾವಾಹಿಗೆ ಅಂಟಿಕೊಂಡಿರುತ್ತಾರೆ ಎಂದು ಮಾನಸಿಕ ತಜ್ಞರು ಹೇಳುತ್ತಾರೆ.  ಮಾರುಕಟ್ಟೆ ವಿಶ್ಲೇಷಕರು ಇದನ್ನೇ ಇನ್ನೊಂದು ರೀತಿಯಲ್ಲಿ ನೋಡುತ್ತಾರೆ. ಎಷ್ಟು ಹೆಚ್ಚು ವೀಕ್ಷಕರು ಎಷ್ಟು ಹೆಚ್ಚು ಸಮಯವನ್ನು ಒಂದು ನಿರ್ದಿಷ್ಟ ಧಾರಾವಾಹಿಗಾಗಿ ವ್ಯಯಿಸುತ್ತಾರೆ..? ಅಂದರೆ ಅರ್ಧಗಂಟೆಯಲ್ಲಿ ಸರಾಸರಿ ಹದಿನೈದು ನಿಮಿಷ ನೋಡುತ್ತಾರೋ.. ಹದಿನೆಂಟು ನಿಮಷವೋ ಇಪ್ಪತ್ತು ನಿಮಿಷ ನೋಡುತ್ತಾರೋ.. ಇಲ್ಲ ಚಾನೆಲ್‌ ಬದಲಿಸದೇ ಪೂರ್ತಿ ನೋಡುತ್ತಾರೋ ಎಂದೆಲ್ಲ ಲೆಕ್ಕ ಹಾಕುತ್ತಾರೆ.

ಹಾಗೆ ಎಡೆಬಿಡದೇ ಪ್ರತಿ ಕಂತಿಗಾಗಿ ಕಾದು ನೋಡುವಂತೆ ಧಾರಾವಾಹಿಗಳು ಇಷ್ಟವಾಗಲು ಅವುಗಳಲ್ಲಿರುವ ಒಂದಿಷ್ಟು ಅಂಶಗಳು ವೀಕ್ಷಕರ ಹೃದಯವನ್ನು ಸ್ಪರ್ಶಿಸಬೇಕು. ಕಥೆ, ನಿರೂಪಣೆ, ಸಂಭಾಷಣೆ, ತಾರಾಗಣ ಎಲ್ಲವೂ ಮುಖ್ಯವೇ. ಅವೆಲ್ಲವುಗಳ ಆಚೆ ಇನ್ನಷ್ಟು ಆಯಾಮಗಳಿವೆ. ಏನವು? ಯಾಕೆ ಕೆಲವು ಧಾರಾವಾಹಿಗಳು ಮೇಲ್ನೋಟಕ್ಕೆ ಸರಳ ಅನ್ನಿಸಿದರೂ ಯದ್ವಾತದ್ವಾ ಹಿಟ್‌ ಆಗುತ್ತವೆ? ಅದೇ ಕಥೆ ಅನ್ನಿಸಿದರೂ ಯಾಕೆ ಇಷ್ಟವಾಗುತ್ತದೆ? ಯಾಕೆ ಕೆಲವು ಧಾರಾವಾಹಿ ಅದ್ದೂರಿಯಾಗಿದ್ದರೂ ಸೋಲುತ್ತವೆ? ಒಂದು ಬಗೆಯ ಕಥಾವಸ್ತು ಒಂದು ವಾಹಿನಿಯವರು ಮಾಡಿ ಯಶಸ್ವಿಯಾದರು ಅಂತ ಇನ್ನೊಂದು ವಾಹಿನಿಯವರು ಮಾಡಲು ಹೋದರೆ ಅಲ್ಲೇಕೆ ಸೋಲುತ್ತದೆ? ಅಷ್ಟೇ ಏಕೆ ಒಂದು ಕತೆ ಬೆಂಗಾಲಿಯಲ್ಲೋ ತೆಲುಗಲ್ಲೋ ತಮಿಳಲ್ಲೋ ಯಶಸ್ವಿಯಾಗಿದ್ದು ಕನ್ನಡದಲ್ಲೇಕೆ ಯಶಸ್ವಿಯಾಗುವುದಿಲ್ಲ. ಈ ಎಲ್ಲ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಖಾಸಗಿ ವಾಹಿನಿಗಳು ಆ ಆಯಾಮಗಳೇನು ಎಂದು ಹುಡುಕಿಕೊಂಡು ಹೊರಟವು. ಆದರೆ ಗೋಚರಿಸಿದ್ದು ಕಥೆಯ ಆಯಾಮವಲ್ಲ; ಜನಜೀವನದ ಹೊಸ ಆಯಾಮಗಳು, ಅನೂಹ್ಯ ಒಳನೋಟಗಳು!

ಹೌದು.  ರಾಜ್ಯಾದ್ಯಂತ ವೀಕ್ಷಕರ ಅಭಿರುಚಿ, ಜೀವನ ವಿಧಾನ, ಆಚಾರ ವಿಚಾರಗಳು, ನಂಬಿಕೆಗಳು, ಭಾಷೆ, ಶಿಕ್ಷಣ, ದುಡಿಮೆ, ಸ್ತ್ರೀಸ್ವಾತಂತ್ರ್ಯ, ಮಕ್ಕಳ ಮೇಲಿನ ನಿರೀಕ್ಷೆ ಇತ್ಯಾದಿ ವಿಷಯಗಳ ಸ್ಥೂಲ ಅಧ್ಯಯನವನ್ನು ಸರ್ವೇಕ್ಷಣಾ ಸಂಸ್ಥೆಯೊಂದು ಕೈಗೊಂಡಿತ್ತು. ಇದು ಧಾರಾವಾಹಿಗಳನ್ನು ಜನಜೀವನಕ್ಕೆ ಇನ್ನಷ್ಟು ಹತ್ತಿರ ಮಾಡಬಲ್ಲ ಅಂಶಗಳನ್ನು ಹುಡುಕಿ ಕೆದಕಿ ತೆಗೆಯುವ ಉದ್ದೇಶದೊಂದಿಗೆ ರಾಜ್ಯದ ವಿವಿಧ ಮಹಾನಗರ, ನಗರ, ಪಟ್ಟಣ ಹಾಗೂ ಗ್ರಾಮಾಂತರದ ವಿವಿಧ ಸ್ತರದ ಕುಟುಂಬಗಳಿಂದ ಅಂಕಿ-ಅಂಶ ಸಂಗ್ರಹಿಸಿತು. ಈ ಕಾರ್ಯಕ್ಕೆ ನಿರ್ದಿಷ್ಟ ಪ್ರಶ್ನಾವಳಿ ವಿಧಾನ ಅನುಸರಿಸದೇ  ಆಯ್ದ ಕುಟುಂಬಗಳಿಗೆ ಭೇಟಿ ಕೊಟ್ಟು ಉಭಯಕುಶಲೋಪರಿ ಮಾತುಕತೆ ಮೂಲಕ ಅವರ ಮನಸ್ಸಿನ ಆಳಕ್ಕಿಳಿದು ವಿಷಯ ಹೊರ ಹಾಕಿಸಿತು. ಈ ಸಮೀಕ್ಷಾ ವಿಧಾನ ಅಂಕಿ ಅಂಶಗಳ ಆಡುಂಬೋಲವಾಗದೇ ಸಂಖ್ಯೆಗಳಿಗೆ ದಕ್ಕದ ಒಳನೋಟಗಳ(insights)ನ್ನು ಹೊಸ ರೀತಿಯಲ್ಲಿ ಕಟ್ಟಿಕೊಟ್ಟಿತು.

ಜಾಗತೀಕರಣದ ನಂತರ ಭಾರತದಲ್ಲಿ ಖಾಸಗಿ ಉದ್ಯೋಗಾವಕಾಶಗಳು ಹೆಚ್ಚಿ ಮಧ್ಯಮವರ್ಗದ ಜನರಿಗೆ ಮೇಲ್ಮಧ್ಯಮವರ್ಗದ ಜೀವನ ಶೈಲಿಯ ಕನಸು ಕಾಣುವ ಅವಕಾಶ ಒದಗಿಸಿಕೊಟ್ಟಿತು.

ಆದಾಯ ಆಧಾರಿತ ಕೆಳಮಧ್ಯಮವರ್ಗ, ಮಧ್ಯಮವರ್ಗ, ಮೇಲ್ಮಧ್ಯಮವರ್ಗ ಹಾಗೂ ಮೇಲ್ವರ್ಗದ ಜನರ ಆಯ್ದ ಕುಟುಂಬಸ್ಥರನ್ನು ಭೇಟಿಯಾದ ತಂಡಗಳಿಗೆ ಕೆಲವೊಮ್ಮೆ ಅಚ್ಚರಿ ಎನ್ನಿಸುವಂತೆ ಸಮರೂಪದ ಅಭಿಪ್ರಾಯಗಳು, ಯೋಚನಾ ಧಾಟಿ ಲಭ್ಯವಾಗಿದ್ದು ಸೋಜಿಗ.

ಜನ ಸಾಮಾನ್ಯರ ಜೀವನ ಸಾಂಸ್ಕೃತಿಕ ಆಯಾಮದ ಆಳಕ್ಕಿಳಿಯುವ ಪ್ರಯತ್ನ ಮಾಡುವ ಮುನ್ನ ಈ ಕೆಲವು ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಯೋಜನೆಯನ್ನು ತಂಡ ಹಾಕಿಕೊಂಡಿತ್ತು.

  • ಕನ್ನಡತನ

– ಕನ್ನಡತನ ಎಂದರೆ ಏನು? ಕನ್ನಡಿಗರಾಗಿರುವುದು ಎಂದರೆ ಏನು?

– ಕರ್ನಾಟಕವೆಂದರೆ ಯಾವ ವಿಷಯಕ್ಕೆ ನಿಮಗೆ ಹೆಮ್ಮೆ? ಏನು ಇಷ್ಟಪಡುತ್ತೀರಿ? ಏನನ್ನು ಇಷ್ಟ ಪಡುವುದಿಲ್ಲ?

– ಕನ್ನಡತನ ಹೇಗೆ ಬದಲಾಗಿದೆ? ವಿಕಾಸಗೊಳ್ಳುತ್ತಿದೆ? ಭೂತ-ವರ್ತಮಾನ-ಭವಿಷ್ಯವೇನು?

  • ಜೀವನದ ಆದ್ಯತೆಗಳು
  • ನಿಮ್ಮ ಜೀವನದಲ್ಲಿ ತುಂಬ ಮಹತ್ವದ ಅಂಶಗಳು ಯಾವವು?
  • ನಿಮಗೆ ಅವಕಾಶ ಸಿಕ್ಕಿದ್ದರೆ, ಈಗಿರುವ ಜೀವನವನ್ನು ಹೇಗೆ ಬದಲಾಯಿಸಿಕೊಳ್ಳುತ್ತಿದ್ದಿರಿ?
  • ನಿಮಗೆ ಮಾದರಿ ವ್ಯಕ್ತಿಗಳು ಯಾರು ಯಾರು?
  • ನಿಮ್ಮ ಜೀವನದಲ್ಲಿ ಯಾವ ವಿಷಯ ಆಗಲೇಬೇಕು ಎಂದು ಭಾವಿಸಿದ್ದೀರಿ?
  • ಫ್ರೆಂಡ್- ಫಿಲಾಸಫರ್ – ಗೈಡ್
  • ನಿಮಗೆ ಏನಾದರೂ ಸಲಹೆ ಸೂಚನೆ ಮಾರ್ಗದರ್ಶನ ಬೇಕು ಎಂದಾಗ ಯಾರನ್ನು ಸಂಪರ್ಕಿಸುತ್ತೀರಿ?
  • ಮನರಂಜನೆ
  • ನಿಮ್ಮ ಜೀವನದಲ್ಲಿ ಮನರಂಜನೆಗೆ ಎಷ್ಟು ಮಹತ್ವವಿದೆ?
  • ನಿಮ್ಮ ಮನರಂಜನೆಗೆ ಏನೇನು ಮಾಡುವಿರಿ? ಈ ಸಾಧನ ಲಭ್ಯವಿಲ್ಲದಿದ್ದಲ್ಲಿ ಬದಲಿ ಏನು ಮಾಡುತ್ತಿದ್ದಿರಿ?
  • ಟೆಲಿವಿಷನ್
  • ನಿಮ್ಮ ಜೀವನದಲ್ಲಿ ಟೆಲಿವಿಷನ್ ಎಷ್ಟು ಮುಖ್ಯ? ಹಿಂದೆ-ಇಂದು-ಮುಂದೆ
  • ಐದು ವರ್ಷದ ಹಿಂದೆ ಟಿವಿ ಎಷ್ಟು ಮುಖ್ಯವಾಗಿತ್ತು? ಈಗ? 5 ವರ್ಷದ ನಂತರ?
  • ಟಿವಿಯಲ್ಲಿ ನೋಡಲೇಬೇಕು ಎಂಬ ಅಂಶ ಯಾವುದು? ಯಾವುದನ್ನು ತುಂಬ ಇಷ್ಟಪಡುತ್ತೀರಿ? ಯಾವುದನ್ನು ಇಷ್ಟಪಡುವುದಿಲ್ಲ.
  • ಈಗ ಹಾಲಿ ಇಲ್ಲದೇ ಇರುವ ಯಾವುದನ್ನು ಟಿವಿಯಲ್ಲಿ ನೋಡಲು ಇಷ್ಟಪಡುತ್ತೀರಿ?

ಈ ಎಲ್ಲ ವಿಷಯಗಳನ್ನು ಒಳಗೊಂಡ ಅನೌಪಚಾರಿಕ ಮಾತುಕತೆಗಳನ್ನ ಸಮೀಕ್ಷಾ ತಂಡ ನಡೆಸಿತು. ಪ್ರತಿ ತಂಡದಲ್ಲೂ 2-3 ಸದಸ್ಯರು ನಿಗದಿತ ಒಂದು ಮನೆಯಲ್ಲಿ ಕನಿಷ್ಟ 2 ಗಂಟೆ ಕಳೆಯುತ್ತಿದ್ದರು. ಯಾವ ಮಾತುಕತೆಯೂ ಪ್ರಶ್ನೆಯ ರೂಪದಲ್ಲಿರದೇ ಚರ್ಚೆಯ ರೂಪದಲ್ಲಿ ಇರುತ್ತಿತ್ತು. ಅವರನ್ನು ಹೆಚ್ಚು ಹೆಚ್ಚು ಮಾತಾಡಲು ಪ್ರೇರೇಪಿಸುವ ಹಾಗೆ ಯೋಜಿಸಲಾಗಿತ್ತು. ಮಂಡ್ಯ, ಮೈಸೂರು, ಬೆಂಗಳೂರು, ತುಮಕೂರು, ದಾವಣಗೆರೆ, ಶಿವಮೊಗ್ಗ, ಹುಬ್ಬಳ್ಳಿ, ಬಳ್ಳಾರಿ ನಗರ ಹಾಗೂ ಗ್ರಾಮಾಂತರಗಳಿಗೆ ತಂಡ ಭೇಟಿ ನೀಡಿತ್ತು. ಹಾಗಾಗಿ ಈ ಸಮೀಕ್ಷೆಗೊಂದು ವ್ಯಾಪಕತೆ ದೊರಕಿತು. ಭೇಟಿಕೊಟ್ಟ ಮನೆಯ ಸದಸ್ಯರಿಂದ, ಮುಖ್ಯವಾಗಿ ಮಹಿಳಾ ಸದಸ್ಯರುಗಳಿಂದ ಬಂದ ಉತ್ತರಗಳನ್ನು ಒಳನೋಟಗಳನ್ನಾಗಿ ಪರಿವರ್ತಿಸಲಾಯಿತು.

ಆ ಒಳನೋಟಗಳನ್ನು ಮಾನವೀಯ ಒಳನೋಟಗಳು, ಸಾಂಸ್ಕೃತಿಕ ಒಳನೋಟಗಳು ಹಾಗೂ ಮನರಂಜನಾತ್ಮಕ ಒಳನೋಟಗಳು ಎಂದು ಮೂರು ವಿಭಾಗ ಮಾಡಲಾಯಿತು.

  1. ಮಾನವೀಯ ಒಳನೋಟಗಳು (Human Insights)
  • ಪತಿ-ಪತ್ನಿಯರಲ್ಲಿ ಪರಸ್ಪರ ಕಾಳಜಿ ಹೆಚ್ಚಳ
  • ಮಕ್ಕಳ ಬಗ್ಗೆ ಅತೀವ ಕಾಳಜಿ; ಶಿಕ್ಷಣವೇ ಮೊದಲ ಆದ್ಯತೆ.
  • ಇರುವ ಮಿತಿಯಲ್ಲೇ ಸಂತೋಷ ಕಂಡುಕೊಳ್ಳುವಿಕೆ.
  • ಕುಟುಂಬಕ್ಕಾಗಿ ಕೈಲಾದಷ್ಟು ಗಳಿಸುವ ಮಹಿಳೆಯರ ತುಡಿತ (ಕೃಷಿ, ಹೊಲಿಗೆ ಇತ್ಯಾದಿಗಳಿಂದ)
  • ಗಂಡನಿಗಿಂತ ಹೆಚ್ಚು ಗಳಿಸದಿರುವ ಪ್ರಜ್ಞಾಪೂರ್ವಕ ನಿರ್ಧಾರ (to satisfy male ego)
  • ಬಡವರ್ಗದವರ ನೇರ ನಡೆನುಡಿ; ಮಧ್ಯಮವರ್ಗದವರ ಕೃತ್ರಿಮ ನಡೆನುಡಿ

(ಉದಾ: ಉಪನ್ಯಾಸಕರು, ಶಿಕ್ಷಕರು ಇರುವ ಮನೆಯಲ್ಲಿ ಕಂಡುಬಂದ ಉಪದೇಶಾತ್ಮಕ ಪ್ರತಿಕ್ರಿಯೆಗಳು)

  • ಸಮಾನ ಮನಸ್ಕ ಮಹಿಳೆಯರ ಪರಸ್ಪರ ಬೆಂಬಲ ( ಉದಾ: ಸ್ತ್ರೀಶಕ್ತಿ ಸಂಘಟನೆ)
  • ಹೆಣ್ಣು ಮಕ್ಕಳ ಓದಿಗೆ ದೊರೆತ ಮಹತ್ವ. ಪರವೂರಲ್ಲಿ ಕೆಲಸಕ್ಕೆ ಕಳಿಸಲು ಸಿದ್ಧ
  • ಮೇಲ್ನೋಟಕ್ಕೆ ಕಾಣಿಸದಂತೆ ಒಳಗೊಳಗೇ ಇರುವ ಅತ್ತೆ-ಸೊಸೆ ಅಭಿಪ್ರಾಯ ಭೇದಗಳು.
  • ಸೊಸೆಯ ಮೇಲೆ ಹಿಡಿತ ಇಟ್ಟುಕೊಳ್ಳಲು ಚಾಲ್ತಿಯಲ್ಲಿರುವ ಅತ್ತೆಯರ ಅಂತರ್ಗತ ಪ್ರಯತ್ನಗಳು.
  • ವೃದ್ಧ ತಂದೆತಾಯಿಯರನ್ನು ಗಂಡುಮಕ್ಕಳು ನಿರ್ಲಕ್ಷ್ಯಿಸುವ ಪ್ರವೃತ್ತಿ; ಹೆಣ್ಣು ಮಕ್ಕಳು ಜವಾಬ್ದಾರಿ ಹೊತ್ತುಕೊಳ್ಳುವ ಹೊಸ ಪರಂಪರೆ.
  • ಸಮಾಜ ಬೆಂಬಲಕ್ಕಿದ್ದರೆ ಕುಟುಂಬದ ಅಪಸವ್ಯಗಳನ್ನು ಎದುರಿಸುವ ಮಹಿಳೆಯರ ಛಲ
  • ಸಂಬಂಧಗಳಲ್ಲಿ ಮದುವೆಗೆ ಸಣ್ಣ ವಿರೋಧ/ ಅಂತರ್ಜಾತೀಯ ವಿವಾಹಕ್ಕೆ ಪ್ರಬಲ ವಿರೋಧ
  • ಮಹಿಳೆಯರು ಮದುವೆಗೂ ಮೊದಲು ತಂದೆಯ ಇಷ್ಟದ ವಿರುದ್ಧ ಹೋಗಬಾರದು ಹಾಗೂ ನಂತರ ಗಂಡನ ಇಷ್ಟದ ವಿರುದ್ಧ ಹೋಗಬಾರದು ಎಂಬ ಈಗಲೂ ಇರುವ ಸಾಮಾನ್ಯ ಭಾವ.
  • ಅವಿಭಕ್ತ ಕುಟುಂಬಗಳು ಬೇಕು ಎಂಬ ಆಸೆ. ಒಂದೇ ಕುಟುಂಬಕ್ಕೆ ಸೇರಿದ ಗುಂಪು ಮನೆಗಳು.
  • ಇರುವ ಜೀವನದಲ್ಲಿ ಅಸಮಾಧಾನ. ಅವಕಾಶ ಸಿಕ್ಕರೆ ಈಗಿರುವ ಜೀವನವನ್ನು ಬದಲಾಯಿಸುವ ಇರಾದೆ.

ಸಾಂಸ್ಕೃತಿಕ ಒಳನೋಟ (Cultural Insights):

  • ಆಚರಣೆಗಳ ಬಗ್ಗೆ ಗೌರವ. ಉದಾ: ಪೂಜೆ, ವ್ರತ ಇತ್ಯಾದಿ
  • ದೇವರ ಮೇಲಿನ ನಂಬಿಕೆಯೇ ಆತ್ಮವಿಶ್ವಾಸದ ಮಾರ್ಗ
  • ಏನೇ ಕಷ್ಟ ಬಂದರೂ ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ ಎಂಬ ವಿಶ್ವಾಸ.
  • ಪ್ರವಾಸವೆಂದರೆ ದೇವಸ್ಥಾನಗಳಿಗೆ ಹೋಗುವುದು; ಅದರಲ್ಲೂ ಮನೆದೇವರ ದರ್ಶನಕ್ಕೆ ಅತಿ ಮಹತ್ವ.
  • ಮಹಿಳಾ ಸಂಘಟನೆ ಸದಸ್ಯರೆಲ್ಲ ಸೇರಿ ಪ್ರವಾಸ ಹೋಗುವುದು (ಗಂಡಸರ ಅನುಮತಿಯೊಂದಿಗೆ)
  • ಮನೆಗಳಲ್ಲಿ ಆಚರಿಸುವ ಅತಿದೊಡ್ಡ ಹಬ್ಬ ಪಕ್ಷ (ಪಿತೃಪಕ್ಷ). ದಸರಾ, ದೀಪಾವಳಿ, ಗಣೇಶಚೌತಿ ಯಾವುದೂ ಸಾಮಾನ್ಯವಾಗಿ ಕುಟುಂಬದೊಳಗೆ ದೊಡ್ಡ ಹಬ್ಬವಾಗಿ ಪರಿಗಣಿತವಾಗಿಲ್ಲ ಎಂಬುದು ಸೋಜಿಗ.

ಮನರಂಜನಾತ್ಮಕ ಒಳನೋಟ (Entertainment Insights):

  • ಎಲ್ಲ ವಯೋಮಾನದ ಮಹಿಳೆಯರಿಗೆ ಸಾರ್ವಕಾಲಿಕ ಮನರಂಜನೆ ದೊರಕುತ್ತಿರುವುದು ಟಿವಿ ಧಾರಾವಾಹಿಗಳಿಂದ.
  • ಧಾರಾವಾಹಿಗಳಿಂದ ಋಣಾತ್ಮಕ ಹಾಗೂ ಧನಾತ್ಮಕ ಪ್ರಭಾವ.
  • ಡ್ಯಾನ್ಸ್ ಹಾಗೂ ಹಾಡಿನ ಸ್ಪರ್ಧೆಯಂಥ ಪ್ರತಿಭಾ ಪ್ರದರ್ಶನ ಕಾರ್ಯಕ್ರಮಗಳ ಧನಾತ್ಮಕ ಪ್ರಭಾವ.
  • ಪೌರಾಣಿಕ ಮತ್ತು ಅತಿಮಾನುಷ ಕಥೆಗಳ ಬಗ್ಗೆ ಆಸಕ್ತಿ, ಆದರೆ ಎಲ್ಲವೂ ನಂಬುವಂತೆ ಚಿತ್ರಿಸಿರಬೇಕು.
  • ಚಿತ್ರಮಂದಿರಗಳಿಗೆ ಮದುವೆಗೂ ಮುಂಚೆ ಹೋಗುವುದು ಎಷ್ಟು ಸಾಮಾನ್ಯವೋ ಮದುವೆಯ ನಂತರ ಹೋಗದಿರುವುದೂ ಅಷ್ಟೇ ಸಾಮಾನ್ಯ.
  • ಪತ್ರಿಕೆ, ಮ್ಯಾಗಝಿನ್ ಹಾಗೂ ಪುಸ್ತಕಗಳನ್ನು ಓದುವ ಹವ್ಯಾಸ ಸಂಪೂರ್ಣ ಸ್ಥಗಿತ. ಅತ್ಯಂತ ಸುಶಿಕ್ಷಿತರ ಮನೆಗಳಲ್ಲಿ ಮಾತ್ರ ಪತ್ರಿಕೆಗಳ ಅಸ್ತಿತ್ವ.
  • ಡಿಜಿಟಲ್ ಮಾಧ್ಯಮಗಳ ಬಳಕೆ (ಮೊಬೈಲ್ ಮೂಲಕ)
  • ನಾಟಕಗಳನ್ನು ನೋಡುವುದು ಇತ್ಯಾದಿ ಕಾಣೆ.

ಸಮಗ್ರ ಮಾತುಕತೆಗಳಲ್ಲಿ ಎಲ್ಲ ಪ್ರಶ್ನೆಗಳಿಗೆ ಧಾರಾಳವಾಗಿ ಉತ್ತರ ನೀಡಿದ ಪ್ರತಿಯೊಂದು ಕುಟುಂಬವೂ ಕನ್ನಡತನ ಎಂದರೆ ಏನು? ಕರ್ನಾಟಕವೆಂದರೆ ನಿಮಗೆ ಏಕೆ ಹೆಮ್ಮೆ ಎಂಬುದನ್ನು ವ್ಯಾಖ್ಯಾನಿಸಲು ಸೋತರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕನ್ನಡವೊಂದೇ ಸಾಲದು, ಹಲವು ಭಾಷೆ ಗೊತ್ತಿರಬೇಕು, ಇಂಗ್ಲಿಷ್ ಶಿಕ್ಷಣ ಮುಖ್ಯ ಎಂಬೆಲ್ಲ ಭಾವನೆಗಳು ವ್ಯಕ್ತವಾದವು. ಕನ್ನಡ ಎಂದಾಗ ಯಾವ ವ್ಯಕ್ತಿಯ ಮುಖ ಕಣ್ಮುಂದೆ ಬರುತ್ತದೆ ಎಂಬ ಪ್ರಶ್ನೆಗೆ 99% ಜನರ ಉತ್ತರ ಡಾ| ರಾಜಕುಮಾರ್ ! ಕುವೆಂಪು, ವಿಶ್ವೇಶ್ವರಯ್ಯ ಇತ್ಯಾದಿ ಹೆಸರನ್ನು ಕೆಲವು ಸುಶಿಕ್ಷಿತರು ಹೇಳಿದರಾದರೂ ರಾಜಕುಮಾರ್ ಏಕೈಕ ಕನ್ನಡತನದ ಪ್ರತೀಕವಾಗಿ ಜನಮಾನಸದಲ್ಲಿ ಕಂಡುಬಂದರು.

ಇನ್ನು, ಧಾರಾವಾಹಿಗಳ ವಿಷಯಕ್ಕೆ ಬಂದರೆ, ಮೂಡಿಬರುತ್ತಿರುವ ಯಶಸ್ವಿ ಟಿವಿ ಧಾರಾವಾಹಿಗಳೆಲ್ಲ ವೀಕ್ಷಕರ ಆಶೋತ್ತರಗಳಿಗೆ ತಕ್ಕಂತೆ ಇವೆಯೆ? ಎಲ್ಲಿದೆ ನೈಜತೆ? ಎಲ್ಲಿದೆ ಕಲಾತ್ಮಕತೆ? ಎಲ್ಲಿದೆ ಸಾಮಾನ್ಯ ಜನರ ಜೀವನ? ಎಲ್ಲವೂ ಆಡಂಬರ, ಕೃತ್ರಿಮ ಅದ್ದೂರಿತನ ಹಾಗೂ ನಿತ್ಯ ಜೀವನಕ್ಕೆ ದೂರವಾದ ಘಟನೆಗಳ ಚೌಚೌ ಬಾತ್‌ಆಗಿದೆಯಲ್ಲವೆ ಎಂಬ ಪ್ರಶ್ನೆ ಮೂಡುತ್ತದೆ. ಹೀಗಿದ್ದೂ ಧಾರಾವಾಹಿಗಳು ವಿಶೇಷವಾಗಿ ಮಹಿಳಾ ವೀಕ್ಷಕರ ಮೇಲೆ ಹೆಚ್ಚು ಪ್ರಭಾವ ಬೀರುವುದು ಅದರೊಳಗಣ ಸೂಕ್ಷ್ಮದಿಂದ. ಸಂಬಂಧಗಳು ಹಾಗೂ ಭಾವನೆಗಳ ಮೀಟುವಿಕೆಯಿಂದ ನೋಡುಗರ ಕುಟುಂಬದಲ್ಲಿ ಸದ್ದುಮಾಡದೇ ಸ್ಥಾನ ಪಡೆದು ಬೆಚ್ಚಗೆ ಕುಳಿತುಕೊಂಡಿರುತ್ತವೆ. ಕೌಟುಂಬಿಕ ವಿಷಯಗಳಲ್ಲಿ, ನಿರ್ಧಾರಗಳಲ್ಲಿ, ನಡವಳಿಕೆಗಳ ಮೇಲೆ ತನ್ನದೇ ಆದ ಪರಿಣಾಮ ಬೀರುವುದಂತೂ ಸತ್ಯ.

ಟಿವಿ ಧಾರಾವಾಹಿಗಳನ್ನು ವೀಕ್ಷಕರಿಗೆ ಇನ್ನಷ್ಟು ಹತ್ತಿರವಾಗಿಸುವ ಉದ್ದೇಶದಿಂದಲೇ ಈ ಸಮೀಕ್ಷೆ ನಡೆದಿರುವುದಾದರೂ ಇದರಿಂದ ಬದಲಾಗುತ್ತಿರುವ ಜೀವನ ಶೈಲಿ, ಯೋಚನಾ ಲಹರಿ, ಕೌಟುಂಬಿಕ ಬಂಧಗಳು ಢಾಳಾಗಿ ಕಂಡವು. ಇದು ಭವಿಷ್ಯದ ಸಾಂಸ್ಕೃತಿಕ ಕರ್ನಾಟಕದ ದಿಕ್ಸೂಚಿಯೂ ಹೌದು ಎಂದರೆ ಅತಿಶಯೋಕ್ತಿಯಲ್ಲ.

Share18Tweet12SendShareShare
Next Post
ಇತಿಹಾಸದಿಂದ ಜನಸಾಮಾನ್ಯರಿಗೆ ಏನು ಉಪಯೋಗ?

ಇತಿಹಾಸದಿಂದ ಜನಸಾಮಾನ್ಯರಿಗೆ ಏನು ಉಪಯೋಗ?

Comments 2

  1. Vanishree Anekere says:
    2 years ago

    ದೃಶ್ಯ ಕಾವ್ಯ ತಂಡಕ್ಕೆ ಶುಭಾಶಯಗಳು
    ನಿಮ್ಮ ತಂಡದಿಂದ ಇನ್ನೂ ಹೆಚ್ಚು ಅಂಕಣಗಳು ಮೂಡಿಬರಲಿ 💐💐

    Reply
    • vinayaka bhat says:
      2 years ago

      ಧನ್ಯವಾದಗಳು

      Reply

Leave a Reply Cancel reply

Your email address will not be published. Required fields are marked *

Recommended

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು ಬೇರೆ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್_ ಪ್ರಮಾಣ ಮಾಡಿದ ಅಜ್ಜಯ್ಯ ಯಾರು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರಮಾಣ ಮಾಡಿದ ಅಜ್ಜಯ್ಯ ಯಾರು?

Radha Krishna Adiga Kannada Biography Book front

Radha Krishna Adiga – Idli Coffee Parampara-Payana

Radha Krishna Adiga Kannada Biography Book front

ರಾಧಾಕೃಷ್ಣ ಅಡಿಗ – ಇಡ್ಲಿ ಕಾಫಿ ಪರಂಪರೆ-ಪಯಣ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್_ ಪ್ರಮಾಣ ಮಾಡಿದ ಅಜ್ಜಯ್ಯ ಯಾರು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರಮಾಣ ಮಾಡಿದ ಅಜ್ಜಯ್ಯ ಯಾರು?

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು ಬೇರೆ

ಕನಸುಗಳಿಗೆ ನಿದ್ದೆಯಿಲ್ಲ

Radha Krishna Adiga Kannada Biography Book front

ರಾಧಾಕೃಷ್ಣ ಅಡಿಗ – ಇಡ್ಲಿ ಕಾಫಿ ಪರಂಪರೆ-ಪಯಣ

Radha Krishna Adiga Idli Coffee Parampara-Payana
Radha Krishna Adiga Idli Coffee Parampara-Payana
Translate »

Added to cart

Your Cart Is Empty
0

Check out our shop to see what's available

Cart Total: Total₹0.00
Your cart is empty. Shop now →
No Result
View All Result
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
  • ಪುಸ್ತಕಗಳು
  • Cart

© 2026 JNews - Premium WordPress news & magazine theme by Jegtheme.