ದೃಶ್ಯಕಾವ್ಯ
Advertisement
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
No Result
View All Result
 ದೃಶ್ಯಕಾವ್ಯ
No Result
View All Result
Home ಗಹನ

ಕನ್ನಡ ಪುಸ್ತಕೋದ್ಯಮದ ಕಹಿಸತ್ಯ

ಕನ್ನಡ ಪುಸ್ತಕೋದ್ಯಮದ ಕಹಿಸತ್ಯ

ಮತ್ತೊಂದು ಕನ್ನಡ ರಾಜ್ಯೋತ್ಸವ ಮಗಿದಿದೆ.

ಕನ್ನಡ ಭಾಷೆಯ ಅಳಿವು ಉಳಿವಿನ ಭಾಷಣಗಳು, ಲೇಖನಗಳು, ಟಿವಿ ಕಾರ್ಯಕ್ರಮಗಳು, ಚರ್ಚೆಗಳು, ಗೋಷ್ಠಿಗಳು.. ಎಲ್ಲೆಲ್ಲೂ ಕನ್ನಡದ್ದೇ ಕಲರವ.

ಅಸಲಿಗೆ, ಯಾವುದೇ ಭಾಷೆಯ ಸ್ಥಿತಿಗತಿ ಅಳೆಯಲು ಸರಿಯಾದ ಮಾನದಂಡ ಎಂದರೆ ಪುಸ್ತಕೋದ್ಯಮ. ಪುಸ್ತಕ ಹಾಗೂ ಪತ್ರಿಕೆಗಳನ್ನು ಕೊಳ್ಳುವ ಪ್ರಮಾಣವೇ ಆ ಭಾಷೆಯ ಜೀವಂತಿಕೆಯ ಪ್ರತೀಕ. ಈ ನಿಟ್ಟಿನಲ್ಲಿ ಕನ್ನಡ ಪುಸ್ತಕೋದ್ಯಮ ಅವಲೋಕಿಸಿದರೆ ಸ್ವಲ್ಪ ಗಾಬರಿಯೇ ಆಗುತ್ತದೆ. ರಾಜ್ಯದಲ್ಲಿ ಇಂಗ್ಲಿಷ್ ಪುಸ್ತಕೋದ್ಯಮದ ವಹಿವಾಟು ದಿನೇದಿನೇ ಹೆಚ್ಚುತ್ತಲೇ ಇದ್ದರೆ, ಕನ್ನಡ ಪುಸ್ತಕೋದ್ಯಮದ ವಹಿವಾಟು ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಲೇ ಇದೆ. ಇದಕ್ಕೆ ಕಾರಣಗಳೇನು.. ಕನ್ನಡ ಪುಸ್ತಕ ಕೊಂಡು ಓದುವವರು ಕಡಿಮೆ ಆಗುತ್ತಿರುವುದು ಏಕೆ? ಹೆಚ್ಚುತ್ತಿರುವ ಇಂಗ್ಲಿಷ್ ಶಿಕ್ಷಣವೇ? ಜಾಗತೀಕರಣವೆ? ಬದಲಾಗುತ್ತಿರುವ ಧೋರಣೆಯೆ?

ಒಂದು ಕಾಲದಲ್ಲಿ ಕನ್ನಡ ಪುಸ್ತಕೋದ್ಯಮ ಉಚ್ಛಾçಯ ಸ್ಥಿತಿಯಲ್ಲಿತ್ತು. ಕಾದಂಬರಿಗಳು ಜನಪ್ರಿಯವಾಗಿದ್ದ ಕಾಲವದು. ರಾಜ್ಯಾದ್ಯಂತ ಹತ್ತಾರು ಜನಪ್ರಿಯ ಪ್ರಕಾಶನ ಸಂಸ್ಥೆಗಳು ಖ್ಯಾತ ಕಾದಂಬರಿಕಾರರ ಕಾದಂಬರಿಗಳನ್ನು ವರ್ಷವಿಡೀ ಪ್ರಕಟಿಸುತ್ತಿದ್ದವು. ಬಿಸಿ ದೋಸೆಯಂತೆ ಅವು ಬಿಕರಿಯಾಗುತ್ತಿದ್ದವು.

ತರಾಸು, ಅನಕೃ, ಎಚ್.ಕೆ.ಅನಂತರಾಮ್, ಟಿ.ಕೆ.ರಾಮರಾವ್, ಎಂ.ಕೆ.ಇಂದಿರಾ, ತ್ರಿವೇಣಿ, ಉಷಾನವರತ್ನರಾಮ್, ಎಚ್.ಜಿ.ರಾಧಾದೇವಿ, ಎಚ್.ಕೆ. ಅನಸೂಯ ಸಂಪತ್ ಹೀಗೆ ಜನಪ್ರಿಯ ಕಾದಂಬರಿಕಾರರ ದಂಡೇ ಇತ್ತು. ಗಂಭೀರ ಓದಿಗೆ ಕಾರಂತರು, ಭೈರಪ್ಪ, ಅನಂತಮೂರ್ತಿ ಮುಂತಾದವರ ಕಾದಂಬರಿಗಳಿದ್ದವು. ಯಂಡಮೂರಿ ವೀರೇಂದ್ರನಾಥರ ಥ್ರಿಲ್ಲರ್ ತೆಲುಗು ಕಾದಂಬರಿಗಳು ಕನ್ನಡಕ್ಕೆ ಪುಂಖಾನುಪುಂಖವಾಗಿ ಅನುವಾದಗೊಂಡವು. ಹೀಗೆಯೇ ಮರಾಠಿ, ಹಿಂದಿ, ಮಲಯಾಳಂ, ತಮಿಳಿನಿಂದಲೂ ಪುಸ್ತಕಗಳು ಅನುವಾದಗೊಂಡು ಜನಪ್ರಿಯವಾದವು. ರೋಮ್ಯಾಂಟಿಕ್, ಕೌಟುಂಬಿಕ, ಹಾಸ್ಯಮಯ, ನಿಗೂಢ ರಹಸ್ಯ ಭೇದಿಸುವ ಕಾದಂಬರಿ ಪ್ರಕಾರಗಳು ತಮ್ಮ ತಮ್ಮ ಕನ್ನಡ ಓದುಗ ವರ್ಗವನ್ನೇ ಸೃಷ್ಟಿಸಿಕೊಂಡಿದ್ದವು. ಕಾದಂಬರಿ ಹೊರತಾದ ಸಾಹಿತ್ಯ ಪ್ರಕಾರಗಳಲ್ಲಿ ಕವಿತೆಗಳು ಹಲವರಿಗೆ ಓದುವ ಹುಚ್ಚು ಹಿಡಿಸಿದ್ದುಂಟು. ಕಥೇತರ ವಿಭಾಗದ ಪುಸ್ತಕಗಳೂ ಯಥೇಚ್ಚ ಮಾರಾಟವಾಗುತ್ತಿದ್ದವು.

ಹಾಗೆಯೇ ಕನ್ನಡದ ವಾರ ಪತ್ರಿಕೆಗಳು ಮತ್ತು ಮಾಸಪತ್ರಿಕೆಗಳೂ ಓದುಗರಲ್ಲಿ ಸಂಚಲನ ಹುಟ್ಟಿಸುತ್ತಿದ್ದವು. 1960 ರಿಂದ ಸುಮಾರು ಮೂವತ್ತೈದು ವರ್ಷಗಳನ್ನು ಕನ್ನಡ ಪುಸ್ತಕೋದ್ಯಮದ ಸುವರ್ಣಯುಗ ಎನ್ನಬಹುದು. ಆಗಲೇ ಹಲವಾರು ಹೊಸ ಪ್ರಕಾಶನ ಸಂಸ್ಥೆಗಳೂ ಹುಟ್ಟಿಕೊಂಡವು. ಹೊಸ ಹೊಸ ಕಾದಂಬರಿಕಾರರೂ ಹುಟ್ಟಿಕೊಂಡರು.

ಕಾದಂಬರಿ ಓದುಗರ ವರ್ಗವನ್ನು ಮೊದಲು ಸೆಳೆದುಕೊಂಡಿದ್ದು ಟಿವಿ ಧಾರಾವಾಹಿಗಳು.

ಖಾಸಗಿ ಟಿವಿ ವಾಹಿನಿಗಳ ಸಂಖ್ಯೆ ಹೆಚ್ಚಿದಂತೆ ಟಿ.ವಿ. ಧಾರಾವಾಹಿಗಳ ಸಂಖ್ಯೆಯೂ ಹೆಚ್ಚಾಯಿತು. ಜನರ, ವಿಶೇಷವಾಗಿ ಗೃಹಿಣಿಯರ ಗಮನವನ್ನು ಅದು ಸೆಳೆಯತೊಡಗಿತು. ಕಾದಂಬರಿಗಳ, ವಾರಪತ್ರಿಕೆಗಳಲ್ಲಿ ಪ್ರಕಟವಾಗುವ ಧಾರಾವಾಹಿಗಳ ಖಾಯಂ ಓದುಗರಾಗಿದ್ದು ಮಹಿಳೆಯರ ದೊಡ್ಡ ಬಳಗ ಟಿವಿ ಧಾರಾವಾಹಿಗಳ ಹಿಂದೆ ಬಿತ್ತು. ಓದಿ ಕಲ್ಪಿಸಿಕೊಳ್ಳುವ ಸುಖ ಬಿಟ್ಟು ಟಿವಿ ಎಂಬ ಸಖನ ಕಡೆ ಕಣ್ಣು ನೆಟ್ಟರು. ಕಾದಂಬರಿಗಳಿಗೆ ಟಿವಿ ಧಾರಾವಾಹಿಗಳು ಪರ್ಯಾಯವಾಗುತ್ತಿದ್ದಂತೆಯೇ ಪುಸ್ತಕಗಳು ಅಟ್ಟ ಸೇರಿದವು. ಪ್ರಕಾಶನ ಸಂಸ್ಥೆಗಳೂ ಕಾದಂಬರಿ ಪ್ರಕಟಿಸುವುದನ್ನು ಕಡಿಮೆ ಮಾಡತೊಡಗಿದವು.

1995ರ ನಂತರ, ಕಂಪ್ಯೂಟರ್ ಕ್ರಾಂತಿ ಮತ್ತು ಜಾಗತೀಕರಣದ ಫಲ ಜನರ ಕೈಗೆ ಸಿಗತೊಡಗಿತು. ಕ್ರಮೇಣ ಇಂಗ್ಲಿಷ್ ಶಿಕ್ಷಣ ಹೋಬಳಿ ಮಟ್ಟಕ್ಕೂ ಕಾಲಿರಿಸಿತು. ಇಂಗ್ಲಿಷ್‌ನಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿರುವ ಬಹುತೇಕ ಜನರು ಕನ್ನಡ ಪುಸ್ತಕಗಳನ್ನು ಓದುವ ಪರಿಪಾಠ ಹೊಂದಿರುವುದಿಲ್ಲ. ಹೀಗಾಗಿ ಪ್ರಸ್ತುತ ಕನ್ನಡ ಪುಸ್ತಕ ಖರೀದಿಗೆ ಬರುವವರಲ್ಲಿ ನಲುವತ್ತು ವರ್ಷ ಮೇಲ್ಪಟ್ಟು ವಯಸ್ಸಿನವರೇ ಜಾಸ್ತಿ ಅನ್ನುತ್ತದೆ ಒಂದು ಸಮೀಕ್ಷೆ. ಅಂದರೆ ಅವರೆಲ್ಲ 1990ಕ್ಕೂ ಹಿಂದೆ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದವರು. ಕನ್ನಡದಲ್ಲಿ ಓದುವ ಪ್ರೀತಿ ಹಚ್ಚಿಕೊಂಡವರು. ಆದರೆ ಈಗಿನ ತರುವಾಯದವರಲ್ಲಿ ಆ ಬಗೆಯ ಕನ್ನಡ ಪುಸ್ತಕ ಪ್ರೀತಿ ಕಾಣಸಿಗುವುದು ಕಷ್ಟ ಎನ್ನುತ್ತಾರೆ ಪ್ರಕಾಶಕರು.

ಹಾಗೆ ನೋಡಿದರೆ ಈಗ ಮೊದಲಿಗಿಂತ ಹೆಚ್ಚು ಕನ್ನಡ ಪುಸ್ತಕಗಳು ಪ್ರಕಟಗೊಳ್ಳುತ್ತಿವೆ. ವರ್ಷಕ್ಕೆ ಕನ್ನಡದಲ್ಲಿ ಒಟ್ಟೂ 6500ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟಗೊಳ್ಳುತ್ತಿವೆ ಅನ್ನುತ್ತೆ ಗ್ರಂಥಾಲಯ ಇಲಾಖೆಯ ಮಾಹಿತಿ. ಪ್ರಕಟಣೆಯ ಸಂಖ್ಯೆ ಹೆಚ್ಚಿದೆ ಅಂದಮೇಲೆ ಓದುಗರ ಸಂಖ್ಯೆಯೂ ಹೆಚ್ಚಿರಬೇಕು ಅಲ್ಲವೆ? ಆದರೆ ಸತ್ಯ ಅದಲ್ಲ. ಗ್ರಂಥಾಲಯ ಇಲಾಖೆ ಕನ್ನಡ ಪ್ರಕಾಶಕರನ್ನು ಪ್ರೋತ್ಸಾಹಿಸುವುದಕ್ಕೋಸ್ಕರ ಒಂದೊAದು ಪ್ರಕಟಣೆಯ ಕನಿಷ್ಟ 300 ಪ್ರತಿಗಳನ್ನು ಖರೀದಿಸುತ್ತದೆ. ಇದು ಪ್ರಕಾಶಕರಿಗೆ ಒಂದು ರೀತಿಯ ವರದಾನವೇ ಆಗಿದೆ. ಇದರಿಂದಾಗಿ ಹೆಚ್ಚು ಸಂಖ್ಯೆಯ ಪುಸ್ತಕಗಳು ಮುದ್ರಿತಗೊಳ್ಳುತ್ತಿವೆ.

ಕಳೆದ ಸಾಲಿನಲ್ಲಿ ಗ್ರಂಥಾಲಯ ಇಲಾಖೆ — ಕೋಟಿಗೂ ಅಧಿಕ ಮೌಲ್ಯದ ಪುಸ್ತಕ ಖರೀದಿಸಿತ್ತು. ವಾಸ್ತವದಲ್ಲಿ ಕೆಲವು ಪ್ರಕಾಶಕರು ಈ ಸವಲತ್ತನ್ನೇ ಹಣ ಮಾಡುವದಕ್ಕೆ ಬಳಸಿಕೊಳ್ಳುತ್ತಿರುವದು ಖಂಡನೀಯ. ಗ್ರಂಥಾಲಯ ಇಲಾಖೆ ಖರೀದಿಸಿದ ಪ್ರಕಟಣೆಗಳ ಶೇಕಡಾ ಇಪ್ಪತ್ತರಷ್ಟು ಶೀರ್ಷಿಕೆಗಳೂ ಮಾರುಕಟ್ಟೆಯಲ್ಲಿ ಸಿಗಲಾರದು. ಕಾರಣವಿಷ್ಟೆ, ಅನೇಕ ಪ್ರಕಾಶಕರು ಗ್ರಂಥಾಲಯ ಇಲಾಖೆಗೆ ನೀಡಬೇಕಾದ 300 ಪ್ರತಿಗಳನ್ನಷ್ಟೇ, ಅಥವಾ ಒಂದೈವತ್ತು ಹೆಚ್ಚು ಪ್ರಕಟಿಸುತ್ತಾರೆ. ಇಲಾಖೆಗೆ ಸಲ್ಲಿಸಿ ದುಡ್ಡು ಜೋಬಿಗಿಳಿಸುತ್ತಾರೆ. ಇಂಥ ಪುಸ್ತಕಗಳು ಲೆಕ್ಕಕ್ಕುಂಟು ಆಟಕ್ಕಿಲ್ಲ. ಇಂಥವುಗಳಿಂದ ಕನ್ನಡ ಪುಸ್ತಕ ಓದುವ ಪರಂಪರೆ ಬೆಳೆಯುವುದೂ ಇಲ್ಲ.

ಈಗ ಕಥೆ, ಕಾದಂಬರಿಗಳಿಗಿಂತ ವ್ಯಕ್ತಿತ್ವ ವಿಕಸನ, ಆರೋಗ್ಯ, ಅಡುಗೆ ಮುಂತಾದ ಸೃಜನೇತರ ಪುಸ್ತಕಗಳು ಹೆಚ್ಚು ಖರ್ಚಾಗುತ್ತಿವೆ. ಅವು ಕನ್ನಡ ಪುಸ್ತಕ ಪ್ರಕಾಶನಕ್ಕೆ ಹೊಸ ದಿಕ್ಕು ತೋರಿಸುತ್ತವೆ ಅಂತ ಹೇಳೋದಕ್ಕೆ ಆಗೋದಿಲ್ಲ. ಅಲ್ಲದೇ ಅವುಗಳನ್ನು ಕನ್ನಡದಲ್ಲಿ ಓದುವವರಿಗಿಂತ ಇಂಗ್ಲಿಷ್‌ನಲ್ಲೇ ಓದಿಕೊಳ್ಳುವವರು ಹೆಚ್ಚು. ಸೃಜನಶೀಲ ಸಾಹಿತ್ಯ ಪುಸ್ತಕಗಳನ್ನು ಖರೀದಿಸುವ ಪರಿಪಾಠ ಮುಂದುವರಿದರೆ ಮಾತ್ರ ಕನ್ನಡ ಪುಸ್ತಕ ಪ್ರಕಾಶನ ಸಮೃದ್ಧವಾಗಬಲ್ಲದು. ಸರಕಾರದ ಪ್ರೋತ್ಸಾಹಧನ ಎಷ್ಟೇ ಇರಲಿ, ಏನೇ ಇರಲಿ, ಕನ್ನಡ ಸಮುದಾಯದಲ್ಲಿ ಕನ್ನಡ ಪ್ರೀತಿ ಇರುವವರೆಗೆ ಕನ್ನಡ ಪುಸ್ತಕೋದ್ಯಮ ಮುನ್ನಡೆಯುತ್ತದೆ. ಆ ನಂತರ ಪ್ರಕಾಶಕರು ಬೇರೆ ದಾರಿ ಹುಡುಕಬೇಕಾಗುತ್ತದೆ ಅನ್ನೋದು ಕಹಿ ಆದರೂ ಸತ್ಯ.

Share8Tweet5SendShareShare
Next Post
ಎತ್ತಿನ ಹೊಳೆ- ಹೋರಾಟದ ಹಾದಿ

ಎತ್ತಿನ ಹೊಳೆ- ಹೋರಾಟದ ಹಾದಿ

Leave a Reply Cancel reply

Your email address will not be published. Required fields are marked *

Recommended

ಅಂತಿಮ ವಿದಾಯದ ಕಾಫಿ!

ಅಂತಿಮ ವಿದಾಯದ ಕಾಫಿ!

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಕಾಶಿಯ ಡೋಮ್‌ ಜನರು; ಅಂತ್ಯ ಸಂಸ್ಕಾರವೇ ಬದುಕು

ತಾಯ್ನೆಲದಲ್ಲೇ ನಿರಾಶ್ರಿತರಾದ ಕಾಶ್ಮೀರಿ ಪಂಡಿತರ ಕಥೆ-ವ್ಯಥೆ!

ತಾಯ್ನೆಲದಲ್ಲೇ ನಿರಾಶ್ರಿತರಾದ ಕಾಶ್ಮೀರಿ ಪಂಡಿತರ ಕಥೆ-ವ್ಯಥೆ!

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಹೂ ಮತ್ತು ಹುಡುಗಿ

ಹೂ ಮತ್ತು ಹುಡುಗಿ

ಕಚ್ಚುವ ನಾಯಿಗೆ ಬಿರಿಯಾನಿ, ಹಾಲು ಕೊಡುವ ದನಗಳಿಗೆ ಹುಲ್ಲಿಲ್ಲ!

ಕಚ್ಚುವ ನಾಯಿಗೆ ಬಿರಿಯಾನಿ, ಹಾಲು ಕೊಡುವ ದನಗಳಿಗೆ ಹುಲ್ಲಿಲ್ಲ!

ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು

ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು

Translate »
No Result
View All Result
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ

© 2026 JNews - Premium WordPress news & magazine theme by Jegtheme.