ದೃಶ್ಯಕಾವ್ಯ
Advertisement
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
No Result
View All Result
 ದೃಶ್ಯಕಾವ್ಯ
No Result
View All Result
Home ಕಥೆಕಟ್ಟೆ

ಗಾರ್ಗಿಯ ಡೈರಿಯಿಂದ-3

ನಮ್ಮ ಹಳ್ಳಿಯ ಕತೆ

Pic: Noufal Thottathil & Veda

Pic: Noufal Thottathil & Veda

ಅಪರೂಪಕ್ಕೆ ಯಾಕೋ ಹುಟ್ಟೂರಿಗೆ ಹೋಗುವ ಮನಸ್ಸಾಯಿತು. ಅಪ್ಪನ ಮನೆಗೆ ಊರಿಂದ ಚಿಕ್ಕಪ್ಪ ಚಿಕ್ಕಮ್ಮ ಕೂಡ ಬಂದಿದ್ದಾರೆಂದು ತಿಳಿದು ತಡಮಾಡದೆ ಸಂಭ್ರಮಿಸಿ ಹೊರಟೆ. ಎಲ್ಲಾ ಹಳ್ಳಿಯಂತೆ ನನ್ನ ಊರಲ್ಲೂ ಬರೀ ವಯಸ್ಸಾದವರೇ ಇರುವುದು. ಖಾಲಿ ಹೊಡೆಯುವ ರಸ್ತೆಗಳು, ಕುಸಿದು ಹೋಗಿರುವ ಮನೆಗಳು ಒಂದೆಡೆಯಾದರೆ, ದೂರದ ಪೇಟೆಯಲ್ಲಿ ದುಡಿವವರು ಕಟ್ಟಿರುವ ಎರಡು ಮೂರು ಅಂತಸ್ತಿನ ಬೃಹತ್ ಕಟ್ಟಡಗಳು ಇವೆ.ಬಸ್ ಇಳಿದು ಬೀದಿಯ ಕೊನೆಯಲ್ಲಿರುವ ಮನೆಗೆ ಹೊರಟೆ ದಾರಿಯುದ್ದಕ್ಕೂ ಸಿಕ್ಕವರು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾ, ಶಾಂತತ್ತೆ ಯಾವಾಗಬಂದ್ಯೆ ಮಗು ಅಂದರೆ, ಗೌರಜ್ಜಿ ಮನೆಯವರು ಬರಲಿಲ್ಲವಾ ಅನ್ನುತ್ತೆ . ನೀರು ಹಿಡಿಯುತ್ತಿದ್ದ ರತ್ನಕ್ಕ ಕಾಪಿ ಕುಡಿಯುವಂತೆ ಒಳಗೆ ಬಾ ಅಂದರೆ ಸೀನಣ್ಣ ಯಾಕೋ ದುರುಗುಟ್ಟಿ ನೋಡ ತೊಡಗಿದ ನಾ ಯಾರೆಂದು ಗೊತ್ತಾಯಿತೋ ಇಲ್ಲವೂ ಅವನಿಗೆ. ಎಲ್ಲರನ್ನು ಮಾತನಾಡಿಸಿ ಮನೆ ತಲುಪಿದಾಗ ಬಸ್ ಪಕ್ಕದ ಹಳ್ಳಿಯಿಂದ ವಾಪಸ್ ಬರುವ ಸಮಯವಾಗಿತ್ತು. ಬಸ್ ಬಂದು ಎಷ್ಟೊತ್ತಾಯಿತು ಈಗ ಬರ್ತಿದ್ದೀಯ ಅಪ್ಪನದೇ ಬುದ್ಧಿ ಊರವರಿದ್ದರೆ ಆಯಿತು ಮನ ಮಠ ಏನೂ ಬೇಡ ಅಂತ ಅಮ್ಮನ ಕೈಲಿ ಬೈಸಿಕೊಂಡೆ, ಅಪರೂಪಕ್ಕೆ ಮನೆಗೆ ಬಂದ ಮಗುನ ಯಾಕೇ ಬಂದ ತಕ್ಷಣ ಬೈಯ್ಯುತ್ತೀಯ ಅಂತ ಸೊಸೆಯನ್ನು ಗದರುತಿದ್ದ ಅಜ್ಜಿ ಯಾಕೋ ನೆನಪಾದರು. ಈ ಸಲ ತುಂಬಾ ಮಿಸ್ ಮಾಡಿಕೊಂಡೆ. ಅಮ್ಮನ್ನ ಸಮಾದಾನ ಮಾಡಿ ಅವಳು ಮಾಡಿದ ರೊಟ್ಟಿ ಕಾಯಿ ಚಟ್ನಿ ತಿಂದು ಕಾಫಿ ಬಟ್ಟಲು ಹಿಡಿದು ಜಗುಲಿಮೇಲೆ ಬೀದಿಲಿ ಹೋಗೋರು ಬರೋರನ್ನು ನೋಡುತ್ತಾ ಕುಳಿತೆ.ಮನ ಬಾಲ್ಯವನ್ನು ನೆನೆಯತೊಡಗಿತು ಎಲ್ಲರ ಮನೆಲೂ ನಾಲ್ಕೈದು ಮಕ್ಕಳು,ನಡುವಯಸ್ಸಿನವರು,

ವಯಸ್ಸಾದವರು,ಬೀದಿ ತುಂಬ ಜನರ ಓಡಾಟ. ದನ ಕರು ಇಲ್ಲದ ಮನೆಯೇ ಇಲ್ಲ. ಬಾವಿಯಿಂದ ನೀರು ಸೇದುವ ಅಮ್ಮಂದಿರು, ಬೀದಿಬಾಗಿಲಲ್ಲಿ ಮಸಿ ಪಾತ್ರೆ ತೊಳೆಯುವ ಅಕ್ಕಂದಿರು, ಗಂಡು ಹುಡುಗರ ಜೊತೆ ಸೇರಿ ಗೋಲಿ ಬುಗುರಿ ಆಡುವ ನನ್ನಂತಹ ಎಳೆಯರು. ಆಗೆಲ್ಲಾ ಶಾಲೆ ೧೦ ಗಂಟೆಗೆ ಶುರು ಬೆಳಗಾಗೆದ್ದು ಮುಖ ಸಾರಿಸಿ ಬೆಲ್ಲದ ಕಾಪಿ ಕುಡಿದು ಜಗುಲಿ ಮೇಲೆ ಕಾಗುಣಿತ ಮಗ್ಗಿ ಕಂಠಪಾಠ ಮಾಡಿ ತಿಂಡಿ ತಿಂದು ಹತ್ತಿರದ ಶಾಲೆಗೆ ಗುಂಪಾಗಿ ಓಡುತ್ತಿದ್ದೆವು. ಊರ ಮುಂದಿನ ಶಾಲೆ, ಪಕ್ಕವೇ ಇರುವ ಬುಗುರಿ ಕಟ್ಟೆ, ಅದೇ ನಮ್ಮೂರಿನ ಬಸ್ ನಿಲ್ದಾಣ. ದಿನಕ್ಕೆ ಒಂದು ಸಲ ಮಾತ್ರ ಪಕ್ಕದ ಹಳ್ಳಿಯಿಂದ ಬರುವಾಗಲೇ ಜನರನ್ನು ತುಂಬಿಸಿಕೊಂಡು ಬರುವ ಬೇರೆ ಜನ ಹತ್ತಲು ಜಾಗವೇ ಇರದೆ ಬಾಗಿಲಲ್ಲಿ, ಬಸ್ ಟಾಪ್ ನಲ್ಲಿ ಜನರನ್ನು ತುಂಬಿಸಿಕೊಂಡು ಪಾಸ್ ಅನ್ನುವ ಶಾಲಾ ಮಕ್ಕಳನ್ನು ಹತ್ತಿಸಿಕೊಳ್ಳದ ಬಸ್, ಎಲ್ಲಾ ಕಣ್ಮುಂದೆ ಬಂತು. ಸಂಜೆ ಮಂದೆ ಬುಗುರಿ ಕಟ್ಟೆ ಮೇಲೆ ಕುಳಿತಾಗ, ಕೊರಳ ಘಂಟೆಯ ಕಿಣಿ ಕಿಣಿ ಶಬ್ದ ಮಾಡುತ್ತಾ ಮೇಯಲು ಹೊರಗೆ ಹೋಗಿದ್ದ ರಾಸುಗಳು ಧೂಳೆಬ್ಬಿಸುತ್ತಾ ಮನೆ ಕಡೆಗೆ ಹೆಜ್ಜೆ ಹಾಕುತ್ತಿದ್ದವು. ಅವುಗಳ ಹಿಂದೆ ಹಸಿ ಹುಲ್ಲಿನ ಹೊರೆ ತಲೆ ಮೇಲೆ ಹೊತ್ತು ಕೈಯಲ್ಲಿ ಮೇಕೆ ಮರಿಯನ್ನ ಹಿಡಿದ ರೈತ, ಸಂಜೆಗೆಂಪು ಮೂಡುವ ಮೊದಲೇ ಬುಡ್ಡಿ ದೀಪ, ಲಾಟಿನ್ ಗಳನ್ನು ಒರೆಸಿ ಅವುಗಳಿಗೆ ಸೀಮೆಎಣ್ಣೆ ತುಂಬಿಸುತ್ತಿದ್ದ ಮಂಜಿ ಈಗ ಎಲ್ಲಾ ನೆನಪಷ್ಟೇ… ಕಟ್ಟೆ ಮೇಲೆ ಅಪ್ಪ ಮತ್ತು ಚಿಕ್ಕಪ್ಪ ಗೆಳೆಯರ ಜೊತೆ ಮಾತಾಡುತ್ತಾ ಕುಳಿತರು ನಾನೂ ಪಕ್ಕದಲ್ಲಿ ಸುಮ್ಮನೆ ಕುಳಿತು ಅವರ ಮಾತು ಕೇಳುತ್ತಿದ್ದೆ, ಯಥಾ ಪ್ರಕಾರ ಮಾತು ಇಂದಿನ ಪೀಳಿಗೆಯ ಬಗ್ಗೆ, ಹೆಣ್ಣು ಹೆತ್ತವರ ಅಹಂಕಾರ, ಮಗಳ ಮದುವೆ ಮಾಡುವ ಬಗ್ಗೆ ತೋರುವ ದೋರಣೆ, ಗಂಡಿನ ತಂದೆ ತಾಯಿಯನ್ನು ರಾಹು ಕೇತುಗಳೆಂದು ಕರೆಯುವ ಪರಿ, ಮದುವೆಯಾಗಿ ಬರುತ್ತಿದ್ದಂತೆ ಬೇರೆ ಮನೆ ಮಾಡಿ ಎನ್ನುವ ಹೊಸ ಸೊಸೆ, ಅಲ್ಲಿಂದ ಶುರುವಾದ ಮಾತು ರೂಪಾಯಿಗೆ ೪ಸೇರು ಸಣ್ಣಕ್ಕಿ,೮ ಸೇರು ದಪ್ಪಕ್ಕಿ, ೧೦ ಸೇರು ರಾಗಿ, ಹುರುಳಿ ಸಿಗುತ್ತಿದ್ದ ಅವರ ಕಾಲದ ವರೆಗೂ ಹರಿಯಿತು. ಇವರಿಗೆ ಜೊತೆಯಾಗಲೋ ಎಂಬಂತೆ ಅಲ್ಲಿಗೆ ಕೋಲೂರಿಕೊಂಡು ಬಂದ ಈರಶಟ್ಟಿ, ಸಂದಾಗಿದ್ದೀಯೇನವ್ವಾ, ಸಣ್ಣಪ್ಪೋರು ಬರ್ನಿಲ್ವಾ, ನೀ ಸಂದಾಗಿರ್ಬೇಕು ಕನವ್ವ ಅಂತ ಎಲ್ಲಾ ಮಾತೂ ,ತಾನೊಬ್ಬನೇಆಡಿದಾಗ ಎಲ್ಲದಕ್ಕೂಮೂಗು ತೂರಿಸುವ ಹಳೇಕಾಲದವರನ್ನು ಮನದಲ್ಲೇ ಬೈದುಕೊಳ್ಳುತ್ತಿದ್ದವಳು ಅವನ ಪ್ರೀತಿ ಅಭಿಮಾನಕ್ಕೆ ತಲೆ ಬಾಗಲೇಬೇಕಾಯಿತು. ಚನ್ನಾಗಿದ್ದೀಯಾ ಈರಣ್ಣ ಮನೆಲಿ ಎಲ್ಲಾ ಚನ್ನಾಗಿದ್ದಾರಾ ಅಂದರೆ ನಮ್ದೇನು ಬುಡ್ರವ್ವ ಈಗ ಮಕ್ಕಳು ಮೊಮ್ಮಕ್ಕಳ ಕಾಲ ಅವರು ಹೇಳ್ದಂಗೆ ಎಲ್ಲಾ ಅಂತ ಹೊಲದ ಕೆಲಸಕ್ಕೆ ಹೋಗದ ಸೊಸೆಯರು, ಟೀವಿ ಮೊಬೈಲ್ ನೋಡುತ್ತಾ ಕಾಲ ಕಳೆಯುವ ಮೊಮ್ಮಕ್ಕಳು, ಅರ್ಧ ಮೈಲಿ ದೂರದ ಹೊಲಕ್ಕೆ ಹೋಗಲು ಬೈಕ್ ಬಳಸುವ ಗಂಡುಮಕ್ಕಳು ಎಲ್ಲರನ್ನೂ ಬೈಯ್ಯುತ್ತಾ ಕಾಲ ಕೆಟ್ಟು ಹೋಯಿತು ಕನವ್ವ ಅಂತ ಹಿಂದೆ ಅವರ ತಾತ ಮುತ್ತಾಂದಿರು ಈ ಪೀಳಿಗೆಯವರನ್ನು ಬೈದಂತೇ ಇವನೂ ಗೊಣಗುತ್ತಲೇ ಮುಂದೆ ಹೆಜ್ಜೆ ಹಾಕಿದ. ಜನರ ಬದಲಾದ ಅಭಿರುಚಿ, ಕೆಲಸ ಮಾಡುವ ರೀತಿ ಇವುಗಳಿಗೆ ಹೊಂದಿಕೊಳ್ಳಲು ಕಷ್ಟ ಪಡುವ ಹಿರಿ ಜೀವಗಳು, ಇಂದಿನ ಕಾಲಕ್ಕೆ ತಕ್ಕಂತೆ ಮುಂದುವರೆಯುವ ಮನಸ್ಥಿತಿಯ ಯುವಪೀಳಿಗೆಯ ನಡುವೆ ಅತ್ತಲೂ ಅಲ್ಲ ಇತ್ತಲೂ ಅಲ್ಲದೇ ನಡುವೆ ಈ ಎರಡೂ ಪೀಳಿಗೆಗೆ ಕೊಂಡಿಯಂತಿರುವ ನನ್ನಂಥ ನಡು ವಯಸ್ಸಿನವರ ಉಭಯ ಸಂಕಟಕ್ಕೆ ನಿಟ್ಟುಸಿರು ಬಿಡುತ್ತಾ ರಾತ್ರಿಗೆ ಅಮ್ಮ ಮಾಡುವ ಮುದ್ದೆ ಅವರೇಕಾಳು ಸಾರು ನೆನೆಯುತ್ತಾ ಮನೆಕಡೆ ಹೊರಟೆ.

 

*ಗಾರ್ಗಿ 

Share10Tweet7SendShareShare
Next Post
ಸುನೀತಾಗೆ ನೋಬೆಲ್‌ ಕೊಡಬಹುದಾ?  

ಸುನೀತಾಗೆ ನೋಬೆಲ್‌ ಕೊಡಬಹುದಾ?  

Leave a Reply Cancel reply

Your email address will not be published. Required fields are marked *

Recommended

ಅಂತಿಮ ವಿದಾಯದ ಕಾಫಿ!

ಅಂತಿಮ ವಿದಾಯದ ಕಾಫಿ!

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಕಾಶಿಯ ಡೋಮ್‌ ಜನರು; ಅಂತ್ಯ ಸಂಸ್ಕಾರವೇ ಬದುಕು

ತಾಯ್ನೆಲದಲ್ಲೇ ನಿರಾಶ್ರಿತರಾದ ಕಾಶ್ಮೀರಿ ಪಂಡಿತರ ಕಥೆ-ವ್ಯಥೆ!

ತಾಯ್ನೆಲದಲ್ಲೇ ನಿರಾಶ್ರಿತರಾದ ಕಾಶ್ಮೀರಿ ಪಂಡಿತರ ಕಥೆ-ವ್ಯಥೆ!

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಹೂ ಮತ್ತು ಹುಡುಗಿ

ಹೂ ಮತ್ತು ಹುಡುಗಿ

ಕಚ್ಚುವ ನಾಯಿಗೆ ಬಿರಿಯಾನಿ, ಹಾಲು ಕೊಡುವ ದನಗಳಿಗೆ ಹುಲ್ಲಿಲ್ಲ!

ಕಚ್ಚುವ ನಾಯಿಗೆ ಬಿರಿಯಾನಿ, ಹಾಲು ಕೊಡುವ ದನಗಳಿಗೆ ಹುಲ್ಲಿಲ್ಲ!

ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು

ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು

Translate »
No Result
View All Result
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ

© 2026 JNews - Premium WordPress news & magazine theme by Jegtheme.