ದೃಶ್ಯಕಾವ್ಯ
Advertisement
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
  • ಪುಸ್ತಕಗಳು
  • Cart
No Result
View All Result
 ದೃಶ್ಯಕಾವ್ಯ
No Result
View All Result
Home ಪರಂಪರೆ

ಕಬಂಧ ರಾಕ್ಷಸನೇ ವಿಶ್ವಾವಸು !

ಸಂವತ್ಸರದ ಹಿಂದಿನ ವ್ಯಕ್ತಿ

ಕಬಂಧ ರಾಕ್ಷಸನೇ ವಿಶ್ವಾವಸು !

ವಿಶ್ವಾವಸು ನಾಮ ಸಂವತ್ಸರ ಶುರುವಾಗಿದೆ. ಈ ವಿಶ್ವಾವಸು ಯಾರು ಗೊತ್ತೆ? ರಾಮಾಯಣದಲ್ಲಿ ಬರುವ ಕಬಂಧ ಎಂಬ ರಾಕ್ಷಸ. ನಂತರ ರಾಮ-ಲಕ್ಷ್ಮಣರಿಂದ ಶಾಪಮುಕ್ತನಾದ ಗಂಧರ್ವ ಈತ!

ಶ್ರೀ ಎಂಬ ಗಂಧರ್ವರಾಜನ ಮಗ ವಿಶ್ವಾವಸು. ಅವನಿಗೆ ಧನು ಅಂತಲೂ ಹೆಸರು. ಬ್ರಹ್ಮನನ್ನು ಕುರಿತು ಉಗ್ರ ತಪಸ್ಸು ಮಾಡಿದ. ಬ್ರಹ್ಮ ಪ್ರತ್ಯಕ್ಷನಾಗಿ ಕೇಳಿದ ವರ ಕೊಡುವೆ ಎಂದ. ವಿಶ್ವಾವಸು ಅಮರನಾಗುವ ವರ ಕೇಳಿದ. ಬ್ರಹ್ಮ ತಥಾಸ್ತು ಎಂದುಬಿಟ್ಟ. ವಿಶ್ವಾವಸುವಿಗೆ ಅಹಂಕಾರ ಬಂದುಬಿಟ್ಟಿತು. ತನಗೆ ಸರಿಸಮ ಯಾರಿಲ್ಲ ಎಂದು ಮೆರೆಯತೊಡಗಿದ. ಇಂದ್ರಲೋಕದ ಮೇಲೆಯೇ ಆಕ್ರಮಣ ಮಾಡಿದ.

ಇಂದ್ರ ಏನು ಕಮ್ಮಿಯೆ? ಯುದ್ಧಕ್ಕೆ ಬಂದ ವಿಶ್ವಾವಸುವಿನ ಮೇಲೆ ವಜ್ರಾಯುಧ ಪ್ರಯೋಗ ಮಾಡಿದ. ಅಮರನಾಗುವ ವರವಿದ್ದರಿಂದ ವಿಶ್ವಾವಸು ಮೃತನಾಗಲಿಲ್ಲ. ಆದರೆ ವಜ್ರಾಯುಧದ ಹೊಡೆತಕ್ಕೆ ಅವನ ತಲೆ ಅದುಮಿ ಶರೀರದೊಳಕ್ಕೆ ಸೇರಿಹೋಯಿತು. ಕಾಲುಗಳೂ ಶರೀರದೊಳಕ್ಕೆ ಸೇರಿಹೋಗಿ ಅವನು ಬರಿಯ ಮುಂಡ ಮತ್ತು ಕೈಗಳ ಪ್ರಾಣಿಯಂತಾದ.

ಹಾಗೆಯೇ ಭೂಮಿಯ ಮೇಲೆ ಬಿದ್ದ ಆತ ಇಂದ್ರನಲ್ಲಿ ಕ್ಷಮೆ ಯಾಚಿಸಿದ. ಬದುಕುವ ದಾರಿ ಕೋರಿಕೊಂಡ. ಇಂದ್ರ ಅವನಿಗೆ ಎದೆಯ ಮೇಲೆ ಕಣ್ಣು ಹಾಗೂ ಹೊಟ್ಟೆಯ ಮೇಲೆ ಬಾಯಿ ಅನುಗ್ರಹಿಸಿದ. ಹಾಗೆಯೇ ಕಾಲಿಲ್ಲದಿದ್ದರಿಂದ ಕುಳಿತಲ್ಲಿಂದಲೇ ಕೈ ಎಷ್ಟು ದೂರ ಬೇಕಾದರೂ ಹಿಗ್ಗಿ ಆಹಾರ ಪಡೆಯುವಂತೆ ವರ ನೀಡಿದ. ಹೀಗೆ ಅಕರಾಳವಿಕರಾಳನಾದ ವಿಶ್ವಾವಸು ಕ್ರೌಂಚಾರಣ್ಯದಲ್ಲಿರುವ ಮಾತಂಗವನದಲ್ಲಿ ನೆಲೆಸಿದ. ಹೋಗಿಬರುವ ಋಷಿಮುನಿಗಳನ್ನು ಹೆದರಿಸುತ್ತಿದ್ದ. ಅವರ ಬಳಿ ಇರುವ ಆಹಾರಕ್ಕೆ ಕುಳಿತಲ್ಲಿಂದಲೇ ಕೈ ಹಾಕಿ ಕಿತ್ತುಕೊಂಡು ತಿನ್ನುತ್ತಿದ್ದ.

ಒಮ್ಮೆ ಅವನಿಂದ ಕಿರುಕುಳ ತಾಳಲಾಗದೇ ಸ್ಥೂಲಶಿರಸ್ಸು ಎಂಬ ಮುನಿ ನೀನು ರಾಕ್ಷಸನಾಗು ಎಂದು ಶಪಿಸಿಬಿಟ್ಟ. ಈ ಶಾಪದಿಂದ ಆ ಮುಂಡ ದೊಡ್ಡ ಆಕಾರ ಪಡೆಯಿತು. ಮೋಡದಂತೆ ಕಪ್ಪಾದ ದೇಹ, ಬೆಂಕಿ ಉಗುಳುವ ಕಣ್ಣುಗಳು, ವಿಶಾಲ ಬಾಹುಗಳು.. ವಿಶ್ವಾವಸು ಹೀಗೆ ಕಬಂಧನಾದ. ಋಷಿಕುಲಕ್ಕೂ ತಾಪತ್ರಯ ಶುರುವಾಯಿತು. ವಿಷ್ಣುವಿನ ಅವತಾರವಾದ ಶ್ರೀರಾಮ ನಿನ್ನ ತೋಳುಗಳನ್ನು ಕಡಿದು ನಿನ್ನ ಅಂತ್ಯಸಂಸ್ಕಾರ ಮಾಡಿದಾಗ ನಿನಗೆ ಶಾಪವಿಮೋಚನೆ ಎಂದ ಮುನಿ.

ಕಬಂಧನ ಉಪಟಳ ಮೇರೆ ಮೀರಿತು. ಕಬಂಧಬಾಹು ಚಾಚಿ ಪ್ರಾಣಿಗಳನ್ನು ಹಿಡಿದು ತಿನ್ನತೊಡಗಿದ. ಅವನ ಕೈಗಳು ಒಂದು ಯೋಜನೆ ದೂರ ಚಾಚಬಲ್ಲವಾಗಿದ್ದವು. ಅವನಿಂದ ಕಾಡಿನ ಪರಿಸರವೇ ಏರುಪೇರಾಯಿತು. ಪ್ರಾಣಿಗಳು, ಪಕ್ಷಿಗಳ ಸಂತತಿ ನಾಶವಾದವು. (ಭ್ರಷ್ಟಾಚಾರದ ಕಬಂಧ ಬಾಹು ಎಂದರೆ ಹೀಗೆನೇ, ಕುಳಿತಲ್ಲಿಂದಲೇ ಪ್ರಜೆಗಳ ಹಣವನ್ನು ಸ್ವಾಹಾ ಮಾಡುವುದು!)

ಆದರೆ ಅವನ ಅಂತ್ಯಕಾಲ ಸನ್ನಿಹಿತವಾಗುತ್ತಿತ್ತು. ಪಾಪದ ಕೊಡ ತುಂಬಿತ್ತು. ಶ್ರೀರಾಮ ಅನುಜ ಲಕ್ಷ್ಮಣನೊಡನೆ ಕಾಡಿಗೆ ಬಂದಿದ್ದ. ಸೀತಾಪಹರಣವಾಗಿತ್ತು. ಸೀತೆಯನ್ನು ಹುಡುಕುತ್ತ ಕ್ರೌಂಚಾರಣ್ಯಕ್ಕೆ ಬಂದರು. ಅಲ್ಲಿನ ವಾತಾವರಣ ಭೀಭತ್ಸವಾಗಿತ್ತು. ಪಶು ಪಕ್ಷಿಗಳ ಕಲರವ ಇರಲಿಲ್ಲ. ಆಹಾರ ಖಾಲಿಯಾಗಿ ಕಬಂಧ ಹಸಿದಿದ್ದ. ಮನುಷ್ಯರ ವಾಸನೆ ಹಿಡಿದು ರಾಮ-ಲಕ್ಷ್ಮಣರೆಡೆ ತನ್ನ ಕೈ ಬೆಳೆಸಿದ. ಯಾವುದೋ ಬೃಹತ್‌ ಕೈ ತಮ್ಮ ಕಡೆ ಧಾವಿಸುತ್ತಿರುವುದನ್ನು ಕಂಡರು ರಾಮಲಕ್ಷ್ಮಣರು. ನೋಡನೋಡುತ್ತಿದ್ದಂತೆಯೇ ಬಲಗೈಯಲ್ಲಿ ರಾಮನನ್ನೂ ಎಡಗೈಲಿ ಲಕ್ಷ್ಮಣನನ್ನೂ ಹಿಡಿದು ಸೆಳೆದುಕೊಂಡುಬಿಟ್ಟ. ಆ ದಟ್ಟಡವಿಯಲ್ಲಿ ಅರೆಕ್ಷಣ ಅವರಿಬ್ಬರು ಆಕಾಶ ಬುಟ್ಟಿಯಲ್ಲಿ ತೇಲುತ್ತಿದ್ದ ಬಾಲಕರಂತೆ ಕಂಡರು.
ರಾಮ ಬೆದರದೆ ಲಕ್ಷ್ಮಣನಿಗೆ ಸನ್ನೆ ಮಾಡಿದ. ಇಬ್ಬರೂ ಏಕಕಾಲಕ್ಕೆ ತಮ್ಮ ಹರಿತವಾದ ಆಯುಧವನ್ನು ಪ್ರಯೋಗಿಸಿದರು.

ರಾಮ ಕಬಂಧನ ಬಲತೋಳನ್ನು ಕತ್ತರಿಸಿದ. ಲಕ್ಷ್ಮಣ ಎಡತೋಳನ್ನು ಕತ್ತರಿಸಿಹಾಕಿದ. ಕಬಂಧನ ತೋಳಿಲ್ಲದ ದೇಹ ನೆಲಕ್ಕೆ ಉರುಳಿತು. ಅವನಿಗೆ ವಾಸ್ತವದ ಅರಿವಾಗಿತ್ತು. ತನ್ನ ಶಾಪವಿಮೋಚನೆ ಕ್ಷಣಗಣನೆ ಹತ್ತಿರವಾಗಿದೆ ಎಂದು ಅನ್ನಿಸಿತು. ರಾಮ ಲಕ್ಷ್ಮಣರು ಕಬಂಧನ ದೇಹವನ್ನು ಹೂತುಹಾಕಿದರು.

ಆ ಕ್ಷಣದಲ್ಲಿ ವಿಶ್ವಾವಸುವಿನ ಶಾಪವಿಮೋಚನೆಯಾಯಿತು. ಸಮಾಧಿಯಿಂದ ಸುಂದರ ರೂಪದ ದಿವ್ಯ ಗಂಧರ್ವನಾಗಿ ಎದ್ದು ಬಂದ. ಸೊಗಸಾಗಿ ಹಾಡುತ್ತ ರಾಮನ ಸ್ತುತಿ ಮಾಡಿದ. ತಾನೊಬ್ಬ ಗಂಧರ್ವನೆಂದು ಪೂರ್ವ ವೃತ್ತಾಂತ ಅರುಹಿದ. ಶಾಪ ವಿಮೋಚನೆ ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ. ರಾಮ-ಲಕ್ಷ್ಮಣರು ಸೀತೆಯನ್ನು ಹುಡುಕುತ್ತ ವನದಲ್ಲಿ ಅಲೆದಾಡುತ್ತಿರುವ ವಿಷಯ ಅರಿತುಕೊಂಡು, ದಕ್ಷಿಣದಲ್ಲಿ ಋಷ್ಯಮೂಕ ಪರ್ವತವಿದೆ. ಅಲ್ಲಿ ಸುಗ್ರೀವನೆಂಬ ರಾಜ್ಯ ಕಳೆದುಕೊಂಡ ವಾನರ ರಾಜನಿದ್ದಾನೆ. ಅವನ ಸಹಾಯ ಪಡೆ. ಅವನ ವಾನರ ಸೈನ್ಯದಿಂದ ನಿನ್ನ ಕಾರ್ಯಸಾಧನೆಯಾಗುವುದು; ಅಲ್ಲದೆ ಶಬರಿ ಎಂಬ ವೃದ್ಧೆ ನಿನಗಾಗಿ ಇನ್ನೂ ದಕ್ಷಿಣದ ಕಾಡಿನಲ್ಲಿ ಕಾಯುತ್ತಿದ್ದಾಳೆ ಎಂದು ರಾಮನಿಗೆ ದಾರಿ ತೋರಿ ಗಂಧರ್ವಲೋಕಕ್ಕೆ ಹೊರಟುಹೋದ.

ಹೀಗೆ ರಾಮನಿಂದ ಶಾಪವಿಮೋಚನೆ ಪಡೆದು ಅವನ ಕಾರ್ಯಕ್ಕೆ ನೆರವಾದ ಗಂಧರ್ವ ವಿಶ್ವಾವಸುವಿನ ಗೌರವಾರ್ಥ ಒಂದು ಸಂವತ್ಸರಕ್ಕೆ ವಿಶ್ವಾವಸು ಹೆಸರು ಬಂತು ಎನ್ನುತ್ತದೆ ಪುರಾಣಕಥನ. ಅವನ ಜೀವನ ಕತೆಯಲ್ಲಿ ಬಲಿಷ್ಠರಾದವರು ಸಿಕ್ಕಿದ್ದೆಲ್ಲ ತಮಗೇ ಬೇಕೆಂದು ಬಾಚಿಕೊಳ್ಳುತ್ತ ಸ್ವಾರ್ಥಿಯಾದರೆ, ದುರಾಸೆಪಟ್ಟರೆ ಸಮಾಜ ಏರುಪೇರಾಗುತ್ತದೆ; ಎಲ್ಲವನ್ನೂ ಕೊಂದು ತಿನ್ನುತ್ತ ಹೋದರೆ ಅರಣ್ಯ-ಪರಿಸರ ಏರುಪೇರಾಗಿ ಏನೆಲ್ಲ ಅನಾಹುತವಾಗುತ್ತದೆ ಎಂಬ ಪಾಠವೂ ಇದೆ.

* ವಿದಾತ

ಕಬಂಧಮೋಕ್ಷ ವೃತ್ತಾಂತ ಗೊಂಬೆಯಾಟ ವೀಕ್ಷಿಸಲು ದೃಶ್ಯಕಾವ್ಯ ಕನ್ನಡ ಯುಟ್ಯೂಬ್‌ ವಾಹಿನಿ ಕ್ಲಿಕ್‌ ಮಾಡಿ

Share13Tweet8SendShareShare
Next Post
ಡಾ.ರಾಜ್‌ ಇನ್ನೇನು ಮಾಡಬೇಕಿತ್ತು?

ಡಾ.ರಾಜ್‌ ಇನ್ನೇನು ಮಾಡಬೇಕಿತ್ತು?

Leave a Reply Cancel reply

Your email address will not be published. Required fields are marked *

Recommended

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು ಬೇರೆ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್_ ಪ್ರಮಾಣ ಮಾಡಿದ ಅಜ್ಜಯ್ಯ ಯಾರು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರಮಾಣ ಮಾಡಿದ ಅಜ್ಜಯ್ಯ ಯಾರು?

Radha Krishna Adiga Kannada Biography Book front

Radha Krishna Adiga – Idli Coffee Parampara-Payana

Radha Krishna Adiga Kannada Biography Book front

ರಾಧಾಕೃಷ್ಣ ಅಡಿಗ – ಇಡ್ಲಿ ಕಾಫಿ ಪರಂಪರೆ-ಪಯಣ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್_ ಪ್ರಮಾಣ ಮಾಡಿದ ಅಜ್ಜಯ್ಯ ಯಾರು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರಮಾಣ ಮಾಡಿದ ಅಜ್ಜಯ್ಯ ಯಾರು?

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು ಬೇರೆ

ಕನಸುಗಳಿಗೆ ನಿದ್ದೆಯಿಲ್ಲ

Radha Krishna Adiga Kannada Biography Book front

ರಾಧಾಕೃಷ್ಣ ಅಡಿಗ – ಇಡ್ಲಿ ಕಾಫಿ ಪರಂಪರೆ-ಪಯಣ

Radha Krishna Adiga Idli Coffee Parampara-Payana
Radha Krishna Adiga Idli Coffee Parampara-Payana
Translate »

Added to cart

Your Cart Is Empty
0

Check out our shop to see what's available

Cart Total: Total₹0.00
Your cart is empty. Shop now →
No Result
View All Result
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
  • ಪುಸ್ತಕಗಳು
  • Cart

© 2026 JNews - Premium WordPress news & magazine theme by Jegtheme.