ಅದು ಊರಾಚೆಗಿನ ಬಟಾಬಯಲಾಗಿರಬಹುದೇನೊ ಅಥವಾ ಆ ಬಯಲಿನಾಚೆಗೆ ಊರಿರಬಹುದು. ದಾರಿ ಸವೆದಿಲ್ಲ . ಎಲ್ಲೊ ವರ್ಷಕ್ಕೊಮ್ಮೆ ಯಾರೋ ಹತ್ತಾರು ಜನ ಹೋಗಿ ಬಂದಂತೆ ಕಾಣುವ ಕಳೆ ಕುರುಚಲುಗಳು ಅಷ್ಟಾಗಿ ಮುತ್ತಿಕೊಂಡಿರದೆ ಹಾದಿ ಬಿಟ್ಟಿವೆಯಷ್ಟೆ. ಅಲ್ಲಿ ಗೇಣುದ್ದಕ್ಕೆ ಬೆಳೆದ ಕರಡ ಕುರುಚಲುಗಳನ್ನು ಬಿಟ್ಟರೆ ಮೂಲೆಯಲ್ಲಿರುವ ಬಿಳಲುಗಳಿಂದ ತುಂಬಿ ಹೋದ ಮರವೊಂದೇ ಎತ್ತರಕ್ಕೆ ಬೆಳೆದಿರುವುದು… ರಾಶಿಯಾಗಿ ಬಿದ್ದಿರುವ ಮಶಿಕೆಂಡ ಬೂದಿಯು ಬಯಲಿನ ತುಂಬೆಲ್ಲಾ ಹರಡಿಹೋಗಿದೆ.. ಅಲ್ಲಲ್ಲಿ ಬಿದ್ದಿರುವ ಬೆಂಕಿ ತಿಂದು ಬಿಟ್ಟ ಮರದ ತುಂಡುಗಳು ಗೆದ್ದಲುಗಳ ಪಾಲಾಗಿದೆ. ಬಯಲಿನ ಮಧ್ಯದಲ್ಲಿ ಕಟ್ಟಿಗೆಯ ರಾಶಿಯೊಂದು ಉರಿಯುತ್ತಿದೆ ಅದರ ಮಧ್ಯದಲ್ಲಿ ಉರಿದು ಬೂದಿಯಾಗಿರುವುದು ಮನುಷ್ಯನ ದೇಹವನ್ನೇ ಹೋಲುವ ಆಕೃತಿಯೊಂದರ ಅಸ್ತಿಯೊಂದನ್ನು ಮಾತ್ರ ಇನ್ನೂ ಹಾಗೆಯೇ ಬಿಟ್ಟು ಎತ್ತೆತ್ತರಕ್ಕೆ ಹಾರುವ ಜ್ವಾಲೆಗಳು ಮತ್ತೆ ಆಹುತಿ ಬೇಕೆಂದು ಅಬ್ಬರಿಸುತ್ತಲೇ ಉರಿಯುತ್ತಿದೆ.. ಆ ಆಕೃತಿಯ ತಲೆಬುರುಡೆಗೆ ಅಂಟಿಕೊಂಡಿರುವ ಮಜ್ಜೆಯ ತುಣುಕುಗಳು ಶಾಖಕ್ಕೆ ಮತ್ತಷ್ಟು ಬಾಡುತ್ತಿದೆ. ಕುಣಿಯುತ್ತಿರುವ ಜ್ವಾಲೆಯಿಂದ ಹೊರಸೂಸುತ್ತಿರುವ ಬೆಳಕು ಬುರುಡೆಯಲ್ಲಿನ ಕಣ್ಣುಗಳಿಂದ ಹೊರ ನುಗ್ಗುತ್ತಿದೆ. ಮೂಗಿನಾಳಕ್ಕೆ ಹೋಗುವ ಕಮಟು ವಾಸನೆಯೊಂದು ಮೈಲುದೂರದ ವರೆಗೂ ಗಾಳಿಯಂತೆ ಪಸರಿಸುತ್ತಿದೆ.ರಾತ್ರಿಯಾದಂತೆ ಸಕ್ರಿಯವಾಗುವ ತೋಳಗಳ ದಂಡು ಅಲ್ಲೆಲ್ಲೋ ಗುಡ್ಡದ ಮೂಲೆಯ ಮರಗಳ ಮರೆಯಿಂದ ಕಿವಿಗಡಚಿಕ್ಕುವಂತೆ ಊಳಿಡುತ್ತಿವೆ. ನೋಡಲು ಥೇಟು ಸ್ಮಶಾನವೇ….
ಕಣ್ಣುಬಿಟ್ಟು ಕೈನೋಡಿದರೆ ಅದೂ ಕಾಣದಷ್ಟು ಕತ್ತಲು.ಥೇಟು ಅಮಾವಾಸ್ಯೆಯಂತೆಯೇ…..
ಕತ್ತಲು ಮತ್ತೂ ಗಾಢವಾಗಿ ಸುತ್ತಲೂ ಆವರಿಸಿಕೊಳ್ಳತೊಡಗಿದಂತೆಲ್ಲಾ ಅವ ಮತ್ತಷ್ಟು ಹುರುಪುಗೊಳ್ಳುತ್ತಾನೆ. ಅದೆಕೋ ಅಮಾವಾಸ್ಯೆಯೆಂದರೆ ಪ್ರೀತಿ. ಸರಿಯಾಗಿ ಮಧ್ಯರಾತ್ರಿಯ ಸಮಯಕ್ಕೆಲ್ಲ ಎದ್ದು ಊರ ಮಧ್ಯದ ಕೆರೆಯಲ್ಲಿ ಮುಳುಕ ಹಾಕತೊಡಗುತ್ತಾನೆ. ಕೊರೆಯುವ ಚಳಿಯಲ್ಲಿ ದಿಗಂಬರನಾಗಿ ತಣ್ಣನೆಯ ನೀರಿಗೆ ಮೈಯ್ಯೊಡ್ಡಿಕೊಂಡು ಹೊರಟುಬಿಡುತ್ತಾನೆ. ಅದೇ ಚಿತೆಯೆಡೆಗೆ. ನೆಲಕಂಪಿಸುವ ಹೆಜ್ಜೆಯಿಟ್ಟು ಬರುಬರುತ್ತಲೇ ಚಿತೆಯ ಬೆಂಕಿಗೆ ದಿಗ್ಗನೆ ಅವನ ಭಯಾನಕ ದರ್ಶನವಾಗುತ್ತದೆ. ತಲೆಯಮೇಲೆ
ವರ್ತುಲಾಕಾರದಲ್ಲಿ ಹೆಣೆದ ಕೂದಲು ಮೇಲೆ ಹೋದಂತೆಲ್ಲಾ ಗೋಪುರಾಕಾರವಾಗಿದೆ. ತುಳಸಿ ಮಣಿಯಿಂದ ಬಂಧಿಸಿಲ್ಪಟ್ಟ ಕೂದಲು ಕೆಳಗೆ ಹಾಗೆ ಬೆನ್ನು ಹುರಿಯನ್ನು ಮುಚ್ಚುವಂತೆ ಬಿದ್ದುಕೊಂಡಿದೆ. ಜಡಕಾದ ಕೇಶರಾಶಿಯಿಂದ ನೀರ ಹನಿ ತೊಟ್ಟಿಕ್ಕುತ್ತಿದೆ. ಕಸುವುಗೊಂಡ ಬಾಹುಗಳ ಅಗಾಧ ವಾದ ಶಕ್ತಿಯನ್ನು ಮಣಿಕಟ್ಟೊಂದು ಬಂಧಿಸಿದೆ.ಅಗಲವಾದ ಭುಜ ವಿಸ್ತಾರವಾದ ವಕ್ಷ ಕೆತ್ತಿಟಂತಹ ಹೊಟ್ಟೆ ಹುರಿಗಟ್ಟಿದ ಸೊಂಟ ನೀಳವಾದ ಕಾಲುಗಳ ಕಪ್ಪಗಿನ ಆಜಾನುಬಾಹು ಶರೀರದಿಂದ ಬೆವರ ಹನಿ ಧಾರಾಕಾರವಾಗಿ ಜಿನುಗುತ್ತಿದೆ. ಕೊರೆಯುವ ಚಳಿಯ ಮಂಜುಗಡ್ಡೆಯಂತಿರುವ ತಣ್ಣೀರು ಈ ದೇಹಕ್ಕೆ ಕಿಂಚಿತ್ತೂ ಪರಿಣಾಮಬೀರಲು ಸಾಧ್ಯವಾದಂತಿಲ್ಲ.
ನಗ್ನ ಶರೀರದ ಮೇಲೆ ಆಗ ತಾನೆ ಸುಲಿದ ಯಾವುದೋ ವ್ಯಾಘ್ರದ ಚರ್ಮವೊಂದನ್ನು ಸೊಂಟದ ಸುತ್ತ ಸುತ್ತಿಕೊಂಡಿದ್ದಾನೆ.. ಅದರಿಂದ ಕೆನ್ನೆತ್ತರಿನ ಹನಿಗಳು ಧಾರಾಕಾರವಾಗಿ ತೊಟ್ಟಿಕ್ಕುತ್ತಿದೆ. ಹೆಗಲಿನಿಂದ ಇಳಿಬಿಟ್ಟ ಚೀಲದಿಂದ ಅದ್ಯಾವುದೋ ಕಂಪು ಮೂಗಿಗೆ ಬಡಿಯುತ್ತಿದೆ. ನಿಧಾನ ವಾಗಿ ಬಂದು ಉರಿಯುತ್ತಿರುವ ಚಿತೆಯತ್ತ ಸಾಗಿ. ಕುಳಿತು ಚೀಲದಿಂದ ಒಂದಿಷ್ಟು ಸೊಪ್ಪು ತೆಗೆದು ಕೈಯಲ್ಲಿರುವ ಶಂಖುವಿನಾಕೃತಿಯ ಕೊಳವೆಯಲ್ಲಿ ತುಂಬಿ ಚಿತೆಯಿಂದ ಕೆಂಡವೊಂದನ್ನು ತೆಗೆದು ಅದರ ಮೇಲೆ ಇಟ್ಟು ನಿಧಾನವಾಗಿ ಒಳಗೆಳೆದುಕೊಂಡು ಹೊಗೆಯನ್ನು ಹಾಗೇ ಹೊರಬಿಡ ತೊಡಗಿದ್ದಾನೆ . ಹೌದು ಅದು ಭಂಗಿಯೇ. ಊಫ಼ನೆ ಉದಿ ಹೊಗೆ ಹೊರಬಿಡುತ್ತಿದ್ದಂತೆಯೆ ಅವ ಉನ್ಮತ್ತನಾಗುತ್ತಿದ್ದಾನೆ. ಹೀಗೆ ಒಂದಿಷ್ಟು ಸೊಪ್ಪನ್ನು ಸೇದಿ ಕೊಳವೆಯನ್ನು ನೆಲಕ್ಕೆ ಕುಕ್ಕಿ ಎದ್ದುನಿಂತು ಚಿತೆಯ ಅಗ್ನಿಜ್ವಾಲೆಯ ಸುತ್ತಲೂ ನಿಧಾನವಾಗಿ ಹೆಜ್ಜೆ ಹಾಕತೊಡಗಿದ್ದಾನೆ. ಹಾರಿ ಬೀಳುವ ಕೇಶರಾಶಿ ಅವನ ಪ್ರತೀ ಹೆಜ್ಜೆಗೂ ನೆಲದಿಂದ ಧೂಳು ಸೊಂಟದೆತ್ತರಕ್ಕೆ ಹಾರುತ್ತಿದೆ. ಕೈಯಲ್ಲಿ ಹಿಡಿದ ಉಕ್ಕಿನ ಸಲಾಕೆಯ ತುದಿಯಲ್ಲಿ ಚೂಪಾದ ಮೂರು ತುದಿಗಳಿವೆ.ಅದು ತ್ರಿಶೂಲವೇ . ಅವನ ಕುಣಿತ ಹೀಗೇ ಸಾಗಿದೆ ದೂರದ ಹುಣಸೇ ಮರಗಳಲ್ಲಿ ಜೋತು ಬಿದ್ದ ಆತ್ಮ, ಭೂತಾದಿ ಗಳೆಲ್ಲವೂ ಬಂದು ಅವನೊಂದಿಗೆ ಸೇರಿಕೊಳ್ಳುತ್ತಿವೆ. . ಆಗಾಗ ನೆಲಕ್ಕೆಬಿದ್ದಿದ್ದ ಕಪಾಲವನ್ನೆತ್ತಿ ಅದರಲ್ಲಿರುವ ಅದಾವುದೋ ದ್ರವವನ್ನು ಹೀರುತ್ತ ಕುಣಿಯುತ್ತಿದ್ದಾನೆ.ಕತ್ತಿನ ಸುತ್ತಲೂ ಇರುವ ತಲೆಬುರುಡೆಯ ಹಾರದ ರಾಶಿ ಹಾರಿ ಹಾರಿ ಬೀಳುತ್ತಿದೆ. ನಿಧಾನವಾಗಿ ಶುರುವಾಗಿದ್ದ ನರ್ತನ ನೋಡ ನೋಡುತ್ತಲೇ ಕುಣಿತ ಭರದಿಂದ ಸಾಗಿದೆ. ಹೆಜ್ಜೆಗಳ ವೇಗ ಹೆಚ್ಚುತ್ತಲೇ ಇದೆ. ಬರಿಗಣ್ಣಿಗೆ ಕಾಣಲಾರದಷ್ಟು ವೇಗವಾಗಿ ಹೆಜ್ಜೆ ಹಾಕುವಾಗ ಆಗಾಗ ಹಣೆಯಲ್ಲಿ ಅಡ್ಡಲಾಗಿ ಕೆನ್ನಾಲಿಗೆಯ ಗೆರೆಯೊಂದು ಕಾಣಿಸಿಕೊಳ್ಳುತ್ತಿದೆ. ಕತ್ತಲಾದಂತೆ ಜಾಗೃತವಾಗಿ ಊರಮಂದಿಯನ್ನೆಲ್ಲ ಹೆದರಿಸುವ ಮೃಗಾದಿಗಳು ಸ್ವತಃ ಬೆದರಿ ಸ್ಥಂಬೀಭೂತರಾಗಿ ಅಡಗಿಕೊಂಡು ಈ ಭೀಭತ್ಸ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿವೆ. ಬರಿಗಣ್ಣಿನಿಂದ ಈ ಭಯಾನಕ ನೃತ್ಯವನ್ನು ನೋಡಿದವರು ಎದೆಯೊಡೆದುಕೊಂಡಾರು. ಚಿತೆಯುರಿದು ಬೆಂಕಿ ತಣ್ಣಗಾಗುವುದರೊಂದಿಗೇ ಹೆಜ್ಜೆಗಳ ಅಬ್ಬರವೂ ತಣ್ಣಗಾಗುತ್ತಿದೆ. ಅಂತೂ ಕುಣಿತ ಮುಗಿಯುವ ಹೊತ್ತು ಆದರೆ ಕುಣಿದ ಕಾಲುಗಳು ಪಾದಗಳು ಕಿಂಚಿತ್ತೂ ಗಾಯವಾಗಿಲ್ಲ. ಮುಖದಲ್ಲೊಂದು ಪ್ರಸನ್ನತೆ ಮತ್ತೆ ಕುಣಿಯುವ ತವಕ. ಶಾಖದಿಂದ ಬೆವರಿದ ಮೈಗೆ ಉರಿದ ಚಿತೆಯಿಂದ ಬಿಸಿ ಬೂದಿಯನ್ನು ಮುಷ್ಟಿಯಲ್ಲಿ ಹಿಡಿದು ಎರಚಿಕೊಳ್ಳುತ್ತಿದ್ದಾನೆ. ಮತ್ತೆ ಕೂತು ಚಿಲುಮೆಗೆ ಸೊಪ್ಪು ತುಂಬಿ ಸೇದತೊಡಗಿದ್ದಾನೆ. ಅದು ಸ್ಮಶಾನನೃತ್ಯವಾಗಿರಬಹುದು. ಆತ ಶಿವನಾಗಿರಬಹುದು.
–ಭಾವಶೂನ್ಯ
(ಗಣೇಶ್ ಗೋಪಿನಮರಿ)









