ಕುರುಕ್ಷೇತ್ರ ಯುದ್ಧ ಮುಗಿದು ಅನೇಕ ವರ್ಷ ಕಳೆದ ಮೇಲೆ ಕೃಷ್ಣನಿಗೊಮ್ಮೆ ರಾಧೆಯ ನೆನಪಾಗಿ ಗೋಕುಲಕ್ಕೆ ಬರುತ್ತಾನೆ. ಅವರಿಬ್ಬರ ಪ್ರೇಮಕ್ಕೆ ಅಂದು ಸಾಕ್ಷಿಯಾಗಿದ್ದಇಂದು ವಯೋವೃದ್ಧರಾದ ಅನೇಕ ಗೋಪಿಕೆಯರು ಸಿಗುತ್ತಾರೆ. ಆದರೆ ರಾಧೆ ಮಾತ್ರ ಸಿಗುವುದಿಲ್ಲ. ಫಲಿತಗೊಳ್ಳದ ಜಗತ್ತಿನ ಮೊದಲ ಪ್ರೇಮಕಥೆಯ ಅಂತ್ಯ ಹೇಗಾಗುತ್ತದೆ? ಓದಿ ಮನೋಜ್ಞ ಕಥಾನಕ. ವಿರಚಿಸಿದವರು ಚಿತ್ರನಿರ್ದೇಶಕ, ಸಂಗೀತ ನಿರ್ದೇಶಕ, ಕವಿ ಗಂಧರ್ವ ರಾಯರಾವುತ ಅವರು.
***
ಈ ರಾಧೆ ಎಂಬೋ ವಿವಾಹಿತಳ ಬಗ್ಗೆ ನನಗಿರುವ ಆಕರ್ಷಣೆಯನ್ನು, ಅನುರಾಗವೆಂದೋ, ಆತ್ಮ ಸಾಂಗತ್ಯವೆಂದೋ, ನಿರ್ವಾಜ್ಯ ಪ್ರೇಮವೆಂದೋ ಬಿಂಬಿಸಿ ಅಪವಾದದಿಂದ ಪಾರಾಗಿಬಿಟ್ಟೆನಾ…? ನನ್ನ –ಅವಳ ಸಂಬಂಧ ನೈತಿಕವೋ–ಅನೈತಿಕವೋ ಎಂಬ ಜಿಜ್ಞಾಸೆ ಸಮಚಿತ್ತನೆಂದು ಕರೆಸಿಕೊಳ್ಳುವ ನನಗೆ ಮೂಡಿದ್ದು ಸೋಜಿಗವೇ….! ವಾಸುದೇವ ಎಂದು ನಾಮಾoಕಿತನಾದ, ಪರಮಾತ್ಮ ಎಂದು ಸಂಭೋದಿಸಲ್ಪಡುವ, ಸುಜ್ಞಾನಿಯಾದ ನನಗೇ ಈ ತುಮುಲಗಳು ಹೊಯ್ಡಾಡುವುದಾದರೆ ಸಾಮಾನ್ಯರೆಂದುಕೊಂಡವರ ಬಗೆ ಹೇಗೆ?.
ಬೆವರು ಒರೆಸಿಕೊಂಡು ಎಡಭಾಗದ ಕುದುರೆಗೆ ಕೊಂಚ ಬಿರುಸಾಗುವಂತೆ ಪುಸಲಾಯಿಸಿದ. ಅದಾಗಲೇ ಮಧ್ಯಾನ್ಹದ ಬಿರುಬಿಸಿಲು . ದಟ್ಟಾರಣ್ಯದ ನಡುವೆ ಏಕಾಂಗಿಯಾಗಿ ರಥ ನಡೆಸುತ್ತಿದ್ದ ಅವನ ಮುಖದ ಮೇಲಿನ ವಯೋಸಹಜ ನೆರಿಗೆಗಳನ್ನು ಸೋಕಿಯೂ ಸೋಕದ ಹಾಗೆ ಬಿಳೀ ಮುಂಗುರುಳು ಆಗಾಗ ಬಂದು ಕಣ್ಣನ್ನು ಚುಂಬಿಸಿ ಹೋಗುತ್ತಿದ್ದವು. ಯಮುನಾ ನದಿಯ ತಟದಲ್ಲಿದ್ದ ನುರುಜುಗಲ್ಲಿನ ಹಾದಿಯಲ್ಲಿ ರಥ ಓಡುತ್ತಿತ್ತು. ಓಹ್ ನದಿ ಪಾತ್ರ ಎಷ್ಟೊಂದು ದೊಡ್ಡದಾಗಿಬಿಟ್ಟಿದೆ….! ಬರೋಬ್ಬರಿ ಎಂಭತ್ತು ವರ್ಷಗಳ ನಂತರ ಅವನು ದ್ವಾರಕೆಯಿಂದ ಗೋಕುಲದ ಕಡೆಗೆ ನೋಡಿದ್ದ. ಇಂದೇಕೋ ಹಕ್ಕಿಯ ಚಿಲಿಪಿಲಿ ಗಾನವಾಗಲಿ, ಯಮುನೆಯ ಜುಳು ಜುಳು ಸದ್ದಾಗಲಿ ಮನಸಿಗೆ ಮುದ ನೀಡುತ್ತಿಲ್ಲ. ಆ ಪುಟ್ಟ ಜಲಪಾತದ ಸದ್ದು ಕೇಳಿದೊಡನೆ ರೋಮಾಂಚನವಾಗುವ ಬದಲು ಅದ್ಯಾಕೋ ಈ ದಿನ ಅವನ ಎದೆ ಬಡಿತ ಜೋರಾಗಿದೆ . ಒಂದೇ ಪ್ರಶ್ನೆ. ” ಅವಳನ್ನು ಮುಖಾಮುಖಿಯಾದರೆ ಆ ಕಣ್ಣುಗಳನ್ನು ಎದುರಿಸಲು ನನ್ನಿಂದ ಸಾಧ್ಯವೇ?”. ” ಹನ್ನೊಂದು ತಿಂಗಳು ಹಿರಿಯಳಾದ ಅವಳಿಗೆ ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಪ್ರಭುದ್ಧತೆ ಇಲ್ಲದೆ ಇರಲು ಸಾಧ್ಯವೇ? “.
ಸರಿಸುಮಾರು ಹದಿನಾರು ಕೋಟಿ ಅರವತ್ತು ಲಕ್ಷ ಸೈನಿಕರ ಸಾವನ್ನು ನೋಡಿದಾಗಲೂ ವ್ಯಥೆಗೊಳ್ಳದ ಈ ನನ್ನ ಮನಸು ಇಂದೇಕೆ ಇಷ್ಟು ಕಳವಳಗೊಳ್ಳುತ್ತಿದೆ. ಅವನ ತಲೆಯಲ್ಲಿ ಸುಳಿಸುಳಿಯಾಗಿ ಯೋಚನೆಗಳು ನುಸುಳುತ್ತಿವೆ. “ಧಡ್ ” ಎಂದು ಯಾವುದೋ ಗುಂಡಿಯನ್ನು ಧುಮುಕಿ ಎದ್ದ ರಥದ ಚಕ್ರ ಇವನನ್ನು ಮತ್ತೆ ಎಚ್ಚರ ಸ್ಥಿತಿಗೆ ತಂದಿತ್ತು. ಪ್ರಾಯಾಸಪಟ್ಟು ಕಿರ್ ರ್ ರ್ ರ್ ಎನ್ನುವ ರಥದ ಚಕ್ರಗಳು, ಅದನ್ನು ಎಳೆದೆಳೆದು ಉಬ್ಬಸಪಡುತ್ತಿರುವ ಅಶ್ವಗಳೂ, ಪಾರಿ, ಮೂಕಿನ ಮರ, ಅಚ್ಚು, ಗುಂಭ, ಕಡೆಗೀಲುಗಳ ಲಯಬದ್ದ ಶಬ್ದಗಳು ಇಂದೇಕೋ ಚೀರುತ್ತಿವೆ. ಅಹರ್ನಿಶೆಯಂತೆ ಬಂದೆರಗುತ್ತಿದ್ದ ಪಾಷಾಣ ಅಂಬುಗಳಿಗೇ ಅಂಕೆಯಿಡದೆ ಮುನ್ನೆಡೆದ ನಾನು ಇಂದೇಕೋ ಭಯಗ್ರಸ್ತನಾಗಿದ್ದೀನಲ್ಲಾ.
ಓಹ್… ಇದು ಕಾಳಿಂಗನ ಮಡು ಅಲ್ಲವೇ?. ಸುತ್ತಲೂ ಜೊoಡು ಬೆಳೆದುಬಿಟ್ಟಿದೆ. ತಾನೇ ತಾನಾಗಿ ರಥದ ವೇಗ ತಗ್ಗಿತಲ್ಲಾ…… ಇದೇ ಕೊಳದಲ್ಲಿ ದೈತ್ಯೋರಗನನ್ನು ಆಟಿಕೆಯಂತೆ ಹಿಡಿದು ಆಡಿಸಿದ್ದೆ. ಉಸಿರಾಡಲೂ ಬಿಡದೆ ಅದರ ಹೆಡೆಯ ಮೇಲೆ ನಾಟ್ಯವಾಡಿದ್ದೆ ಎಂದು ಇಳಿಬಿದ್ದ ತೋಳುಗಳ ಸ್ನಾಯುಗಳನ್ನು ನೋಡಿ ವಿಷಾದದ ನಗೆ ನಕ್ಕ. ಕೃಷವಾದ ತನ್ನ ದೇಹದ ಅರಿವು ಈ ಕ್ಷಣ ಕಾಡಿದ್ದಂತೂ ದಿಟ.
ರಥ ಓಡಿದಂತೆಲ್ಲಾ ಅವಳು ಬಂದು ರಥದ ಮೂಕಿನ ಮರದ ತುದಿಯಲ್ಲಿ ಕುಳಿತಂತೆ ಭಾಸವಾಗುತ್ತಿತ್ತು. ಎಂಥ ಭ್ರಮೆ….! ಇದೇನಿದು ಸುರಹೊನ್ನೆ ಮರಗಳ ಸಾಲು……. ಈಗ ಅದೆಂಥ ರಾಕ್ಷಸಗಾತ್ರವಾಗಿ ಬೆಳೆದು ನಿಂತಿವೆ. ಇದೇ ಮರದ ನೆರಳಿನಲ್ಲಿ ಆ ದಿನ ಮಂದ್ರ ಸ್ಥಾಯಿಯಲ್ಲಿ ಮುರಳಿಯನ್ನು ನುಡಿಸಿದ್ದೆ. ಕೆಳಸ್ಥಾಯಿಯಲ್ಲಿ ದೇಸ್ ರಾಗದಲ್ಲಿ ನುಡಿಸಿದ್ದೇ ಆದರೆ ನನಗಿಷ್ಟ ಎಂದಿದ್ದಳು ಅವಳು. ಮುರಳಿಯನ್ನು ಪಕ್ಕಕ್ಕಿಟ್ಟು ವೇಣುವನ್ನು ಹಿಡಿದು ನುಡಿಸಿದ್ದೆನಾದರೂ ಮೇರು ಸ್ಥಾಯಿಯಲ್ಲಿ ಆ ರಾಗದ ಸಂಪೂರ್ಣ ವಿಸ್ತಾರ ಅವಳಿಗೆ ತೃಪ್ತಿಯಾಗಿರಲಿಲ್ಲ. ಅವಳ ಮುಂಗುರುಳ ಜೊತೆ ಬೆರಳುಗಳ ಆಟದಲ್ಲೇ ಅದು ತಿಳಿಯುತ್ತಿತ್ತು. ನಂತರ ವಂಶಿಯನ್ನು ಹಿಡಿದು ದುರ್ಗಾ ರಾಗದಲ್ಲಿ ರವಳಿಯನ್ನು ಗಾಳಿಯಲ್ಲಿ ಹಾಗೇ ವಿಸ್ತಾರಕ್ಕಾಗಿ ಬಿಟ್ಟಿದ್ದೆ. ಥಟ್ಟನೇ ಕೊಳಲನ್ನು ನನ್ನ ತುಟಿಯಿಂದ ಕಿತ್ತುಕೊಂಡು ಬೇಸರದಲ್ಲಿ ನೋಡಿದ್ದಳು ರಾಧೇ. ಅವರೋಹಣದಲ್ಲಿ ತಪ್ಪಾಯಿತು ಎಂದು ತುಟಿ ಕೊಂಕಿಸಿ ನುಡಿದಿದ್ದಳು. ಸಂಗೀತದಲ್ಲಿ ಪ್ರಾವೀಣ್ಯತೆ ಇರದಿದ್ದರೂ ಅದೆಷ್ಟು ನಿಖರವಾಗಿ ನನ್ನ ತಪ್ಪನ್ನು ಹಿಡಿದಿದ್ದಳು. ಅದಕ್ಕೇ ಪದೇ ಪದೇ ಅವಳನ್ನು ನಾನು ” ಗಾನವಿ ” ಎಂದೇ ಕರೆಯುತ್ತಿದ್ದೆ.
“ಅದ್ಯಾಕೋ ಪ್ರತಿದಿನದಂತೆ ಇರಲಿಲ್ಲ ನಿನ್ನ ಮುರಳಿ ಗಾನ “.
ಪ್ರತಿ ಕ್ಷಣ ನನ್ನ ಕೊಳಲ ಗಾನದಲ್ಲೇ ಜೀವಿಸಿದ್ದವಳ ಕಿವಿಗೆ ಎಲ್ಲೋ ಅಪಸ್ವರದ ಛಾಯೆ ಹೊಳೆದಿತ್ತು. ಈ ಬಾರಿ ರಥದ ಗುಜ್ಜು ಹಿಡಿದು ಸಣ್ಣ ಮಗುವಿನಂತೆ ನನ್ನ ತೋಳನ್ನು ಒರಗಿದ್ದ ಪೋರಿ,
” ಅವರೋಹಣದಲ್ಲಿ ಸ ಧ ಪ ಮ ರೆ ಸ ಇರಬೇಕಿತ್ತು. ಅನಾವಶ್ಯಕವಾಗಿ ನಿಶಾದ ಬಂದು ಇಡೀ ರಾಗದ ಸ್ವಾದವೇ ಹಾಳಾಯ್ತು “.
ಎಂದು ಗಳಗಳನೇ ಅತ್ತೇಬಿಟ್ಟಿದ್ದಳು. ನನ್ನ ಒಂದೇ ಒಂದು ನಡೆ ಸರಿ ಹೋಗಲಿಲ್ಲ ಎಂದರೂ ನನಗಿಂತ ಹೆಚ್ಚು ಕೊರಗಿದ್ದು ಅವಳೇ. ಅವಳೇ ನನ್ನ ರಾಧೆ ……!
ಝo ನೇರಳೆ ಮರದ ಸಾಲುಗಳಲ್ಲಿ ಹಣ್ಣಿನ ಬುಟ್ಟಿ ಹಿಡಿದು, ಕೋಲು ಊರಿ ಬರುತ್ತಿರುವವಳಾರು?…… ಯಾರೂ?……. ಮಾಧವ ತೀವ್ರ ಕುತೂಹಲಶಾಲಿಯಾದ. ರಾಧೆಯೇ ಇರಬಹುದೆ ?. ಎದೆ ಬಡಿತ ಜೋರಾಯ್ತು. ಹತ್ತಿರ ಬಂದಂತೆಲ್ಲಾ ಸ್ಪುಟವಾಯ್ತು ಆಕೃತಿ. ಅವಳಾರೆಂದು ಗುರುತು ಹಿಡಿದು ಕೂಗೇ ಬಿಟ್ಟ ಕೃಷ್ಣ.
” ರಾಧೇ …….ರಾಧಿಕಾ……”
ಕಿವಿ ಕೇಳದೇನೋ, ನೋಡದೆ ಮುಂದಡಿ ಇಟ್ಟು ಮರದ ಸಾಲಿನಲ್ಲಿ ಮಾಯವಾಗುವಷ್ಟರಲ್ಲಿ ಇವನು ರಥದಿಂದ ಧುಮುಕಿ ಓಡಿ ಬಂದು ಅವಳ ಮುಂದೆ ನಿಂತೇ ಬಿಟ್ಟ. ದುಪಟ್ಟಾ ಸರಿಸಿ ಕತ್ತೆತ್ತಿ ನೋಡಿದಳು. ಅವಳು ರಾಧೆಯಲ್ಲ…! ಅವಳು “ಸುಭಿಕ್ಷಾ ” ರಾಧೆಯ ಪ್ರಾಣ ಸ್ನೇಹಿತೆ. ದೈನ್ಯ ಭಾವದಿಂದ ನನ್ನ ರಾಧೆ ಎಲ್ಲಿರುವಳು ಎನ್ನುವಂತೆ ನೋಡಿದ ಕೃಷ್ಣ. ಕುರುಕ್ಷೇತ್ರದಲ್ಲಿ ಸಂಬಂಧಗಳ ಸಂಕೋಲೆಯನ್ನು ಕೊಚ್ಚಿ ಕೆಡವಿ ಕಠೋರತೆ ಯನ್ನು ಮೆರೆದವನು ಇದೇ ಶ್ರೀ ಕೃಷ್ಣ. ಇಂದು ಒಂದೇ ಒಂದು ಸಂಬಂಧಕ್ಕಾಗಿ ಮುಮ್ಮಲ ಮರುಗುತ್ತಿದ್ದಾನೆ.
” ಓಹ್ ಸುಭಿಕ್ಷಾ….. ನೀನಾ ”
” ಸೌಖ್ಯವೇ “.
ಇವನನ್ನು ನೋಡಿದವಳೇ ವಿವರ್ಣವದನಳಾಗಿ ನಿಂತು ಬಿಟ್ಟಳು ಅವಳು.
” ಗುರುತು ಸಿಗಲಿಲ್ಲವೇ ಸುಭಿಕ್ಷಾ ?”
” ಕೇವಲ ಹೆಣ್ಣನ್ನು ತಿರಸ್ಕರಿದವನಾದರೆ ಮಾಮೂಲಿ ಎಂದು ಮರೆಯಬಹುದಿತ್ತು. ಆದರೆ ಅವಳ ನಿಷ್ಕಲ್ಮಶ ಪ್ರೀತಿಯನ್ನು ತಿರಸ್ಕರಿಸಿದ ಅಪರೂಪದವನ್ನು ಮರೆಯಲು ಸಾಧ್ಯವೇ? “.
ಕೃಷ್ಣ ಅದ್ಯಾಕೋ ಅಧೀರನಾದ.
” ಅವಳ ಬಗ್ಗೆ ನಾನೇನನ್ನೂ ಹೇಳಲಾರೆ. ನೀನು ಧೈರ್ಯವಂತ ಯದುವಂಶದ ದೊರೆಯೇ ಆಗಿದ್ದರೆ ಹೋಗಿ ಅವಳ ಕಣ್ಣಲ್ಲಿ ಕಣ್ಣಿಟ್ಟು ಅರೆಗಳಿಗೆ ನೋಡು. ಎಲ್ಲವನ್ನೂ ಅವೇ ಹೇಳಬಲ್ಲವು. ಯಾಕೆ? ಹೆದರಿಕೆಯೇ?. ನೀನು ಹೆದರಬೇಕಾದ್ದು ನಿನ್ನ ಪಲಾಯನವಾದಕ್ಕಲ್ಲ. ರಾಧೆಯ ಕಾಯುವಿಕೆಗೆ. ದಿನಕ್ಕೆರಡು ಬಾರಿ ನಿನ್ನ ವಿಷಯ ಹೇಳಿಕೊಳ್ಳಲು ನನ್ನ ಬಳಿ ಬರುತ್ತಾಳೆ. ವಾರದ ಹಿಂದೆ ಬಂದವಳು ಅದ್ಯಾಕೋ ಮಾತಾಡದೆ ಹಿಂದಿರುಗಿದಳು. ಯಾವ ಮಾತೂ ಉಳಿಯದೆ ಖಾಲಿಯಾಗಿದ್ದಳು. ಕಣ್ಣಲ್ಲಿ ನೋವು ಮಡುಗಟ್ಟಿತ್ತು. ಎಂದಾದರೂ ಅವನು ನನ್ನನ್ನು ಹುಡುಕಿ ಬರಬಹುದೇ ಎಂದು ಅಲವತ್ತುಕೊಂಡು ದ್ವಾರಕೆಯ ಕಡೆಗೆ ನೋಡುತ್ತಾ ಕಣ್ಣೀರಾಗಿದ್ದಳು. ನಿತ್ರಾಣಗೊಂಡಿದ್ದ ಅವಳಿಗೆ ಕುಡಿಯಲು ಹಾಲು ಕೊಟ್ಟೆ. ಅದರ ಪರಿವೆಯೇ ಇಲ್ಲದೆ ಸದ್ದಿಲ್ಲದೇ ಎದ್ದು ಹೋದಳು. ಒಂದು ವಾರವಾಯ್ತು ಮತ್ತೆ ನಾನವಳನ್ನು ನೋಡಿಲ್ಲ….. ನಾನಿನ್ನು ಬರುತ್ತೇನೆ“.
“ದೀಪ ಹಚ್ಚುವ ಸಂಭ್ರಮಕ್ಕೆ ಕಾಣೆಯಾದೆ. ದೀಪವಾರುವ
ಸಮಯಕ್ಕೆ ಹಿಂದಿರುಗಿ ಬಂದೆ. ಅದ್ಯಾವ ಸೀಮೆ ಗಂಡಸರೋ ನೀವೆಲ್ಲಾ ” .
ಎಂದು ಗೊಣಗುತ್ತಾ ಕಣಿವೆಯ ಇಳಿಜಾರಿನಲ್ಲಿ ಮಾಯವಾದಳು ಸುಭಿಕ್ಷಾ.
ಅಶ್ವಗಳು ಯಾಕೋ ಸೋತಂತೆ ಹೆಜ್ಜೆ ಹಾಕುತ್ತಾ ಗೋಕುಲದ ಹಾಡಿಯ ಕಡೆ ನಡೆಯುತ್ತಿವೆ. ಜಗತ್ತನ್ನೇ ಮೋಡಿ ಮಾಡಿದ ಮಾಧವನನ್ನೇ ಮೋಡಿ ಮಾಡಿದ ಚತುರೆ ಅವಳು. ಅವರಿಬ್ಬರದೂ ಸಂಕೀರ್ಣವಾದ ಸಂಬಂಧ. ದಾಂಪತ್ಯವಲ್ಲದ ಪಥ್ಯಪೂರ್ಣ ದಾಂಪತ್ಯವದು. ದೈವಿಕ ದ್ವಂದ್ವತೆಯಲ್ಲಿ ಮಿಂದಂತಹ ಸಂಬಂಧವದು.
ಅಯ್ಯೋ….. ಇದು ಮಧುಬನ ಅಲ್ಲವೇ? ನನ್ನ ಮುರಳಿ ಗಾನಕ್ಕೆ ಅವಳು ನಾಟ್ಯವಾಡಿ ತಣಿಯುತ್ತಿದ್ದ ಪ್ರೇಮವನ….! ಓಲೆ ಗರಿಯ ಮೇಲೆ ಬರೆದು ತಂದಿದ್ದ ಸಾಲುಗಳನ್ನು ಓದಿ ಮೊದಲ ಬಾರಿ ಅವಳನ್ನು ಅಪ್ಪಿದ್ದು ಇಲ್ಲೇ ಅಲ್ಲವೇ. “ನಿಂತಿರುವೆ ತುದಿಗಾಲಲಿ ..ಜೀವ ಹಿಡಿದು ಕೈಯ್ಯಲಿ .. ” .
ಕೃಷ್ಣನ ಕಣ್ಣು ಒದ್ದೆಯಾಗಿ ಯಾರಿಗೂ ಕಾಣದಂತೆ ಅಂಗವಸ್ತ್ರದಲ್ಲಿ ಕಣ್ಣೀರನ್ನು ಒರೆಸಿಕೊಂಡ. ಜಗತ್ತಿನ ಎಲ್ಲಾ ಆಗು ಹೋಗುಗಳನ್ನ ಅರಿತ ಪುರುಷೋತ್ತಮ ಅಳುವುದೆಂದರೆ? ಛೇ…. ಇದೇ ಜಾಗದಲ್ಲಿ ರಾಧೆ ಅವನ ಕಿರೀಟದಲ್ಲಿ ತನ್ನ ನವಿಲುಗರಿಗೆ ಜಾಗವಿದೆಯೇ ಎಂದು ಕೇಳಿದ್ದಳು. ಅವಳು ಕೊಟ್ಟ ಆ ನವಿಲುಗರಿ ಶಾಶ್ವತವಾಗಿ ಅವನ ತಲೆಯಲ್ಲಿ ಉಳಿದುಬಿಟ್ಟಿತ್ತು. ಆದರೇನು? ಅಷ್ಟು ಸಾಕಾ ಒಂದು ಪ್ರೀತಿಯ ಸಾರ್ಥಕತೆಗೆ? ಅದೇ ಈ ಕ್ಷಣದ ಪ್ರಶ್ನೆ. ಗೋಕುಲ ನಿರ್ಗಮನಕ್ಕೆ ಮುನ್ನ ಇದೇ ಜಾಗದಲ್ಲಿ ಅವನ ಕೊರಳಿಗೆ ವೈಜಯಂತಿ ಮಾಲೆಯನ್ನು ಹಾಕಿ ನನ್ನನ್ನು ಮರೆಯುವುದಿಲ್ಲ ಅಲ್ಲವೇ ಎಂದು ಮಗುವಂತೆ ಕೇಳಿದ್ದಳು. ಮಥುರಾ ಏನೂ ದೂರವಿಲ್ಲವಲ್ಲ ಎಂದು ಸಮಾಧಾನ ಮಾಡಿದ್ದ ಕೃಷ್ಣ. ಆದರೆ ತಾನೆಂದೂ ನಡೆಯಲಾರದಷ್ಟು ದೂರಕ್ಕೆ ಅವನು ಹೊರಟು ನಿಂತಿರುವುದು ಅವಳಿಗೆ ತಾನೇ ಹೇಗೆ ತಿಳಿದೀತು?
ರಥದ ಚಕ್ರಗಳು ಗೋಕುಲದ ರಸ್ತೆಯಲ್ಲಿ ಉರುಳುತ್ತಿದ್ದರೆ, ಛತ್ರಿ –ಚಾಮರ ಹಿಡಿದು ಕೃಷ್ಣನ ಸ್ವಾಗತಕ್ಕೆ ಯಾರೂ ನಿಲ್ಲದೇ ಹೋದರಲ್ಲ..! ಅಥವಾ. ಮೊದಲೇ ಗೊತ್ತಿದ್ದರೆ ಯದುವಂಶದ ದೊರೆಗಳನ್ನು ಎದುರುಗೊಳ್ಳಲು ಸಾಮಂತ ಪರಿವಾರವಾದರೂ ಬರುತ್ತಿತ್ತೇನೋ. ಆದರೆ ಕೃಷ್ಣನಿಗಿದು ಖಾಸಗಿ ಭೇಟಿ. ಅವನು ಹುಡುಕಿ ಬಂದಿರುವುದು ಪ್ರಿಯತಮೆಯನ್ನ. ನಿಜವಾದ ಪ್ರೇಮಿಯೆಂದೇ ಭಾವಿಸಿದ್ದರೆ ಇಷ್ಟ್ಟು ವರ್ಷ ರಾಧೆಯನ್ನು ಒದ್ದೆ ಕಣ್ಣಿನಲ್ಲಿ ಕಾಯುವಂತೆ ಮಾಡುತ್ತಿದ್ದನೆ. ಇದೇ ಕಾರಣಕ್ಕೇ ಕೃಷ್ಣನ ಪ್ರೀತಿಯ ಬಗ್ಗೆ ಅನುಮಾನಗಳು ಕಾಡುತ್ತವೆ. ಗೋಕುಲದ ಕೃಷ್ಣ, ಪ್ರೇಮಿಯೇ ಸೈ. ಆದರೆ ಅಮರ ಪ್ರೇಮಿ ಎಂದು ಹೇಳಲು ಗೋಕುಲದ ಬಹಳಷ್ಟುಮಂದಿ ಹಿಂಜರಿಯುತ್ತಿದ್ದಾರೆ..!
ಕಣ್ಣಲ್ಲಿ ಕಣ್ಣಿಟ್ಟು ರಾಧೆಗಾಗಿ ಮಾಧವನ ಹುಡುಕಾಟ ವಿವರಿಸಲಸದಳ. ಈಗ ಇಲ್ಲಿ ಎಲ್ಲವೂ ಮೊದಲಿನಂತಿಲ್ಲ. ಯಾರನ್ನು ಕೇಳುವುದು, ಎಲ್ಲಿ ವಿಚಾರಿಸುವುದು, ಅದೂ ಗುಟ್ಟಾಗಿ. ಅವಳು ಎಂದೋ “ಅಯಾನ ” ನನ್ನು ಮದುವೆಯಾಗಿ ಜೀವನ ಕಟ್ಟಿಕೊಂಡವಳು. ಈಗ ನಾನು ರಾಧೆಯನ್ನು ಹುಡುಕಿ ಬಂದದ್ದು ಎಷ್ಟು ಔಚಿತ್ಯಪೂರ್ಣ. ಜಗದೊಡೆಯನಿಗೆ ಮುಗಿಯದ ಗೊಂದಲ. ಅದನ್ನೂ ಮೀರಿಸಿದ್ದು ರಾಧೆಯನ್ನು ನೋಡುವ ಉಟ್ಕತ ಬಯಕೆ. ಹಣ್ಣಾಗಿ ಹೋದ ಶ್ರೀ ಕೃಷ್ಣ.
ಈ ತಿರುವಿನಲ್ಲಿ ನಿಂತು ನೋಡಿದರೆ ಯಮುನೆಯ ಚೆಲುವು ಇಮ್ಮಡಿಯಾಗಿರುತ್ತದೆ. ನದಿ ತಟಕ್ಕೆ ಇಳಿಯಲು ನವಿರಾದ ಮೆಟ್ಟಿಲುಗಳು. ರಸ್ತೆ ಬದಿಯ ಪಕ್ಕದಲ್ಲಿ ಉದ್ದಕ್ಕೂ ಚೆಂದದ ಕಲ್ಲಿನ ಪ್ರಾಕಾರ . ಬೆಳಗಿನಲ್ಲಿ ಇದೇ ಪ್ರಾಕಾರದ ಮೇಲೆ ಸಾಲಾಗಿ ಪೇರಿಸಿಟ್ಟ ಮೊಸರಿನ ಗಡಿಗೆಗಳು, ಪಕ್ಕದಲ್ಲಿ ಶುಭ್ರ ಉಡುಗೆಗಳಲ್ಲಿ ಕಂಗೊಳಿಸುವ ಗೊಲ್ಲತಿಯರು, ದೂರದಲ್ಲಿ ಕರುಗಳ ಘಂಟೆಗಳ ಕಿಣಿ ಕಿಣಿ, ವಿಂದ್ಯ ಪರ್ವತದಿಂದ ಬೀಸುವ ಹಿತವಾದ ಮಂದಾನಿಲ. ಅಬ್ಬಾ ಗೋಕುಲವೆಂದರೆ ಭೂ ಲೋಕದ ಸ್ವರ್ಗ. ಆದರೆ ಅದ್ಯಾವುದೂ ಈ ಕ್ಷಣಕ್ಕೆ ಬೇಡದಿರುವ ವಿಷಯಗಳು. ಈಗಂತೂ ಯಾರೆಂದರೆ ಯಾರೂ ಅಲ್ಲಿಲ್ಲ.
ಓಹ್…. ಆಗೋ ಅಲ್ಲಿ ಅದೇ ಪ್ರಾಕಾರದ ಮೇಲೆ ಯಾರೋ ಒಬ್ಬಳು ರಸ್ತೆಗೆ ಬೆನ್ನು ಹಾಕಿ ಯಮುನೆಯ ಕಡೆಗೆ ಮುಖ ಮಾಡಿ ಕುಳಿತಿದ್ದಾಳೆ. ಖಂಡಿತ ಅವಳು ರಾಧೆಯೇ… ಅನುಮಾನದಿಂದಲೇ ರಥದಿಂದ ಇಳಿದು ನದಿಯ ಬಳಿ ಬರುತ್ತಿರುವ ಅವನನ್ನು ಧ್ವನಿಯೊಂದು ತಡೆದು ಅಲ್ಲೇ ನಿಲ್ಲುವಂತೆ ಮಾಡಿಬಿಡುತ್ತದೆ.
“ಐವತ್ತು ಗಜ ದೂರದಲ್ಲೇ ನಿಲ್ಲು..”
ಅವನ ಕಡೆ ನೋಡದೇ ನಡುಗುವ ದನಿಯಲ್ಲೇ ನುಡಿಯುತ್ತಾಳೆ.
“ನಾನು ರಾಧೆಯ ಬಗ್ಗೆ ಬೇಕಂತಲೇ ಯಾವುದೇ ಮಾಹಿತಿಯನ್ನು ಕೊಡುವುದಿಲ್ಲ“.
ಕೃಷ್ಣನಿಗೆ ದಿಗ್ಬ್ರಮೆ. ಕೂಲಂಕುಷವಾಗಿ ಗಮನಿಸಿದ. ಅವಳು “ಸುಧೇನು“. ಗೋಪಿಕೆಯರಲ್ಲೆಲ್ಲಾ ಕಿರಿಯವಳು. ಎಂದೂ ಯಾರ ಮುಂದೆಯೂ ನಿಂತು ಒಮ್ಮೆಯೂ ಮಾತಾಡದ ಅಂಜುಬುರುಕಿ..!
” ಯಾರನ್ನು ಹುಡುಕುತ್ತಿದ್ದೀಯ ಎಂದು ಬಲ್ಲೆ. ಮೊದಲು ನಿನ್ನನ್ನು ನೀನು ಹುಡುಕಿಕೋ. “
ಅವನ ಕಡೆ ತಿರುಗದೆ ವಿಷಾದದ ನಗೆ ನಗುತ್ತಾಳೆ ಸುಧೇನು.
” ನಿನ್ನ ಗೋಪಿಕೆಯರು ಬಹುಪಾಲು ವಯೋ ಸಹಜಕ್ಕೆ ಅನುಗುಣವಾಗಿ ಇಹಲೋಕ ತ್ಯಜಿಸಿದ್ದಾರೆ. ಕೆಲವರು ಮದುವೆಯಾಗಿ ಮೊಮ್ಮಕ್ಕಳು, ಮುಮ್ಮೊಕ್ಕಳ ಜೊತೆ ವೃದ್ದಾಪ್ಯಯವನ್ನು ಕಳೆಯುತ್ತಿದ್ದಾರೆ. ಬಹಳಷ್ಟು ಮಂದಿ ವಿಧವೆಯರಾಗಿದ್ದಾರೆ. ಅವರೆಲ್ಲಾ ನಿನ್ನ ‘ನಾರಾಯಣಿ‘ ಸೈನ್ಯದ ಸೈನಿಕರನ್ನು ಮದುವೆಯಾದವರು. ಆ ನತದೃಷ್ಟೆಯರಲ್ಲಿ ನಾನೂ ಒಬ್ಬಳು“.
ಮಾಧವ ಮರುಮಾತಾಡದೆ ನಿಂತು ಬಿಟ್ಟ.
“ನಮ್ಮ ಸೈನ್ಯವನ್ನು ಶತ್ರು ಪಾಳೆಯಕ್ಕೆ ಬಿಟ್ಟುಕೊಟ್ಟೆಯಂತಲ್ಲ. ನಮ್ಮ ಗಂಡಂದಿರೆಲ್ಲಾ ನಿನಗೂ ಸೋದರ ಸಂಬಂಧಿಗಳೇ. ಮುಂದೆ ನಿಂತು ಪ್ರೀತಿ ಪಾತ್ರರಾದ ಅವರನ್ನು ಹತ್ಯೆ ಮಾಡಲು ಆಣತಿ ಕೊಟ್ಟವನು ನೀನೇ ಅಲ್ಲವೇ. ನಮ್ಮ ವೈಧವ್ಯಕ್ಕೆ ಕಾರಣನಾದ ಯಾದವ ಕುಲತಿಲಕ! ಇರಲಿ ಬಿಡು. ಆದರೆ ನಮಗೂ ರಾಧೆಗೂ ಅಂತ ವ್ಯತ್ಯಾಸವೇನೂ ಇಲ್ಲ. ಹಾಗೆ ನೋಡಿದರೆ ನಮಗಿಂತ ಹತಭಾಗ್ಯಳು ಅವಳೇ. ಅವಳಿನ್ನೂ ನಿರೀಕ್ಷೆಯಲ್ಲೇ ಕೊರಗುತ್ತಿದ್ದಾಳೆ. ಸಿಗದಿರುವ ಪ್ರೀತಿಗೆ, ಬಾರದಿರುವ ಪ್ರಿಯಕರನಿಗೆ.”
ಮುಂದೆ ಮಾತನಾಡಲು ಆಗದೆ ತಡೆಯಲಾಗದೆ ಬಿಕ್ಕಳಿಸಿ ಅಳುತ್ತಾ ಮುಖ ಮುಚ್ಚಿಕೊಳ್ಳುತ್ತಾಳೆ ಸುಧೇನು.
ಯಮುನೆ ಯಾಕೋ ಬಿರುಸಾದವಳಂತೆ ಶಬ್ಧ ಮಾಡುತ್ತಿದ್ದಾಳೆ. ಕ್ಷಣ ಕಾಲ ಕಡು ಮೌನ. ಕಾಲವೇ ಸ್ಥಬ್ದವಾದಂತೆ.
” ಅಪ್ಪ, ಅಣ್ಣ, ಗಂಡಂದಿರನ್ನು ಕಳೆದುಕೊಂಡ ದಟ್ಟ ದರಿದ್ರೆಯರು ನಾವು. ನಮ್ಮ ಗೋಳನ್ನು ಕೇಳುವ ವ್ಯವಧಾನ ಎಲ್ಲಿ ಬರಬೇಕು ನಿನಗೆ. ಯಾರನ್ನು ಹುಡುಕಿ ಬಂದಿರುವೆಯೋ ಅಲ್ಲಿಗೇ ಹೋಗು . ವಿದಾಯದ ವಿಷ ಹೇಗಿರುತ್ತೆದೆಂದು ನಿನಗೂ ತಿಳಿಯಲಿ“.
ಚಣ ಕಾಲ ಗಲಿಬಿಲಿಗೊಂಡವನಂತೆ ಕಂಡರೂ ಅಲ್ಲಿರುವುದು ಬೇಡವೆಂದು ರಥದ ಬಳಿಗೆ ಬರುತ್ತಾನೆ ಕೃಷ್ಣ. ತೊಂಭತ್ತು ವರ್ಷದ ಕೀರ್ತಿಶೀಲ ಕಣ್ಣಿನ ಹುಬ್ಬಿನ ಮೇಲೆ ಕೈಯ್ಯಿಟ್ಟು, “”ಯಾರೂ…. ಕೃಷ್ಣನಾ ?”
ಎಂದು ದೃಢಮಾಡಿಕೊಳ್ಳುವಷ್ಟರಲ್ಲಿ ಕೃಷ್ಣನೇ ಅವನ ಬಳಿ ಬಂದು ಭುಜದ ಮೇಲೆ ಕೈಯ್ಯಡುತ್ತಾನೆ. ತಕ್ಷಣವೇ ಅವನ ಕೈಯ್ಯನ್ನು ನಯವಾಗೇ ಕೆಳಗೆ ದೂಡಿ ತನ್ನ ಅಸಮಾಧಾನವನ್ನು ತೋಡಿಕೊಳ್ಳುತ್ತಾನೆ ಕೀರ್ತಿಶೀಲ.
” ರಾಧೆಯ ಬಗ್ಗೆ ನಿನಗೇನಾದರೂ ಗೊತ್ತಾ? ” ಕೃಷ್ಣ ಕೇಳಿದ. ಕೀರ್ತಿಶೀಲ ಸಿಡಿದ
” ರಾಧೆಯ ಬಗ್ಗೆ ನಿನಗೇನಾದರೂ ಗೊತ್ತಾ . ಅವಳ ದುಃಖ ದುಮ್ಮಾನ ಗಳ ಬಗ್ಗೆ ನಿನಗೇನಾದರೂ ಗೊತ್ತಾ? “
ಕೃಷ್ಣನಿಗೆ ಬಿಕ್ಕಟ್ಟಿನ ಅರಿವಾಗುತ್ತದೆ.
” ರಾಜ ಕಾರಣದ ಒತ್ತಡದಿಂದಾಗಿ…. ನಾ… ನು… “
” ಈ ಮಾತನ್ನು ರಾಧೆಯ ಬಳಿ ಹೇಳದಿರು ಕೃಷ್ಣ. ಅಪಹಾಸ್ಯಕ್ಕೆ ಗುರಿಯಾಗುತ್ತೀಯ “
ನದಿ ತಟವೇ ಸೆಲೆಯೊಡೆಯುವಂತೆ ಚೀರಿ ಅಳುತ್ತಾ ನಿಂತುಬಿಟ್ಟಳು ಅಂಜುಬುರುಕಿ ಸುಧೇನು…..
ಇನ್ನಿಲ್ಲದಂತೆ ರಾಧೆಯನ್ನು ಹುಡುಕುಡುಕಿ ದಣಿದ ಶ್ರೀ ಕೃಷ್ಣ. ಎಲ್ಲಿಯೂ ಅವಳ ಸುಳಿವೇ ಇಲ್ಲ. ಮ್ಲಾನವದನನಾಗಿ ಮೌನಕ್ಕೆ ಬಿದ್ದು ನೇರವಾಗಿ ಯಮುನೆಯ ತಟದಲ್ಲಿ ಕುಳಿತು ಬಿಕ್ಕಿದ ಪುರುಷೋತ್ತಮ. ಪ್ರೀತಿಯೆಂದರೆ ಅದೆಷ್ಟು ಅಮೂಲ್ಯವೆಂದು ಪ್ರಥಮ ಬಾರಿಗೆ ಜ್ಞಾನೋದಯವಾಗಿತ್ತು. ತುಂಬಿದ ಕಣ್ಣುಗಳಲ್ಲಿ ಮರಳಿ ಹೋಗಬೇಕಾದ ದಾರಿಯನ್ನು ನೋಡಿ ಬಸವಳಿದ. ಅಗೋ ಅಲ್ಲಿ ದೂರದಲ್ಲಿ ಅದೇ ರಸ್ತೆಯಲ್ಲಿ ದೂಳೆಬ್ಬಿಸುತ್ತಾ ರಥವೊಂದು ತನ್ನ ಕಡೆಗೇ ದಾವಿಸಿ ಬರುತ್ತಿರುವುದು ಗೋಚರಿಸುತ್ತದೆ. ಕಣ್ಣೊರೆಸಿಕೊಂಡು ಮೆಟ್ಟಿಲನ್ನೇರಿ ರಸ್ತೆಗೆ ಇಳಿಯುವಷ್ಟರಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತದೆ ಅದು ದ್ವಾರಕೆಯಿಂದ ಬಂದ ರಥವೆಂದು. ಆತಂಕ ಆಶ್ಚರ್ಯಗಳೊಂದಿಗೆ ನೋಡುತ್ತಿರುವಂತೆಯೇ ಸಾತ್ಯಕಿ ರಥದಿಂದ ಇಳಿದು ಇವನ ಕಡೆಗೇ ಬರುತ್ತಿದ್ದಾನೆ.
” ಏನಿದು ಈಗಷ್ಟೇ ನಾನು ಗೋಕುಲಕ್ಕೆ ಬಂದಿರುವೆ. ಬೆನ್ನ ಹಿಂದೆಯೇ ಸಾತ್ಯಕಿಯು ನನ್ನನ್ನ ಅರಸಿ ಬಂದ ತುರ್ತಾದರೂ ಏನಿರಬಹುದು “
ಸಾತ್ಯಕಿಯ ಮುಖದಲ್ಲಿದ್ದ ದುಗುಡವನ್ನು ಗುರ್ತಿಸಿ ಚಿಂತೆಗೊಳಗಾಗುತ್ತಾನೆ ಕೃಷ್ಣ.
“ಸಾತ್ಯಕಿ… ಅರಮನೆಯಲ್ಲಿ ಏನಾದರೂ ಘಾತವಾಯಿತೇ..? ದ್ವಾರಕೆಯ ಸಮಾಚಾರವಾದರೂ ಏನು? ನಾನು ಇಲ್ಲಿಗೆ ಬಂದದ್ದು ನಿನಗೆ ತಿಳಿದಿದ್ದಾದರೂ ಹೇಗೆ “
ಒಂದೇ ಉಸುರಿಗೆ ಪ್ರಶ್ನೆಗಳ ಸುರಿಮಳೆಗೈದ ಮಾಧವ.
” ಅರಮನೆಯಲ್ಲಿ ಎಲ್ಲರೂ ಕ್ಷೇಮ. ಆತಂಕಕ್ಕೆ ಕಾರಣವಿಲ್ಲ. ಇನ್ನು, ಸುಮಾರು ದಿನಗಳಿಂದಲೂ ಖಿನ್ನ ಮನಸ್ಕನಾಗಿ, ಯಾವುದರಲ್ಲೂ ಆಸಕ್ತಿಲ್ಲದೇ ಮೌನಕ್ಕೆ ಶರಣಾದ ನಿನ್ನನ್ನು ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಅದೂ ಅಲ್ಲದೇ ಹಲವಾರು ಬಾರಿ ಗೋಕುಲದ ವಿಷಯವನ್ನು ಪ್ರಸ್ತಾಪಿಸಿ ವ್ಯಾಕುಲಗೊಳ್ಳುತ್ತಿದ್ದ ನಿನ್ನ ಮನಸ್ಥಿತಿ ನನ್ನನ್ನು ಇಲ್ಲಿಯವರೆವಿಗೂ ಹುಡುಕಿ ಬರುವಂತೆ ಮಾಡಿತು “
ಕೃಷ್ಣ ವೇದನೆಯಿಂದ ಸಾತ್ಯಕಿಯ ಮುಖ ನೋಡುತ್ತಾನೆ.
” ನಿನ್ನ ಗಮನಕ್ಕೆ ತಾರದೆ ಇಲ್ಲಿಯವರೆಗೂ ಬಂದು ನಿನ್ನ ಮನಸಿನ ಗೊಂದಲವನ್ನು ಜಟಿಲ ಮಾಡಿದ್ದೆನಾದರೆ ಕ್ಷಮೆಯಿರಲಿ “
” ಆದರೂ ನಿನ್ನ ಮುಖದಲ್ಲಿ ಬೇರೇನೋ ಆತಂಕವಿದ್ದಂತೆ ಭಾಸವಾಗುವುದು ಸಾತ್ಯಕಿ. “
” ರುಕ್ಮಿಣಿ ದೇವಿಯ ಆಣತಿಯಂತೆ ನಾನಿಲ್ಲಿಗೆ ಬರಬೇಕಾಯ್ತು. ಆದಷ್ಟು ಬೇಗ ದ್ವಾರಕೆಗೆ ಹೋಗಬೇಕು ನಾವು “
ಏನೂ ಅರ್ಥವಾಗದೆ ಪೆಚ್ಚಾಗಿ ನಿಂತುಬಿಟ್ಟ ಕೃಷ್ಣ.
” ದ್ವಾರಕೆಯ ಅಂತಃ ಪುರದ ನೇರಕ್ಕೆ ಉದ್ಯಾನವನದಲ್ಲಿ ಮುಪ್ಪಾನ ಮುಪ್ಪು ಮುದುಕಿಯೊಬ್ಬಳು ಉಪ್ಪರಿಗೆಯನ್ನೇ ದಿಟ್ಟಿಸುತ್ತಾ ಹಗಲು ರಾತ್ರಿ ಯಾರದೋ ನಿರೀಕ್ಷೆಯಲ್ಲಿದ್ದದ್ದನ್ನು ರುಕ್ಮಿಣಿ ದೇವಿ ಗಮನಿಸಿದರಂತೆ. ಒಮ್ಮೆಯೂ ರೆಪ್ಪೆ ಬಡಿಯದೆ ತನ್ನತ್ತಲೇ ದೃಷ್ಟಿ ನೆಟ್ಟ ಅವಳ ಬಗ್ಗೆ ವಿಚಾರಿಸಲು, ಗಳಿಗೆಗೊಮ್ಮೆ ಕೃಷ್ಣ ಕೃಷ್ಣ ಎಂದು ಪ್ರಲಾಪಿಸುತ್ತಿದ್ದು ತಿಳಿಯಿತು” ಸಾತ್ಯಕಿ ಒಂದೇ ಸಮನೆ ವಿವರಣೆ ನೀಡುತ್ತಿದ್ದಾನೆ.
ಕೃಷ್ಣನಿಗೆ ಅದು ರಾಧೆಯೇ ಇರಬಹುದಾ ಎಂಬ ಆಲೋಚನೆ ಬಂದು ತೀವ್ರ ಭಾವುಕನಾಗಿ ನಿಂತು ಬಿಟ್ಟ.
“ಖುದ್ದು ರುಕ್ಮಿಣಿ ದೇವಿಯೇ ಅವಳಲ್ಲಿಗೆ ಬಂದು ಪರಾಮರ್ಶೆ ಮಾಡಲಾಗಿ ಅವಳು ಗೋಕುಲದ ರಾಧೆಯೆಂದೂ, ನಿನ್ನನ್ನು ನೋಡಲೇ ಬೇಕೆಂಬ ಸಂಕಲ್ಪದಿಂದ ದ್ವಾರಕೆಗೆ ನಡೆದು ಬಂದಿದ್ದೂ ತಿಳಿಯಿತು “.
” ರುಕ್ಮಿಣಿಗೆ ಅಘಾತವಾಯಿತೇ “
” ಇಲ್ಲ ಪರಮಾತ್ಮ…….. ತೀರಾ ದಣಿದಿದ್ದ ರಾಧೆಯನ್ನು ರುಕ್ಮಿಣಿದೇವಿಯು ಅರಮನೆಗೆ ಕರೆತಂದು ಆರೈಕೆಯಲ್ಲಿ ತೊಡಗಿದ್ದಾರೆ “
” ರಾಧೆ ಚೇತರಿಸಿದಳಾ ಸಾತ್ಯಕಿ. ನನಗೇಕೋ ಗಾಬರಿಯಾಗುತ್ತಿದೆ “
” ಕ್ಷಮೆ ಇರಲಿ ಕೃಷ್ಣ.. ರುಕ್ಮಿಣಿ ದೇವಿಯು, ತನ್ನ ತೊಡೆಯ ಮೇಲೆ ರಾಧೆಯ ತಲೆಯನ್ನಿಟ್ಟುಕೊಂಡು ತುಳಸಿ ದಳದಿಂದ ರಾಧೆಯ ಬಾಯಿಗೆ ಗಂಗಾಜಲವನ್ನು ಬಿಡುತ್ತಿದ್ದನ್ನು ನಾನೇ ನನ್ನ ಕಣ್ಣಾರೆ ನೋಡಿ ಬಂದೆ. ರುಕ್ಮಿಣಿ ದೇವಿಯ ದುಃಖವನ್ನು ವರ್ಣಿಸಲು ನನ್ನಲ್ಲಿ ಪದಗಳಿಲ್ಲ “
ಸಾತ್ಯಕಿ ಗದ್ಗದಿತನಾಗಿ ಮಾತು ಬಾರದೆ ತಲೆ ಬಾಗಿಸಿದ. ಏನನ್ನೂ ಕೇಳದೆ ಎಲ್ಲವನ್ನೂ ಅರ್ಥ ಮಾಡಿಕೊಂಡ ಕೃಷ್ಣ ಬಂಡೆಯಂತೆ ನಿಂತು ಬಿಟ್ಟ. ಅವನ ಉಸಿರಾಟದ ವೇಗ ಯಮುನೆಯನ್ನೂ ಮೀರಿಸಿತ್ತು. ಸಾತ್ಯಕಿಯು ತನ್ನ ಕೈಯ್ಯಲ್ಲಿದ್ದ ತುಂಡಾದ ತಾಳೆ ಗರಿಯನ್ನು ಕೃಷ್ಣನ ಕೈಗಿಟ್ಟ. ಮುದುಡಿದ್ದ ತಾಳೆ ಗರಿಯನ್ನು ನಿಧಾನವಾಗಿ ಬಿಡಿಸಿ ನಿಟ್ಟುಸಿರುಬಿಟ್ಟ ಕೇಶವ. ಅರ್ಧ ಅಳಿಸಿ ಹೋದ ಅಸ್ಪಷ್ಟ ಅಕ್ಷರಗಳು ಒದ್ದೆಯಾದ ಕಣ್ಣುಗಳಲ್ಲಿ ಮಂಜಾಗಿ ಮೂಡಿದ್ದವು.
” ನಿಂತಿರುವೆ ತುದಿಗಾಲಲಿ
ಜೀವ ಹಿಡಿದು ಕೈಯ್ಯಲಿ “
ಜೀವ ಹಿಂಡುವ ಸಾಲುಗಳವು.
ಒಂದೇ ಸಮನೆ ಸುರಿಯುತ್ತಿದ್ದ ಕಣ್ಣೀರನ್ನು ಸರಾಗವಾಗಿ ಹರಿಯಲು ಬಿಟ್ಟು ದಿಗಂತದ ಕಡೆಗೆ ಮೊಗವೆತ್ತಿ ಕಣ್ಣೀರಿಗೂ ಅಳು ಬರುವಂತೆ ಮನಸೋ ಇಚ್ಛೆ ರೋಧಿಸುತ್ತಾ ನಿಂತುಬಿಟ್ಟ ಮಾಧವ.
” ರಾಧೆಗೆ ಇನ್ನು ಕೆಲವೇ ಕ್ಷಣಗಳಷ್ಟೇ ಉಳಿದಿರುವುದು. ಭೂಮಿಯ ಋಣ ಮುಗಿದಂತೆ ಕಾಣುತ್ತಿದೆ. ಉಸಿರು ಚೆಲ್ಲುವ ಮೊದಲು ನಿನ್ನ ಕೊಳಲ ಗಾನವನ್ನು ಕೇಳಬೇಕೆಂಬುದೇ ಅವಳ ಕೊನೆಯ ಆಸೆಯಂತೆ. ದಯಮಾಡಿ ಒಮ್ಮೆ ಕೊಳಲನ್ನು ನುಡಿಸಲಾರೆಯ ಪರಮಾತ್ಮ “
ಕೈಮುಗಿದು, ಕಣ್ದುಂಬಿ ನಿಂತವನನ್ನು ಮನ್ನಿಸಿ ಶ್ರೀ ಕೃಷ್ಣ ನಡುಗುವ ಕೈಯ್ಯಲ್ಲಿ ಕೊಳಲನ್ನು ಎತ್ತಿಕೊಂಡ. ದುಗುಡ ತುಂಬಿದ ಆ ಸಮಯದಲ್ಲಿ ನುಡಿಯಬಲ್ಲದೆ ಕೊಳಲು?.
” ರಾಧಾ – ಮಾಧವರ ಪ್ರೀತಿ ಸತ್ಯವಾಗಿದ್ದರೆ ನಿನ್ನ ಕೊಳಲಿನ ರವಳಿ ದ್ವಾರಕೆಯನ್ನು ಖಂಡಿತ ತಲುಪುತ್ತದೆ. ಹೂ … ಉಸಿರು ತುಂಬು ನಿನ್ನ ಕೊಳಲಿಗೆ,ರಾಧೆಯ ಜೀವಕೆ “
ಕೃಷ್ಣ, ದುರ್ಗಾ ರಾಗದ ಅಲಾಪನೆಯೊಂದಿಗೆ ರವಳಿಯನ್ನು ಗಾಳಿಯಲ್ಲಿ ತೇಲಿಬಿಟ್ಟ. ಅದೇ ಗೋಕುಲ, ಅದೇ ರಾಧೆ, ಅದೇ ಕೊಳಲು, ಅದೇ ರಾಗ. ಬೇಕೆಂದೇ ಅವರೋಹಣದಲ್ಲಿ ನಿಶಾದವನ್ನು ತಂದು ಇಡೀ ವಾತಾವರಣವನ್ನೇ ಶೋಕದ ಮಡುವಿನಲ್ಲಿ ಮುಳುಗಿಸಿಬಿಟ್ಟ. ಅದೆಷ್ಟೋ ಹೊತ್ತು ಮುರಳಿ ಗಾನದ ಶರಧಿಯಲ್ಲಿ ಮುಳುಗಿ ಹೋದ. ಇದ್ದಕ್ಕಿದ್ದಂತೆ ಥಟ್ಟನೆ ಕೊಳಲ ಗಾನ ನಿಂತು ಹೋಯ್ತು. ನಡುಗುವ ದೇಹ, ಉಸಿರಿನ ಭೋರ್ಗರೆತ, ಬಿಟ್ಟ ಕಣ್ಣು ಬಿಟ್ಟಂತೆ….. ಕಣ್ಣುಗಳಲ್ಲಿ ಮತ್ತೊಮ್ಮೆ ವಿಶ್ವ ದರ್ಶನ ಮಾಡಿಸಿದ್ದ ಶ್ರೀ ಕೃಷ್ಣ. ಕೊಳಲನ್ನು ಪಟ್ಟನೆ ಮುರಿದು ಪೊದೆಗೆ ಎಸೆದುಬಿಟ್ಟ ಮಧುಸೂಧನ
” ಅವಳೇ ಇಲ್ಲದ ಮೇಲೆ ಕೊಳಲಿಗೇನು ಕೆಲಸ. ಇನ್ನೆಂದೂ ನುಡಿಸೆನು ಒಂದೇ ಒಂದು ಸ್ವರವನೂ “
ಸಾತ್ಯಕಿಗೆ ದೃಢವಾಗಿ ಹೋಯ್ತು ರಾಧೆಯು ನಾದದಲ್ಲಿ ಲೀನವಾಗಿದ್ದು. ನಿರ್ಲಿಪ್ತನ್ನಾಗಿ ನಿಂತಿದ್ದ ಕೃಷ್ಣನ ಬಳಿ ಬಂದು ಗಳಗಳನೆ ಅಳುತಾ ನಿಂತ. ಅವನ ತಲೆಯನ್ನು ನೇವರಿಸಿ ವಿಷಾದದ ನಗೆ ನಕ್ಕ ಶ್ರೀ ಕೃಷ್ಣ ಪರಮಾತ್ಮ.
ಜಗತ್ತಿನ ಮೊಟ್ಟ ಮೊದಲ ಪ್ರೇಮಿಗಳ ಕಥೆ ಅದಾಗಿತ್ತು…..!
* ಗಂಧರ್ವ ರಾಯರಾವುತ









