ಪ್ರಶ್ನೆ: ಶಾಸನ-ತಾಮ್ರಪತ್ರ–ತಾಳೆಗರಿ ಹೀಗೆ ಇತಿಹಾಸ ವಿಷಯದಲ್ಲಿ ಜನಸಾಮಾನ್ಯರು ಆಸಕ್ತಿ ಹೊಂದುವ ನಿಟ್ಟಿನಲ್ಲಿ ಇತಿಹಾಸ ಅಕಾಡೆಮಿ ಅಧ್ಯಕ್ಷರಾಗಿ ತಾವು ಏನು ಯೋಜಿಸಿದ್ದೀರಿ?
ಡಾ. ದೇವರಕೊಂಡಾರೆಡ್ಡಿ: ಇತಿಹಾಸ ಅಕಾಡೆಮಿಯ ಗುರಿಯೇ ಅದು. ಕರ್ನಾಟಕ ಇತಿಹಾಸವನ್ನು ಜನಪ್ರಿಯಗೊಳಿಸತಕ್ಕಂಥದ್ದು. ಅಂದ್ರೆ ಅದನ್ನ ಅಧ್ಯಯನ ಮಾಡುವುದಕ್ಕಿಂತ ಮುಖ್ಯವಾಗಿ ಅದನ್ನ ಜನಪ್ರಿಯಗೊಳಿಸುವುದೇ ನಮ್ಮ ಮುಖ್ಯವಾದಂಥ ಗುರಿ. ಅದಕ್ಕಾಗಿ ನಾವು ಬಹಳಷ್ಟು ಜನ ಸದಸ್ಯರನ್ನ ವಿಶ್ವವಿದ್ಯಾಲಯದಿಂದ, ವಿಶ್ವವಿದ್ಯಾಲಯವನ್ನು ಬಿಟ್ಟು ಹೊರಗಡೆ ಆಸ್ಥೆ ಇರುವಂತಹ ಆಸಕ್ತರೆಲ್ಲರನ್ನೂ ಕೂಡ ಇತಿಹಾಸ ಅಕಾಡೆಮಿ ಸದಸ್ಯರನ್ನಾಗಿ ಮಾಡಿಕೊಂಡು ಅವರು ಇತಿಹಾಸ ಅಕಾಡೆಮಿಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳೋ ಹಾಗೆ ಮಾಡ್ತಿದೀವಿ ಮತ್ತು ಇತಿಹಾಸದ ಕಾರ್ಯಗಳನ್ನು ಬೇರೆ ಕಡೆ ಅವರು ಹರಡೋ ದಿಸೆಯಲ್ಲಿ ರಚನಾತ್ಮಕ ಕಾರ್ಯಕ್ರಮ ನಡೆಸ್ತಾ ಇದೀವಿ. ಹೀಗಾಗಿ ನಮ್ಮಲ್ಲಿ ಇಂಥವರು ಸದಸ್ಯರಾಗಬೇಕೆಂತೇನೂ ಇಲ್ಲ. ಯಾರು ಬೇಕಾದರೂ ಆಸಕ್ತರು ಇದರಲ್ಲಿ ಸದಸ್ಯರಾಗಬಹುದು.
ಪ್ರಶ್ನೆ: ಜನಸಾಮಾನ್ಯರಿಗೆ ಈ ಶಾಸನ, ತಾಳೆಗರಿ ಇವೆಲ್ಲದರ ಅಧ್ಯಯನದಿಂದ ಅಥವಾ ತಿಳಿದುಕೊಳ್ಳುವುದರಿಂದ ಏನು ಉಪಯೋಗ ? ಈಗ ಎಲ್ಲವನ್ನೂ ಏನು ಉಪಯೋಗ ಅನ್ನೋ ದೃಷ್ಟಿಯಿಂದ ನೋಡ್ತಾರಲ್ಲ ಹಾಗಾಗಿ ಈ ಪ್ರಶ್ನೆ.
ಡಾ. ದೇವರಕೊಂಡಾರೆಡ್ಡಿ: ಇದು ಒಂದು ಪರಂಪರೆಗೆ ಸಂಬಂಧ ಪಟ್ಟಿರುವಂಥದ್ದು. ಒಂದು ಪರಂಪರೆ ಉಳಿದರೆ ಮಾತ್ರ ನಮ್ಮ ಭಾರತೀಯ ನಾಗರೀಕತೆ ಉಳಿಯೋಕೆ ಸಾಧ್ಯ. ಪರಂಪರೆಯನ್ನು ನಾವು ಕಳಕೊಂಡುಬಿಟ್ಟಾಗ ನಮ್ಮದೇ ಅನ್ನುವಂಥದ್ದು ಏನೂ ಇರೋದಿಲ್ಲ. ಆಗ ನಾವು ಮತ್ತೆ ಗುಲಾಮರಾಗ್ತೀವೋ ಅಥವಾ ಇನ್ನೊಂದೋ ಆಗಿ ಬದುಕಬೇಕಾಗತ್ತೆ. ಹೀಗಾಗಿ ಪರಂಪರೆಯ ಒಂದು ಅರಿವನ್ನು ಜನಸಾಮಾನ್ಯರಲ್ಲೂ ಮೂಡಿಸಬೇಕು. ಆ ಕಾರಣಕ್ಕೆ ಯಾರುಯಾರು ಆಸಕ್ತರೋ ಅಂಥವರ ಮೂಲಕ ಇತಿಹಾಸದ ಅರಿವು ಮೂಡಿಸುವ ಕಾರ್ಯಗಳನ್ನ ನಾವು ಮಾಡ್ತಾ ಇದೀವಿ. ಈ ಅರಿವು ಮೂಡಿಸತಕ್ಕಂಥದ್ದು ಅಂದ್ರೆ ನಮ್ಮ ಪರಂಪರೆ ಏನು? ಅದರ ಹಿನ್ನೆಲೆ ಏನು?, ಅದನ್ನ ನಾವು ಯಾಕೆ ಉಳಿಸಬೇಕು? ಆ ತಾಳೆಗರಿ ಇರಬಹುದು, ಶಾಸನ ಇರಬಹುದು ಅದನ್ನ ನಾವು ಯಾಕೆ ರಕ್ಷಣೆ ಮಾಡಬೇಕು ಅನ್ನುವಂಥದ್ದು. ಈ ತರಹದ ಒಂದು ಯೋಜನೆಗಳನ್ನು ಹಾಕಿಕೊಂಡು ನಾವು ನಮ್ಮ ಐತಿಹಾಸಿಕ ಪರಂಪರೆಯನ್ನು ಉಳಿಸಿ ಅನ್ನುವಂತಹ ಅಭಿಯಾನ/ಕಾರ್ಯಕ್ರಮಗಳನ್ನು ಹಾಕಿಕೊಳ್ತೀವಿ. ವರ್ಷ ವರ್ಷನೂ ಹಮ್ಮಿಕೊಳ್ತೀವಿ. ಒಂದು ದೇವಾಲಯ ಇರಬಹುದು, ಶಾಸನ ಇರಬಹುದು, ತಾಳೆಗರಿ ಇರಬಹುದು ಅವುಗಳ ಬಗ್ಗೆ ಜನರಿಗೆ ಅವರಿದ್ದಲ್ಲಿಗೇ ಹೋಗಿ ಅದನ್ನ ಮನವರಿಕೆ ಮಾಡಿಕೊಡುವಂಥ ಕಾರ್ಯಕ್ರಮಗಳನ್ನ ನಾವು ಹಾಕ್ಕೊಳ್ತಾ ಇದೀವಿ.
ಪ್ರಶ್ನೆ : ಈ ಶಾಸನ, ತಾಳೆಗರಿ ಅಥವಾ ಯಾವುದೇ ಬರಹ ರೂಪದಲ್ಲಿ ಇರುವ ಹಳೇ ವಿಷಯ ಯಾವುದೇ ಇದ್ದರೂ ಕೂಡ ಅದು ಜನಸಾಮಾನ್ಯರದ್ದು ಆಗಿರೋದಿಲ್ಲ. ರಾಜಮಹಾರಾಜರದ್ದೋ, ಕವಿಗಳದ್ದೋ, ಇನ್ಯಾರದ್ದೋ ಆಗಿರತ್ತೆ ಅನ್ನೋ ಒಂದು ಮಾತಿದೆಯಲ್ಲ. ಜನಸಾಮಾನ್ಯ ಹಳ್ಳಿಗಾಡಿನ ಒಬ್ಬ ರೈತನಾಗಲೀ, ಅನಕ್ಷರಸ್ಥನಾಗಲೀ ಅವನಿಗೆ ಹೇಗೆ ಅದು ಉಪಯೋಗ ಆಗತ್ತೆ ?
ಡಾ. ದೇವರಕೊಂಡಾರೆಡ್ಡಿ : ಉಪಯೋಗ ಇದೆ. ಅದು ಪರಂಪರೆಯ ಕೊಂಡಿ. ಹಳೆಯ ಪರಂಪರೆಯನ್ನು ಅನುಸರಿಸ್ತ ಪ್ರತಿಯೊಬ್ಬರೂ ಬದುಕ್ತಿರೋದು. ಆದ್ರೆ ಈಗೇನಾಗಿದೆ ಈಗ ಆ ಪರಂಪರೆಗೆ ಒಂದು ದೊಡ್ಡ ಹೊಡೆತ ಬಂದಿದೆ. ಅದು ಯಾಕೆ ಹೊಡೆತ ಬಂದಿದೆ ಅಂದ್ರೆ ಕವಿ ಗೋಪಾಲಕೃಷ್ಣ ಅಡಿಗರು ಹೇಳೋ ಹಾಗೆ “ಹೊಟ್ಟೆಯೇ ಕೇಂದ್ರವಾಗಿದೆ ನರನ ಜೀವಿತಕೆ’’. ಹೊಟ್ಟೆಯನ್ನ ಯಾವಾಗ ನಾವು ಮುಂದೆ ಇಟ್ಕೊಂಡು ಹೋಗ್ತೀವೋ ಆವತ್ತು ನಮ್ಮ ಪರಂಪರೆಗೆ ದೊಡ್ಡ ಏಟು. ಬಹುಶಃ ಮೆಕಾಲೆಯ ಕನಸು ಈ ತರಹದಲ್ಲಿ ಅದು ನಮ್ಮನ್ನು ಮತ್ತೆ ಇನ್ನೊಂದು ಅನಾಹುತಕ್ಕೆ ತಳ್ಳತಕ್ಕಂಥ ಮತ್ತೆ ಇನ್ನೊಂದು ದಾಸ್ಯತ್ವಕ್ಕೆ ತಳ್ಳತಕ್ಕಂಥ ಒಂದು ಕ್ರಮವಾಗಿ ರೂಪುಗೊಳ್ತಾ ಇದೆ . ಅದು 20 ನೇ ಶತಮಾನದವರೆಗೂ ನಮ್ಮವರಿಂದ ಏನೂ ಘಾಸಿ ಆಗದೇ ಇದ್ದಿತ್ತು. ಹೊರಗಿನವರ ಬಾಹ್ಯ ಆಕ್ರಮಣದಿಂದ ಉಳಿದಿದ್ದು ಅದರ ಪಾಡಿಗೆ ಅದು ಇತ್ತು. ಸ್ವಾತಂತ್ರ್ಯ ಸಿಕ್ಕ ತಕ್ಷಣವೇ ನಾವೆಲ್ಲ ನಮ್ಮ ಇಡೀ ಪರಂಪರೆಯನ್ನ ಹಾಳುಮಾಡತಕ್ಕಂಥದ್ದು ಅಂದ್ರೆ ನಮ್ಮ ಪರಂಪರೆಯ ವಸ್ತುಗಳನ್ನ ಕಿತ್ತು ಬಿಸಾಕೋದು, ಅವುಗಳನ್ನ ಬೇರೆಯವರಿಗೆ ಮಾರಿಕೊಳ್ಳತಕ್ಕಂಥದ್ದು ಇಂಥದ್ದು ಶುರು ಮಾಡಿದ್ದೇವೆ ಅಥವಾ ಈ ಮಾರಾಟದ ವಸ್ತುಗಳನ್ನಾಗಿ ನಾವು ಮಾರ್ಪಡಿಸಿಬಿಟ್ಟಿದ್ದೇವೆ.. ಅದರಿಂದ ಬಹಳ ದೊಡ್ಡ ಹೊಡೆತ ನಮ್ಮ ಪರಂಪರೆಗೆ.
ಪ್ರಶ್ನೆ: ಮಾರಾಟದ ವಸ್ತು ಅನ್ನೋ ದೃಷ್ಟಿಯಿಂದನೇ ನೋಡ್ತಾ ಇದೀವಿ ಅನ್ನೋದನ್ನ ಇನ್ನೂ ಸ್ವಲ್ಪ ವಿವರಿಸಿ..
ಡಾ. ದೇವರಕೊಂಡಾರೆಡ್ಡಿ : ಅಂದ್ರೆ ಹಣದ ಹಿನ್ನೆಲೆಯಲ್ಲಿ ಅದನ್ನ ನೋಡ್ತಾ ಇದೀವಿ. ಹಣದ ರೂಪದಲ್ಲೆ ಅದನ್ನ ನಾವು ಎಣಿಸೋಕೆ ನೋಡ್ತೀವಿ. ಒಂದು ವಿಗ್ರಹ ಇದ್ರೂ ಇವತ್ತು ವಿಗ್ರಹಕ್ಕೆ ಎಷ್ಟು ಕೋಟಿ ಬರತ್ತೆ ಅಂತ ನೋಡ್ತೀವಿ ಹೊರತು ಅದರ ಒಂದು ಇತಿಹಾಸ ಏನು? ಅದನ್ನ ಅಲ್ಲಿ ಯಾರು ಸ್ಥಾಪನೆ ಮಾಡಿದ್ರು ಅದನ್ನ ನಾವು ವಿಚಾರ ಮಾಡೋದಿಲ್ಲ. ಇವತ್ತಿನ ಒಂದು ಜನರೇಶನ್ ಇರಬಹುದು ಅಥವಾ ಸ್ವಾತಂತ್ರ ಸಿಕ್ಕ ನಂತರ ಬಂದಂಥ ಈ ರಾಜಕಾರಣಿಗಳು ಏನಿದಾರೆ ಅವರ ಸ್ವಾರ್ಥ ಇರಬಹುದು ಇವರೆಲ್ಲರೂ ಕೂಡ ಈ ಪರಂಪರೆಯ ವಸ್ತುವನ್ನು ಹಣದಲ್ಲೆ ಲೆಕ್ಕ ಹಾಕ್ಕೊಂಡು ಹೋಗ್ತಾರೆ. ಇದು ಕೂಡ ನಮ್ಮ ಪರಂಪರೆಯನ್ನು ದುರಂತಕ್ಕೆ ತಳ್ಳೋದಕ್ಕೆ ಮೂಲವಾಯ್ತು.
ಪ್ರಶ್ನೆ: ಈ ಶಾಸನ ಮತ್ತು ಕನ್ನಡ, ಅಥವಾ ಇತಿಹಾಸ ಮತ್ತು ಕನ್ನಡ ಅವೆರಡನ್ನು ಹೇಗೆ ನೀವು ಸಮನ್ವಯ ಮಾಡ್ತೀರಾ?
ಡಾ. ದೇವರಕೊಂಡಾರೆಡ್ಡಿ : ನಾನು ಕನ್ನಡದ ವಿದ್ಯಾರ್ಥಿ. ಮೂಲತಃ ನನ್ನದು ಕನ್ನಡ ಎಂ. ಎ. ಆದರೆ ಸಂಸ್ಕೃತಿ ವಿಷಯ ಬಂದಾಗ ಇತಿಹಾಸ ಬೇರೆ ಆಗೋದಿಲ್ಲ, ಭಾಷೆ ಬೇರೆ ಆಗೋದಿಲ್ಲ. ಎರಡನ್ನೂ ಸಮನಾಗಿ ತೆಗೆದುಕೊಂಡು ಹೋದಾಗಲೇನೇ ಅದಕ್ಕೊಂದು ಬೆಲೆ ಬರತ್ತೆ. ಇತಿಹಾಸವನ್ನು ಇತಿಹಾಸ ಅಂತ ಮಾತ್ರ ನೋಡತಕ್ಕಂಥದ್ದಲ್ಲ. ಮುಖ್ಯವಾಗಿ ಈ ಸ್ವಾತಂತ್ರ ಬಂದ ಮೇಲಿನ ಇತಿಹಾಸ ಬೇರೆ ಥರದ್ದೇ ಆಗಿದೆ. ಭಾರತದ ವಿಶ್ವವಿದ್ಯಾಲಯಗಳಲ್ಲಿ ಬೋಧನೆ ಮಾಡತಕ್ಕಂಥ ಇತಿಹಾಸ ಏನಿದೆ ಅದು ಸಂಪೂರ್ಣವಾಗಿ ಕೆಂಬಾವುಟದ ಅಡಿಯಲ್ಲಿ ರಚನೆಯಾಗಿರುವಂಥದ್ದು. ಅದು ಎಲ್ಲರಿಗೂ ಸ್ಪಷ್ಟವಾಗಿ ತಿಳಿದಿದೆ. ಅದನ್ನು ಏನು ನಾನೊಬ್ಬನೇ ಹೇಳುತ್ತಿರೋದಲ್ಲ. ಯಾರನ್ನು ಕೇಳಿದ್ರೂ ಅದು ತೆರೆದಿಟ್ಟಂಥ ಒಂದು ಸತ್ಯ ಇದು. ಹೀಗಾಗಿ ಈ ಒಂದು ದಿಕ್ಕಿನ ಯೋಚನೆಗಳಿಂದ ರಚಿತವಾಗಿರತಕ್ಕಂಥ ಚರಿತ್ರೆಯಿಂದ ನಮ್ಮ ಜನರನ್ನ, ನಮ್ಮ ಪರಂಪರೆಯನ್ನ ನಾವು ಸುಧಾರಿಸೋಕೆ ಸಾಧ್ಯವಾಗೋದಿಲ್ಲ. ಹೀಗಾಗಿ ಕನ್ನಡ ಭಾಷೆ ಮತ್ತು ಇತಿಹಾಸ ಅಥವಾ ಯಾವುದೇ ಭಾಷೆ ಇರಬಹುದು ಸಂಸ್ಕೃತ ಇರಬಹುದು, ತಮಿಳು ಇರಬಹುದು.. ಉದಾಹರಣೆಗೆ ತಮಿಳು ಭಾಷೆ ಮತ್ತು ಸಂಸ್ಕೃತಿ ಬಂದಾಗ ಸಂಸ್ಕೃತಿಯ ಭಾಗವಾಗಿ ಇತಿಹಾಸ ಬರತ್ತೆ. ಈ ಥರದ ಒಂದು ವಿದ್ಯಾಭ್ಯಾಸವನ್ನು ಅಥವಾ ವಿದ್ಯೆಯನ್ನು ಇವತ್ತು ವಿದ್ಯಾರ್ಥಿಗಳಿಗೆ ಅಥವಾ ಆಸಕ್ತರಿಗೆ ನಾವು ಕೊಡಬೇಕಾಗಿದೆ. ಇದರ ಕುರಿತು ನಾವು ಗಂಭೀರವಾಗಿ ಯೋಚನೆ ಮಾಡಬೇಕಾಗಿದೆ.









