ದೃಶ್ಯಕಾವ್ಯ
Advertisement
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
  • ಪುಸ್ತಕಗಳು
  • Cart
No Result
View All Result
 ದೃಶ್ಯಕಾವ್ಯ
No Result
View All Result
Home ಕಥೆಕಟ್ಟೆ

ಸ್ವಾಹಾ

ಆಯಿಯ ಕಥೆ

ಸ್ವಾಹಾ

ನಾನೆಂದರೆ, ನೀನೆಂದರೆ, ಅವನೆಂದರೆ, ಅವಳೆಂದರೆ ಎಂಬಿತ್ಯಾದಿ ಕಂತೆಯೊಂದಿಗೆ ಈ ಕತೆ ಆರಂಭವಾಗುತ್ತದೆ. ಹಾಗೆಯೇ ಆರಂಭ ಮಾಡಬೇಕೆಂಬ ಹಠವೇನಿಲ್ಲ, ಅದು ಇರುವುದೇ ಹಾಗೆ. ನಾನೂ ಸೇರಿದಂತೆ ನೀನು, ಅವಳು, ಅವನು, ಅವರು ಎಲ್ಲರೂ ಕುಕ್ಕರಗಾಲಿನಲ್ಲಿ ಹೊಡತಲು ಎಂಬ ಅಗ್ಗಷ್ಟಿಕೆ ಸುತ್ತಲೂ ಕುಂತು, ಬೂದಿಯನ್ನು ಕೆಬರುತ್ತ, ಉರುಟುರುಟು ಕೆಂಡದುಂಡೆಗೆ ಊಫ್ ಎಂದು ಗಾಳಿ ಹಾಕುತ್ತ ಆಕಾಶದ ವಿಶಾಲ ಬೂದಿಯಲ್ಲಿ ಮಿನುಗುವ ನಕ್ಷತ್ರಗಳನ್ನಾಗಿ ಮಾಡಿ, ಹಲಸಿನ ಬೀಜವನ್ನು ಬೂದಿಯೊಳಗೆ ತೂರಿಸಿ ‘ಡಬ್’ ಎಮದು ಹೊಟ್ಟುವ ಕ್ಷಣಕ್ಕಾಗಿ ಕಾಯುತ್ತಿರುವಾಗಲೇ ಕತೆ ಬಿರಿಯುತ್ತದೆ. ಒಂದೆರಡು ಕಟ್ಟಿಗೆ, ಅಡಿಕೆ ಹಾಳೆ ತಂದೊಡ್ಡಿ ಧಗಧಗ ಉರಿ ಮಾಡಿದಾಗ ಹೊಡತಲ ಮೇಲಿರುವ- ಮಳೆಯಿಂದ ಒದ್ದೆಯಾಗಿರುವ ಕಂಬಳಿ ಒಣಗಿ ಹೊಗೆ ಕಂಪು ಆದಾಗ, ಆ ಕಂಬಳಿಯನ್ನು ಮೂಸಿ ಉಸಿರೆಳೆದುಕೊಂಡರೆ ಮೂಡುವ ಉಲ್ಲಾಸ ಕತೆ ಹೇಳಲು ಇನ್ನೂ ಉತ್ಸಾಹ ನೀಡುತ್ತದೆ.

ನಾನು ಈಗ ಯಾವ ಕಥೆ ಹೇಳಲಿ? ಎಷ್ಟೆಷ್ಟೆಲ್ಲ ಕಥೆಗಳಿವೆ ನನ್ನ ಜೋಳಿಗೆಯಲ್ಲಿ ಗೊತ್ತೆ? ಆಯಿಯ ಕಥೆಯೇ ಅಡ್ಡಿಯಿಲ್ಲ. ಯಾಕೆಂದರೆ ಆ ಕಥೆ ಎಲ್ಲರ ಕಥೆಯಂತಲ್ಲ ಅಥವ ಎಲ್ಲರ ಮನೆಯ ಆಯಿಯ ಕತೆಯೂ ಹೌದು. ಈಕೆ ಯಾರ ಆಯಿ ಅಂತ ಕೇಳಬೇಡಿ. ಪ್ರತಿಯೊಬ್ಬರಿಗೂ ಆಯಿ ಇರುತ್ತಾಳೆ. ಅವರ ಆಯಿಯರಲ್ಲಿ ಈ ಆಯಿ ಇದ್ದೇ ಇರುತ್ತಾಳೆ.

ಈ ಆಯಿಯ ಶರೀರ ಸಣ್ಣದು. ಮನಸ್ಸು ಗಟ್ಟಿ. ಅವಳು ಏಳನೇ ವರ್ಷದಲ್ಲೇ ದೇವಿಮನೆ ಘಟ್ಟದ ದಟ್ಟ ಕಾಡಿನಲ್ಲಿ ಅವಳಮ್ಮನೊಂದಿಗೆ ಹತ್ತಾರು ಮೈಲಿ ನಡೆದಿದ್ದಳಂತೆ. ಆಗ ಧೋ ಎಂದು ಮಳೆ ಹುಯ್ಯುತ್ತಿತ್ತಂತೆ. ದೇವಿಮನೆ ಕಾಡಿನ ತಿರುವು ಮುರುವು ಕಾಲುದಾರಿಯಲ್ಲಿ ಎದುರಿಗೆ ಹುಲಿ ಬಂದರೆ ಏನಪ್ಪ ಮಾಡುವುದು ದೇವಾ ಎನ್ನುತ್ತ ಅಳಾಣವೇ ಬಂದಾಗ ಆಯಿಯ ಆಯಿ, ‘ಹುಲಿಗೂ ಮಳೆಯಿಂದ ಮೈ ಒದ್ದೆ ಆದರೆ ಚಳಿಚಳಿಯಾಗಿ ಜ್ವರ ಬಂದುಬಿಡುತ್ತದೆ. ಹೀಗಾಗಿ ಮಳೆ ನಿಲ್ಲುವವರೆಗೂ ಹುಲಿ ಬರುವುದಿಲ್ಲ. ಅಷ್ಟರೊಳಗೆ ನಾವು ದೇವಿಮನೆ ದೇವಸ್ಥಾನಕ್ಕಾದರೂ ಹೋಗಿ ತಲುಪಿದರೆ ರಾತ್ರಿ ಅಲ್ಲೇ ಉಳಿದು ನಾಳೆ ಬೆಳಿಗ್ಗೆ ಹೋಗಬಹುದು; ಈಗ ಮಳೆ ನಿಲ್ಲುವ ಲಕ್ಷಣವೂ ಇಲ್ಲ, ಹುಲಿ ಬರುವ ಲಕ್ಷಣವೂ ಇಲ್ಲ’ ಎಂದು ಸಮಾಧಾನ ಹೇಳಿದಾಗ, ಕಂಬಳಿ ಕೊಪ್ಪೆಯಲ್ಲೇ ಬೆವರುತ್ತ, ಸೋತ ಎಳೆಯ ಕಾಲುಗಳನ್ನು ಎಳೆದೆಳೆದು ಹೆಜ್ಜೆ ಹಾಕುತ್ತ ಮಳೆ ನಿಲ್ಲದಿರಲಪ್ಪ ದೇವರೇ ಎಮದು ಬೇಡಿಕೊಳ್ಳುತ್ತ ತನ್ನ ಆಯಿಯ ವೇಗಕ್ಕೆ ಸರಿಗಟ್ಟಲಾಗದೇ ಓಡುತ್ತೋಡುತ್ತ ಹೋಗುತ್ತಿದ್ದಳಂತೆ. ಆಯಿಯ ಆಯಿಯೋ ಅತಿ ಎನ್ನಿಸುವಷ್ಟು ಸ್ವಾಭಿಮಾನಿ. ದೇವಿಮನೆ ದೇವಸ್ಥಾನ ತಲುಪುವ ಹೊತ್ತಿಗೆ ಕಾರ್ಗತ್ತಲು. ಸೀರೆಯೆಲ್ಲ ಒದ್ದೆ ಒದ್ದೆ. ದೇವಸ್ಥಾನ ಭಟ್ಟರ ಹೆಂಡತಿ ಪರಿಚಯವೇ. ಆಕೆ ಕೊಟ್ಟ ಒಣಗಿದ ಸೀರೆ ಉಟ್ಟು ತನ್ನ ಒದ್ದೆ ಸೀರೆಯನ್ನು ಹಿಂಡಿ ಗಳಕ್ಕೆ ಹರವಿ ಹಾಕಿ ಮೂಲೆಯಲ್ಲಿ ಕಂಬಳಿ ಮೇಲೆ ಮುದುಡಿ ಮಲಗಿಬಿಟ್ಟರೆ ಮುಗಿಯಿತು. ‘ಊಟ ಮಾಡೇ’ ಎಂದರೆ ‘ಬೇಡ, ಮಗಳಿಗೆ ಒಂದು ತುತ್ತು ಹಾಕು’ ಎಂದು ಹೇಳಿ ಹಸಿದ ಹೊಟ್ಟೆಯಲ್ಲೇ ಮಲಗುವಂಥವಳು. ಭಟ್ಟರ ಹೆಂಡತಿಗೂ ಈಕೆಯ ಸೊಣಕುತನ ಗೊತ್ತಿದ್ದಿದ್ದೇ. ಇಂತಹ ಆಯಿಯ ಆಯಿ ಎಳೇ ಮಗಳನ್ನು ಕಟ್ಟಿಕೊಂಡು ಈ ಘೋರಾನುಘೋರ ಕತ್ತಲೆಯ ಕಾಡಿನಲ್ಲಿ ಒಬ್ಬೊಂಟಿಯಾಗಿ ಬಸ್ತಿಮಕ್ಕಿಯಿಂದ ಬಮದಿದ್ದೇಕೆ ಎಂಬುದೇ ಭಟ್ಟರಿಗೆ ಯಕ್ಷಪ್ರಶ್ನೆಯಾಗಿರುತ್ತಿತ್ತಂತೆ. ಇದೆಲ್ಲ ಹಳೇ ಕಥೆ, 1943ನೇ ಇಸ್ವಿಯದು.

ಹೆಣ್ಣಾಗಿ ಹುಟ್ಟಿದರೆ ಆಯಿಯಂತಿರಬೇಕು ಎಂದು ನಾ ಪ್ರತೀ ದೇವರಲ್ಲೂ ಬೇಡಿಕೊಳ್ಳುತ್ತೇನೆ. ಜಗತ್ತಿನ ಪ್ರತಿ ಹೆಣ್ಣೂ ಆಯಿಯಾದರೆ ಜಗಳ, ಕ್ಷÄಲ್ಲಕ ಮನಸ್ತಾಪಗಳೇ ಇಲ್ಲದೆ ಎಲ್ಲೆಡೆ ಪ್ರೀತಿಯ ಮಜ್ಜಿಗೆ ತಂಬಳಿಯೇ ತುಂಬಿರುತ್ತದೆ. ಮಜ್ಜಿಗೆ ತಂಬಳಿಯ ಬಗ್ಗೆ ಕೇಳಬೇಕೆಂದರೆ ಮತ್ತಿಘಟ್ಟಕ್ಕೆ ಮದುವೆ ಮಾಡಿಕೊಟ್ಟ ಗಂಗು ಹುಡುಗಿಯನ್ನಾಗಲೀ ದೇವನಹಳ್ಳಿಗೆ ಕೊಟ್ಟ ಯಲ್ಲಿಯನ್ನಾಗಲೀ ಅಥವ ಮಳ್ಳಿ ಮಳ್ಳಿ ಎಂದು ಎಲ್ಲರಿಂದ ಹೀಗಳೆತಕ್ಕೊಳಗಾಗಿ, ಯಚಡಿ ಭಟ್ಟರ ಮನೆಗೆ ಒರಳು ಕಲ್ಲು ಕೆಡೆಯಲು ಬಂದ ಕಲ್ಲುಒಡ್ಡನ ತೆವಲಿಗೆ ಬಸಿರಾಗಿ ಕಡೆಗೆ ಹೆಗಡೆಕಟ್ಟೆಯ ದಿಕ್ಕಿಲ್ಲದ ಸಾಬನಿಗೆ ದಿಕ್ಕಾಗಿ ಆತನ ಹೆಂಡತಿಯಾದ ಚಂದ್ರಕಲಾ ಎಂಬ ಹೈಗರ ಹೆಣ್ಣನ್ನಾಗಲೀ ಕೇಳಿ; ಆಯಿ, ಬಿಸಿಲಿನಲ್ಲಿ ಬಾಯಾರಿ ಬಂದವರನ್ನು ಬಾಯ್ತುಂಬ ಉಪಚರಿಸುತ್ತ ಮಾಡಿಕೊಡುತ್ತಿದ್ದ ಮಜ್ಜಿಗೆ ತಂಬಳಿ ‘ನೀರಾದರೂ ಮಜ್ಜಿಗೆ ಮಳ್ಳಿಯಾದರೂ ತಾಯಿ’ ಎಂಬ ಗಾದೆಯನ್ನು ನಿಜ ಮಾಡುತ್ತಿದ್ದಳು ಎಂದು ಎದುರಿಗೆ ಸಿಕ್ಕ ಅವರೆಲ್ಲ ಯಾವಾಗ ಸಿಕ್ಕಾಗಲೂ ಹೇಳುತ್ತಿರುತ್ತಾರೆ. ಚಂದ್ರಕಲಾ ಮಳ್ಳು ಹಿಡಿದು ‘ಅನ್ನ ಸಾರು ಕೊಡಿ ಅನ್ನ ಸಾರು ಕೊಡಿ’ ಎಂದು ಬೇಡುತ್ತ ಮನೆಯಿಂದ ಮನೆಗೆ ಅಲೆಯುತ್ತಿದ್ದಾಗ ‘ನೀನ್ಯಾಕೆ ಹಿಂಗೆ ದಿಕ್ಕಿಲ್ಲದೆ ಅಲೀತೆ ಚಂದ್ರಿ? ನಮ್ಮ ಮನೆಯಲ್ಲೇ ಕೈಲಾದ ಕೆಲಸ ಮಾಡಿಕೊಂಡು ಇದ್ದುಬಿಡು’ ಎಂದು ಆಯಿ ಹೇಳಿದಾಗ ಆ ಹುಚ್ಚಿಗೂ ತಾಯಿ ಕಕ್ಕುಲಾತಿ ಏನು ಎಂಬುದು ಅರಿವಾಗಿತ್ತಂತೆ.

ಹದಿನೈದನೇ ವಯಸ್ಸಿಗೇ ಅಪ್ಪಯ್ಯನ ಕೈ ಹಿಡಿದ ಆಯಿ ಆತನ ಜೊತೆ, ಆತನ ನಿರ್ಲಿಪ್ತತೆಯ ಜೊತೆ, ಆತ ಸೇದುತ್ತಿದ್ದ ಬೀಡಿ ವಾಸನೆ ಜೊತೆ, ಆತ ಆಡುತ್ತಿದ್ದ ಇಸ್ಪೀಟಾಟದ ಜೊತೆ, ಮಧ್ಯರಾತ್ರಿ ಬಂದು ಬಡಿಯುತ್ತಿದ್ದ ಬಾಗಿಲ ಸದ್ದಿನ ಜೊತೆ, ಬೀಡಿ ಸೇದಿ ಸೇದಿ ಹಿಡಿಸಿಕೊಂಡ ಕೆಮ್ಮು, ಉಬ್ಬಸದ ಜೊತೆ ಅದು ಹೇಗೆ ಜೀವಿಸಿದ್ದಳೋ ದೇವರೇ ಬಲ್ಲ! ಅಂಥ ಆ ಅಪ್ಪಯ್ಯನೇ ಆಯಿಗೆ ಸರ್ವಸ್ವವಾಗಿ, ಅಂಥ ಆ ಅಪ್ಪಯ್ಯನಿಗೆ ಆಯಿಯೇ ಸರ್ವಸ್ವ ಎಂಬುದು ಗೊತ್ತಾಗುತ್ತಿದ್ದುದು ಅವಳು ಕೆಲವೊಮ್ಮೆ ದಮ್ಮು ಹೆಚ್ಚಾಗಿ ಹುಷಾರಿಲ್ಲದೇ ಹಾಸಿಗೆ ಹಿಡಿಯುತ್ತಿದ್ದಾಗ. ಅಪ್ಪಯ್ಯ ನಿರ್ಲಿಪ್ತ ಎನ್ನುವುದು ಬಿಟ್ಟರೆ ಆಯಿಯನ್ನು ಪ್ರೀತಿಸುತ್ತಿರಲಿಲ್ಲ ಎಂದು ಹೇಳುವುದಕ್ಕೆ ಕಾರಣವೇ ಇರುತ್ತಿರಲಿಲ್ಲ. ಆಯಿ ಅಪ್ಪಯ್ಯನನ್ನು ಅದೆಷ್ಟು ಲವ್ ಮಾಡುತ್ತಿದ್ದಳು ಎಂದು ಅರ್ಥವಾಗಿದ್ದು ನಾನು ಕಾಲೇಜಿಗೆ ಹೋಗತೊಡಗಿದ ಮೇಲೆ.

ಇಷ್ಟಕ್ಕು ಈ ಆಯಿಯ ಕಥೆಯಲ್ಲಿ ನಾನು ಯಾಕೆ ಬಂದೆ ಎಂಬುದು ನಿಮ್ಮ ಗೊಣಗಾಟಕ್ಕೆ ಕಾರಣ ಎಂಬುದು ನನಗೆ ಗೊತ್ತು. ಅದನ್ನು ಹಾಗೆಯೇ ಮುಚ್ಚಿಟ್ಟಿರುತ್ತೇನೆ. ಮತ್ತೂ ಹೇಳಬೇಕೆಂದರೆ ಈ ಕಥೆಯಲ್ಲಿ ನೀವೂ ಬರುತ್ತೀರಿ. ನೀವೂ ಅಂದರೆ ನೀನು, ಅವನು, ಅವಳು, ಅವರು ಎಲ್ಲ. ಅದು ಹೇಗೆ ಅಂತ ಕಥೆಯ ಕೊನೆಯಲ್ಲಿ ಹೇಳುತ್ತೇನೆ. ಈಗ ನನ್ನ ಹಕ್ಕಿ ಬಿಟ್ಟೆ ಬಿಟ್ಟೆ ನಿಮ್ಮ ಹಕ್ಕಿ ಮುಚ್ಚಿಕೊಳ್ಳಿ, ಆಯ್ತಾ?

ಆಯಿ ಮತ್ತು ಹಿರೀ ಮಗ ಅಣ್ಣಯ್ಯ ಯಾವತ್ತಾದರೊಮ್ಮೆ ಜಗಳ ಕಾಯುವುದಿತ್ತು. ವಿಷಯ ಇಂಥದ್ದೇ ಬೇಕು ಅಂತೇನಿಲ್ಲ. ಜಗಳ ಕಾದರೂ ಮತ್ತೆ ಸಂಜೆಗೆ ಬೆಲ್ಲದ ಮಜ್ಜಿಗೆ ಕುಡಿಯಲು ಅವನಿಗೆ ಆಯಿಯ ಕಂಪನಿಯೇ ಬೇಕು. ಆಗೆಲ್ಲ ಯುವಕರು, ಅಂದರೆ ಅಣ್ಣಯ್ಯನ ವಾರಿಗೆಯವರು ತಂಬಾಕು ಕವಳ ಹಾಕದಿದ್ದರೆ, ಇಸ್ಪೀಟ್ ಆಡದಿದ್ದರೆ ಗಂಡಸೇ ಅಲ್ಲ, ಪ್ರಯೋಜನಕ್ಕೆ ಬಾರದವ ಎಂಬ ಭಾವನೆಗಳನ್ನು ತಲೆತುಂಬ ತುಂಬಿಕೊAಡು ಅದರಂತೆ ಆಚರಿಸುತ್ತಿದ್ದ ಕಾಲ. ಮಗನೂ ಅಪ್ಪಯ್ಯನ ಹಾದಿ ಹಿಡಿಯುತ್ತಿದ್ದಾನೆಂಬ ಆತಂಕ ಆಯಿಗೆ. ಆತನನ್ನು ಆ ದಾರಿಯಿಂದ ತಪ್ಪಿಸಬೇಕೆನ್ನುವುದು ಆಯಿಯ ಹಠ. ಈ ವಿಷಯದಲ್ಲಿ ಕಡೆಗೂ ಆಯಿಗೇ ಸೋಲಾಯಿತೆನ್ನುವುದು ಬೇರೆ ವಿಷಯ.

ಅಪ್ಪಯ್ಯ ಸತ್ತಿದ್ದು ಕಿಡ್ನಿ ವೈಫಲ್ಯದಿಂದ. ಆತ ಸತ್ತಾಗ ಮಟಮಟ ಮಧ್ಯಾಹ್ನ. ಕಿರೀ ಮಗನ ಶಾಲೆಗೆ ಬೇಸಿಗೆ ರಜೆ. ಹಿರೀ ಸೊಸೆ ತವರಿಗೆ ಹೋಗಿದ್ದಳು. ಕಿರೀ ಮಗ ಊಟ ಮಾಡುತ್ತಿದ್ದಾಗ, ಮಟಮಟ ಮಧ್ಯಾಹ್ನ ಹೊಟ್ಟೆಗೆ ಏನಾದರೂ ಗಂಜಿ ಕೊಡಲೇ ಎಂದು ಕೇಳಲು ಹೋದ ಆಯಿಗೆ ಕಂಡಿದ್ದು ಮಂಚದ ಕೆಳಗೆ, ನೆಲಕ್ಕೆ ಅಡ್ಡಡ್ಡವಾಗಿ ಉಸಿರಾಡದೇ ಬಿದ್ದಿದ್ದ ಅಪ್ಪಯ್ಯ. ತಕ್ಷಣ ಹೇಳಿದರೆ ಕಿರಿ ಮಗನ ಊಟ ಅರ್ಧಕ್ಕೇ ನಿಂತುಹೋಗಬಹುದೆAಬ ಆತಂಕದಿAದ, ಊಟ ಮುಗಿಯುವವರೆಗೂ ಹೇಳದೇ ತಾನೇ ಬಡಿಸಿದ್ದಳು. ಕೊನೆಗೂ ಅವಳು ಜಾಸ್ತಿ ಅಳಲಿಲ್ಲ. ‘ನನ್ನೊಬ್ಬಳನ್ನೇ ಬಿಟ್ಟು ಹೊರಟ್ರಾ?’ ಎಂಬುದೊಂದೇ ಪ್ರಶ್ನೆ ಅವಳು ಕೇಳಿದ್ದು. ಅವಳ ದುಃಖ ಅಷ್ಟೇ ಎಂದು ಯಾರಾದರೂ ಅಳೆದರೆ ಅದು ಮೂರ್ಖತನವಾಗುತ್ತಿತ್ತು.

ಈಗ ಮತ್ತೆ ಕತೆಯ ಮಧ್ಯಭಾಗಕ್ಕೆ ಬರೋಣ.
ಹೊರಗಡೆ ಟಪಟಪನೆ ಸುರುವಾದ ಮಳೆಯ ಸದ್ದು ಟಪರರ್ರ‍್ರ ಅಂತ ಜೋರಾಗಿ ಧೋ ಎಂದು ಹುಯ್ಯತೊಡಗಿದಾಗ ಮುಸ್ಸಂಜೆಗೇ ಕತ್ತಲು. ಹಕ್ಕಿಗಳು ಗೂಡು ಸೇರುವ ದಾರಿ ಕಾಣದೇ ಕಂಗಾಲಾಗಿ ಮರದ ರೆಂಬೆಯ, ಎಲೆಯ ಗೊಂಚಲ ಕೆಳಗೆ ಮೈ ಮುದುರಿಕೊಳ್ಳುತ್ತವೆ. ದಿಕ್ಕು ತಪ್ಪಿದ ಕಾಗೆಗಳು ದಿಕ್ಕಾಪಾಲಾಗಿ ಹಾರತೊಡಗುಉತ್ತವೆ. ಬೆಟ್ಟದಿಂದ ಮೆಂದು ಬರುವ ದನ ಬಾಲ ಎತ್ತಿಕೊಂಡು ಕೊಟ್ಟೆಗೆಗೆ ಓಡುತ್ತವೆ. ಎಮ್ಮೆಗಳ ಹಿಂಡು ಮಳೆಗೆ ಕ್ಯಾರೇ ಅನ್ನದೇ ವಿಶ್ವಸುಂದರಿಯರ ನಡಿಗೆಯಲ್ಲಿ ಮೆಲ್ಲಗೆ ತಲೆ ಆಡಿಸುತ್ತ ಬರುತ್ತಿರುತ್ತವೆ. ಭರಣಿ ನಕ್ಷತ್ರದಿಂದ ವಿಶಾಖಾ ನಕ್ಷತ್ರದವರೆಗೂ, ಅಳಿಯನ ಅಮಾವಾಸ್ಯೆಯಿಂದ ನವರಾತ್ರಿಯ ಮುನ್ನಾದಿನದವರೆಗು ಹುಯ್ಯುವ ಮಳೆಗಾಲದಲ್ಲಿ, ಅದು ಜರ‍್ರೆಂದು ಹುಯ್ಯುತ್ತಿದ್ದರೂ ಆಯಿ ಇರುತ್ತಿದ್ದುದು ತೋಟದಲ್ಲಿ ಕಳೆ ಕೀಳುತ್ತಲೋ, ದನಕ್ಕೆಂದು ಹಸಿ ಹುಲ್ಲು ಕುಯ್ಯುತ್ತಲೋ. ಆ ಹುಲ್ಲು, ಗಿಡಗಂಟಿಗಳ ನಡುವೆ ಕುಳ್ಳು ದೇಹದ ಆಯಿ ಕಾಣುವುದೇ ಇಲ್ಲ. ಹಿರೀ ಮಗಳು ‘ಸಂಜೆಯಾಗಿದ್ದೂ ಈ ಆಯಿಗೆ ಗೊತ್ತಾಗುವುದಿಲ್ಲವೇನೋ’ ಎಂದು ಗೊಣಗುತ್ತಿದ್ದಾಗಲೇ ಶಾಲೆಯಿಂದ ಬರುವ ಕಿರೀ ಮಗ ‘ಆಯಿ ಕೂಹೂ’ ಎಂದು ಎತ್ತರದ ಏರಿಯ ಮೇಲಿಂದ ತಗ್ಗಿನಲ್ಲಿರುವ ತೋಟದತ್ತ ಮುಖ ಮಾಡಿ ಕೂಗಿದಾಗ ಆ ಕಡೆಯಿಂದ ಪ್ರತಿಧ್ವನಿಸುತ್ತದೆ- ‘ಕೂಹೂ’

ಕಂಬಳಿ ಕೊಪ್ಪೆ ಹೊದ್ದು, ಹಸಿ ಹುಲ್ಲು ಹೊರೆ ಹೊತ್ತು, ಒದ್ದೆಯಾದ ಸೀರೆ ಎತ್ತಿ ಸಿಕ್ಕಿಸಿಕೊಂಡು ತೋಟದಿಂದ ಮೆಟ್ಟಿಲೇರಿ ಬರುತ್ತಿರುವುದು ಯಾರಿಗೆ ಗೊತ್ತಾಗದಿದ್ದರೂ ಕೊಟ್ಟಿಗೆಯಲ್ಲಿರುವ ಕೆಂಪಿ, ಅದರ ಮಗಳು, ಮಗಳ ಮಗಳು, ಪೆದ್ದು ಪೆದ್ದು ಮುಖದ ಕೋಣಮರಿ.. ಹೀಗೆ ಎಲ್ಲ ಆರ್ಯ-ದ್ರಾವಿಡ ಪ್ರಾಣಿಗಳಿಗೂ ಆಯಿ ಹಸಿಹುಲ್ಲು ತರುತ್ತಿರುವುದು ಗೊತ್ತಾಗಿಬಿಡುತ್ತದೆ. ಕೊಟ್ಟಿಗೆ ತುಂಬ ವಾಂಯ್, ಮೇ, ಅಂಬಾಗಳೇ ತುಂಬಿಕೊಳ್ಳುತ್ತವೆ. ಹಗ್ಗ ಕಟ್ಟಿದ್ದ ಗೂಟ ಅಲುಗಾಡತೊಡಗುತ್ತವೆ. ಈ ದಡಬಡ ಕೇಳುತ್ತ ಬಚ್ಚಲ ಒಲೆಯ ಬೆಚ್ಚನೆ ಬೂದಿಯಲ್ಲಿ ಕುಳಿತ ‘ಪ್ಯಾರಿ’ ಬೆಕ್ಕು ಆಯಿ ಬಂದು ದನಕ್ಕೆ ಹುಲ್ಲು ಹಾಕಿ ಹಾಲು ಕರೆದು ತನ್ನನ್ನು ಎಬ್ಬಿಸಬಹುದೇನೋ ಎಂದು ಕನಸು ಕಾಣಲು ತೊಡಗುತ್ತದೆ.

ಕಿರೀ ಮಗನಿಗೆ, ಎಮ್ಮೆಯ ಹಾಲು ಕರೆಯುವಾಗ ಆಯಿ ಅದೆಂಥ ವಶೀಕರಣ ಮಾಡುತ್ತಾಳೋ ಎಂಬುದೇ ಅಚ್ಚರಿಯ ವಿಷಯ. ಕೆಲವೊಮ್ಮೆ ಅಕ್ಕಯ್ಯ ಹಾಲು ಕರೆಯವಲು ಹೋದರೆ ತಂಬಿಗೆ ತುಂಬಲು ಅರೆಸೇರು ಕಡಿಮೆಯೇ ಇರುತ್ತದೆ. ಆಯಿ ಕರೆದರೆ ಅಲ್ಲಿ ತುಂಬಿತು ಬಿಂದಿಗೆ ಎನ್ನುವಂತೆ ನೊರೆ ಉಕ್ಕುತ್ತದೆ. ಇದು ಹೇಗೆ? ಕೊನೆಗೂ ಸಂಶೋಧನೆ ಮಾಡಿದಾಗ ಗೊತ್ತಾಗಿದ್ದು- ಆಯಿ ಎಮ್ಮೆಯೊಂದಿಗೆ, ಕೆಂಪಿಯೊಂದಿಗೆ ಮಾತನಾಡುತ್ತಲೇ ಇರುತ್ತಾಳೆ. ‘ಹೌದೇನೇ ಕೆಂಪಿ, ನಾಲ್ಕು ತಿಂಗಳು ಆತೇನೇ ನಿನಗೆ?’ ಎನ್ನುತ್ತ ಬೆನ್ನು ನೇವರಿಸಿದರೆ, ಮೈ ನವಿರೆದ್ದು ಕೆಂಪಿ ಜೊಳ್ಳನೆ ಉಚ್ಚೆ ಹೊಯ್ದುಬಿಡುವಷ್ಟು ಆರ್ದ್ರತೆಯ ಸ್ಪರ್ಶ. ಕುತ್ತಿಗೆ ನೇವರಿಸುತ್ತ ‘ಎಷ್ಟು ಉಣುಗು ಮೈಯಲ್ಲಿ’ ಎಂದು ಹೇಳಿದರೆ ತುರಿಕೆ ಹೋದಷ್ಟೇ ಸಮಾಧಾನ. ಆಂಧ್ರದಿಂದ ತಂದ ಸೊರಟಿ ಎಮ್ಮೆಯ ಬಳಿಯೂ ಕನ್ನಡದಲ್ಲೇ ಮಾತನಾಡುತ್ತ ‘ನಿನಗೆ ಬಿಸಿಬಿಸಿ ಅಕ್ಕಚ್ಚು ಕೊಡ್ತಿ’ ಎಂದು ಮೈಮೇಲೆ ಕೈ ಆಡಿಸಿದರೆ ‘ನನಗೂ ಕನ್ನಡ ಬರುತ್ತದೆ’ ಎನ್ನುವ ಹಾಗೆ ಅದು ಗೋಣು ತಿರುಗಿಸಿ ಆಯಿಯ ಮುಖವನ್ನು ಅಭಿಮಾನದಿಂದ ನೋಡುತ್ತದೆ. ಹಾಲು ಕರೆಯುವ ಕ್ಷಣ ಹತ್ತಿರ ಬಂದAತೆಲ್ಲ ಅದರ ಕ್ಷಣಗಣನೆ ಆರಂಭವಾಗಿ ಒಂಬತ್ತು, ಎಂಟು, ಏಳು, ಆರು ಎಂದು ಗೊರಸಿನಲ್ಲೇ ಲೆಕ್ಕ ಹಾಕುತ್ತ ಉದ್ವೇಗ ತಾಳಲಾರದೇ ಅಲ್ಯೂಮಿನಿಯಂ ಭಾಂಡೆಯಲ್ಲಿ ತಂದಿಡುವ ನೆನೆಸಿದ ಹಿಂಡಿ, ಹತ್ತಿಕಾಳು, ಹಸಿಹುಲ್ಲು, ಕೊಳೆತ ಮೊಗೆಕಾಯಿ, ಸೌತೆಕಾಯಿ ಸಿಪ್ಪೆ, ಬಾಳೆಹಣ್ಣಿನ ಸಿಪ್ಪೆಗಳ ಪಂಚಾಮೃತವ ನೆನೆನೆನೆದು ಜೊಲ್ಲು ಸುರಿಸುತ್ತ.. ಆಯಿ ಭಾಂಡೆ ತಂದಿಟ್ಟಕೂಡಲೇ ಬಕಬಕ ಮುಕ್ಕುವಾಗ, ‘ಗಡಿಬಿಡಿ ಬೇಡ ತಡಿಯೇ’ ಎಂದು ಹೇಳಿದ್ದು ಕೇಳಿದ್ದೂ, ಅರ್ಥವಾಗಿದ್ದೂ ಆಗದವರ ಹಾಗೆ ಅರ್ಧ ತಿಂದು ಮುಗಿದ ಮೇಲೆಯೇ ತಲೆ ಮೇಲಕ್ಕೆತ್ತಿ ಒಂದು ದೊಡ್ಡ ಉಸಿರು ಎಳೆದು ಬಿಡುವುದು.. ಅಷ್ಟರಲ್ಲಿ ಅರ್ಧ ಬಿಂದಿಗೆ ಹಾಲು ಕರೆದಾಗಿರುತ್ತಿತ್ತು ಆಯಿಗೆ. ಕೆಂಪಿ ಆಕಳ ಹಾಲು ಕರೆಯುವಾಗಲಂತೂ ಆಯಿಯ ಮಾತೇ ಮಾತು. ‘ಇನ್ನೊಂದೇ ವಾರ. ಆ ಮೇಲೆ ತ್ರಾಸು ಕೊಡ್ತನಿಲ್ಯೆ. ಹಾಲು ಕರೆಯವುದ ನಿಲ್ಲಿಸ್ತಿ’ ಎಂಬ ಸಮಾಧಾನದ ಮಾತಿಗೆ ತಿನ್ನುವುದನ್ನೂ ಮರೆತು ಇನ್ನಷ್ಟು ಸಮಾಧಾನ ಪಟ್ಟುಕೊಳ್ಳುತ್ತಿತ್ತು. ಕೆಂಪಿಯ ಹಾಲು ಕರೆಯುವುದನ್ನು ನಿಲ್ಲಿಸಿದಾಗ ಖತಿಗೊಂಡ ಅಣ್ಣಯ್ಯ ಇನ್ನೊಂದು ತಿಂಗಳಾದರೂ ಕರೆಯೋಣ, ಈಗಿನ್ನೂ ಐದೇ ತಿಂಗಳು ಎಂದರೂ ಸುತರಾಂ ಒಪ್ಪಲಿಲ್ಲ ಆಯಿ. ಅಣ್ಣಯ್ಯ ಆಯಿಯ ಸೀರೆ ಉಟ್ಟು ತಲೆಮೇಲೆ ಸೆರಗು ಹಾಕಿಕೊಂಡು ಮೆಲ್ಲಗೆ ಬೆಕ್ಕಿನಂತೆ ಹೋಗಿ ಕೆಂಪಿಯ ಕೆಚ್ಚಲಿಗೆ ನೀರು ಸೋಕಿಸಿ ಕೈ ಹಾಕಿದಾಗ ಧಡಾರ್ ಅಂತ ಒದ್ದು ‘ಇನ್ನು ನನ್ನ ತಂಟೆಗೆ ಬಂದರೆ ಹುಷಾರ್, ಆಯಿ ಹೇಳಲಿಲ್ಲವೇನು?’ ಎನ್ನುವಂತೆ ಕೆಕ್ಕರಿಸಿ ನೋಡಿತ್ತು.

ಅಕ್ಕಯ್ಯ ಒಂದೂ ಮಾತಾಡದೇ ಗುಮ್ಮನ ಗುಸಗನ ಹಾಗೆ ಕುಂತು ಕಾಲು ಕರೆಯುತ್ತಿದ್ದುದರಿಂದ ಮುಕ್ಕಾಲು ಚೆಂಬು; ಆಯಿ ಮಾತಾಡಿ ಮಾತಾಡಿ ಇಡೀ ಚೆಂಬು ಹಾಲು ಕರೆಯುತ್ತಾಳೆ ಎಂಬುದು ಕಿರೀ ಮಗನ ಸಂಶೋಧನೆಯಿAದ ತಿಳಿದುಬಂತು. ಮನೆಯೊಳಗೂ ಹೊರಗೂ ಒಳಗಿನವರೊಂದಿಗೂ ಹೊರಗಿನವರೊಂದಿಗೂ ಒಂದೇ ಸಮನೆ, ಒಂದೇ ಬಗೆ, ಹೃದಯಾಂತರಾಳದಿAದ ಮಾತಾಡುವ ಆಯಿಗೆ ಸೊಸೆಯೊಂದಿಗೆ ಬಾಯ್ತುಂಬ ಮಾತಾಡಬೇಕೆಂಬ ಆಸೆ. ಸೊಸೆ ಮಾತಾಡುವುದೇ ಕಮ್ಮಿ. ಈ ಸೊಸೆಗೆ ಮಾತಾಡಲೂ ಅರ್ಜಿ ಕೊಡವೇನು? ಎಂಬುದು ಆಯಿಯ ಗೊಣಗಾಟ. ಎಲ್ಲ ಆಯಿಯರಂತೆ ಸೊಸೆಯೆಂದರೆ ಪ್ರೀತಿ, ಅಸೂಯೆ, ಕಕ್ಕುಲಾತಿ, ಅಸಹನೆ ಎಲ್ಲವೂ ಇತ್ತು.

ಮೊದಮೊದಲಲ್ಲಿ ಬಡತನವೇ ಹಾಸಿಗೆ ಬಡತನವೇ ಹೊದಿಕೆ. ಅಪ್ಪಯ್ಯನದು ಮರಗೆಲಸ. ಅಡಕೆ ಕೊನೆ ಕೊಯ್ಯುವುದು, ಮಳೆಗಾಲದಲ್ಲಿ ಮದ್ದು ಹೊಡೆಯುವುದು. ಒಮ್ಮೆ ಧೋ ಎಂದು ಮಳೆ ಸುರಿಯುತ್ತಿದ್ದಾಗ ಆತ ಏರಿದ್ದ ಅಡಕೆ ಮರ ಮುರಿದು ಬಿದ್ದು ಅಪ್ಪಯ್ಯ ಅರೆಜೀವವಾಗಿದ್ದನಂತೆ. ಅಂಥದ್ದರಲ್ಲಿ ಧೃತಿಗೆಡದೆ ಆರೈಕೆ ಮಾಡಿ ಅಪ್ಪಯ್ಯನನ್ನು ಉಳಿಸಿಕೊಂಡಿದ್ದಳು ಆಯಿ. ನಡೆದಾಡುವಾಗ ಸ್ವಲ್ಪ ಕುಂಟುತ್ತಿದ್ದರೂ ಅಪ್ಪಯ್ಯ ಮತ್ತೆ ಮರವೇರುವಂತೆ ಛಲ ತುಂಬಿದ್ದಳು.

ಆಯಿಯ ಇನ್ನೊಬ್ಬ ಮಗನಿದ್ದ. ಎಂಟು ವರ್ಷದವನಿದ್ದಾಗ ಕಾಮಾಲೆಗೆ ಬಲಿಯಾದ. ಊರಿನಲ್ಲಿ ಚಿಕಿತ್ಸೆ ಸಿಗದೇ ಹುಬ್ಬಳಿಗೆ ಕರೆದೊಯ್ದರು; ಅಣ್ಣಯ್ಯ, ಅಪ್ಪಯ್ಯ ಇಬ್ಬರೇ. ಆಯಿ ಜೊತೆಗೆ ಹೋಗಲಿಲ್ಲ; ಹೋಗುವಷ್ಟು ದುಡ್ಡಿರಲಿಲ್ಲ. ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಎರಡನೇ ದಿನಕ್ಕೆ ಮಗ ಹೆಣವಾದ. ವಾಪಸ್ಸು ಊರಿಗೆ ಶವ ತರಲು ದುಡ್ಡಿಲ್ಲ. ಹುಬ್ಬಳ್ಳಿಯ ಯಾವುದೋ ಸ್ಮಶಾನದ ಗುರುತು ಪರಿಚಯವಿಲ್ಲದ ಸಮಾಧಿಗಳ ನಡುವೆ ಎಂಟು ವರ್ಷದ ಎಳೆ ಜೀವ ಮಲಗಿತು. ಇತ್ತ ಮಗನನ್ನು ಕರೆದುಕೊಂಡು ಬರುವರೇನೋ, ಹುಷಾರಾಗಿದ್ದಾನೋ ಏನೋ ಎಂದು ಆತಂಕಪಡುತ್ತ ದಾರಿಕಾಯುತ್ತಿದ್ದ ಆಯಿ- ಅಪ್ಪಯ್ಯ, ಅಣ್ಣಯ್ಯ ಇಬ್ಬರೇ ತಲೆ ಮೇಲೆ ಕೈ ಹೊತ್ತು ಬಂದಾಗ ಕಂಗಾಲಾದಳು. ಮುನ್ನಾದಿನ ತನಕ ಅಯಿಗೆ ಕೆಲಸದಲ್ಲಿ ಸಹಾಯ ಮಾಡುತ್ತ ಆಡುತ್ತೋಡುತ್ತಿದ್ದ ಮಗ ಸತ್ತಿದ್ದಾನೆ ಎಂದು ನಂಬಲು ಶವವೂ ಇಲ್ಲ. ಆದರೂ ಅಪ್ಪಯ್ಯನೆದುರಿಗೆ ಒಂದು ತೊಟ್ಟು ಕಣ್ಣೀರನ್ನೂ ಹಾಕದೇ ದೃಢವಾಗಿ ನಿಂತು, ‘ನಮಗೆ ಅವನಿಗೆ ಇದ್ದ ಋಣವೇ ಇಷ್ಟು’ ಎಂದು ಸಮಾಧಾನಪಡಿಸಿದ್ದಳು. ಆದರೆ ತೋಟದಲ್ಲಿ ಒಬ್ಬಳೇ ಹುಲ್ಲು ಕೀಳುವಾಗ ಅದೆಷ್ಟು ಹನಿ ಕಣ್ಣೀರು ಹುಲ್ಲಿನ ಬುಡದಲ್ಲಿ ಇಂಗಿ ಹೋದವೋ. ‘ಅಪ್ಪನ ಶವದ ಚಟ್ಟಕ್ಕೆ ಮಗ ಹೆಗಲು ಕೊಡುವುದು ಸಹಜ. ಯುದ್ಧಕಾಲದಲ್ಲಿ ಮಗನ ಹೆಣದ ಚಟ್ಟಕ್ಕೆ ಅಪ್ಪ ಹೆಗಲು ಕೊಡುವ ಸಂದರ್ಭ ಸೃಷ್ಟಿಯಾಗುತ್ತಿತ್ತಂತೆ. ಅಂಥ ಸಂದರ್ಭ ಶತ್ರುವಿಗೂ ಬರಬಾರದು ಎನ್ನುತ್ತಾರೆ. ಆದರೆ ನಮಗೆ ಏನೂ ಇಲ್ಲದ ಕಾಲದಲ್ಲೇಕೆ ಬಂತು ಅಂಥ ಕಾಲ?’ ಎಂದು ಒಮ್ಮೊಮ್ಮೆ ಪ್ರಶ್ನಿಸಿಕೊಳ್ಳುತ್ತಿದ್ದಳು. ಮಗನನ್ನು ಕೈಲಿ ಹೊತ್ತು ಕೈಯಾರ ಮಣ್ಣು ಮಾಡಿ ಬಂದ ಅಪ್ಪಯ್ಯ ಆ ನಂತರ ಹುಟ್ಟಿದ ಕಿರೀ ಮಗನನ್ನು ಎತ್ತಿಕೊಳ್ಳಲೇ ಇಲ್ಲ ಎಂದು ಆಯಿಯೇ ಹೇಳುತ್ತಿದ್ದಳು.

ಇಂಥ ಆಯಿ, ಒಂದು ದಿನ ಇದ್ದಕ್ಕಿದ್ದಂತೆ ಬುಡಕಡಿದ ಬಾಳೆ ಮರದಂತೆ ಬಿದ್ದಿದ್ದು, ದಿನದಿಂದ ದಿನಕ್ಕೆ ಕೃಶವಾಗುತ್ತ ಹೋಗುತ್ತಿದ್ದುದಕ್ಕೆ ಕಾರಣ ಯಾವ ಡಾಕ್ಟರಿಗೂ ಗೊತ್ತಾಗಲಿಲ್ಲ. ‘ಮಾನಸಿಕ ಸಮಸ್ಯೆ’ ಅಂತಷ್ಟೇ ಹೇಳಿದರು. ಅವಳ ‘ಮಾನಸಿಕ’ದ ಹಿಂದೆ ಒಂದು ದೊಡ್ಡ ಘಟನೆಯೇ ನಡೆದುಹೋಗಿತ್ತು.

ಆಯಿ ಶ್ರಮಜೀವಿ. ಲಾಗಾಯ್ತಿನಿಂದ ಬೆವರು ಬಸಿದು ಖುಷ್ಕಿ ಜಮೀನಿನಲ್ಲಿ ನಳನಳಿಸುವ ಅಡಕೆ ತೋಟ ಮಾಡಿದ್ದಳು. ಆಯಿ ಎಷ್ಟೋ ವರ್ಷ ಫಲವುಂಡ ನಂತರ ಊರ ಪಟೇಲರ ಸಂತಾನದ ಇಬ್ಬರ ಕಣ್ಣು ಅದರ ಮೇಲೆ ಬಿದ್ದಿತ್ತು. ಅದರ ಮೇಲೆ ಹಕ್ಕು ಸಾಧಿಸತೊಡಗಿದ್ದರು. ಅವರಿಗಿದ್ದ ಒಂದೇ ಆಧಾರ, ಅದು ದೇವಸ್ಥಾನದ ಜಮೀನು; ದೇವಸ್ಥಾನಕ್ಕೆ ತಾವು ಮೊಕ್ತೇಸರರು ಎಂಬುದು. ನಿಜವಾಗಿ ಆ ದೇವಸ್ಥಾನದ ದೇವರನ್ನು ಅಪ್ಪಯ್ಯನ ವಂಶದವರೇ ನೂರಾರು ವರ್ಷಗಳಿಂದ ಪೂಜಿಸುತ್ತ ಬಂದಿದ್ದು. ಪಟೇಲನ ಕುಟುಂಬದವರು ಐವತ್ತರವತ್ತು ವರ್ಷಗಳ ಹಿಂದೆ ಈ ಊರಿಗೆ ವಲಸೆ ಬಂದವರಷ್ಟೇ. ಆದರೂ ಶಾನುಭೋಗರನ್ನೇ ‘ಖರೀದಿಸಿ’ ಜಮೀನಿನ ಮೇಲೆ ತನಗೂ ಅಧಿಕಾರ ಇದೆ ಎಂಬಂತೆ ಪಹಣಿ ಬರೆಸಿಟ್ಟಿದ್ದ ಪಟೇಲ. ಪಟೇಲ ಅಂದಮೇಲೆ ದೇವಸ್ಥಾನದ ಮೊಕ್ತೇಸರನಾಗಿ ಎಲ್ಲ ಮೊಕ್ತೇಸರರೂ ಮಾಡುವ ಹಾಗೆ ದೇವಸ್ಥಾನದ ಜಮೀನು ನುಂಗುವ ಪ್ರಯತ್ನ ಶುರುವಾಗಿತ್ತು. ಆತ ಸತ್ತಮೇಲೆ ಮಕ್ಕಳು ಅದನ್ನು ಅನೂಚಾನವಾಗಿ ಮುಂದುವರಿಸಿ ಪಟೇಲನ ಆತ್ಮಕ್ಕೆ ಶಾಂತಿ ನೀಡುವತ್ತ ಸಾಗಿದ್ದರು. ‘ದೇವಸ್ಥಾನ ಭಟ್ಟರೆಮದರೆ ತಾವು ಪೂಜೆಗೆ ಇಟ್ಟುಕೊಂಡ ಆಳುಗಳಂತೆ, ಜೀತದವರಂತೆ’ ಎಂಬ ವಿಷಯವನ್ನೂ ತನ್ ಕಲಿತ, ಕಲಿಯದ, ತಿಳಿವಳಿಕೆ ಇದೆ ಎಂದುಕೊಂಡ, ಇಲ್ಲದ, ಹುಂಬ ಮಕ್ಕಳ ತಲೆತುಂಬಿ ಸತ್ತಿದ್ದ. ಚಿಕ್ಕಂದಿನಿಂದ ಆಯಿಯ ಕೈನ ದೋಸೆ ಎಂದರೆ ರುಚಿರುಚಿ ಎಂದು ತಿನ್ನುತ್ತ ಬೆಳೆದ ಪಟೇಲನ ಐದು ಗಂಡು ಸಂತಾನದಲ್ಲಿ ಒಬ್ಬಾತ ಈಗ ಆಯಿಯೇ ಬೆಲೆಸಿದ ಬಾಳೆಗೊನೆಗೆ ಕೈ ಹಾಕಿ ಕಡಿದುಕೊಂಡು ಈ ತೋಟ ನಮ್ಮದು ಎಂದು ಅಬ್ಬರಿಸಿ ನೆಲ ಒದ್ದು ಹೋಗಿದ್ದ. ತಾನು ಹಸಿರುಡಿಸಿದ ನೆಲ ಒದ್ದಿದ್ದು ಆಯಿಗೆ ತನ್ನ ಎದೆಗೇ ಒದ್ದ ಹಾಗೆ ಆಗಿತ್ತು. ಹಣಬಲವಿಲ್ಲದಿದ್ದರೂ ಕೋರ್ಟ್ಗೆ ಮಣ್ಣು ಹೊರುವುದಕ್ಕೆ ಅಣ್ಣಯ್ಯ ಸಿದ್ಧನಾಗಿ ನಿಂತ. ಆದರೆ ಆಯಿಯ ಹೃದಯಕ್ಕೆ ನಾಟಿದ ಗಾಯ ಆಳವಾಗಿತ್ತು. ನೋವು ಶರೀರವನ್ನೆಲ್ಲ ವ್ಯಾಪಿಸಿತ್ತು. ರಕ್ತದ ಕಣಕಣವೂ ಸೋತುಹೊದವು.

ಅತ್ತ ಊರ ಸುತ್ತಲ ಬಡವರನ್ನೆಲ್ಲ ಗೋಳು ಹುಯ್ದುಕೊಂಡಿದ್ದ ಪಟೇಲನ ಪಂಚ ಪುತ್ರರು ತಮ್ಮತಮ್ಮಲ್ಲೆ ಆಸ್ತಿಗಾಗಿ ಪರಸ್ಪರ ಬಡಿದಾಡತೊಡಗಿದರು. ‘ನೋಡು, ಅವರವರ ಕರ್ಮಫಲ ಈ ಜನ್ಮದಲ್ಲೆ ಅನುಭವಿಸುತ್ತಿದ್ದಾರೆ’ ಎಂದು ಆಯಿಯನ್ನು ಸಮಾಧಾನ ಮಾಡಲು ಯತ್ನಿಸಿದ್ದೂ ಫಲ ನೀಡಲಿಲ್ಲ. ಊಟ ನಿಂತಿತು. ಒಪ್ಪತ್ತಿಗೆ ಒಂದು ಲೋಟ ಬಿಸಿ ನೀರು ಬೆರೆಸಿದ ಹಾಲು, ಒಂದು ಹಪ್ಪಳ. ಕೊನೆಗೆ ಅದೂ ಇಲ್ಲ. ಇಲ್ಲ ಇಲ್ಲ ಎನ್ನುತ್ತ, ತೋಟ ನನ್ನದು ಎಂದು ನೆಲ ಒದ್ದ ಪಟೇಲನ ಮಗನ ದುಃಸ್ವಪ್ನದಿಂದ ಬೆಚ್ಚಿಬೀಳುತ್ತ ಆಯಿ ಒಂದು ದಿನ.. ಹೊರಡುವ ಸಿದ್ಧತೆ ನಡೆಸಿದ್ದು ಸ್ಪಷ್ಟವಾಗಿತ್ತು.

ಅಂದು ಶನಿವಾರ. ಕಿರಿ ಮಗಳು ಕಂಗಾಲಾಗಿ ರಾಮಜಪ ಮಾಡುತ್ತಿದ್ದಳು. ಮದುವೆಯಾಗಿ ಹೋಗಿದ್ದ ಇನ್ನೊಬ್ಬ ಮಗಳನ್ನು ಕರೆತರಲು ಪಕ್ಕದ ಮನೆಯಾತ ಓಡಿದ್ದ. ಹಿರಿ ಮಗ ಡಾಕ್ಟರನ್ನು ಕರೆತರಲು ಪೇಟೆಗೆ ಹೋಗಿದ್ದ. ಕಿರಿ ಮಗ ಮನಸ್ಸು ಕಲ್ಲು ಮಾಡಿಕೊಂಡು ನಿಂತಿದ್ದ. ಸೊಸೆ ಮಾತನಾಡಿಸುವ ಪ್ರಯತ್ನ ಮಾಡುತ್ತಿದ್ದಳು. ಈಗ ಆಯಿಗೆ ಮಾತು ಬೇಕಾಗಿರಲಿಲ್ಲ. ಊರ ಗೆಳತಿಯರೆಲ್ಲ ಬಂದಿದ್ದರು. ಯಾರೊಬ್ಬರು ಕರೆದರೂ ಆಯಿ ತಲೆ ಎತ್ತುವ ಪ್ರಯತ್ನ ಮಾಡುತ್ತಿದ್ದಳು. ಕಾಲು ಮಡಿಚಿ ಮೂರೇ ಮೂರು ಅಡಿ ಉದ್ದಕ್ಕೆ ಮಲಗಿದ್ದ ಅವಳು ತಲೆಗೆ ಕೈ ಕೊಟ್ಟಿದ್ದಳು. ಕೆಳಗಿನ ಮನೆಯ ಚಿಕ್ಕಿ- ಆಯಿಯ ಮನದ ಮಾತುಗಳನ್ನು ಯಾವಾಗಲೂ ಆಲಿಸುತ್ತಿದ್ದ ಚಿಕ್ಕಿ ಮೂಕವಾಗಿ ಅಳುತ್ತಿದ್ದಳು. ಕೊನೆಯ ದಿನದವರೆಗೂ ಅಸಹ್ಯಪಟ್ಟುಕೊಳ್ಳದೇ ಆಯಿಯ ಬಟ್ಟೆ ತೊಳೆದ, ದಿನವೂ ಬಿಸಿನೀರಲ್ಲಿ ಬಟ್ಟೆ ಅದ್ದಿ ಮೈ ಒರೆಸುತ್ತಿದ್ದ ಪಾರೋತಿ ಕಣ್ಣಲ್ಲಿ ನೀರು ತುಂಬಿಕೊAಡಿದ್ದಳು. ಆಯಿಯ ಕೈಯಿಂದ ಅಕ್ಕರೆಯ ಮಜ್ಜಿಗೆ ತಂಬಳಿ ಕುಡಿದವರೆಲ್ಲ ಅಲ್ಲಿ ನೆರೆದಿದ್ದರು. ಇನ್ನು ಎದ್ದುಬಂದು ಬಾಯ್ತುಂಬ ಮಾತಾಡುತ್ತ ಆಯಿ ಮಜ್ಜಿಗೆ ತಂಬಳಿ ಮಾಡಿ ಕೊಡುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಾಗಿಹೋಗಿತ್ತು.

ಅಣ್ಣಯ್ಯ ಡಾಕ್ಟçನ್ನು ಕರೆತರುವ ಹೊತ್ತಿಗೆ ಆಯಿ ಕೊರಡಾಗಿಹೋಗಿದ್ದಳು.

ಎಲ್ಲರೂ ನೋಡುತ್ತ ನಿಂತಿದ್ದರೂ, ಉಸಿರಾಟದ ಸದ್ದು ಕೇಳುತ್ತಿದ್ದರೂ ಅವಳ ಉಸಿರು ನಿಂತಿದ್ದು ಯಾವಾಗ, ಹೇಗೆ ಎಂದು ಯಾರಿಗೂ ಗೊತ್ತಾಗಲಿಲ್ಲ.

ಈಗ ಈ ಕಿರೀ ಮಗನಿಗೆ ತನ್ನ ಆಯಿಯ ಸಾವಿಗೆ ಕಾರಣನಾದ ಪಟೇಲನ ಮಧ್ಯಮಪುತ್ರನ ಮೇಲೆ ಸೇಡು ತೀರಿಸಿಕೊಳ್ಳುವ ಛಲ. ಅದಕ್ಕಾಗಿ ಹೊಂಚುಹಾಕುತ್ತಿದ್ದಾನೆ. ಯಾರ ಬಳಿಯೂ ಹೇಳಿಲ್ಲ ಈ ವಿಷಯವನ್ನು. ಈ ನಡುವೆ ಪಟೇಲನ ಕೊನೆಯ ಮೀಸೆ ಹೊತ್ತ ಮಗ ದಾಯಾದಿ ಕಲಹದಲ್ಲಿ ತನ್ನ ಅಣ್ಣನ ಮಗನ ಗುಂಡೇಟಿಗೇ ಬಲಿಯಾಗಿದ್ದಾನೆ.

ಇಲ್ಲೀಗ ಎಲ್ಲೆಲ್ಲೂ ಆಯಿಯ ಛಾಯೆ. ಅವಳ ಹಿರೀ ಮಗನ ಮಕ್ಕಳು, ಹೆಣ್ಮಕ್ಕಳ ಮಕ್ಕಳೆಲ್ಲ ಸೇರಿ ಆರು ಮೊಮ್ಮಕ್ಕಳಿದ್ದಾರೆ. ಅವರೆಲ್ಲ ಯಾರು ಗೊತ್ತೆ? ನೀವೇ.. ಯಾಕೆ ಹಾಗೆ ಬಿಟ್ಟಕಣ್ಣು ಬಿಟ್ಟಹಾಗೆ ನೋಡುತ್ತಿದ್ದೀರಿ? ನಿಜವಾಗಿಯೂ.. ನೀನು, ಅವನು, ಅವಳು, ಇವಳು, ಆತ ಮತ್ತು ಓ ಆ ಪುಟಾಣಿ.

ಆಯಿಯ ಸಾವಿಗೆ ಕಾರಣನಾದ ಆ ಪಟೇಲನ ಮಗನನ್ನು ಹೇಗಾದರೂ ಮಾಡಿ ಮುಗಿಸಬೇಕೆಂದು ಹೊಂಚು ಹಾಕುತ್ತಿರುವ ಕಿರೀ ಮಗ ಯಾರು ಗೊತ್ತೆ?

ನಾನು.

*ವಿಭ

Share16Tweet10SendShareShare
Next Post
ಗಾಂಧೀಜಿಯ ನೆರಳು

ಗಾಂಧೀಜಿಯ ನೆರಳು

Leave a Reply Cancel reply

Your email address will not be published. Required fields are marked *

Recommended

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು ಬೇರೆ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್_ ಪ್ರಮಾಣ ಮಾಡಿದ ಅಜ್ಜಯ್ಯ ಯಾರು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರಮಾಣ ಮಾಡಿದ ಅಜ್ಜಯ್ಯ ಯಾರು?

Radha Krishna Adiga Kannada Biography Book front

Radha Krishna Adiga – Idli Coffee Parampara-Payana

Radha Krishna Adiga Kannada Biography Book front

ರಾಧಾಕೃಷ್ಣ ಅಡಿಗ – ಇಡ್ಲಿ ಕಾಫಿ ಪರಂಪರೆ-ಪಯಣ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್_ ಪ್ರಮಾಣ ಮಾಡಿದ ಅಜ್ಜಯ್ಯ ಯಾರು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರಮಾಣ ಮಾಡಿದ ಅಜ್ಜಯ್ಯ ಯಾರು?

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು

ಸಿದ್ದರಾಮಯ್ಯ ಪದತ್ಯಾಗದ ಗುಟ್ಟು ಬೇರೆ

ಕನಸುಗಳಿಗೆ ನಿದ್ದೆಯಿಲ್ಲ

Radha Krishna Adiga Kannada Biography Book front

ರಾಧಾಕೃಷ್ಣ ಅಡಿಗ – ಇಡ್ಲಿ ಕಾಫಿ ಪರಂಪರೆ-ಪಯಣ

Radha Krishna Adiga Idli Coffee Parampara-Payana
Radha Krishna Adiga Idli Coffee Parampara-Payana
Translate »

Added to cart

Your Cart Is Empty
0

Check out our shop to see what's available

Cart Total: Total₹0.00
Your cart is empty. Shop now →
No Result
View All Result
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
  • ಪುಸ್ತಕಗಳು
  • Cart

© 2026 JNews - Premium WordPress news & magazine theme by Jegtheme.