ವಿದ್ಯುತ್ ಕ್ಷಾಮ ಮಿತಿ ಮೀರುತ್ತಿದೆ. ಮಲೆನಾಡ ಹಳ್ಳಿಗಳಿಗೆ ಮತ್ತೆ ಮುಳುಗಡೆಯ ಭೀತಿ. ಚಿತೆಯಲ್ಲೂ ಬೀಡಿ ಹೊತ್ತಿಸಿಕೊಳ್ಳುವುದು ನೇತಾರರ ಯೋಜನೆ. ಸದಾ ಎ.ಸಿ. ಕಾರು, ಎ.ಸಿ. ಕಚೇರಿ, ಕಪ್ಪು ಕನ್ನಡಕಗಳ ಆಳುವ ದೊರೆಗಳ ಕಣ್ಣಿಗೆ ಸುಡುಸುಡು ಸರ‍್ಯ ಕಾಣುತ್ತಲೇ ಇಲ್ಲ.
ಅಸಾಂಪ್ರದಾಯಕ ಇಂಧನ ಮೂಲ ಸೂರ್ಯ ನಿಗಿನಿಗಿ ಉರಿಯುತ್ತಿರುವಾಗ, ಆ ಅಪಾರ ಶಕ್ತಿಮೂಲವನ್ನು ಬಳಸುವ ಒಂದೇ ಒಂದು ಬೃಹತ್ ಯೋಜನೆಯ ಬಗ್ಗೆ ಕರ್ನಾಟಕ ಸರಕಾರ ಯಾಕೆ ಚಿಂತಿಸುತ್ತಿಲ್ಲ ಎಂಬುದೇ ಯಕ್ಷಪ್ರಶ್ನೆ.
ಒಂದು ಪುಟ್ಟ ಉದಾಹರಣೆ. 1.4 ದಶಲಕ್ಷ ಯುನಿಟ್ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಲು ಎಷ್ಟು ದಿನ ಬೇಕಾಗಬಹುದು? ಜಲ ವಿದ್ಯುತ್ ಅದರೆ 10 ವರ್ಷ.. ಶಾಖೋತ್ಪನ್ನ ಘಟಕವಾದರೆ 6 ವರ್ಷ.. ಎಷ್ಟು ಹಳ್ಳಿ, ಎಷ್ಟು ಕಾಡು ಮುಳುಗಿಸಿ ಎಷ್ಟು ಮಂದಿಯನ್ನು ನಿರಾಶ್ರಿತಗೊಳಿಸಬೇಕಾದೀತು? ಎಷ್ಟೊಂದು ಪ್ರತಿಭಟನೆಗಳು.. ಆತ್ಮಾಹುತಿಗಳು.. ಆತ್ಮಹತ್ಯೆಗಳು..!
ಅಷ್ಟೇ ವಿದ್ಯುತ್‌ಅನ್ನು ಸೌರಶಕ್ತಿಯಿಂದ ಉತ್ಪಾದಿಸಿದರೆ?
ಯಾರೂ ಸಾಯಬೇಕಿಲ್ಲ, ಮುಳುಗಿಸಬೇಕಿಲ್ಲ, ನಿರಾಶ್ರಿತರಾಗಬೇಕಿಲ್ಲ, ಪರಿಸರ ಅಸಮತೋಲನ- ಮಾಲಿನ್ಯ ಎಂಥದೂ ಇಲ್ಲ. ಸಾವಿರ ಸಾವಿರ ಕೋಟಿ ವಿಶ್ವಬ್ಯಾಂಕ್ ಸಾಲ ಬೇಕಾಗೇ ಇಲ್ಲ. ಯೋಜನೆ ಪೂರ್ಣಗೊಳಿಸಲು ಮೂರೇ ತಿಂಗಳು ಸಾಕು!.
ಇಂಥದೊಂದು ಪವಾಡ ನಿಜಕ್ಕೂ ಸಂಭವಿಸುತ್ತಿದೆ. ಅದೂ ಭಾರತದಲ್ಲೇ. 2010ರ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕಾಗಿ ಸಜ್ಜುಗೊಳ್ಳುತ್ತಿರುವ ನವದೆಹಲಿಯ ತ್ಯಾಗರಾಜ ಸ್ಟೇಡಿಯಂ ಈ ಪವಾಡಕ್ಕೆ ಸಾಕ್ಷಿಯಾಯಿತು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಕೂಡ ಸಂಪೂರ್ಣ ಸೋಲಾರ್ ಹೊಂದಿದ ಪ್ರಪಂಚದ ಮೊದಲ ಕ್ರಿಕೆಟ್ ಸ್ಟೇಡಿಯಂ.
ರಿಲಯನ್ಸ್ ಸೋಲಾರ್ ಗ್ರೂಪ್, ಇಷ್ಟು ದೊಡ್ಡ ಪ್ರಮಾಣದ ವಿದ್ಯುತ್ ಪೂರೈಸುವ ಸೆಲ್‌ಗಳನ್ನು ತ್ಯಾಗರಾಜ ಸ್ಟೇಡಿಯಂನ ಮಾಡಿಗೆ ಪೂರ್ತಿ ಅಳವಡಿಸಿದೆ. ಹೊದಿಕೆ ಕಾರ್ಯ 3 ತಿಂಗಳಲ್ಲಿ ಪೂರ್ಣಗೊಂಡಿದೆ. ಮೊಟ್ಟ ಮೊದಲ ಬಾರಿಗೆ ಮೆಗಾವ್ಯಾಟ್ ಲೆಕ್ಕದಲ್ಲಿ ಸರ‍್ಯರಶ್ಮಿಯಿಂದ ಉತ್ಪಾದಿತವಾಗುತ್ತಿರುವ ವಿದ್ಯುತ್ ಇದು. ಕಾಮನ್‌ವೆಲ್ತ್ ಗೇಮ್ಸ್ ನಡೆಯುವಾಗ ಸ್ಟೇಡಿಯಂ ಬಳಕೆಗೆ ಅವಶ್ಯವಿರುವುದಕ್ಕಿಂತ ಹೆಚ್ಚು ವಿದ್ಯುತ್ ದೊರೆಯಲಿದ್ದು ಹೆಚ್ಚುವರಿ ವಿದ್ಯುತ್ತನ್ನು ಗ್ರಿಡ್‌ಗೆ ನೀಡುವ ಯೋಜನೆ ಇದೆ. ಶಾಖೋತ್ಪನ್ನ ವಿದ್ಯುತ್ ಘಟಕವಾಗಿದ್ದರೆ ಇಷ್ಟು ಉತ್ಪಾದನೆಗೆ 1200 ಟನ್ ಇಂಗಾಲದ ಡೈ ಆಕ್ಸೆöÊಡ್ ವಾತಾವರಣ ಸೇರುತ್ತಿತ್ತು.
ಇಷ್ಟೇ ಅಲ್ಲ, ಟೆನ್ನಿಸ್ ಮತ್ತಿತರ ಕ್ರೀಡೆಗಳು ನಡೆಯುವ ಕ್ರೀಡಾಂಗಣಗಳಲ್ಲಿ ವಿವಿಧ ಸಾಮರ್ಥ್ಯದ ಹಲವು ಸೋಲಾರ್ ಘಟಕ ಅಳವಡಿಸಲಾಗುತ್ತಿದೆ. ಕಾಮನ್‌ವೆಲ್ತ್ ಕ್ರೀಡಾಗ್ರಾಮದ ಬೀದಿಗಳು ಮತ್ತು ಉದ್ಯಾನಗಳಿಗೂ ರಾತ್ರಿ ಸರ‍್ಯನದೇ ಬೆಳಕು.
ಸೂರ್ಯ- ಭಾರತದ ಅಕ್ಷಯ ಪಾತ್ರೆ:
ಮಹಾಭಾರತದಲ್ಲಿ ವನವಾಸದ ವೇಳಿ ಆತಿಥ್ಯ ನೀಡಲಾಗದೇ ಕಳವಳಪಡುತ್ತಿದ್ದ ದ್ರೌಪದಿಗೆ ಸೂರ್ಯ ಪ್ರತ್ಯಕ್ಷನಾಗಿ ಅಕ್ಷಯ ಪಾತ್ರೆ ನೀಡಿದ. ಭಾರತದ ಮಟ್ಟಿಗೂ ಸರ‍್ಯಶಕ್ತಿ ಅಕ್ಷಯ ಪಾತ್ರೆಯೇ ಸೈ. ಉಷ್ಣವಲಯದಲ್ಲಿರುವ ನಮ್ಮ ದೇಶದ ಮೇಲೆ ಸೂರ್ಯ ವರ್ಷದ 250ರಿಂದ 300 ದಿನ ಅಂದರೆ ವರ್ಷಕ್ಕೆ ನಿರಂತರ 3000 ಗಂಟೆಗೂ ಅಧಿಕ ಕಾಲ ಬಿಸಿಲು ಹರಿಸುತ್ತಿರುತ್ತಾನೆ. ಇದರ ಶಕ್ತಿ 3000 ಟ್ರಿಲಿಯನ್ ಕಿಲೋವ್ಯಾಟ್. ನಮ್ಮ ಭೂಮಿಯ ಪ್ರತಿ ಚದರ ಮೀಟರ್ ಮೇಲೆ 4 ರಿಂದ 7 ಕಿಲೋ ವ್ಯಾಟ್ ಶಕ್ತಿಯ ಸೌರಕಿರಣ ಬೀಳುತ್ತಿರುತ್ತದೆ. ಪ್ರಸ್ತುತ ಸೌರವಿದ್ಯುತ್ ಉತ್ಪಾದನೆ ಅಂದಾಜು 10 ಮೆಗಾ ವ್ಯಾಟ್.
ಇದು ದೊರೆಯುತ್ತಿರುವ ಸೌರಶಕ್ತಿಯ 0.1%ಕ್ಕಿಂತ ಕಡಿಮೆ!
ರಾಷ್ಟ್ರೀಯ ಕ್ಲೈಮೇಟ್ ಚೇಂಜ್ ಆಕ್ಷನ್ ಪ್ಲಾನ್‌ನಲ್ಲಿ ಪ್ರಧಾನ ಮಂತ್ರಿ ಅತಿ ಹೆಚ್ಚು ಆದ್ಯತೆಯನ್ನು ಸೌರಶಕ್ತಿಗೆ ನೀಡಿದ್ದಾರೆ. ಸೂರ್ಯನಲ್ಲದೇ ಬೇರೆ ದಾರಿಯೇ ಇಲ್ಲ ಎಂಬುದು ಕೇಂದ್ರಕ್ಕೆ ವೇದ್ಯವಾದಂತಿದೆ. ಭಾರತದ ಒಟ್ಟೂ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 1,46,753 ಮೆಗಾವ್ಯಾಟ್. ಅದರಲ್ಲೂ 54% ಕಲ್ಲಿದ್ದಲು ಆಧರಿತ, 24% ಜಲವಿದ್ಯುತ್, 8% ಅಸಾಂಪ್ರದಾಯಕ ಇಂಧನ ಮೂಲಗಳಿಂದ, ಉಳಿದ ಭಾಗ ಗ್ಯಾಸ್ ಮತ್ತು ಅಣು ವಿದ್ಯುತ್. ಪ್ರಸ್ತುತ ದೇಶದ ವಿದ್ಯುತ್ ಕೊರತೆ 15%. ಮುಂದಿನ 10 ವರ್ಷಗಳಲ್ಲಿ 10 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾದರೆ ಮಾತ್ರ ಈ ಕೊರತೆ ನೀಗಿಸಬಹುದು. ಇದಕ್ಕೆ 24 ಲಕ್ಷ ಕೋಟಿ ರೂಪಾಯಿ ಬಂಡವಾಳ ಬೇಕು! ಇದರ ಬದಲು ಸೂರ್ಯನಿಗೇ ಪ್ಲಗ್ ಹಾಕಿದರೆ ಖಂಡಿತ ಇಷ್ಟೊಂದು ಬಂಡವಾಳ ಬೇಕಾಗೇ ಇಲ್ಲ.
ರಿಲಯನ್ಸ್ ಅಂತಹ ಸ್ವದೇಶೀ ಕಂಪನಿಗಳ ಸಾಮರ್ಥ್ಯದ ಸದುಪಯೋಗಪಡಿಸಸಿಕೊಂಡು ರಾಜ್ಯ ಸರಕಾರವೂ ಏಕೆ ಕರ್ನಾಟಕವನ್ನು ಸಂಪೂರ್ಣ ಸೋಲಾರ್ ರಾಜ್ಯವನ್ನಾಗಿಸುವ ಕನಸು ಕಾಣಬಾರದು? ಆಳುವವರಿಗೆ ಅಧಿಕ ‘ದುಡ್ಡು’ ತರುವ ಮುಳುಗಡೆ ಯೋಜನೆಗಳನ್ನು ಕೈಬಿಡಲು ಮನಸ್ಸಿಲ್ಲ. ನಿರ್ಮಾಣ ಕಂಪನಿಗಳ ಲಾಬಿಯೂ ಅಷ್ಟೇ ಜೋರಾಗಿದೆ. ಹೀಗಾಗಿ ಸೋಲಾರ್‌ನಂಥ ಅಸಾಂಪ್ರದಾಯಕ ಇಂಧನ ಮೂಲ ಮೂಲೆಗುಂಪಾಗಿದೆ. ಆದರೂ, ಸೋಲಾರ್ ಲೈಟ್, ಬೀದಿದೀಪ, ಕುಕರ್ ಮುಂತಾದವು ಗ್ರಾಮಗಳನ್ನೂ ತಲುಪಿವೆ. ಗ್ರಾಮ ಗ್ರಾಮವನ್ನೂ ಒಂದೊಂದು ಘಟಕವನ್ನಾಗಿಸಿ ಸಂಪೂರ್ಣ ಸೋಲಾರ್ ವಿದ್ಯುತ್ ಅಳವಡಿಸುತ್ತ ಬಂದರೆ, ಪ್ರತಿ ಗ್ರಾಮವೂ ವಿದ್ಯುತ್ ಸ್ವಾವಲಂಬಿ ಆಗುತ್ತದೆ. ವಿದ್ಯುತ್ ಕ್ಷಾಮದ ನಿರಂತರ ಡಾಮರ ಹೇಳಹೆಸರಿಲ್ಲದಂತಾಗುತ್ತದೆ.
ಇದರಿಂದ ಮುಂದಿನ ಚುನಾವಣೆಯಲ್ಲಿ ಒಳ್ಳೆಯದಾಗುತ್ತದೆ ಎಂಬ ಕಾರಣಕ್ಕಾದರೂ ಸೂರ್ಯನೆಡೆ ಕಣ್ಣೆತ್ತಿ ನೋಡಬಾರದೆ?.









