ರಂಗಭೂಮಿಯ ಅನಭಿಷಿಕ್ತ ಸಾಮ್ರಾಟ ಶಂಕರ್ ಮಾವಳ್ಳಿ ಬಣ್ಣದ ಜಗತ್ತಿನಿಂದ ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದಾರೆ. ತಾವೇ ಕಟ್ಟಿ ಬೆಳೆಸಿದ ‘ರಂಗಾತರಂಗ’ ಸಂಸ್ಥೆಯನ್ನು ಮಗ ಶಶಿಧರ ಅವರಿಗೆ ಸಂಪೂರ್ಣ ವಹಿಸಿ ರಂಗಮಂಚದಿಂದಲೇ ನಿರ್ಗಮಿಸುವುದಾಗಿ ಹೇಳಿದ್ದಾರೆ. ಅವರು ಅಭಿನಯಿಸಲಿರುವ ಕೊನೆಯ ನಾಟಕದ ಕೊನೆಯ ಪ್ರದರ್ಶನ ‘ರಾಮ ನಿರ್ಯಾಣ’ ರಾಜ್ಯೋತ್ಸವ ನಿಮಿತ್ತ ಕಲಾಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ…
ಹೀಗೊಂದು ಸುದ್ದಿ ಕರುವಿನ ಕಿವಿಯಲ್ಲಿ ಗಾಳಿ ಹೊಕ್ಕಂತೆ ನಗರವನ್ನೆಲ್ಲ ಸುತ್ತಿ ಮಲಿನ ಹವೆಯಲ್ಲೂ ಸಂಚಲನ ಮೂಡಿಸಿತ್ತು. ಪತ್ರಿಕೆಯವರಿಗೆ, ಟಿವಿಯವರಿಗೆ ಇದೇನೂ ದೊಡ್ಡ ವಿಷಯವಾಗಿರಲಿಲ್ಲ. ಆದರೆ ಯಕ್ಷಕಲೆಯನ್ನೂ ನಾಟಕವನ್ನೂ ಆರಾಧಿಸುವ ಒಂದು ವರ್ಗದ ಜನರಿಗೆ ಇದು ಇಡೀ ದಿನ ಇದೀಗ ಬಂದ ಸುದ್ದಿಯೇ ಆಗಿತ್ತು. ಹೋದಲ್ಲಿ-ಬಂದಲ್ಲಿ, ಕುಂತಲ್ಲಿ ನಿಂತಲ್ಲಿ ಅದೇ ಮಾತು- ಶಂಕ್ರಣ್ಣ ಮುಂದೆ ಪಾರ್ಟ್ ಮಾಡಲ್ವಂತೆ.. ಯಾಕಂತೆ?
ಕಲಾಕಾರರು ಒಂದು ರೀತಿಯಲ್ಲಿ ಆಮೆಯಂತೆ. ವಯಸ್ಸಾದಂತೆ ಬೆಳೆಯುತ್ತಾ ಹೋಗುತ್ತಾರೆಯೇ ಹೊರತು ಮುದುಕರಾಗುವುದಿಲ್ಲ. ಅಭಿನಯ ಅವರನ್ನು ಮಾಗಿಸುತ್ತದೆ ಹೊರತು ಹಣ್ಣಾಗಿಸುವುದಿಲ್ಲ. ಕಷ್ಟ-ಕಿಲುಬುಗಳೇನೇ ಇದ್ದರೂ ರಂಗದಾಚೆ. ಚೌಕಿಗೆ ಬಂದು ಮುಖವನ್ನು ಕನ್ನಡಿಗೊಡ್ಡಿ ಕುಳಿತರೆಂದರೆ ಅಂತರಾಳದ ಲಯ ಬದಲಾಗುತ್ತ ಹೋಗುತ್ತದೆ. ಮುಖದ ನಿರಿಗೆಯ ಮೇಲೆ ಬಣ್ಣ ಗರಿಗೆದರುತ್ತದೆ. ಗೆಜ್ಜೆ ಕಟ್ಟಿದ ಹೆಜ್ಜೆಗಳು ತಾಳವನ್ನರಸತೊಡಗುತ್ತವೆ. ಇನ್ನೂ ಕಸುವಿದೆ, ಇನ್ನೂ ಕುಣಿಯಬಲ್ಲೆ ಎಂದು ಅಂತರಾತ್ಮ ಹುರಿದುಂಬಿಸುತ್ತ ಹೋದಂತೆ ಶರೀರ ಚೈತನ್ಯಪೂರ್ಣವಾಗಿ ಅನಾಹತದ ಅರಳುವಿಕೆಯಲ್ಲಿ ಇಡೀ ಭಾವಕೋಶ ಆಕಾಶದೆತ್ತರ ಎದ್ದು ನಿಲ್ಲುತ್ತದೆ. ಪರಕಾಯ ಪ್ರವೇಶವಾಗುವ ಈ ಪ್ರಕ್ರಿಯೆಯಲ್ಲಿ ತಾನಾಡುವ ಪಾತ್ರವೇ ಆಗುವ ಪರಿಕ್ರಮ ಶಂಕ್ರಣ್ಣನಿಗೆ ಸಿದ್ಧಿಸಿದಂತೆ ಅವನ ಸಮಕಾಲೀನರಿಗಿರಲಿಲ್ಲ.
ಕಲಾವಿದರಲ್ಲಿ ಸಾಮಾನ್ಯವೋ ಎಂಬಂತಿರುವ ಒಂದೆರಡು ಸಣ್ಣ ಚಟವೂ ಶಂಕ್ರಣ್ಣನಿಗಿಲ್ಲದಿದ್ದುದೇ ಅವನ ಹೆಸರಿಗೆ ರಕ್ಷಾಕವಚವಾಗಿತ್ತು. ಕೀರ್ತಿ, ದುಡ್ಡು ಬಂದವರನ್ನು ತಬ್ಬಿಕೊಳ್ಳಲು ಮದಿರೆ, ಮಾನಿನಿಯರು ಹಾತೊರೆಯುತ್ತ ಸುತ್ತ ಗಿರಿಕಿ ಹೊಡೆಯುತ್ತವೆ. ತಬ್ಬಿಕೊಂಡ ಮೇಲೆ ನುಂಗುತ್ತವೆ. ಇವೆಲ್ಲವನ್ನು ಮೀರಿ ನಿಂತಿದ್ದ ಶಂಕ್ರಣ್ಣ; ಶ್ರೀರಾಮಚಂದ್ರನಂತೆ ಅಪ್ಪಟ ಏಕಪತ್ನೀ ವ್ರತಸ್ಥ. ಮತ್ತು ಹುಬ್ಬಳ್ಳಿಯಲ್ಲೋ ದಾವಣಗೆರೆಯಲ್ಲೋ ಉಪಸಂಸಾರ ಹೊಂದಿರದೇ ಹೆಂಗಸರ ವಿಷಯದಲ್ಲಿ ನಿಜವಾಗಿಯೂ ಶುದ್ಧನಾಗಿದ್ದ ಎಂಬುದು ಶಂಕ್ರಣ್ಣನ ಬಗ್ಗೆ ಗೌರವ ಹೆಚ್ಚುವಂತೆ ಮಾಡಿದ್ದವು. ಬಾಗೀರಥಿ ತೀರಿಕೊಂಡ ತರುವಾಯ ಪದ್ಮಿನಿ ಎಂಬ ನಟಿ ಶಂಕ್ರಣ್ಣನ ಬಾಳ ಸಂಗಾತಿಯಾಗಲು ಹಾತೊರೆಯುತ್ತ ಬಂದಿದ್ದಳು. ಬಾಗೀರಥಿ ಇದ್ದಾಗಲೇ ಸಂಗಾತಕ್ಕೆ ಇಚ್ಛೆ ಪಟ್ಟ ನಟನಾ ಮಣಿಗಳಿದ್ದರೂ ಶಂಕ್ರಣ್ಣ ಎಲ್ಲರಿಂದ ದೂರ ಇದ್ದ. ಅವನ ನೀಳ ಮೂಗು, ಅಗಲವಾದ ಕಣ್ಣುಗಳು, ಹರವಾದ ಎದೆ, ನೇರ ನಿಲುವು, ಗಂಭೀರ ಶಾರೀರಕ್ಕೆ ಒಳಗೊಳಗೇ ತೇವವಾಗಿದ್ದರವರು. ಏನೇ ಆದರೂ ಶಂಕ್ರಣ್ಣನನ್ನು ಸೆಳೆಯಲು ಅವರು ವಿಫಲರಾಗಿದ್ದರು. ಮಗ ಶಶಿಧರನ ಯೋಗಕ್ಷೇಮಕ್ಕಾಗಿ ಆ ಮನೆಗೆ ಇನ್ನೊಂದು ಹೆಣ್ಣುದಿಕ್ಕು ಬೇಕು ಎಂಬ ಬಂಧುಗಳ ಮಾತು ಸಹ ಮರಳಿನ ಮೇಲೆ ನೀರು ಸುರಿದಂತಾಗಿತ್ತು.
ರಂಗಭೂಮಿ ಹವ್ಯಾಸಕ್ಕಷ್ಟೇ, ಜೀವನಕ್ಕಲ್ಲ ಎಂಬಂತಿರುವ ದಿನಗಳಲ್ಲೂ ಶಂಕ್ರಣ್ಣ ನಾಟಕದಲ್ಲೇ ಜೀವನ ಕಂಡುಕೊಂಡಿದ್ದ. ರಂಗಾಂತರಂಗ ಪ್ರಸ್ತುತಪಡಿಸುವ ಎಲ್ಲ ಪ್ರದರ್ಶನಗಳೂ ರಸಿಕರಿಂದ ತುಂಬಿರುತ್ತಿದ್ದವು. ಇದಕ್ಕೆ ಮುಖ್ಯ ಕಾರಣ ಶಂಕ್ರಣ್ಣನ ಪ್ರಯೋಗಶೀಲತೆ. ಕಂಪನಿ ನಾಟಕ ಮಾದರಿಗೆ ಜೋತುಬೀಳದೇ ಹವ್ಯಾಸಿಗಳಂತೆ ಅಸಂಗತಕ್ಕೆ ಜಿಗಿಯದೇ ಎರಡರ ನಡುವೆ ಸಮನ್ವಯ ಸಾಧಿಸಲು ಶಂಕ್ರಣ್ಣ ಸಮರ್ಥನಾಗಿದ್ದ. ಜೊತೆಗೆ ಅಭಿವ್ಯಕ್ತಿಯ ಹಲವು ಮಜಲುಗಳನ್ನು ಅರಿಯಲು ಭರತ ನಾಟ್ಯ, ಕಥಕ್ಕಳಿಯನ್ನೂ ಅಭ್ಯಾಸ ಮಾಡಿದ್ದ. ರಕ್ತಗತವಾಗಿ ಯಕ್ಷಗಾನ ಒಲಿದಿತ್ತು. ಯಾವುದೇ ಪಾತ್ರ ಮಾಡಿದರೂ ಸಂದರ್ಭಕ್ಕನುಗುಣವಾಗಿ ಕಲಿತ ಕಲೆಗಳನ್ನೆಲ್ಲ ಎರಕ ಹೊಯ್ದುಬಿಡುತ್ತಿದ್ದ. ಅವನು ಮಾಡುತ್ತಿದ್ದ ದಶರಥನ ಪಾತ್ರ ಕರುಣಾರಸಕ್ಕೆ ಹೆಸರಾಗಿದ್ದರೆ ದುಷ್ಯಂತನ ಶೃಂಗಾರ ರಸ ರಸಿಕರ ಮನ ಸೂರೆಹೊಡೆದಿತ್ತು. ಎಂ.ಕೆ.ಇಂದಿರಾ ಕಾದಂಬರಿ ‘ಪುರುಷೋತ್ತಮ’ವನ್ನು ರಂಗಕ್ಕೆ ಅಳವಡಿಸಿದ್ದ ಶಂಕ್ರಣ್ಣ. ಅಂದಿನ ಕಾಲದ ಆದರ್ಶ ತ್ಯಾಗಮಯಿ ಪುರುಷೋತ್ತಮನ ಪಾತ್ರ ಶಂಕ್ರಣ್ಣನ ಖ್ಯಾತಿಗೆ ಮುಕುಟವಾಗಿತ್ತು. ಈ ಮುಕುಟಕ್ಕೆ ಗರಿ ಎಂದರೆ ಎಲ್ಲವನ್ನೂ ಪಡೆದು ಎಲ್ಲವನ್ನೂ ತ್ಯಜಿಸಿ ಸಾಗುವ ‘ರಾಮ ನಿರ್ಯಾಣ’. ಪ್ರಧಾನ ರಸಗಳ್ಯಾವವೂ ಇಲ್ಲದೇ ಒಳಹರಿವಿನಲ್ಲಿ ವಿಷಾದವನ್ನೇ ಧ್ವನಿಯಾಗಿಸಿಕೊಂಡ, ರಾಮ ಅವತಾರ ಮುಗಿಸಿ ನಿರ್ಗಮಿಸುವ ಪ್ರಸಂಗವನ್ನು ಹೃದಯಸ್ಪರ್ಶಿಯಾಗಿಸುವಲ್ಲಿ ಶಂಕ್ರಣ್ಣನ ಬದಲಿಗೆ ಇನ್ನೊಬ್ಬರನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದಾಯಿತು. ನಾಟಕ, ಯಕ್ಷಗಾನ, ರೂಪಕಗಳ ಮಿಶ್ರಸಂಯೋಜನೆಯ ಈ ಪ್ರದರ್ಶನ ಜನಜನಿತವಾಯಿತು.
****
ಶಂಕ್ರಣ್ಣನ ಮಗ ಶಶಿಧರನಿಗೆ ಈಗ ತಂದೆಯಾಗುವ ವಯಸ್ಸು. ರಂಗಾಂತರಂಗದಲ್ಲೇ ನಟನೆ ತರಬೇತಿಗೆ ಬರುತ್ತಿದ್ದ ರೂಪಾ ಅವನ ಬಾಳ ಸಂಗಾತಿಯಾಗಿದ್ದಳು. ರಂಗಭೂಮಿಯ ದೊರೆಯ ಸೊಸೆಯಾದುದು ಅವಳಿಗೆ ಹೆಮ್ಮೆಯ ವಿಚಾರವಾಗಿತ್ತು. ಆ ವಿಚಾರವನ್ನು ಅವಳು ತನ್ನ ಪ್ರತಿ ನಡೆ ನುಡಿಯಲ್ಲೂ ತೋರುತ್ತಿದ್ದಳು.
ಆದರೆ ತಂದೆಯ ಖ್ಯಾತಿಯ ನೆರಳಲ್ಲಿ ನಡೆಯಲು ಶಶಿಧರ ಏಗುತ್ತಿದ್ದ. ಆತ ನಟನೆಯಲ್ಲಿ ಅಷ್ಟಕ್ಕಷ್ಟೆ. ತಂದೆ ಮಾಡುತ್ತಿದ್ದ ಪಾತ್ರಗಳನ್ನೇ ತಾನೂ ಮಾಡಲು ಹೋಗಿ ‘ಪರವಾಗಿಲ್ಲ’ ಎನ್ನಿಸಿಕೊಂಡಿದ್ದನೇ ಹೊರತು ಓಹೋ ಎಂಬ ಉದ್ಗಾರ ಜನಕನಾಗಲಿಲ್ಲ. ತುಘಲಕ್ ನಾಟಕದ ತುಘಲಕ್‌ನ ಪಾತ್ರ, ಯಯಾತಿಯ ಯಯಾತಿ, ಚೋರ ಚರಣದಾಸದ ಕಳ್ಳ ಹೀಗೆ ಶಂಕ್ರಣ್ಣನಿಗೆ ಹೆಸರು ತಂದುಕೊಟ್ಟ ಅಸಂಖ್ಯ ಪಾತ್ರಗಳನ್ನು ಶಶಿಧರ ಪ್ರಯತ್ನಿಸಿ ಸೋತಿದ್ದ. ಎಲ್ಲಿ ಹೋದರೂ ಪ್ರೇಕ್ಷಕರು ಶಂಕ್ರಣ್ಣನ ಜೊತೆ ಹೋಲಿಸುತ್ತಿದ್ದರು. ಜೊತೆಗೆ ಹೊಸ ಅಲೆಯ ನಾಟಕಗಳನ್ನೂ ನಿರ್ದೇಶಿಸಿದ್ದ. ಬಿರ್ಜು ಮಹಾರಾಜ್‌ರಿಂದ ಕಥಕ್ ಕಲಿತಿದ್ದ. ಪ್ರತಿಭಾ ಪ್ರಹ್ಲಾದ್ ಜೊತೆಗೆ ಭರತನಾಟ್ಯ ಬ್ಯಾಲೆ ರೂಪಿಸಿದ್ದ. ಎಷ್ಟೇ ಹರಸಾಹಸ ಮಾಡಿದರೂ ಅಪ್ಪನ ಖ್ಯಾತಿ, ಜನಪ್ರೀತಿಯ ಮುಂದೆ ತನ್ನ ಪ್ರಯತ್ನಗಳೆಲ್ಲ ಹೊಳೆಯಲ್ಲಿ ತೊಳೆದ ಹುಣಸೇಹಣ್ಣಿನಂತಾಗುತ್ತಿರುವುದು ಎದೆಯಲ್ಲೆಲ್ಲೋ ಮುಳ್ಳು ಚುಚ್ಚಿದಂತಾಗುತ್ತಿತ್ತು. ಹೋದಲ್ಲಿ ಬಂದಲ್ಲಿ ಆತ ಶಂಕ್ರಣ್ಣನ ಮಗನಾಗಿ ಕಾಣುತ್ತಿದ್ದನೇ ಹೊರತು ಶಶಿಧರನಾಗಿ ಅಲ್ಲ. ತಂದೆಯ ನಟನೆಯ ಅಗಾಧತೆಯ ಪ್ರಜ್ಞೆ ಹೆಚ್ಚಾದಂತೆ ಪಾತ್ರದಲ್ಲಿ ತಾದಾತ್ಮ್ಯ ಸಾಧಿಸಲು ಶಶಿಧರನಿಗೆ ಆಗುತ್ತಿರಲಿಲ್ಲ. ಆದರೂ ಅಪ್ಪನನ್ನು ಮೀರಿಸುವ ಜನಪ್ರಿಯತೆಯನ್ನು ಹೇಗಾದರೂ ಪಡೆಯಬೇಕೆಂಬ ಹಂಬಲ ಎಂದೋ ಜಾಗೃತವಾಗಿತ್ತು. ಪತ್ನಿ ರೂಪಾಗೆ ಗಂಡನ ಚಡಪಡಿಕೆ ಅರ್ಥವಾಗಿತ್ತು. ಹೀಗೆಲ್ಲ ಯೋಚನೆ ಮಾಡುವುದೂ ತಪ್ಪು ಎಂಬುದು ಅವಳ ನಿಲುವಾಗಿತ್ತು. ಆದರೆ ಶಶಿಧರ ಉಪದೇಶ ಕೇಳುವ ಮನಸ್ಥಿತಿಯವನಾಗಿರಲಿಲ್ಲ. ಕೆಲವೊಮ್ಮೆ ರಂಗಭೂಮಿಯನ್ನೇ ಬಿಟ್ಟು ಸಿನಿಮಾಕ್ಕೆ ಜಿಗಿದುಬಿಡೋಣ; ಅಲ್ಲಿಖ್ಯಾತಿ, ಹಣ ಎಲ್ಲ ಸಿಗುತ್ತದೆ. ಜನ ಹುಚ್ಚರಂತೆ ಮುತ್ತಿಕೊಳ್ಳುತ್ತಾರೆ ಎಂದು ಕನಸು ಕಾಣುತ್ತಿದ್ದ. ಇವರು ಶಶಿಧರನ ಅಪ್ಪ ಶಂಕ್ರಣ್ಣ ಎಂದು ಎಂದಾದರೂ ಒಂದು ದಿನ ಪರಿಚಯಿಸುವಂತಾಗಬೇಕು ಎಂಬ ಆಸೆ ತೆವಳುತ್ತಲೇ ಇತ್ತು.
ಶಂಕ್ರಣ್ಣನ ಸೂಕ್ಷö್ಮ ಮನಸ್ಸು ಇದನ್ನೆಲ್ಲ ಗಮನಿಸುತ್ತಿತ್ತು. ತಾನೆಂದೂ ಏನನ್ನೂ ಬಯಸಿ ಬೆನ್ನತ್ತಿದವನಲ್ಲ. ಎಲ್ಲವೂ ತಾನಾಗಿಯೇ ಬಂದವು. ಅದರಿಂದಲೇ ರಂಗಾಂತರಂಗ ಇಷ್ಟು ಬೆಳೆದಿದ್ದು. ಶಶಿಧರನ ಬದುಕಿಗೂ ನೆಲೆಯಾಗಿದ್ದು. ವಾಸ್ತವದಲ್ಲಿ ಶಶಿಧರನ ರಂಗಪ್ರವೇಶವೇ ಶಂಕ್ರಣ್ಣನಿಗೆ ಇಷ್ಟವಿರದ ಮಾತಾಗಿತ್ತು. ಹೆಂಡತಿ ಭಾಗೀರಥಿ ಯಾವಾಗಲೂ ಮಗ ಡಾಕ್ಟರ್ ಆಗುವ ಬಗ್ಗೆಯೇ ಮಾತಾಡುತ್ತಿದ್ದಳು. ಅವಳು ಅಕಾಲದಲ್ಲಿ ಕಣ್ಮುಚ್ಚಿದಾಗ ಮಗನ ಕೈಹಿಡಿದು ನಡೆಸಿದವ ಶಂಕ್ರಣ್ಣನೇ. ತನ್ನ ಹೆಸರು, ಖ್ಯಾತಿ ಬಳಸಿಕೊಂಡು ರಂಗಾಂತರಂಗ ಕಟ್ಟಿ, ಅದಕ್ಕೊಂದಿಷ್ಟು ಸರಕಾರದ ಅನುದಾನ ದೊರೆಯುವಂತೆ ಮಾಡಿದ್ದ. ಶಶಿಧರನಲ್ಲಿ ಡಾಕ್ಟರಾಗುವ ಯಾವ ಲಕ್ಷಣವೂ ಇರಲಿಲ್ಲ. ಶಿಕ್ಷಣ ಅರ್ಧಕ್ಕೇ ಶಿಳ್ಳೆ ಹೊಡೆದ ಮೇಲೆ ರಂಗಾಂತರಂಗಕ್ಕೇ ಜೋತುಬಿದ್ದಿದ್ದ.
ವಾಸ್ತವದಲ್ಲಿ ಮಗ ಬೆಳೆದು ನಿಂತ ಮೇಲೆ ಶಂಕ್ರಣ್ಣ ಬಣ್ಣ ಹಚ್ಚುವುದನ್ನೇ ಕಡಿಮೆ ಮಾಡಿದ್ದ. ವರ್ಷಕ್ಕೆ ಮೂರೋ ನಾಲ್ಕೋ ಪ್ರದರ್ಶನಗಳು. ಆದರೆ ನೂರು ಪ್ರದರ್ಶನಗಳಿಂದ ಬರುವಷ್ಟು ಪ್ರಚಾರ ಸಿಗುತ್ತಿತ್ತು. ಶಶಿಧರ ಒಳಗೊಳಗೇ ಮಿಡುಕುತ್ತಿದ್ದ. ‘ಅಪ್ಪ, ನಿನಗ್ಯಾಕೆ ಅದೆಲ್ಲ. ಸುಮ್ಮನೆ ಮನೇಲಿದ್ದು ವಿಶ್ರಾಂತಿ ತಗೋ. ಇತ್ತೀಚೆಗೆ ಆರೋಗ್ಯ ಬೇರೆ ಸರಿ ಇರೋದಿಲ್ಲ, ಇನ್ನೂ ಪಾರ್ಟ್ ಮಾಡಲೇಬೇಕಾ?’ ಎನ್ನುತ್ತಿದ್ದ. `ಪಾರ್ಟು ಮಾಡಬೇಡ ಅಂದ್ರೆ ಉಸಿರಾಡೋದೆ ಬೇಡ ಅಂದ್ಹಂಗೆ ಶಶಿ’ ಎಂಬ ಮಾತು ಮನಸ್ಸಿನೊಳಗೇ ಹೂತು ಹೋಗುತ್ತಿತ್ತು.. ಅದ್ಯಾಕೋ ಯಾರನ್ನೂ ಯಾವುದನ್ನೂ ವಿರೋಧಿಸದಷ್ಟು ಸಾತ್ವಿಕ ಭಾವ ಶಂಕ್ರಣ್ಣನದಾಗಿತ್ತು. ಬಹುಶಃ ಅದಕ್ಕೇ ಅವನ ಪಾತ್ರಗಳು ಅದ್ಭುತ ಎನ್ನಿಸುತ್ತಿದ್ದವು.
‘ಶಶಿ ನಿನಗೆ ಬೇಡ ಎಂದರೆ ಬೇಡ ಬಿಡು’- ಇದು ಶಂಕ್ರಣ್ಣ ಯಾವಾಗಲೂ ಹೇಳುತ್ತಿದ್ದ ಮಾತು. ಕೇಂದ್ರ ನಾಟಕ ಅಕಾಡೆಮಿಯ ಅಧ್ಯಕ್ಷ ಸ್ಥಾನ ಅರಸಿ ಬಂದಾಗಲೂ ಹೀಗೇ ಆಯಿತು. ಅಪ್ಪ, ನಿನಗೆ ಇಂಗ್ಲಿಷ್, ಹಿಂದಿ ಎರಡೂ ಬರೊಲ್ಲ. ಕನ್ನಡ ಬಿಟ್ರೆ ಬೇರೆ ಭಾಷೆ ಗೊತ್ತೇ ಇಲ್ಲ.. ದಿಲ್ಲಿಗೆ ಹೋಗಿ ಏನ್ ಮಾಡ್ತೀಯ?’ ಎಂದಿದ್ದ. ‘ಹೌದಾ? ಅಲ್ಲಿ ಇಂಗ್ಲಿಷ್ ಥಿಯೇಟರ್‌ನ ದೊಡ್ಡ ದೊಡ್ಡ ಮಂದಿ ಇರ್ತಾರಲ್ವ? ನಂಗೆ ಕಷ್ಟ ಆಗುತ್ತೇನೋ. ಬೇಡ ಬಿಡು. ನಾ ಒಪ್ಕೊಳೊಲ್ಲ’ ಅಂತ ಮಗನಿಗೆ ಪರೋಕ್ಷವಾಗಿ ಮಾತು ಕೊಟ್ಟು ಅದರಂತೆಯೇ ನಡೆದುಕೊಂಡಿದ್ದ ಶಂಕ್ರಣ್ಣ.
‘ನೀವು ಭೋಳೇ ಶಂಕ್ರ ಕಣ್ರೀ. ಬಂದಿದ್ದನ್ನ ಬಾಚ್ಕೊಳ್ಳೋಕೆ ಬರೋಲ್ಲ ನಿಮಗೆ’ ಭಾಗೀರಥಿ ಹಂಗಿಸುತ್ತಿದ್ದುದು ಕಪ್ಪುಬಿಳುಪು ಸ್ಮೃತಿ ಪಟಲದಲ್ಲಿ ತೇಲಿ ಹೋಗುತ್ತಿತ್ತು.
‘ಅಪ್ಪ, ನೀವು ಒಂದ್ ಮಾತ್ ಹೇಳಿದ್ರೆ ನಂಗೆ ಕೇಂದ್ರ ನಾಟಕ ಅಕಾಡೆಮಿ ಫೆಲೋಷಿಪ್ ಸಿಗುತ್ತೆ. ಬ್ಯಾಲೆ ಅಧ್ಯಯನಕ್ಕೆ ರಷ್ಯಾಗೆ ಹೋಗಬಹುದು’ ಶಶಿಧರ ತೋಡಿಕೊಂಡ ಆಸೆಗೆ ಇಲ್ಲ ಎನ್ನಲಿಲ್ಲ ಶಂಕ್ರಣ್ಣ. ಆದರೆ ಶಂಕ್ರಣ್ಣ ಯಾವುದನ್ನೂ ಮಿತಿ ಮೀರಿ ಪ್ರಯತ್ನಿಸುವವನಲ್ಲ. ಅದು ನಟನೆಯಾಗಲೀ ನೃತ್ಯವಾಗಲೀ ಬಿರುದಾಗಲೀ ಹಣವಾಗಲೀ ಆಯಾಚಿತವಾಗಿ ಬರಬೇಕು; ನೈಜ ಕಲೆ ಇದ್ದಲ್ಲಿ ಬಂದೇ ಬರುತ್ತದೆ ಎಂದು ನಂಬಿದವ. ದೂರದ ಸಂಬಂಧಿಕರು ಡೆಲ್ಲಿಯಲ್ಲಿ ಸರಕಾರದ ಉನ್ನತ ಹುದ್ದೆಯಲ್ಲಿದ್ದರು. ಅವರಿಗೆ ಒಂದು ಮಾತು ಈ ಕೆಲಸ ಮಾಡಿಕೊಡಿ ಅಂತ ಹೇಳಿದ್ದ ಅಷ್ಟೆ. ಅಪ್ಪನ ಈ ನಿರ್ಲಿಪ್ತತೆಯನ್ನು ಶಶಿಧರ ತಾನು ಬೆಳೆದರೆ ಅಪಾಯ ಎಂದು ಉದ್ದೇಶಪೂರ್ವಕವಾಗಿ ಹೀಗೆ ಮಾಡುತ್ತಿರಬಹುದು ಎಂದು ಸುಖಾಸುಮ್ಮನೆ ಅರ್ಥೈಸಿಕೊಂಡಿದ್ದ.
ಕಾರಣಾಂತರಗಳಿಂದ ಕೇಂದ್ರ ನಾಟಕ ಅಕಾಡೆಮಿಯ ಫೆಲೋಷಿಪ್ ಸಿಗದೇ ಇದ್ದಾಗ ಶಶಿಧರನ ಚಡಪಡಿಕೆ ಇನ್ನೂ ಹೆಚ್ಚಾಯಿತು. ಅಪ್ಪನನ್ನು ವಿನಾಕಾರಣ ದ್ವೇಷಿಸಲು ಶುರು ಮಾಡಿದ. ಅದೊಂದು ಮಾಡಿದ್ದರೆ ಅವನ ಘನತೆಗೇನು ಕುಂದು ಉಂಟಾಗುತ್ತಿತ್ತೆ? ಎಂಬ ವಿಷಯವೇ ದೊಡ್ಡದಾಯಿತು. ಶಶಿಧರನ ತ್ವೇಷ ಹೆಚ್ಚಾದಂತೆಲ್ಲ ಶಂಕ್ರಣ್ಣನ ಮನಸ್ಸು ಮಂಜುಗಡ್ಡೆಯಾಗತೊಡಗಿತು.
****
ಶಂಕ್ರಣ್ಣನ ಕೊನೆ ಪ್ರಯೋಗದ ಅಲೆ ತೀವ್ರವಾಗುತ್ತಿದ್ದಂತೆ ಇದು ಖಂಡಿತ ಕೊನೆ ಪ್ರಯೋಗ ಆಗಲಾರದು. ಇದು ಹೊಸ ಶಕೆಗೆ ನಾಂದಿ ಆದೀತು ಎಂಬ ಭೀತಿ ಶಶಿಧರನನ್ನು ಕಾಡತೊಡಗಿತು. ಪರೋಕ್ಷ ಉಪಾಯಗಳೆಲ್ಲ ಫಲಿಸದಾದಾಗ ನೇರ ದಾಂಗುಡಿ ಇಟ್ಟ. ‘ಅಪ್ಪ, ನೀ ಯಾಕೆ ರಾಮ ನಿರ್ಯಾಣ ಒಪ್ಕೊಂಡೆ. ಕಷ್ಟ ಆಗುತ್ತಲ್ವ? ಆಗಲ್ಲ ಅಂತ ಹೇಳಿಬಿಡು. ನನ್ನ ಬದ್ಲು ಮಗ ಮಾಡ್ತಾನೆ ಅಂತ ಹೇಳು ಬೇಕಾದ್ರೆ.. ನಿನ್ ಹೆಸರ ನಾ ಉಳಿಸ್ತೀನಿ.. ಇತ್ತೀಚೆಗೆ ನಿಂಗೆ ಉಸಿರಾಡೋದು ಕಷ್ಟ ಆಗ್ತ ಇದೆ. ಕುಣಿಯೋಕೆ ಹೇಗೆ ಸಾಧ್ಯ?’- ಬೆಣ್ಣೆಯಲ್ಲಿ ಕೂದಲು ತೆಗೆದಂತಿತ್ತು ಅವನ ದನಿ.
‘ನೀ ಹೇಳೋದೂ ನಿಜ ಶಶಿ. ಇತ್ತೀಚಿಗೆ ನಂಗೆ ಉಬ್ಬಸ ಹೆಚ್ಚಾಗ್ತಿದೆ. ಕುಣಿದು ಮಾತಾಡೋಕಾಗಲ್ಲ. ಆಟ ಬೇಡ ಅಂತೀಯ?’ ಶಶಿಯ ಮುಖವನ್ನೊಮ್ಮೆ ದಿಟ್ಟಿಸಿದ. ಶಶಿ ಹೌದೆಂಬಂತೆ ತಲೆ ಆಡಿಸಿದ. ಇಷ್ಟೆಲ್ಲ ಒದ್ದಾಡುವ ಬದಲಿಗೆ ನೇರವಾಗಿ ಮೊದಲೇ ಹೇಳಿದ್ದರೆ ಈ ಪರಿ ಬಿಟ್ಟಿ ಪ್ರಚಾರ ತಂದೆಗೆ ಸಿಗುತ್ತಿರಲಿಲ್ಲ ಅನ್ನಿಸಿತ್ತಾಗ. ‘ಆದರೆ..’ ತಡೆದು ಹೇಳಿದ ಶಂಕ್ರಣ್ಣ. ‘ಕೊನೆಯ ಆಟ.. ಹೆಚ್ಚೇನೂ ಕುಣಿಯುವುದು ಇಲ್ಲ ಅದರಲ್ಲಿ. ಸಂಭಾಷಣೆ ಜಾಸ್ತಿ. ಮುಗಿಸಿಬಿಡುತ್ತೇನೆ ಬಿಡು. ಮತ್ತೊಮ್ಮೆ ಬಣ್ಣ ಹಚ್ಚಲ್ಲ..’. ಶಶಿಯ ಮುಖ ಬಿಳುಚಿಕೊಂಡಿತು.
***
ಅರ್ಧಚಂದ್ರಾಕೃತಿಯ ರಂಗಸಜ್ಜಿಕೆ ರಂಗೇರಿತ್ತು. ಸಾಕೋಸಾಕು ಈ ನರಜನ್ಮ ಎಂಬಂತೆ, ವಿಷಾದವೇ ಮೂರ್ತಿವೆತ್ತಂತೆ ಕಂಗೊಳಿಸುತ್ತಿದ್ದ ರಾಮ. ಕಾಲಪುರುಷ ಬ್ರಾಹ್ಮಣನ ರೂಪದಲ್ಲಿ ಬಂದು ನಿನ್ನ ನಿರ್ಗಮನಕ್ಕೆ ಸಮಯವಾಯಿತು ಎಂದು ಹೇಳುವ ಪದ ಭಾಗವತರ ಗಂಭೀರ ಕಂಠದಿಂದ ಮಂದ್ರಸ್ಥಾಯಿಯಲ್ಲಿ ಬರುತ್ತಿತ್ತು. ದೂರ್ವಾಸ ಪ್ರವೇಶವಾಯಿತು. ಕಾಲನಿರ್ಣಯದಂತೆ ಕೊನೆಯ ಘಳಿಗೆ ಸಮೀಪಿಸಿತು.
ರಾಮ ತೆರಳೇ ತೆರಳಿದ ಸರಯೂ ನದಿ ದಂಡೆಗೆ. ಸೀತೆಯಿಲ್ಲದ ಒಬ್ಬೊಂಟಿ ರಾಮ. ಭಾಗವತರ ಕಂಠದಲ್ಲಿ ಅಯೋಧ್ಯೆಯ ಕಣ್ಣೀರೇ ರಾಮನನ್ನು ಆವರಿಸಿಬಿಡುವ ಸರಯೂ ನದಿಯಾಗಿತ್ತು. ನದಿಯ ಪಾತಳಿಗಳಲ್ಲಿ ಇಳಿದಿಳಿದಿಳಿದು ಭೂಲೋಕದ ಅವತಾರ ಮುಗಿಸುವ ಹಾವಭಾವಗಳಲ್ಲಿ ದೈವೀಕ ಯುಗವೊಂದು ಪರಿಸಮಾಪ್ತಿಯಾಗುತ್ತಿದ್ದ ರೂಹಿತ್ತು. ಶಂಕ್ರಣ್ಣನ ‘ರಾಮ’ ತೆರಳಿದ ಪರಿಗೆ ವೀಕ್ಷಕರು ಕಣ್ಣೀರಾದರು. ರಂಗಮಂಚದ ಮೇಲೆ ಹಾಗೆಯೇ ಒರಗಿದ ಶಂಕ್ರಣ್ಣ ಮಂದಸ್ಮಿತನಾಗಿದ್ದ. ತಾನು ಇಷ್ಟಪಟ್ಟ, ತನಗೆ ಹೆಸರುಕೊಟ್ಟ, ತಾನೇತಾನಾದ ಆ ರಾಮನ ಕೊನೆಯ ಉಸಿರಿನ ಕ್ಷಣಗಳನ್ನು ಅನುಭವಿಸಿದ್ದ.
ಭಾಗವತರು ಮಂಗಳಪದ ಹಾಡಿದರು.
ಶಂಕ್ರಣ್ಣನ ರಾಮ ರಂಗಸ್ಥಳದ ಮೇಲೆ ಹಾಗೆಯೇ ಒರಗಿಯೇ ಇದ್ದ. ಆಕಾಶದಂತೆ ಮೋಹಕ ರೂಪ, ಮಂಜಿನಂತೆ ಸ್ನಿಗ್ದವಾದ ಮುಖ, ಮುಗುಳ್ನಗು, ಗಾಂಭೀರ್ಯ, ಸತ್ ಚಿತ್ ಆನಂದ.
ಸರಯೂ ನದಿಯ ಸಲಿಲ ತರಂಗದಂತೆ ಚಂಡೆಯ ಕಿಂಕಿಣಿ ಮಂದಮಂದ್ರವಾಗುತ್ತ ಭಾವಲೀನವಾಯಿತು.
* ಜೈವಿನಾಯಕ








