ದೃಶ್ಯಕಾವ್ಯ
Advertisement
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
No Result
View All Result
 ದೃಶ್ಯಕಾವ್ಯ
No Result
View All Result
Home ಗಹನ

ಸ್ಯಾಂಕಿ ವರದಿ ಮರೆತ ರಾಜ್ಯದಲ್ಲಿ ಕೆರೆ ಆರತಿ

ಹೂಳು ತುಂಬಿದ ರಾಜಕೀಯದಿಂದ ಕೆರೆಗಳನ್ನು ಉಳಿಸಿ!

Pic: Naveen M

ಸ್ಯಾಂಕಿ ಕೆರೆಗೆ ಸೂರ್ಯನಾರತಿ!

ಪರಿಸರ ಲೇಖಕ ಶಿವಾನಂದ ಕಳವೆಯವರು ಜಲಮೂಲ ಕೆರೆಗಳ ಬಗ್ಗೆ ಬರೆದಿರುವ ಸಂಶೋಧನಾತ್ಮಕ ಲೇಖನವಿದು. ಕರುನಾಡ ಅಳಿದುಳಿದ ಕೆರೆಗಳ ಕಾಯಕಲ್ಪದ  ಬಗ್ಗೆ ಗಮನ ಹರಿಸುವುದು ಬಿಟ್ಟು ಆರತಿ ಮಾಡಿ ಪ್ರಚಾರ ಗಿಟ್ಟಿಸುವುದು ಯಾವ ಪುರುಷಾರ್ಥಕ್ಕೆ ಎಂಬುದು ಅವರ ಮೂಲಭೂತ ಪ್ರಶ್ನೆ.

***

ವಿಶ್ವ ಜಲ ದಿನದ ಅಂಗವಾಗಿ ಬೆಂಗಳೂರಿನಲ್ಲಿ ಕಾವೇರಿ ಆರತಿ ನಡೆಯುವ ಸುದ್ದಿ ಓದಿದೆ. ಜೀವ ಜಲ ನೀಡುವ ಕಾವೇರಿ ನದಿ ಕೊಡುಗೆ ನೆನಪಿಸಿಕೊಳ್ಳುವ, ಜಲಜಾಗೃತಿ, ಜಲ ಪ್ರತಿಜ್ಞೆ ಕಾರ್ಯಕ್ರಮ ಇದಂತೆ! ವಿಶೇಷವೆಂದರೆ ಬೆಂಗಳೂರು ಮಧ್ಯ ಭಾಗದ ಸ್ಯಾಂಕಿ ಕೆರೆಯಲ್ಲಿ ಕಾರ್ಯಕ್ರಮ ಆಯೋಜನೆಯಾಗಿದೆ. ಸಾವಿರಾರು ಜನ ಸೇರಬಹುದು, ಸರಕಾರೀ ಕಾರ್ಯಕ್ರಮಕ್ಕೆ ಕೋಟ್ಯಂತರ ರೂಪಾಯಿ ಖಾಲಿಯಾಗಬಹುದು. ಅಸಲಿಗೆ ಸ್ಯಾಂಕಿ ಯಾರೆಂಬುದು ಮೊದಲು ತಿಳಿಯಬೇಕು. ಮೈಸೂರು ಸೀಮೆಯ ಕೆರೆಗಳ ಬಗ್ಗೆ 1866 ರಲ್ಲಿ ಇದೇ ಸ್ಯಾಂಕಿ ನೀಡಿದ್ದ ವರದಿಯನ್ನು ಮಾನ್ಯ ಮುಖ್ಯ ಮಂತ್ರಿಗಳು, ಸಚಿವರು ಮೊದಲು ಓದಬೇಕು.

ಕಾರ್ಯಕ್ರಮ ಕೆರೆಯಲ್ಲಿ ನಡೆಯುತ್ತಿರುವ ನಿಮಿತ್ತ ರಾಜ್ಯದ ವಿಕೇಂದ್ರೀಕೃತ ನೀರಾವರಿಯ ಇತಿಹಾಸ ನೆನಪು ಮಾಡಿಕೊಳ್ಳಬೇಕು. ಕೆಂಪೇಗೌಡರ ನಮ್ಮ ಬೆಂಗಳೂರು ಸರಣಿ ಕೆರೆಗಳ ನೆಲೆ. ಕಳೆದ 2001 ರ ಉಪಗ್ರಹ ಆಧರಿತ ಚಿತ್ರ ವಿಶ್ಲೇಷಣಾ ವರದಿ ಪ್ರಕಾರ ನಗರ ಹಾಗೂ ಸುತ್ತಮುತ್ತ 2,789 ಕೆರೆಗಳು ಇದ್ದವು, ಈಗ ಅವುಗಳ ಮೂಲಸ್ವರೂಪ ಹಾಳಾಗಿವೆಯೆಂದು ದಾಖಲೆ ಹೇಳುತ್ತದೆ.1853-54ರಲ್ಲಿ ಮೈಸೂರು ಪ್ರಾಂತ್ಯದಲ್ಲಿ 26,450 ಕೆರೆಗಳು ಇದ್ದವಂತೆ! ರಾಜ್ಯದ 27,269 ಚದರ ಮೈಲಿ ಪ್ರದೇಶದಲ್ಲಿ ಅಂದು ಮೈಲಿಗೆ ಒಂದು ಕೆರೆಯಿದೆ, ಇಲ್ಲಿ ಹೊಸ ಕೆರೆ ನಿರ್ಮಾಣಕ್ಕೆ ಜಾಗ ಹುಡುಕುವುದೇ ಕಷ್ಟ ವೆಂದು ಪ್ರಜಾಪತಿನಿಧಿ ಸಭೆಯಲ್ಲಿ ಸರ್ ಶೇಷಾದ್ರಿ ಅಯ್ಯರ್ 1884 ರಲ್ಲಿ ಹೇಳಿದ್ದಾರೆ. ನಮ್ಮ ಕೆರೆಗಳು ಏನಾಗಿವೆಯೆಂದು 1997ರ ಲಕ್ಷ್ಮಣ ರಾವ್ ಸಮಿತಿ ವಿವರ ವರದಿಯಿದೆ.

ಇತಿಹಾಸದ ಇಷ್ಟು ಕತೆ ಹೇಳಿದ ಮೇಲೆ ಸ್ಯಾಂಕಿ ವರದಿಯ ಸ್ವಾರಸ್ಯ ಹೇಳಬೇಕು. ತೀವ್ರ ಜಲಕ್ಷಾಮ ಹಾಗೂ ಬರಗಾಲ ನಿವಾರಿಸಲು, ಇಲ್ಲವೇ ತೀವ್ರತೆ ತಗ್ಗಿಸಲು ನೀರಾವರಿ ಕಾರ್ಯಗಳನ್ನು ಪುನರ್ ವಿಮರ್ಶಿಸಲು 1866 ರಲ್ಲಿ ಭಾರತ ಸರ್ಕಾರ ಆಶಿಸಿತು. ಆಗ ಮೈಸೂರಿನ ಮುಖ್ಯ ಇಂಜಿನಿಯರ್ ಆಗಿದ್ದ ಮೇಜರ್ ಸ್ಯಾಂಕಿ ವಿವರ ವರದಿ ನೀಡಿದವರು. ಈಗ ಇರುವ ಕೆರೆ ಕಾಲುವೆಗಳ ದುರಸ್ತಿ,ಪುನರ್ನಿರ್ಮಾಣಕ್ಕೆ ಗಮನ ಕೊಡಬೇಕೆಂದು ಪ್ರತಿಪಾದಿಸಿದರು. ಸರಣಿ ಕೆರೆಗಳ ಮೈಸೂರಿನಲ್ಲಿ ಒಂದೊಂದು ಕೆರೆ ಜಾಲದಲ್ಲಿ 20 ರಿಂದ 200 ಕೆರೆಗಳು ಒಂದರ ಕೆಳಗೆ ಒಂದರಂತೆ ಇವೆ. ಕೆರೆ ಕೋಡಿ ತೊರೆಗಳು ಕೆರೆಯಿಂದ ಕೆರೆಗೆ ಹರಿಯುತ್ತವೆ. ಕೆರೆಗಳ ಸಮಗ್ರ ನಿರ್ಮಾಣಕ್ಕೆ (ಶಿವಮೊಗ್ಗ,ಕಡೂರು ಜಿಲ್ಲೆಯ ಕೆರೆ ಹೊರತುಪಡಿಸಿ)19,223 ಕೆರೆಗಳ ಅಭಿವೃದ್ಧಿಗೆ 48 ಲಕ್ಷ ರೂಪಾಯಿ ಯೋಜನೆ ವರದಿಯನ್ನು ಮೈಸೂರು ಸರಕಾರಕ್ಕೆ 1866 ರಲ್ಲಿ ಸ್ಯಾಂಕಿ ನೀಡಿದರು. ಸರಣಿ ಕೆರೆಗಳ ಹೂಳು ತೆಗೆಯುವ ಕಾರ್ಯ ವಿಧಾನ ವಿವರಿಸಿದ್ದರು.

12 ವರ್ಷಗಳಲ್ಲಿ ಈ ಕಾರ್ಯ ಮುಗಿಸಲು ನಿರ್ಧಾರವಾಯಿತು. ಈ ಕಾಮಗಾರಿ ಉಸ್ತುವಾರಿ ಇಂಜಿನಿಯರಿಂಗ್ ಇಲಾಖೆ ಮೂಲಕ ನಡೆಯಬೇಕೇ? ಕಂದಾಯ ಇಲಾಖೆ ಮೂಲಕ ನಡೆಯಬೇಕೇ? ಚರ್ಚೆಯ ಪತ್ರ ಸರಣಿ ನಡೆಯಿತು. ಇದೇ ಹೊತ್ತಿಗೆ ಮುಂದೆ 1876 -78 ರಲ್ಲಿ ರಾಜ್ಯಕ್ಕೆ ತೀವ್ರ ಬರ ಬಂದಿತು. ಸ್ಯಾಂಕಿ ವರದಿ ಮೂಲೆ ಸೇರಿತು. ಕೆರೆಗೆ ನಿಗದಿಪಡಿಸಿದ ಹಣ ಗಂಜಿ ಕೇಂದ್ರಗಳಿಗೆ ಖಾಲಿಯಾಯಿತು! ಮೈಸೂರು ಸೀಮೆಯ ಕೆರೆ ಪುನರುಜ್ಜೀವನ ಕಾರ್ಯ ಅಲ್ಲಿಗೇ ನಿಂತಿತು. ಮುಂದೆ ಕೆ ಆರ್ ಎಸ್ ಬೃಹತ್ ನೀರಾವರಿ ಯೋಜನೆ ಜಾರಿಯಾದ ಮೇಲೆ ಸಣ್ಣ ಕೆರೆಗಳ ಕುರಿತು ದೊಡ್ಡ ನಿರ್ಲಕ್ಷ್ಯ ಶುರುವಾಯಿತು.

ಮುಂದೆ 1882ರಲ್ಲಿ ಮದ್ರಾಸ್ ಸ್ಟಾಪರ್ಸ್ ರೆಜಿಮೆಂಟಿನ ಕರ್ನಲ್ ರಿಚರ್ಡ್ ಹೈರಾಮ್ ಸ್ಯಾಂಕಿ ಬೆಂಗಳೂರಿನಲ್ಲಿ 37 ಎಕರೆ ವಿಸ್ತೀರ್ಣದ ಇಂದಿನ ಸ್ಯಾಂಕಿ ಕೆರೆ ನಿರ್ಮಿಸಿದರು. 1876 ರಂದು ಬೆಂಗಳೂರು ಅನುಭವಿಸಿದ ತೀವ್ರ ಜಲಕ್ಷಾಮ ಗಮನಿಸಿ ಭವಿಷ್ಯದ ಜಲಕ್ಷಾಮ ಗೆಲ್ಲುವ ನಿಮಿತ್ತ ಈ ಕೆರೆ ನಿರ್ಮಾಣವಾಯಿತು.
ಇಂದು ವಿವಿಧ ಹಂತದ ಕಾವೇರಿ ನೀರಾವರಿ ಯೋಜನೆ ಮುಗಿಸಿದ ಬೆಂಗಳೂರು ನೀರಿನ ದಾಹ ಏರುತ್ತಿದೆ. ಇದಲ್ಲದೇ ಮಹಾ ನಗರದ ಮಡಿಲಿನಲ್ಲಿ 7 ಲಕ್ಷ ಕೊಳವೆ ಬಾವಿ ಇರುವ ಅಂದಾಜಿದೆ. ಕೆರೆ ಕಳೆಯುವ ಆಟವಾಡುತ್ತಾ ಪ್ರಸ್ತುತ ನಗರದ 50-60 ಕೆರೆಗಳಲ್ಲಿಯೂ ನೀರಿಲ್ಲ! ಈಗ ನೀರಿಗಾಗಿ 500 ಕಿಲೋ ಮೀಟರ್ ದೂರದ ಶರಾವತಿ ನದಿ ನೋಡುತ್ತಿದ್ದೇವೆ! ನೀರಿನ ಬಗ್ಗೆ ತುಸುವೂ ಕಾಳಜಿಯಿಲ್ಲದ ಸರಕಾರಗಳು ಕೆರೆ, ನದಿ ಕಳೆಯುವ ಆಟವಾಡುತ್ತಿವೆ. ಹಣ ಕೊಟ್ಟರೆ ನೀರು ಸಿಗುತ್ತದೆ, ಕುಡಿಯಲು ನೀರು ಎಲ್ಲಿಂದ ಬರುತ್ತದೆಂದು ತುಸುವೂ ಅರಿಯದ ಜನತೆ ಜಲಕ್ಷಾಮಕ್ಕೆ ನಿತ್ಯ ಆಹ್ವಾನ ನೀಡುತ್ತಿದೆ.

ಇಷ್ಟು ವರ್ಷ ಕೆರೆ ನುಂಗುತ್ತಾ ಈಗ ಸ್ಯಾಂಕಿ ಕೆರೆಯಲ್ಲಿ ಸರಕಾರ ಅಬ್ಬರದ ಕಾವೇರಿ ಆರತಿ ಮಾಡುವುದರಿಂದ ಜಲಜಾಗೃತಿ ಅಸಾಧ್ಯ. ಆರತಿ ಕೆರೆಗಲ್ಲ, ಜಲಕ್ಷಾಮವನ್ನು ಬಂಡವಾಳ ಮಾಡಿಕೊಂಡು ಹಣ ಹೊಡೆಯುವ ಯೋಜನೆ ರೂಪಿಸುವವರ ಮೂತಿಗೆ ದೊಡ್ಡ ಮಂಗಳಾರತಿ ಬೇಕು. ದಶಕಗಳಿಂದ ಎತ್ತಿನ ಹೊಳೆಯಂತಹ ಅದೆಷ್ಟು ಮರಿ ಎತ್ತಿನ ಹೊಳೆಯಲ್ಲಿ ಹಣ ನೀರಾಗಿದೆಯೆಂದು ರಾಜ್ಯ ಗಮನಿಸಬೇಕು. 39,173 ಕೆರೆಗಳ ರಾಜ್ಯದಲ್ಲಿ ಕೆರೆಯ ಹೂಳು ತೆಗೆಯುವ ಆದ್ಯತೆಯ ಕೆಲಸವನ್ನೇ ಮರೆತವರು ಇನ್ನೆಂಥ ಜಲದ ಮಾತಾಡಬಹುದು? ಎಲ್ಲೆಡೆಯೂ ಕೆರೆ ಒಣಗಿದ ಮೇಲೆ ಜಲಕ್ಷಾಮ ಶುರುವಾಗಿದೆ. ಬಿದ್ದ ಮಳೆ ಹನಿ ಅಲ್ಲಿಯೇ ಹಿಡಿಯುವ ಜಲಪಾತ್ರೆಯೇ ಈ ಕೆರೆಗಳು, ಇವನ್ನು ಮರೆತಿದ್ದಕ್ಕೆ ನಾಡಿಗೆ ಈ ಗತಿ ಬಂದಿದೆ. ಕೆರೆಗಳ ಬಗ್ಗೆ ಕಣ್ತೆರೆಸುವ ವಿವರ ಸ್ಯಾಂಕಿ ವರದಿ ಹುಡುಕಿ ಈಗಲಾದರೂ ಓದಬಾರದೇ?

Share8Tweet5SendShareShare
Next Post
ತಂದೆಯಿಂದ ಮಾರಲ್ಪಟ್ಟ ಮಗ ದೇವಪುತ್ರನಾದ!

ತಂದೆಯಿಂದ ಮಾರಲ್ಪಟ್ಟ ಮಗ ದೇವಪುತ್ರನಾದ!

Leave a Reply Cancel reply

Your email address will not be published. Required fields are marked *

Recommended

ಅಂತಿಮ ವಿದಾಯದ ಕಾಫಿ!

ಅಂತಿಮ ವಿದಾಯದ ಕಾಫಿ!

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಕಾಶಿಯ ಡೋಮ್‌ ಜನರು; ಅಂತ್ಯ ಸಂಸ್ಕಾರವೇ ಬದುಕು

ತಾಯ್ನೆಲದಲ್ಲೇ ನಿರಾಶ್ರಿತರಾದ ಕಾಶ್ಮೀರಿ ಪಂಡಿತರ ಕಥೆ-ವ್ಯಥೆ!

ತಾಯ್ನೆಲದಲ್ಲೇ ನಿರಾಶ್ರಿತರಾದ ಕಾಶ್ಮೀರಿ ಪಂಡಿತರ ಕಥೆ-ವ್ಯಥೆ!

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಹೂ ಮತ್ತು ಹುಡುಗಿ

ಹೂ ಮತ್ತು ಹುಡುಗಿ

ಕಚ್ಚುವ ನಾಯಿಗೆ ಬಿರಿಯಾನಿ, ಹಾಲು ಕೊಡುವ ದನಗಳಿಗೆ ಹುಲ್ಲಿಲ್ಲ!

ಕಚ್ಚುವ ನಾಯಿಗೆ ಬಿರಿಯಾನಿ, ಹಾಲು ಕೊಡುವ ದನಗಳಿಗೆ ಹುಲ್ಲಿಲ್ಲ!

ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು

ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು

Translate »
No Result
View All Result
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ

© 2026 JNews - Premium WordPress news & magazine theme by Jegtheme.