ಶ್ರೀನಿವಾಸ್ ಒಬ್ಬ ಉದ್ಯಮಿ. ಅದು ಹೇಗೋ ಚಿತ್ರರಂಗದ ಸಂಪರ್ಕಕ್ಕೆ ಬಂದರು. ಚಿತ್ರನಿರ್ಮಾಣದೆಡೆ ಅವರಿಗೆ ಕುತೂಹಲಭರಿತ ಆಸಕ್ತಿ. ಇದನ್ನರಿತ ಕೆಲವರು ಅವರನ್ನು ಮನವೊಲಿಸಿ ನಿರ್ಮಾಪಕರನ್ನಾಗಿಸಿಯೇಬಿಟ್ಟರು. ಚಿತ್ರದ ಮುಹೂರ್ತ ಭರ್ಜರಿಯಾಗಿ ನೆರವೇರಿತು. ಪತ್ರಿಕೆಗಳಲ್ಲಿ ಸುದ್ದಿಯೂ ಆಯಿತು. ಇಷ್ಟೂ ವರ್ಷಗಳಲ್ಲಿ ಎಂತೆಂತಹ ಉದ್ಯಮವನ್ನು ಕಟ್ಟಿ ಬೆಳೆಸಿದ್ದರೂ ಸಿಗದಿದ್ದ ಪ್ರಚಾರ ಒಂದೇ ಒಂದು ಸಿನಿಮಾದಿಂದ, ಅದೂ ಚಿತ್ರೀಕರಣ ಶುರುವಾಗುವ ಮೊದಲೇ ಸಿಕ್ಕಿಬಿಟ್ಟಿತ್ತು. ದಿನಬೆಳಗಾಗುವದರೊಳಗೆ `ನಿರ್ಮಾಪಕ’ ಶ್ರೀನಿವಾಸ್ ಆದರು. ಶುಕ್ರವಾರದ ಪುರವಣಿಗಳಲ್ಲಿ, ಟಿವಿ ವಾಹಿನಿಗಳಲ್ಲಿ ತಮ್ಮ ಬಿಂಬ ಕಂಡು ಬೀಗತೊಡಗಿದರು. ಕೇಳಬೇಕೆ? ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ..
ಕ್ರಮೇಣ ಕಿಚ್ಚು ದಾವಾನಲವಾಗತೊಡಗಿತು. ದುಡ್ಡು ನೀರಾಗತೊಡಗಿತು. ಚಿತ್ರರಂಗದೊಳಗಣ ಕಾಲೆಳೆಯುವಾಟಕ್ಕೆ ಕಾಲು ಜಾರತೊಡಗಿತು. ಸಿಕ್ಕುಗಳು ಸುತ್ತಿಕೊಳ್ಳತೊಡಗಿದವು. ನೀರಿಗಿಳಿದಾಗಿತ್ತು; ಈಜುವುದು ಅನಿವಾರ್ಯವಾಗಿತ್ತು. ಎಷ್ಟೇ ಕಷ್ಟ ಆದರೂ ಹಿಡಿದ ಕೆಲಸ ಮುಗಿಸಿಯೇ ತೀರುವ ಉದ್ಯಮಿಯ ಹಠ ಕೆಲಸ ಮಾಡಿ ಅಂತೂ ಇಂತೂ ಚಿತ್ರ ಮುಗಿಯಿತು. ಕಥೆ ಇಲ್ಲಿಗೆ ಮುಗಿಯಲಿಲ್ಲ. ಬಿಡುಗಡೆಯದೊಂದು ಮಹಾಸಮರ. ಬಿಡುಗಡೆ ಮಾಡಿ ಮುಗಿಸಿದಾಗ ಅನುಭವಿಸಿದ ಪಾಡು ಕಣ್ಣಲ್ಲಿ ರಕ್ತ ಬರುವುದೊಂದೇ ಬಾಕಿ. ಚಿತ್ರ ಒಂದು ವಾರದೊಳಗೆ ಚಿತ್ರಮಂದಿರಗಳಿAದ ಎತ್ತಂಗಡಿಯಾಯಿತು ಎಂಬಲ್ಲಿಗೆ ಈ ಕಥೆ ಮುಗಿಯಿತು. ಶ್ರೀನಿವಾಸ್ ನಿರ್ಧರಿಸಿದರು- ಮತ್ತೆಂದೂ ಚಿತ್ರ ನಿರ್ಮಾಣಕ್ಕೆ ಕೈ ಹಾಕಬಾರದು.
ಪತ್ರಿಕಾಗೋಷ್ಠಿಯಲ್ಲೇ ತಮ್ಮ ಕಥೆಯನ್ನೆಲ್ಲ ಬಿಚ್ಚಿಟ್ಟು ನಿವೃತ್ತಿ ಘೋಷಿಸಿದ `ಮಂದಾಕಿನಿ’ ಚಿತ್ರದ ನಿರ್ಮಾಪಕರ ಕತೆ ಇದು.
ʻರಕ್ಷಕ್’ ಚಿತ್ರದ ಭಾನುಪ್ರಕಾಶ್ ಕತೆಯೂ ಹೊರತೇನಿಲ್ಲ. ಚಿತ್ರೀಕರಣವೇ ಎಳೆದೆಳೆದು ಸಾಕಷ್ಟು ದುಡ್ಡು ಕೈಬಿಟ್ಟಿತ್ತು. ಬಿಡುಗಡೆಯೂ ತಡವಾಗಿ, ಅಂತೂ ಇಂತೂ ಬಿಡುಗಡೆಯಾಗಿ,ನಿರ್ಮಾಪಕ’ ಪಟ್ಟವನ್ನು ನೀಡಿತು. ಆ ಪಟ್ಟಕ್ಕೆ ತೆತ್ತ ದುಡ್ಡು? ಸಧ್ಯಕ್ಕೆ ಭಾನುಪ್ರಕಾಶ್ ಚಿತ್ರ ನಿರ್ಮಿಸುತ್ತಿಲ್ಲ.
ಏಕೆ ಹೀಗೆ?
ಚಿತ್ರ ನಿರ್ಮಾಣ ಒಂದು ಉದ್ಯಮ. ಹಲವು ನಿರ್ಮಾಪಕರು ಇದರಲ್ಲೇ ಸಖತ್ ಲಾಭ ಮಾಡಿಕೊಂಡಿದ್ದಾರೆ ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆ. ಕೆಲವರ ಐಷಾರಾಮವಂತೂ ಕಣ್ಣು ಕುಕ್ಕುವಂಥದ್ದು. ಕೇವಲ ಹಾಡೊಂದರ ಚಿತ್ರೀಕರಣಕ್ಕೆ ವಿದೇಶಕ್ಕೆ ಹೋಗಿಬರುವ, ಸುಮ್ಮನೆ ಒಂದು ಐಟೆಂ ಸಾಂಗ್ಗೆ ಲಕ್ಷಾಂತರ ಖರ್ಚು ಮಾಡಿ ಸೆಟ್ ಹಾಕಿಸುವ, ಫೈಟ್ ಸೀನೊಂದಕ್ಕೆ ಲಕ್ಷಾಂತರ ಉಡಾಯಿಸುವ ನಿರ್ಮಾಪಕರಿದ್ದಾರೆ. ವಿಚಿತ್ರವೆಂದರೆ ನಷ್ಟವೆಂದು ಬಡಬಡಿಸುತ್ತಲೇ ಒಂದರ ಹಿಂದೊಂದು ಚಿತ್ರವನ್ನು ಸೆಟ್ಟೇರಿಸುತ್ತಲೇ ಇರುತ್ತಾರೆ. ಇವರೊಂದು ಪ್ರಶ್ನಾರ್ಥಕ ಚಿಹ್ನೆ.
ಇನ್ನು ಕೆಲವು ನಿರ್ಮಾಪಕರಿರುತ್ತಾರೆ. ಉತ್ಸಾಹದಿಂದ ಬರುತ್ತಾರೆ. ಒಂದು ಚಿತ್ರ ಮುಗಿಯುವ ಹೊತ್ತಿಗೆ ಬೇಧಿ ಶುರುವಾಗಿರುತ್ತದೆ. ಮನೆ, ಸೈಟು ಎಲ್ಲ ಉಢೀಸ್ ಆಗಿರುತ್ತದೆ. ಸಾಲ ತೆಂಗಿನ ಮರ ಏರಿರುತ್ತದೆ. ಅಕಾಲ ವೃದ್ಧಾಪ್ಯ ಆವರಿಸಿಕೊಂಡು ಸುಸ್ತಾಗಿ ಮಲಗಿಬಿಡುತ್ತಾರೆ.
ಹೀಗೆಯೇ ಮಂಡ್ಯ, ಬೆಳಗಾವಿ ಕಡೆಯಿಂದ ಇದ್ದಬದ್ದ ಜಮೀನು ಮಾರಿ ಒಂದೇ ಚಿತ್ರ ನಿರ್ಮಿಸಿ ಗೋಳೋ ಎನ್ನುತ್ತ ಊರಿಗೆ ಮರಳಿದವರೂ, ಹೃದಯಾಘಾತವೇ ಆಗಿ ಮಣ್ಣಿಗೆ ಮರಳಿದ ಉದಾಹರಣೆಗಳೂ ಉಂಟು. ಇನ್ನು,ಮಿಸ್ ಕ್ಯಾಲಿಫೋರ್ನಿಯ’ ದಂತಹ ಚಿತ್ರ ನಿರ್ಮಿಸಿದ ಎನ್ನಾರೈಗಳಂಥವರು ಕೈ ಸುಟ್ಟುಕೊಂಡರೂ ಮುಖ ಬದನೆಕಾಯಿ ಮಾಡಿಕೊಳ್ಳದೇ, ಹುಳ್ಳಗೆ ನಕ್ಕು ಹೋದವರು ಇತ್ತ ತಲೆ ಇಟ್ಟು ಮಲಗಿಲ್ಲ!
ಹೊಸ ನಿರ್ಮಾಪಕರಿಗೆ ಮೊದಲು ಕಾಡುವ ಗ್ರಹಗತಿ ಅವರ ಅಜ್ಞಾನ. ಅವರಲ್ಲಿ ಮೊದಲನೆ ಕೆಟೆಗರಿ ಬಹುತೇಕ ಧಾರಾಳ ದುಡ್ಡು ಬರುವ ಉದ್ಯಮದಲ್ಲಿದ್ದವರು ಅಥವ ಅಂಥವರ `ಬೆಂಬಲ’ ಹೊಂದಿದವರಾಗಿದ್ದು ಸಿನಿಮಾ ನಿರ್ಮಾಣದ ಶೋಕಿ ಅದು ಹೇಗೋ ಅಂಟಿಕೊAಡಿರುತ್ತದೆ. ಇನ್ನೊಂದು ಕೆಟೆಗರಿಯವರು ಹುಂಬು ಧೈರ್ಯ ಮಾಡಿ ಮನೆ-ಹೊಲ ಮಾರಿ ಕಾಲು ಭಾಗ ಚಿತ್ರೀಕರಣ ಮುಗಿಯುವ ಹೊತ್ತಿಗೆ ಏದುಸಿರು ಬಿಡುವ ಬಡ ನಿರ್ಮಾಪಕರು. ದಿಢೀರ್ ಪ್ರಚಾರ, ಬಣ್ಣದ ಮಾಯೆ ಜೊತೆಗೆ ಸಿನಿಮಾದಲ್ಲಿ ಮುಖ ತೋರಿಸುವ ಆಶೆ ಇದ್ದರಂತೂ ದುಃಖಕ್ಕೆ ಮೂಲವೇ ಸೈ.
ಇಂಥವರಿಗೆ ಚಿತ್ರನಿರ್ಮಾಣಕ್ಕೆ ತೊಡಗಿದ ಕೂಡಲೆ ಮುಂದಿನ ಹೆಜ್ಜೆ ಹೇಗೆ ಇಡಬೇಕು ಎಂದು ಗೊತ್ತಿರುವುದಿಲ್ಲ. ಬಹುತೇಕ ಹೊಸ ನಿರ್ದೇಶಕರ ಕೈಗೆ ಸಿಲುಕಿರುವುದರಿಂದ, ಸ್ವತಃ ಗೊಂದಲದಲ್ಲಿರುವ ಅವರಿಂದ ನಿರ್ಮಾಪಕ ಮಾರ್ಗದರ್ಶನ ನಿರೀಕ್ಷಿಸುವುದು ಅಪಚಾರವಾದೀತು! ಓ ಹೀಗಾ ಪರಿಸ್ಥಿತಿ?’ ಎಂದು ಅರ್ಥವಾಗುವಷ್ಟರಲ್ಲಿ ಅರ್ಧ ದುಡ್ಡು ಕಳೆದಿರುವುದರಿಂದಹೇಗೋ’ ಮುಗಿಸುವುದು ಅನಿವಾರ್ಯವಾಗಿಬಿಡುತ್ತದೆ. ಅರ್ಧಕ್ಕೆ ನಿಂತ, ಮುಹೂರ್ತವಾಗಿ ನಿಂತ ಎಷ್ಟೋ ಚಿತ್ರಗಳಿವೆ ಎನ್ನವುದು ಬೇರೆಯದೇ ವಿಷಯ.
ಒಂದು ಚಿತ್ರ ನಿರ್ಮಾಣಕ್ಕೆ ಈ ಅನುಕ್ರಮಣಿಕೆಯಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ.
ಚಿತ್ರ ನಿರ್ಮಾಣ ಒಂದು ಪ್ರಾಜೆಕ್ಟ್. ಅದರ ಕೆಲಸ ಕಾರ್ಯಗಳನ್ನು ಗಣನೆಗೆ ತೆಗೆದುಕೊಂಡು ಗುರಿ ತಲುಪುವ ಅಂದರೆ ಯಶಸ್ವಿಯಾಗಿ ಪ್ರಾಜೆಕ್ಟ್ ಮುಗಿಸುವ ಕಾರ್ಪೊರೇಟ್ ಪ್ರವೃತ್ತಿ ಹಿಂದಿ ಚಿತ್ರರಂಗದಲ್ಲಿ ಚಲಾವಣೆಗೆ ಬರುತ್ತಿದೆ. ನೀವು ಒಬ್ಬ ನಿರ್ಮಾಪಕರಾಗಿ ಆ ರೀತಿ ಹೋಗುವುದಾದರೆ.. ಮಾಡಬೇಕಾದ್ದು..
- ನಿರ್ದೇಶಕರ ಆಯ್ಕೆ
ಈ ಹಂತದಲ್ಲಿ ಯಶಸ್ವೀ ನಿರ್ದೇಶಕರನ್ನು ನೀವೇ ಅರಸಬಹುದು ಅಥವ ಅವಕಾಶ ಅರಸಿ ಬಂದ ಹೊಸ ನಿರ್ದೇಶಕನ ಸಿನಿಮಾ ಮಾಡುವ ನಿರ್ಧಾರ ತೆಗೆದುಕೊಳ್ಳಬಹುದು. - ಕಥೆ
ನಿರ್ದೇಶಕರಲ್ಲಿ ಸಿದ್ಧವಿರುವ ಕಥೆಯನ್ನು ಕೇಳಬಹುದು. ಅಥವ ನಿಮ್ಮ ಗಮನದಲ್ಲಿ ಯಾವುದಾದರೂ ಕಥೆ, ಕಾದಂಬರಿ, (ರೀಮೇಕ್ ಮಾಡುವುದಾದರೆ ಬೇರೆ ಭಾಷೆಯ ಸಿನಿಮಾ ಡಿವಿಡಿ?) ಇದ್ದಲ್ಲಿ ಅದನ್ನೇ ಚಿತ್ರಕಥೆ ಮಾಡಲು ಸೂಚಿಸಬಹುದು. - ಚಿತ್ರಕ್ಕಾಗಿಯೇ ಕಥೆ ಬರೆಯಿಸುವುದು
ನಿರ್ದೇಶಕರು ಚಿತ್ರಕ್ಕಾಗಿಯೇ ಕಥೆ ಬರೆಯುವುದುಂಟು ಅಥವ ಕಥೆಗಾರರಿಂದ ಬರೆಯಿಸುವುದುಂಟು. ಅಲ್ಲಿಂದ ನಿರ್ಮಾಪಕರ ಖರ್ಚಿನ ಬಾಬತ್ತು ಆರಂಭ. ಒಳ್ಳೆಯ ದರ್ಜೆಯ ಹೊಟೇಲ್ ಅಥವ ರೆಸಾರ್ಟ್ನಲ್ಲೆಲ್ಲೋ ರೂಮು ಮಾಡಿಕೊಟ್ಟು ಊಟ, ತಿಂಡಿ, ಸಿಗರೇಟು ವಗೈರೆ ವಗೈರೆ ಖರ್ಚುಗಳು ಶುರುವಾಗುತ್ತವೆ. (ಇದಕ್ಕೂ ಮೊದಲು ನಿರ್ದೇಶಕರಿಗೆ ಹಾಗೆಯೇ ಕಥೆಗಾರರಿಗೆ ಮುಂಗಡ ಕೊಡಬೇಕಾಗುತ್ತದೆ ನೆನಪಿರಲಿ) - ಚಿತ್ರಕಥೆ, ಸಂಭಾಷಣೆ
ಈಗೀಗ ನಿರ್ದೇಶಕರೇ ಎಲ್ಲವನ್ನೂ ಬರೆದುಕೊಳ್ಳುತ್ತಾರೆ. ಆಗೆಲ್ಲ ಚಿ| ಉದಯಶಂಕರ್, ಹುಣಸೂರು ಕೃಷ್ಣಮೂರ್ತಿಯಂಥವರು ಚಿತ್ರಕಥೆ, ಸಂಭಾಷಣೆ ಬರೆಯುವುದರಲ್ಲೂ ಪ್ರಸಿದ್ಧರಾಗಿದ್ದರು. ಬರವಣಿಗೆಗೆಂದೇ ಒಳ್ಳೆಯ ಹೊಟೇಲ್ನಲ್ಲಿ `ರೂಂ ಹಾಕಿಸಿ’ ಸಕಲವನ್ನೂ ವ್ಯವಸ್ಥೆಗೊಳಿಸಬೇಕು. - ಸಂಗೀತ ನಿರ್ದೇಶಕನ ಆಯ್ಕೆ
ಏತನ್ಮಧ್ಯೆ, ಸೂಕ್ತ ಸಂಗೀತ ನಿರ್ದೇಶಕನನ್ನು ಆಯ್ದುಕೊಂಡು, ಮುಂಗಡ ನೀಡಿ ಬುಕ್ ಮಾಡಿಕೊಳ್ಳಬೇಕು. ನಿರ್ದೇಶಕರೊಂದಿಗೆ ಚರ್ಚಿಸಿ ಯಾವ ಸಂದರ್ಭದಲ್ಲಿ ಯಾವ ರೀತಿಯ ಹಾಡು ಬೇಕು ಎಂದು ವಿಮರ್ಶಿಸಿ, ಟ್ಯೂನ್ ಹಾಕುತ್ತಾರೆ. ನೆನಪಿರಲಿ, ಈಗೆಲ್ಲ ಟ್ಯೂನ್ಗೆ ಹಾಡು ಬರೆಯುತ್ತಾರೆಯೇ ಹೊರತು ಬರೆದ ಹಾಡಿಗೆ ಟ್ಯೂನ್ ಹಾಕುವುದಿಲ್ಲ. - ಗೀತರಚನೆ
ಟ್ಯೂನ್ ಹಾಕಿದ ಸಂಗೀತಕ್ಕೆ ಅಂದವಾಗಿ ಪದಜೋಡಣೆ ಮಾಡಿಕೊಡುವವರ ತಲಾಷ್ ಈ ಹಂತದಲ್ಲಿ ನಡೆಯುತ್ತದೆ. ಕೆ.ಕಲ್ಯಾಣ್, ಕವಿರಾಜ್, ಶಿವಸಮಯ, ವಿ.ಮನೋಹರ್, ಉಪೇಂದ್ರ, ಯೋಗಿರಾಜ ಭಟ್, ಎಂ.ಎನ್.ವ್ಯಾಸರಾವ್, ದೊಡ್ಡರಂಗೇಗೌಡ.. ಯಾರಾದರೂ ಸರಿ.. ಗೀತರಚನೆ ನಿರ್ದೇಶಕ, ನಿರ್ಮಾಪಕ ಇಬ್ಬರಿಗೂ ಓಕೆ ಆದರೆ ಓಕೆ. - ಹಾಡುಗಳ ಧ್ವನಿಮುದ್ರಣ
ಸೂಕ್ತ ಮುಹೂರ್ತ ನೋಡಿ, ಸ್ಟುಡಿಯೋ ಬುಕ್ ಮಾಡಿ ಹಾಡುಗಳ ಧ್ವನಿಮುದ್ರಣ ನಡೆಯುತ್ತದೆ. ಇದಕ್ಕೆ ಸಂಗೀತ ನಿರ್ದೇಶಕ ಸಾಕಷ್ಟು ಪರಿಶ್ರಮ ಪಡಬೇಕಾಗುತ್ತದೆ. ಇನ್ನು ಸೋನು ನಿಗಮ್, ಶ್ರೇಯಾ ಘೋಷಾಲ್ ಕಂಠಗಳೇ ಬೇಕು ಎಂದಾದಲ್ಲಿ, ಅವರನ್ನು ಬೆಂಗಳೂರಿಗೆ ಕರೆಸುವುದಕ್ಕಿಂತ, ಟ್ರಾö್ಯಕ್ ಸಿಂಗರ್ ಗಳಿಂದ ಹಾಡಿಸಿ, ಮುಂಬಯಿಗೆ ಸಿಡಿ ಕಳುಹಿಸಿ ಅಲ್ಲಿನ ಸ್ಟುಡಿಯೋದಲ್ಲೇ ಹಾಡಿಸುತ್ತಿರುವುದು ಸಧ್ಯದ ಟ್ರೆಂಡು. ಈ ಪ್ರಕ್ರಿಯೆಯಲ್ಲಿ ಸಾಕಷ್ಟು ಹಣ ಹೂಡಬೇಕಾಗುತ್ತದೆ. (ಉದಾ: ಸೋನು ನಿಗಮ್ಗೆ ಒಂದು ಹಾಡಿಗೆ ಒಂದೂವರೆ ಲಕ್ಷ ಸಂಭಾವನೆ. ಅಲ್ಲೇ ಕ್ಯಾಶ್ ಕೊಟ್ಟು ಬರಬೇಕು! ) - ಚಿತ್ರೀಕರಣ ತಾಣ
ಚಿತ್ರದಲ್ಲಿ ನಡೆಯುವ ಘಟನೆಗಳಿಗೆ, ಹಾಡುಗಳಿಗೆ ಅನುಗುಣವಾಗಿ ಶೂಟಿಂಗ್ ಲೊಕೇಶನ್ ನಿಗದಿಪಡಿಸಿಕೊಳ್ಳುವ ಹಂತವಿದು. ಈ ಹಂತದಲ್ಲಿ ಛಾಯಾಗ್ರಾಹಕ ನಿಗದಿಯಾಗಿರಲೇಬೆಕು. ನಿರ್ಮಾಪಕ, ನಿರ್ದೇಶಕರ ಜೊತೆ ಛಾಯಾಗ್ರಾಹಕನೂ ಹಲವಾರು ಕಡೆ ಒಂದು ರೌಂಡ್ ಸುತ್ತಲೇಬೇಕು. ಅಂತಿಮವಾಗಿ ನಿರ್ದೇಶಕ ಚಿತ್ರೀಕರಣ ತಾಣಗಳನ್ನು ಅಂತಿಮಗೊಳಿಸುತ್ತಾನೆ; ನಿರ್ಮಾಪಕನ ಅಂಕಿತದೊAದಿಗೆ. - ನಾಯಕ, ನಾಯಕಿ, ಪಾತ್ರವರ್ಗಗಳ ಆಯ್ಕೆ
ಇದು ಮಹತ್ವದ ಘಟ್ಟ. ಕಥೆಗೆ ತಕ್ಕಂತೆ ಪಾತ್ರವರ್ಗ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆದರೆ ನೀವು ಆಯ್ದುಕೊಂಡ ನಾಯಕ- ನಾಯಕಿಯ ಡೇಟ್ಸ್ ಇದೆಯಾ? ಅವರ ಸಂಭಾವನೆ ಕೊಟ್ಟು ಪೂರೈಸುವ ತಾಖತ್ತು ನಿಮಗಿದೆಯೇ ಎಂಬ ಆತ್ಮಾವಲೋಕನ ಈ ಹಂತದಲ್ಲಿ ಒಳ್ಳೆಯದು. ಯಾಕೆಂದರೆ ನಾಯಕನೊಬ್ಬನ ಸಂಭಾವನೆ ಚಿತ್ರದ ಬಜೆಟ್ನ ಅರ್ಧದಷ್ಟಿರುತ್ತದೆ. ಕನ್ನಡದಲ್ಲಿ ಯಶಸ್ವೀ ನಾಯಕರ ಸಂಭಾವನೆ ಸರಾಸರಿ ಚಿತ್ರವೊಂದಕ್ಕ್ಕೆ 50 ಲಕ್ಷ ರೂಪಾಯಿ!
10 ಬಜೆಟಿಂಗ್
ಇದು ನಿರ್ಮಾಪಕನಿಗೆ ಮಹತ್ವದ ಅಂಶ. ಯಾವುದೇ ಹಂತದಲ್ಲಿ ಬಜೆಟಿಂಗ್ ಮಾಡಿದರೂ ಅದು ಅರ್ಧಂಬರ್ಧ ಆಗಿರುತ್ತದೆ ಮತ್ತು ಮೊದಲೇ ಒಂದಿಷ್ಟು ದುಡ್ಡು ಖರ್ಚಾಗಿರುತ್ತದೆ. ನಾಯಕ, ನಾಯಕಿ, ಸಂಗೀತ ನಿರ್ದೇಶಕ, ಗಾಯಕರು, ಚಿತ್ರೀಕರಣ ತಾಣ, ಚಿತ್ರೀಕರಿಸಲು ಬಳಸುವ ಕಚ್ಚಾ ಫಿಲಂಗಳು, ಶೂಟಿಂಗ್ ದಿನಗಳು, ಜನರೇಟರ್ ಸೇರಿದಂತೆ ಲೈಟಿಂಗ್ ಯೂನಿಟ್, ಕ್ಯಾಮರಾ, ಛಾಯಾಗ್ರಾಹಕ, ಚಿತ್ರೀಕರಣ ತಾಣದ ಬಾಡಿಗೆ, ಅನುಮತಿಗೆ ಖರ್ಚು, ಸೆಟ್ಟು, ವಸ್ತಾçಲಂಕಾರ, ಊಟ-ತಿಂಡಿ, ಎಲ್ಲ ಕೆಲಸಗಾರರ ಸಂಭಾವನೆ, ವಿಶೇಷ ಸಲಕರಣೆಗಳು (ಉದಾ: ಹೆಲಿಕಾಪ್ಟರ್ ಇತ್ಯಾದಿ) ಹೀಗೆ ಎಲ್ಲ ಅಂಶಗಳನ್ನೂ ಪರಿಗಣಿಸಬೇಕಾಗುತ್ತದೆ. ಆದರೆ ಕೆಲವೊಂದು ಖರ್ಚುಗಳು ಸ್ಥಳದಲ್ಲಿ ಹುಟ್ಟಿಕೊಳ್ಳುತ್ತವೆ. ಬಜೆಟ್ ಮಾಡುವಾಗ ನಿಲುಕುವದಿಲ್ಲ. ಉದಾ: ಹಾಡೊಂದಕ್ಕೆ ಸೆಟ್ ಹಾಕುವುದು, ವಿದೇಶದಲ್ಲಿ ಚಿತ್ರೀಕರಣ ಇತ್ಯಾದಿ. ಈ ಕಾರಣಗಳಿಗಾಗಿಯೇ ಪ್ರತಿ ನಿರ್ಮಾಪಕನೂ ಚಿತ್ರೀಕರಣ ಮುಗಿದಾಗ `ಅಂದುಕೊAಡಿದ್ದಕ್ಕಿAದ ಒಂದೂವರೆ ಪಟ್ಟು ಹೆಚ್ಚು ಖರ್ಚಾಯಿತು’ ಎಂದು ಹೇಳುವುದು.
- ದುಡ್ಡು ಕಾಸು
ಸಿನಿಮಾದ ಆರಂಭದಲ್ಲಿಅರ್ಪಿಸುವ’ ಎಂಬ ಶೀರ್ಷಿಕೆ ನೋಡಿರುತ್ತೀರಿ. ಹಾಗಂದರೆ ಏನು ಎಂದು ತಲೆ ಕೆಡಿಸಿಕೊಂಡಿರುತ್ತೀರಿ. ಅರ್ಪಿಸುವ ಎಂದರೆ ಹಣಕಾಸು ವ್ಯವಸ್ಥೆ ಮಾಡಿದವರು.. ಅಂದರೆ ನಿರ್ಮಾಪಕನಿಗೆ ಬಡ್ಡಿಯ ಮೇಲೋ, ವiತ್ತೊಂದರ ಆಧಾರದ ಮೇಲೋ ಹಣ ನೀಡಿದವರು.. ಎಂದರ್ಥ. ಕನ್ನಡ ಚಿತ್ರರಂಗದಲ್ಲಿಅರ್ಪಿಸುವ’ ವಿಭಾಗದ ಹಿಡಿತ ಬಹುತೇಕ ತೆಲುಗರ ಕೈಯಲ್ಲೇ ಇದೆ. ಹೀಗಾಗಿಯೇ ಇಲ್ಲಿ ಸಾಯಿಕುಮಾರ್ ಇದ್ದಕ್ಕಿದ್ದಂತೆ ನಾಲ್ಕೆöÊದು ಚಿತ್ರಗಳಲ್ಲಿ ಹೀರೋ ಆಗಬಲ್ಲರು, ಸಾಯಿಪ್ರಕಾಶ್ ಸೋತರೂ ಗೆದ್ದರೂ ವರ್ಷಕ್ಕೆ ಕನಿಷ್ಟ ನಾಲ್ಕು ಚಿತ್ರ ನಿರ್ದೇಶಿಸಬಲ್ಲರು. ತೆಲುಗು ವಾಳ್ಳುಗಳ ಮೂಲಕ ಹಣಕಾಸು ವ್ಯವಸ್ಥೆ ಮಾಡಿಕೊಟ್ಟು ಹಿರೋ ಕೂಡ ಆಗಬಹುದು! ಇರಲಿ ಬಿಡಿ. ಗಾಂಧಿನಗರದ ಹಣಕಾಸು ಹಿಡಿತ ತೆಲುಗಾನಿಕಿ ಪೈಕಿಯ ಕೈಲಿದ್ದಿದ್ದಂತೂ ಕಣ್ಣಿಗೆ ಹೊಡೆಯುವ ಸತ್ಯ.
ನಿರ್ಮಾಣೋತ್ತರ ಕೆಲಸಗಳು:
ಸಂಕಲನ, ಡಬ್ಬಿಂಗ್, ಹಿನ್ನೆಲೆ ಸಂಗೀತ, ಪ್ರಚಾರ ಮತ್ತು ಬಿಡುಗಡೆ ಹಂತಗಳು ನಿರ್ಮಾಣೋತ್ತರ (ಪೋಸ್ಟ್ ಪ್ರೊಡಕ್ಷನ್) ಹಂತದಲ್ಲಿ ಮುಖ್ಯ.
ಸಂಕಲನ ಕೇಂದ್ರದಲ್ಲಿ ಸಂಕಲನಗೊAಡ ಚಿತ್ರಕ್ಕೆ ಪಾತ್ರಧಾರಿಗಳು ಅಥವ ಧ್ವನಿದಾನ ಕಲಾವಿದರು ಡಬ್ಬಿಂಗ್ ಮಾಡುತ್ತಾರೆ. ನಂತರ ಸಂಗೀತ ನಿರ್ದೇಶಕ ಸೂಕ್ತ ಹಿನ್ನೆಲೆ ಸಂಗೀತ ಅಳವಡಿಸುತ್ತಾನೆ.
ಚಿತ್ರ ಸಂಪೂರ್ಣವಾಗಿ ತೆರೆಗೆ ಸಿದ್ಧವಾಗುವ ಹೊತ್ತಿಗೆ ಪ್ರಚಾರದ ಭರಾಟೆ ಹಂತ ಹಂತವಾಗಿ ಏರುತ್ತ ತಾರಕಕ್ಕೆ ಹೋಗುವುದು ವಾಡಿಕೆ. ಸಿನಿಮಾವೊಂದರ ಬಜೆಟ್ನ ಕನಿಷ್ಟ ಶೇ.20ರಷ್ಟು ಹಣವನ್ನು ಪ್ರಚಾರಕ್ಕೆ ವಿನಿಯೋಗಿಸುವುದು ಉಂಟು.
ಇಷ್ಟೆಲ್ಲದರ ನಡುವೆ ಸೆನ್ಸಾರ್ಅನ್ನು ಮರೆಯುವ ಹಾಗಿಲ್ಲ. ಸೆನ್ಸಾರ್ ಮಂಡಳಿಯಿAದ ಓಕೆ ಆಗಿ ಬಂದರೆ ಯುದ್ಧ ಗೆದ್ದ ಹಾಗೆ. ವಿವಾದಾತ್ಮಕ ಚಿತ್ರಗಳು, ಹಿಂಸೆ-ಕಾಮ ವೈಭವೀಕೃತ ಚಿತ್ರಗಳು ಸೆನ್ಸಾರ್ ಮುಷ್ಟಿಯಿಂದ ಪಾರಾಗುವುದು ಸುಲಭವಲ್ಲ.
ಚಿತ್ರ ಬಿಡುಗಡೆ ಎನ್ನುವುದು ನಿರ್ಮಾಪಕನಿಗೆ ಹೆರಿಗೆ ನೋವಿನಷ್ಟು ಸಂಕಟ. ಒಂದೆಡೆ ಚಿತ್ರ ಯಶಸ್ವಿಯಾದರೆ ಓಕೆ, ಗೋತಾ ಹೊಡೆದರೆ ದುಡ್ಡು ಹೊಳೆಯಲ್ಲಿ ಸುರಿದಂತೆ ಎಂಬ ಆತಂಕ. ಇನ್ನೊಂದೆಡೆ ಹೆಚ್ಚು ಹೆಚ್ಚು ಥಿಯೇಟರುಗಳಲ್ಲಿ ಬಿಡುಗಡೆ ಮಾಡಬೇಕು ಎಂದರೆ ಹೆಚ್ಚು ಹೆಚ್ಚು ಪ್ರಿಂಟ್ ಹಾಕಿಸಬೇಕು. ಒಂದು ಪ್ರಿಂಟ್ ಹಾಕಿಸಲು ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಅಂಥ ಹತ್ತು ಪ್ರಿಂಟ್ ಹಾಕಿಸಲೂ ಸಿಕ್ಕಾಪಟ್ಟೆ ದುಡ್ಡು ಹೂಡಬೇಕಾಗುತ್ತದೆ. ಈ ನಡುವೆ ಕೆಸೆಟ್ ಬಿಡುಗಡೆ ಸಮಾರಂಭ, ಪತ್ರಿಕಾಗೋ಼ಷ್ಠಿ, ಜಾಹಿರಾತುಗಳಿಗೆ ಸಾಕಷ್ಟು ದುಡ್ಡು ಖರ್ಚಾಗಿರುತ್ತದೆ!
(ವಿತರಕರು ಚಿತ್ರ ಖರೀದಿಸಲು ಮುಂದೆ ಬಂದು, ರೇಟು ಹೊಂದಾಣಿಕೆಯಾದಲ್ಲಿ ಚಿತ್ರವನ್ನು ಮಾರಿ ನಿರಾಳವಾಗಿರಬಹುದು. ಸ್ವತಃ ವಿತರಣೆಗೆ ನಿಲ್ಲಲು ಎಂಟೆದೆ ಬೇಕು)
ಇಷ್ಟೆಲ್ಲ ಶ್ರಮದ ಹಿಂದೊಂದು ನಿರೀಕ್ಷೆ ಇರುತ್ತದೆ. ಚಿತ್ರ ಗೆದ್ದರಂತೂ ಸಂತೋಷ. ಸುಮಾರಾಗಿ ಹೋದರೂ ಸಾಕು. ಕ್ಯಾಸೆಟ್ನಿಂದ ಇಷ್ಟು, ಟಿವಿ ಹಕ್ಕುಗಳಿಂದ ಇಷ್ಟು, ಎಫ್ಎಂ ರೇಡಿಯೋಗಳು ಮತ್ತಿತರ ಪ್ರಾಯೋಜಕರಿಂದ ಇಷ್ಟು, ಒಳ್ಳೆಯ ಚಿತ್ರವಾದಲ್ಲಿ ಸಬ್ಸಿಡಿ ಇಷ್ಟು ಲಕ್ಷ, ಪ್ರಶಸ್ತಿ ಬಂದರೆ ಮೇಲಿಂದ ಇಷ್ಟು ಲಕ್ಷ, ಮಕ್ಕಳ ಚಿತ್ರವಾದರೆ ಸಬ್ಸಿಡಿ ಇನ್ನಷ್ಟು ಲಕ್ಷ ಹೆಚ್ಚು…. ಹೀಗೆ ಲೆಕ್ಕಾಚಾರದಲ್ಲಿ ಲಾಭ ಆಗಲೇಬೇಕು. ಆದರೆ ಎಲ್ಲವೂ ಅಂದುಕೊಂಡಂತೆ ಆಗುವುದಿಲ್ಲ; ಕೆಲವರಿಗೆ ಮಾತ್ರ ಆಗುತ್ತದೆ. (ಉದಾ: ಬರಗೂರು ರಾಮಚಂದ್ರಪ್ಪನವರು ಚಿತ್ರ ನಿರ್ದೇಶಿಸಿದರೆ ಒಂದು ಪ್ರಶಸ್ತಿ ಗ್ಯಾರೆಂಟಿ! ಇದರಿಂದ ಸಬ್ಸಿಡಿ ಗ್ಯಾರೆಂಟಿ. ಕಲಾತ್ಮಕ ಚಿತ್ರಗಳ ಬಜೆಟ್ಟೂ ಕಡಿಮೆ ಇರುತ್ತದೆ. ಇದರಿಂದ ಹೆಸರಿಗೂ ಉಸಿರಿಗೂ ಕಲಾತ್ಮಕ ಚಿತ್ರನಿರ್ಮಾಣವೇ ವಾಸಿ ಎಂಬ ನಿರ್ಧಾರಕ್ಕೆ ಬಂದವರೂ ಇದ್ದಾರೆ. ಉದಾ: ದಿ.ಸೌಂದರ್ಯ, ಜಯಮಾಲಾ, ಬಸಂತಕುಮಾರ್ ಪಾಟೀಲ್ ಇತ್ಯಾದಿ )
ಇದೇ ಚಿತ್ರೋದ್ಯಮ ಮತ್ತು ಇತರ ಉದ್ಯಮಗಳ ನಡುವಿನ ವ್ಯತ್ಯಾಸ. ಇತರ ಉದ್ಯಮಗಳಲ್ಲಿ ಇಷ್ಟು ಬಂಡವಾಳ ಹೂಡಿಕೆಗೆ ಇಷ್ಟು ಲಾಭ ಬಂದೇಬರುತ್ತದೆ ಎಂಬ ನಿಖರ ಲೆಕ್ಕಾಚಾರವಿರುತ್ತದೆ. ಮಾರುಕಟ್ಟೆ ಏರಿಳಿತದಿಂದ ಆಗುವ ಏರುಪೇರು, ನಷ್ಟಗಳನ್ನು ತಡೆದುಕೊಳ್ಳುವ ತಂತ್ರಗಾರಿಕೆ ಇರುತ್ತದೆ. ಲಾಭದ ಹಾದಿ ಸ್ಪಷ್ಟವಾಗಿರುತ್ತದೆ. ಅಲ್ಲಿ ಶಿಸ್ತು ಇರುತ್ತದೆ. ಲಾಭವೋ ನಷ್ಟವೋ ಅನಿರೀಕ್ಷಿತವಾಗಿರುವುದಿಲ್ಲ.
ಚಿತ್ರೋದ್ಯಮ ಹಾಗಲ್ಲ; ಮುಂದಿನ ದಾರಿ ಸದಾ ಅಸ್ಪಷ್ಟ. ಲಾಭ ಮರೀಚಿಕೆ. ಸಿಕ್ಕರೆ ಸಿಕ್ಕೀತು, ಇಲ್ಲವಾದರೆ ಇಲ್ಲ. ನಿರ್ಮಾಣ ಹಂತದಲ್ಲಿ ನಿರೀಕ್ಷಿತ ಖರ್ಚುವೆಚ್ಚಗಳು ಅಂದಾಜು ಮೀರುತ್ತ ಹೋಗುವುದು ಚಿತ್ರೋದ್ಯಮದಲ್ಲಿ ಮಾಮೂಲು. ಕೈ ಹಾಕಿದ್ದೇವೆ; ಮುಗಿಸಬೇಕು ಎಂಬ ಕಾರಣಕ್ಕೆ ಮುಗಿಸಿ ಬಿಡುಗಡೆ ಮಾಡಿ, ಗೆದ್ದರೆ ಬೀಗುತ್ತ, ಸೋತರೆ ಬೈಯುತ್ತ ಕೊರಗುವುದು ಇದ್ದಿದ್ದೇ. ಹೀಗಾಗಿ ಇತರೆ ಉದ್ಯಮಗಳಂತೆ, ಸಿನಿಮಾ ನಿರ್ಮಾಣವನ್ನು ಒಂದು `ಪ್ರಾಜೆಕ್ಟ್’ ಎಂದು ಪರಿಗಣಿಸಿ ಲೆಕ್ಕ ಹಾಕುವುದು ಸುಮ್ಮನೇ; ಇಲ್ಲಿ ಎಲ್ಲವೂ ಷೇರು ಮಾರುಕಟ್ಟೆಯ ಹಾಗೆ.
ಅದಕ್ಕೇ ಬ್ಯಾಂಕುಗಳು ಚಿತ್ರೋದ್ಯಮಕ್ಕೆ ಸಾಲ ಕೊಡಲು ಹಿಂದೆಮುAದೆ ನೋಡುತ್ತವೆ. (ಟಿವಿ ಧಾರಾವಾಹಿ ನಿರ್ಮಾಣಕ್ಕೆ ಸಾಲ ಕೊಡುತ್ತವೆ!) ಉದ್ಯಮಗಳಲ್ಲಿ ಸಾಲಕ್ಕೆ ಪ್ರತಿಯಾಗಿ ಸ್ಥಿರ, ಚರ ಆಸ್ತಿಗಳ ಅಡಮಾನ ಇರುತ್ತದೆ. ಆದರೆ ಸಿನಿಮಾ ಹಕ್ಕುಗಳನ್ನು ಅಡವಾಗಿಟ್ಟುಕೊಂಡ ಪಕ್ಷದಲ್ಲಿ ಕೆಟ್ಟ ಸಿನಿಮಾ ಆಗಿದ್ದರೆ ಮೂರು ಕಾಸಿನ ಬೆಲೆಯೂ ಇರುವುದಿಲ್ಲ. ಹೀಗಾಗಿ ಸಿನಿಮಾಕ್ಕೆ ಉದ್ಯಮ ಸ್ಥಾನಮಾನ ಕೊಡಿ ಎಂದು ಎಷ್ಟೆ ಬೊಂಬಡಾ ಹೊಡೆದುಕೊಂಡರೂ ವಾಸ್ತವದಲ್ಲಿ ಅದಿನ್ನೂ ಗಗನಕುಸುಮ. ಸಿನಿಮಾ ಜೀವನಾವಶ್ಯಕ ಅಲ್ಲದ ಕಾರಣ, ಇಷ್ಟವಿದ್ದರೆ ಪ್ರೇಕ್ಷಕರು ದುಡ್ಡುಕೊಟ್ಟು ಚಿತ್ರ ನೋಡಲು ಬರುತ್ತಾರೆ. ಅದೇ ಆದಾಯದ ಪ್ರಮುಖ ಮೂಲ. ಪ್ರೇಕ್ಷಕ ಚಿತ್ರಮಂದಿರಕ್ಕೆ ಬರದಿದ್ದರೆ ಗೋವಿಂದ !
ಇವುಗಳ ನಡುವೆ ಇನ್ನೊಂದು ಪ್ರಶ್ನೆ ಏಳುತ್ತದೆ. ರವಿಚಂದ್ರನ್, ರಾಕ್ಲೈನ್ ವೆಂಕಟೇಶ್, ರಾಮು ಅಂಥ ನಿರ್ಮಾಪಕರು ಒಂದು ಚಿತ್ರ ಸೋತರೆ ಇನ್ನೊಂದು ಹಿಟ್ ಪಡೆದು, ಬೇರೆ ಬೇರೆ ಭಾಷೆಗಳ ಹಿಟ್ ಚಿತ್ರಗಳ ವಿತರಣೆಯಿಂದ ಹೇಗೋ `ಮೇಕ್ ಅಪ್’ ಮಾಡಿಕೊಳ್ಳುತ್ತಾರೆ. ಆದರೆ ಕೆ.ಮಂಜು, ಎಂ.ಎನ್.ಸುರೇಶ್, ಅಣಜಿ ನಾಗರಾಜ್, ಮದನ್ ಪಟೇಲ್ ಸೇರಿದಂತೆ ಅನೇಕ ನಿರ್ಮಾಪಕರು ಚಿತ್ರಗಳು ಸಾಲಾಗಿ ಸೋತರೂ ಮತ್ತೆ ಮತ್ತೆ ಚಿತ್ರವನ್ನು ನಿರ್ಮಿಸುತ್ತಲೇ ಇರುವುದನ್ನು ನೋಡಿದರೆ ತಲೆ ಗಿರಕ್ ಎನ್ನುತ್ತದೆ. ಕೋಟಿ ಖರ್ಚು ಮಾಡುವ ಇವರ ಚಿತ್ರಗಳಿಗೆ ಬಂಡವಾಳ ಮೂಲ ಯಾವುದು ಎಂಬುದು ಯಕ್ಷಪ್ರಶ್ನೆ. ಅದು ಕೆದಕಹೋದರೆ ಬೇರೆಯದೇ ಜಾಲ ಅನಾವರಣಗೊಂಡೀತು. ಈಗ ಇವರೆಲ್ಲ ಹೆಚ್ಚುಕಡಿಮೆ ತೆರೆಯ ಮರೆಗೆ ಸರಿದಿದ್ದಾರೆ. ಆದರೆ ಅವರ ಪಾತ್ರಗಳನ್ನು ಬೇರೆಯವರು ನಿರ್ವಹಿಸುತ್ತಿದ್ದಾರೆ!









