ದೃಶ್ಯಕಾವ್ಯ
Advertisement
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
No Result
View All Result
 ದೃಶ್ಯಕಾವ್ಯ
No Result
View All Result
Home ಗಹನ

ಎತ್ತಿನ ಹೊಳೆ- ಹೋರಾಟದ ಹಾದಿ

ಎತ್ತಿನ ಹೊಳೆ- ಹೋರಾಟದ ಹಾದಿ

ಎತ್ತಿನ ಹೊಳೆ ಯೋಜನೆ ಸರಕಾರದ ಪ್ರಕಾರ ಪೂರ್ಣಗೊಂಡಿದೆ. ಮಳೆನಾಡ ನೀರು ಬಯಲುನಾಡಿಗೆ ಹರಿದುಬಂದಿದೆ. ಈ ಹಿನ್ನೆಲೆಯಲ್ಲಿ  ಯೋಜನೆ ಆರಂಭವಾದಾಗ ಎದ್ದ ಪರ-ವಿರೋಧ ಚರ್ಚೆಗಳ, ಹೋರಾಟದ ಒಂದಿಷ್ಟು ವಿವರ ಇಲ್ಲಿದೆ.


ಚಿಕ್ಕಮಗಳೂರಿನ ಸಂಸೆಯಲ್ಲಿ ಉಗಮವಾಗುವ ನೇತ್ರಾವತಿ ತನ್ನೊಳಗೆ ಹಲವು ಉಪನದಿಗಳನ್ನು ಸೇರ್ಪಡೆ ಮಾಡಿಕೊಂಡು ಉಪ್ಪಿನಂಗಡಿ ಸಮೀಪ ಕುಮಾರಧಾರ ನದಿಯೊಂದಿಗೆ ಮಿಲನಗೊಂಡು ನಂತರ ಸಮುದ್ರಕ್ಕೆ ಸೇರುತ್ತದೆ. ಇದರಿಂದ ಸುಮಾರು 200 ಟಿಎಂಸಿಯಷ್ಟು ನೀರು ಮಳೆಗಾಲವೊಂದರಲ್ಲೇ ವ್ಯರ್ಥವಾಗಿ ಸಮುದ್ರದ ಪಾಲಾಗುತ್ತದೆ. ಇದು ಪರಮಶಿವಯ್ಯ ವರದಿಯ ತಿರುಳು. ಈ ವರದಿಯನ್ನಾಧರಿಸಿ ಬಯಲುಸೀಮೆಯ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಈ ಪ್ರದೇಶದ ಎಲ್ಲಾ ಜಿಲ್ಲೆಗಳಲ್ಲಿ ಹೋರಾಟ ನಡೆದಿತ್ತು.
ಈ ಹೋರಾಟಕ್ಕೆ ಸ್ಪಂದಿಸಿದ ಅಂದಿನ ಎಸ್.ಎಂ ಕೃಷ್ಣ ನೇತೃತ್ವದ ಸರ್ಕಾರ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಅಧ್ಯಯನ ನಡೆಸಿ ಯೋಜನೆ ಆರಂಭಿಸುವ ಕುರಿತಂತೆ ಸಮೀಕ್ಷೆ ನಡೆದವು. ಬಜೆಟ್ ನಲ್ಲಿ 5 ಕೋಟಿ ರೂಪಾಯಿ ತೆಗೆದಿರಿಸಿತು. ಅಷ್ಟೇ ಅಲ್ಲ ಜಪಾನ್ ಮೂಲದ ಸಂಸ್ಥೆಯೊಂದಕ್ಕೆ ಸಮೀಕ್ಷೆ ನಡೆಸುವ ಗುತ್ತಿಗೆ ನೀಡಿತು.


ಸರ್ಕಾರದ ಈ ನಿರ್ಧಾರದ ಬೆನ್ನಲ್ಲೇ ಕರಾವಳಿಯಲ್ಲಿ ಹೋರಾಟ ತೀವ್ರಗೊಂಡಿತು. ನೇತ್ರಾವತಿ ನದಿಯನ್ನು ಬಯಲುಸೀಮೆಯತ್ತ ತಿರುಗಿಸುವ ಮೂಲಕ ಸರ್ಕಾರ ಕರಾವಳಿ ಪ್ರದೇಶವನ್ನು ಬಂಜರು ಮಾಡಲು ಹೊರಟಿದೆ. ನದಿಯ ನೀರು ಸಮುದ್ರ ಸೇರದೇ ಹೋದರೆ ಮೀನುಗಳ ಸಂತಾನೋತ್ಪತ್ತಿ ನಡೆಯುವುದಿಲ್ಲ. ಇದರಿಂದ ಕರಾವಳಿ ಜನರ ಬೆನ್ನೆಲುಬೇ ಮುರಿದಂತಾಗುತ್ತದೆ ಎಂದು ಹೇಳಿ ಸರ್ಕಾರದ ವಿರುದ್ಧ ಆಂದೋಲನ ಆರಂಭಿಸಿದರು.
ಇದರಿಂದ ಬೆಚ್ಚಿದ ಸರ್ಕಾರ ಯೋಜನೆಯ ಸಮೀಕ್ಷಾ ಕಾರ್ಯಕ್ಕೆ ನೀಡಿದ್ದ ಗುತ್ತಿಗೆಯನ್ನು ರದ್ದು ಪಡಿಸಿತು. ಇದರಿಂದ ಯೋಜನೆಗೆ ಆರಂಭದಲ್ಲೇ ಬಾಲಗ್ರಹ ಹಿಡಿಯಿತು. ಮತ್ತೊಂದೆಡೆ, ಮಾಜಿ ಶಾಸಕ ಜಿ.ವಿ ಶ್ರೀರಾಮರೆಡ್ಡಿ ನೀರಿಗಾಗಿ ಹೋರಾಟದ ರೂಪು ರೇಷೆ ಸಿದ್ಧಪಡಿಸತೊಡಗಿದರು. ಬಯಲುಸೀಮೆಗೆ ಅದರಲ್ಲೂ ಚಿಕ್ಕಬಳ್ಳಾಪುರಕ್ಕೆ ಶಾಶ್ವತ ನೀರಾವರಿ ಯೋಜನೆ ರೂಪಿಸಬೇಕೆಂದು ಆಗ್ರಹಿಸಿ ಬಾಗೇಪಲ್ಲಿಯಿಂದ ಬೆಂಗಳೂರಿನವರೆಗೆ ನೂರಾರು ರೈತರೊಂದಿಗೆ ಪಾದಯಾತ್ರೆ ಆರಂಭಿಸಿದರು.

ಇದರ ನಡುವೆ ತಮ್ಮ ಕನಸಿನ ಯೋಜನೆಗೆ ಆರಂಭದಲ್ಲೇ ವಿಘ್ನ ಎದುರಾದ್ದರಿಂದ ಬೇಸರಗೊಂಡ ನೀರಾವರಿ ತಜ್ಞ ಪರಮಶಿವಯ್ಯ ಕರಾವಳಿ ಪ್ರದೇಶದ ಜನರ ಅಭಿಪ್ರಾಯ, ಪರಿಸರ ತಜ್ಞರ ವರದಿಯನ್ನು ಆಧರಿಸಿ ಮತ್ತೊಮ್ಮೆ ಅಧ್ಯಯನ ಆರಂಭಿಸಿದರು. ಸುದೀರ್ಘ ಒಂದು ವರ್ಷ ಕಾಲ ಅಧ್ಯಯನ ಹಾಗೂ ಸ್ಥಳ ಪರಿಶೀಲನೆ ನಡೆಸಿದ ಅವರು ತಮ್ಮದೇ ಆದ ಯೋಜನೆಯನ್ನು ಮಾರ್ಪಡಿಸಿದರು. ಪರಿಷ್ಕೃತ ಯೋಜನೆಗೆ ಪಶ್ಚಿಮ ವಾಹಿನಿ ಎಂದು ಹೆಸರಿಟ್ಟ ಅವರು ಪಶ್ಚಿಮಾಭಿಮುಖವಾಗಿ ಹರಿದು ಸಮುದ್ರ ಸೇರುವ ಶರಾವತಿ, ಅಘನಾಶಿನಿ, ನೇತ್ರಾವತಿ, ಕುಮಾರಧಾರ ಸೇರಿದಂತೆ ಹಲವು ನದಿಗಳ ನೀರಿನ ಉಪಯೋಗದ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದರು.


ಆದರೆ ಈ ವೇಳೆಗೆ ಚುನಾವಣೆ ನಡೆದು ಎಸ್.ಎಂ ಕೃಷ್ಣ ನೇತೃತ್ವದ ಸರ್ಕಾರ ಪತನಗೊಂಡು ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂತು. ನೂತನ ಸರ್ಕಾರದ ಮನವೊಲಿಕೆಗಾಗಿ ಪರಮಶಿವಯ್ಯ, ಸಂಸದ ಜಿ.ಎಸ್.ಬಸವರಾಜು ಸೇರಿದಂತೆ ಹಲವು ನಾಯಕರೊಂದಿಗೆ ಸಿಎಂ ಸೇರಿದಂತೆ ಯಾವೊಬ್ಬ ನಾಯಕರು ಈ ವರದಿಯ ಬಗ್ಗೆ ವಿಶೇಷ ಆಸಕ್ತಿ ವಹಿಸಲಿಲ್ಲ.

ಮತ್ತೊಂದೆಡೆ ಸಿಪಿಎಂ ನಾಯಕ ಶ್ರೀರಾಮರೆಡ್ಡಿ ಆರಂಭಿಸಿದ್ದ ಹೋರಾಟ ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ತೀವ್ರ ಸ್ವರೂಪ ಪಡೆದರೆ, ತುಮಕೂರಿನಲ್ಲಿ ಸಂಸದ ಬಸವರಾಜು ನೇತೃತ್ವದಲ್ಲಿ ಹೋರಾಟ ಆರಂಭವಾಯ್ತು. ನೀರಿಗಾಗಿ ಯಾವುದೇ ಹೋರಾಟಕ್ಕೂ ಸಿದ್ಧ ಎಂದು ಹೋರಾಟಗಾರರು ಘೋಷಿಸಿದರು. ಬೇರೆ ಬೇರೆ ಪ್ರದೇಶಗಳಲ್ಲಿ ನೀರಿಗಾಗಿ ಹೋರಾಟ ನಡೆಸುತ್ತಿದ್ದವರೆಲ್ಲಾ ಒಂದೆಡೆ ಸೇರಿ ಸರ್ಕಾರದ ಮೇಲೆ ಒತ್ತಡ ಹೇರುವ ತೀರ್ಮಾನಕ್ಕೆ ಬಂದ ಪರಿಣಾಮ ದಕ್ಷಿಣ ಕಾಶಿ ಎಂದೇ ಪರಿಗಣಿಸಲ್ಪಡುವ ನಂದಿ ಬೆಟ್ಟದ ತಪ್ಪಲಿನಲ್ಲಿ ಹೋರಾಟಗಾರರೆಲ್ಲಾ ಸಭೆ ಸೇರಿದರು. ಸರ್ಕಾರದ ಮೇಲೆ ಒತ್ತಡ ಹೇರಿ ಕಾರ್ಯಸಾಧನೆ ಮಾಡಿಕೊಳ್ಳುವ ದೃಷ್ಟಿಯಿಂದ ತಮ್ಮ ಹೋರಾಟವನ್ನು ರಾಜಕೀಯಮುಕ್ತಗೊಳಿಸುವ ಮಹತ್ವದ ತೀರ್ಮಾನವನ್ನು ಕೈಗೊಂಡು, ಬೈಲುಸೀಮೆಗಳ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಹೆಸರಿನಲ್ಲಿ ವೇದಿಕೆಯೊಂದನ್ನು ಹುಟ್ಟು ಹಾಕಿ, ನೋಂದಣಿ ಮಾಡಿಸಿದರು.

ಸಂಘಟನೆ ನೋಂದಣಿ ಮಾಡಿಸಿದ ನಂತರ, ಸಂಘಟನೆಯ ಪ್ರಮುಖರು ಕೋಲಾರ, ಚಿಕ್ಕಬಳ್ಳಾಪುರ, ತುಮುಕೂರು, ರಾಮನಗರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಸಂಚರಿಸಿ ಹೋರಾಟದ ಅಗತ್ಯತೆಯನ್ನು ಮನವರಿಕೆ ಮಾಡಿಕೊಟ್ಟರು. ಈ ಮೂಲಕ ಸಂಘಟನೆಯ ಜಾಲ ವಿಸ್ತರಿಸಕೊಂಡು ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದ್ದ ಬೆನ್ನಲ್ಲೇ ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ವಿದ್ಯಮಾನ ನಡೆದು, ಜೆಡಿಎಸ್ – ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಗೊಂಡಿತು.

ನೂತನವಾಗಿ ಬಿಜೆಪಿ ಜೆಡಿಎಸ್ ಸರ್ಕಾರ ಅಸ್ತಿತ್ವಕ್ಕೆ ಬಂತು. ಹಾಗೆಯೇ ರಾಜ್ಯದಲ್ಲಿ ಹಲವಾರು ರಾಜಕೀಯ ವಿದ್ಯಮಾನಗಳು ನಡೆದು ಸಂಸದ ಜಿ.ಎಸ್. ಬಸವರಾಜು ಕಾಂಗ್ರೆಸ್ ಗೆ ಗುಡ್ ಬೈ ಹೇಳಿದರು. ಬಿಜೆಪಿ ಸೇರ್ಪಡೆಯಾದ ಅವರು ಅಂದು ಉಪ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡರು. ಯಡಿಯೂರಪ್ಪ ಆಪ್ತ ವಲಯದಲ್ಲಿದ್ದ ಅವರು, ನೀರಾವರಿ ತಜ್ಞ ಪರಮಶಿವಯ್ಯ ಹಾಗೂ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮುಖಂಡರು ಮತ್ತು ಸರ್ಕಾರದ ಹಲವು ಪ್ರತಿನಿಧಿಗಳೊಂದಿಗೆ ಹಲವು ಸಾಂತ್ವನ ಸಭೆ ನಡೆಸುವಲ್ಲಿ ಯಶಸ್ವಿಯಾದರು.
ಸರ್ಕಾರದ ಉನ್ನತ ಅಧಿಕಾರಿಗಳು ನಡೆಸಿದ ಸಭೆಗಳ ಪರಿಣಾಮ ಅಂದಿನ ಸರ್ಕಾರ ಪರಮಶಿವಯ್ಯ ವರದಿ ಆಧರಿಸಿ ಪಶ್ವಿಮ ವಾಹಿನಿ ಯೋಜನೆ ಜಾರಿ ಸಂಬಂಧ ಸಮೀಕ್ಷೆ ನಡೆಸಲು, ಬಜೆಟ್ ನಲ್ಲಿ ಅನುದಾನ ಘೋಷಿಸಲಾಯ್ತು. ಮತ್ತೆ ಯೋಜನೆ ಕುರಿತಂತೆ ಜಪಾನ್ ನ ಸಂಸ್ಥೆ ಸಮೀಕ್ಷೆ ನಡೆಸಿತು. ಮತ್ತೊಂದೆಡೆ ಹೈದರಾಬಾದ್ ಮೂಲದ ಸಂಸ್ಥೆಯೊಂದೂ ಕೂಡ ಈ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಿತು.

ಈ ಎರಡೂ ವರದಿಯಲ್ಲಿ ಪಶ್ವಿಮವಾಹಿನಿ ಯೋಜನೆ ಅನುಷ್ಠಾನ ಅಷ್ಟೊಂದು ಸುಲಭವಲ್ಲ. ಇದಕ್ಕೆ ಅಪಾರ ಹಣ ಬೇಕಾಗುತ್ತದೆ. ಬಯಲು ಸೀಮೆ ಮತ್ತು ಪಶ್ಚಿಮಘಟ್ಟದ ಹಲವೆಡೆ ಮುಳುಗಡೆಯಾಗಲಿದೆ. ಇದಕ್ಕೆ ಭೂಸ್ವಾಧೀನ ಪ್ರಕ್ರಿಯೆ ದೊಡ್ಡ ತೊಡಕಾಗಲಿದೆ. ಇದರ ಬದಲಿಗೆ ಭದ್ರಾ ಮೇಲ್ದಂಡೆ ಸೇರಿದಂತೆ ಬಿಡಿ ಬಿಡಿಯಾಗಿ ಕೆಲವು ಯೋಜನೆ ರೂಪಿಸಿ, ಬಯಲು ಸೀಮೆಯ ಕೆರೆಗಳನ್ನು ತುಂಬಿಸುವ ಮೂಲಕ ಅಂತರ್ಜಲ ಮರುಪೂರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬಹುದೆಂಬ ಶಿಫಾರಸುಗಳನ್ನು ಮಾಡಿತು. ಸರ್ಕಾರ ಈ ಶಿಫಾರಸುಗಳ ಬಗ್ಗೆ ಅಧ್ಯಯನ ನಡೆಸುತ್ತಿರುವಾಗಲೇ ಈ ಹಿಂದಿನ ಸರ್ಕಾರ ಸಕಲೇಶಪುರದ ಗುಂಡ್ಯದ ಬಳಿ ಸ್ಥಾಪಿಸಲು ಯೋಚಿಸಿದ್ದ ಗುಂಡ್ಯ ಜಲವಿದ್ಯುತ್ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿತು. ಈ ಯೋಜನೆ ಕುರಿತಂತೆ ಅಧ್ಯಯನ ನಡೆಸಿದ ಸಮಿತಿ ಗುಂಡ್ಯದಲ್ಲಿ ಜಲವಿದ್ಯುತ್ ಉತ್ಪಾದಿಸಿದ ನಂತರ ನೀರು ಕುಮಾರಧಾರ ಮೂಲಕ ಸಮುದ್ರ ಸೇರುತ್ತದೆ. ಅದನ್ನು ತಡೆಹಿಡಿದು ಹೇಮಾವತಿ ಸೇರುವಂತೆ ಕೆಲ ಜಲಾಶಯಗಳಿಗೆ ಸೇರ್ಪಡೆ ಮಾಡಬಹುದು ಎಂಬ ಅಭಿಪ್ರಾಯ ನೀಡಿತು.

ಈ ಅಭಿಪ್ರಾಯದ ಆಧಾರದಲ್ಲಿ ಕಾರ್ಯನಿರ್ವಹಿಸಿದ ಪರಿಸರ ತಜ್ಞ ಕ್ಯಾಪ್ಟನ್ ರಾಜುರಾವ್, ನೀರಾವರಿ ತಜ್ಞ ಪ್ರೊ.ನರಸಿಂಹಪ್ಪ ನೇತೃತ್ವದ ತಂಡಗಳು ಎತ್ತಿನಹೊಳೆ ಎಂಬ ಹೊಸ ಪರಿಕಲ್ಪನೆ ನೀಡಿದರು.

ಎತ್ತಿನಹೊಳೆ ಎನ್ನುವುದು ಗುಂಡ್ಯ ಸಮೀಪದಲ್ಲಿ ಜನ್ಮ ತಾಳುವ ಎತ್ತಿನಹಳ್ಳ. ಇದು ಹಲವು ಹಳ್ಳಗಳನ್ನು ಸೇರಿಸಿಕೊಂಡು ಎತ್ತಿನಹೊಳೆಯಾಗಿ ಕುಮಾರಧಾರಾವನ್ನು ಸೇರುತ್ತದೆ. ಈ ಎತ್ತಿನಹಳ್ಳ ಉಗಮವಾಗುವ ಸಕಲೇಶಪುರದ ಪಶ್ಚಿಮಘಟ್ಟ ಅರಣ್ಯ ಪ್ರದೇಶ, ಮುಂಗಾರು ಅವಧಿಯಲ್ಲಿ ಅತ್ಯಂತ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ. ಮಳೆಗಾಲದ ಅವಧಿಯಲ್ಲಿ ಇಲ್ಲಿ ದಿನವೊಂದಕ್ಕೆ ಬೀಳುವ ಸರಾಸರಿ ಪ್ರಮಾಣ 3072 ಮಿ.ಮೀಟರ್.

ಮಳೆಗಾಲದ ಅವಧಿಯಲ್ಲಿ ಈ ಹಳ್ಳ ತುಂಬಿ ಹರಿಯುತ್ತದೆ. ತುಂಬಿ ಹರಿಯುವ ಹಳ್ಳದ ಸಮೀಪದಲ್ಲಿ ಒಡ್ಡುಗಳನ್ನು ನಿರ್ಮಿಸಿ, ಹಳ್ಳದ ನೀರು ಒಡ್ಡು ಸೇರುವಂತೆ ಮಾಡುವುದು, ತುಂಬಿದ ಒಡ್ಡುಗಳಿಂದ ನೀರನ್ನು ವಿದ್ಯುತ್ ಸೋಲಾರ್ ಅಳವಡಿಸಿ, ಕೆಳಭಾಗದಲ್ಲಿನ ಜಲಾಶಯ ಸೇರುವಂತೆ ಮಾಡುವುದು. ಅನಂತರ ಕೊಳವೆ ಮಾರ್ಗದ ಮೂಳಕ ಹಾಸನದ ಅರಸೀಕೆರೆಯ ಹಲವು ಕೆರೆಗಳನ್ನು ತುಂಬಿಸಿ, ರಾಮನಗರ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರದ ಕೆರೆಗಳನ್ನು ತುಂಬಿಸುವುದು ಈ ಯೋಜನೆಯ ಪ್ರಮುಖ ತಿರುಳು. ಇದಕ್ಕಾಗಿ ಎತ್ತಿನ ಹಳ್ಳ ಉಗಮವಾಗುವ ಪ್ರದೇಶದಲ್ಲಿರುವ ಹೊಂಗಡಹಳ್ಳ, ಎತ್ತಿನಹೊಳೆ , ಕಾಡುಮನೆ ಹೊಳೆ ಮತ್ತು ಕೇರಿ ಹಳ್ಳಗಳ ನೀರು ಸಂಗ್ರಹಣಕ್ಕೆ 8 ಒಡ್ಡುಗಳನ್ನು ನಿರ್ಮಿಸಲಾಗುವುದು. ಈ ಒಡ್ಡುಗಳ ನೀರೆತ್ತಲು ಬೃಹತ್ ಸಾಮರ್ಥ್ಯದ ವಿದ್ಯುತ್ ಸೋಲಾರ್ ಅಳವಡಿಸಲಾಗುವುದು.
ಅನಂತರ ದೊಡ್ಡ ಗಾತ್ರದ ಪೈಪ್ ಗಳ ಮೂಲಕ ಒಡ್ಡುಗಳಲ್ಲಿನ ನೀರನ್ನು ಸಕಲೇಶಪುರ ಹರಪನಹಳ್ಳಿ ಸಮೀಪ ಬ್ಯಾರೇಜ್ ನಿರ್ಮಿಸಿ ಅಲ್ಲಿಗೆ ಸೇರುವಂತೆ ಮಾಡಲಾಗುವುದು. ಇಲ್ಲಿಂದ ಕೊಳವೆಗಳ ಮೂಲಕ ಗುರುತ್ವಾಕರ್ಷಣೆಯಿಂದ ನೀರನ್ನು ಹರಿಸುವ ವ್ಯವಸ್ಥೆ ಮಾಡಲಾಗುವುದು. ಕೊಳವೆಗಳ ಮೂಲಕ ಈ ರೀತಿ ಸಾಗುವ ನೀರು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬೈರಗೊಂಡ್ಲು ಸಮೀಪ ನಿರ್ಮಿಸಲಿರುವ ಅಣೆಕಟ್ಟೆಯನ್ನು ಸೇರಲಿದೆ. ಸುಮಾರು ಸುಮಾರು 5.78 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಈ ಜಲಾಶಯದಿಂದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಯ ಹಲವು ಕೆರೆಗಳನ್ನು ತುಂಬಿಸುವ ಉದ್ದೇಶ ಹೊಂದಲಾಗಿದೆ.

ಒಟ್ಟಾರೆ ಈ ಯೋಜನೆಯಿಂದ 24.01 ಟಿಎಂಸಿ ನೀರು ಲಭ್ಯವಾಗಲಿದ್ದು, ಇದಕ್ಕಾಗಿ 1291 ಕೋಟಿ ರೂಪಾಯಿ ವೆಚ್ಚವಾಗಲಿದೆ. ಯೋಜನೆಯ ಕಾಮಗಾರಿಗಳಿಗೆ ಮೊದಲ ಹಂತದಲ್ಲಿ ಒಟ್ಟು 235 ಹೆಕ್ಟರ್ ಭೂಮಿ ಅಗತ್ಯವಿದೆ. ಎರಡನೇ ಹಂತದಲ್ಲಿ 4900 ಹೆಕ್ಟರ್ ಭೂಮಿ ಬೇಕು. ಸುಮಾರು 40 ಎಕರೆ ಅರಣ್ಯ ಪ್ರದೇಶ ಕೂಡ ಮುಳುಗಡೆಯಾಗಲಿದೆ. ಕಿರು ಜಲಾಶಯ ಅಥವಾ ಒಡ್ಡುಗಳಿಂದ ನೀರೆತ್ತಲು ವಾರ್ಷಿಕ 274 ಮೆಗಾ ವ್ಯಾಟ್ ವಿದ್ಯುತ್ ನ ಅಗತ್ಯವಿದೆ. ಇಷ್ಟೆಲ್ಲಾ ವೆಚ್ಚದ ನಂತರ ಸುಮಾರು 68.35 ಲಕ್ಷ ಜನರಿಗೆ ಯೋಜನೆಯಿಂದ ಲಾಭವಾಗಲಿದೆ ಎಂದು ಸರ್ಕಾರ ಅಂದಾಜು ಮಾಡಿದೆ. ಕಾಮಗಾರಿಗೆ ಶಂಕುಸ್ಥಾಪನೆ ಕೂಡ ನಡೆಯಿತು. ಭೂಸ್ವಾಧೀನ ಪ್ರಕ್ರಿಯೆ ಅಗತ್ಯವಿಲ್ಲದ ಕಡೆ ಕಾಮಗಾರಿ ಕೂಡ ಬಹುತೇಕ ಪೂರ್ಣಗೊಂಡಿದ್ದು, ಅರಣ್ಯ ಪ್ರದೇಶ ಹಾಗೂ ಖಾಸಗಿ ಭೂಮಿ ಸ್ವಾಧೀನ ಕುರಿತಂತೆ ಮಾತುಕತೆ ನಡೆದಿದೆ.
ಈ ಯೋಜನೆಗೂ ಕರಾವಳಿಯ ಜನತೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಉಪ್ಪಿನಂಗಡಿ ಪ್ರದೇಶದಲ್ಲಿ ಯೋಜನೆ ವಿರೋಧಿಸಿ ಪ್ರತಿಭಟನೆ ತೀವ್ರಗೊಳಿಸಿ, ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಸೇರಿದಂತೆ ಹಲವರು ಈ ಹೋರಾಟವನ್ನು ಬೆಂಬಲಿಸಿದರು.

ಮತ್ತೊಂದೆಡೆ ಬಯಲುಸೀಮೆಯಲ್ಲಿ ಇದೇ ಯೋಜನೆಯನ್ನು ವಿರೋಧಿಸಲಾಗುತ್ತಿತ್ತು. ಪ್ರಮುಖವಾಗಿ ಯೋಜನೆಗೆ ತಗಲುವ ವೆಚ್ಚ, ಅರಣ್ಯ ಭೂಮಿಯ ಮುಳುಗಡೆ ಹಾಗೂ ನೀರಿನ ಲಭ್ಯತೆಯ ಬಗ್ಗೆ ಇಲ್ಲಿನ ಜನ ಆತಂಕ ವ್ಯಕ್ತಪಡಿಸಿದ್ದರು.
ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳು ನಡೆಸಿರುವ ಅಧ್ಯಯನದ ಪ್ರಕಾರ, ಎತ್ತಿನಹೊಳೆ, ಕಾಡುಮನೆ ಹೊಳೆ, ಕೇರಿ ಹೊಳೆ ಮತ್ತು ಹೊಂಗಡಹಳ್ಳಿ ಪ್ರದೇಶದಲ್ಲಿ ಅಷ್ಟು ನೀರಿನ ಉತ್ಪಾದನೆ ಇಲ್ಲ ಎಂದು ಹೇಳಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯ ಪ್ರಮಾಣ ಕಡಿಮೆಯಾಗಿದೆ. ಹಾಗಾಗಿ ಇಲ್ಲಿ ಉತ್ಪಾದನೆಯಾಗುವ ನೀರಿನ ಪ್ರಮಾಣ ಕೇವಲ 15 ಟಿಎಂಸಿ ಮಾತ್ರ. ಹೀಗಿರುವಾಗ ಮಳೆಗಾಲದ ಅವಧಿಯಲ್ಲಿ ಕಿರುಜಲಾಶಯಗಳಿಗೆ ಬೃಹತ್ ಸೋಲಾರ ಬಳಸಿ, ನೀರು ಭರ್ತಿ ಮಾಡಿ, 24.01 ಟಿಎಂಸಿ ನೀರು ಸಂಗ್ರಹಿಸುವುದು ಅಸಾಧ್ಯ. ಹೀಗಾಗಿ ಯೋಜನೆಗೆ ಹಣ ಪೋಲಾಗುತ್ತದೆ ಎಂದು ಹೇಳಿದ್ದರು. ಇದು ಬಯಲು ಸೀಮೆಯ ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿತ್ತು. ಯೋಜನೆ ಜಾರಿಗೊಂಡರೂ ತಮಗೆ ನೀರು ಸಿಗುವುದಿಲ್ಲ. ನೀರಾವರಿಗೆ ಇರಲಿ, ಕುಡಿಯಲೂ ಸಹ ನೀರು ಸಿಗುವುದಿಲ್ಲ ಎಂಬ ಆತಂಕ ತೀವ್ರಗೊಂಡಿತು.


ಇದರ ಪರಿಣಾಮ ಶಾಶ್ವತ ನೀರಾವರಿ ಹೋರಾಟ ಸಮಿತಿ ಮತ್ತೆ ಹೋರಾಟದ ಅಖಾಡ ಪ್ರವೇಶಿಸಿತು. ಎತ್ತಿನ ಹೊಳೆ ಯೋಜನೆ ಹೊರತುಪಡಿಸಿ, ಪರಮಶಿವಯ್ಯ ವರದಿ ಆಧರಿಸಿ ಪಶ್ಚಿಮ ವಾಹಿನಿ ಯೋಜನೆ ರೂಪಿಸಬೇಕು. ಈ ಮೂಲಕ ಬಯಲು ಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಧರಣಿ ಸತ್ಯಾಗ್ರಹ ನಡೆಸಿತು.
ಎತ್ತಿನಹೊಳೆ ಯೋಜನೆಯಿಂದ ಬಯಲುಸೀಮೆಯ ನೀರಿನ ದಾಹ ಇಂಗುವುದಿಲ್ಲ. ಇದಕ್ಕಾಗಿ ಪರ್ಯಾಯ ಯೋಜನೆ ರೂಪಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಆರಂಭಿಸಿದ ಪ್ರತಿಭಟನಾಕಾರರು ಪ್ರತಿದಿನ ಕೆಲ ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ ತಡೆಯುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸತೊಡಗಿದರು. 

ಅಂತೂ ಇಂತೂ ಎತ್ತಿನಹೊಳೆ ಯೋಜನೆ ಮುಗಿದಿದೆ.

ಇದೀಗ ಲಿಂಗನಮಕ್ಕಿ ಆಣೆಕಟ್ಟೆಯಿಂದ ಶರಾವತಿ ನೀರನ್ನು ಕೋಲಾರ ದೊಡ್ಡಬಳ್ಳಾಪುರದ ಕಡೆಗೆ ಪೂರೈಸುವ ಯೋಚನೆಯನ್ನು ಸರಕಾರ ಮಾಡುತ್ತಿದೆ. ಅದು ಕಾರ್ಯಗತಗೊಳ್ಳಲು ಏನೇನು ಅಡಚಣೆಗಳಿವೆಯೋ ಕಾದು ನೋಡಬೇಕು.

Share9Tweet6SendShareShare
Next Post
ಸ್ವಾಹಾ

ಸ್ವಾಹಾ

Leave a Reply Cancel reply

Your email address will not be published. Required fields are marked *

Recommended

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಕಾಶಿಯ ಡೋಮ್‌ ಜನರು; ಅಂತ್ಯ ಸಂಸ್ಕಾರವೇ ಬದುಕು

ತಾಯ್ನೆಲದಲ್ಲೇ ನಿರಾಶ್ರಿತರಾದ ಕಾಶ್ಮೀರಿ ಪಂಡಿತರ ಕಥೆ-ವ್ಯಥೆ!

ತಾಯ್ನೆಲದಲ್ಲೇ ನಿರಾಶ್ರಿತರಾದ ಕಾಶ್ಮೀರಿ ಪಂಡಿತರ ಕಥೆ-ವ್ಯಥೆ!

ಶ್ರಾವಣ ಬಂತು…

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಹೂ ಮತ್ತು ಹುಡುಗಿ

ಹೂ ಮತ್ತು ಹುಡುಗಿ

ಕಚ್ಚುವ ನಾಯಿಗೆ ಬಿರಿಯಾನಿ, ಹಾಲು ಕೊಡುವ ದನಗಳಿಗೆ ಹುಲ್ಲಿಲ್ಲ!

ಕಚ್ಚುವ ನಾಯಿಗೆ ಬಿರಿಯಾನಿ, ಹಾಲು ಕೊಡುವ ದನಗಳಿಗೆ ಹುಲ್ಲಿಲ್ಲ!

ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು

ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು

Translate »
No Result
View All Result
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ

© 2026 JNews - Premium WordPress news & magazine theme by Jegtheme.