ದೃಶ್ಯಕಾವ್ಯ
Advertisement
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
No Result
View All Result
 ದೃಶ್ಯಕಾವ್ಯ
No Result
View All Result
Home ಪರಂಪರೆ

ಮೈಸೂರು ದಸರಾ; ಅರಮನೆ ಆಚರಣೆ ಅಂತರಂಗ!

ಹಂಪಿಯಿಂದ ಮೈಸೂರಿಗೆ ಬಂದಿದ್ದು ಹೇಗೆ?

ಮೈಸೂರು ದಸರಾ; ಅರಮನೆ ಆಚರಣೆ ಅಂತರಂಗ!

ಮೈಸೂರು ದಸರಾ ಹೆಚ್ಚುಕಮ್ಮಿ ೫೦೦ ವರ್ಷದಿಂದ ನೆಡಿತ ಬಂದಿದೆ. ಅದ್ಕೂ ಮೊದ್ಲು ಶ್ರೀರಂಗಪಟ್ಟಣದಲ್ಲಿ ನೆಡೀತಿತ್ತು. ಅದ್ಕೂ ಮೊದ್ಲು ವಿಜಯನಗರ ಸಾಮ್ರಾಜ್ಯದ ರಾಜಧಾನಿ, ಈಗಿನ ಹಂಪಿಯಲ್ಲಿ ನವರಾತ್ರಿ ಉತ್ಸವ ನೆಡೀತಿತ್ತು. ಹಂಪಿಲಿ ನವರಾತ್ರಿ ದಿಬ್ಬ ಈಗಲೂ ಇದೆ. ಅದೇ ಮೈಸೂರು ದಸರಾಗೆ ತಾಯಿಬೇರು.

 ವಿಜಯನಗರದಲ್ಲಿ ೮೦೦ ವರ್ಷಗಳ ಹಿಂದೆನೇ  ನವರಾತ್ರಿ ಉತ್ಸವ ಒಂದು ಸಾಂಸ್ಕೃತಿಕ ಉತ್ಸವವಾಗಿ ನೆಡೀತಾ ಇತ್ತು ಅಂತಾರೆ ಇತಿಹಾಸಕಾರರು. ವಿಜಯನಗರ ಅರಸರು ಬರೇ ಧಾರ್ಮಿಕ ಉತ್ಸವವಾಗಿರದೇ ಕಲೆ, ಸಂಸ್ಕೃತಿ, ಪರಂಪರೆಯ ಹೆಗ್ಗುರುತಾಗಿ ಉಳಿದಿದ್ದು ಇದೇ ಕಾರಣಕ್ಕೆ.

೧೬ ನೇ ಶತಮಾನದ ತನಕ ಮೈಸೂರು ಅರಸರು ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದರು. ೧೬ ನೇ ಶತಮಾನದಲ್ಲಿ ವಿಜಯನಗರ ಪತನದ ನಂತರ, ಮೈಸೂರು ಸ್ವತಂತ್ರ ಸಂಸ್ಥಾನವಾಯ್ತು. ಆದರೆ ವಿಜಯನಗರದಲ್ಲಿ ನಿಂತುಹೋಗಿದ್ದ ನವರಾತ್ರಿ ಆಚರಣೆಯ ವೈಭವವನ್ನ ಮತ್ತೆ ಶುರು ಮಾಡಿದ್ರು. ೧೬೧೦ ರಲ್ಲಿ ಶ್ರೀರಂಗಪಟ್ಟಣದಲ್ಲಿ ಅಂತಹ ಒಂದು ನವರಾತ್ರಿ ಉತ್ಸವ ʻದಸರಾ ಉತ್ಸವʼ ಅನ್ನೋ ಹೆಸರಿನಲ್ಲಿ ಶುರುವಾಯ್ತು. ಶುರುವಾಗಿದ್ದು ಜನಪ್ರಿಯವಾಯ್ತು. ಹಲವು ಅರಸರು ಆಗಿಹೋದ ತರುವಾಯ ನಂಜರಾಜರು ಮಹಾರಾಜರಾಗಿದ್ದಾಗ ಅವರನ್ನುಗೃಹಬಂಧನದಲ್ಲಿರಿಸಿ, ಸೈನ್ಯಾಧಿಪತಿ ಹೈದರಾಲಿ ಅಧಿಕಾರದ ಚುಕ್ಕಾಣಿ ಹಿಡಿದ . ಆತ  ಸ್ಥಳೀಯ ಸಂಸ್ಕೃತಿಯಾಗಿ ಬೇರೂರಿದ್ದ ದಸರಾ ಉತ್ಸವವನ್ನು ಅದೇ ವಿಜೃಂಭಣೆಯಿಂದ ಮುಂದುವರಿಸಿದ. ದಸರಾ ದರ್ಬಾರ್‌, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ರಾಜ್ಯಗಳ ಅತಿಥಿ ಅಭ್ಯಾಗತರ, ಕಲಾವಿದರ ಸತ್ಕಾರಗಳನ್ನ ಮುಂದುವರಿಸಿದ. ಸುಡುಮದ್ದು ಪ್ರದರ್ಶನ, ಗೂಳಿ ಕಾಳಗ, ಕುಸ್ತಿ ಮುಂತಾದವು ಸೇರ್ಪಡೆಗೊಂಡವು. ʻಘೀರ್‌ಬುಲ್‌ʼ ಅನ್ನೋ ವೃತ್ತಾಕಾರದ ಕುಸ್ತಿಅಖಾಡ ಹಾಗೂ ವ್ಯಾಘ್ರಪ್ರದರ್ಶನ ಈತನ ಕಾಲದಲ್ಲಿ ಸೇರ್ಪಡೆಗೊಂಡಿದ್ದು ಗಮನಾರ್ಹ.

ಹೈದರಾಲಿಯ ಮಗ ಟಿಪ್ಪು ಸುಲ್ತಾನ ಕೂಡ ದಸರಾ ಉತ್ಸವವನ್ನ ಮುಂದುವರಿಸಿಕೊಂಡು ಬಂದ. ವಿವಿಧ ಆಟೋಟ ಸ್ಪರ್ಧೆಗಳನ್ನ ಸೇರಿಸಿದ. ಪ್ರಾಚೀನ ಓಲಂಪಿಕ್‌ ಮಾದರಿಯಲ್ಲಿದೆ ಇಂಡಿಯನ್‌ ದಸರಾ ಅಂತ ಜೇಮ್ಸ್‌ ಸ್ಕರಿ ಅನ್ನೋ ವಿದೇಶಿಗ ಒಂದ್ಕಡೆ ಬರೆದಿದ್ದಾನೆ.  

ಟಿಪ್ಪು ಸುಲ್ತಾನನ ಪತನಾನಂತರ ಮತ್ತೆ ಒಡೆಯರ್‌ ವಂಶದ ಆಳ್ವಿಕೆ ಬಂತು. ಆದರೆ ಇದಕ್ಕೆ ಆಂಗ್ಲರು ಸಹಾಯ ಮಾಡಿದ್ದರಿಂದ ಅವರಿಗೆ ಸಂಸ್ಥಾನದಲ್ಲಿ ವಿಶೇಷ ಗೌರವವಿತ್ತು. ಮುಮ್ಮಡಿ ಕೃಷ್ಣರಾಜ ವಡೆಯರ್‌ ಅವರನ್ನ ೧೭೯೯ ರಲ್ಲಿ ರಾಜರನ್ನಾಗಿ ಮಾಡಿದ್ದಲ್ಲದೇ ದಸರಾ ದರ್ಬಾರ್‌ ಸೇರ್ಪಡೆಯಾಯ್ತು.

ಕಾಲಾಂತರದಲ್ಲಿ ಶ್ರೀರಂಗ ಪಟ್ಟಣ ದಸರಾ ಮೈಸೂರಿಗೆ ಸ್ಥಳಾಂತರಗೊಂಡಿತು.

ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಾಲದಲ್ಲಿ ದಸರಾ ವೈಭವ ಸರಿಸಾಟಿ ಇಲ್ಲದ ಉತ್ತುಂಗ ತಲುಪ್ತು. ಅರಮನೆಯಿಂದ ಚಿನ್ನದ ಅಂಬಾರಿ ಮೇಲೆ ಮಹಾರಾಜರ ಮೆರವಣಿಗೆ ಅದ್ಭುತವಾಗಿರ್ತಿತ್ತು.  

೧೦ ದಿನಗಳ ಅಧಿಕೃತ ದಸರಾ ಉತ್ಸವ ಶುರುವಾಗೋದು ಅರಮನೆಯಿಂದ್ಲೇ. ಮಹಾರಾಜರ ಮಂಗಳ ಸ್ನಾನದ ಮೂಲಕ. ಮುಂದಿನ ಹತ್ತು ದಿನಗಳೂ ಮಹಾರಾಜರು ಕಾಯಾ ವಾಚಾ ಮನಸಾ ಶುದ್ಧರಾಗಿದ್ದು ಮನೋಬುದ್ಧಿರಹಂಕಾರಗಳನ್ನು ನಿಯಂತ್ರಣದಲ್ಲಿಟುಕೊಂಡು ದೇವಿಯ ಆರಾಧನೆಯ ಅಂಗವಾಗಿ ವಿವಿಧ ಧಾರ್ಮಿಕ ಆಚರಣೆಗಳನ್ನು ಮಾಡಬೇಕು ಎನ್ನುವುದು ಮೂಲ ಆಶಯ. ಮಂಗಳ ಸ್ನಾನದ ನಂತರ ಕಂಕಣ ಕಟ್ಟುವ ಕಾರ್ಯಕ್ರಮ. ಮಹಾರಾಜರ ಬಲಗೈಗೆ ಕಟ್ಟುವ ಆ ಕಂಕಣ ದುಷ್ಟ ಶಕ್ತಿ ಅವರ ಹತ್ರ ಸುಳಿಯದ ಹಾಗೆ ಮುಂದಿನ ಹತ್ತು ದಿನದ ಉತ್ಸವ ಯಾವುದೇ ವಿಘ್ನ ಇಲ್ಲದ ಹಾಗೆ ನೆಡಿಬೇಕು ಅನ್ನೋದು ಇದ್ರ ಆಶಯ. ಕಂಕಣ ಕಟ್ಟೋದ್ರಿಂದ್ಲೇ ಮುಂದಿನ ಆಚರಣೆಗಳಿಗೆ ಅಧಿಕೃತ ಚಾಲನೆ.

ಆನಂತರ ದಸರಾ ದರ್ಬಾರ್‌ಗೆ ಚಾಲನೆ. ಇಲ್ಲಿ ಮಹಾರಾಜರು ಚಿನ್ನದ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ ವಿಧ್ಯುಕ್ತವಾಗಿ ಸಿಂಹಾಸನದ ಮೇಲೆ ಕುಳಿತುಕೊಳ್ಳುವ ಕಾರ್ಯಕ್ರಮ. ಈ ಸಮಯದಲ್ಲಿ ಬ್ಯಾಂಡ್‌ನವರು ಮೈಸೂರಿನ ರಾಜ್ಯಗೀತೆ ʻಕಾಯೌ ಶ್ರೀಗೌರಿʼ ನುಡಿಸ್ತಾರೆ. ಸಂಗೀತ, ನೃತ್ಯ, ವಿವಿಧ ಕಲಾಪ್ರಕಾರಗಳ ಧ್ವನಿ ಅರಮನೆಯಲ್ಲಿ ಪ್ರತಿಧ್ವನಿಸುತ್ತದೆ.  ಪ್ರಸ್ತುತ ಈ ಕಾರ್ಯಕ್ರಮಕ್ಕೆ ಕೇವಲ ಆಹ್ವಾನಿತರಿಗಷ್ಟೇ ಪ್ರವೇಶ. ಒಂದು ಕಾಲದಲ್ಲಿ ದಸರಾದಲ್ಲಿ ಒಂದು ದಿನ ಯುರೋಪಿಯನ್ನರಿಗೋಸ್ಕರ ಇಂಗ್ಲಿಷ್‌ದರ್ಬಾರ್‌ನಡೆಸಲಾಗ್ತಿತ್ತು. ಅವರ ವೀಕ್ಷಣೆಗಾಗಿ ಓರಿಯಂಟಲ್‌ನೃತ್ಯ ಮುಂತಾದ ಕಾರ್ಯಕ್ರಮಗಳು ಇರುತ್ತಿದ್ದವು.

ನವಮಿ ದಿನ ಆಯುಧ ಪೂಜೆ ವಿಶೇಷವಾಗಿ ನಡೆಯುತ್ತೆ. ಚಾಮುಂಡೇಶ್ವರಿ ಮಹಿಷಾಸುರನ ಸಂಹಾರ ಮಾಡಿದ ಸಂಕೇತವಾಗಿ ಮರದ ಕೋಣಕ್ಕೆ ಕುಂಕುಮ ಎರಚಿ ಕತ್ತನ್ನು ಬೇರ್ಪಡಿಸಲಾಗುತ್ತದೆ.

ಒಂಭತ್ತು ದಿನಗಳ ಧಾರ್ಮಿಕ ಆಚರಣೆಗಳ ನಂತರ ಹತ್ತನೆ ದಿನ ವಿಜಯದಶಮಿ. ಮಹಾರಾಜರು ಅರಮನೆ ಆವರಣದಲ್ಲಿರುವ ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿ ಆಯುಧಗಳನ್ನು ಭುವನೇಶ್ವರಿ ದೇಗುಲಕ್ಕೆ ಕಳಿಸಿ, ವಜ್ರಮುಷ್ಠಿ ಕಾಳಗ ವೀಕ್ಷಿಸಿ ಅರಮನೆಗೆ ವಾಪಸ್ಸಾದ ನಂತರವೇ ಜಂಬೂ ಸವಾರಿಗೆ ಅಧಿಕೃತ ಚಾಲನೆ. ಆನೆಯ ಮೇಲೆ ಅಂಬಾರಿ, ಜಂಬೂ ಸವಾರಿ. ಅರಮನೆಯಿಂದ ಬನ್ನಿ ಮಂಟಪದ ತನಕ ನಾಲ್ಕು ಕಿಲೋಮೀಟರ್‌ ಮೆರವಣಿಗೆ. ಮೂಲತಃ ಇದು ʻಜಂಬಿ ಸವಾರಿʼ ಅಂತೆ. ಬನ್ನಿ ಅಥವಾ ಶಮಿ ಪತ್ರೆ ಮರದಿಂದಾಗಿ ಈ ಜಂಬಿ ಅನ್ನೋ ಹೆಸರು. ಬ್ರಿಟಿಷರು ಇದನ್ನ ಜಂಬೂ ಸವಾರಿ ಅಂತ ಕರೆದ್ರು. ಅದೇ ಖಾಯಮ್ಮಾಯ್ತು.  

ಜಂಬೂ ಸವಾರಿ ಮುಗಿದ ಮೇಲೆ ಪೊಲೀಸ್‌ ಚಾತುರ್ಯ ಪ್ರದರ್ಶನ – ಪಂಜಿನ ಕವಾಯತು. ಕವಾಯತಿಗೆ ಬಳಸೋ ಪಂಜಿನ ತುದಿಯ ಹಿಲಾಲಿನ ಭಾಗ ಹಿತ್ತಾಳೆಯದು. ಹಿಡಿಕೆ ಮರದ್ದು. ಹಿತ್ತಾಳೆಯ ತಟ್ಟೆಯೊಳಗೆ ಹತ್ತಿ ಬೀಜಗಳು, ಬಟ್ಟೆಗಳನ್ನು ತುರುಕಿ, ಎಣ್ಣೆ ಸುರಿಯುತ್ತಾರೆ. ಇದರಿಂದ ಪಂಜು ತುಂಬಾ ಹೊತ್ತು ಆರದೇ ಉರಿಯುತ್ತೆ.

ಒಟ್ನಲ್ಲಿ ಮೈಸೂರು ದಸರಾ ಅಂದ್ರೆ ಅರಮನೆಯಿಂದ ಹಿಡ್ದು ಜಗನ್ಮೋಹನ ಅರಮನೆ, ಪುರಭವನ, ವೀಣೇ ಶೇಷಣ್ಣ ಭವನ, ಕಲಾಮಂದಿರ, ರಂಗಾಯಣ ಹೀಗೆ ಎಲ್ಲ ಕಡೆ ಶಾಸ್ತ್ರೀಯ ಸಂಗೀತ, ನೃತ್ಯ, ಗೀತಗಾಯನ, ಹರಿಕಥೆ, ಕಂಸಾಳೆಪದ, ಗಮಕ, ಯಕ್ಷಗಾನ, ಬಯಲಾಟ ಹೀಗೆ ಸಾಂಸ್ಕೃತಿಕ ಚಟುವಟಿಕೆಗಳಿಂದ ತುಂಬಿ ತುಳುಕ್ತವೆ.

ಪ್ರಗತಿಪರರು ಮಹಿಷ ಉತ್ಸವ ಆರಂಭಿಸಿದ್ದು ಸುದ್ದಿಯಾಗಿದೆ. ಮೂಲತಃ ಮಹಿಷಾಸುರನಿಂದಲೇ ಮಹಿಷ ಮಂಡಲ, ಮಹಿಷೂರು ಹೆಸರು ಬಂತು. ಆತನೇ ಮೂಲನಿವಾಸಿ ಎಂಬುದು ಅವರ ವಾದ. ಯಳಂದೂರು ಸಮೀಪ ಒಂದು ಗ್ರಾಮದಲ್ಲಿ ಮಹಿಷನ ಪೂಜೆ ಮೊದಲಿಂದಲೂ ಇದೆಯಂತೆ.

ಇದೇ ಕಥನ ವೀಕ್ಷಿಸಲು ದೃಶ್ಯಕಾವ್ಯ ಕನ್ನಡದ ಈ ಯುಟ್ಯೂಬ್‌ ಲಿಂಕ್‌ ಕ್ಲಿಕ್ಕಿಸಿ

Share9Tweet6SendShareShare
Next Post
ವಾತಾಪಿ ಗಣಪತಿ ತಮಿಳುನಾಡಲ್ಲಿ ಪತ್ತೆ!

ವಾತಾಪಿ ಗಣಪತಿ ತಮಿಳುನಾಡಲ್ಲಿ ಪತ್ತೆ!

Leave a Reply Cancel reply

Your email address will not be published. Required fields are marked *

Recommended

ಅಂತಿಮ ವಿದಾಯದ ಕಾಫಿ!

ಅಂತಿಮ ವಿದಾಯದ ಕಾಫಿ!

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಕಾಶಿಯ ಡೋಮ್‌ ಜನರು; ಅಂತ್ಯ ಸಂಸ್ಕಾರವೇ ಬದುಕು

ತಾಯ್ನೆಲದಲ್ಲೇ ನಿರಾಶ್ರಿತರಾದ ಕಾಶ್ಮೀರಿ ಪಂಡಿತರ ಕಥೆ-ವ್ಯಥೆ!

ತಾಯ್ನೆಲದಲ್ಲೇ ನಿರಾಶ್ರಿತರಾದ ಕಾಶ್ಮೀರಿ ಪಂಡಿತರ ಕಥೆ-ವ್ಯಥೆ!

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಹೂ ಮತ್ತು ಹುಡುಗಿ

ಹೂ ಮತ್ತು ಹುಡುಗಿ

ಕಚ್ಚುವ ನಾಯಿಗೆ ಬಿರಿಯಾನಿ, ಹಾಲು ಕೊಡುವ ದನಗಳಿಗೆ ಹುಲ್ಲಿಲ್ಲ!

ಕಚ್ಚುವ ನಾಯಿಗೆ ಬಿರಿಯಾನಿ, ಹಾಲು ಕೊಡುವ ದನಗಳಿಗೆ ಹುಲ್ಲಿಲ್ಲ!

ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು

ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು

Translate »
No Result
View All Result
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ

© 2026 JNews - Premium WordPress news & magazine theme by Jegtheme.