ಗುಬ್ಬಿ ವೀರಣ್ಣನವರು ರಂಗಭೂಮಿಯ ಮೇಲೆ ಆನೆ, ಕುದುರೆಗಳನ್ನು ತರುತ್ತಿದ್ದರಂತೆ. ತಿರುಗುವ ರಂಗಮAಚವನ್ನೇ ನಿರ್ಮಿಸಿದ್ದರಂತೆ. ಯುದ್ಧದಲ್ಲಿ ಬಾಣಬಿರುಸುಗಳನ್ನೇ ಬಳಸುತ್ತಿದ್ದರಂತೆ. ಇಂಥ ದಂತಕಥೆಗಳನ್ನು ವೀಕ್ಷಿಸುವ ಅವಕಾಶ ಈಗ ಇಲ್ಲಿ ಇಲ್ಲ. ಹವ್ಯಾಸಿ ರಂಗಭೂಮಿಗರಿಗೆ ಇಂಥ ಸಾಹಸಕ್ಕೆ ಅರ್ಥ ಕಾಣದೇ ಇರಬಹುದು. ಆದರೆ ಥೈಲ್ಯಾಂಡ್ ದೇಶದ ಫುಕೆಟ್‌ನಲ್ಲಿರುವ ‘ಪ್ಯಾಲೇಸ್ ಆಫ್ ದಿ ಎಲಿಫೆಂಟ್ಸ್ ಥಿಯೇಟರ್’ ನೋಡಿದ ಮೇಲೆ ರಂಗಭೂಮಿಯಲ್ಲಿ ಅಂದು ಲಭ್ಯವಿದ್ದ ಎಲ್ಲ ಸಾಧ್ಯತೆಗಳನ್ನು ಬಳಸಿಕೊಂಡ ಗುಬ್ಬಿ ವೀರಣ್ಣ ಮತ್ತೆ ಮತ್ತೆ ನೆನಪಾಗುತ್ತಾರೆ. ರಂಗಾನುಭವದ ಹೊಸ ಆಯಾಮ ನಿಬ್ಬೆರಗಾಗುವಂತೆ ಮಾಡುತ್ತದೆ.
ಥೈಲ್ಯಾಂಡ್‌ನ ರಾಜಧಾನಿ ಬ್ಯಾಂಕಾಕ್‌ನಿAದ ಏಳು ನೂರು ಕಿಲೋಮೀಟರ್ ದೂರ ಇರುವ ಪ್ರವಾಸಿ ದ್ವೀಪ ಫುಕೆಟ್. ಸ್ಥಳೀಯ ವಿಮಾನದಲ್ಲಿ ಬಂದಿಳಿದ ನಮಗೆ ಫ್ಯಾಂಟಸೀ’ ಪಾರ್ಕ್ ಬಗ್ಗೆ ಗೈಡ್ ಹೇಳುತ್ತಲೇ ಇದ್ದ. ಅಲ್ಲಿನ ಗೈಡ್‌ಗಳು ಚಿಕ್ಕ ವಿಷಯವನ್ನೂ ಕುತೂಹಲಕರವೆನ್ನಿಸುವಂತೆ ಹೇಳುತ್ತಾರೆ; ಸರಕಾರದಿಂದ ಮಾನ್ಯತೆ ಪಡೆದ ವೇಶ್ಯೆಯರ ಬಗ್ಗೆಯೂ ರಸವತ್ತಾಗಿ ವರ್ಣಿಸುತ್ತಾರೆ. ಹೀಗಾಗಿ ಫ್ಯಾಂಟಸೀ’ ಪಾರ್ಕ್ ಟಿಕೆಟ್‌ಅನ್ನು ಆತ ನಮ್ಮ ಕೈಲಿಟ್ಟಾಗ ವಿಶೇಷ ಅನ್ನಿಸಲಿಲ್ಲ. ಇದೂ ಮಾಮೂಲಿ ಮಕ್ಕಳಾಟದ ಫ್ಯಾಂಟಸಿ ಪಾರ್ಕ್ ಇರಬಹುದು ಎಂದುಕೊAಡಿದ್ದೆ. ಪಾರ್ಕ್ನ ಪ್ರವೇಶ ದ್ವಾರದಿಂದ ಥಿಯೇಟರ್‌ನ ಪ್ರವೇಶದ್ವಾರದವರೆಗೂ ಮಕ್ಕಳನ್ನು ಸೆಳೆಯುವಂಥ ಬಣ್ಣ ಬಣ್ಣದ ಬೆಳಕಿನ ಲೋಕವಿತ್ತೇ ಹೊರತು ದೊಡ್ಡವರಿಗೆ ಅಂತ ಏನೂ ಇರಲಿಲ್ಲ. ಸಾಂಪ್ರದಾಯಿಕ ಥಾಯ್ ಉಡುಪು ತೊಟ್ಟ ಸುಂದರಿಯರು, ನರ್ತಕಿಯರು ಅಲ್ಲಲ್ಲಿ ಗಮನ ಸೆಳೆಯುತ್ತಿದ್ದರು.
ಫ್ಯಾಂಟ`ಸೀ’ ಪಾರ್ಕ್ನ ಟಿಕೆಟ್ ಆಲ್-ಇನ್-ಒನ್. 1500 ಬ್ಹಾಟ್ (ಅಂದರೆ ರೂ.3000) ಬೆಲೆಯ ಟಿಕೆಟ್‌ನಲ್ಲಿ ‘ಗಾಲಾ ಡಿನ್ನರ್’ ಸಹ ಒಳಗೊಂಡಿತ್ತು. ಒಟ್ಟಿಗೇ 3000ಕ್ಕೂ ಹೆಚ್ಚು ಜನರಿಗೆ ಚೂರೂ ಗೊಂದಲವಿಲ್ಲದ ರಾತ್ರಿಯೂಟದ ವ್ಯವಸ್ಥೆ ಕಂಡೇ ಮನಸ್ಸು ದಂಗಾಗಿತ್ತು. ಆ ದೇಶದ ರಾಜ ಪ್ರವಾಸಿಗರಿಗರ ಗೌರವಾರ್ಥ ಏರ್ಪಡಿಸಿದ್ದ ಔತಣಕೂಟದ ಕಳೆ ಅಲ್ಲಿತ್ತು. ಬರೆದರೆ ಅದೇ ಬೇರೆ ಲೇಖನವಾಗುತ್ತದೆ. ಗಡದ್ದು ಊಟ ಮುಗಿಸಿ ಪಾರ್ಕ್ ಬಹುಭಾಗ ಆಕ್ರಮಿಸಿಕೊಂಡಿರುವ ‘ಪ್ಯಾಲೇಸ್ ಆಫ್ ದಿ ಎಲಿಫೆಂಟ್ಸ್’ ಥಿಯೇಟರ್ ಪ್ರವೇಶಿಸುವಾಗಲೇ ಅಚ್ಚರಿ. ಕ್ಯಾಮರಾ ಮತ್ತು ಮೊಬೈಲ್ ಒಳಗಡೆ ಒಯ್ಯುವಂತಿಲ್ಲ. ಅರೆ, ಎರಡು ಫೊಟೊ ತೆಗೆದರೆ ಇವರ ಗಂಟೇನು ಹೋಗುತ್ತದೆ ಎಂದು ಗೊಣಗುತ್ತಲೇ ಪ್ರತ್ಯೇಕ ಕೌಂಟರ್‌ಗಳಲ್ಲಿ ಅವುಗಳನ್ನು ಇಟ್ಟು ಬಣ್ಣದ ಬಿಲ್ಲೆ ಪಡೆದುಕೊಂಡೆವು. ಅಲ್ಲಿಂದ ಎದುರು ಸಿಕ್ಕ ಪ್ರವೇಶ ದ್ವಾರದಲ್ಲಿ ನುಗ್ಗುವಂತಿಲ್ಲ. ಟಿಕೆಟ್‌ಮೇಲೆ ನಮೂದಿಸಿದ ಪ್ರವೇಶ ದ್ವಾರದಲ್ಲೇ ಪ್ರವೇಶಿಸಿ ನಮೂದಿಸಿದ ಸಂಖ್ಯೆಯ ಆಸನದ ಮೇಲೇ ಕುಳಿತುಕೊಂಡೆವು. ಒಟ್ಟೂ ಹನ್ನೊಂದು ಪ್ರವೇಶದ್ವಾರಗಳು; ಒಟ್ಟಿಗೇ 3000 ಜನ ಪ್ರವೇಶಿಸಿದರೂ ನೂಕು ನುಗ್ಗಲಾಗುವುದಿಲ್ಲ.
ರಾತ್ರಿ 9 ಗಂಟೆಗೆ ಪ್ರವಾಸಿಗರೆಲ್ಲ ಆಸೀನರಾಗುತ್ತಿದ್ದಂತೆ ರಂಗಪ್ರಯೋಗ ಆರಂಭ. ಸುಮಾರು 2.5 ಗಂಟೆಗಳ ದೀರ್ಘ ಪ್ರದರ್ಶನಕ್ಕೆ ಮುನ್ನುಡಿ. ಬೃಹತ್ ರಂಗಶಾಲೆಯೊಳಗೆ ಬೃಹತ್ ರಂಗಮAಚ. ಎಲ್ಲವೂ ಯಂತ್ರ ನಿಯಂತ್ರಿತ. ಥೈಲ್ಯಾಂಡ್‌ನ ಸಾಂಪ್ರದಾಯಕ ನೃತ್ಯದೊಂದಿಗೆ ರಂಗಪ್ರದರ್ಶನ ಆರಂಭವಾದಾಗಲೂ ಈ ಷೋದಲ್ಲಿ ಅಂಥದ್ದೇನಿದೆ ಅಂದುಕೊAಡಿದ್ದು ಸುಳ್ಳಲ್ಲ. ಆದರೆ ಒಂದಾದ ನಂತರ ಒಂದೊAದು ರೂಪಕಗಳು ತೆರೆದುಕೊಳ್ಳುತ್ತ ಹೋದಂತೆ ಸಂಭಾಷಣೆ ಇಲ್ಲದ ಪ್ರದರ್ಶನವೊಂದು ವಿವಿಧ ಭಾಷೆಯ, ವಿವಿಧ ದೇಶದ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆದ ಅದ್ಭುತದಲ್ಲಿ ಮುಳುಗಿ ಹೋಗಿದ್ದು ಮಾತ್ರ ಸತ್ಯ.
ಥೈಲ್ಯಾಂಡ್ ದೇಶದ ಪುರಾಣ, ಇತಿಹಾಸ, ಜನಜೀವನ, ಕೃಷಿ ಎಲ್ಲವೂ ರಂಗಸಾಧ್ಯತೆಯ ಪರಾಕಾಷ್ಠೆ ಮೂಲಕ ತೆರೆದುಕೊಂಡವು. ವರ್ಣಾಲಂಕಾರದಿAದ ವಸ್ತçವಿನ್ಯಾಸದವರೆಗೆ ಎಲ್ಲವೂ ಸೊಬಗಿನ ಹೂದೋಟ. ಒಂದೊಂದು ರೂಪಕದ ನಂತರವೂ ಕೇವಲ 10 ಸೆಕೆಂಡುಗಳಲ್ಲಿ ರಂಗಪರಿಕರಗಳು ಬದಲಾಗುತ್ತಿದ್ದವು. ಕೃಷಿ ಸೆಟ್‌ನಿಂದ ಅರಮನೆ ಸೆಟ್, ಅರಮನೆ ಸೆಟ್‌ನಿಂದ ದೇವಲೋಕದ ಸೆಟ್ ಎಲ್ಲವೂ ಕೇವಲ 10 ಸೆಕೆಂಡಿನಲ್ಲಿ. ರಂಗದ ಮೇಲೆ ಕಾರಂಜಿ ಚಿಮ್ಮಿತು. ಮಳೆ ಸುರಿಯಿತು. ದೇವಲೋಕದ ಅಪ್ಸರ ಕನ್ಯೆಯರು ಆಕಾಶದಿಂದ ತೇಲುತ್ತ ಕೆಳಗಿಳಿದು ಬಂದರು. ಯುದ್ಧ ದೃಶ್ಯದಲ್ಲಿ ಆನೆಗಳು ಘೀಳಿಟ್ಟವು. ಒಮ್ಮೆಯಂತೂ 16 ಆನೆಗಳು ರಂಗದ ಮೇಲೆ ಒಟ್ಟಿಗೇ!! ಕೃಷಿ ರೂಪಕದಲ್ಲಂತೂ ಜೀವಂತ ಕೋಳಿಗಳು, ಆಡುಗಳು, ಪಾರಿವಾಳಗಳು, ಎಮ್ಮೆಗಳನ್ನು ಕರಾರುವಾಕ್ಕಾಗಿ ಬಳಸಲಾಗಿತ್ತು. ಆನೆಗಳಿಗೆ ನಟನೆ ಕಲಿಸಬಹುದು; ಕೋಳಿಗಳಿಗೂ ರಂಗದ ಮೇಲೆ ಚಲಿಸುವ ತರಬೇತಿ ನೀಡಿದ್ದಾರೆಂದರೆ ಅವರ ಶ್ರಮ ಊಹಾತೀತ. ಪ್ರೇಕ್ಷಕರ ಮೇಲೆ ಅದರ ಪ್ರಭಾವ ವರ್ಣನಾತೀತ. ಇವುಗಳ ಜೊತೆ ಮೈ ನವಿರೇಳಿಸುವ ಜಿಮ್ನಾಸ್ಟಿಕ್, ಇಂದ್ರಜಾಲ, ತೊಗಲು ಗೊಂಬೆಯಾಟ ಮಂತ್ರಮುಗ್ದಗೊಳಿಸಿದವು. ಒಂದೊಂದು ನಿಮಿಷಕ್ಕೂ ಏನಾಗಬಹುದು ಎಂದು ಕಾತರದಿಂದ ನೋಡುವಂತಾಯಿತು ನಮ್ಮ ಸ್ಥಿತಿ. ರಮ್ಯ ಪ್ರದರ್ಶನ ಮುಗಿದು ಪ್ರೇಕ್ಷಕರ ಮೇಲೆ ಬಲೂನುಗಳ ಮಳೆಗರೆದಾಗ ಕೇಕೆ ಹುಚ್ಚು ಹೊನಲು.
ಎರಡೂವರೆ ತಾಸು ಒಂದು ನಿಮಿಷವೂ ಬ್ರೇಕ್ ಇಲ್ಲದ ಈ ರಂಗಪ್ರಯೋಗ ಪದಗಳಿಗೆ ನಿಲುಕದ್ದು. ಒಂದೊAದನ್ನೂ ಬೇರೆ ಬೇರೆ ಚಿತ್ರೀಕರಿಸಿ ಜೋಡಿದ್ದಾರೇನೋ ಅನ್ನುವಷ್ಟು ಕರಾರುವಾಕ್ಕು. ಎಲೆಕ್ಟಾçನಿಕ್ಸ್, ಎಲೆಕ್ಟ್ರಿಕಲ್ ಮತ್ತು ಮೆಕಾನಿಕಲ್ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡ ಈ ರಂಗಪ್ರಯೋಗದ ವೆಚ್ಛ 35 ಮಿಲಿಯನ್ ಬ್ಹಾಟ್ (ರೂ. 7 ಕೋಟಿ). ನಟಿಸಿದ ಕಲಾವಿದರ ಸಂಖ್ಯೆ 500+. ಮೇಕಪ್ ಮಾಡಿಕೊಳ್ಳುವ ಬಣ್ಣದ ಮನೆಯೇ ಸುಮಾರು ಎರಡು ಎಕರೆಯಲ್ಲಿ ಇರಬಹುದೇನೋ.
ಪ್ರದರ್ಶನ ಮುಗಿಸಿ ಹೊರ ಬಂದಾಗ ಇನ್ನೊಂದು ಅಚ್ಚರಿ. ನಮ್ಮ ನಮ್ಮ ಮೊಬೈಲ್, ಕ್ಯಾಮರಾ ಪಡೆದುಕೊಳ್ಳಲು ನಮಗೆ ವಿತರಿಸಿದ ಬಿಲ್ಲೆಯ ಬಣ್ಣಕ್ಕೆ ತಕ್ಕಂತೆ ಪ್ರತ್ಯೇಕ ಸರತಿ ಸಾಲು. ಕೇವಲ 20 ನಿಮಿಷಗಳಲ್ಲಿ 3000 ಜನರ ವಸ್ತುಗಳನ್ನು ಹಿಂತಿರುಗಿಸುವ ಕೌಂಟರ್ ವ್ಯವಸ್ಥೆ.
ಪ್ಯಾಂಟಸಿ ಪಾರ್ಕ್ ಪ್ರವೇಶದಿಂದ ‘ಗಾಲಾ ಡಿನ್ನರ್’ ವರೆಗೆ, ಥಿಯೇಟರ್ ಪ್ರವೇಶದಿಂದ ಹಿಡಿದು ಹೊರಬಂದು ಕೌಂಟರ್‌ನಲ್ಲಿ ಕ್ಯಾಮರಾ ಪಡೆಯುವತನಕ ಅಳವಡಿಸಿಕೊಂಡ ಅಚ್ಚುಕಟ್ಟುತನ ಪ್ರಾಮಾಣಿಕತೆ ಕಂಡು ಮೂಕವಿಸ್ಮಿತ. ನಮ್ಮಲ್ಲೂ ಇಂಥ ಷೋ ಮಾಡಬಹುದೇ ಎಂಬ ಕನವರಿಕೆ. ಇಷ್ಟಕ್ಕೂ ಈ ಎಲ್ಲ ವ್ಯವಸ್ಥೆಯನ್ನು ನಿರ್ವಹಿಸುತ್ತಿರುವುದು ಖಾಸಗಿ ಇವೆಂಟ್ ಕಂಪನಿ ಅಲ್ಲ; ಬದಲಿಗೆ ಅಲ್ಲಿನ ಸರಕಾರಿ ವ್ಯವಸ್ಥೆ ಎಂಬುದನ್ನು ಕೇಳಿ ಹೃದಯಾಘಾತ ಆಗುವುದೊಂದೇ ಬಾಕಿ.









