
ಕಾಶ್ಮೀರದಲ್ಲಿ ಇನ್ನೂ ಉಗ್ರದಾಳಿ ಅಲ್ಲಲ್ಲಿ ನಡೆಯುತ್ತಲೇ ಇದೆ. ಮೋದಿ ಸರಕಾರ ಬಂದಮೇಲೆ ಉಗ್ರವಾದ ಒಂದಿಷ್ಟು ತಹಬಂದಿಗೆ ಬಂದಿದೆ ಎನ್ನಬಹುದಾದರೂ ಒಳಸಂಚುಗಳು ನಡೆಯುತ್ತಲೇ ಇವೆ. ಸಂವಿಧಾನದ 370 ನೇ ವಿಧಿ ರದ್ದಾದ ಮೇಲೆ ವಿಶೇಷ ಸ್ಥಾನಮಾನ ಹೋಗಿ ಎಲ್ಲ ಕೇಂದ್ರಾಡಳಿತ ಪ್ರದೇಶದಂತೆ ಕಾಶ್ಮೀರವೂ ಪರಿಗಣಿಸಲ್ಪಟ್ಟಿದೆ. ಇದರಿಂದ ಅಲ್ಲಿನ ಜೆಕೆಎಲ್ಎಫ್ಸೇರಿದಂತೆ ಹಲವು ಉಗ್ರಸಂಘಟನೆಗಳ ಬಾಯಿ ಕಟ್ಟಿದೆ. ಗಡಿ ಸಾಕಷ್ಟು ಬಂದೋಬಸ್ತ್ಆಗಿದೆ. ಕಾಶ್ಮೀರವನ್ನು ಭಾರತದಿಂದ ವಿಮೋಚನೆಗೊಳಿಸಿ ಕ್ರಮೇಣ ಪಾಕಿಸ್ತಾನಕ್ಕೆ ಸೇರಿಸಬೇಕು ಎಂಬ ಯಾಸಿನ್ಮಲ್ಲಿಕ್ರಂಥ ನಾಯಕರ ದುರಾಲೋಚನೆಗಳಿಗೆ ಮಣ್ಣು ಬಿದ್ದಿದೆ. ಮೂವತ್ತು ವರ್ಷಗಳ ಹಿಂದೆ ಕಾಶ್ಮೀರದಿಂದ ಹೊರದಬ್ಬಿಸಿಕೊಂಡು ತಮ್ಮದೇ ದೇಶದಲ್ಲಿ ನಿರಾಶ್ರಿತರಾಗಿ ಜಮ್ಮು ಹಾಗೂ ದೆಹಲಿಯ ನಿರಾಶ್ರಿತರ ಶಿಬಿರಗಳಲ್ಲಿ ರೇಷನ್ಗಾಗಿ ಎದುರು ನೋಡುತ್ತ ಹೀನಾಯವಾಗಿ ದಿನದೂಡುತ್ತಿರುವ ಲಕ್ಷಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರ ಕುಟುಂಬಗಳಿಗೆ ಮತ್ತೆ ತಾಯ್ನೆಲಕ್ಕೆ ಮರಳುವ ಭರವಸೆಯೇನೋ ಸಿಕ್ಕಿದೆ. ಆದರೆ ಅಲ್ಲಿನ ಪರಿಸ್ಥಿತಿ ಎಲ್ಲವೂ ಮೊದಲಿನಂತೆ ಆಗಲು ಸಾಧ್ಯವೆ? ರಕ್ತಸಿಕ್ತ ಹಿಮಶಿಖರಗಳು ಶುಭ್ರವಾಗುವುದು ಯಾವಾಗ? ದಾಲ್ಸರೋವರಕ್ಕೆ ಸಲೀಸಾಗಿ ಪ್ರವಾಸ ಹೋಗಬಹುದೆ?
ಎಲ್ಲಕ್ಕಿಂತ ಮುಖ್ಯವಾಗಿ ಶ್ರೀನಗರ ಸೇರಿದಂತೆ ಹಲವು ಪಟ್ಟಣಗಳಲ್ಲಿ ಪಂಡಿತರ ಕಾಲೊನಿ ನಿರ್ಮಾಣ ಮಾಡಿ ಅಲ್ಲಿ ಅವರಿಗೆ ಪುನರ್ವಸತಿ ಕಲ್ಪಿಸಿದರೂ ನೆಮ್ಮದಿ ಸಾಧ್ಯವೇ? ಬೇರುಗಳಿಂದ ಕಳಚಲ್ಪಟ್ಟ ಶಾಖೆಗಳು ಮತ್ತೆ ಬೇರು ಕೊಟ್ಟಾವೆಯೇ? ಉಗ್ರರು ಅವರ ನೆಮ್ಮದಿಗೆ ಮತ್ತೆ ಕೊಳ್ಳಿ ಇಡುವುದಿಲ್ಲ ಎಂಬುದಕ್ಕೆ ಏನು ಗ್ಯಾರೆಂಟಿ? ಇಷ್ಟಕ್ಕೂ ಎಲ್ಲೆಲ್ಲೋ ಉದ್ಯೋಗ ಕಂಡುಕೊಂಡ ಹೊಸ ತಲೆಮಾರಿನ ಕಾಶ್ಮೀರಿ ಪಂಡಿತರ ಮಕ್ಕಳು ಮರಳಿ ಬಂದೂಕಿನ ನಳಿಕೆಯ ರಕ್ಷೆಯಡಿ ಜೀವನ ನಡೆಸಲು ಒಪ್ಪುವರೆ? ಇಂಥವೇ ಹಲವು ಪ್ರಶ್ನೆಗಳು ಹಾಗೂ ಕಾಶ್ಮೀರ ಸಂದೇಹಗಳು ಉತ್ತರ ಸಿಗದಷ್ಟು ಜಟಿಲವಾಗಿವೆ.
ಡಿಸೆಂಬರ್-ಜನವರಿ ಅವಧಿ ಕಾಶ್ಮೀರಿ ಪಂಡಿತರಿಗೆ ಕರಾಳ ದಿನಗಳು ಎಂದೇ ಪರಿಗಣಿತವಾಗಿದೆ. ತಮ್ಮದೇ ನೆಲದಿಂದ ತಮ್ಮವರಿಂದಲೇ ಕೊಲ್ಲಲ್ಪಟ್ಟರು, ಅತ್ಯಾಚಾರಕ್ಕೆ ಒಳಗಾದರು, ಮತಾಂತರಗೊಳಿಸಲ್ಪಟ್ಟರು, ಒಪ್ಪದವರು ಒದ್ದೋಡಿಸಲ್ಪಟ್ಟರು. ಈ ಎರಡು ತಿಂಗಳಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಕಾಶ್ಮೀರಿ ಪಂಡಿತರು ಜೀವ ಉಳಿಸಿಕೊಂಡು ಜಮ್ಮು ಹಾಗೂ ದೆಹಲಿಗೆ ಓಡಿಬಂದರು. 1947ರಲ್ಲಿ ಸ್ವಾತಂತ್ರ್ಯ ಸಿಕ್ಕಾಗ ಕಾಶ್ಮೀರದಲ್ಲಿದ್ದ ಪಂಡಿತರ ಸಂಖ್ಯೆ 6 ಲಕ್ಷಕ್ಕೂ ಅಧಿಕ. ಈಗ ಅವರದೇ ತಾಯ್ನಾಡಿನಲ್ಲಿ ಅವರ ಜನಸಂಖ್ಯೆ ಕೇವಲ 2-3 ಸಾವಿರ ಅಷ್ಟೆ.
ಚೋದ್ಯವೆಂದರೆ, ಮುಸ್ಲಿಂ ರಾಜರ ಆಳ್ವಿಕೆಯ ಕಾಲದಲ್ಲಿ ಅವರದೇ ನಿರಂಕುಶ ಅಧಿಕಾರವಿದ್ದಾಗ ಇಂಥದ್ದೆಲ್ಲ ನಡೆದಿತ್ತು. ಔರಂಗಜೇಬ ಕಾಶಿಯ ಜ್ಞಾನವ್ಯಾಪಿ ಶಿವಮಂದಿರವನ್ನು ಹೇಗೆ ʻಗ್ಯಾನ್ವ್ಯಾಪಿʼ ಮಸೀದಿಯನ್ನಾಗಿ ಮಾಡಿದ ಎಂಬುದನ್ನು ಎಸ್.ಎಲ್. ಭೈರಪ್ಪನವರ ʻಆವರಣʼ ಕಾದಂಬರಿಯಲ್ಲಿ ಹಸಿ ಹಸಿಯಾಗಿ ಬಿಡಿಸಿಡಲಾಗಿದೆ. ಇಂಥ ಸಾವಿರಾರು ಪ್ರಸಂಗಗಳು ಭರತಖಂಡಕ್ಕೆ ಇಸ್ಲಾಂ ಕಾಲಿರಿಸಿದಾಗಿನಿಂದ ನಡೆದೇ ಬಂದಿದೆ. ಗಾಂಧಾರ ದೇಶವಾಗಿದ್ದ, ಚಾಣಕ್ಯ-ಚಂದ್ರಗುಪ್ತರು ನಡೆದಾಡಿದ್ದ ನೆಲ ಈಗ ಸಂಪೂರ್ಣ ಇಸ್ಲಾಮೀಕರಣಗೊಂಡ ಆಪ್ಘಾನಿಸ್ತಾನ. ಅಲ್ಲಿ ಇಸ್ಲಾಂ ತಣ್ಣನೆಯ ಹೂವಿನಂತೇನು ಅರಳಿ ನಿಂತಿಲ್ಲ. ಸಾವಿರಾರು ವರ್ಷಗಳಿಂದ ಬೇರೂರಿದ್ದ ಬೌದ್ಧ ಧರ್ಮವನ್ನು ಬೇರು ಸಮೇತ ಕೀಳಲ್ಪಟ್ಟು ಜನರೆಲ್ಲ ಮುಸ್ಲಿಮರಾಗಿದ್ದು ಸಾಕಷ್ಟು ಆಕ್ರಮಣ, ಯುದ್ಧ, ಬೆದರಿಕೆ ಹಾಗೂ ಕೊಲೆಸುಲಿಗೆಯ ಮೂಲಕವೇ. ರಕ್ತ ಹರಿಸಿಯೇ ಪಾಕಿಸ್ತಾನದ ಪ್ರಾಂತ್ಯವೆಲ್ಲ ಇಸ್ಲಾಮೀರಕಣವಾಗಿದ್ದು. ರಕ್ತದ ಹೊಳೆಯಲ್ಲಿಯೇ ಪೂರ್ವಬಂಗಾಳವೂ ಇಸ್ಲಾಮೀಕರಣಗೊಂಡು ಇದೀಗ ಬಾಂಗ್ಲಾದೇಶವಾಯ್ತು. 1947ರಲ್ಲಿ ಬಾಂಗ್ಲಾದಲ್ಲಿ ಹಿಂದೂಗಳ ಜನಸಂಖ್ಯೆ 21%. ಈಗ ಅದು 3% ಕುಸಿದಿದೆ. ಅಂದಮೇಲೆ ಮುಸ್ಲಿಂ ಆಳರಸರ ಕಾಲದ ಧಾರ್ಮಿಕ ಅತಿಕ್ರಮಣ ಇಪ್ಪತ್ತನೆಯ ಶತಮಾನದಲ್ಲೂ ಮುಂದುವರಿದುಕೊಂಡು ಬಂತು ಹಾಗೂ 21 ನೆಯ ಶತಮಾನದಲ್ಲಿ ಜಾಗತೀಕರಣದ ಗಾಳಿಯಲ್ಲಿ ಅದೇನೂ ನಿಂತಿಲ್ಲ ಎಂದರ್ಥ. ಅದು ನಿರಂತರ ಎಂದರೆ ಅತಿಶಯೋಕ್ತಿಯಲ್ಲ. ಜ್ವಲಂತ ಉದಾಹರಣೆ ಇಂದಿಗೂ ಅಲ್ಲಿ ದುರ್ಗಾಪೂಜೆಯ ಪೆಂಡಾಲ್ಗಳ ಮೇಲೆ ನಡೆಯುತ್ತಿರುವ ಆಕ್ರಮಣಗಳೇ ಸಾಕ್ಷಿ. ಜಗತ್ತಿನ ಧಾರ್ಮಿಕ ಇತಿಹಾಸದಲ್ಲಿ ಹಲವಾರು ಸಂಸ್ಕೃತಿಯ ತೊಟ್ಟಿಲುಗಳನ್ನು ಅತಿಕ್ರಮಿಸಿಕೊಂಡು, ಅಲ್ಲಿನ ಮೂಲ ಸಮುದಾಯವನ್ನು ಬೇರು ಸಮೇತ ಕಿತ್ತೊಗೆದ ಇತಿಹಾಸ ಇಸ್ಲಾಮಿಗಿದೆ. ಪರ್ಶಿಯಾದಿಂದ ಪಾರ್ಸಿಗಳನ್ನು ಹೊಡೆದೋಡಿಸಿ, ಅದನ್ನು ಇರಾನ್ಎಂಬ ಇಸ್ಲಾಮಿಕ್ರಾಷ್ಟ್ರವಾಗಿ ಮಾಡಿದ್ದು ಇದಕ್ಕೆ ಜ್ವಲಂತ ಉದಾಹರಣೆ. ಇಸ್ಲಾಮಿನ ಬಿರುಗಾಳಿಯಲ್ಲಿ ಹಲವು ಜನಪದಗಳು ತಲೆ ಎತ್ತದಂತೆ ನಾಶವಾಗಿ ಹೋಗಿವೆ. ಅನೇಕ ಇಸ್ಲಾಮಿಕ್ ಸಮುದಾಯಗಳು ಈಗ ತಮ್ಮ ಪುರಾತನ ಶ್ರೀಮಂತ ಸಂಸ್ಕೃತಿಯ ಅರಿವಿಲ್ಲದೇ ಶತಮಾನಗಳ ವಿಸ್ಮೃತಿಯಲ್ಲಿ ಬದುಕುತ್ತಿದ್ದಾರೆ.
ಈಗ ಪುನಃ ಕಾಶ್ಮೀರಿ ಪಂಡಿತರ ವಿಷಯಕ್ಕೆ ಬರೋಣ.
ಕಾಶ್ಮೀರದ ಜನಸಮುದಾಯದ ವಿಶೇಷವೆಂದರೆ ಎಲ್ಲರೂ ಒಂದೇ ಕುಲದವರು. ಅಂದರೆ ಶೈವಿಸಂ ಅನುಸರಿಸುತ್ತಿದ್ದ ಪಂಡಿತ ಸಮುದಾಯ. ಈಗೇನು ಕಾಶ್ಮೀರಿ ಮುಸ್ಲಿಮರೆಂದು ಕರೆದುಕೊಂಡು ಪ್ರತ್ಯೇಕತೆಗಾಗಿ ಆಗ್ರಹಿಸುತ್ತಿದ್ದಾರೋ ಅವರೂ ಒಂದು ಕಾಲದಲ್ಲಿ ಪಂಡಿತರೇ. ಪಾಕ್ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿರುವ ಮುಸ್ಲಿಮರೆಲ್ಲ ಒಂದು ಕಾಲದಲ್ಲಿ ಪಂಡಿತರೇ. ಹೇಳಬೇಕೆಂದರೆ ಧ್ವಂಸಗೊಂಡ ಶಾರದಾ ಪೀಠವಿರುವುದು ಪಾಕ್ಆಕ್ರಮಿತ ಕಾಶ್ಮೀರದಲ್ಲಿ. ʻರಾಜತರಂಗಿಣಿʼ ಬರೆದ ಕಲ್ಹಣ ಕಾಶ್ಮೀರದವನು. ಕಾಳಿದಾಸ ವರಿಸಿದ ವಿದ್ಯಾಧರೆ ಕಾಶ್ಮೀರದ ರಾಜಕುಮಾರಿ. ಅಕ್ಕಮಹಾದೇವಿಯ ಸಮಕಾಲೀನೆ, ಲಲ್ಲೇಶ್ವರಿ ಎಂಬ ಶಿವಭಕ್ತೆ 12 ನೇ ಶತಮಾನದಲ್ಲಿ ಬದುಕಿದ್ದಳು. ಈಕೆ ಸಾವಿರಾರು ವಚನಗಳನ್ನು ಕಶ್ಮೀರಿ ಭಾಷೆಯಲ್ಲಿ ಬರೆದಿದ್ದಾಳೆ. ಹಿಂದೂ ಸಂಸ್ಕೃತಿಯ ಹಾಗೂ ಸಂಸ್ಕೃತ ಭಾಷೆಯ ಆಳವಾದ ಬೇರುಗಳಿದ್ದಿದ್ದು ಕಾಶ್ಮೀರ ಪ್ರಾಂತ್ಯದಲ್ಲೇ. ತಾಳೆಗರಿಯ ಮೇಲೆ ನೂರಾರು ಉದ್ಗ್ರಂಥಗಳನ್ನು ಬರೆದು ಭಾರತದ ಜ್ಞಾನಭಂಡಾರಕ್ಕೆ ಕೊಡುಗೆ ನೀಡಿದವರು ಕಾಶ್ಮೀರಿ ಪಂಡಿತರು. ಸಿಂಧೂ ನದಿ ತೀರದಿಂದ ಕಾಶ್ಮೀರಪರ್ಯಂತ ಇದ್ದ ಜನಸಮುದಾಯ ಪ್ರಪಂಚದ ಇತರೆಡೆ ನಾಗರೀಕತೆ ಕಣ್ಣು ಬಿಡುವುದಕ್ಕೂ ಮೊದಲೇ ಉನ್ನತ ಮಟ್ಟದ ನಾಗರೀಕತೆ, ಜೀವನಶೈಲಿ, ಭಾಷಾವಿಕಾಸ, ಬೌದ್ಧಿಕವಿಕಾಸ ಹೊಂದಿತ್ತು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ.
ಕಾಶ್ಮೀರ ಕಣಿವೆಗೊಂದು ವಿಶೇಷತೆಯಿದೆ. ಅಲ್ಲಿನ ಸಮುದಾಯದ ಸ್ತರಗಳಲ್ಲಿ ಶೇ.99% ಪಂಡಿತ ಸಮುದಾಯವೇ. ಸೇಬು, ಕೇಸರಿಗಳನ್ನು ಬೆಳೆಯುತ್ತಿದ್ದ ಜಮೀನ್ದಾರರೂ ಪಂಡಿತರೇ ಆಗಿದ್ದರು. 12 ನೇ ಶತಮಾನದ ನಂತರ ಇಸ್ಲಾಮಿನ ಗಾಳಿ ಅಲ್ಲಿ ಪ್ರಬಲವಾಗಿ ಬೀಸತೊಡಗಿತು. ಅಧಿಕಾರ, ಅತಿಕ್ರಮಣ, ದಬ್ಬಾಳಿಕೆಗಳಿಂದ ಕ್ರಮೇಣ ಪಂಡಿತ ಸಮುದಾಯ ಇಸ್ಲಾಮೀಕರಣಗೊಂಡಿತು. ಈಗಲೂ ಅಲ್ಲಿನ ಮುಸ್ಲಿಮರ ಅಡ್ಡ ಹೆಸರುಗಳಲ್ಲಿ ಭಟ್, ಧರ್, ಖೇರ್ಇತ್ಯಾದಿ ಸರ್ನೇಮ್ಗಳನ್ನು ಗುರುತಿಸಬಹುದು. ಮುಸ್ಲಿಮರಾಗದ ಪಂಡಿತರ ಮೇಲೆ ದಬ್ಬಾಳಿಕೆ ಹಾಗೂ ಹೊರದಬ್ಬುವಿಕೆ ಅಂದಿನಿಂದಲೇ ಶುರುವಾಯಿತು. ಕ್ರಮೇಣ ಹಿಂದೂ ಪಂಡಿತರು ಪೂರ್ವ ಕಾಶ್ಮೀರ ಪ್ರಾಂತದತ್ತ ಸರಿದರು. ಪಶ್ಚಿಮ ಕಾಶ್ಮೀರ ಪ್ರಾಂತ ಸಂಪೂರ್ಣ ಇಸ್ಲಾಮಿನ ಹಿಡಿತಕ್ಕೆ ಬಂತು. ಇಷ್ಟೇ ಅಲ್ಲ, ಅವರಾಡುತ್ತಿದ್ದುದು ಕಶ್ಮೀರಿ ಭಾಷೆಯಾದರೂ ಅದರ ಮೂಲ ಲಿಪಿ ಶಾರದಾ ಲಿಪಿ ಕ್ರಮೇಣ ಹಿನ್ನೆಲೆಗೆ ಸರಿಯಿತು. ಉರ್ದು ಅಥವಾ ಅರೇಬಿಕ್ಲಿಪಿಯಲ್ಲಿಯೇ ಕಶ್ಮೀರಿ ಭಾಷೆಯನ್ನು ಬರೆಯತೊಡಗಿದರು. ಈಗ ಶಾರದಾ ಲಿಪಿ ಬಲ್ಲ ಪಂಡಿತರ ಸಂಖ್ಯೆ ಕೇವಲ ಸಾವಿರದಷ್ಟಿದೆ. ಒಂದು ಭಾಷೆ ತನ್ನ ಮೂಲ ಸೆಲೆಯನ್ನು ಕಳೆದುಕೊಂಡು ಪರಧರ್ಮದ ಹೊಡೆತಕ್ಕೆ ಛಿದ್ರವಾದುದಕ್ಕೆ ಕಶ್ಮೀರಿ ಭಾಷೆ ಜ್ವಲಂತ ಉದಾಹರಣೆ.
ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಹೊತ್ತಿಗೆ ಕಾಶ್ಮೀರದಲ್ಲಿ ಪಂಡಿತ ಸಮುದಾಯದವರು ಬಹುತೇಕ ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಗಳಿಗೆ ವಲಸೆ ಬಂದುಬಿಟ್ಟಿದ್ದರು. ಪ್ರಾಚೀನ ಕಾಲದಲ್ಲಿ ವಿದ್ಯೆ ಕಲಿತು ರಾಜಾಶ್ರಯ ಹೊಂದಲು ನಗರಕ್ಕೆ ಬರುತ್ತಿದ್ದರು; ಕ್ರಮೇಣ ಬ್ರಿಟಿಷ್ಆಳ್ವಿಕೆಯಲ್ಲಿ ನೌಕರಿಯನ್ನರಸಿ ನಗರಗಳಿಗೆ ವಲಸೆ ಬಂದರು. ಅಲ್ಲಿಯವರೆಗೆ ಎಕರೆಗಟ್ಟಲೆ ಸೇಬು ಹಾಗೂ ಕೇಸರಿ ಹೊಲಗಳು ಹಿಂದೂಗಳ ಮಾಲೀಕತ್ವದಲ್ಲೇ ಇತ್ತು. ಶ್ರಮಿಕ ಜೀವಿಗಳಾದ ಮುಸ್ಲಿಮರು ಜಮೀನುಗಳನ್ನು ಗುತ್ತಿಗೆ ಪಡೆದು ಸಾಗುವಳಿ ಮಾಡತೊಡಗಿದರು. ಹಲವು ದಶಕಗಳ ಕಾಲ ಈ ವ್ಯವಸ್ಥೆ ಅಬಾಧಿತವಾಗಿ ಮುಂದುವರಿಯಿತು.
ಸ್ವಾತಂತ್ರ್ಯಾನಂತರ ಕಾಶ್ಮೀರಿ ಪಂಡಿತರ ದುರಂತ ಕತೆಯ ಇನ್ನೊಂದು ಅಧ್ಯಾಯ ಶುರುವಾಯಿತು.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದೇ ಪಂಡಿತರಿಗೆ ಶಾಪವಾಗಿದ್ದು ವಿಪರ್ಯಾಸ. ಅಂದಿನ ಪ್ರಧಾನಿ ನೆಹರೂ ಕಾಶ್ಮೀರವನ್ನು ಇಡಿಯಾಗಿ ಭಾರತಕ್ಕೆ ಇಟ್ಟುಕೊಳ್ಳದೇ ಅರ್ಧವನ್ನು ಹಿಸೆ ಮಾಡಿಕೊಟ್ಟಾಗ ಆ ಪ್ರಾಂತದಲ್ಲಿದ್ದ ಪಂಡಿತ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ, ಗಂಡಸರ ಕೊಲೆ ನಿರಂತರವಾಯ್ತು. ಇದೇ ಪಂಡಿತ ಸಮುದಾಯಕ್ಕೆ ಸೇರಿದವರು ಎನ್ನಲಾದ ʻಪಂಡಿತ್ʼ ನೆಹರೂಜಿ ಇವರ ನೆರವಿಗೆ ಬರಲೇ ಇಲ್ಲ. ಇಷ್ಟು ಸಾಲದು ಎಂಬಂತೆ ಹಿಂದೂಗಳ ಪಾಲಿಗೆ ಅಲ್ಲಿ ಕೆಟ್ಟ ದಿನಗಳು ಶುರುವಾಗಿದ್ದು ಶೇಖ್ ಅಬ್ದುಲ್ಲಾ ಕೈಗೆ ನೆಹರೂ ಅಧಿಕಾರ ಕೊಟ್ಟು ತಮ್ಮದೇ ಸಮುದಾಯದ ದುರಂತಕ್ಕೆ ಬೆನ್ನುಡಿ ಬರೆದುಬಿಟ್ಟಿದ್ದರು. ಹೌದು; ಶೇಖ್ಅಬ್ದುಲ್ಲಾ ಕಟ್ಟರ್ಮುಸ್ಲಿಮ ಆಗಿದ್ದ. ಅದಾಗಿದ್ದರೂ ಪರವಾಗಿರಲಿಲ್ಲ; ನಖಶಿಖಾಂತ ಹಿಂದೂ ವಿರೋಧಿಯಾಗಿದ್ದ. ಕಾಶ್ಮೀರದ ʻಪ್ರಧಾನಿʼ ಎನ್ನಿಸಿಕೊಂಡಿದ್ದರೂ ಅಲ್ಲಿನ ಮಸೀದಿಗಳಲ್ಲಿ ಹಿಂದೂಗಳ ವಿರುದ್ಧ ಭಾಷಣ ಮಾಡುತ್ತಿದ್ದ. ಇವೆಲ್ಲವೂ ನೆಹರೂಗೆ ಗೊತ್ತಿತ್ತೋ ಇಲ್ಲವೋ; ಗೊತ್ತಿಲ್ಲದಂತೆ ನಟಿಸುತ್ತಿದ್ದರೋ ಗೊತ್ತಿಲ್ಲ. ಕಾಶ್ಮೀರವನ್ನು ಭಾರತದಲ್ಲೇ ಉಳಿಸಿಕೊಳ್ಳಬೇಕಾದರೆ ಶೇಖ್ಅಬ್ದುಲ್ಲಾನೇ ತಕ್ಕ ನಾಯಕ ಎಂದು ನೆಹರು ನಂಬಿದ್ದರು. ಅದುವರೆಗೆ ಕಾಶ್ಮೀರ ಆಳುತ್ತಿದ್ದ ರಾಜಾ ಹರಿಸಿಂಗ್ ಹಾಗೂ ಶೇಖ್ಅಬ್ದುಲ್ಲಾ ನಡುವೆ ಭಿನ್ನಾಭಿಪ್ರಾಯ ಇತ್ತು. ಅಬ್ದುಲ್ಲಾಗೆ ಅಧಿಕಾರ ವಹಿಸಿಕೊಡಲು ಹರಿಸಿಂಗ್ರನ್ನೇ ಅಲ್ಲಿಂದ ಗಡೀಪಾರು ಮಾಡಿದರು ನೆಹರು ಅವರ ಮಗ ಕರಣ್ಸಿಂಗ್ರನ್ನು ನೆಪಮಾತ್ರಕ್ಕೆ ರಾಜಪ್ರತಿನಿಧಿಯನ್ನಾಗಿಸಿ ಅಲ್ಲಿರಿಸಿದರು. ಅಬ್ದುಲ್ಲಾ ಕೈಗೆ ಅಧಿಕಾರವೇನೋ ಕೊಟ್ಟರು. ಆದರೆ, ಕಾಶ್ಮೀರವನ್ನು ಭಾರತದಲ್ಲಿ ಸಂಪೂರ್ಣ ವಿಲೀನಗೊಳಿಸಲು ಸರದಾರ್ವಲ್ಲಭಭಾಯ್ ಪಟೇಲರು ಮುಂದಿಟ್ಟ ಕಾರ್ಯತಂತ್ರವನ್ನು ನೆಹರೂ ಒಪ್ಪಿಕೊಂಡಿದ್ದರೂ ಪರಿಸ್ಥಿತಿ ಇಂದು ನೆಟ್ಟಗಿರುತ್ತಿತ್ತು. ನೆಹರೂ ಅದನ್ನೂ ಮಾಡಲಿಲ್ಲ. ಜಮ್ಮು ಕಾಶ್ಮೀರಕ್ಕೆ ಸಂವಿಧಾನದ 370 ನೇ ವಿಧಿಯಡಿ ವಿಶೇಷ ಸ್ಥಾನಮಾನ ಕೊಟ್ಟುಬಿಟ್ಟರು. ಭಾರತದಲ್ಲೇ ಇದ್ದರೂ ಅದೊಂದು ಸ್ವಾಯತ್ತ ರಾಜ್ಯವಾಯ್ತು. ಅದರ ಮೇಲೆ ಭಾರತದ ಅಧಿಕಾರವೇ ಮೊಟಕಾಯ್ತು. ಆನಂತರ ಅಲ್ಲಿ ಶೇಖ್ಅಬ್ದುಲ್ಲಾ ಆಡಿದ್ದೇ ಆಟವಾಯ್ತು.
ಅಧಿಕಾರ ಸಿಕ್ಕಕೂಡಲೆ ಶೇಖ್ಮಾಡಿದ ಮೊಟ್ಟಮೊದಲ ಕೆಲಸ ಅಲ್ಲಿನ ಜಮೀನ್ದಾರಿ ಪದ್ಧತಿ ನಿಷೇಧಿಸಿ ʻಉಳುವವನೇ ಭೂಮಿಯ ಒಡೆಯʼ ಎಂಬ ಕಾಯ್ದೆ ಜಾರಿಗೆ ತಂದಿದ್ದು. ಇದರಿಂದ ಪಂಡಿತರ ಎಲ್ಲಾ ಜಮೀನೂ ಗುತ್ತಿಗೆ ಪಡೆದುಕೊಂಡು ಸಾಗುವಳಿ ಮಾಡುತ್ತಿದ್ದ ಮುಸ್ಲಿಮರ ಕೈವಶವಾಯ್ತು. ಪಂಡಿತರಿಗೆ ಬಿಡಿಗಾಸು ಪರಿಹಾರವೂ ಸಿಗಲಿಲ್ಲ. ಕೃಷಿಭೂಮಿಯ ಬಹುಪಾಲು ಒಡೆತನ ಹಿಂದೂಗಳ ಕೈಯಿಂದ ಮುಸ್ಲಿಮರ ಕೈಗೆ ಹಸ್ತಾಂತರವಾಯ್ತು. ಶತಮಾನಗಳ ಕಾಲ ತಮ್ಮ ಮಾಲಕತ್ವದ ಭೂಮಿಯನ್ನು ಹಿಂದೂಗಳು ಕಳೆದುಕೊಂಡರು. ಇದು ಶೇಖ್ ಹಿಂದೂಗಳಿಗೆ ಕೊಟ್ಟ ಮೊಟ್ಟಮೊದಲ ಉಡುಗೊರೆ. ಹಿಂದೂಪರ ಸಂಘಟನೆಗಳ ಹೋರಾಟದಿಂದ ಶೇಖ್ಅಬ್ದುಲ್ಲಾ ಪದಚ್ಯುತಿಗೊಂಡರು. ಭಕ್ಷಿ ಗುಲಾಂ ಮೊಹ್ಮದ್ಮುಖ್ಯಮಂತ್ರಿಯಾದರು. ಹೀಗೆ ಶೇಖ್ಪದಚ್ಯುತಿಯ ನಂತರ ಹಿಂದೂಗಳಿಗೆ ಅವರ ಜಮೀನೇನೂ ವಾಪಸ್ಸಿಗಲಿಲ್ಲ. ಆದರೂ ಅವರು ಅಲ್ಲಿನ ಮುಸ್ಲಿಮರ ಜೊತೆ ಸೌಹಾರ್ದದ ಬದುಕು ನಡೆಸತೊಡಗಿದರು. ಇಷ್ಟು ದಿನ ಬೆರೆತು ಬಾಳಿದ್ದ ಮುಸ್ಲಿಮರು ತಮ್ಮ ಕೈ ಬಿಡುವುದಿಲ್ಲ ಎಂಬ ಕುರುಡು ವಿಶ್ವಾಸ ಅಲ್ಲಿನ ಪಂಡಿತ ಸಮುದಾಯದಲ್ಲಿತ್ತು. ಇವತ್ತಲ್ಲ ನಾಳೆ ಪರಿಸ್ಥಿತಿ ಸರಿಹೋಗುತ್ತೆ ಎಂಬ ಸಣ್ಣ ಆಸೆ ಮನಸ್ಸಿನ ಮೂಲೆಯಲ್ಲೆಲ್ಲೋ ಜೀವಂತವಾಗಿತ್ತು. ಅಲ್ಲಿನ ಸಾಮಾನ್ಯ ಮುಸ್ಲಿಮರು ಹಾಗೂ ಹಿಂದೂ ಪಂಡಿತರ ಮಧ್ಯೆ ಧಾರ್ಮಿಕ ನಂಬಿಕೆ ಹಾಗೂ ಪೂಜಾ ವಿಧಾನ ಬಿಟ್ಟರೆ ಬೇರೇನೂ ಘನ ವ್ಯತ್ಯಾಸ ಕಾಣುತ್ತಿರಲಿಲ್ಲ. ಏಕೆಂದರೆ ಎಲ್ಲರೂ ಪಂಡಿತ ಸಮುದಾಯದ ಒಂದೇ ರಕ್ತ ಹರಿಯುತ್ತಿರುವ ಅಣ್ಣತಮ್ಮಂದಿರೇ ಆಗಿದ್ದರಲ್ಲವೇ. ಹೀಗೆ ಮೂರು ದಶಕ ಕಳೆಯಿತು. ನೆಹರೂ ಯುಗ ಅಂತ್ಯವಾಯಿತು. ಇಂದಿರಾಗಾಂಧಿ ಯುಗ ಆರಂಭವಾಯ್ತು. 1971ರಲ್ಲಿ ಬಾಂಗ್ಲಾಯುದ್ಧ ಗೆದ್ದು ಬಾಂಗ್ಲಾದೇಶ ಸ್ಥಾಪನೆ ಮಾಡಿ ʻಉಕ್ಕಿನ ಮಹಿಳೆʼ ಎಂಬ ಖ್ಯಾತಿ ಹೊಂದಿದ ಇಂದಿರಾಜಿಯವರು, ತಕ್ಷಣ ಕಾಶ್ಮೀರ ಸಮಸ್ಯೆ ಬಗೆಹಿರಿಸಲು ಕೈಹಾಕಿದರು. ಇಲ್ಲಿ ಅವರು ಮಾಡಿದ ಯಡವಟ್ಟೆಂದರೆ, ಅಂದು ಪದಚ್ಯುತಗೊಂಡ ಮತಾಂಧ ಶೇಖ್ಅಬ್ದುಲ್ಲಾನನ್ನೇ ಮತ್ತೆ ಕಾಶ್ಮೀರದ ಮುಖ್ಯಮಂತ್ರಿಯನ್ನಾಗಿ ಮಾಡಿದ್ದು!
ಇತ್ತ ಇಂದಿರಾಗಾಂಧಿ ಅಧಿಕಾರ ಕಳೆದುಕೊಂಡರು. ಅತ್ತ ಶೇಖ್ ಪಾಕಿಸ್ತಾನ ಪರ ವರ್ತಿಸತೊಡಗಿದ. ಹಿಂದೂವಿರೋಧಿ ಭಾಷಣ ಜೋರಾಯಿತು. ಕಾಶ್ಮೀರ ಕಣಿವೆಯ ಎರಡು ಸಾವಿರಕ್ಕೂ ಹೆಚ್ಚು ಗ್ರಾಮಗಳ ಹೆಸರುಗಳನ್ನು ಬದಲಾಯಿಸಲಾಯಿತು. ಇಸ್ಲಾಮಿಕ್ ಹೆಸರುಗಳನ್ನು ಇಡಲಾಯಿತು. ಚಿಕ್ಕಪುಟ್ಟ ಮಂದಿರಗಳನ್ನೆಲ್ಲ ಧ್ವಂಸ ಮಾಡಲಾಯಿತು. ಪಾಕಿಸ್ತಾನ ಭಾರತದ ವಿರುದ್ಧ ಮುಖಾಮುಖಿ ಹೋರಾಟ ಮಾಡಿ ಗೆಲ್ಲಲು ಸಾಧ್ಯವಿಲ್ಲ ಎಂದು ಅರಿತು, ಒಳದಾರಿ ಹಿಡಿಯತೊಡಗಿತು. ಕಾಶ್ಮೀರಿ ಮುಸ್ಲಿಮರ ಧಾರ್ಮಿಕ ಭಾವನೆ ದುರುಪಯೋಗಪಡಿಸಿಕೊಂಡು ಬಿಲತೋಡಲು ಮುಂದಾಯಿತು. ಧರ್ಮಕ್ಕಾಗಿ ಪ್ರಾಣಬಿಡಲೂ ಮುಂದಾಗುವ ಮುಸ್ಲಿಮರು ಭಾರತವನ್ನು ಖಂಡಿತ ಬಿಡುತ್ತಾರೆ ಎಂದು ಅದು ನಂಬಿತ್ತು. ಆವತ್ತಿಗೂ ಕಾಶ್ಮೀರಿ ಮುಸ್ಲಿಮರು-ಹಿಂದುಗಳು ಸೌಹಾರ್ದತೆಯಿಂದಲೇ ಇದ್ದರು. ಅವರಲ್ಲಿ ಇದ್ದುದು ಕಾಶ್ಮೀರಿಯತ್ಮಾತ್ರ. ಆದರೆ ಜೆಕೆಎಲ್ಎಫ್ಮುಂತಾದ ಸಂಘಟನೆಗಳು ಮನಸ್ಸನ್ನು ಒಡೆಯುವ ಕೆಲಸವನ್ನು ಅದಾಗಲೇ ಯಶಸ್ವಿಯಾಗಿ ಮಾಡತೊಡಗಿದ್ದವು. ಯುವಕರು ಅವುಗಳೆಡೆ ಆಕರ್ಷಿತರಾಗತೊಡಗಿದರು. ಎಚ್ಐವಿ ವೈರಸ್ಶರೀರದ ಆರೋಗ್ಯವಂತ ಜೀವಕೋಶವನ್ನೂ ಏಡ್ಸ್ಪೀಡಿತ ಮಾಡುವ ಹಾಗೆ ಪಂಡಿತರೇ ಆಗಿದ್ದ ಮೃದು ಮನಸ್ಸಿನ ಮುಸ್ಲಿಮರಲ್ಲಿ ತಮ್ಮದೇ ಸೋದರರಾದ ಹಿಂದೂಗಳ ರಕ್ತ ಹರಿಸುವುದು ತಪ್ಪಲ್ಲ ಎಂಬ ಭಾವನೆ ಬೆಳೆಯುವ ಹಾಗೆ ಮಾಡಲಾಯಿತು.
ಇದಕ್ಕೆ ಪುಷ್ಟಿ ಕೊಟ್ಟಿದ್ದು ಅಖ್ತರ್ಅಬ್ದುರ್ರೆಹಮಾನ್ಎಂಬ ಪಾಕಿಸ್ತಾನಿ ಐಎಸ್ಐ ಮುಖ್ಯಸ್ಥ. ಮಹಾನ್ಕುತಂತ್ರಿ, ಚಾಣಾಕ್ಷ ಸೇನಾಧಿಕಾರಿ ಅಖ್ತರ್, ಭಾರತದ ವಿರುದ್ಧದ ಎಲ್ಲ ಯುದ್ಧಗಳಲ್ಲೂ ಬಡಿದಾಡಿದ ಸೇನಾನಾಯಕ. ಮಹಾನ್ಮತಾಂಧ. ಅವನ ಕುಮ್ಮಕ್ಕಿನಿಂದ ಕಾಶ್ಮೀರ ಕಣಿವೆಯಲ್ಲಿ ಉಗ್ರಸಂಘಟನೆಗಳು ಮುಸ್ಲಿಂ ಯುವಕರನ್ನು ಅಪಾರ ಪ್ರಮಾಣದಲ್ಲಿ ಸೆಳೆಯತೊಡಗಿದವು. ವ್ಯಾಪಕವಾಗಿ ಮುಸ್ಲಿಂ ಪಂಡಿತರ ಹಾಗೂ ಹಿಂದೂ ಪಂಡಿತರ ನಡುವೆ ಅಂತರ ಹೆಚ್ಚತೊಡಗಿತು. ಕಾಶ್ಮೀರ ಅನ್ನೋ ಸ್ವರ್ಗದ ಶುಭ್ರ ಶಿಖರದಲ್ಲಿ ಮತಾಂಧತೆಯ ರಕ್ತ ಚಿಮ್ಮತೊಡಗಿತು.
ಆದರೂ ಉಸುಕಿನಲ್ಲಿ ಮುಖ ಹುದುಗಿಸಿಕೊಳ್ಳುವ ಆಸ್ಟ್ರಿಚ್ಪಕ್ಷಿಯ ಹಾಗೆ ಹಿಂದೂಗಳು ತಮ್ಮದೇ ಲೋಕದಲ್ಲಿದ್ದರು. ಎಚ್ಚೆತ್ತುಕೊಳ್ಳಲಿಲ್ಲ.
ಸೂಕ್ಷ್ಮ ಮನಸ್ಥಿತಿಯಿರುವವರಿಗೆ ಕ್ರಮೇಣ ಮುಸ್ಲಿಂ ಬಾಂಧವರ ಕೈ ಕುಲುಕುವಿಕೆಯಲ್ಲಿ ಏನೋ ಅಂತರ, ಅಪ್ಪುಗೆಯಲ್ಲಿ ಏನೋ ಕೃತಕತೆ ಅದಾಗಲೇ ಗೋಚರವಾಗತೊಡಗಿತ್ತು. ಹಾಗಂತ ಬಿಲ್ ಕೆ.ಕೌಲ್ಎಂಬ ಪ್ರತ್ಯಕ್ಷದರ್ಶಿ ತಮ್ಮ ʻ22 ವರ್ಷಗಳುʼ ಎಂಬ ಕೃತಿಯಲ್ಲಿ ದಾಖಲಿಸಿದ್ದಾರೆ. ಈ ಇಂಗ್ಲಿಷ್ ಪುಸ್ತಕ, ಕಾಶ್ಮೀರಿ ಕಣಿವೆಯ ತಣ್ಣನೆಯ ಕ್ರೌರ್ಯವನ್ನು ಬಿಚ್ಚಿಡುತ್ತದೆ. ಹೇಗೆ ಉಗ್ರಸಂಘಟನೆಗಳು ಸಾಮಾನ್ಯ ಮುಸ್ಲಿಮರ ಮನಸ್ಸಿನಲ್ಲಿ ಪಂಡಿತರ ಬಗ್ಗೆ ವಿಷಬೀಜ ಬಿತ್ತಿ ಅವರನ್ನು ಹಿಂದೂಗಳ ವಿರುದ್ಧ ಎತ್ತಿಕಟ್ಟಿತು ಎಂಬುದನ್ನು ದಾಖಲಿಸಿದ್ದಾರೆ. ಹಾಗೂ ಪಂಡಿತರನ್ನು ಹೊರದೂಡಲು ಇಚ್ಛಿಸದ ಅಕ್ಕಪಕ್ಕದ ಮುಸ್ಲಿಮರು ಹೇಗೆ ಅಸಹಾಯಕರಾಗಿ ಕಣ್ಣೀರಿಟ್ಟು ಎಲ್ಲಿಯಾದರೂ ಹೋಗಿ ಬದುಕಿಕೊಳ್ಳಿ ಎಂದು ವಿಮಾನ ನಿಲ್ದಾನ, ರೈಲು ನಿಲ್ದಾಣದವರೆಗೂ ತಮ್ಮದೇ ವಾಹನದಲ್ಲಿ ಬಿಟ್ಟು ವಿದಾಯ ಹೇಳಿದ ಘಟನೆಗಳನ್ನೂ ದಾಖಲಿಸಿದ್ದಾರೆ. ಒಟ್ಟಿನಲ್ಲಿ ಉಗ್ರತ್ವದ ಜಬರದಸ್ತಿನ ಮುಂದೆ ಮಾನವೀಯ ಅಂತಃಕರಣ ಸೋತು, ಇದರಿಂದ ನಲುಗಿಹೋಗಿದ್ದು ಮಾತ್ರ ಪಂಡಿತ ಸಮುದಾಯ.

ಇದಾಗಿ ಮೂರು ದಶಕ. 1989 ಡಿಸೆಂಬರ್ 1990 ಜನವರಿ. ಶ್ರೀನಗರ ಸೇರಿದಂತೆ ಕಾಶ್ಮೀರ ಕಣಿವೆಯಲ್ಲಿ ಧರ್ಮಾಂಧತೆಯ ಕಾರ್ಮೋಡ. ಅದರಲ್ಲೂ ಜನವರಿ 19, 1990 ಅಲ್ಲಿನ ಪಂಡಿತರ ಪಾಲಿಗೆ ಕರಾಳ ದಿನ.
ಅಲ್ಲಿನ ಮಸೀದಿಗಳ ಮೈಕಲ್ಲಿ ನಾರಾಯೇ ತಖದೀರ್, ಅಲ್ಲಾಹೋ ಅಕ್ಬರ್ಘೋಷಣೆ ವ್ಯಾಪಕವಾಯ್ತು. ಪಂಡಿತರ ಮುಖದಲ್ಲಿ ಆತಂಕ, ಭಯ, ಪ್ರಾಣಭೀತಿ. ಜನವರಿ 14ರಂದು ಅಲ್ಲಿನ ಸ್ಥಳೀಯ ಪತ್ರಿಕೆ ಅಲ್ಸಫಾದಲ್ಲಿ ಹಿಜ್ಬುಲ್ಮುಜಾಹಿದೀನ್ಮುಖಂಡನ ಪತ್ರಿಕಾ ಪ್ರಕಟಣೆ – ಕಾಶ್ಮೀರ ಪಂಡಿತರಿಗೆ ಕೊನೆಯ ಎಚ್ಚರಿಕೆ. ಜೀವದ ಮೇಲೆ ಆಸೆಯಿದ್ದರೆ ಕಣಿವೆ ಬಿಟ್ಟು ತೊಲಗಿ! ಅಂಥದ್ದೇ ಒಂದು ಪ್ರಕಟಣೆ ಅಫ್ತಾಬ್ಅನ್ನೋ ಪತ್ರಿಕೆಯಲ್ಲೂ ಬಂತು.
ಜನವರಿ 19 ರ ರಾತ್ರಿ ಇಡೀ ಮಸೀದಿಗಳ ಮೈಕುಗಳಲ್ಲಿ ಯುದ್ಧಘೋಷ. ʻನಾರಾಯೇ ತಖದೀರ್; ಅಲ್ಲಾಹೋ ಅಕ್ಬರ್ʼ.. ಕಣಿವೆಯಲ್ಲಿ ಬದುಕಬೇಕಾ? ಮುಸ್ಲಿಮರಾಗಿ ಅಲ್ಲಾಹೋ ಅಕ್ಬರ್ಅನ್ನಿ. ಕಾಶ್ಮೀರ ಪಾಕಿಸ್ತಾನವಾಗುವುದು. ಪಂಡಿತರ ಗಂಡಸರು ಹೆಂಗಸರನ್ನೆಲ್ಲ ನಮಗೊಪ್ಪಿಸಿ ಹೊರಡಬಹುದು.. ಜಾಗೋ ಜಾಗೋ ಸುಬಹ ಹುಯೀ; ರೂಸ್ನೆ ಬಾಝಿ ಹಾರೀ ಹೈ, ಹಿಂದ್ಪೆ ಲಜ್ಜಾ ತಾರೀ ಹೈ; ಅಬ್ಕಾಶ್ಮೀರ್ಕಿ ಬಾರಿ ಹೈ ಇತ್ಯಾದಿ ಅಸಂಬದ್ಧ ಘೋಷಣೆಗಳು. ಇಡೀ ರಾತ್ರಿ ಪಂಡಿತರ ಹೆಣ್ಣುಮಕ್ಕಳನ್ನು ಸ್ಟೋರ್ರೂಮ್ನಲ್ಲಿ ಕೂಡಿ ಹಾಕಿದ ಮನೆಯ ಗಂಡಸರು ಬಾಗಿಲು ಹಾಕಿಕೊಂಡು ಕಾವಲು ಕುಳಿತರು. ಬಾಗಿಲಲ್ಲಿ ಸೀಮೆಎಣ್ಣೆ ಇಟ್ಟುಕೊಂಡು! ಅಕಸ್ಮಾತ್ದಾಳಿ ನಡೆದ ಪಕ್ಷದಲ್ಲಿ ಸೀಮೆಎಣ್ಣೆ ಸುರಿದುಕೊಂಡು ಧಗಧಗಿಸಿ ಉರಿದುಹೋಗಲೂ ಅವರು ಸಿದ್ಧರಾಗಿದ್ದರು. ಥೇಟ್ರಜಪೂತ ರಾಜಕುಮಾರಿಯರು ಮುಸ್ಲಿಮ್ಅರಸರ ದಾಳಿಗೆ ಸಿಕ್ಕಾಗಿ ಬೆಂಕಿಗೆ ಹಾರಿದ ʻಜೋಹರ್ʼ ಬಲಿದಾನ ನೆನಪಿಸುತ್ತಿತ್ತು ಆವತ್ತಿನ ಕ್ಷಣಗಳು. ಮಸೀದಿ ಮೈಕುಗಳ ಘೋಷಣೆ, ಉಗ್ರರ ಆಕ್ರಮಣ, ಅತ್ಯಾಚಾರ, ಹಿಂಸೆ ಎಲ್ಲದಕ್ಕೂ ಬೆದರಿ 1990 ಜನವರಿ 19 ರ ಒಂದೇ ದಿನ ಲಕ್ಷಾಂತರ ಪಂಡಿತ ಕುಟುಂಬಗಳು ಸಿಕ್ಕಿದ್ದನ್ನು ಗಂಟುಮೂಟೆ ಕಟ್ಟಿಕೊಂಡು ಜಮ್ಮುಗೆ ಬಂದಿಳಿದರು. ಇದು ಭಾರತ ವಿಭಜನೆಯ ಮಹಾವಲಸೆಯ್ನು ನೆನಪಿಸುತ್ತಿತ್ತು. ಇಷ್ಟೆಲ್ಲ ಘಟನೆಗಳು ಇಂದಿನ ಡಿಜಿಟಲ್ಯುಗದಲ್ಲಿ ನಡೆದಿದ್ದರೆ ಪರಿಸ್ಥಿತಿ ಬೇರೆಯದೇ ರೂಪ ಪಡೆದುಕೊಳ್ಳುತ್ತಿತ್ತು. ಆದರೆ ಅಂದಿನ ಕಾಂಗ್ರೆಸ್ಸರಕಾರ ಇಂಥ ಒಂದು ಬೃಹತ್ವಲಸೆಯ ಸುದ್ದಿಯನ್ನು ರೇಡಿಯೋದಲ್ಲಿ ಬಿತ್ತರಿಸಲೂ ಬಿಡದೇ ತಡೆ ಒಡ್ಡಿ ಸುಮ್ಮನೆ ಕುಳಿತುಕೊಂಡಿತ್ತು. ಊರು ಸೂರೆ ಹೋದಮೇಲೆ ದಿಡ್ಡಿಬಾಗಿಲು ಹಾಕಿದಂತೆ, ಆನಂತರ ಕಾಶ್ಮೀರಕ್ಕೆ ಸೇನೆಯನ್ನು ಕಳಿಸಿತ್ತು ಕಾಂಗ್ರೆಸ್ಸರಕಾರ.
ಇಂದಿಗೂ ತಮ್ಮದೇ ದೇಶದಲ್ಲಿ ನಿರಾಶ್ರಿತರಂತೆ ಬದುಕುತ್ತಿರುವ ಪ್ರಪಂಚದ ಏಕೈಕ ಸಮುದಾಯ ಕಾಶ್ಮೀರಿ ಪಂಡಿತರದು. ಕೇಂದ್ರ ಸರಕಾರ ಈಗೇನೋ ಪಂಡಿತರನ್ನು ಮರಳಿ ತಾಯ್ನಾಡಿ ಕಳಿಸುವ ಮಾತಾಡುತ್ತಿದೆ. ಆದರೆ ಪಂಡಿತರಿಗಾಗಿ ಕಾಶ್ಮೀರದ ಪಟ್ಟಣಗಳಲ್ಲಿ ಪ್ರತ್ಯೇಕ ಕಾಲೊನಿ ನಿರ್ಮಾಣ ಮಾಡುವುದನ್ನು ಪ್ರತ್ಯೇಕತಾವಾದಿ ನಾಯಕ ಯಾಸಿನ್ಮಲ್ಲಿಕ್ವಿರೋಧಿಸಿದ್ದಾನೆ. ಬದಲಿಗೆ, ಪಂಡಿತರು ಮರಳಿ ತಮ್ಮ ತಮ್ಮ ಮನೆಗಳಿಗೆ ಬನ್ನಿ; ಮೊದಲಿನಂತೆ ಬೆರೆತು ಬಾಳೋಣ ಎಂಬ ಕರೆ ಕೊಟ್ಟಿದ್ದಾನೆ. ಆದರೆ ಅವನ ಕರೆಯಲ್ಲಿ ನಿಜವಾದ ಅಂತಃಕರಣ ಗೋಚರಿಸುವುದಿಲ್ಲ. ಇದು ಮೊಸಳ ಕಣ್ಣೀರು ಎಂಬುದು ಪಂಡಿತರಿಗೂ ಅರಿವಿದೆ.
ಅಂದು ಕಾಶ್ಮೀರಕ್ಕೆ ಮರಳುವ ತಹತಹ ಹೊಂದಿದ್ದ ಹಿರಿಯರಿಗೆ ಈಗ ವಯಸ್ಸಾಗಿದೆ. ನಂತರದ ತಲೆಮಾರಿನವರು ಬೇರೆ ಬೇರೆ ಕಡೆ ವಿದ್ಯೆ, ಉದ್ಯೋಗ ಪಡೆದುಕೊಂಡು ʻಜಾಗತಿಕ ನಾಗರಿಕʼರಾಗಿದ್ದಾರೆ. ಅವರಿಗೆ ಕಾಶ್ಮೀರದ ಮೇಲೆ ಅಂಥದ್ದೇನೂ ವ್ಯಾಮೋಹವಿಲ್ಲ. ಒಟ್ಟಿನಲ್ಲಿ ಮಿಂಚಿಹೋದ ಕಾಲಕ್ಕೆ ಚಿಂತಿಸ ಫಲವಿಲ್ಲ ಎಂಬಂತಾಗಿದೆ. ಎಷ್ಟೆಲ್ಲ ಕೂಡಿಸಿ ಕಳೆದು ಗುಣಾಕಾರ ಭಾಗಾಕಾರ ಹಾಕಿದರೂ ಕೊನೆಯಲ್ಲಿ ಅಲ್ಲಿ ಉಳಿಯುವುದು ʻಇಸ್ಲಾಮೀಕರಣʼದ ಹೆಜ್ಜೆಗುರುತುಗಳಿಂದ ನಲುಗಿದ ಪಂಡಿತ ಸಮುದಾಯದ ಅಳಿದುಳಿದ ಕುರುಹು ಮಾತ್ರ.







