ಹಿರಿಯ ಪತ್ರಕರ್ತೆ ಶೋಭಾ ಮಳವಳ್ಳಿ ಡಾ.ರಾಜ್ ಸಮಾಜಕ್ಕೆ ಕೊಟ್ಟ ಕೊಡುಗೆ ಏನು ಎಂದು ಪ್ರಶ್ನೆ ಕೇಳುವವರಿಗೆ ಈ ಬರಹ ಅರ್ಪಿಸಿದ್ದಾರೆ!
***
ಕನ್ನಡ ಚಿತ್ರರಂಗದ ಎಲ್ಲ ಪ್ರಥಮಗಳು, ಎಲ್ಲ ಮೊದಲುಗಳು, ಹೊಸತುಗಳು, ಬದಲಾವಣೆಗಳು, ದಾಖಲೆಗಳು.. ಎಲ್ಲವೂ ಇರುವುದು ವರನಟ ಡಾ.ರಾಜಕುಮಾರ್ ಹೆಸರಿನಲ್ಲಿ. ಇಡೀ ಭಾರತೀಯ ಚಿತ್ರೋದ್ಯಮದಲ್ಲೇ ರಾಜ್ಕುಮಾರ್ಗೊಂದು ಘನತೆಯ ಸ್ಥಾನವಿದೆ. ದೊಡ್ಡ ಅಭಿಮಾನಿ ಬಳಗವಿದೆ, ಅವರನ್ನು ದೇವರೆಂದು ಪೂಜಿಸುವ, ಆರಾಧಿಸುವ ‘ಅಭಿಮಾನಿ ದೇವರು’ಗಳಿದ್ದಾರೆ.
ಇಂಥ ರಾಜ್‌ಕುಮಾರ್ ಸಮಾಜಕ್ಕೆ, ಜನರಿಗೆ ಕೊಟ್ಟ ಕೊಡುಗೆ ಏನು? ಎಂಬ ಪ್ರಶ್ನೆ ನಿರಂತರವಾಗಿ ಕೇಳುತ್ತಲೇ ಬಂದಿದೆ. ಈ ಪ್ರಶ್ನೆ ಕೇಳುವ ದೊಡ್ಡ ಗುಂಪೇ ಇದೆ. ಡಾ.ರಾಜ್ ಅವರ ಕೊಡುಗೆಯ ಬಗ್ಗೆ ಅನುಮಾನಗಳಿವೆ. ಅವರೇನ್ ಏನ್ ಮಾಡಿದ್ರಪ್ಪ? ಎಂಬ ಲೇವಡಿಯ ಮಾತುಗಳಿವೆ. ‘ಒಂದು ರೂಪಾಯಿ ಬಿಚ್ಚಲಿಲ್ಲ’ ಎಂಬ ಆರೋಪಗಳಿವೆ.
ಅಷ್ಟಕ್ಕೂ ರಾಜ್‌ಕುಮಾರ್ ಏನು ಮಾಡಬೇಕಿತ್ತು? ಸಹಾಯ, ಸಹಕಾರ, ನೆರವು, ಕೊಡುಗೆ ಎಲ್ಲವೂ ಬಹಿರಂಗವಾಗಿ ಮಾಡಬೇಕಿತ್ತೆ ? ಹೇಳಿಕೊಳ್ಳಬೇಕಿತ್ತೆ ? ಅದರ ಅಗತ್ಯವಿತ್ತೆ ? ಡಾ.ರಾಜ್‌ಕುಮಾರ್ ನಟಿಸಿದ ಸಿನಿಮಾಗಳಿಗೇ ಈ ಸಮಾಜಕ್ಕೆ ಕೊಟ್ಟ ಅತ್ಯಮೂಲ್ಯ ಕೊಡುಗೆಗಳು ಅನ್ನಿಸುವುದಿಲ್ಲವೇ ? ರಾಜ್‌ಕುಮಾರ್ ಕನ್ನಡದ ಅಸ್ಮಿತೆಯ ಸಂಕೇತ ಅಲ್ಲವೇ ?
‘ಅಭಿಮಾನಿ ದೇವರು’ಗಳ ಭಾವನೆಗೆ ಧಕ್ಕೆಯಾಗದಂಥ ಸಿನಿಮಾಗಳಲ್ಲಿ ನಟಿಸಿ ಹಾಗೆಯೇ ಬದುಕಬೇಕೆಂಬ ನೈತಿಕ ಪ್ರಜ್ಞೆಯನ್ನು ಸದಾ ಜಾಗೃತವಾಗಿಟ್ಟುಕೊಂಡಿದ್ದವರು ಡಾ.ರಾಜ್. ಆ ಲಕ್ಷ್ಮಣ ರೇಖೆ ದಾಟಬಾರದೆಂಬ ಎಚ್ಚರಿಕೆಯೊಂದಿಗೆ ಸದಭಿರುಚಿಯ ಚಿತ್ರಗಳಲ್ಲಿ ನಟಿಸುವ ಮೂಲಕ ಸಮಾಜಕ್ಕೆ ಜವಾಬ್ದಾರರಾಗಿ ಬದುಕಿದವರು ಡಾ.ರಾಜ್.
ಅಣ್ಣಾವ್ರ ಪ್ರತೀ ಸಿನಿಮಾದಲ್ಲೂ ಸಂದೇಶವಿರುತ್ತಿತ್ತು. ನೈತಿಕತೆಯ ಗೆರೆ ದಾಟುವಂಥ ಒಂದೇ ಒಂದು ದೃಶ್ಯವೂ ಅವರ ಚಿತ್ರಗಳಲ್ಲಿಲ್ಲ ಅಂದರೆ, ಅದೆಷ್ಟರ ಮಟ್ಟಿಗೆ ಅವರ ಸಾಮಾಜಿಕ ಪ್ರಜ್ಞೆ ಜಾಗೃತವಾಗಿತ್ತು! ಅಚ್ಚರಿ ಅನ್ನಿಸದೇ ಇರದು.
ಅನುರೂಪದ ದಾಂಪತ್ಯ, ಅಣ್ತಮ್ಮರ ಸಹೋದರತ್ವ, ಅಕ್ಕ-ತಂಗಿಯರ ನಡುವಿನ ಬಾಂಧವ್ಯ, ಕುಟುಂಬಕ್ಕಾಗಿ ತ್ಯಾಗ, ತನಗೆಷ್ಟೇ ಕೆಟ್ಟದ್ದು ಬಯಸಿದರೂ, ತಾನು ಕೆಟ್ಟದು ಬಯಸಬಾರದೆಂಬ ಮಗ, ತಂದೆ, ಅಣ್ಣ, ಗಂಡನ ಪಾತ್ರಗಳಿಗೆ ಜೀವ ತುಂಬಿ ನಟಿಸುತ್ತಲೇ ನಮ್ಮನ್ನೂ ಸರಿದಾರಿಗೆ ಕರೆದೊಯ್ದವರು ಡಾ.ರಾಜ್. ‘ಸಾಕ್ಷಾತ್ಕಾರ’ ಚಿತ್ರ ಕರ್ಮ ಸಿದ್ಧಾಂತವನ್ನು ಸಾರಿದರೆ, ‘ಬಂಗಾರದ ಮನುಷ್ಯ’ ವಿದ್ಯಾವಂತ ಯುವಕನಿಂದ ಕೃಷಿ ಕ್ಷೇತ್ರ ಬೆಳೆಯುತ್ತದೆಂಬ ಭವಿಷ್ಯದ ಚಿಂತನೆಯ ಸಾರ, ಅವಿಭಕ್ತ ಕುಟುಂಬಗಳ ಮಹತ್ವ ಸಾರುವ ‘ಚಂದವಳ್ಳಿಯ ತೋಟ’, ‘ಗಂಧದ ಗುಡಿ’ ಅರಣ್ಯ- ವನ್ಯಜೀವಿ ಸಂರಕ್ಷಣೆಯ ಅರಿವು ಮೂಡಿಸಿದ ಚಿತ್ರ. ಸಹಾಯ ಬೇಡಿ ಬಂದವರನ್ನು ಎಂದೂ ಬರಿಗೈಲಿ ಕಳಿಸಬಾರದೆಂಬ ಮಾನವೀಯ ಸಂದೇಶ ಸಾರಿದ ‘ಕಸ್ತೂರಿ ನಿವಾಸ’, ವಿದ್ಯಾವಂತ ಮಗನಿಂದ ತಿರಸ್ಕಾರಕ್ಕೊಳಗಾದರೂ, ತನ್ನ ಶಹನಾಯಿ ವಿದ್ಯೆ ಮರೆಯದ ‘ಸನಾದಿ ಅಪ್ಪಣ್ಣ’, ಊರ ಗೌಡನ ಅಟ್ಟಹಾಸ, ಧಿಮಾಕಿಗೆ ಕಡಿವಾಣ ಹಾಕುವ ಕೆಚ್ಚೆದೆಯ ಯುವಕನ ‘ಸಂಪತ್ತಿಗೆ ಸವಾಲ್ ’, ಕುಟುಂಬ ಪೋಷಣೆಗೆ ಹಣ ಉಳಿತಾಯದ ಜತೆಗೆ ಮಕ್ಕಳನ್ನು ಕಟ್ಟುನಿಟ್ಟಾಗಿ ಸಾಕುತ್ತಾ, ಕೊನೆಗೆ ಹೆಂಡತಿಗಾಗಿ ಸೋಲುವ ‘ಭಾಗ್ಯವಂತರು’, ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ ತಿಳಿಸಿಕೊಟ್ಟ ‘ಜೀವನ ಚೈತ್ರ’ ಒಂದೇ ಎರಡೇ? ರಾಜ್‌ಕುಮಾರ್ ನಟಿಸಿದ 205 ಚಿತ್ರಗಳು ಒಂದೊಂದು ಮುತ್ತುಗಳು. ಜನಮಾನಸದಿಂದ ಎಂದೆಂದಿಗೂ ಅಳಿಸಿಹೋಗದಂಥ ಪಾತ್ರಗಳು.
ತನ್ನ ಚಿತ್ರ ಜೀವನದ ಉದ್ದಕ್ಕೂ ಸಾಮಾಜಿಕ ಜವಾಬ್ದಾರಿ, ನೈತಿಕತೆ ಮೆರೆದವರು ಡಾ.ರಾಜ್. ಹಾಗೆಯೇ ಬದುಕಿ ತೋರಿಸಿದರೂ ಕೂಡ. ಗೋಕಾಕ್ ಚಳವಳಿಯೆಂದೇ ಪ್ರಸಿದ್ಧವಾದ ಕನ್ನಡಪರ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಕನ್ನಡ ಪರ ಜಾಗೃತಿಗೆ ಟೊಂಕ ಕಟ್ಟಿ ನಿಂತವರು. ಕನ್ನಡ, ಕರ್ನಾಟಕದ ವಿಷಯದಲ್ಲಿ ಗಟ್ಟಿ ಹೋರಾಟಕ್ಕೆ ಅಡಿಪಾಯ ಹಾಕಿಕೊಟ್ಟವರೇ ರಾಜ್. ಅವರಂದು ಗೋಕಾಕ್ ಚಳವಳಿಯಲ್ಲಿ ಭಾಗವಹಿಸದೇ ಹೋಗಿರದಿದ್ದರೆ, ಇಂದು ಕನ್ನಡದ ಸ್ಥಿತಿ ಅಧೋಗತಿಗಿಳಿಯುತ್ತಿತ್ತು ಉತ್ಪ್ರೇಕ್ಷೆಯ ಮಾತಲ್ಲ. ಇಂದಿಗೂ ಕನ್ನಡದ ದೈತ್ಯಶಕ್ತಿಯೇ ಡಾ.ರಾಜ್.
ಜನಪ್ರಿಯತೆ, ಕೀರ್ತಿಯ ಜತೆಗೆ ರಾಜ್‌ಕುಮಾರ್ ಹಣ ಸಂಪಾದಿಸಿರಬಹುದು. ಆದರೆ, ಆ ಕಾಲಕ್ಕೆ ಅದೆಷ್ಟು ಲಕ್ಷಗಳನ್ನು ಸಂಭಾವನೆಯಾಗಿ ಪಡೆದಿರಬಹುದು? ರಾಜಕುಮಾರ್ ಜನರ ಪ್ರೀತಿ ಸಂಪಾದಿಸಿದಷ್ಟು, ಖಂಡಿತ ಹಣ ಸಂಪಾದಿಸಲಿಲ್ಲ. ತಾವು ಅಭಿನಯಿಸಿದ ಅನೇಕ ಚಿತ್ರಗಳಿಗೆ ಪೂರ್ಣ ಸಂಭಾವನೆಯನ್ನೂ ಪಡೆಯಲಿಲ್ಲವಂತೆ. ಮದ್ರಾಸ್ನಲ್ಲೇ ವಾಸ್ತವ್ಯ ಹೂಡಿದ್ದ ರಾಜ್‌ಕುಮಾರ್ ಅವರಿಗೆ ಹಲವು ನಿರ್ಮಾಪಕರು, ತಮ್ಮ ಚಿತ್ರಗಳು ಯಶಸ್ವಿಯಾಗಿಲ್ಲ ಎಂದು ಸುಳ್ಳು ಹೇಳುತ್ತಿದ್ದರಂತೆ. ನಿರ್ಮಾಪಕರ ಮಾತು ನಂಬುತ್ತಿದ್ದ ರಾಜ್‌ಕುಮಾರ್, ನಷ್ಟ ಭರಿಸಲು ಆ ಪ್ರೊಡ್ಯೂಸರ್ಗೆ ಮತ್ತೊಂದು ಕಾಲ್ಶೀಟ್ ಕೊಡುತ್ತಿದ್ದರಂತೆ. ಇನ್ನೂ ಹಲವು ಉದಾಹರಣೆಗಳಿವೆ.
ವಿನಯ ಸಂಪನ್ನತೆಯಿಂದಲೇ ನಟಿಸಿ, ಬದುಕಿದ ರಾಜ್, ಒಂದಿಡೀ ಜನರೇಷನ್ಗೆ ಮಾದರಿಯಾಗಿದ್ದವರು. ಪಾತ್ರಗಳ ಮೂಲಕವೇ ಯುವ ಸಮುದಾಯಕ್ಕೆ ಸರಿ-ತಪ್ಪುಗಳ ಬಗ್ಗೆ ಅರಿವು ಮೂಡಿಸಿದವರು. ಅವರ ಒಂದು ಸಿನಿಮಾದಲ್ಲಾದರೂ ಅನಗತ್ಯ ಹೊಡಿಬಡಿ ದೃಶ್ಯಗಳಿದ್ದವೇ ? ರಕ್ತ ಚೆಲ್ಲಾಡುತ್ತಿತ್ತೆ? ರುಂಡ ಚೆಂಡಾಡುತ್ತಿದ್ದರೇ ? ಸಿಗರೇಟ್, ಬೀಡಿ ಹಚ್ಚಿ ಹೊಗೆ ಬಿಟ್ಟರೇ ? ಹೀರೋಯಿಸಂ ತೋರಿಸುವಂಥ ಡೈಲಾಗ್ಗಳಿಲ್ಲ, ಬೇರೊಬ್ಬ ಹೀರೋಗೆ ಟಾಂಗ್ ಕೊಡುವಂಥ ಮಾತುಗಳಿಲ್ಲ, ನಾನಿರೋದೇ ಹೀಗೇ ಏನೀಗ? ನಾನ್ ಕಚಡ, ನಾನ್ ಪಕ್ಕಾ ಲೋಕಲ್, ನನ್ ಕೆಣಕಬೇಡಿ.. ಇಂಥ ಡೈಲಾಗ್ಗಳು ಕನಸಿನಲ್ಲೂ ಕೇಳಸಿಗದು.
ಅಪ್ಪಟ್ಟ ಶುದ್ಧ ಕನ್ನಡ, ಮುತ್ತಿನಂಥ ಮಾತು, ಮಾಣಿಕ್ಯ ಎನಿಸುವಂಥ ಡೈಲಾಗ್ಗಳು, ಜೇನಿನಲ್ಲಿ ಅದ್ದಿ ತೆಗೆದಂಥ, ಮತ್ತೆ, ಮತ್ತೆ ಕೇಳಬೇಕಿನಿಸುವ ಸುಶ್ರಾವ್ಯ ಕಂಠ. ಹೀರೋಯಿನ್ ಜತೆ ನವಿರಾದ ಪ್ರೇಮ, ರೊಮ್ಯಾನ್ಸ್. ರಾಜ್ ಅಭಿನಯಿಸಿದ ಪ್ರತಿ ಚಿತ್ರವೂ 22 ಕ್ಯಾರೆಟ್ ಬಂಗಾರ.
ಈಗ ಅಂಥ ಚಿತ್ರಗಳೂ ಇಲ್ಲ, ಕಥೆಯೂ ಇಲ್ಲ. ಯುವ ಜನಾಂಗವನ್ನು ಎಚ್ಚರಿಸುವಂಥ ಹೀರೋಗಳಂತು ಇಲ್ಲವೇ ಇಲ್ಲ. ಇರುವ ನಾಲ್ಕೈದು ಹೀರೋಗಳದ್ದು ಒಂದೊಂದು ರೀತಿಯ ಧಿಮಾಕು.
ಕೊಲೆ ಮಾಡಿದ್ದರಲ್ಲಿ ತಪ್ಪೇನು ಎನ್ನುವ, ತೆರೆ ಮೇಲೆ ನೈತಿಕತೆ ಪಾಠ ಹೇಳುತ್ತ ತೆರೆ ಹಿಂದೆ ಅನೈತಿಕವಾಗಿ ಬದುಕುವ, ತೆರೆ ಮೇಲೆ ಹೆಣ್ಣಿನ ರಕ್ಷಣೆಯ ಪಾಠ ಮಾಡುತ್ತ ತೆರೆ ಹಿಂದೆ ಹೆಂಡ್ತಿಯನ್ನೇ ಜಲಗಾರನ ಬಳಿ ಕಳಿಸುವ, ತೆರೆ ಮೇಲೆ ದೇವರು, ಧರ್ಮದ ಬಗ್ಗೆ ಉದ್ದುದ್ದು ಡೈಲಾಗ್ ಹೇಳುತ್ತ ತೆರೆ ಹಿಂದೆ ದೇವತೆಯನ್ನೇ ಬೆತ್ತಲು ಮಾಡಬೇಕೆಂದು ಹೇಳುವವರೇ ಜಾಸ್ತಿ. ಜೊತೆಗೆ ಏನು ಮಾಡಿದರೂ ಜೈಜೈ ಅನ್ನೋ ಫ್ಯಾನ್ಸ್! ಇದನ್ನೆಲ್ಲ ನೋಡಿದ ಮೇಲೂ ಡಾ.ರಾಜ್‌ಕುಮಾರ್ ಸಮಾಜಕ್ಕೆ ಕೊಟ್ಟ ಕೊಡುಗೆ ಏನು, ಸಮಾಜ ಸೇವೆ ಏನು ಎಂಬುದರ ಅರಿವಾಗಿರಬೇಕಲ್ಲ ?
ಅಷ್ಟಕ್ಕೂ ಡಾ.ರಾಜ್‌ಕುಮಾರ್ , ಸಮಾಜಕ್ಕೆ ಕೊಟ್ಟಿದ್ದೇನು ಎಂದು ಪ್ರಶ್ನಿಸುತ್ತಿದ್ದವರಿಗೆ ಪುನೀತ್ ರಾಜ್‌ಕುಮಾರ್ ಉತ್ತರ. ಅಪ್ಪು ಬದುಕಿರುವವರೆಗೂ ಅವರ ದಾನದ ಗುಣ ಯಾರ ಅರಿವಿಗೂ ಬಂದಿರಲಿಲ್ಲ. ಈ ನಿಟ್ಟಿನಲ್ಲಿ ಶಿವಣ್ಣ, ರಾಘಣ್ಣರೂ ಕಮ್ಮಿ ಏನಿಲ್ಲ. ಅದು ಅಪ್ಪನಿಂದ ಬಂದ ಗುಣವಲ್ಲವೇ ?
ತೆರೆ ಮೇಲಷ್ಟೇ ಅಲ್ಲ ನಿಜಜೀವನದಲ್ಲೂ ಸಾಮಾಜಿಕ ಪ್ರಜ್ಞೆ, ಸಾಮಾಜಿಕ ಜವಾಬ್ದಾರಿಯನ್ನು ಮರೆಯದ ಬದ್ಧತೆ, ಅಬ್ಬರ, ಆಡಂಬರವಿಲ್ಲದೆ ಬದುಕಿದ ಡಾ.ರಾಜಕುಮಾರ್ ಅವರ ನೈತಿಕತೆಗೆ ಸಾವಿಲ್ಲ..!
- ಶೋಭಾ ಮಳವಳ್ಳಿ









