ಪ್ರಯಾಗರಾಜ್ ಕುಂಭಮೇಳ ಮತ್ತೆ ಮತ್ತೆ ಸುದ್ದಿಯಲ್ಲಿದೆ. ಸದ್ಯದ ಸುದ್ದಿ ತ್ರಿವೇಣಿ ಸಂಗಮದ ನೀರು ಅತ್ಯಂತ ಕಲುಷಿತವಾಗಿದ್ದು, ಸ್ನಾನಕ್ಕೂ ಯೋಗ್ಯವಲ್ಲ ಎಂಬ ಆಘಾತಕಾರಿ ವರದಿ. ತ್ರಿವೇಣಿ ಸಂಗಮದ ನೀರಿನಲ್ಲಿ ಮಲದಿಂದಾಗಿ ಬ್ಯಾಕ್ಟೀರಿಯಾ ಪತ್ತೆಯಾಗಿದೆ ಎಂಬ ವರದಿ ಬಿರುಗಾಳಿ ಎಬ್ಬಿಸಿದೆ.
ಅಷ್ಟಕ್ಕೂ, ನದಿಗಳು ಮಲಿನವಾಗುವುದು, ನದಿ ದಂಡೆಯಲ್ಲಿ ಕಸದ ರಾಶಿ, ಬೇಕಾಬಿಟ್ಟಿ ಎಸೆದ ಬಟ್ಟೆಗಳು.. ನದಿ ದಂಡೆ ಸುತ್ತ ಮಲವಿಸರ್ಜನೆ….!!
ಈ ಮಲೀನದ ರೂವಾರಿ ಯಾರು?ಯಾವುದೋ ಹಳ್ಳಿಯಲ್ಲಿ ಹರಿಯುವ ನೀರಿನ ತೊರೆಯನ್ನೂ, ನೀರಿನ ಹಳ್ಳವನ್ನೂ ಬಿಡದ ಜನರು, ತ್ರಿವೇಣಿ ಸಂಗಮದಂಥ ಪವಿತ್ರ ನದಿಯನ್ನು ಬಿಟ್ಟಾರೇ? ನದಿಸ್ನಾನ ಅಂದ್ರೆ ಮುಗುಗೇಳುವುದಷ್ಟೇ ಆಗಬೇಕಿತ್ತು? ಆದ್ರೆ ಇಲ್ಲೇನಾಗುತ್ತದೆ? ಶಾಂಪು, ಸೋಪು ಹಾಕಿ ತೊಳೆದು, ಹಲ್ಲುಜ್ಜಿ, ಬಟ್ಟೆ ಒಗೆದು.. ತಾವು, ತಮ್ಮಬಟ್ಟೆ ಕ್ಲೀನ್ ಮಾಡಿಕೊಳ್ಳುವ ಭರದಲ್ಲಿ ಇಡೀ ನದಿಯನ್ನೇ ತಮ್ಮ ಕೊಟ್ಟಾಕೊಳಕು ತುಂಬಿಸಿ, ಮಲೀನ ಮಾಡಿಬರುತ್ತಾರೆ. ಅಂಥದ್ದರಲ್ಲಿ, ಈಗಾಗಲೇ 50 ಕೋಟಿಗೂ ಹೆಚ್ಚು ಜನರು ಪುಣ್ಯಸ್ನಾನ ಮಾಡಿದ್ದಾರೆ ಎನ್ನಲಾಗ್ತಿರೋ ಕುಂಭಮೇಳದಲ್ಲಿ ಗಂಗೆ-ಯಮುನಾ-ಸರಸ್ವತಿಯ ಸಂಗಮ ಮಲಿನವಾಗದೇ ಇದ್ದೀತೇ? ನಾನು ನೋಡಿದಂತೆ, ಸಂಗಮದ ಉದ್ದಕ್ಕೂ ಪೊಲೀಸ್ ಕಾವಲಿತ್ತು. ಶಾಂಪು, ಸೋಪು ಬಳಕೆ ನಿಷೇಧಿಸಲಾಗಿತ್ತು. ಈ ಬಗ್ಗೆ ಮೈಕ್ ನಲ್ಲಿ ಪದೇ ಪದೇ ಘೋಷಣೆ ಕೇಳಿ ಬರುತ್ತಿತ್ತು. ಇವೆಲ್ಲವನ್ನೂ ಮೀರಿ ಜನರು, ಸಂಗಮವನ್ನು ಮನಬಂದಂತೆ ಬಳಸಿದ್ದಾರೆಂದರೆ? ಅದು ಮಲಿನವಾಗಿದೆ ಎಂದರೆ? ಅದಕ್ಕೆ ಹೊಣೆ ಯಾರು? ಪುಣ್ಯ ಸ್ನಾನವೇ ಎಲ್ಲರ ಆಸೆಯೂ, ಬಯಕೆಯೂ, ಜೀವನದ ಅಪರೂಪದ ಕ್ಷಣವೂ ಅನ್ನಿಸಿದ ಮೇಲೆ ನದಿಯ ಪಾವಿತ್ರ್ಯತೆ ಕಾಪಾಡಬೇಕಾದದ್ದು ಭಕ್ತರೇ ತಾನೇ? ಸ್ವಚ್ಚತೆ ಕಾಪಾಡಿ ಎಂದು ಗಂಟಲು ಹರಿದುಕೊಂಡಾಗಲೇ ಕಿವಿಗಾಕಿಕೊಳ್ಳದ ಜನ,ಈಗ ಸಂಗಮ ಮಲೀನವಾಗಿದೆ, ಮಲ ಸೇರಿದೆ ಎಂದು ಹೇಳಿದರೆ ಹೆದರುತ್ತಾ? ಕ್ಲೀನಾಗಿರಲು ಪ್ರಯತ್ನಿಸ್ತಾರಾ ? ಇಲ್ಲವೇ ಇಲ್ಲ.ಕುಂಭಮೇಳ ಆರಂಭವಾದ ಮೊದಲ ದಿನೇ ಸುಮಾರು 15 ಮಿಲಿಯನ್‌ಗಿಂತಲೂ ಹೆಚ್ಚು ಜನರು ಪವಿತ್ರ ಸ್ನಾನ ಮಾಡಿದ್ದಾರಂತೆ.

4,000 ಹೆಕ್ಟೇರ್‌ಗಳಲ್ಲಿ ಹರಡಿರುವ ನಗರ
1,50,000 ಡೇರೆಗಳು
1,45,000 ಶೌಚಾಲಯ,
40,000 ಭದ್ರತಾ ಸಿಬ್ಬಂದಿ
2,700- AI-ಸಕ್ರಿಯಗೊಳಿಸಿದ ಕ್ಯಾಮೆರಾಗಳು.
ಇಷ್ಟೆಲ್ಲ ಭದ್ರತೆ ಇದ್ದರೂ, ಜನರು ಕಣ್ತಪ್ಪಿಸಿ ಇಡೀ ನದಿಗೆ ಕೊಳಕು ತುಂಬಿಬಿಟ್ಟರೆ, ಕಾಪಾಡುವುದು ಹೇಗೆ? ಸ್ವಯಂ ಜಾಗೃತಿ ಅಥವಾ ಪಾಪಪ್ರಜ್ಞೆ ಮೂಡದ ಹೊರತು, ನದಿಗಿಂತ ಮಿಗಿಲಾಗಿ ಅಷ್ಟೊಂದು ಜನರ ಮಹಾಪೂರ ಹರಿದು ಸಾಗರದ ರೀತಿ ಜನ ಜಮಾಯಿಸುತ್ತಿರುವಾಗ ಸ್ವಚ್ಛತೆ ಮೇಲೆ ನಿಗಾವಹಿಸುವುದು ಮನುಷ್ಯನ ಊಹೆಗೆ ಮೀರಿದ್ದು.ಆದರೆ ಹೊಳೆ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಕೇ ಅನ್ನೋ ಮನಸ್ಥಿತಿ ನಮ್ಮದು. ತಮ್ಮ ಮನೆ ಗಲೀಜು, ಕಸವನ್ನು ಪಕ್ಕದ ಮನೆ ಎದುರು, ರಸ್ತೆ ಬದಿ ಬಿಸಾಕಿ ಎಸ್ಕೇಪ್ ಆಗೋ ಜನರು, ಎಲ್ಲೋ ಹುಟ್ಟಿ ಎಲ್ಲೋ ಹರಿದು ಹೋಗುವ ನದಿಯ ಸ್ವಚ್ಚತೆ ಬಗ್ಗೆ ತಲೆಕೆಡಿಸಿಕೊಳ್ತಾರಾ? ತಮ್ಮ ಮನಸ್ಸಿನಲ್ಲಿ ತುಂಬಿದ ಕಲ್ಮಶವನ್ನೇ ಹೊರಹಾಕದ ಜನರು, ಸಂಗಮದಲ್ಲಿ ಮುಳುಗೆದ್ದು ಪಾಪ ಕರ್ಮ ಕಳೆದುಕೊಂಡೆವೆಂದು, ದೇಹದ ಕಲ್ಮಶವನ್ನು ನದಿಗೆ ಎಸೆದು, ತಾವು ಶುದ್ಧವಾದೆವೆಂದುಕೊಂಡು ಸಂಭ್ರಮಿಸುವ ಆಷಾಢಭೂತಿಗಳು.ಮಲೀನವೆಂಬುದು ಗಂಗೆಗೂ, ಯುಮುನೆಗೂ, ಸರಸ್ವತಿಗೂ ಹೊಸದೇ..? ಮನುಷ್ಯರಾದ ನಾವು ಕನಿಷ್ಠ ಸಂವೇದನೆಯುಳ್ಳವರಾಗಿದ್ದರೆ ಗಂಗೆ ಮತ್ತು ಅದರ ಉಪನದಿಗಳ ಪುನಶ್ಚೇತನಕ್ಕೆ 20 ಸಾವಿರ ಕೋಟಿ ರೂಪಾಯಿಗಳ 5 ವರ್ಷಗಳ ಯೋಜನೆಯನ್ನೇ 2014-15ರಲ್ಲಿ ಲಾಂಚ್ ಮಾಡುವ ಅಗತ್ಯವಿತ್ತೇ? ಮಾರ್ಚ್ 2021ಕ್ಕೆ ಮುಗಿಯಬೇಕಾದ ಯೋಜನೆಯನ್ನು ಮತ್ತೆ 2,500 ಕೋಟಿ ರೂಪಾಯಿಗಳ ಹೆಚ್ಚುವರಿ ಅನುದಾನದೊಂದಿಗೆ ಮಾರ್ಚ್ 2026ರವರೆಗೂ ವಿಸ್ತರಿಸುವ ಉಮೇದು ಇರುತ್ತಿತ್ತೇ? ದೂರದ ಪ್ರಯಾಗ್ ರಾಜ್ ನ ತ್ರಿವೇಣಿ ಸಂಗಮದ ಮಲೀನದ ಮಾತಿರಲಿ. ಇಲ್ಲೇ ನಮ್ಮ ಶ್ರೀರಂಗಪಟ್ಟಣದ ಕಾವೇರಿ ಸ್ನಾನಘಟ್ಟವನ್ನೋ ನಂಜನಗೂಡಿನ ಕಪಿಲಾ ನದಿಯ ಸ್ನಾನಘಟ್ಟವನ್ನೋ ನೋಡಿದರೆ ದಂಡೆಯ ಮೇಲೆ ಕಂಡುಬರುವ ಬಣ್ಣಬಣ್ಣದ ಬಟ್ಟೆಗಳು ಭೂದೇವಿಯ ಮೈಯನ್ನು ಚಿಂದಿ ಚಿಂದಿ ಮಾಡಿರುವ ಹಾಗೆ ಕಾಣುತ್ತದೆ. ಇನ್ನು ಎಂದೂ ನಿರೀಕ್ಷಿಸದ ಜನರ ಜಾತ್ರೆಯಾದ ಗಂಗೆಯ ತಟವನ್ನು ಮಲೀನದ ಹೊರತಾಗಿ ನೋಡಲು ಸಾಧ್ಯವೇ? ಅಷ್ಟಕ್ಕೂ ಮಲೀನವೆಂಬುದು ಮನುಷ್ಯನಿಗೇ ಹೊರತು, ಹರಿಯುವ ನದಿಗಲ್ಲ. ಜೀವನದಿಗೆ ಪಾಪ ಕಳೆಯುವುದೇ ಹುಟ್ಟು ಗುಣ. ಮನುಷ್ಯನಿಗೆ ಕೊಳೆಯುವುದೇ ಕೆಟ್ಟ ಗುಣ..!!
’ಎಲ್ಲೋ ಮಾಡಿದ ಪಾಪ ಪುಣ್ಯ ಕ್ಷೇತ್ರದಲ್ಲಿ ಕಳೆಯುತ್ತದೆ. ಪುಣ್ಯ ಕ್ಷೇತ್ರದಲ್ಲಿ ಮಾಡಿದ ಪಾಪ ಎಲ್ಲಿ ಹೋದರೂ ಕಳೆಯಲ್ಲ’’ ಅಂತಾರೆ. ಇನ್ನು ಪುಣ್ಯಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲೇ ಮಲೀನಗೊಳಿಸುವ ಪಾಪ ಮಾಡಿದರೆ…?? ಮಾಡಿದ್ದುಣ್ಣೋ ಮಾರಾಯ ?
– ಶೋಭಾ ಮಳವಳ್ಳಿ









