ಮಲ್ಲಿಗೆ ಹೂ ತಗೊಳಿ ಮಲ್ಲಿಗೆ!
ಮಲ್ಲಿಗೆ ಹೂ ಬೇಕಾ ಅಮ್ಮ ಮೊಳ ೨೦ ರೂಪಾಯಿ ತಗೊಳ್ಳಿ ಅಕ್ಕ ಎಂದು ರಸ್ತೆ ತುಂಬ ಘಮಘಮಿಸುವ ಮಲ್ಲಿಗೆ ಮಾರುವ ಹೆಂಗಸರು ಬೇಡವೆಂದರೂ ಬಿಡರು. ಒಬ್ಬ ಪುಟ್ಟ ಹುಡುಗಿಯಂತೂ ಹೂ ಹಿಡಿದು ಹಿಂದೆಯೇ ಬಿದ್ದಳು. ಯಾಕೋ ಅವಳನ್ನು ನೋಡ್ತಾ ನೋಡ್ತಾ ಹಾಗೇ ನಿಂತು ಬಿಟ್ಟೆ. ಎಷ್ಟು ಮೊಳ ಬೇಕು ಅಕ್ಕ ಅಂತ ಹತ್ತಿರ ಬಂದಾಗ ನಾಲ್ಕು ಅಂತ ಬಾಯ್ ತಪ್ಪಿ ಬಂದೇ ಬಿಟ್ಟಿತು. ಖುಷಿಯಿಂದ ಆ ಮಗು ಇನ್ನೂ ಚೂರು ಹೆಚ್ಚು ಸೇರಿಸಿಕೊಟ್ಟು ದುಡ್ಡು ಪಡೆದುಕೊಂಡು ಕುಣಿಯುತ್ತಾ ಮುಂದೆ ನಡೆದಳು. ಕೈ ತುಂಬಾ ಅರೆಬಿರಿದ ಮಲ್ಲಿಗೆಯ ಮಾಲೆ… ಮನಸ್ಸು ಖಾಲಿ ಖಾಲಿ.. ಹೂವನ್ನು ಏನು ಮಾಡಲಿ ಅಂತಲೇ ತೋಚದ ಪರಿಸ್ಥಿತಿ.. ಮನಸ್ಸು ವರ್ಷಗಳ ಹಿಂದಕ್ಕೋಡಿತು.
ಮೊದಲಿನಿಂದಲೂ ಸಾಯಿಸುತೆ, ರಾಧಾದೇವಿ,ತ್ರಿವೇಣಿ ಇವರ ಕಥೆ, ಕಾದಂಬರಿ ಓದುತ್ತಾ, ಕನಸುಗಳೊಂದಿಗೆ ಬೆಳೆದವಳು ನಾನು. ಯಾವ ಊರಿಂದ ಮನೆಗೆ ಬಂದರೂ ಅಪ್ಪ ತರುವ ಮಲ್ಲಿಗೆ ಹೂ, ಅದನ್ನು ಮುಡಿಗೇರಿಸುವ ಅಮ್ಮ. ಇದನ್ನು ನೋಡಿ ಬೆಳೆದ ನನಗೆ ಸಂಸಾರದ ಬಗ್ಗೆ ಸಾವಿರಾರು ಕನಸುಗಳು. ಕನಸಿನಲ್ಲಿ ಕಂಡಂತಹ ಹುಡುಗನೊಂದಿಗೆ ಮದುವೆ ಸಹ ಆಯಿತು. ಜೀವನ ತುಂಬಾ ಚೆನ್ನಾಗೇ ಇತ್ತು. ಕಾದಂಬರಿಯಲ್ಲಿ ಬರುವ ಹಾಗೆ ಅಲ್ಲದಿದ್ದರೂ ತುಸು ಹೆಚ್ಚೇ ಪ್ರೀತಿಸುವ ನನ್ನವನು, ನಮ್ಮದೇ ಮನೆ, ಅಪರೂಪಕ್ಕೆ ಬರುವ ನೆಂಟರು, ನೆನೆಸಿದಾಗ ಬರುವ ಗೆಳೆಯರು, ಸ್ವರ್ಗಕ್ಕೆ ಕಿಚ್ಚು ಹಚ್ಚಲು ಬೇರೇನು ಬೇಕು? ಆದರೂ ಒಂದೇ ಒಂದು ಕೊರಗು– ಗಂಡ ಒಂದು ದಿನವೂ ಮಲ್ಲಿಗೆ ತರಲಿಲ್ಲ ಎಂದು. ಅದೇಕೊ, ಕೇಳಿದರೆ ಎಷ್ಟಾದರೂ ಕೊಡಿಸುವವನು ಕೇಳದೇ ತಾವಾಗಿ ಒಂದು ದಿನವೂ ಹೂ ತರುತ್ತಿರಲಿಲ್ಲ. ಬಾಯಿ ಬಿಟ್ಟು ಕೇಳಲು ಮನಸ್ಸು ಬರುತ್ತಿರಲಿಲ್ಲ, ನಾ ಕೇಳದೇ ಅವನಿಗೆ ತಿಳಿಯುತ್ತಿರಲಿಲ್ಲ. ಒಂದೆರಡು ವರ್ಷಗಳು ಕಳೆದ ನಂತರ ಒಮ್ಮೆ ಮನದಾಸೆ ಏನಂತ ನಾನೇ ಬಾಯಿಬಿಟ್ಚೆ ಇದು ಯಾವ ಆಸೆ.. ಬಾಯಿಬಿಟ್ಟು ಕೇಳಬೇಕಲ್ಲವಾ.. ಇಲ್ಲದಿದ್ದರೆ ನನಗೆ ಹೇಗೆ ತಿಳಿಯುತ್ತದೆ ಅಂತ ಸಣ್ಣದಾಗಿ ರೇಗಿಸಿಕೊಂಡೆ. ಶಾಲಾ ದಿನಗಳಲ್ಲಿ ಗೆಳತಿಗೆ ಮೈಸೂರು ಮಲ್ಲಿಗೆ ಕವಿತೆಗಳನ್ನು ಕಲಿಸಿದಾತನಿಗೆ ಮನೆಗೆ ಮಲ್ಲಿಗೆ ತರಲು ತಿಳಿಯಲಿಲ್ಲವಾ ಅಂತ ಅನ್ನಿಸಿದರೂ ಹೇಳದೆ ಸುಮ್ಮನಾದೆ. ಕ್ರಮೇಣ ಮರೆತುಬಿಟ್ಟೆ. ಪಾಪ ನನ್ನವನಿಗೆ ಇದ್ದಕ್ಕಿದ್ದಂತೆ ಒಂದು ದಿನ ಮನೆಗೆ ಮಲ್ಲಿಗೆ ತರುವ ಮನಸ್ಸಾಗಿದೆ. ತಗೊಂಡು ನನಗೆ ಫೋನ್ ಮಾಡಿ ನಿನಗೊಂದು ಸರ್ಪ್ರೈಸ್ ಇದೆ ಅಂತ ಹೇಳಿ ಮನೆಕಡೆ ಹೊರಟವನಿಗೆ ಅತ್ತೆ ಮಗಳ ಮನೆಯಿಂದ ಕರೆ ಬಂದಿದೆ; ಅವರ ಮಾವನವರು ಹೋಗಿ ಬಿಟ್ಟರು ಅಂತ! ಸರಿ ಗಾಡಿ ಆ ಕಡೆ ತಿರುಗಿತು, ಮುಡಿಗೇರಿಸಬೇಕಾದ ಹೂ ಮೃತರ ಪಾದ ಸೇರಿತು. ಅಲ್ಲಿಂದ ಮನೆಗೆ ಬಂದವನು ಈ ವಿಷಯ ಹೇಳಿದಾಗ ನನಗೆ ಅಳು,ನಗು,ಬೇಸರ, ಭಯ ಎಲ್ಲಾ ಭಾವನೆಗಳು ಒಟ್ಟೊಟ್ಟಿಗೇ…
ಮಾರಾಯ ಇನ್ನೊಮ್ಮೆ ನನಗಂತ ಹೂ ತರಬೇಡ! ನೀ ತರೋದು ಮತ್ಯಾರೋ ಹೊಗೋದು ಬೇಡವೇ ಬೇಡ ಎಂದೆ. ಆದರೂ ಒಮ್ಮೊಮ್ಮೆ ಮನಸು ಮಲ್ಲಿಗೆ ಹೂ ಬಯಸುತಿತ್ತು. ಎಂದೂ ನನ್ನ ಯಾವ ಮಾತನ್ನು ಕೇಳದ ಗೆಳೆಯ ಈ ಒಂದು ಮಾತನ್ನು ಶಿರಸಾವಹಿಸಿ ಪಾಲಿಸಿದ. ಈಚೆಗೆ ದಿನವೂ ಮನೆಯಂಗಳದಲ್ಲಿ ಒಂದೆರಡಾದರೂ ಬಿಡುವ ಜಾಜಿ, ಕನಕಾಂಬರ ಅಪರೂಪಕ್ಕೊಮ್ಮೆ ಮಲ್ಲಿಗೆ ಕೂಡಾ ಮುಡಿಯುತ್ತಿದ್ದೇನೆ.. ಅವನ ಫೋಟೋಗೆ ಇರಿಸಿದ್ದು ಅವನೇ ತಂದುಕೊಟ್ಟ ಅನ್ನುವ ಭ್ರಮೆಯಲ್ಲಿ!
ನೌಕರಿ ಆದೇಶ ಬಂತು; ಅವಳೇ ಇರಲಿಲ್ಲ!
ಮೊನ್ನೆ ಆಫೀಸಿಂದ ಬರುವಾಗ ಒಂದು ಹುಡುಗಿ ನಾ ಕುಳಿತಿದ್ದ ಬಸ್ ಹತ್ತಿ ನನ್ನ ಪಕ್ಕದ ಖಾಲಿ ಸೀಟಲ್ಲೇ ಕುಳಿತಳು. ಎಲ್ಲೋ ನೋಡಿದ ಹಾಗೆ ಅನ್ನಿಸಿತು. ಸ್ವಲ್ಪ ಹೊತ್ತು ಹಾಗೇ ನೋಡಿದೆ. ನೆನಪಾಗಲಿಲ್ಲ. ತಡೆಯದೇ ಮಾತನಾಡಿಸಿದರೆ ಆ ಹುಡುಗಿ ನಮ್ಮ ಹಳ್ಳಿಯವಳೇ! ಕುತೂಹಲ ತಾಳದೇ ಅಲ್ಲಿ ಯಾವ ಬೀದಿ ಯಾರ ಮನೆಯವಳು ಹೀಗೆ ಪ್ರಶ್ನೆ ಮೇಲೆ ಪ್ರಶ್ನೆ ಹಾಕಲು ಶುರುಮಾಡಿದೆ. ಹುಡುಗಿಗೆ ಸ್ವಲ್ಪ ಕಿರಿಕಿರಿ ಅನ್ನಿಸಿದರೂ ನಾ ಕೇಳಿದ್ದಕ್ಕೆಲ್ಲಾ ಸಂಕೋಚದಂದಲೇ ಉತ್ತರಿಸಿದಳು. ನನ್ನ ಅನುಮಾನ ನಿಜವಾಯಿತು. ಇವಳು ನನ್ನ ಬಾಲ್ಯದ ಗೆಳತಿ ಪುಷ್ಪಳ ಅವಳೀ ಸಹೋದರನ ಮಗಳು ಅಂತ. ಊರಲ್ಲಿ ಎಲ್ಲರ ಬಗ್ಗೆ ಕೇಳಿದೆ. ತಿಳಿದಷ್ಟು ಹೇಳಿ ನನ್ನ ಸ್ಟಾಪ್ ಬಂತು ಮತ್ತೆ ಸಿಕ್ತಿನಿ ಆಂಟಿ ಅಂತ ಇಳಿದು ಹೋದಳು. ಬಾಯ್ ಹೇಳಿ ಹಾಗೇ ಕಿಟಕಿಗೆ ಒರಗಿದೆ. ಪುಷ್ಪ ಕಣ್ಮುಂದೆ ಬಂದಂತಾಯಿತು. ಹೆಸರಿನಷ್ಟೇ ಸುಂದರವಾಗಿದ್ದಳು ಗೆಳತಿ. ಅಂದಿನ ಪಿಡುಗಾಗಿದ್ದ ಪೋಲಿಯೋ ಆಗಿ ಅವಳಿ ಮಕ್ಕಳಿಬ್ಬರಿಗೂ ಕಾಲು ಸಮ ಇರದೇ ಎಳೆದು ಹಾಕುತ್ತಿದ್ದರು. ಅದರಲ್ಲೂ ಪುಷ್ಪ ಸ್ವಲ್ಪ ಹೆಚ್ಚೇ. ಊರುಗೋಲು ಇಲ್ಲದೇ ನಡೆಯಲು ತುಂಬ ಕಷ್ಟ ಪಡುತ್ತಿದ್ದಳು. ಆದರೆ ಓದಿನಲ್ಲಿ ಮುಂದಿದ್ದಳು . ಅಕ್ಷರವಂತೂ ಪೋಣಿಸಿದ ಮತ್ತಿನಮಾಲೆ. ೫ ನೇ ತರಗತಿ ವರೆಗೆ ಜೊತೆಯಲ್ಲಿ ಓದಿದೆವು. ೬ನೇ ತರಗತಿಗೆ ನಾವು ಹಳ್ಳಿ ಬಿಟ್ಟು ಹತ್ತಿರದ ಪಟ್ಟಣ ಸೇರಿದೆವು. ಊರು ಶಾಲೆ ಗೆಳತಿಯರು ಎಲ್ಲಾ ಬದಲಾದವು. ಆದರೂ ಹಬ್ಬ ಜಾತ್ರೆ ಅಂತ ವರ್ಷದಲ್ಲಿ ನಾಲ್ಕಾರು ಬಾರಿ ಹಳ್ಳಿಗೆ ಹೋಗೋದು ಬರೋದು ನಡೆದೇ ಇರುತಿತ್ತು. ಆಗೆಲ್ಲಾ ಸಿಕ್ಕರೂ ಮುಂಚಿನ ಆತ್ಮೀಯತೆ ಕಡಿಮೆ ಆಗಿ ಕ್ರಮೇಣ ಭೇಟಿ ನಿಂತೇಹೋಯಿತು. ಮತ್ತೆ ಅವಳನ್ನು ನೋಡಿದ್ದು ಡಿಗ್ರಿಗೆ ನಮ್ಮ ಕಾಲೇಜು ಸೇರಿದಾಗಲೇ. ಆಗಲೂ ಕೂಡ ಓದುವ ವಿಷಯ ಬೇರೆಯಾಗಿದ್ದಕ್ಕೋ ಏನೋ ಒಂದೆರಡು ಬಾರಿ ಸಿಕ್ಕಿದ್ದಷ್ಟೆ. ಓದನ್ನು ಅರ್ಧಕ್ಕೇ ನಿಲ್ಲಿಸಿದಳು ಅಂತ ಕೇಳ್ಪಟ್ಟೆ. ಕಾಲಕ್ರಮೇಣ ಮರೆತೂಬಿಟ್ಟೆ . ಆ ಸಲ ಜಾತ್ರೆಗೆ ಹೋದಾಗ ಸಿಕ್ಕ ಹಳೇ ಗೆಳತಿಯರು ಪುಷ್ಪ ಮನೊರೋಗಿಯಾಗಿದ್ದಾಳೆ ಅಂತ ಹೇಳಿದಾಗ ಬೇಸರವಾಯಿತು ಮಾತನಾಡಿಸಿಕೊಂಡು ಬರಲು ಹೊರಟ ನನಗೆ ಅತ್ತೆ ಹೋಗಲು ಬಿಡಲೇ ಇಲ್ಲ. ಅದೆಲ್ಲಾ ಬೇಡ ಎಂದಂದು ಸಂಜೆ ಬಸ್ ಹತ್ತಿಸಿ ಊರಿಗೆ ಕಳಿಸಿ ಬಿಟ್ಟರು. ಹಳ್ಳಿ ಅಲ್ಲವಾ? ಮನೋರೋಗಕ್ಕೆ ದೆವ್ವ ಭೂತದ ಕಥೆಕಟ್ಟತೊಡಗಿದರು. ಬೇಕಾದ ಚಿಕಿತ್ಸೆ ಬಿಟ್ಟು ಮಿಕ್ಕೆಲ್ಲಾ ಆಯಿತಂತೆ. ಅದೊಂದು ದಿನ ರಾಯರ ಆರಾಧನೆ ಅಂತ ಊರಿಗೆ ಹೋದವಳಿಗೆ ಅತ್ತೆ ಹೇಳಿದರು ನಿನ್ನ ಫ್ರೆಂಡ್ ಪುಷ್ಪ ಹೋದವಾರ ಆತ್ಮಹತ್ಯೆ ಮಾಡಿಕೊಂಡಳು ಅಂತ. ಗಾಬರಿಯಿಂದ ಹೋಗಿ ಅವಳ ಅಣ್ಣನ ಮಾತನಾಡಿಸಿದೆ. ಅವನು ಹೇಳಿದ್ದನ್ನು ಕೇಳಿ ಇನ್ನೂ ಬೇಜಾರಾಯಿತು. ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕಿದ್ದ ಗೆಳತಿ ಕೆಲಸದ ಆರ್ಡರ್ ಗೋಸ್ಕರ ಕಾದೂ ಕಾದೂ ಬೇಸರದಿಂದ ನೇಣಿಗೆ ಕೊರಳೊಡ್ಡಿದ್ದಳು. ಇನ್ನೂ ವಿಪರ್ಯಾಸ ಅಂದರೆ ಅವಳು ತೀರಿಕೊಂಡ ಒಂದು ವಾರಕ್ಕೆ ಕೆಲಸದ ಆರ್ಡರ್ ಬಂತಂತೆ!
*ಗಾರ್ಗಿ









