ದೃಶ್ಯಕಾವ್ಯ
Advertisement
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
No Result
View All Result
 ದೃಶ್ಯಕಾವ್ಯ
No Result
View All Result
Home ಕಥೆಕಟ್ಟೆ

ಗಾರ್ಗಿಯ ಡೈರಿಯಿಂದ.. 

ಗಾರ್ಗಿಯ ಡೈರಿಯಿಂದ.. 

1. ಒಂಟಿ ಪಾರಿವಾಳ 

ಮನುಷ್ಯ ಒಂಟಿ ಇರೋದು, ಆಗೋದು ಸಹಜ. ಆದರೆ ಹಕ್ಕಿ ಪಕ್ಷಿಗಳಲ್ಲಿ ಗಮನಿಸಿರಲಿಲ್ಲ. ಕಳೆದ ತಿಂಗಳು ಒಂದು ದಿನ ಅಚಾನಕ್ಕಾಗಿ ಒಂದು ಪಕ್ಷಿ  ಗಮನ ಸೆಳೆಯಿತು; ಅದೂ ಒಂಟಿಯಾಗಿ! ಅದರ ಸಂಗಾತಿ ಇಲ್ಲೇ ಎಲ್ಲೋ ಆಹಾರದ ಸಲುವಾಗಿ ಹೋಗಿರಬಹುದು ಎಂದು ಅಂದುಕೊಂಡೆ. ಬಹಳ ಹೊತ್ತಾದರೂ ಸಂಗಾತಿ ಬರಲೇ ಇಲ್ಲ. ಸಂಜೆಗೆ ಬಂದೇ ಬರುತ್ತದೆ ಅನ್ನೋ ನಂಬಿಕೆ ಇತ್ತು. ಆದರೆ ಈ ಒಂಟಿ ಹಕ್ಕಿ ಅತ್ತಿಂದಿತ್ತ  ತಾರಾಡುತ್ತಿತ್ತು. ಸುಮ್ಮನೆ ಸದ್ದು ಮಾಡುತ್ತಾ ಬೀದಿಯ ಕೊನೆತನಕ ಹೋಗುತ್ತಿತ್ತು ಬರುತ್ತಿತ್ತು. ಕಾಳುಗಳನ್ನು ಹುಡುಕಲು ತೊಡಗಿದೆ ಎಂದುಕೊಂಡು ಒಳಗಿನಿಂದ ಕಾಳು ತಂದು ಚಲ್ಲಿದೆ. ಅದರತ್ತ ತಿರುಗಿಯೂ ನೋಡಲಿಲ್ಲ. ಬೇಕಾದಾಗ ತಿನ್ನಲಿ ಎಂದು ಒಳ ಬಂದೆ. ಯಾಕೋ ಮನಸ್ಸು ತಡೆಯದೇ ಮತ್ತೆ ಇಣುಕಿದರೆ ಪಾಪ ಆ ಹಕ್ಕಿ ಅಲ್ಲೇ ರಸ್ತೆ ಮೇಲೆ ಕುಳಿತು ಕೂಗುತ್ತಿತ್ತು. ಯಾಕೋ ಆ ಕೂಗು ಸಹಜ ಅನ್ನಿಸಲಿಲ್ಲ. ಕಳೆದುಕೊಂಡ ಸಂಗಾತಿಯನ್ನು ಕೂಗಿ ಕರೆವ ಪರಿ! ಆ ದನಿ ನನ್ನದೇ ಅನಿಸತೊಡಗಿತು. ನನ್ನ ಭ್ರಮೆ ಇರಬಹುದು ಅಂತ ಭಾರವಾದ ಮನಸ್ಸಿನಿಂದ ಸುಮ್ಮನೆ ಒಳಬಂದೆ. ಒಂದೆರಡು ದಿನ ಮರೆತೂಬಿಟ್ಟೆ.  ಅದೊಂದು ದಿನ ಮತ್ತೆ ಏಕೋ ನೆನಪಾಯಿತು. ಇಷ್ಟು ಹೊತ್ತಿಗೆ ಅದರ ಸಂಗಾತಿ ಸಿಕ್ಕಿರಬಹುದು ನೋಡೋಣ ಅಂತ ಹೊರಗೆ ಬಂದು ನೋಡಿದರೆ ಮತ್ತದೇ ದೃಶ್ಯ. ಯಾಕೋ ಏನೋ ಸರಿ ಅನಿಸದೇ ಸೆಕ್ಯುರಿಟಿ ಹುಡುಗನನ್ನು ಕರೆದು ವಿಚಾರಿಸಿದರೆ ಅವನು ತಲೆ ಕೆರೆಯುತ್ತಾ ಯಾವ ಹಕ್ಕಿನೂ ಗೊತ್ತಿಲ್ಲ ಅಕ್ಕಾ, ಮತ್ತೆ ಬಂದರೆ ಮನೆಗೆಲ್ಲಾ ಬಲೆ ಹಾಕಿಸಿಬಿಡಿ  ಅಂತ ಬಿಟ್ಟಿ ಸಲಹೆ ಕೊಟ್ಟು ಹೋದ. 

ಯಾಕೋ ಹಕ್ಕಿ ಬಡವಾದಂತೆ ಅದರ ದನಿ ಕುಗ್ಗಿಹೋದಂತೆ ಅನಿಸತೊಡಗಿತು. ಭ್ರಮೆಗೆ ಮಿತಿಯೇ ಇಲ್ಲ ಅಂತ ನನ್ನನ್ನು ನಾನೇ ಬೈದುಕೊಳ್ಳುತ್ತ ಇರುವಷ್ಟರಲ್ಲಿ ಕಾರ್ ಬರುತ್ತಿರುವ ಶಬ್ದ ಕೇಳಿಸಿತು. ಅಯ್ಯೋ  ಹಕ್ಕಿ ಮೇಲೆ ಕಾರ್ ಹತ್ತಿ ಬಿಡಬಹುದು ಅಂತ ಗಾಬರಿಯಿಂದ ತಿರುಗಿದರೆ ಅಂದುಕೊಂಡಂತೆ ಕಾರಿನಡಿ ಹಕ್ಕಿ ಸಿಲುಕಿಯಾಗಿತ್ತು! ಕಣ್ಣೆದುರಿನಲ್ಲಿಯೇ ಹಕ್ಕಿಯ ಪ್ರಾಣಪಕ್ಷಿ ಹಾರಿ ಹೋಗಿಯಾಗಿತ್ತು. ಕೊಂದ ಕಾರ್ ಕೂಡ!  ನನಗೇನೂ ಮಾಡಲು ಆಗಲಿಲ್ಲವಲ್ಲಾ; ನಾನಾದರೂ ಸ್ವಲ್ಪ ಎಚ್ಚರವಹಿಸಿದ್ದರೆ ಪ್ರಾಣ ಉಳಿಸಬಹುದಿತ್ತಲ್ಲಾ ಅನ್ನೋ ಬೇಸರದಲ್ಲಿ ಒಳಗೆ ಬಂದೆ. ಏನೂ ಮಾಡಲು ತೋಚದೆ ಇದ್ದಾಗ  ಸೆಕ್ಯುರಿಟಿ ಹುಡುಗ ಮೃತ ಹಕ್ಕಿಯನ್ನು ತೆಗೆದುಕೊಂಡು ಮುಂದಿನ ಖಾಲಿ ನಿವೇಶನದಲ್ಲಿ ಹಾಕುತ್ತಾ ಅವತ್ತು ಕೂಡ ಒಂದು ಹಕ್ಕಿ ಇದೇ ಜಾಗದಲ್ಲಿ ಆಟೋಗೆ ಸಿಕ್ಕಿದ್ದನ್ನು ನೆನಪು ಮಾಡಿಕೊಂಡು ವಾಹನ ಚಾಲಕರನ್ನು ಬೈಯ್ಯತೊಡಗಿದ. ಆ ಹಕ್ಕಿ ಅಂದಿನಿಂದ ಏಕೆ ಅಲ್ಲೇ ಸುತ್ತುತ್ತಿತ್ತು ಎಂಬುದಕ್ಕೆ ಉತ್ತರ ಸಿಕ್ಕಿತ್ತು. ಅದರ ರೋದನೆ ಕಣ್ಣಮುಂದೆ ಸುಳಿಯತೊಡಗಿ ನನ್ನದು ಭ್ರಮೆ ಅಲ್ಲ, ನಿಜವಾಗಿಯೂ ಅದು ತನ್ನ ಸಂಗಾತಿಗಾಗಿ ಪರಿತಪಿಸುತಿತ್ತು ಎಂಬುದು ಅರಿವಾಯಿತು. ತಕ್ಷಣ ನೆನಪಾಗಿದ್ದು ಕೆಲವೇ ತಿಂಗಳಹಿಂದೆ ಅಗಲಿದ ಜೀವದ ಗೆಳೆಯನ ಮಾತುಗಳು. ತಾನೊಂದು ಒಂಟಿ ಪಾರಿವಾಳ ನೋಡಿದೆ; ದಿನಾ ಅದು ಇಲ್ಲೇ ಓಡಾಡುತ್ತೆ ಅಂತ ಅದನ್ನು ತೋರಿಸಿದ್ದ. ಅವತ್ತು ನಂಬದೇ ಹುಡುಗರಿಗೆ ಮಾತ್ರ ಜೋಡಿ ಸಿಗುತ್ತಿಲ್ಲ ಅಂದು ಕೊಂಡಿದ್ದರೆ ಪಕ್ಷಿಗಳಿಗೂ ಹೀಗೇನಾ ಅಂತ ಇಬ್ಬರೂ ನಕ್ಕಿದ್ದು ನೆನಪಾಯಿತು 

ಸಂಗಾತಿಯ ನೆನಪಲ್ಲಿ ಪ್ರಾಣವನ್ನು ಬಿಟ್ಟ ಪುಟ್ಟ ಪಕ್ಷಿಯ ಪ್ರೀತಿಯ ಮುಂದೆ ಅವನ ನೆನಪಲ್ಲೇ ಅನೇಕ ತಿಂಗಳಾದರೂ ಇನ್ನೂ ಬದುಕಿರುವ ನನ್ನ ಪ್ರೇಮವನ್ನು ಹೋಲಿಕೆ ಮಾಡತೊಡಗಿದೆ. ಮನುಷ್ಯ ಎಷ್ಟು ಅಲ್ಪ ಅನ್ನೋ ಭಾವವೇ ಮೂಡಿತು. 

 2. ಸಾವಿನ ಮನೆಯಲ್ಲಿ  

ವ್ಯಕ್ತಿಯ ಇಲ್ಲದಿರುವಿಕೆ  ಒಬ್ಬೊಬ್ಬರಿಗೆ  ಒಂದೊಂದು ರೀತಿ ಅನುಭವಕ್ಕೆ ಬರುತ್ತದೆ. 

ಇತ್ತೀಚೆಗೆ ಅನಿರೀಕ್ಷಿತವಾಗಿ ಒಂದು ಸಾವಿಗೆ ಹೋಗಬೇಕಾಗಿ ಬಂತು. ಸಾವಿನ ಮನೆಗೆ ಧೈರ್ಯ ಮಾಡಿ ಹೋದೆ. ಅಲ್ಲಿನ ವಾತಾವರಣ ತುಂಬಾ ಉಸಿರುಕಟ್ಟುವಂತಿತ್ತು. ಆ ಹೊಗೆ, ಅಗರಬತ್ತಿಯ ಘಾಟು, ಜನರ ಗುಂಪು ಎಲ್ಲದರಿಂದ 

ನನ್ನ ಕ್ರೂರ ನೆನಪುಗಳನ್ನು ಬದಿಗಿರಿಸಲು ಪ್ರಯತ್ನ ಮಾಡುತ್ತಾ ಸದ್ದಿಲ್ಲದೇ ಒಂದೆಡೆ ಕುಳಿತೆ.  ಮನಸ್ಸಿನಲ್ಲಿ ಮೃತ ವ್ಯಕ್ತಿಯ ಚಿತ್ರಣವೇ ಬೇರೆಯೇ ಇತ್ತು. ಎಂದೂ ನೋಡಿಲ್ಲದ ಆ ವ್ಯಕ್ತಿಯನ್ನು ಈ ಪರಿಸ್ಥಿತಿಯಲ್ಲಿ ನೋಡಬೇಕಾಯಿತಲ್ಲಾ ಅಂತ ತುಂಬ ಅನ್ನಿಸುತಿತ್ತು. ಯಾವತ್ತೂ ಬಾರದೇ ಇವರ ಮನೆಗೆ ಈಗ ಬರಬೇಕಾಯಿತಲ್ಲಾ ಎಂದುಕೊಳ್ಳುತ್ತಾ ಮೌನವಾಗಿ ಕುಳಿತೆ. ಹೆಚ್ಚು ಸಮಯ ಇರಲಾಗಲಿಲ್ಲ. ಯಾರಿಗೂ ಹೇಳದೇ ಹೊರಟಾಗ ಕೆಲವರ ಮಾತುಗಳು ಕಿವಿ ಮೇಲೆ ಬಿತ್ತು. ಗಮನಿಸದವಳಂತೆ ಹೊರಗೆ ಬರುವಾಗ ಒಂದಿಬ್ಬರು ಜೊತೆಗೆ ಬಂದರು. ನಾನು ಆಟೋ ಹತ್ತಿ ಅಲ್ಲಿಂದ ಹೊರಟು ಬರುವಾಗ ನನ್ನ ಜೀವನದ ಕ್ರೂರ ನೆನಪುಗಳು ಉಕ್ಕಿಬಂದು ದುಃಖ ತಡೆಯಲು ಆಗಲಿಲ್ಲ. ಅಳು ನಿಂತ ಮೇಲೆ ಅವರಾಡಿದ ಮಾತುಗಳು ನೆನಪಾದವು.    

ಅಲ್ಲಿ ಕೆಲವರು ತಮ್ಮ ಹೊಸ ಕಾರ್ ಬಗ್ಗೆ ಮಾತನಾಡುತ್ತಿದ್ದರೆ, ಕೆಲವರು ನೀ ಯಾವಾಗ ಬಂದೆ? ಎನ್ನುತ್ತಿದ್ದರು. ಹಲವರು ಕಾಫಿ ಕುಡಿಯುವದರಲ್ಲಿ ಬ್ಯುಸಿ. ಒಂದಷ್ಟು ಜನ ಬೇಗ ಹೋಗಲು ತಯಾರಿ ನಡೆಸುತ್ತಿದ್ದರು. ಮತ್ತಷ್ಟು ಜನ ಅವರ ಮಗನ ಪರಿಚಯ ಮಾಡಿಕೊಡುತ್ತಿದ್ದರು. ಕೆಲವರು ಅವನ ನಡತೆ ಬಗ್ಗೆ ಗುಸುಗುಸು ಮಾತಾಡುತ್ತಿದ್ದರು.  ನೋಡಿ ನೋಡಿ ಸಾಕಾದ ನಾನು ಆ ವ್ಯಕ್ತಿಯ ಹೆಂಡತಿಯನ್ನು ಸಮಾಧಾನ ಮಾಡಲಾ ಅಂತ ಆ ಕಡೆಗೆ ಹೊರಟರೆ ಆಕೆ ಆರಾಮವಾಗಿ ಪಕ್ಕದಲ್ಲಿ ಇದ್ದವರೊಂದಿಗೆ  ಮಾತನಾಡುತ್ತಿದ್ದಾರೆ. ತಲೆ ಕೆಟ್ಟುಹೋಯ್ತು. ಆದದ್ದಾಗಲಿ ಅಂತ ಮುಂದೆ ಹೋದೆ. ನನ್ನ ನೋಡಿ ಆಕೆ ಹೇಳಿದರು ಅತ್ತಿಗೆ ಗಾರ್ಗಿ ತುಂಬ ಸಣ್ಣಗಾಗಿದ್ದಾಳೆ ಅಲ್ಲವಾ?   ಪಾಪ ಇನ್ನೂ ಚಿಂತೆಯಲ್ಲಿದ್ದಾಳೋ ಏನೋ ಅಂದರು. ನನಗೆ ತಲೆತಿರುಗುವುದೊಂದು ಬಾಕಿ. ಏನೂ ಮಾತನಾಡದೇ ಬಂದುಬಿಟ್ಟೆ.  ಜೊತೆಯಲ್ಲಿ ಹೊರಗೆ ಬಂದವರು ಕಾಫಿಗೆಂದು ಹತ್ತಿರದ ಹೋಟೆಲ್ ಹೊಕ್ಕಾಗ ಇಲ್ಲವಾದ ವ್ಯಕ್ತಿಯೊಂದಿಗೆ ಅವರು ಹತ್ತಿರದ ಸಂಬಂಧಿಗಳೇ ಎಂಬುದು ನೆನಪಾಯಿತು. ಮನಸಲ್ಲಿ ಬರೀ ವಿಷಾದ ಭಾವ.  

ಕಡೆಗೆ ಅಗಲಿದ ನನ್ನ ಜೀವದ ಗೆಳೆಯ ಹೇಳುತ್ತಿದ್ದದ್ದು ನೆನಪಾಯಿತು – ಅವರವರ ಭಾವಕ್ಕೆ ಅವರವರ ಭಕುತಿಗೆ! 

*ಗಾರ್ಗಿ 

 

Share11Tweet7SendShareShare
Next Post
ʻವಿಚ್ಛೇದನʼವೆಂಬ ಮನೋರೋಗ !

ʻವಿಚ್ಛೇದನʼವೆಂಬ ಮನೋರೋಗ !

Leave a Reply Cancel reply

Your email address will not be published. Required fields are marked *

Recommended

ಅಂತಿಮ ವಿದಾಯದ ಕಾಫಿ!

ಅಂತಿಮ ವಿದಾಯದ ಕಾಫಿ!

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಕಾಶಿಯ ಡೋಮ್‌ ಜನರು; ಅಂತ್ಯ ಸಂಸ್ಕಾರವೇ ಬದುಕು

ತಾಯ್ನೆಲದಲ್ಲೇ ನಿರಾಶ್ರಿತರಾದ ಕಾಶ್ಮೀರಿ ಪಂಡಿತರ ಕಥೆ-ವ್ಯಥೆ!

ತಾಯ್ನೆಲದಲ್ಲೇ ನಿರಾಶ್ರಿತರಾದ ಕಾಶ್ಮೀರಿ ಪಂಡಿತರ ಕಥೆ-ವ್ಯಥೆ!

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಹೂ ಮತ್ತು ಹುಡುಗಿ

ಹೂ ಮತ್ತು ಹುಡುಗಿ

ಕಚ್ಚುವ ನಾಯಿಗೆ ಬಿರಿಯಾನಿ, ಹಾಲು ಕೊಡುವ ದನಗಳಿಗೆ ಹುಲ್ಲಿಲ್ಲ!

ಕಚ್ಚುವ ನಾಯಿಗೆ ಬಿರಿಯಾನಿ, ಹಾಲು ಕೊಡುವ ದನಗಳಿಗೆ ಹುಲ್ಲಿಲ್ಲ!

ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು

ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು

Translate »
No Result
View All Result
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ

© 2026 JNews - Premium WordPress news & magazine theme by Jegtheme.