ಬೆಳಗಿನ ಹೊಂಬಿಸಿಲಿಗೆ ಮೈಯೊಡ್ಡಿ
ಭೂಮಿಯಿಂದ ಬಾನವರೆಗೂ ಚಾಚಿತ್ತು
ಗಾಂಧೀಜಿಯ ನೆರಳು
ಬಿಳಿಕಾಗೆಗಳ ಓಡಿಸಿದ ಕೋಲು
ವಿಶ್ರಾಂತ
ಉರುಟು ಕನ್ನಡಕದ ಹಿಂದೆ ನಿರ್ಮಲ ನೋಟ
ನನ್ನೆಡೆಗೇ ತದೇಕಚಿತ್ತ
ನಿಂತೇ ಇದ್ದ ಪ್ರತಿಮೆ ನೆಡೆಯುತ್ತಿರುವಂತೆ
ಚಲನಶೀಲ ನೆರಳು
ಕುಳಿತಲ್ಲೇ ಬಂದು ನೆತ್ತಿ ಸವರಿದಂತೆ ಆಹ್ಲಾದ
ನಡುಹಗಲು
ನೆರಳು ಪ್ರತಿಮೆಯ ಕೆಳಗೆ
ನಾನು ಗಾಂಧೀಜಿಗೆ ಹತ್ತಿರ
ಸೊಂಟದಲ್ಲಿ ತೂಗುಬಿದ್ದ ಗಡಿಯಾರದ ನಿಖರ ಸಮಯ
ಕಾಗೆ ನೆತ್ತಿ ಮೇಲೇರಿದರೂ ಪ್ರೀತಿ
ಓಡಿಸಿದರೆ ಹಿಂಸೆ
ಇಳಿಬಿಸಿಲಿನಲ್ಲಿ ಎಷ್ಟುದ್ದ ನೆರಳು
ದಿನವೂ ಪ್ರಾರ್ಥಿಸುವೆ ಕುಳಿತು
ಕೊಡು ಎಮಗೆ ದಿವ್ಯಮತಿ;
ಓ ಸಂತ
ಸಾಬರ್ಮತಿ
* ಅಚ್ಯುತಪ್ರಿಯ









