ದೃಶ್ಯಕಾವ್ಯ
Advertisement
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
No Result
View All Result
 ದೃಶ್ಯಕಾವ್ಯ
No Result
View All Result
Home ಕಥೆಕಟ್ಟೆ

ಗಾಂಧಾರಿ ಕಣ್ಣು ತೆರೆದಾಗ!

ಕಣ್ಣಿನ ಕಪ್ಪುಪಟ್ಟಿ ಕಿತ್ತೊಗೆದು ಕುರುಡು ರಾಣಿಯ ಪಾತ್ರವನ್ನು ಮುಗಿಸಿದ ಗಾಂಧಾರಿಯ ತುಮುಲ ಹಾಗೂ ಇದಕ್ಕೆ ಸಾಕ್ಷಿಯಾದ ಕುಂತಿಯ ತಳಮಳವನ್ನು ಸಶಕ್ತವಾಗಿ ದಾಖಲಿಸಿದ್ದಾರೆ ತುಮಕೂರಿನ ವನಜಾ ಸನತ್.‌

ಗಾಂಧಾರಿ ಕಣ್ಣು ತೆರೆದಾಗ!

ರಂಗದ ತುಂಬ ಕತ್ತಲು. ಪ್ರದರ್ಶನದ ಕಿರುಪರಿಚಯದ ಧ್ವನಿ ಮಾತ್ರ ಕೇಳುತ್ತಿತ್ತು.  ರಂಗದ ಮಧ್ಯಭಾಗದಲ್ಲಿ ನಿಧಾನವಾಗಿ ಬೀಳುತ್ತಿದ್ದ ಸ್ಪಾಟ್ ಲೈಟಿನ ಬೆಳಕಿನಲ್ಲಿ ಕಂಡದ್ದು ಮಾಗಿದ ಜೀವಗಳೆರಡು. ಇಬ್ಬರ ನಡುವೆ ಇರುವ ದೀರ್ಘ ಮೌನ ಪ್ರೇಕ್ಷಕರನ್ನು ಆವರಿಸುವಷ್ಟರಲ್ಲಿ ಒಬ್ಬಳಿಂದ ಏನೋ ಸ್ವಗತ. ಅದು ಅರ್ಥವಾಯಿತೆನ್ನುವ ಭಾವ ಎದುರಿಗಿನವಳ ಮುಖದಲ್ಲಿ.  

ಒಬ್ಬಳು ಗಾಂಧಾರಿ, ಇನ್ನೊಬ್ಬಳು ಕುಂತಿ. ಅಂದು ವರಸೆಯಲ್ಲಿ ಅಕ್ಕ-ತಂಗಿ. ಇಂದು ಬಾಂಧವ್ಯದಲ್ಲಿ. 

ʻತುಂಬ ವರುಷಗಳಿಂದ  ನನ್ನಲ್ಲಿಯೇ ಉದ್ಭವಿಸಿ, ಸಾಯುತ್ತ ಆದರೆ ಪುನಃ ಮರುಹುಟ್ಟು ಪಡೆಯುತ್ತ ಮತ್ತೆ ಮತ್ತೆ ಚಿಗುರುತ್ತ, ಬಾಡುತ್ತಿರುವ ಪ್ರಶ್ನೆಯೊಂದು ನನ್ನಲ್ಲಿಯೇ ಉಳಿದುಕೊಂಡಿದೆʼ

ನಿಧಾನವಾಗಿ ಬಂದ ಕುಂತಿಯ ಮಾತುಗಳಿಗಾಗಿ ಕಾಯುತ್ತಿರುವವಳ ಹಾಗೆ ತಕ್ಷಣದ ಪ್ರತಿಕ್ರಿಯೆ ಎದುರಿನವಳಿಂದ. ʻಅದಕ್ಕೆ ಅಲ್ಲವೆ  ಹೆಣ್ಣಿಗೆ ಧಾರಣಿ ಎನ್ನುವುದು. ಅದು ಬಸಿರಾದರೂ ಸರಿ ಅಥವಾ ಪ್ರತಿದಿನವೂ ಅವಳನ್ನೇ ಇಂಚಿಂಚು ತಿನ್ನುವಂಥ ಪ್ರಶ್ನೆಗಳ ಬಂಧವಾದರೂ ಸರಿ. ಎಲ್ಲವೂ ಧಾರಣಿಯೇʼ –ಸ್ಥಿತಿಪ್ರಜ್ಞತೆಯ ಭಾವ ಗಾಂಧಾರಿಯ ಮೊಗದಲ್ಲಿ.           

ʻಈಗ ನನ್ನೊಡಲಿನ ಬೇಗೆಯನ್ನು ಉಸಿರಾಗಿಸಲು ಸಹಕರಿಸು. ಹೌದು ಅಕ್ಕ, ನಾನೆಷ್ಟೋ ವರುಷಗಳಿಂದ ಆಗಾಗ ನಿನ್ನನ್ನು ಸಂಧಿಸಲು ಬಂದಾಗಲೆಲ್ಲ ಆ ಕಪ್ಪು ಪಟ್ಟಿಯೊಳಗಿರುವ ನಿನ್ನ ಕಣ್ಣುಗಳು ನನ್ನ ಆಪ್ತತೆಯನ್ನು ಅರಸುತ್ತಿತ್ತು ಎನ್ನುವ ಸಂಗತಿ ನನ್ನ ಅರಿವಿಗೂ ಬಂದಿತ್ತು. ಈಗ ನಾವಿಬ್ಬರೂ ಬದುಕಿನ ಸಂಜೆಯ ಹೊಸಿಲಿನಲ್ಲಿ ಕಾಲನ ದಾರಿ ಕಾಯುತ್ತ ಕುಳಿತವರು. ಈಗಲೂ ಉತ್ತರಕ್ಕಾಗಿ ಯಾಕೆ ಮುಂದೂಡುವಿಕೆ?ʼ 

ತುಸು ಹೊತ್ತು ಮೌನ.      

ʻಆಗ ನಾನಿನ್ನೂ ಕಿಶೋರಿ. ಅಪ್ಪ, ಅಮ್ಮನ ಮುದ್ದಿನ ಮಗಳು ಹಾಗೆಯೇ ಅಣ್ಣಂದಿರ ಪ್ರೀತಿಯ ತಂಗಿ. ಗಾಂಧರ್ಭ(ಗಾಂಧಾರ) ರಾಜ್ಯದ ರಾಜಕುಮಾರಿʼ. ಗಾಂಧಾರಿಯ ಸಂತಸದ ಧ್ವನಿ ಇದ್ದಕ್ಕಿದ್ದಂತೆ ನೋವಿನತ್ತ ತಿರುಗಿತು. ʻಚಕ್ರಾಧಿಪತ್ಯದ ಅಟ್ಟಹಾಸದೆದುರು ಸೋತು ಅಪ್ಪ, ಅಣ್ಣಂದಿರು ಸೆರೆಮನೆಗೆ ತಳ್ಳಲ್ಪಟ್ಟರು; ನನ್ನ ಒಪ್ಪಿಗೆಯ ಪ್ರಶ್ನೆಯೇ ಇರದಂತೆ ನಾನು ಕುರುವಂಶದ ಪಟ್ಟದ ರಾಣಿಯಾದೆ. ನಿಜವಾಗಿಯೂ ಹೇಳು ತಂಗಿ, ನಾನು ತಪ್ಪಿರುವುದಾದರೂ ಎಲ್ಲಿ?ʼ -ಅವಳ ಏಕಾಏಕಿ  ಪ್ರಶ್ನೆಗೆ ಕುಂತಿಯ ಮುಖದಲ್ಲಿಯೂ ಮೂಡಿದ್ದು ಆಶ್ಚರ್ಯಪೂರಿತ  ಪ್ರಶ್ನಾರ್ಥಕವೇ. ʻಅಕ್ಕ, ತಪ್ಪುಒಪ್ಪಿನ ಕುರಿತು ಉತ್ತರ ಸಿಗಲು ಬಹುಶಃ ಇನ್ನೂ ಕೆಲಸಮಯ ಹಿಡಿದೀತು. ನೀನು ಮುಂದುವರಿಸುʼ ಅವಳ ಸ್ಥಿತಪ್ರಜ್ಞತೆಯ ನಿರ್ಲಿಪ್ತ ಭಾವ ಗಾಂಧಾರಿಗೆ ಹಿತವೆನಿಸಿತು. ʻಅದೆಲ್ಲ ಸರಿ. ನೀನು ಮಹಾರಾಜನೊಂದಿಗೆ ಚೆನ್ನಾಗಿದ್ದೆ ತಾನೇ? ಇಲ್ಲವಾದರೆ ನಿನಗೆ ಸುಯೋಧನ ಸಹಿತ ನೂರು ಮಕ್ಕಳು ಆಗುತ್ತಿರಲಿಲ್ಲ. ಅವರ ಸಖ್ಯ ನಿನಗೆ ಖುಷಿಯಿತ್ತು ಅಲ್ಲವಾ?ʼ

ʻಮನಸಿನ ತೃಪ್ತಿಗೂ ದೇಹದ ತೃಷೆಗೂ ಅಜಗಜಾಂತರ ವ್ಯತ್ತ್ಯಾಸವನ್ನು ಅರಿಯದವಳು ನೀನಲ್ಲ. ಬಿಸಿಯ ತಾಪಕ್ಕೆ ಬೆಣ್ಣೆ ಕರಗದೇ ಇದ್ದೀತೇ? ನನ್ನದೂ ಹಾಗೆಯೇʼ. 

ʼನೀನು ಮಾತನಾಡುವ ಮನಸ್ಸಿನಲ್ಲಿ ಇದ್ದೀಯ. ಆದರೆ ಈಗಾಗಲೇ ಸಾಕಷ್ಟು ರಾತ್ರಿಯಾಗಿದೆ. ನಾಳೆಗೂ ಮಿಗಿಸೋಣ ಅಲ್ಲವೇ?ʼ ಮಹಾರಾಜ ನಿದ್ರಿಸುತ್ತಿದ್ದರೂ; ಎಚ್ಚರವಾಗಿದ್ದ ದಾಸಿ ರಂಭಾ ಇವರ ಹೆಜ್ಜೆಯ ಸಪ್ಪಳಕ್ಕೆ ಎದ್ದು ನಿಂತಳು. ಅದನ್ನರಿತ ಗಾಂಧಾರಿ ಕುಂತಿಯ ಕೈಹಿಡಿದು ಹೊರಗೆ ಬಂದು, ಹುಲ್ಲಿನ ಚಾಪೆಯ ಮೇಲೆ ಉರುಳಿದಳು.       

ಮರುದಿನ ಅವರಿಬ್ಬರೂ ಇದ್ದದ್ದು ಪರ್ಣಕುಟಿಗೆ ತುಸು ದೂರದಲ್ಲಿದ್ದ ತೊರೆಯೊಂದರ ಬಳಿಗೆ. ಬೆಳಗಿನ ಜಾವದಲ್ಲಿ ತನ್ನ ಗಂಡ-ಮಕ್ಕಳಿಗೆ ಎಚ್ಚರವಾದೀತೆನ್ನುವ ಸೂಕ್ಷ್ಮತೆಯಲ್ಲಿ ಕೆಲಸ ಮಾಡುತ್ತಲೇ ಭಗವಂತನನ್ನು ಆರಾಧಿಸುತ್ತಿರುವ ಗೃಹಿಣಿಯ ಮೆಲುದನಿಯ ಹಾಡಿನಂತೆ ನಿಧಾನವಾಗಿ ಹರಿಯುತ್ತಿದ್ದ ನೀರಿನಲ್ಲಿ ಗಾಂಧಾರಿ ಕಾಲನ್ನು ಇಳಿಬಿಟ್ಟು ಆಟವಾಡುತ್ತಿದ್ದಳು. ಅವಳಿಗೆ ಇದೆಲ್ಲ ಹೊಸತು. ಹಕ್ಕಿಗಳ ಕಲರವ, ಹಿತವಾದ ಎಳೆಬಿಸಿಲಿನ ಸ್ಪರ್ಶ, ನೀರಿನ ತಂಪು ನಿಧಾನವಾಗಿ ಕಾಲಿನಿಂದ ಇಡೀ ಮೈಯನ್ನಾವರಿಸುವ ಅನುಭವದ ಅವಳ ಪ್ರಕ್ರಿಯೆಯಲ್ಲಿ ಕುಂತಿಯೂ ಭಾಗಿದಾರಳಾದಳು-ಎಷ್ಟೋ ಹೊತ್ತಿನವರೆಗೆ. 

ಮೌನವನ್ನು ಮುರಿದ ಕುಂತಿ ʻಅಕ್ಕ ಹೋಗೋಣವೆ? ಮಹಾರಾಜರು ಬೇಸರಿಸಿಯಾರುʼಎಂದಳು. ʻಹಿಂದೆ ಅವರು ಮಹಾರಾಜರು ಹಾಗೂ ನಾನು ಮಹಾರಾಣಿ ಆಗಿದ್ದೆ. ಆದರೆ ಅವರ ಅಂತರಂಗದ ರಾಣಿ ಯಾವಾಗಲೂ ಅವಳೇ. ಯಾಕೆಂದರೆ ನಾನು ಬರುವದಕ್ಕಿಂತ ಮೊದಲಿನಿಂದಲೂ ಅವರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದವಳು. ಈಗಲೂ ಸಹ.ಅದಕ್ಕೆ ನನಗೇನೂ ಬೇಸರವಿಲ್ಲ. ಯಾಕೆಂದರೆ ನನ್ನ ಇಷ್ಟವನ್ನು ಕೇಳುವ ಸಂದರ್ಭವೇ ಇರದಂಥ ಸ್ಥಿತಿಯಲ್ಲಿ  ನಾನು ಕುರುವಂಶದ ರಾಣಿ ಆದೆ.  ನನ್ನ ತಂದೆ , ಅಣ್ಣಂದಿರ ಸೆರೆಮನೆಯ ವಾಸ, ನೋವು, ಹಸಿವು, ಸಾವು ಇವುಗಳೆಲ್ಲವುಗಳಿಗೂ  ಹಾಗೂ ನಾನು ಕಟ್ಟಿದ ಕಪ್ಪುಪಟ್ಟಿಗೂ ಇರುವ ನಂಟು ತುಂಬಾ ಹಳೆಯದು. ಗಂಡನಿಗಾಗಿ ತಾನೂ ಕುರುಡಳಂತೆ ಇರುವ ನನ್ನನ್ನು ಜನರು ಹೊಗಳಿದ್ದೂ ಹೊಗಳಿದ್ದೆ. ನನಗೂ ಅಂತಹ ಹೊಗಳಿಕೆಯ ಅಗತ್ಯ ಆಗ ಇತ್ತು ಬಿಡು. ಈಗ ಅವೆಲ್ಲ ಬೇಡ. ಇನ್ನೂ ತುಸು ಹೊತ್ತು ಇಲ್ಲಿರೋಣ. ಆಗದೇ?ʼ     

ʻತಂಗಿ, ಇಂದು ಸೂರ್ಯನ ಬಿಸಿಲು ತುಂಬ ಹಿತವಾಗಿದೆ. ಈ ಅನುಭವದ ಸಂವೇದನೆ ನನ್ನನ್ನ ಎಷ್ಟೋ ಹಿಂದೆ ಎಳೆದುಕೊಂಡು ಹೋಗುತ್ತಿದೆʼ 

ʻಸರಿ, ನನಗೂ ಹೇಳಿದರೆ ನಿನ್ನ ಖುಷಿಯಲ್ಲಿ ಸಲ್ಪ ನನ್ನದೂ ಪಾಲುʼ- ಕುಂತಿ ನಗುತ್ತಾ ಹೇಳಿದಳು. 

ʻಹೌದು ಕುಂತಿ, ಆಗ ನಾನಿನ್ನೂ ಚಿಕ್ಕವಳು. ಅಮ್ಮ ಚುಮು ಚುಮು ನಸುಕಿನಲ್ಲಿಯೇ  ನನ್ನನ್ನು ಎತ್ತಿಕೊಂಡು ಹೋಗಿ, ಕಂದ, ಭಗವಾನ್ ಭಾಸ್ಕರನಿಗೆ ನಮಸ್ಕರಿಸು ಅಂತ ಹೇಳುತ್ತಿದ್ದಳು. ನನಗೋ ನಿದ್ದೆಗಣ್ಣು. ನೋಡು ಬಂಗಾರದ ಬಾಲ ಸೂರ್ಯ ಕೂಡಾ ಈಗಷ್ಟೇ ನಿದ್ದೆಯಿಂದ ಎದ್ದು ಮುಖ ತೊಳೆದು ಬಂದವ. ಎಷ್ಟು ಚಂದವಾಗಿ ಹೊಳೆಯುತ್ತಿರುವ ಅವನಿಗೆ ನಮಿಸಮ್ಮ ಎಂದಾಗ ನಾನು ಅಮ್ಮನ ಜೊತೆ ಅವನಿಗೆ ನಮಸ್ಕರಿಸುತ್ತಿದ್ದೆ. ಪ್ರತಿದಿನ ನಡೆಯುವ ಈ ಪ್ರಕ್ರಿಯೆ ಕಣ್ಣಿಗೆ ಕಪ್ಪುಪಟ್ಟಿ ಬರುವವರೆಗೂ ಅವ್ಯಾಹತವಾಗಿ ನಡೆಯುತ್ತಿತ್ತುʼ

ʻಹೌದಕ್ಕ, ನಾವು ಪೂಜಿಸುವ ದೇವತೆಗಳಲ್ಲಿ ಸೂರ್ಯ ಹಾಗೂ ಚಂದ್ರ ದೇವತೆಗಳು ನಮಗೆ ಪ್ರತ್ಯಕ್ಷವಾಗಿ ಬೆಳಕನ್ನು ನೀಡುತ್ತ ನಮ್ಮ ಕಣ್ಣಿಗೆ ಕಾಣುವವರು. ಹಾಗಾಗಿ ಅವರಿಗೆ ಪ್ರತಿನಿತ್ಯ ನಮಸ್ಕರಿಸಬೇಕು ಎನ್ನುವ ಭಾವನೆಯನ್ನು ಮೈಗೂಡಿಸಿ ಕೊಂಡು ಬೆಳೆದವಳು ನಾನೂ ಸಹ. ಉದಯಿಸುವ ಹಾಗೂ ಅಸ್ತಂಗತನಾಗುವ ಸೂರ್ಯನ ಚೆಲುವನ್ನು ನೋಡಲು ತಪ್ಪಸಿಕೊಳ್ಳದವಳು. ಹೇಗೋ ನನಗೆ ಗೊತ್ತಿಲ್ಲದೇ ನನ್ನ ಆರಾಧ್ಯದೇವನಾಗಿಬಿಟ್ಟ ಅವನುʼ 

ʻಹೌದೌದು. ಅದರ ಪರಿಣಾಮವೇ ಕರ್ಣನ ಜನನ. ಅಲ್ಲವಾ ತಂಗಿ?ʼ

ಅವಾಕ್ಕಾದರೂ ಸಾವರಿಸಿಕೊಂಡ ಕುಂತಿ ʻಹೌದಕ್ಕ,  ಮಹರ್ಷಿ ದೂರ್ವಾಸರು ನೀಡಿದ ವರ.  ನಿನಗೆ ಬೇಕೆನಿಸಿದಾಗ ನಿನಗಿಷ್ಟವಾದ ದೇವತೆಯನ್ನು ಆಹ್ವಾನಿಸಿ, ಅವನಿಂದ ಬಲಶಾಲಿಯಾದ ಪುತ್ರನನ್ನು ಪಡೆ ಅಂತ. ಆದರೆ ನನ್ನ ಯೌವನ, ಅಜ್ಞಾನ ಜೊತೆಗೆ ವಾಸ್ತವದ ಪರಿಣಾಮವನ್ನು ಯೋಚಿಸದ ಕುತೂಹಲ, ಮಹರ್ಷಿಗಳ ವರವನ್ನು ಆದಷ್ಟು ಬೇಗ ಪರೀಕ್ಷಿಸುವ ಕುತೂಹಲದ ದುಡುಕು ಬುದ್ಧಿಯಿಂದ ನಾನೇ  ಕೈಯಾರೆ ಮಹರ್ಷಿಗಳ ವರವನ್ನು ಶಾಪವನ್ನಾಗಿಸಿಕೊಂಡೆ. ರಾಜ ಮನೆತನದ ಮರ್ಯಾದೆಗಂಜಿ ಸಮಾಜವನ್ನು ಎದುರಿಸದ ರಣ ಹೇಡಿಯಾಗಿ ಸೂರ್ಯಪುತ್ರನನ್ನು ಶಾಪಗ್ರಸ್ತ ಸೂತಪುತ್ರನನ್ನಾಗಿ ಸಮಾಜ ನೋಡಲು ಕಾರಣಳಾದೆ. ಅವನ ದುರಂತದ ಬದುಕು ನನ್ನದೆನ್ನುವ ಕೊರಗು ಕೊನೆಯಾಗುವುದು ನನ್ನ ಸಾವಿನಲ್ಲಿ ಮಾತ್ರʼ.

ʻಅದು ಹಾಗೇ ತಂಗಿ, ಸರಿಯಾದ ತಿಳುವಳಿಕೆ ಹಾಗೂ ಮಾರ್ಗದರ್ಶನದ ಕೊರತೆ, ಕುರುಡು ಪ್ರೀತಿ, ವ್ಯಾಮೋಹ, ಅಸೂಯೆಗಳಂಥ ನಕಾರಾತ್ಮಕ ಶಕ್ತಿಗಳು ನಮ್ಮನ್ನಾಳಲು ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ನಾವು ಆಸ್ಪದ ಕೊಟ್ಟಾಗಲೇ ನಮಗೆ ನಾವೇ ‘ದಂತಕಥೆ‘ಯಾಗಿ ಬಿಡುತ್ತೇವೆ. ಇದಕ್ಕೆ ನಾನೂ ಹೊರತಾಗಿ ಉಳಿದಿಲ್ಲ. ಇಂಥ ಕೃತ್ಯಗಳಿಂದ ದಿನನಿತ್ಯ ನಾವು ಏಕಾಂತವಾಗಿ ಸಾಯುತ್ತಿದ್ದರೆ.. ನಮಗಿಂತಲೂ ಮೊದಲೇ  ತನಗೆ ಸಿಗಬೇಕಾದ ಜೀವನಕ್ಕಾಗಿ ತನ್ನ ಇತಿಶ್ರೀ ಯನ್ನು ತಾನೇ ಮಾಡಿಕೊಂಡ ಆ ಮಹಾತಾಯಿ ಅಂಬೆಯ ಧೈರ್ಯಕ್ಕೆ ಕೈಯೆತ್ತಿ ಮುಗಿಯಬೇಕುʼ

ʻಹೌದಕ್ಕ, ಅವಳ ವಿಷಯದಲ್ಲಿಯೂ ಆಗಿದ್ದು ನಮ್ಮಂತೆಯೇ. ಪ್ರೀತಿಸುತ್ತಿದ್ದ ಸಾಲ್ವ ರಾಜ ಜೊತೆಯಾಗಲಿಲ್ಲ. ಸ್ವಯಂವರದಲ್ಲಿ ಎಲ್ಲರನ್ನೂ ಗೆದ್ದು ಬಂದ ದೇವವ್ರತ ಅಂದರೆ ಭೀಷ್ಮಪಿತಾಮಹ, ಅಂದು ಆಜನ್ಮ ಬ್ರಹ್ಮಚಾರಿಯಾಗಿರುವೆನೆಂದು ಶಪಥಗೈದಿದ್ದ ಕಾರಣಕ್ಕೆ ಮದುವೆಯಾಗಲಿಲ್ಲ. ರಾಜಕೀಯದಾಟದ ಅಂಗಳದಲ್ಲಿ ಅವಳೇ ಆತ್ಮಾಹುತಿಯಾದಳಷ್ಟೇ. ಕೊನೆಗೂ ಬೆಂಬಿಡದೇ ಛಲದಿಂದ ಶಿಖಂಡಿಯಾಗಿ ಪಿತಾಮಹರನ್ನು ಸ್ವರ್ಗವಾಸಿಯಾಗಿಸಿದ ಧೀರೆ ಅವಳುʼ.  

ʻನಿಜ ಹೇಳು ಕುಂತಿ, ನಿನ್ನ ಕೊರಗಿಗೆ ಕಾರಣರಾದ ಭಗವಾನ್ ಭಾಸ್ಕರ ದೇವನ ಮೇಲೆ ನಿನಗೆ ಕೋಪ, ಅಥವಾ ಬೇಸರ ಇಲ್ಲವಾ?ʼ 

ಈ ಪ್ರಶ್ನೆ ಕುಂತಿಯ ಮನಸ್ಸನ್ನು ವಿಚಲಿತಗೊಳಿಸಿತು. ಆದರೂ ಸಾವರಿಸಿಕೊಂಡು ʻಖಂಡಿತ ಇಲ್ಲಕ್ಕಾ. ಇದು ಕೇವಲ ನನ್ನ ಸ್ವಯಂಕೃತ ಅಪರಾಧ. ಇದಕ್ಕೆ ಸೂರ್ಯದೇವ ಕಾರಣನಲ್ಲ. ಅಂದು ಮಹರ್ಷಿಗಳ ವರವನ್ನು ಪರೀಕ್ಷಿಸುವ ಹಂಬಲದಲ್ಲಿದ್ದ ನನಗೆ ನೆನಪಾದವನೇ ನನ್ನ ಆರಾಧ್ಯದೈವ ಸೂರ್ಯ.ನಾನು ಮಹರ್ಷಿ ಹೇಳಿದ ಮಂತ್ರದ ಮೂಲಕ ಅವನನ್ನು ಆಹ್ವಾನಿಸಿದೆ. ನನ್ನ ಕೋರಿಕೆಯಂತೆ ಪ್ರತ್ಯಕ್ಷನಾದವ ಅವ. ಆಗ ನನ್ನ ತಪ್ಪು ಅರ್ಥವಾಯಿತು. ಅಪರಾಧ ಮನ್ನಿಸಿ ಹೋಗುವಂತೆ ಕೇಳಿಕೊಂಡೆ. ವರ ಕೊಡದೇ ಮರಳಿ ಹೋಗುವಂತಿಲ್ಲ ಎನ್ನುವ ಅವನ ತರ್ಕಕ್ಕೆ  ಉದಾಹರಣೆ ಸಹಿತ ನೀಡಿದ ನಿದರ್ಶನ ನ್ಯಾಯಸಮ್ಮತವಾಗಿತ್ತು. ವರ ಅವನದು. ಆದರೆ ಶಾಪವನ್ನಾಗಿಸಿಕೊಂಡವಳು ನಾನು. ಜೀವನಪರ್ಯಂತ  ದುಸ್ಥಿತಿಯನ್ನು ಅನುಭವಿಸಿ, ದುರಂತ ವ್ಯಕ್ತಿಯಾದವ ನನ್ನ ಮಗ ಕರ್ಣʼ ಬಿಕ್ಕಿದಳು ಕುಂತಿ.

ʻಆದರೆ ಸೂರ್ಯದೇವನ ಕರ್ತವ್ಯನಿಷ್ಟೆ ಹಾಗೂ ಸಮಯೋಚಿತ ಮಾರ್ಗದರ್ಶವನ್ನ ಇಂದಿಗೂ ನಾನು ಗೌರವಿಸುತ್ತೇನೆ. ಮುಂದಿನ ದಿನಗಳ ಕಷ್ಟಗಳಲ್ಲಿ ಅವುಗಳೇ ಬೆಳಕಾಗಿ ನನ್ನೊಡನೆ ಉಸಿರಾಯ್ತುʼ ಎನ್ನುತ್ತ ಸಮಾಧಾನಪಟ್ಟುಕೊಂಡಳು. 

ʻಕರ್ಣನಿಗಾದ ಅನ್ಯಾಯಕ್ಕೆ ನನಗೂ ದುಃಖವಿದೆ ಕುಂತಿ.  ವಿಧಿಲಿಖಿತಗಳು ನಮ್ಮ ನಮ್ಮ ಕರ್ಮಕ್ಕನುಗುಣವಾಗಿ ನಮ್ಮನ್ನು ಆಳುತ್ತವೆ. ಅದರಿಂದ ತಪ್ಪಿಸಿಕೊಳ್ಳುವುದು ಅಸಂಭವ ಎನ್ನುವದು ನಿನಗೂ ಗೊತ್ತು.ಸಹಿಸಿಕೊಳ್ಳದೇ ಬೇರೆ ದಾರಿಯೇ ಇಲ್ಲʼ 

ಕುಂತಿ ಮಾತನಾಡಲಿಲ್ಲ.

ನಿನಗೆ ಸೂರ್ಯದೇವನ ಮೇಲೆ ಹೇಗೆ ಗೌರವವಿದೆಯೋ ನನಗೂ ಹಾಗೆಯೇ ಕುಂತಿ. ಜೀವಬಿಡುವುದರೊಳಗೆ ಒಮ್ಮೆ ಅವನನ್ನು ನೋಡುತ್ತ, ಕಣ್ತುಂಬಿಕೊಳ್ಳಬೇಕೆನ್ನುವುದು ನನ್ನ ಬಹುದಿನದ ಅದಮ್ಯ ಬಯಕೆ. ಈ ಹಂಬಲ ನಿಜವಾದೀತೆ?ʼ

ʻಅದು ಹೇಗಾದೀತು ಅಕ್ಕಾ? ಯಾರೂ ಹೇಳದಿದ್ದರೂ ನಿನಗೆ ನೀನೇ ನಿರ್ಬಂಧಿಸಿಕೊಂಡ ಈ ಕಪ್ಪುಬಟ್ಟೆ..  ಭಗವಾನ್ ಸೂರ್ಯದೇವನನ್ನು ನೋಡುವುದು ಅಸಂಭವʼ

ʻಹೌದು.. ಆ ನಿರ್ಧಾರ ನನಗೆದುರಾದ ಹತಾಶೆಗೋ, ಅಸಹಾಯಕತೆಗೋ ಅಥವಾ ನಡೆದ ವಿದ್ಯಮಾನದ ರಾಜಕೀಯದಾಟದ ಸೇಡಿಗೋ… ಇನ್ನೂ ನನಗರ್ಥವಾಗಲಿಲ್ಲ. ಗಂಡನಿಗೆ ಕಣ್ಣಾಗಿ, ಮಕ್ಕಳನ್ನು ಧರ್ಮವಂತರನ್ನಾಗಿ ಬೆಳೆಸುವ ಅಧಿಕಾರ, ಭೀಷ್ಮ, ವಿದುರರಂತವರ ಪ್ರೋತ್ಸಾಹ ನನಗಿತ್ತು. ಆದರೆ… ಜನರ ಹೊಗಳಿಕೆಯ ಮದದ ಜೊತೆಗೆ ನಾನೇ ಹಾಕಿದ ನಿರ್ಬಂಧವನ್ನು ತೆಗೆಯುಲು ಧೈರ್ಯ ಸಾಲದೇ ಧರ್ಮಾಂಧರಾದ ಗಂಡ ಹಾಗೂ ಮಕ್ಕಳಿಂದ ಹಸ್ತಿನಾವತಿಯ ಸಾಮ್ರಾಜ್ಯ ದುರಂತ ಕಾಣುವುದಕ್ಕೆ ಕಾರಣಳಾಗಿಬಿಟ್ಟೆ..ʼ 

ಗಾಂಧಾರಿಯ ಬಿಕ್ಕುವಿಕೆಯನ್ನು ಕೇಳಿ ಅವಳನ್ನಪ್ಪಿಕೊಂಡ ಕುಂತಿ ಸಣ್ಣಗೆ ನಡುಗಿದಳು.

ʻಅಕ್ಕಾ, ಏರು ಹೊತ್ತಾಯಿತು. ಇನ್ನು ಬಿಸಿಲಿನ ಝಳ ಜಾಸ್ತಿʼ

ಎದ್ದ ಇಬ್ಬರೂ  ಒಬ್ಬರ ಕೈ ಇನ್ನೊಬ್ಬರು ಹಿಡಿದು ನಿಧಾನವಾಗಿ ಹೆಜ್ಜೆ ಹಾಕಿದರು  ಪರ್ಣಕುಟೀರದತ್ತ.                    

ಮರುದಿನ ಇಬ್ಬರೂ ತಡರಾತ್ರಿಯವರೆಗೂ ಪರ್ಣಕುಟಿಯ ಹೊರಗೆ ಅಂಗಳದಲ್ಲಿ ಕುಳಿತಿದ್ದರು. ಕುಂತಿ ಹೇಳಿದ್ದರಿಂದ ಬೆಳದಿಂಗಳು ಇತ್ತೆಂದು ಗಾಂಧಾರಿ ಖುಷಿಯಲ್ಲಿದ್ದಳು. ʻಕುಂತಿ, ಕೆಲವೊಮ್ಮೆಅಸಹಾಯಕತೆ ನಮ್ಮನ್ನು ಎಷ್ಟು ನಿಷ್ಕ್ರಿಯರನ್ನಾಗಿ ಮಾಡುತ್ತದೆ ಅಲ್ಲವೇ?ʻ. ಗಾಂಧಾರಿ ಮಾತನಾಡಲು ಹಾಕಿದ ಪೀಠಿಕೆಯೆಂದು ಅರಿತಳು ಕುಂತಿ. ʻಸಾರ್ವಭೌಮತೆಯ ಠೇಂಕಾರದೆದುರು ನನ್ನ ತಂದೆ, ಅಣ್ಣಂದಿರ ದಾರುಣ ಹತ್ಯೆಯನ್ನು ತಿಳಿದೇ ಹಸ್ತಿನಾಪುರದ ರಾಣಿಯಾದವಳು ನಾನು. ನನ್ನೊಡಲು ಹೊತ್ತಿ ಉರಿಯುತ್ತಿದ್ದರೂ, ಮಕ್ಕಳಿಗೆ ಜನ್ಮ ಕೊಟ್ಟವಳು. ಅಪ್ಪ ಮಕ್ಕಳ ಅಧರ್ಮ ಆಳ್ಬಿಕೆಯನ್ನು ಕಂಡರೂ ಕಾಣದಂತೆ ಇದ್ದವಳು. ಶಕುನಿ ಕೌರವರಿಗೆ ಒಳ್ಳೆಯವನಾಗಿಯೇ ಅವರ ಅವನತಿಗಾಗಿ ಮಾಡುತ್ತಿರುವ ಕುತಂತ್ರಗಳಿಗೆಲ್ಲವಕ್ಕೂ ಜಾಣಮೌನಿಯಾದವಳು. ತುಂಬಿದ ಸಭೆಯಲ್ಲಿ ದ್ರೌಪತಿಯ ಮಾನಭಂಗವೆಸಗುವ ಸುದ್ದಿ ತಿಳಿದಿದ್ದರೂ ಮೂಗಿಯಂತೆ ಇದ್ದವಳು. ನಿಮ್ಮ  ವನವಾಸ, ಅಜ್ಞಾತವಾಸದ ಒದ್ದಾಟಕ್ಕೂ ನನಗೂ ಸಂಭಂದವೇ ಇರದಂತೆ ಇದ್ದವಳು. ಕೃಷ್ಣ ನಿಮ್ಮ ಪರವಾಗಿ ಸಂಧಾನಕ್ಕೆ ಬಂದು, ಐದು ಹಳ್ಳಿಯನ್ನು ಬೇಡಿದಾಗ ಕೂಡ ಗಂಡ, ಮಕ್ಕಳು ನನ್ನ ಮಾತು ಕೇಳುವುದಿಲ್ಲವೆಂದು ಗೊತ್ತಿದ್ದರೂ ಕೌರವ ಪಾಂಡವರ ನಡುವೆ ನಡೆಯಬಹುದಾದ ಯುದ್ಧ ತಪ್ಪಿಸುವ ನಿಟ್ಟಿನಲ್ಲಿ ಹಸ್ತಿನಾವತಿಯ ರಾಣಿಯಾಗಿ ನನ್ನ ಕರ್ತವ್ಯದಿಂದ ತಪ್ಪಿಸಿಕೊಂಡವಳು. ಶಕುನಿ ಸಹಿತ ಮಕ್ಕಳೆಲ್ಲರೂ ಮಡಿದ ಸಂಕಟದಲ್ಲಿದ್ದ ನನಗೆ ಸ್ವಾಂತನ ಹೇಳಲು ಬಂದ ಶ್ರೀ ಕೃಷ್ಣನಿಗೆ ಶಾಪ ಕೊಟ್ಟು ಅವನ ಸಾವಿಗಾಗಿ ಅವನಿಂದಲೇ ಅಭಿನಂದನೆ ಪಡೆದವಳುʼ – ಎಲ್ಲವನ್ನೂ ಒಂದೆ ಉಸಿರಿನಲ್ಲಿ ಹೇಳಿ ಮುಗಿಸಿ ಮೌನದಲ್ಲಿ ಮುಳುಗಿದ ಗಾಂಧಾರಿಯನ್ನು ನೋಡಿದ ಕುಂತಿ ಈವರೆಗಿನ ಅವಳ ಮಾತುಗಳಲ್ಲಿರುವ ಸ್ಪಷ್ಟತೆಯನ್ನು ಗಮನಿಸುತ್ತಿದ್ದಳು. ಆದಷ್ಟು ಬೇಗ ಈ ವ್ಯಾಕುಲತೆಯಿಂದ ಗಾಂಧಾರಿಯು ಮುಕ್ತಳಾಗಬೇಕೆಂದು ಶ್ರೀಕೃಷ್ಣನನ್ನು ಪ್ರಾರ್ಥಿಸಿದಳು ಆ ಸಾದ್ವಿ.  

ʻಗಾಂಧಾರಿʼ-ಆಗಷ್ಟೇ ಎದ್ದ ಅರಸನ ಕೂಗಿನ ಧ್ವನಿ ಕೇಳಿ ಬಂದ ಕುಂತಿ ʻಅಕ್ಕ ಎದುರಿಗಿರುವ ಅತ್ತಿಯ ಮರದಡಿಯಲ್ಲಿ ಧ್ಯಾನ ಮಗ್ನಳಾಗಿದ್ದಾಳೆ. ಕರೆಯಲೇ?ʼ  ಎಂದಳು. ಅರಸನ ಉತ್ತರಿಸಲಿಲ್ಲ. ಇತ್ತೀಚೆಗೆ ಗಾಂಧಾರಿಯಲ್ಲಾಗುತ್ತಿರುವ ಬದಲಾವಣೆ ಅವನ ಗಮನಕ್ಕೂ ಬಂದಿತ್ತು. ದಿನಕ್ಕೊಮ್ಮೆಇಬ್ಬರ ನಡುವೆ ಮಾತು ನಡೆದರೆ ಆಯಿತು ಇಲ್ಲವಾದರೆ ಇಲ್ಲ. ಅವನ ಬೇಕು ಬೇಡಗಳನ್ನೆಲ್ಲ ನೊಡಿಕೊಳ್ಳುತ್ತಿದ್ದ ಆತ್ಮೀಯ ಸೇವಕಿ ರಂಭಾಳ ಸೇವೆ ಇಲ್ಲಿಯೂ ಮುಂದುವರಿದಿತ್ತು. ತಾನು ಹುಟ್ಟು ಕುರುಡನಾದರೆ ಬಟ್ಟೆ ಕಟ್ಟಿದ ಕಣ್ಣಿನಿಂದ ತನ್ನನ್ನು ಅನುಸರಿಸಿ, ಕುರುಡಳಂತೆ ಇರುವ ಅವಳ ಕುರಿತು ಬೀಗುತ್ತಿದ್ದ ಅರಸನಿಗೆ ಅವಳ ಅನ್ಯಮನಸ್ಕತೆ ಅರಿವಾದರೂ ಜಾಸ್ತಿ ಧೇನಿಸುತ್ತಿರಲಿಲ್ಲ. ಕುಂತಿ ಹೊರಬಂದು ಸೇವಕಿಯನ್ನು ಕಳಿಸಿದಳು. ಅವಳು ಅರಸನ ಕೈಯನ್ನು ತನ್ನ ಅಂಗೈಯಲ್ಲಿ ಇಟ್ಟುಕೊಂಡು ಅರಸನ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಳು. ಅವಳಿಗೆ ಗೊತ್ತಿತ್ತು-ಅರಸನ ಮನದಲ್ಲಾಗುವ ವಿಪ್ಲವಗಳು. ಅಷ್ಟರ ಮಟ್ಟಿಗೆ ‘ಅರಸು ನಿಷ್ಠತೆ’ ಅವಳಲ್ಲಿ ಪ್ರಾಮಾಣಿಕವಾಗಿತ್ತು. ಅದರ ಸ್ಪಷ್ಟತೆ ಗಾಂಧಾರಿಗೂ ತಿಳಿದಿತ್ತು.                                                     

ನಾಲ್ಕಾರು ದಿನ ಗಾಂಧಾರಿ ಅನ್ಯಮನಸ್ಕಳಾಗಿ ಇದ್ದಳು. ಕುಂತಿಯೂ ಅವಳನ್ನು ತುಂಬ  ಮಾತನಾಡಿಸುತ್ತಿರಲಿಲ್ಲ. ಅಂದು ರಾತ್ರಿ ಮಲಗಿದ್ದ ಕುಂತಿಗೆ ನಿದ್ರೆ ಬಂದಿರಲಿಲ್ಲ. ಹೆಜ್ಜೆ ಸಪ್ಪಳ ಕೇಳಿ ಎದ್ದ ಗಾಂಧಾರಿಯನ್ನು ಹತ್ತಿರ ಕುಳ್ಳಿರಿಸಿಕೊಂಡಳು. 

ʻಕುಂತಿ, ನೀನು ಆ ದಿನ  ಬೆಳಗಿನಜಾವ ಹೋಗಿದ್ದ ಗುಡ್ಡದ ಶಿಖರದ ಕುರಿತು ಹೇಳಿದ್ದೀಯಲ್ಲ. ನಾಳೆ ಬೆಳಗಿನ ಜಾವ ನನ್ನನ್ನೂ ಅಲ್ಲಿಗೆ ಕರೆದುಕೊಂಡು ಹೋಗುತ್ತೀಯಾ? ನಾನು ಉದಯಿಸುವ ಸೂರ್ಯನ ಚೆಂದವನ್ನು ಸವಿಯಬೇಕುʼ– ಕುಂತಿಗೆ ಖುಷಿ. ಅಂತೂ ಅವಳು ಮೌನ ಮುರಿದದ್ದೇ  ಕುಂತಿಗೆ ಸಮಾಧಾನ.          

ಮರುದಿನದ ಬೆಳಗಿನ ಜಾವವೇ ಗಾಂಧಾರಿಯ ಕೈಹಿಡಿದು ಗುಡ್ಡವೇರತೊಡಗಿದಳು. ಆಗ ಮಾಗಿಯ ಕಾಲ. ಮಾಗಿದ ಎರಡು ದೇಹಗಳೂ ಛಳಿಗೆ ನಡುಗುತ್ತಿದ್ದವು. ಇಬ್ಬರೂ ಹೊದೆದ ನಾರಿನ ಶಲ್ಯಗಳು ಇಬ್ಬನಿಯಲ್ಲಿ ತಣ್ಣಗಾಗಿತ್ತು.ಆದರೆ ಗುಡ್ಡ ಹತ್ತಿ ಬಂದದ್ದರಿಂದ ಇಬ್ಬರಿಗೂ ಆಯಾಸವಾಗಿತ್ತು. ಕುಂತಿಗೆ ಸಮಾಧಾನ.  ಸೂರ್ಯನ ಉದಯಕ್ಕೆ ಇನ್ನೂ ಸಮಯ ಇದ್ದುದರಿಂದ. 

ʻಅಕ್ಕ, ನಾವೀಗ ಗುಡ್ಡದ ಶಿಖರದಲ್ಲಿದ್ದೇವೆ. ಇಲ್ಲಿ ಉದಯಿಸುವ ಸೂರ್ಯನ ಚೆಲುವನ್ನು ನೋಡಲು ತುಂಬಾ ಚೆಂದವಾಗಿರತ್ತದೆ. ಆದರೆ ಹುಲ್ಲಿನ ಮೇಲೆ ತುಂಬ ಇಬ್ಬನಿ ಬಿದ್ದಿದೆ. ಕುಳಿತರೆ ನಿನಗೆ ಶೀತವಾದೀತೇನೋ?ʼ. ಕುಂತಿಯ ಸಹಜ ಕಾಳಜಿ ಗಾಂಧಾರಿಯ ಕಪ್ಪು ಬಟ್ಟೆಯನ್ನು ತೋಯಿಸಿತು.  ಕುಂತಿ ಹುಲ್ಲಿನ ಇಬ್ಬನಿಯನ್ನು ಝಾಡಿಸಿ, ಪರ್ಣಕುಟಿಯಿಂದ ತಂದಿದ್ದ ಅಂಗವಸ್ರ್ತವನ್ನು ಹಾಸಿ ಗಾಂಧಾರಿಯನ್ನು ಕೂರಿಸಿದಳು.

ʻತಂಗಿ, ಸೂರ್ಯನ ಉದಯಕ್ಕೆ ಇನ್ನೂ ಸಮಯ ಇದ್ದ ಹಾಗಿದೆ. ಏನೇ ಹೇಳು. ನಿನ್ನ ಜೀವಾನುಭವ ಅಪಾರವಾದದ್ದು ಕುಂತಿ. ಪಾಂಡುರಾಜನ ಜೊತೆ ಮಾದ್ರಿಯ ಸಹಗಮನದ ನಂತರ  ಐವರು ಮಕ್ಕಳನ್ನು ನೀನು ಬೆಳೆಸಿದ ರೀತಿ ಎಂಥ ಸವಾಲಿನದಾಗಿತ್ತು. ಎಲ್ಲರನ್ನೂ ಎದೆಗವಚಿಕೊಂಡು, ಐವರಿಗೂ ಒಂದೇ  ಥರ ಪ್ರೀತಿಯನ್ನು ನೀಡಿದೆ. ಯುದ್ಧ ಮುಗಿಯುವವರೆಗೂ ಕಾಡಿರಲಿ, ನಾಡಿರಲಿ ಅವರೊಡನೆಯೆ ನೆಡೆದೆ. ಅವರಿಗಾಗಿಯೇ ನಿನ್ನ ಉಸಿರಿತ್ತು. ಎಂಥ ಕಷ್ಟದ ಸಮಯದಲ್ಲಿಯೂ ನೀನು ಧರ್ಮದಂತೆ ನಡೆದೆ. ನಿನ್ನ ಮಕ್ಕಳನ್ನೂ ಹಾಗೆಯೆ ನಡೆಸಿದೆ. ಶ್ರೀಕೃಷ್ಣನಿಗೆ ಶರಣಾದೆ. 

ಎಲ್ಲ ಕಷ್ಟ ಕಳೆದು ಮಕ್ಕಳು ರಾಜ್ಯಭಾರ ಮಾಡುವಂತಾಗಿ ನೀನು ‘ರಾಜಮಾತೆ’  ಎನಿಸುವ ಈ ಸಮಯದಲ್ಲಿಯೂ ಎಲ್ಲವನ್ನೂ ತೊರೆದು ನಮ್ಮೊಡನೆ ವಾನಪ್ರಸ್ಥಕ್ಕೆ ಬಂದುಬಿಟ್ಟೆ. ಈ ನಿನ್ನ ತಾಯ್ತನ, ತ್ಯಾಗ ಎಲ್ಲವಕ್ಕೂ ನನ್ನ ನಮಸ್ಕಾರʼ ಮತ್ತೆ ಮೌನಿಯಾದಳು. 

ಕುಂತಿಯ ಕಿವಿ ಗಾಂಧಾರಿಯ ಮಾತನ್ನಾಲಿಸುತ್ತಿದ್ದಂತೆ ಕಣ್ಣು ಅತ್ತ ಮೂಡಣದ  ತಿಳಿಗೆಂಪಿನಲ್ಲಿ ನೆಲೆಸಿತ್ತು. 

ʻಅಕ್ಕಾ ಅದೋ ನೋಡು. ಮೂಡಣದ ಕೆಂಪಿನ ನಡುವೆ ಬಾಲ ಸೂರ್ಯ. ಆಹಾ… ಎಂಥ ಚೆಂದ..ʼ  ಅವಳಿಗೆ ಕಾಣುವುದಿಲ್ಲ ಎನ್ನುವ ಅರಿವು ಬಂದೊಡನೆ ಮಾತು ನಿಂತಿತು. ʻಇಲ್ಲ ಕುಂತಿ, ನಿಲ್ಲಿಸಬೇಡ. ಹೇಳುತ್ತ ಹೋಗುʼ  

ಹೇಳುತ್ತಲೇ ಇದ್ದಳು ಕುಂತಿ. ತುಸು ಹೊತ್ತು ಸರಿದ ಮೇಲೆ ಗಾಂಧಾರಿಯಿಂದ ಪ್ರತಿಕ್ರಿಯೆ ಬರಲಿಲ್ಲ. ಯಾಕೆಂದು ಕೇಳಲು ಅವಳತ್ತ ತಿರುಗಿದಳು. ಒಂದೇ ಉಸಿರಿನಲ್ಲಿ ಕೂಗಿದಳು ʻಅಕ್ಕ ಇದೇನು ಮಾಡಿಬಿಟ್ಟೆ?ʼ ಗಾಂಧಾರಿ ಉತ್ತರಿಸಲಿಲ್ಲ. ಎಷ್ಟೋ ದಶಕಗಳ ನಂತರದ ಮಂಜಾದ ಕಣ್ಗಳಿಂದ ಉದಯಿಸಿದ ಸೂರ್ಯನನ್ನೇ ನೋಡುತ್ತ ಕೈಮುಗಿಯುತ್ತಿರುವ ಗಾಂಧಾರಿಯ ಕಣ್ಣಿನಿಂದ ಧಾರಾಕಾರ ನೀರು.

ಕುರುಡ ರಾಜನ ಹೆಂಡತಿ ಕುರುಡು ರಾಣಿಯ ಪಾತ್ರ ಮುಗಿಸಿದ್ದಳು ಗಾಂಧಾರಿ.   

ಕುಂತಿಯ ಕಣ್ಣಿಗೆ ಬಿದ್ದಿದ್ದು-ಅನತಿ ದೂರದಲ್ಲಿ ಇಬ್ಬನಿ ಹಾಸಿದ ಹುಲ್ಲಿನ ಮೇಲೆ ಒದ್ದೆಯಾಗಿ ಮುದುಡಿ ಮಲಗಿದ್ದ ಹಾಗೂ ಇಲ್ಲಿಯವರೆಗಿನ ಗಾಂಧಾರಿಯ ಕಣ್ಣಿನ ಸಂಗಾತಿ ಅದೇ  ಕಪ್ಪು ಬಟ್ಟೆ.  

 

  • ವನಜಾ ಸನತ್‌, ತುಮಕೂರು 
Share26Tweet17SendShareShare
Next Post
ಕುಲಾರಿ ಕೆರೆ ಬೆಟ್ಟದಿಂದ ʻಭೂಪ ಕೇಳೆಂದʼ!

ಕುಲಾರಿ ಕೆರೆ ಬೆಟ್ಟದಿಂದ ʻಭೂಪ ಕೇಳೆಂದʼ!

Leave a Reply Cancel reply

Your email address will not be published. Required fields are marked *

Recommended

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಕಾಶಿಯ ಡೋಮ್‌ ಜನರು; ಅಂತ್ಯ ಸಂಸ್ಕಾರವೇ ಬದುಕು

ತಾಯ್ನೆಲದಲ್ಲೇ ನಿರಾಶ್ರಿತರಾದ ಕಾಶ್ಮೀರಿ ಪಂಡಿತರ ಕಥೆ-ವ್ಯಥೆ!

ತಾಯ್ನೆಲದಲ್ಲೇ ನಿರಾಶ್ರಿತರಾದ ಕಾಶ್ಮೀರಿ ಪಂಡಿತರ ಕಥೆ-ವ್ಯಥೆ!

ಶ್ರಾವಣ ಬಂತು…

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಹೂ ಮತ್ತು ಹುಡುಗಿ

ಹೂ ಮತ್ತು ಹುಡುಗಿ

ಕಚ್ಚುವ ನಾಯಿಗೆ ಬಿರಿಯಾನಿ, ಹಾಲು ಕೊಡುವ ದನಗಳಿಗೆ ಹುಲ್ಲಿಲ್ಲ!

ಕಚ್ಚುವ ನಾಯಿಗೆ ಬಿರಿಯಾನಿ, ಹಾಲು ಕೊಡುವ ದನಗಳಿಗೆ ಹುಲ್ಲಿಲ್ಲ!

ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು

ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು

Translate »
No Result
View All Result
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ

© 2026 JNews - Premium WordPress news & magazine theme by Jegtheme.