ದೃಶ್ಯಕಾವ್ಯ
Advertisement
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
No Result
View All Result
 ದೃಶ್ಯಕಾವ್ಯ
No Result
View All Result
Home ಪರಂಪರೆ

ಕುಲಾರಿ ಕೆರೆ ಬೆಟ್ಟದಿಂದ ʻಭೂಪ ಕೇಳೆಂದʼ!

ವನಜಾ ಸನತ್‌ ತಮ್ಮ ಬಾಲ್ಯದಲ್ಲಿ ಕಳುವಾಗುತ್ತಿದ್ದ ಹಳೆಯ ಸೀರೆಗಳು, ಲಂಗ, ಬಟ್ಟೆಗಳ ಬೆನ್ನತ್ತಿ ಗೆಳತಿಯರೊಂದಿಗೆ ಹೋಗಿ ಬಟ್ಟೆ ಕಳ್ಳರನ್ನು ಕುಲಾರಿ ಬೆಟ್ಟದಲ್ಲಿ ಕಂಡುಹಿಡಿದ ಪರಿ ದಾಖಲಿಸಿದ್ದಾರೆ. ಆ ʻವಸ್ತ್ರಾಪಹರಣʼದ ರೂವಾರಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಭಾಗವತರಾದ ಕೊಳಗಿ ಅನಂತ ಹೆಗಡೆ!

ಕುಲಾರಿ ಕೆರೆ ಬೆಟ್ಟದಿಂದ ʻಭೂಪ ಕೇಳೆಂದʼ!

     

‘ವಿಧಾನಸೌಧ ಮೆಟ್ಟಿಲು’ ಎಲ್ಲರಿಗೂ ಗೊತ್ತು. ಆದರೆ ‘ಕುಲಾರಿಕೆರೆ’ ಬೆಟ್ಟ ಕೆಲವರಿಗೆ ಮಾತ್ರ ಗೊತ್ತು.

ಭಾಗವತಿಕೆಯ ಮೂಲಕ ಯಕ್ಷಗಾನ ಕ್ಷೇತ್ರದಲ್ಲಿ ನಿರಂತರ ಸೇವೆಗೈದ ಕಾರಣಕ್ಕಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೇಶವ ಹೆಗಡೆ ಕೊಳಗಿಯವರು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರಿಂದ ವಿಧಾನಸೌಧ ಮೆಟ್ಟಿಲ ಮೇಲೆ ಸ್ವೀಕರಿಸಿದರು. ಕುಲಾರಿಕೆರೆ ಬೆಟ್ಟದಿಂದ ವಿಧಾನಸೌಧದ ಮೆಟ್ಟಿಲವರೆಗೆ ಅವರ ಪಯಣ ರೋಚಕ. 

ಕೊಳಗಿಯಲ್ಲಿರುವ ಕುಲಾರಿಕೆರೆ ಬೆಟ್ಟ ಇದೊಂದು ಮಲೆನಾಡಿನ ಎಲ್ಲಾ ಹಳ್ಳಿಯಲ್ಲಿರುವ ಬೆಟ್ಟದ ಹಾಗೆ ಮತ್ತಿ, ನೇರಲು, ಅಪರೂಪಕ್ಕೊಂದೊಂದು ಬೀಟೆ, ಹೊನ್ನೆ, ಹೆಬ್ಬಲಸು, ಹಣ್ಣುಸಂಪಿಗೆ, ಮಾವು,ಇತ್ಯಾದಿ ಇತ್ಯಾದಿ ಮರಗಳಿದ್ದರೆ  ಬಿಕ್ಕೆ, ಮುಳ್ಳಣ್ಣು, ಫರಿಘೆ, ಚಳ್ಳೆ, ಹಲಗೆ ಹೀಗೆ ಅನೆಕ ರೀತಿಯ ಹಣ್ಣುಗಳಿರುವ ಗಿಡ/ಪೊದೆಗಳು. ಅಲ್ಲೊಂದು ಪುಟ್ಟ ಕೆರೆ.  ಅದರ ಹೆಸರು ಕುಲಾರಿಕರೆ ಅದಕ್ಕೆ ತಾಗಿಕೊಂಡೇ ಈ ಬೆಟ್ಟ ಇದ್ದುದರಿಂದ  ಅದು ‘ಕುಲಾರಿಕೆರೆ ಬೆಟ್ಟʼ.

ನಮ್ಮಲ್ಲಿ ಸಲ್ಪ ದಿನಗಳಿಂದ ಹಳೆ ಲಂಗಗಳು, ಸೀರೆಗಳು ಲುಂಗಿಗಳು, ಕಾಣೆಯಾಗುತ್ತಿದ್ದವು. ಪ್ರತಿದಿನ ಕಂಚಪ್ಪೆ ಮಾವಿನಮರದಡಿ  ಅಕ್ಕ, ತಂಗಿ ,ಗೆಳತಿಯರ ಮೀಟಿಂಗ್ ನಲ್ಲಿ ಈ ವಿಷಯ ಚರ್ಚೆಗೆ ಬರುತ್ತಿತ್ತು. ಎಲ್ಲರ ಮನೆಯಲ್ಲಿಯೂ ಹಿರಿಯರು ಈ ವಿಷಯದ ಬಗ್ಗೆ ಮಾತನಾಡುತ್ತಿದ್ದರು.ಆದರೆ ನಾವ್ಯಾರೂ ಗಂಭೀರವಾಗಿ ಅದನ್ನು ಪರಿಗಣಿಸಿರಲಿಲ್ಲ. ಹೊಸದಾದರೆ ಬೇರೆ ವಿಷಯ.’ಹಳೆ ಬಟ್ಟೆಕಳ್ಳರು ಯಾರು?’ ಅನ್ನುವ ಕುತೂಹಲವಂತೂ ಇತ್ತು.

ಆಗ ಬೇಸಿಗೆ. ಶಾಲೆಗಳಿಗೆ ರಜ. ಸುಮಾರು ಒಂದು ವಾರದಿಂದ ಸಂಜೆ ನಾಲ್ಕರ ನಂತರ ಕುಲಾರಿಕೆರೆ ಬೆಟ್ಟದಿಂದ ಡಬ್ಬ ಬಡಿಯುತ್ತಿರುವ ಶಬ್ದ, ಹೋ..ಹೋ.. ಎನ್ನುವ ಕಿರುಚಾಟ, ಕೇಳುತ್ತಿತ್ತು. ನೋಡಿಯೇ ಬಿಡುವ ಎಂದು ಕುಲಾರಿಕೆರೆಯತ್ತ ಸಾಗಿತ್ತು- ನಮ್ಮ‌ ದಂಡು. ಮರೆಯಲ್ಲಿ ನಿಂತು ನೋಡಲು ಪ್ರಚೋದಿಸಿದ್ದು…ಏನು ಗೊತ್ತಾ? ಅರೆರೆ… ನಮ್ಮೆಲ್ಲರ ಮನೆಯಲ್ಲಿ ಕಳುವಾಗುತ್ತಿದ್ದ ಅವೇ ಹಳೆಯ ಬಟ್ಟೆಗಳು ಇಲ್ಲಿವೆ . ತಕ್ಷಣ  ನಾವೆಲ್ಲ ಕಣ್ಣಸನ್ನೆಯಲ್ಲಿಯೇ ಮಾತನಾಡಿ ಮರ,ಪೊದೆಗಳ ಹಿಂದೆ ನಿಂತು ನಮ್ಮ ವೀಕ್ಷಣೆ ಮುಂದುವರಿಸಿದೆವು.

ಹಳೆಯ ಬಟ್ಟೆಗಳು ಆದರೇನು? ಅವುಗಳೆಲ್ಲ  ಇಲ್ಲಿ ಮಕ್ಕಳ ಕಲ್ಪನೆಗೆ ತಕ್ಕಂತೆ ಸಿಂಗಾರವಾಗಿತ್ತು.  ‘ರಂಗಸ್ಥಳ’ , ಚೌಕಿಮನೆ, ಪ್ರೇಕ್ಷಕರು ಕೂತು ನೋಡುವ ಜಾಗ..ಅಷ್ಟೇ ಅಲ್ಲ, ಹಿಮ್ಮೇಳಗಳಿಗೆ ಮುಂಡಾಸು, ನಟರಿಗೆ ಆಯಾ ಪಾತ್ರಕ್ಕೆ ಸರಿಯಾದ ದಿರಸು…..ಒಂದೇ ಎರಡೇ…

ಅಷ್ಟರಲ್ಲಿ ತಮ್ಮದೇ ಶೈಲಿಯಲ್ಲಿ ಮುಂಡಾಸ ಧರಿಸಿದ ಹಿಮ್ಮೇಳಗಳು ಮನೆಯಲ್ಲಿ ಬಿಸಾಕಿದ್ದ ಬೆಲ್ಲದ ಡಬ್ಬದಿಂದ ಮಾಡಿದ ಚಂಡೆ ಹಾಗೂ ಮೃದಂಗ, ಭಜನೆಗೆ ಉಪಯೋಗಿಸುವ ತಾಳ,ರಟ್ಟಿನ ಪೆಟ್ಟಿಗೆಯ ಹಾರ್ಮೋನಿಯಂ ನೊಡನೆ ರಂಗಸ್ಥಳಕ್ಕೆ ಬಂದರು.ಬಂದವರೇ ಶುರುಮಾಡಿದ್ದೇ ಗಣಪತಿಯ ಪೂಜೆ. ಕೋಡಂಗಿ ಕುಣಿತದೊಡನೆ ಬಂದವನಿಗೆ ಚಂಡೆಯ ಅಬ್ಬರವೋ ಅಬ್ಬರ. ಅವನು ಕುಣಿದದ್ದೇ ಕುಣಿದದ್ದು. ಅವನ ಪೋಷಾಕು  ನಾವು ಬಿಟ್ಟಿರುವ  ಲಂಗದಿಂದ ಮಾಡಿದ್ದು. ಹಾಗೆ ಬಾಲ ಗೋಪಾಲರು, ಸ್ರ್ತೀವೇಷ,  ಬಂದು ಹೋದ ನಂತರ ಬಂದವ ದುರ್ಯೋಧನ. ಅವನ ಹಿಂದೆ ಭೀಮ. ಇಬ್ಬರಿಗೂ ನಡೆದದ್ದು ಯುದ್ಧ. ಹೋ .. ಅನ್ನುತ್ತಲೇ ದುರ್ಯೋದನ ನೆಲಕ್ಕೆ ಬಿದ್ದ. ಕೊನೆಯಲ್ಲಿ ಕೃಷ್ಣ ಬಂದ. ‘ರಾಮಕೃಷ್ಣರು ಮನೆಗೆ ಬಂದರೋ…’ ಹಾಡಿನ ಎರಡು ಸಾಲನ್ನ ಹಾಡಿದ ಭಾಗವತರು “ಇಂದು ಆಟ ಮುಗಿಯಿತು. ಮತ್ತೆ ನಾಳೆ” ಎನ್ನುತ್ತಿದ್ದಂತೆ ಎಲ್ಲರೂ ರಂಗಸ್ಥಳಕ್ಕೆ ಬಂದರು. ಆಯಾ ಪಾತ್ರಗಳ ಮೀಸೆ ಗಳು ಇದ್ದಿಲಿನಿಂದ ಬರೆಯಲ್ಪಟ್ಟಿದ್ದರೆ ,ವಿಭೂತಿ ಹಾಗೂ ಪೌಡರಗಳನ್ನು ನೀರಿನಲ್ಲಿ ಕಲಸಿ ಹಚ್ಚಿದ ಮುಖವರ್ಣಿಕೆಯಲ್ಲಿ ನೋಡುವುದಕ್ಕೆ ಎಲ್ಲರೂ ಮಜವಾಗಿ ಕಾಣ್ತಿದ್ದರು.

ಶಾಲೆಗೆ ರಜೆ ಇರುವ ದಿನಗಳಲ್ಲಿ ನಡೆಯುತ್ತಿದ್ದ ಈ ಆಟ ಈಗ ಊರಿನಲ್ಲಿ ಎಲ್ಲರಿಗೂ ಗೊತ್ತಾಗಿತ್ತು. ಮೊದಲು ಮರಗಳ ಮರೆಯಲ್ಲಿ ಅಡಗಿ ನೋಡುತ್ತಿದ್ದ ನಾವುಗಳು ಈಗ ಅವರು ಹಾಸಿದ ನಮ್ಮದೇ ಸೀರೆಗಳ ಮೇಲೆ ಕುಳಿತು ನೋಡುತ್ತಿದ್ದೆವು. ಮೊದಮೊದಲು ನಾಚಿಕೊಳ್ಳುತ್ತಿದ್ದ ಮಕ್ಕಳು ಈಗ ನಮ್ಮನ್ನು ‘ಪ್ರೇಕ್ಷಕ’ ರೆಂದು ಪರಿಗಣಿಸಿ, ನಿರ್ಭಿಡೆಯಿಂದ ಆಟ(ಯಕ್ಷಗಾನ) ಮಾಡುತ್ತಿದ್ದರು. ತಾವು ನೋಡಿದ ಆಟಗಳಲ್ಲಿನ  ಕಥೆ ಗಳು, ಅದರಲ್ಲಿ ಬರುವ ಪಾತ್ರಗಳಿಗೆ ತಮ್ಮದೇ ಆದ ಹಾಡುಗಳು, ಮಾತುಗಳು, ಹಾವಭಾವಗಳ ಜೊತೆ ಕುಣಿತಗಳು..

ಅವರದೇ ಪ್ರಪಂಚ…ಅಲ್ಲಿ ಅವರು ಹಾಡಿದ್ದೇ ಭಾಗವತಿಕೆ, ಕುಣಿದದ್ದೇ ಕುಣಿತ, ಬಾರಿಸಿದ್ದೇ ಮೃದಂಗ ಹಾಗೂ ಚಂಡೆಗಳ ಲಯ ಹಾಗೂ ಪೆಟ್ಟು. ಇಂದು ಅದನ್ನೆಲ್ಲ ಧೇನಿಸಿದರೆ ಆ ಮಕ್ಕಳ ಮುಗ್ಧ ಪ್ರಪಂಚದೊಳಗೆ ಕಾಡಿನ ದೇವಿಯೇ ಜೊತೆಯಾದಳೇನೋ? ಅನ್ನುವ ಹಿತವಾದ ಭಾವ ಆವರಿಸುತ್ತಿದೆ -ಮನದ ತುಂಬ.

ಅದಕ್ಕೆ ನಾವು ತಮಾಷೆಯಾಗಿ  ಆ ಗುಂಪಿಗೆ ‘ಚಪ್ಪರಿವೆ ಮೇಳ’ ಹಾಗೂ ಭಾಗವತನಿಗೆ ‘ಹಕ್ಕಲ ಭಾಗವತ’ ಎಂದು ಕರೆಯುತ್ತಿದ್ದೆವು. ಆದರೆ ಅವರಿಗೆ ಇದರಿಂದ ಬೇಸರವಾಗದಿರಿವುದೂ ನಮಗೆ ಗೊತ್ತಿತ್ತು. ಯಾಕೆಂದರೆ ಅವರ ಆಟದ ಕಾಯಂ ಪ್ರೇಕ್ಷಕರು ನಾವೇ ಆಗಿದ್ದೆವು. 

ಅಂದು ನಾವೆಲ್ಲ ಪ್ರೀತಿಯಿಂದ ಕರೆಯುತ್ತಿದ್ದ ಕುಲಾರಿಕೆರೆ ಬೆಟ್ಟದ ಚಪ್ಪರಿವೆ ಮೇಳದ ‘ಹಕ್ಕಲ ಭಾಗವತ’ ವಿಧಾನ ಸೌಧದ ಮೆಟ್ಟಲ್ಲನ್ನೇರಿ ಯಕ್ಷಗಾನದ ಕುರಿತಾದ ಆಸಕ್ತಿ ಹಾಗೂ ತನ್ನ ನಿರಂತರ ಪರಿಶ್ರಮದ ಸಾಧನೆಗಾಗಿ ‘ರಾಜ್ಯೋತ್ಸವ’ ಪ್ರಶಸ್ತಿ ಪುರಸ್ಕ್ರತ ರಾದ  ಖುಷಿಯಲ್ಲಿ ಮನದಲ್ಲಿ ಬಂದಿದ್ದು ಬಾಲ್ಯದ  ನೆನಪಿನ ಬುತ್ತಿಯಲ್ಲಿನ ಈ ಒಂದಷ್ಟು ತುತ್ತುಗಳು. 

ಅವತ್ತು ಅವರ ಜೊತೆ ಚಪ್ಪರಿವೆ ಮೇಳದಲ್ಲಿದ್ದ ಗಂಗಾಧರ ಈಗ ‘ಸಾಹಿತಿʼ ಗಂಗಾಧರ ಕೊಳಗಿಯಾದರೆ ವೆಂಕಟರಮಣ ಹೋಟಲ್ ಉದ್ಯಮದಲ್ಲಿ ವಿ.ಎಮ್ ಭಟ ಕೊಳಗಿ, ಹಾಗೆಯೇ ವಸಂತ ಹವ್ಯಾಸಿ ಯಕ್ಷಗಾನದ ನಟನಾದರೆ,  ಮಾಧವ ಹವ್ಯಾಸಿ ಭಾಗವತ. ರಮೇಶ, ವೆಂಕಟೇಶ, ರಾಜು, ರತ್ನವರ್ಮಇನ್ನೂ ಹಲವು ಮಕ್ಕಳು. ಇವರೆಲ್ಲರೂ ಈಗ ವೃತ್ತಿಯಾಗಿ ಕೃಷಿಯ ಜೊತೆ ಪ್ರವೃತ್ತಿಯಾಗಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಧನೆಯನ್ನು ತಮ್ಮ ಪರಿಸರದಲ್ಲಿಯೇ ಸದ್ದಿಲ್ಲದೇ ಮಾಡುತ್ತಿರುವುದನ್ನು ನೋಡುವ ಸಂತೃಪ್ತಿ ನಮ್ಮದು.

ಯಾವ ‘ಕುಲಾರಿಕರೆಬೆಟ್ಟ’ ಬಾಲ್ಯದ  ‘ಹಕ್ಕಲಭಾಗವತ’ ನನ್ನು ರೂಪಿಸಿತ್ತೋ; ಅದೇ ಕುಲಾರಿಕೆರೆ ಬೆಟ್ಟದ ಬುಡದ ಕೊಳಗಿ ಸಮಾಜ ಮಂದಿರ’ದಲ್ಲಿ ಇತ್ತೀಚೆಗೆ ಕೊಳಗಿ ಹಾಗೂ ಶಿರಳಗಿ ಗ್ರಾಮದ ಹಿರಿ- ಕಿರಿಯರೆಲ್ಲ ಸೇರಿ ಕೇಶವಣ್ಣನಿಗೆ ಅಭಿನಂದನಾ ಸಮಾರಂಭವನ್ನು ಬಹಳ ಸಂಭ್ರಮದಿಂದ ನಡೆಸಿದರು. ಇದು ಬಹಳ ವಿಶಿಷ್ಟ ರೂಪಕವಾಗಿ ಕಂಡಿದ್ದು ಸುಳ್ಳಲ್ಲ. 

 

ವನಜಾ ಸನತ್, ತುಮಕೂರು.

Share11Tweet7SendShareShare
Next Post
ನೀನಿಲ್ಲದೇ

ನೀನಿಲ್ಲದೇ

Leave a Reply Cancel reply

Your email address will not be published. Required fields are marked *

Recommended

ಅಂತಿಮ ವಿದಾಯದ ಕಾಫಿ!

ಅಂತಿಮ ವಿದಾಯದ ಕಾಫಿ!

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಕಾಶಿಯ ಡೋಮ್‌ ಜನರು; ಅಂತ್ಯ ಸಂಸ್ಕಾರವೇ ಬದುಕು

ತಾಯ್ನೆಲದಲ್ಲೇ ನಿರಾಶ್ರಿತರಾದ ಕಾಶ್ಮೀರಿ ಪಂಡಿತರ ಕಥೆ-ವ್ಯಥೆ!

ತಾಯ್ನೆಲದಲ್ಲೇ ನಿರಾಶ್ರಿತರಾದ ಕಾಶ್ಮೀರಿ ಪಂಡಿತರ ಕಥೆ-ವ್ಯಥೆ!

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಹೂ ಮತ್ತು ಹುಡುಗಿ

ಹೂ ಮತ್ತು ಹುಡುಗಿ

ಕಚ್ಚುವ ನಾಯಿಗೆ ಬಿರಿಯಾನಿ, ಹಾಲು ಕೊಡುವ ದನಗಳಿಗೆ ಹುಲ್ಲಿಲ್ಲ!

ಕಚ್ಚುವ ನಾಯಿಗೆ ಬಿರಿಯಾನಿ, ಹಾಲು ಕೊಡುವ ದನಗಳಿಗೆ ಹುಲ್ಲಿಲ್ಲ!

ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು

ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು

Translate »
No Result
View All Result
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ

© 2026 JNews - Premium WordPress news & magazine theme by Jegtheme.