ದೃಶ್ಯಕಾವ್ಯ
Advertisement
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
No Result
View All Result
 ದೃಶ್ಯಕಾವ್ಯ
No Result
View All Result
Home ಪರಂಪರೆ

ಕಾವೇರಿ ನದಿಗುಂಟ ಮಹಾಯಾತ್ರೆ

ಕಾವೇರಿ ನದಿಗುಂಟ ಮಹಾಯಾತ್ರೆ

ತಲಕಾವೇರಿಯಲ್ಲಿ ಉಗಮವಾಗುವ ಕಾವೇರಿ, ಪೂಂಪುಹಾರ್‌ನಲ್ಲಿ ಸಮುದ್ರ ಸೇರುವತನಕ ೭೬೫ ಕಿ ಮೀ ಮಹಾಯಾತ್ರೆ ಬಹಳ ರೋಚಕ. ಎರಡು ಬೃಹತ್‌ ಜಲಪಾತಗಳು, ಮಲೆನಾಡಿನಿಂದ ಬಯಲುಸೀಮೆಗೆ ಬಂದು ಮತ್ತೆ ಮಲೆನಾಡಿನಂಥ ಪ್ರದೇಶಕ್ಕೆ ಹರಿಯುವ ಏಕೈಕ ನದಿ ಕಾವೇರಿ. ನದಿಯ ಹರಿವಿನಗುಂಟ ೧೯೭೫ ರಲ್ಲಿ ಯಾತ್ರೆ ಮಾಡಿಬಂದ ಎದುರ್ಕಳ ಶಂಕರನಾರಾಯಣ ಭಟ್ಟರು ʻಶ್ರೀ ಕಾವೇರಿ ವೈಭವʼ ಪುಸ್ತಕ ಬರೆದರು. ಅದನ್ನು ಆಧರಿಸಿದೆ ಈ ಲೇಖನ.

ನೋಡುಗರೆ, ಮೈತುಂಬಾ ವಿವಾದ ತುಂಬ್ಕೊಂಡಿರೋ ಕಾವೇರಿ ನದಿಗೆ, ಯಾಕಿಷ್ಟು ಮಹತ್ವ? ಎರಡೂ ರಾಜ್ಯಗಳ ಮಧ್ಯೆ ಯಾಕಿಷ್ಟು ಸಂಘರ್ಷ ಅನ್ನೋದನ್ನ ಅರ್ಥ ಮಾಡ್ಕೊಳೋಕೆ ನ್ಯಾಯಾಲಯದ ಹಳೆಯ ದಸ್ತಾವೇಜುಗಳನ್ನು ತಿರುವಿ ಹಾಕ್ಬೇಕಾಗಿಲ್ಲ. ಬದಲಿಗೆ ಕಾವೇರಿ ಉಗಮ ಸ್ಥಾನದಿಂದ ಸಮುದ್ರ ಸೇರೋತನಕ ಅದ್ರಗುಂಟ ಹೋದ್ರೆ, ಅದ್ರ ಪ್ರಾಮುಖ್ಯತೆ, ಮಹತ್ವ, ಪಾವಿತ್ರ್ಯ ಎನೇನು ಹೇಳ್ತೀರೋ ಎಲ್ಲಾನೂ ಅರ್ಥ ಆಗುತ್ತೆ. ಬನ್ನಿ ಕಾವೇರಿನದಿಗುಂಟ ಒಂದು ಮಹಾಯಾತ್ರೆ ಮಾಡೋಣ.

ಕಾವೇರಿ. ತಲಕಾವೇರಿಯಲ್ಲಿ ಉಗಮಿಸಿದಾಗ ಪುಟ್ಟಕೊಳ. ಎಲ್ಲ ನದಿಯ ಹಾಗೆ ತೊರೆಯಾಗಿ ಭಾಗಮಂಡಲದೆಡೆ ಸಹ್ಯಾದ್ರಿ ಪರ್ವತ ಕಣಿವೆಯಲ್ಲಿ ಹರಿಯುತ್ತಾಳೆ. ಭಾಗಮಂಡಲದಲ್ಲಿ ಕನಕ ಹಾಗೂ ಸುಜ್ಯೋತಿ ಅನ್ನೋ ಪುಟ್ಟ ನದಿಗಳು ಕಾವೇರಿನ ಸೇರ್ತಾವೆ. ಇದರಲ್ಲಿ ಸುಜ್ಯೋತಿ ಗುಪ್ತಗಾಮಿನಿ. ಥೇಟ್‌ ಪ್ರಯಾಗರಾಜ್‌ನಲ್ಲಿ ಗಂಗಾಯಮುನಾ ಸರಸ್ವತಿ ಸಂಗಮದ ಹಾಗೆ. ಇಲ್ಲೂ ತ್ರಿವೇಣಿ ಸಂಗಮ ಅಂತನೆ ಕರೆಯೋದು.

ಇಲ್ಲಿಂದ ಅರಬ್ಬಿಸಮುದ್ರ  ತುಂಬಾನೆ ಹತ್ರ..‌ ಕಾವೇರಿ ಅಕಸ್ಮಾತ್‌ ಪಶ್ಚಿಮಕ್ಕೆ ತಿರುಗಿದ್ದರೆ ೧೩೫ ಕಿಲೋಮೀಟರ್‌ನ ಪುಟ್ಟ ನದಿಯಾಗಿ ಪ್ರಯಾಣ ಮುಗಿಸುತ್ತಿದ್ದಳು. ಆಕೆಗೆ ಹೆಚ್ಚು ಮಹತ್ವ ಬಂದಿದ್ದೇ ಭಾಗಮಂಡಲದಿಂದ ಪೂರ್ವಕ್ಕೆ ತಿರುಗಿದ್ದಕ್ಕೆ. ೭೬೫ ಕಿಲೋಮೀಟರ್‌ನ ದೊಡ್ಡ ನದಿಯಾಗಿ ಬಹುಭಾಷಾ ಪ್ರಾಂತ್ಯಗಳಲ್ಲಿ ಹರಿದಿದ್ದಕ್ಕೆ.

(ಪುರಾಣ ಕತೆಗಳಲ್ಲೂ ಕಾವೇರಿ ಹುಟ್ಟಿದ್ದೇ ಗಲಾಟೆಯಿಂದ. ಅಂದು ಕವೇರ ರಾಜನ ಮಗಳು ಲೋಪಾಮುದ್ರೆಯನ್ನು ಅಗಸ್ತ್ಯ ಅನ್ನೋ ಕುಬ್ಜ ಮುನಿ ಮದುವೆಯಾದ. ಮದುವೆಗೆ ಲೋಪಾಮುದ್ರೆ ಹಾಕಿದ ಷರತ್ತು ಅಂದ್ರೆ ಯಾವತ್ತು ತನ್ನನ್ನು ಉಪೇಕ್ಷಿಸಿ ಹೋಗಬಾರದು ಅಂತ. ಒಂದು ಬೆಳ್ಳಂಬೆಳಗ್ಗೆ ಮುನಿಗೆ ಅದೇನ್ನಿಸ್ತೋ, ಲೋಪಾಮುದ್ರೆಯನ್ನು ಜಲರೂಪಿಯನ್ನಾಗಿ ಮಾಡಿ ಕಮಂಡಲಿನಲ್ಲಿ ಹಾಕಿ ಆಶ್ರಮದಲ್ಲಿಟ್ಟು ಸ್ನಾನಕ್ಕೆ ಹೋದರು. ಆದರೆ ಕಾಕತಾಳೀಯವಾಗಿ ಕಮಂಡಲು ಉರುಳಿ ಬಿದ್ದು ಕಾವೇರಿ ನದಿಯಾಗಿ ಹರಿದಳು. ಹರಿಯೋ ನದಿಗೆ ಯಾರಪ್ಪಣೆ ಅಂತ ಕೇಳ್ಬೇಡಿ. ಕಾವೇರಿ ಪತಿ ಅಗಸ್ತ್ಯಮುನಿಯ ಅಪ್ಪಣೆಯಂತೆ ಪೂರ್ವದಿಕ್ಕಿಗೆ ಹರಿದಳು ಅನ್ನುತ್ತೆ ಪುರಾಣಕಥನ. ಅಗಸ್ತ್ಯಮುನಿ ತಮಿಳು ವ್ಯಾಕರಣದ ಪಿತಾಮಹ ಅಂತಾರೆ. ಅಲ್ಲಿ ಅನೇಕ ಅಗಸ್ತ್ಯ ಕ್ಷೇತ್ರಗಳಿವೆ. ಅದೇ ಅಗಸ್ತ್ಯಮುನಿ ಇವರೇ ಹೌದಾದರೆ, ಬರಡಾದ ತಮಿಳು ನೆಲಕ್ಕೆ ಕರುನಾಡ ನೀರು ಹರಿಸುವ ಮೊದಲ ಪ್ರಯತ್ನ ಅವರಿಂದ್ಲೇ  ಆಗಿರಬಹುದು!  ಭಗೀರಥ ಗಂಗೆಯನ್ನು ಭೂಮಿಯಲ್ಲಿ ಹರಿಸಿದ ಹಾಗೆ )

ಕಥೆ, ಕಲ್ಪನೆಗಳೇನೇ ಇರಲಿ, ಭಾಗಮಂಡಲದಿಂದ ಕಾವೇರಿ ಕೊಡಗು ಜಿಲ್ಲೆಯ ಹರಿಶ್ಚಂದ್ರ, ಪಾಲೂರು, ನಾಪೋಕ್ಲು, ಬಲಮುರಿ, ಗುಹ್ಯ, ಸಿದ್ದಾಪುರ, ಕುಶಾಲನಗರ ತಲುಪುತ್ತಾಳೆ. ಇಲ್ಲಿಂದ ಕಾವೇರಿ ದಿಕ್ಕು ಬದಲಿಸಿ ಉತ್ತರಕ್ಕೆ ತಿರುಗಿ ಕೂಡಿಗೆ ಎಂಬ ಊರು ತಲುಪುತ್ತಾಳೆ. ಇಲ್ಲಿ ಹಾರಂಗಿ ನದಿ ಕಾವೇರಿಗೆ ಬಂದು ಸೇರುತ್ತೆ. ಇಲ್ಲಿಂದ ಮುಂದೆ ರಾಮಸ್ವಾಮಿ ಕಣಿವೆ ಎಂಬ ಊರಿನಲ್ಲಿ ಕಾವೇರಿ ನದಿ ಸ್ವಲ್ಪ ವಿಶಾಲವಾಗ್ತಾಳೆ. ಕಣಿವೆಯಿಂದ ಅನೇಕ ಊರು ದಾಟಿ ಶಿರಂಗಾಲ ಎಂಬಲ್ಲಿ ಹಾಸನ ಜಿಲ್ಲೆ ಪ್ರವೇಶಿಸ್ತಾಳೆ. ಮುಂದೆ ಸರಗೂರು, ಕೊಣ್ಣೂರು ದಾಟಿ ರಾಮನಾಥಪುರ ತಲುಪ್ತಾಳೆ. ನಟಿ ಆರತಿಯವರ ಹುಟ್ಟೂರು ರಾಮನಾಥಪುರ. ಇಲ್ಲಿ ನದಿಯ ಇನ್ನೊಂದು ದಡದಲ್ಲಿ ಕಣಗಾಲ್‌ ಊರಿದೆ. ಪುಟ್ಟಣ್ಣ ಕಣಗಾಲ್‌ ಇದೇ ಊರಿನವರು. ಅಲ್ಲಿಂದ ಮುಂದೆ ಬಸವಾಪಟ್ಣ, ರುದ್ರಾಪಟ್ಣ ಕ್ಷೇತ್ರ ತಲುಪುತ್ತಾಳೆ. ರುದ್ರಾಪಟ್ಣ ಕರ್ನಾಟಕ ಸಂಗೀತ ಪರಂಪರೆಗೆ ಹೆಸರುವಾಸಿ.  ಅಲ್ಲಿಂದ ಮುಂದೆ ಹೊಳೆಕೇರಳಾಪುರ, ಹೆಪ್ಪೆಹೊಸೂರು ದಾಟಿ ಚಾಮರಾಜಕಟ್ಟೆಗೆ ಬರ್ತಾಳೆ. ಇಲ್ಲಿ ಕಾವೇರಿಗೆ ಅಡ್ಡಲಾಗಿ ಹಳೆಕಾಲದ ಚಿಕ್ಕ ಆಣೆಕಟ್ಟೆಯಿದೆ. ಇದು ಈ ನದಿಗೆ ಅಡ್ಡಲಾಗಿ ಕಟ್ಟಿರುವ ಮೊದಲ ಆಣೆಕಟ್ಟೆ. ಅಲ್ಲಿಂದ ರಾಮಸಮುದ್ರ, ಸಾಲಿಗ್ರಾಮ ಹಾಯ್ದು ಚುಂಚನಕಟ್ಟೆಗೆ ಬರ್ತಾಳೆ. ಅಲ್ಲಿ ಕಾವೇರಿಯ ಪುಟ್ಟ ಜಲಪಾತ ನಯನಮನೋಹರ. ಅಲ್ಲಿಂದ ಎಡತೊರೆ, ಸಾಗರಕಟ್ಟೆಅನ್ನೋ ಊರು ತಲುಪ್ತಾಳೆ. ಅಲ್ಲಿ ಹಾಸನ ಕಡೆಯಿಂದ ಬಂದ ಹೇಮಾವತಿ ಹಾಗೂ ಲಕ್ಷ್ಮಣತೀರ್ಥ ನದಿಗಳು ಕಾವೇರಿಯನ್ನ ಸೇರ್ತಾವೆ. ಅಲ್ಲಿಂದ ಅನತಿ ದೂರದಲ್ಲಿ ಇರುವುದೇ ಜಗತ್ಪ್ರಸಿದ್ಧ ಕನ್ನಂಬಾಡಿ ಕಟ್ಟೆ. ಸರ್.‌ ಎಂ. ವಿಶ್ವೇಶ್ವರಯ್ಯನವರ ಇಂಜಿನಿಯರ್‌ ಮಿದುಳು ಇವತ್ತಿಗೂ ವಿಸ್ಮಯ ಎನ್ನಿಸುವುದು ಇದೇ ಆಣೆಕಟ್ಟೆಯಿಂದ. ಕೃಷ್ಣರಾಜಸಾಗರ ಎಂದೇ ಪ್ರಸಿದ್ಧವಾಗಿರುವ ಈ ಜಲಾಶಯದ ಕೆಳಭಾಗ ಬೃಂದಾವನ ಗಾರ್ಡನ್‌ನಲ್ಲಿ ಅದೆಷ್ಟು ಸಿನಿಮಾ ಹಾಡುಗಳ ಚಿತ್ರೀಕರಣ ಆಗಿದೆಯೋ.

ಕನ್ನಂಬಾಡಿ ಕಟ್ಟೆಯಿಂದ  ಕಾವೇರಿ  ಪೂರ್ವಕ್ಕೆ ಹರಿದು ಬಲಮುರಿ ಅನ್ನೋ ಜಾಗದಲ್ಲಿ ಏಳು ಕವಲುಗಳ ಜಲಧಾರೆ ನಿರ್ಮಿಸುತ್ತಾಳೆ. ಅಲ್ಲಿಂದ ಕೆಲವೇ ಕಿಲೋಮೀಟರ್‌ ದೂರದಲ್ಲಿದೆ ರಂಗನತಿಟ್ಟು ಪಕ್ಷಿಧಾಮ. ಕಾವೇರಿ ಕವಲುಕವಲಾಗಿ ಅನೇಕ ಪುಟ್ಟಪುಟ್ಟ ದ್ವೀಪ ನಿರ್ಮಾಣವಾಗಿವೆ. ದೇಶ ವಿದೇಶಗಳ ಪಕ್ಷಿಗಳಿಗೆ ಇದು ಸಂತಾನಕಾಶಿ. ಇಲ್ಲಿಂದ ಅನತಿ ದೂರದಲ್ಲಿ ಕಾವೇರಿ ಎರಡು ಕವಲಾಗುತ್ತಾಳೆ. ಒಂದು ಕವಲು ಪಶ್ಚಿಮ ವಾಹಿನಿ. ಇನ್ನೊಂದು ಕವಲು ಕಾವೇರಿ. ಎರಡೂ ಕವಲುಗಳು ಬಳಸಿ ಹರಿದ ದ್ವೀಪಭಾಗವೇ ಶ್ರೀರಂಗಪಟ್ಟಣ. ರಂಗನಾಥ ಸ್ವಾಮಿಯ ಬೃಹತ್‌ ದೇಗುಲ ಸೇರಿದಂತೆ ಅನೇಕ ದೇವಾಲಯಗಳು, ಟಿಪ್ಪುವಿಗೆ ಸಂಬಂಧಪಟ್ಟ ಸ್ಮಾರಕಗಳು ಇಲ್ಲಿವೆ. ಈ ರಂಗನಾಥನನ್ನ ಆದಿರಂಗ ಅಂತ ಹೇಳ್ತಾರೆ. ಅಂದ್ರೆ ಕಾವೇರಿ ತೀರದ ಮೊದಲ ರಂಗಣ್ಣಈತ!

ಮುಂದೆ ಸಂಗಮದಲ್ಲಿ ಪಶ್ಚಿಮ ವಾಹಿನಿ ಮತ್ತು ಕಾವೇರಿ ಮುಖ್ಯನದಿ ಮತ್ತೆ ಸಂಗಮವಾಗಿ ಮುಂದೆ ಕರಿಘಟ್ಟ, ಅಲ್ಲಿಂದ ಸೋಮನಾಥಪುರಕ್ಕೆ ಸಾಗುತ್ತಾಳೆ. ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ ಅಂತ ಕುವೆಂಪು ಕರೆದ ಸೋಮನಾಥಪುರ ಇದೇ. ಹೊಯ್ಸಳ ಶಿಲ್ಪಕಲೆಯ ರಮ್ಯತಾಣ.  

ಅಲ್ಲಿಂದ ಸೋಸಲೆ ಮೂಲಕ ಟಿ ನರಸೀಪುರಕ್ಕೆ ಬರುತ್ತಾಳೆ. ತಿರುಮಲಕೂಡಲು ನರಸಿಪುರ.. ಇಲ್ಲಿ ಕೇರಳದ ವೈನಾಡಿನಿಂದ ಹರಿದು ಬಂದ ಕಬಿನಿ ಅಥವಾ ಕಪಿಲಾ ನದಿ ಜೊತೆಗೆ ಸ್ಪಟಿಕ ಅನ್ನೋ ಗುಪ್ತಗಾಮಿನಿ ಕಾವೇರಿ ಜೊತೆ ಸೇರುತ್ತವೆ. ಇದೂ ತ್ರಿವೇಣಿ ಸಂಗಮ ಕ್ಷೇತ್ರ. ಇಲ್ಲಿ ತನಕ ಪೂರ್ವಕ್ಕೆ ಹರಿತಾ ಇದ್ದ ಕಾವೇರಿ ಇದ್ದಕ್ಕಿದ್ದ ಹಾಗೆ ದಕ್ಷಿಣ ದಿಕ್ಕಿಗೆ ತಿರುಗ್ತಾಳೆ. ಮುಡುಕುತೊರೆಯನ್ನ ದಾಟಿದಾಗ ಇನ್ನೊಂದು ಹಳೆಯ ಕಾಲದ ಆಣೆಕಟ್ಟೆ ಕಾಣಸಿಗುತ್ತೆ. ಇದೇ ಇತಿಹಾಸ ಪ್ರಸಿದ್ಧ ಮಾಧವಮಂತ್ರಿ ಆಣೆಕಟ್ಟು.

ತದನಂತರ ಭೌಗೋಳಿಕ ವೈಚಿತ್ರ್ಯವನ್ನು ಪ್ರದರ್ಶಿಸಿದ ಕಾವೇರಿ, ತನ್ನ ಹರಿಯುವ ಪಾತ್ರವನ್ನೇ ಬದಲಿಸಿ ನೆಲವನ್ನು ಮರಳುಗಾಡು ಮಾಡಿದ ಸ್ಥಳ ಸಿಗುತ್ತದೆ. ಅದೇ ಮೈಸೂರು ಅರಸರ ಸಂತಾನಕ್ಕೆ ಸಂಬಂಧಪಟ್ಟಂತೆ ಅಲಮೇಲಮ್ಮ ʻಮಾಲಿಂಗಿ ಮಡುವಾಗಿ ತಲಕಾಡು ಮರಳಾಗಿ ಮೈಸೂರು ಅರಸರಿಗೆ ಮಕ್ಕಳಾಗದೇ ಇರಲಿʼ ಎಂದು ಶಾಪ ನೀಡಿದ್ದಳು ಎನ್ನಲಾದ ತಲಕಾಡು!   

ತಲಕಾಡಿನಿಂದ ಮುಂದೆ ಕಾವೇರಿ ಜೊತೆ ಸುವರ್ಣಾವತಿ ನದಿಯ ಸಂಗಮವಾಗುತ್ತೆ. ಅಲ್ಲಿಂದ ಪೂರ್ವಕ್ಕೆ ಹರಿಯುತ್ತ ಕೊಳ್ಳೆಗಾಲ ತಾಲೂಕಿನ ಸತ್ಯಗಾಲ ಅನ್ನೋ ಊರಿಗೆ ಹೋಗ್ತಾಳೆ. ಅಲ್ಲಿ ಮತ್ತೆ ಕಾವೇರಿ ಎರಡು ಕವಲಾಗಿ ಮಧ್ಯೆ ಒಂದು ದ್ವೀಪ ನಿರ್ಮಾಣವಾಗಿದೆ. ಅದೇ ಸುಪ್ರಸಿದ್ಧ ಶಿವನಸಮುದ್ರ. ಅಲ್ಲಿ ಮಧ್ಯದಲ್ಲಿ ರಂಗನಾಥ ಸ್ವಾಮಿ ದೇಗುಲವಿದೆ. ಇದು ಮಧ್ಯರಂಗ ಅಂತನೇ ಪ್ರಸಿದ್ಧಿ. ಮುಂದೆ, ಕಾವೇರಿ ಭವ್ಯ ಜಲಪಾತವಾಗಿ ಗಗನಚುಕ್ಕಿ ಭರಚುಕ್ಕಿಯಾಗಿ ಧುಮುಕುತ್ತಾಳೆ. ಅಲ್ಲೇ ಕೆಳಭಾಗದಲ್ಲಿ ಬ್ಲಫ್‌ ಎಂಬಲ್ಲಿ ಏಷ್ಯದಲ್ಲೇ ಪ್ರಪ್ರಥಮ ವಿದ್ಯುತ್‌ ಉತ್ಪಾದನಾ ಕೇಂದ್ರ ಕರುನಾಡ ಹೆಮ್ಮೆಯ ಕುರುಹಾಗಿ ಕಾಣಸಿಗುತ್ತೆ.

ವಿಚಿತ್ರ ನೋಡಿ, ಅಲ್ಲಿಂದ ಮುಂದೆ ನದಿಯ ಹರಿವಿನ ವೇಗ ಹೆಚ್ಚಾಗುತ್ತೆ. ಚಾಮರಾಜನಗರ ಜಿಲ್ಲೆಯಿಂದ ಉತ್ತರಕ್ಕೆ ಹರಿದು ರಾಮನಗರ ಜಿಲ್ಲೆಗೆ ಬರುತ್ತಾಳೆ. ಕನಕಪುರದ ಹತ್ತಿರ ಕಾವೇರಿ ಜೊತೆ ಒಂಭತ್ತನೇ ನದಿ ಅರ್ಕಾವತಿಯ  ಸಂಗಮವಾಗುತ್ತೆ. ಅಲ್ಲಿಂದ ಮುಂದೆ ಕರುನಾಡ ಪ್ರಸ್ಥಭೂಮಿಯಿಂದ ತಮಿಳುನಾಡಿನ ತಗ್ಗಿನ ಕಡೆ ಅತ್ಯಂತ ರಭಸವಾಗಿ ಹರಿತಾಳೆ. ನದಿಯ ರಭಸಕ್ಕೆ ಬಂಡೆಗಳಲ್ಲಿ ಊಹೆಗೂ ನಿಲುಕದಷ್ಟು ಆಳವಾದ ಕೊರಕಲು ನಿರ್ಮಾಣವಾಗಿದೆ. ಕಾವೇರಿ ಇಲ್ಲಿ ಎಷ್ಟು ಕಿರಿದಾಗಿದೆ ಅಂದ್ರೆ, ಒಂದು ಮೇಕೆ ಹುಲಿ ಬಾಯಿಂದ ತಪ್ಪಿಸಿಕೊಳ್ಳೋಕೆ ಈ ಕಡೆಯಿಂದ ಆ ಕಡೆ ಜಿಗಿದಿತ್ತಂತೆ. ಇದೇ ಸಧ್ಯಕ್ಕೆ ಆಣೆಕಟ್ಟೆ ನಿರ್ಮಾಣಕ್ಕೆ ನೀಲನಕ್ಷೆ ಹಾಕ್ತಿರೋ ಮೇಕೆದಾಟು. ಅಲ್ಲಿಂದ ಮುಂದೆ ನಲವತ್ತೈದು ಕಿಲೋಮೀಟರ್‌ ದೂರದಲ್ಲಿ ತಮಿಳುನಾಡಿನ ಗಡಿ ಬರುತ್ತೆ. ಅದೇ ಹೊಗೆನಕಲ್.‌ ರುದ್ರರಮಣೀಯ ಜಲಪಾತವಾಗಿ ಕಾವೇರಿ ಧುಮ್ಮಿಕ್ಕುವ ಪರಿಯೇ ಬೇರೆ. ನೋಡಿ ಕೃಷ್ಣೆ, ತುಂಗಭದ್ರೆಗಳಿಗೆ ಜಲಪಾತವೇ ಇಲ್ಲ. ಪಶ್ಚಿಮಘಟ್ಟದ ಶರಾವತಿ ಮುಂತಾದ ನದಿಗಳಿಂದ ಉಂಟಾಗಿದ್ದು ಒಂದೇ ಜಲಪಾತ. ಆದರೆ ಕಾವೇರಿಗೆ ಎರಡೆರಡು ಬೃಹತ್‌ ಜಲಪಾತಗಳು. ಇದು ಭೌಗೋಳಿಕ ವಿಸ್ಮಯವೇ ಸರಿ.

ಮಲೆನಾಡಿನಿಂದ ಬಯಲುಸೀಮೆಗೆ ಬಂದು ಮತ್ತೆ ಮಲೆನಾಡಿನಂಥ ಪ್ರದೇಶಕ್ಕೆ ಹರಿಯುವ ಏಕೈಕ ನದಿಯೂ ಕಾವೇರಿಯೇ. ಯಾಕಂದ್ರೆ ಹೊಗೆನಕಲ್‌ ನಂತರ ಬರುವ ಚಿಣ್ಣಾರ್‌ ಮುಂತಾದ ಊರುಗಳು ಬೆಟ್ಟಗುಡ್ಡ ಕಾನನಗಳ ಊರು. ಅಲ್ಲಿ ಸನತ್ಕುಮಾರ ನದಿ ಕಾವೇರಿ ಜೊತೆ ಬಂದು ಸೇರುತ್ತೆ. ಅಲ್ಲಿಂದ ಧರ್ಮಪುರಿ ಮೂಲಕ ಸೇಲಂ ಜಿಲ್ಲೆಯ ಮೆಟ್ಟೂರು ತಲುಪುತ್ತಾಳೆ. ಇಲ್ಲಿ ಕಾವೇರಿಗೆ ಇನ್ನೊಂದು ಬೃಹತ್‌ ಆಣೆಕಟ್ಟೆ ನಿರ್ಮಿಸಲಾಗಿದೆ. ಕನ್ನಂಬಾಡಿ ಕಟ್ಟೆಗಿಂತ ತುಂಬ ದೊಡ್ಡದು. ಅಲ್ಲಿಂದ ಕೊಯಮತ್ತೂರು ಜಿಲ್ಲೆ ಪ್ರವೇಶಿಸ್ತಾಳೆ. ಸರ್ಭಾಂಗ ಹಾಗೂ ಭವಾನಿ ನದಿಗಳು ಕಾವೇರಿನ ಸೇರ್ತಾವೆ. ಭವಾನಿ ಕ್ಷೇತ್ರದಲ್ಲಿ ಅಮೃತ ಅನ್ನೋ ನದಿ ಗುಪ್ತಗಾಮಿನಿಯಾಗಿ ಸೇರಿ ಮೂರನೆ ತ್ರಿವೇಣಿ ಸಂಗಮವಾಗಿದೆ. ಮುಂದೆ ಪಶ್ಚಿಮ ದಿಕ್ಕಿಗೆ ಹರಿದು ಈರೋಡು, ಕೂಡುಮುಡಿ, ಕರೂರು, ನೆರೂರು ದಾಟಿ ಇನ್ನೊಂದು ತಿರಮಕೂಡಲ್‌ ಪ್ರವೇಶಿಸ್ತಾಳೆ. ಅಲ್ಲಿ ಅಮರಾವತಿ ನದಿ ಕಾವೇರಿ ಜೊತೆ ಸೇರ್ತಾಳೆ. ಅಲ್ಲಿಂದ ತಿರುಚಿರಾಪಳ್ಳಿ, ಕುಳಿತಳೈ, ತಿರುಪ್ಪರೈತುರೈಗೆ ಬರ್ತಾಳೆ. ಇಲ್ಲಿ ಕಾವೇರಿ ಎಷ್ಟು ಅಗಲವಾಗಿದ್ದಾಳೆ ಅಂದ್ರೆ ಕಿಲೋಮೀಟರ್‌ಗಟ್ಟಲೆ ವಿಶಾಲ. ಅದ್ಕೆ ಅಖಂಡ ಕಾವೇರಿ ಅಂತ ಕರಿತಾರೆ. ಅಲ್ಲಿಂದ ಮುಂದೆ ಮುಕ್ಕುಂ ಎಂಬ ಊರಲ್ಲಿ ಕಾವೇರಿ ಎರಡು ಕವಲಾಗ್ತಾಳೆ. ಒಂದು ಕವಲು ಕಾವೇರಿ, ಇನ್ನೊಂದು ಕೊಲ್ಲಡಂ. ಮಧ್ಯೆ ದ್ವೀಪ. ಇದೇ ಅಂತ್ಯರಂಗ ಅಂತ ಪ್ರಸಿದ್ಧವಾಗಿರೋ ಶ್ರೀರಂಗಂ. ಅಲ್ಲಿಂದ ತಿರುಚಿರಾಪಳ್ಳಿ, ಮುಂದೆ ಕಾವೇರಿ-ಕೊಲ್ಲಡಂ ಪುನಃ ಸಂಗಮವಾದ ನಂತರ ಇನ್ನೊಂದು ದೊಡ್ಡ ಆಣೆಕಟ್ಟೆ ಇದೆ. ಅದೇ ಇತಿಹಾಸ ಪ್ರಸಿದ್ಧವಾದ ಕಲ್ಲಣೆ ಆಣೆಕಟ್ಟು. ಗ್ರಾಂಡ್‌ ಆಣೆಕಟ್ಟೆ ಅಂತ್ಲೇ ಅದಕ್ಕೆ ಉಪಮೆ. ಅಲ್ಲಿಂದ ಮತ್ತೆ ಕಾವೇರಿ ಎರಡು ಕವಲಾಗ್ತಾಳೆ. ಒಂದು ಕವಲಿಗೆ ಮತ್ತೆ ಕೊಲ್ಲಡಂ ಅಂತಲೇ ಹೆಸರು. ಅದು ಮತ್ತೆ ಕಾವೇರಿ ಜೊತೆ ಸೇರೋದೇ ಇಲ್ಲ. ತಂಜಾವೂರು ಜಿಲ್ಲೆ ಮೂಲಕ ಸಾಗಿ ಚಿಂಗಲ್‌ಪೆಟ್‌ ಬಳಿ ದೇವಿಕೋಟೆ ಅನ್ನೋ ಜಾಗದಲ್ಲಿ ಬಂಗಾಳಕೊಲ್ಲಿ ಸೇರುತ್ತೆ.

ಕಲ್ಲಣೆಯಿಂದ ಹೊರಟ ಕಾವೇರಿ ಮತ್ತೆ ಕವಲೊಡಿತಾಳೆ. ಇನ್ನೊಂದು ಕವಲಿನ ಹೆಸರೇ ವೆಣ್ಣಾರು. ಈ ಕವಲುಗಳೂ ಸಹ ತಂಜಾವೂರು ಜಿಲ್ಲೆ ಪ್ರವೇಶಿಸ್ತವೆ. ಈ ಜಿಲ್ಲೆಲಿ ಕಾವೇರಿ ಹೆಣ್ಣಾರು, ವೆಟ್ಟಾರು, ಕೊಡಮುರುಟಿ, ಅರಸಲಾರು ಹೀಗೆ ಅನೇಕ ಕವಲಾಗ್ತಾಳೆ. ಒಂದು ಮುಖ್ಯ ಕವಲಿಗೆ ಮಾತ್ರ ಕಾವೇರಿ ಅನ್ನೋ ಹೆಸರು ಮುಂದುವರಿಯುತ್ತೆ. ಈ ಕವಲುಗಳು ನೈಸರ್ಗಿಕ ಕಾಲುವೆಗಳ ಥರ. ಹಾಗಾಗೇ ತಂಜಾವೂರು ತಮಿಳುನಾಡಿನ ಭತ್ತದ ಕಣಜ. ಕಾವೇರಿ ಎಂದೂ ಬತ್ತದ ಕಣಜ. ಮುಂದೆ ಸಂಗೀತ ಪಿತಾಮಹ ತ್ಯಾಗರಾಜರ ಸಮಾಧಿಯಿರುವ ತಿರುವೈಯಾರ್‌, ಈಶನ್‌ ಗುಡಿ, ಗಣಪತಿ ಅಗ್ರಹಾರ, ಗಭಿಸ್ಥಲಮ್‌, ತ್ಯಾಗಸಮುದ್ರಮ್‌, ಗಂಗಾಧರಪುರಮ್‌, ಸ್ವಾಮಿಮಲೈ ದಾಟಿ ಪ್ರಸಿದ್ಧ ಯಾತ್ರಾಸ್ಥಳ ಕುಂಭಕೋಣಂ ಪ್ರವೇಶಿಸ್ತಾಳೆ. ಅಲ್ಲಿಂದ ಮಾಯೂರಂ, ತಿರುವಡೈಮರತ್ತೂರು, ಗೋವಿಂದಪುರಂ ದಾಟಿ ಛಾಯಾವನಂ, ಪಲ್ಲವನೀಶಮ್‌ ದಾಟಿ ಬಂಗಾಳಕೊಲ್ಲಿಯಲ್ಲಿ ಸಮುದ್ರ ಸೇರಲು ರಭಸವಾಗಿ ಹರಿಯುತ್ತಾಳೆ. ಅಂತಿಮವಾಗಿ ಕಾವೇರಿ ಪೂಂಪಟ್ಟಣಂ ಅಥವಾ ಪೂಂಪುಹಾರ್‌ ಅನ್ನೋ ಪ್ರಾಚೀನ ಚೋಳರ ರಾಜಧಾನಿ ಹಾಗೂ ಬಂದರು ನಗರದಲ್ಲಿ ಬಂಗಾಳಕೊಲ್ಲಿಯನ್ನು ಸೇರ್ತಾಳೆ. ಇಲ್ಲಿಗೆ ಎರಡು ಬೃಹತ್‌ ಜಲಪಾತಗಳು, ಮೂರು ಬೃಹತ್‌ ಆಣೆಕಟ್ಟುಗಳು, ಮೈತುಂಬಾ ವಿವಾದಗಳು, ಕರ್ನಾಟಕದ ಮಲೆನಾಡು-ಬಯಲುಸೀಮೆ- ತಮಿಳುನಾಡಿನ ಮಲೆನಾಡು, ಬಯಲುನಾಡು, ಪೂರ್ವ ಕರಾವಳಿಯನ್ನ ಸುತ್ತಿದ  ಏಳುನೂರ ಅರುವತ್ತೈದು ಕಿಲೋಮೀಟರ್‌ಗಳ ಕಾವೇರಿ ಮಹಾಯಾತ್ರೆ ಮುಕ್ತಾಯವಾಗುತ್ತೆ.

ಈ ಅಪರೂಪದ ವಿವರಗಳಿಗೆ ವೀಕ್ಷಿಸಿ ದೃಶ್ಯಕಾವ್ಯಕನ್ನಡ ಯುಟ್ಯೂಬ್‌ ವಾಹಿನಿ.

Share6Tweet4SendShareShare
Next Post
ಮೈಸೂರು ದಸರಾ; ಅರಮನೆ ಆಚರಣೆ ಅಂತರಂಗ!

ಮೈಸೂರು ದಸರಾ; ಅರಮನೆ ಆಚರಣೆ ಅಂತರಂಗ!

Leave a Reply Cancel reply

Your email address will not be published. Required fields are marked *

Recommended

ಅಂತಿಮ ವಿದಾಯದ ಕಾಫಿ!

ಅಂತಿಮ ವಿದಾಯದ ಕಾಫಿ!

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಕಾಶಿಯ ಡೋಮ್‌ ಜನರು; ಅಂತ್ಯ ಸಂಸ್ಕಾರವೇ ಬದುಕು

ತಾಯ್ನೆಲದಲ್ಲೇ ನಿರಾಶ್ರಿತರಾದ ಕಾಶ್ಮೀರಿ ಪಂಡಿತರ ಕಥೆ-ವ್ಯಥೆ!

ತಾಯ್ನೆಲದಲ್ಲೇ ನಿರಾಶ್ರಿತರಾದ ಕಾಶ್ಮೀರಿ ಪಂಡಿತರ ಕಥೆ-ವ್ಯಥೆ!

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಹೂ ಮತ್ತು ಹುಡುಗಿ

ಹೂ ಮತ್ತು ಹುಡುಗಿ

ಕಚ್ಚುವ ನಾಯಿಗೆ ಬಿರಿಯಾನಿ, ಹಾಲು ಕೊಡುವ ದನಗಳಿಗೆ ಹುಲ್ಲಿಲ್ಲ!

ಕಚ್ಚುವ ನಾಯಿಗೆ ಬಿರಿಯಾನಿ, ಹಾಲು ಕೊಡುವ ದನಗಳಿಗೆ ಹುಲ್ಲಿಲ್ಲ!

ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು

ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು

Translate »
No Result
View All Result
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ

© 2026 JNews - Premium WordPress news & magazine theme by Jegtheme.