ಕಾಡಿನಲ್ಲಿ ದನಕರು ಮೇಯುವುದನ್ನು ತಡೆಯಲು ಅರಣ್ಯ ಸಚಿವರು ನೀಡಿದ ನಿರ್ದೇಶನದ ಬಗ್ಗೆ ಚರ್ಚೆ ನಡೆದಿದೆ. ಪತ್ರದ ಹಿಂದೆ ಹುಲಿಗಳ ಸಾವು ಹಾಗೂ ಆ ಬಳಿಕ ಹೊರಬಿದ್ದ ಸಗಣಿ ಮಾಫಿಯಾ ಎಂಬ ಸುದ್ದಿ ಕಾರಣವೆಂದು ತಿಳಿಯುತ್ತದೆ. ಅರಣ್ಯ ಬೆಳವಣಿಗೆ ಮೇಲೆ ದನಕರು ಮೇವಿನಿಂದಾಗುವ ಪರಿಣಾಮಗಳ ಕುರಿತು ಹೇಳಿದ್ದು ಗಮನಿಸಿದೆ. ಇದಲ್ಲದೇ ಸಾಂಕ್ರಾಮಿಕ ಕಾಯಿಲೆಗಳ ಕುರಿತು ಪ್ರಸ್ತಾಪ ಇದೆ. ಇದೆಲ್ಲಾ ಮೇಲ್ನೋಟಕ್ಕೆ ಸರಿಯೇ ಇರಬಹುದು. ಆದರೆ ನಮ್ಮ ಕಾಡಿನ ಹುಲಿಗಳು ದನ ಕರು ತಿಂದೇ ತಮ್ಮ ಹಸಿವು ನೀಗಿಸುವ ಸ್ಥಿತಿ ಕೂಡ ಇದೆ. ವರದಿಯಾದ ಪ್ರಕರಣ ಕಡಿಮೆ. ಕಾಡು ಬಡವಾಗಿದ್ದಕ್ಕೆ ಕಾರಣಗಳು ಹಲವಿದೆ. ಲಂಟಾನ ಕಳೆ ಕಾಡಿನ ಎಷ್ಟು ಮೇವು ನುಂಗಿದೆ? ಅದರ ನಿಯಂತ್ರಣ ಮಾರ್ಗದಲ್ಲಿ ಯಾರು ಎಷ್ಟು ಹಣ ಮೇಯ್ದಿರಬಹುದೆಂದು ಯೋಚಿಸಬೇಕು. ಅದರಲ್ಲಿಯೂ ಹಳೇ ತೇಗದ ನೆಡುತೋಪಿನ ಕೆಳಗಡೆ ಹುಲ್ಲು ಹುಟ್ಟುವುದಿಲ್ಲವೆಂಬುದು ಗೊತ್ತಿರಬಹುದು. ಒಂದು ಹುಲಿ ಬದುಕಲು ವರ್ಷಕ್ಕೆ 50-55ಜಿಂಕೆ ಅಥವಾ ಜಿಂಕೆ ಗಾತ್ರದ ಪ್ರಾಣಿಗಳು ಬೇಕು. ಅಂಥ ಪ್ರದೇಶದಲ್ಲಿ ಕಾಡಿನಲ್ಲಿ 275-280 ಜಿಂಕೆಗಳು ಇದ್ದರೆ ಹುಲಿಗೆ ಅಗತ್ಯವಾದ ವಾರ್ಷಿಕ ಬೇಟೆ ಸಿಗಬಹುದು. ಆದರೆ ಕಾಡಿನಲ್ಲಿ ದನಕರುಗಳಿಗೆ ಮಾತ್ರವಲ್ಲ ಈ ಜಿಂಕೆಯಂತಹ ಸಸ್ಯಾಹಾರಿ ಜೀವಿಗಳಿಗೂ ಹುಲ್ಲು ಬೇಕು. ಕಾಡಲ್ಲಿ ಜಾಸ್ತಿ ಹುಲ್ಲು ಬೆಳೆದರೆ ಬೇಸಿಗೆ ಬೆಂಕಿ ನಿಯಂತ್ರಣ ಕಷ್ಟವೆಂಬ ಮನಸ್ಥಿತಿ ಕೂಡ ಅರಣ್ಯ ಇಲಾಖೆಯಲ್ಲಿ ಇದೆ. ಸಮಸ್ಯೆ ಮೇಲ್ನೋಟಕ್ಕೆ ಕಾಣುವಷ್ಟು ಸರಳವಿಲ್ಲ.
1998-2001 ರ ಸಮಯದಲ್ಲಿ ನಮ್ಮ ರಾಜ್ಯದ ವಿವಿಧ ಪ್ರದೇಶದಲ್ಲಿ ಹಳ್ಳಿಗರ ಪ್ರಯತ್ನ ದಿಂದ ಅರಣ್ಯ ಬೆಳೆಸಿದ 40 ಕ್ಕೂ ಹೆಚ್ಚು ಸ್ಥಳ ಅಧ್ಯಯನ ಮಾಡಿದ್ದೇನೆ. 300 ಮಿಲಿ ಮೀಟರ್ ಮಳೆ ಸುರಿಯುವ ಪ್ರದೇಶದಿಂದ ಶುರುವಾಗಿ 4000 ಮಿಲಿ ಮೀಟರ್ ಮಳೆ ಸುರಿಯುವಲ್ಲಿ ಕೂಡ ಸಸಿ ನಾಟಿ ಮಾಡದೇ ಜನರೇ ಅರಣ್ಯ ಬೆಳೆಸಿದ್ದಾರೆ. ಇಲ್ಲಿ ಎಲ್ಲಿಯೂ ದನಕರು ಮೇವು ತಡೆದು ಅರಣ್ಯ ಬೆಳೆಸಿಲ್ಲ! ಆದರೆ ದನಕಾಯುವವರು ಕತ್ತಿ, ಕೊಡಲಿ ತರಬಾರದು, ಕಾಡಿಗೆ ಬೆಂಕಿ ಹಾಕಬಾರದು, ದನಕರು ಕಾಡಲ್ಲಿ ಹಾಕಿದ ಸಗಣಿ ಸಂಗ್ರಹ ಮಾಡಬಾರದು ಎಂದು ನಿಯಮ ಮಾಡಿದ್ದರು. ಒಮ್ಮೆ ನಿಯಮ ಮೀರಿ ತಪ್ಪು ಮಾಡಿದರೆ ಗ್ರಾಮ ನಿಯಮದಂತೆ ಶಿಕ್ಷೆಯಿತ್ತು. ಈ ಅರಣ್ಯ ಇಲಾಖೆ ಬೆಳೆಸುವ ನೆಡುತೋಪಿಗಿಂತ ಕಾಡು ಚೆನ್ನಾಗಿತ್ತು.
ಕಾಡಲ್ಲಿ ದನಕರು ಹಾಕಿದ್ದ ಸಗಣಿ ಮೂಲಕ ಕೌಲು, ಕಾರೆ, ಕಣಗಿಲು ಮುಂತಾದ ಸಸ್ಯ ಹುಟ್ಟುತ್ತವೆ. ದನಕರು ಓಡಾಡುವಾಗ ಕಾಲ್ಗೊರಸಿನ ಭಾರ ಅಣಲೆ ಕಾಯಿ ಮೇಲೆ ಬಿದ್ದಾಗ ಮಾತ್ರ ಅದರ ಸಸಿ ಕಾಡಲ್ಲಿ ಜನಿಸುತ್ತದೆ. ನಾನು ಅರಣ್ಯ ಸ್ಥಳೀಯ ಜ್ಞಾನ ಆಧರಿಸಿ ಪರಿಸರ ಪಾಠವನ್ನು 25 ವರ್ಷಗಳಿಂದ ಮಾಡ್ತಾ ಇದ್ದೇನೆ. ಅರಣ್ಯ ಸಸ್ಯ ಜ್ಞಾನ ಹೆಚ್ಚು ದೊರೆಯುವುದು ಇಲಾಖೆ ಅಧಿಕಾರಿಗಳಿಗಿಂತ ದನ ಕಾಯುವವರಿಂದ ಎಂಬುದು ಮುಖ್ಯ. ನಾನೊಮ್ಮೆ ಕಾಡು ಹುಲ್ಲಿನ ಹೆಸರು ಸಂಗ್ರಹ ಮಾಡಿದ್ದಾಗ 30 ಕ್ಕೂ ಹುಲ್ಲಿನ ಹೆಸರನ್ನು ಮಲೆನಾಡಿನ ಅಜ್ಜನೊಬ್ಬ ಹೇಳಿದ್ದ! ಅವುಗಳಲ್ಲಿ ದನಕರು ಎಲ್ಲ ಹುಲ್ಲು ತಿನ್ನುವುದಿಲ್ಲ.
ಪಶ್ಚಿಮ ಘಟ್ಟದ ಗುಡ್ಡಗಾಡು ಅಭಿವೃದ್ಧಿಗೆ ಸಂಭಂದಿಸಿದಂತೆ ಡಾ. ಮಾಧವ ಗಾಡ್ಗಿಳ್ ನೇತೃತ್ವದಲ್ಲಿ 1987ರಲ್ಲಿ ಮೇವಿನ ಕುರಿತು ನಡೆದ ಒಂದು ಅಧ್ಯಯನ ಗಮನಿಸಬೇಕು. ಪ್ರತಿಶತ 80ರಷ್ಟು ಅರಣ್ಯ ಭೂಮಿ ಹೊಂದಿದ ಉತ್ತರ ಕನ್ನಡ ಜಿಲ್ಲೆಯಲ್ಲಿ 5 ಲಕ್ಷ ದನಕರುಗಳಿದ್ದು ಕೃಷಿ ಮೇವು ಎರಡು ತಿಂಗಳಿಗೆ ಮಾತ್ರ ಸಾಕು. ಇಷ್ಟು ಕಡಿಮೆ ಮೇವನ್ನು ಸ್ವಲ್ಪ ಸ್ವಲ್ಪ ಬಳಸಿ ಕೃಷಿಕರು 7 ತಿಂಗಳು ಬಳಸುವರು! ಮಳೆಗಾಲ ಕಾಡಿನ ಮೇವು ಬಳಸುವರು. ಹೀಗಾಗಿ ಇಲ್ಲಿನ 7 ಲಕ್ಷ ಹೇ ಕ್ಚ್ ರ್ ಅರಣ್ಯ ವರ್ಷಕ್ಕೆ 7.74 ಲಕ್ಷ ಟನ್ ಮೇವು ನೀಡಬೇಕು. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಒಂದು ಹೆಕ್ಚ್ಟರ್ ಭೂಮಿಯಲ್ಲಿ 2-8 ಟನ್ ನೈಸರ್ಗಿಕ ಹುಲ್ಲು ಬೆಳೆಯಬಹುದು. ಬಯಲು, ಮರ ದಟ್ಟನೆ ಕಡಿಮೆ ಇರುವ ಪ್ರದೇಶದಲ್ಲಿ ಹುಲ್ಲು ಬೆಳೆಯುತ್ತದೆ. ಇಂಥ ಗೋಮಾಳ, ಅರಣ್ಯ ಪ್ರದೇಶಗಳು 1985ರ ನಂತರ ಅಕೇಸಿಯ ನೆಡುತೋಪು ಆಗಿವೆ. ಶಿವಮೊಗ್ಗ ಜಿಲ್ಲೆ ಸಾಗರದ ಆಲಳ್ಳಿಯಲ್ಲಿ 438 ಎಕರೆ ಗೋಮಾಳ ಇತ್ತು, ನಾನು 1998ರಲ್ಲಿ ಮಾಹಿತಿ ಸಂಗ್ರಹ ಮಾಡಿದಾಗ ಬಹುತೇಕ ಪ್ರದೇಶ ಅಕೇಶಿಯ ನೆಡುತೋಪು ಆಗಿದೆ, ಇದು ಪರಿಸ್ಥಿತಿ.
ಶಿರಸಿ ಚಿಪಗಿ ಚೆಕ್ ಪೋಸ್ಟ್ ನ ಪೊಲೀಸರ ಸಹಕಾರ ಪಡೆದು 1997ರಲ್ಲಿ ಬಯಲು ಸೀಮೆಯಿಂದ ಈ ಪ್ರದೇಶಕ್ಕೆ ಬರುವ ಭತ್ತದ ಹುಲ್ಲಿನ ಮಾಹಿತಿ ಸಂಗ್ರಹ ಮಾಡಿದೆ. ಬೇಸಿಗೆ ಆರೇಳು ತಿಂಗಳು ಪ್ರತಿನಿತ್ಯ 15 ಲಾರಿ, 18 ಟ್ರಾಕ್ಟರ ಹುಲ್ಲು ಸಾಗಿಸುವ ಕಾರ್ಯ ಮಾಡುತ್ತಿದ್ದವು.ಒಟ್ಟೂ 7680 ವಾಹನಗಳ ಮೂಲಕ 2 ಕೋಟಿ 11 ಲಕ್ಷ ರೂಪಾಯಿ ಭತ್ತದ ಹುಲ್ಲು ಒಂದು ರಸ್ತೆ ಮೂಲಕ ಆಗ ಬರ್ತಾ ಇತ್ತು.ಮಲೆನಾಡಿನ ಹಸು ಹಾಲು ಕೊಡಲು ಬಯಲು ಸೀಮೆ ಹುಲ್ಲು ಬರಬೇಕು. ಅಕೇಶಿಯ ನೆಡುತೋಪು ನಿರ್ಮಾಣ, ಭತ್ತದ ಗದ್ದೆ ಅಡಿಕೆ ತೋಟವಾದ ಕಾರಣ ಇಂಥ ಪರಿಸ್ಥಿತಿ ಬಂದಿತ್ತು. ಈಗಂತೂ ಕಾಡಿನಲ್ಲಿ ಹುಲ್ಲು ಬೆಳೆಯುತ್ತಿಲ್ಲ. ಹುಲ್ಲು ತಿನ್ನುವ ಜಿಂಕೆ, ಕಾಡೆಮ್ಮೆ, ಕಡವೆ ಮುಂತಾದ ವನ್ಯ ಸಂಕುಲ ಆಹಾರ ಕೊರತೆಯಿಂದ ಕೃಷಿ ಭೂಮಿಗೆ ನಿರಂತರ ಹಾನಿ ಮಾಡುತ್ತಿವೆ. ಹೀಗಾಗಿ ವನ್ಯ ಜೀವಿ ಸಂಘರ್ಷ ಕೃಷಿ ನೆಲೆಗೆ ವಿಸ್ತರಿಸಿದೆ.ಇದನ್ನೇ ನಮ್ಮ ರೈತರು ನಿಮ್ಮ ಪ್ರಾಣಿ ನೀವು ಕಾಡಿನಲ್ಲಿ ಸಾಕಿ, ನಮ್ಮ ದನಕರು ಕಾಡಿಗೆ ಬಿಡೋಲ್ಲ ಎಂದು ಹೇಳಿದ್ದಾರೆ. 1992ರ ಹೊತ್ತಿಗೆ ಬ್ರಿಟನ್ ನೆರವಿನ ಪಶ್ಚಿಮ ಘಟ್ಟ ಅಭಿವೃದ್ಧಿ ಯೋಜನೆ ಬಂದಾಗ ಗ್ರಾಮ ಅರಣ್ಯ ಸಮಿತಿ ರಚನೆ ಯಾಯಿತು. ಆಗ ಅಕೇಶಿಯ ನೆಡುತೋಪಿನಿಂದ ಹುಲ್ಲು ನಾಶವಾಗುವುದು ಗೊತ್ತಾಗಿ ಕಾಡಲ್ಲಿ ನೀರಾವರಿ ಮೂಲಕ ದನಕರುಗಳಿಗೆ ಮೇವು ಬೆಳೆಸುವ ಯೋಜನೆ ಕೂಡ ಕರ್ನಾಟಕ ಅರಣ್ಯ ಇಲಾಖೆ ಮಾಡಿತ್ತು! ಅದೆಲ್ಲಾ ಕಾಗದ ಪತ್ರದಲ್ಲಿ ಮಾತ್ರ ಇದೆ.ಮೇವಿನ ಸಮಸ್ಯೆ ಉಳಿದಿದೆ.
ಕಾಡಿಗೆ ದನಕರು ಹೋಗುವುದು ತಡೆಯುವ ಮುನ್ನ ನಿಜವಾದ ಸಮಸ್ಯೆ ಯಾವುದು ಎಂದು ನೋಡಬೇಕು. ಸಚಿವರ ಕೆಲವು ನಿರ್ಧಾರಗಳು ಭವಿಷ್ಯದ ಅರಣ್ಯ ಅಭಿವೃದ್ಧಿಗೆ ಅಘಾತ ಹುಟ್ಟಿಸುವಂತಿದೆ. ರಾಜ್ಯದ ಪ್ರಮುಖ ನದಿ ಮೂಲವಾದ ಪಶ್ಚಿಮ ಘಟ್ಟ ಕುರಿತು ಜ್ಞಾನದ ಕೊರತೆಯೋ ಏನೋ ಅರಣ್ಯ ಸಸ್ಯಾಭಿವೃದ್ಧಿ ವಿಚಾರದಲ್ಲಿ ಈ ವರ್ಷ ಬಹು ದೊಡ್ಡ ತಪ್ಪಾಗಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸಸಿ ನೆಡುವ ಕಾರ್ಯ ನಿರಂತರ ಬೇಕು, ಸ್ಥಳೀಯ ಸಸಿ ನೆಡಬೇಕು. ಕೇವಲ ಶೇಕಡಾ 10ಕ್ಕಿಂತ ಅರಣ್ಯ ದಟ್ಟನೆ ಕಡಿಮೆಯಿರುವ ಪ್ರದೇಶದಲ್ಲಿ ಮಾತ್ರ ಸಸಿ ನೆಡುವ ನಿರ್ಧಾರ ಮಾಡಿದ್ದು ಅರಣ್ಯ ಕಾರ್ಯ ಯೋಜನೆಯ ಕುರಿತು ಸ್ವತಃ ಸಚಿವರಲ್ಲಿರುವ ಅಜ್ಞಾನಕ್ಕೆ ಸಾಕ್ಷಿ.
1847 ರಲ್ಲಿ ಆರಂಭವಾದ ಅರಣ್ಯ ಇಲಾಖೆ ಕಳೆದ 178 ವರ್ಷಗಳಲ್ಲಿ ಅರಣ್ಯ ಸಂವರ್ಧನೆಯ ಅನುಭವಗಳಿಂದ ಪಾಠ ಕಲಿಯುವ ಪ್ರಯತ್ನಕ್ಕಿಂತ ಏನೋ ತೋಚಿದಂತೆ ಪ್ರಯೋಗಕ್ಕೆ ಎಸೆಯುವ ಆಟ ಆಡುತ್ತಿದೆ. ಆದಾಯಕ್ಕಾಗಿ ಅರಣ್ಯ ಎಂಬ ಹಳೇ ನೀತಿ ಸಚಿವರಿಗೆ ಯಾಕೋ ಈಗ ಪ್ರೀತಿ. ಸರಕಾರಿ ನಾಟ ಡಿಪೋಗಳಲ್ಲಿ ವರ್ಷಕ್ಕೆ ಎರಡು ಮೂರು ಸಾರಿ ಲೀಲಾವು ಪ್ರಕ್ರಿಯೆ ಬ್ರಿಟಿಷರ ಕಾಲದಿಂದ ಇದೆ. ಆದರೆ ಈಗ ಇಲಾಖೆ ಆದಾಯ ಹೆಚ್ಚು ಮಾಡಲು ಪ್ರತೀ ತಿಂಗಳು ಲೀಲಾವು ಮಾಡುವ ಪ್ರಸ್ತಾಪ ಮಾಡಿದ್ದು ವಿಚಿತ್ರ. ಮರ ಕಡಿದ ಪ್ರದೇಶ ದಲ್ಲಿ ಸಸಿ ನೆಡುವ ಯೋಜನೆ ಇಲ್ಲದ್ದು ಕೇಳಿದರೆ ಇಲಾಖೆ ದುಸ್ಥಿತಿ ಎಲ್ಲಿಗೆ ಮುಟ್ಟುತ್ತದೋ ಗೊತ್ತಿಲ್ಲ. ಶತಮಾನಗಳಿಂದ ಅದೇ ಊರಲ್ಲಿ ಕೃಷಿ ಮಾಡ್ತಾ ಬದುಕಿರುವ ಕೃಷಿಕರು ವನ್ಯಜೀವಿ ಹಾನಿಯಿಂದ ಕೃಷಿ ನಷ್ಟವಾಗಿ ಊರು ಬಿಡುವ ಹಂತ ತಲುಪಿದ್ದಾರೆ. ಆದರೆ ಅದೇ ಪ್ರದೇಶಕ್ಕೆ ಎರಡು ವರ್ಷ ಕೆಲಸ ಮಾಡಲು ವರ್ಗವಾಗಿ ಬರಲು ವಲಯ ಅರಣ್ಯಧಿಕಾರಿಗಳು 30-35 ಲಕ್ಷ ತೆತ್ತು ಬರುತ್ತಾರೆ, ಇಂಥವರು ಇನ್ನಷ್ಟು ಹಣ ಹೊಡೆಯಲು ಪ್ರಯತ್ನಿಸುತ್ತ ಕಾಡು ಮರೆಯುತ್ತಾರೆ.
ಸಚಿವರ ದನಕರು ಮೇವಿನ ಸುತ್ತೋಲೆ ಚರ್ಚೆಗೆ ಒಳಗಾಗುತ್ತಿದೆ. 1929-31ರ ಕಾಲದಲ್ಲಿ ದನ ಕರು ಬಾಲಕ್ಕೆ ಒಂದು ರೂಪಾಯಿ ಹುಲ್ಲು ಬನ್ನಿ ಕೊಟ್ಟು ಮೇವಿಗೆ ಬಿಡುವ ಪದ್ಧತಿ ಈ ರಾಜ್ಯದಲ್ಲಿ ಇತ್ತು! ಆಗ ಚಳುವಳಿ ತೀವ್ರವಾಗಿತ್ತು. ಗಮನಿಸಿ, ರಾಜ್ಯದ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳಲ್ಲಿ ಎಷ್ಟು ಜನಕ್ಕೆ ಕಾಡಿನ ಪ್ರಾಯೋಗಿಕ ಜ್ಞಾನ ಇದೆ? ಸ್ವಾಮಿ, ದನಕರು ಕಾಡಿಗೆ ಹೋಗುವುದು ಬೇಡ ಎನ್ನುವ ನೀವು ಈ ಅಧಿಕಾರಿಗಳಿಗೆ ವಿಧಾನ ಸೌಧ ಅಲ್ಲ, ಕಾಲ್ನಡಿಗೆಯಲ್ಲಿ ಕಾಡು ಸುತ್ತಲು ಕಲಿಸುವುದು ಯಾವಾಗ ಹೇಳಿ?
- ಶಿವಾನಂದ ಕಳವೆ









