ದೃಶ್ಯಕಾವ್ಯ
Advertisement
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
No Result
View All Result
 ದೃಶ್ಯಕಾವ್ಯ
No Result
View All Result
Home ಕಥೆಕಟ್ಟೆ

ಅಂತಿಮ ವಿದಾಯದ ಕಾಫಿ!

ಅಂತಿಮ ವಿದಾಯದ ಕಾಫಿ!

 

‘ಅವರು ಇಂದು ಬರಬೇಕಿತ್ತು’ಎಂದು ಕಿಟಕಿಯ ಸರಳುಗಳ ನಡುವೆ ಬರುವ ದಾರಿಯನ್ನು ಇಣುಕಿ ನೋಡುತ್ತಾ ಒಲೆಯ ಮೇಲೆ ಕುದಿಯುತ್ತಿರುವ ಬಿಸಿ ಹಾಲಿಗೆ ಕಾಫಿ ಪುಡಿಯನ್ನು ಉದುರಿಸಿದ್ದಳು.ಕಾಫಿಯ ಘಮ ಮನೆಯೆಲ್ಲ ಚದುರಿತ್ತು..ಎರಡು ಲೋಟದೊಳಗೆ ಕಾಫಿ ಸೋಸಿ ಒಂದಿಷ್ಟನ್ನು ಅವನಿಗಾಗಿ ಕಾಯ್ದಿರಿಸಿ ಕಾಫಿಯನ್ನು ಚೆನ್ನ,ಗಿರಿಜೆಯ ಎದುರು ಹಿಡಿಯುತ್ತಾ… “ನೀವು ಕಾಫಿ ಕುಡಿದು ಮನೆಗೆ ಹೋಗಿಬಿಡಿ.. ಇವತ್ತು ಹೇಗೋ ಅವರು ಬರುತ್ತಾರಲ್ಲ.. ಒಬ್ಬಳೇ ಇರುವುದಿಲ್ಲ.. ನೀವು ನಾಡಿದ್ದು ಬಂದರೆ ಸಾಕು “ಎಂದು ಮುಗುಳು ನಕ್ಕು ಮತ್ತೆ ಗಡಿಯಾರದತ್ತ ನೋಡಿದ್ದಳು.ಚೆನ್ನ ಗಿರಿಜೆಗೆ ಈ ಪರಿ ಬಹಳ ಹೊಸದು..ಮದುವೆಯಾಗಿ ಆರು ತಿಂಗಳು ಸರಿದಿದ್ದಷ್ಟೇ. ಗಡಿಯ ಯುದ್ಧಕ್ಕೆ ಎಂದು ತೆರಳಿದ ಯೋಧನೊಬ್ಬನ ಮಡದಿ ಅಲ್ಲವೇ?ಅಷ್ಟು ಸಡಗರ ಇಲ್ಲದಿದ್ದರೆ ಹೇಗೆ? … ಕಾಲಿಗೆ ಚಕ್ರ ಕಟ್ಟಿದಂತೆ ಮನೆ ತುಂಬಾ ಓಡಾಡಿಕೊಂಡು ಏನೇನೋ ಹಾಡು ಗುನುಗುತ್ತಾ ತನ್ನ ಸಂಭ್ರಮಕ್ಕೆ ‘ಜಾನಕಿ’ರೆಕ್ಕೆ ಕಟ್ಟುತಿದ್ದಾಳೆ..ಚೆನ್ನ,ಗಿರಿಜೆ ಅವಳ ಸಂಭ್ರಮ ಎಣಿಸಲಾಗದೇ ಮೂಕರಾಗಿದ್ದಾರೆ.. ಒಳಗಿನ ಬಿಸಿ ಬಿಸಿ ಕಾಫಿ ಅವನಿಗಾಗಿ ಕಾಯುತ್ತಿದೆ…
“ಅಮ್ಮಾವ್ರೇ.. ಕಡೆ ಬಸ್ ಆಗ್ಲೇ ಬಂತಲ್ವಾ? ಎಲ್ಲಿ ಯಜಮಾನಪ್ಪ”ಎನ್ನುತ್ತಾ ಕಾಫಿಯನ್ನು ತುಟಿಗೆ ಇರಿಸಿದ್ದ ಚೆನ್ನ..”ಬರ್ತಾರೆ ಬಿಡು ಚೆನ್ನ.. ಬಂದಿದ್ದೆ ಊರು ಹೊಡೆಯೋಕೆ ಹೋದ್ರು ಹೋಗಿಬಿಟ್ಟಾರು ನಿಮ್ಮ ಯಜಮಾನಪ್ಪ “ಎನ್ನುತ್ತಾ ಮತ್ತೆ ಗಂಟೆ ನೋಡುತ್ತಾಳೆ.ಅವಳಿಗೂ ತಳಮಳ.ದಾರಿಯಲ್ಲಿ ಅವನು ಬರುವ ಯಾವ ಗುರುತೂ ಇಲ್ಲ… “ಸಿಹಿಸುದ್ದಿ ಅಂತೆ.. ನಿಜನಾ ಅಮ್ಮಾವ್ರೇ”ಎಂದ ಗಿರಿಜೆಯ ಮಾತಿಗೆ ಏನೋ ಪ್ರತಿಕ್ರಿಯಿಸ ಹೊರಟವಳು ಏನೋ ತಡೆದವರಂತೆ ಮುಗುಳುನಕ್ಕು ಸುಮ್ಮನಾಗುತ್ತಾಳೆ.”ನನ್ನ ಬಗ್ಗೆ ಚಿಂತೆ ಬೇಡ ಜಾನು…ನಾನು ಬಂದೇ ಬರ್ತೇನೆ..ಮಿಲಿಟರಿ ಸೇರಿದ ಮೇಲೆ ಮದುವೆಗೆ ರಜೆ ತೆಗೆದುಕೊಂಡದ್ದು ಬಿಟ್ಟರೆ ಈಗಲೇ ರಜೆಗೆ ಅರ್ಜಿ ಹಾಕಿದ್ದು.ರಜೆ ಸಿಗುತ್ತದೆ.. ಕಾಯುತ್ತಿರು.. “ಎಂದು ಕರೆಯಲ್ಲಿ ಪಿಸುನುಡಿದವನ ಧ್ವನಿ ಏಕೋ ಇಂದಾಕೆಗೆ ಬಹಳ ಕಾಡುತ್ತಿದೆ..ಅದೇ ನಂಬಿಕೆ ಅವಳಿಗೆ.
ಕಾದು ಕಾದು ಸುಸ್ತಾಗಿ ಸೋಫಾ ಮೇಲೆ ಒರಗಿ ಕಣ್ಣು ಮುಚ್ಚುತ್ತಾಳೆ.ಒಳಗಿನ ಟಿವಿಯಲ್ಲಿ ದೊಡ್ಡದಾದ ಬ್ರೇಕಿಂಗ್ ನ್ಯೂಸ್… “ಪಾಕ್ ಜೊತೆಯ ಯುದ್ಧದಲ್ಲಿ ಕನ್ನಡಿಗನ ಪರಾಕ್ರಮ..ಇಪ್ಪತ್ತು ಉಗ್ರರನ್ನು ಹೊಡೆದು ಉರುಳಿಸಿದ ಕರ್ನಾಟಕದ ಯೋಧ ‘ಶ್ರೀರಾಮ್’ ವೀರ ಮರಣ”ಜಾನಕಿಯ ಕಿವಿ ನೆಟ್ಟಗಾದವು.ಹೃದಯ ಬಡಿತ ಕಿವಿಗೆ ಕೇಳಿಸುವಷ್ಟು ಹತ್ತಿರವಾಯಿತು.ಎದ್ದು ತಡಬಡನೆ ಒಳ ಕೋಣೆಯ ಹೊಕ್ಕಳು..ಮೈ ಕೈ ಬೆವರ ತೊಡಗಿತು.. ಉಸಿರು ನಿಯಂತ್ರಣ ತಪ್ಪಿತು. ಮೊಬೈಲ್ಗಾಗಿ ತಡಕಾಡಿದಳು.ಕಣ್ಣಲ್ಲಿ ನೀರು ಹರಿಯಿತು..ತಲೆ ಸಿಡಿಯ ತೊಡಗಿತು.. ಕೈಗೆ ಸಿಕ್ಕ ವಸ್ತುಗಳೆಲ್ಲ ಚದುರಿ ಹೋದವು..ಕಿವಿ ಹಿಡಿದು ಇನ್ನೇನು ಅರಚಿಕೊಳ್ಳಬೇಕು ಅಷ್ಟರಲ್ಲಿ ಕಾಲಿಂಗ್ ಬೆಲ್ ಸದ್ದಾಗಿತ್ತು.ಹೊರ ಬಂದವಳಿಗೆ ಕಂಡದ್ದು ಮಿಲಿಟರಿ ಉಡುಗೆಯಲ್ಲಿದ್ದ ಪತಿ.ಹೋದ ಜೀವ ಮರಳಿ ಬಂತು ಅವಳಿಗೆ.ಒಳಗೆ ಹುದುಗಿದ್ದ ದುಃಖದ ಕಟ್ಟೆ ಒಡೆಯದೇ ಸ್ವಲ್ಪ ಮುಖಕ್ಕೆ ನೀರು ರಾಚಿಕೊಂಡು ನಗುತ್ತಲೇ ಬಾಗಿಲು ತೆಗೆದಳು..
“ಯಾಕಿಷ್ಟು ತಡ.. ಎಷ್ಟು ಗಾಬರಿಯಾಗಿತ್ತು ಗೊತ್ತಾ? “ಎನ್ನುತ್ತಾ ಪತಿಯನ್ನು ಅಪ್ಪಲು ಹೊರಟವಳ ಅಲ್ಲಿಗೆ ತಡೆದ ಅವನು “ದೂರ ಇರು ಜಾನು..ನೋಡು ನನ್ನ ಮೈ ಕೆಸರಾಗಿದೆ.ಬರುವಾಗ ಸೊಮ್ಮಣ್ಣನ ತೋಟದಲ್ಲಿ ಕಾಣದೇ ಎಡವಿ ಬಿಟ್ಟೆ.. ಗಾಬರಿಯಾಗುವಂತದ್ದು ಏನಾಯ್ತು ಅಂತ?ನಾನೆಲ್ಲಿಗೆ ಹೋಗ್ತೀನಿ ನನ್ನ ಜಾನಕಿಯನ್ನು ಬಿಟ್ಟು.ಯುದ್ಧ ಭೂಮಿಯಲ್ಲಿ ಇಲ್ಲವೆಂದರೆ ಇಲ್ಲೇ ತಾನೇ ನಾನಿರುವುದು”ಎಂದು ಮುಗುಳು ನಕ್ಕಿದ್ದ.
ಪ್ರತಿ ನಕ್ಕವಳು “ಯಾವಾಗಲು ತಮಾಷೆನೇ ನಿಮ್ಗೆ..ನೀರು ಬಿಸಿ ಇದೆ ಹೋಗಿ ಸ್ನಾನ ಮಾಡಿ ಮೊದಲು ಎನ್ನುತ್ತಾ ಅಡುಗೆ ಕೋಣೆ ಹೊಕ್ಕಿದ್ದಳು. ಪ್ರೀತಿಯಿಂದ ಮಾಡಿ ಇರಿಸಿದ್ದ ಕಾಫಿ ತಣ್ಣಗಾಗಿತ್ತು.ಅದನ್ನು ಬಿಸಿಗೆ ಇಟ್ಟವಳು ‘ಹಾಳಾದ ಮೀಡಿಯಾಗಳು ರೀ.. ಒಂದೇ ಸಲ ಗಾಬರಿಪಡಿಸಿ ಬಿಟ್ವು. ಯುದ್ಧದಲ್ಲಿ “ಶ್ರೀರಾಮ್”ತೀರಿಕೊಂಡ ಎಂದು ಬ್ರೇಕಿಂಗ್ ನ್ಯೂಸ್ ಹಾಕಿದ್ದೇ ಹಾಕಿದ್ದು..ಒಂದೇ ಸಲ ಜೀವ ಹೋದ ಹಾಗಾಯ್ತು..”ಎನ್ನುತ್ತಿದ್ದವಳ ಸನಿಹ ನಿಂತನವ.. “ಜಾನು ನನ್ನ ಮದುವೆಯಾಗಿ ತಪ್ಪು ಮಾಡಿದೆಯ? “ಎಂದ ಶಾಂತನಾಗಿ.. “ಬಿಡ್ತು ಅನ್ನಿ ರೀ.ಹಾಗೆಲ್ಲ ಏನೂ ಇಲ್ಲಾ.. ಏಕೋ ಒಂದು ಕ್ಷಣ ಗಾಬರಿಆಯಿತಷ್ಟೇ “ಎಂದಳು ಅಷ್ಟೇ ನಮ್ರವಾಗಿ..
“ಹಾಗಲ್ಲ ಜಾನು.. ಇಷ್ಟು ದಿನ ಹೇಗೋ ಭಂಡನಾಗಿ ಬದುಕಿ ಬಿಟ್ಟೆ.ಹೇಳಿ ಕೇಳಿ ಮಾಡುವರಿರಲಿಲ್ಲ ನೋಡು..ಅಮ್ಮ ಹೋದ ಮೇಲೆ ದೇಶವನ್ನೇ ತಾಯಿ ಎಂದುಕೊಂಡೆ. ನನಗಲ್ಲಿ ಯಾವ ಚಿಂತೆಯೂ ಇರಲಿಲ್ಲ..ಆದರೆ ಈಗ ನಿನ್ನನ್ನು ಮದುವೆಯಾಗಿ ನಿನ್ನ ಬದುಕ ಕತ್ತಲಾಗಿಸಿಬಿಟ್ಟೆ ಎನಿಸುತ್ತ್ತಿದೆ.ಈಗ ನನಗಾಗಿ ಕಾಯುವ ಎರಡು ಜೀವಗಳಿವೆ.ನನ್ನ ಉಸಿರಿಗೆ ಗ್ಯಾರಂಟಿ ಇಲ್ಲದಿರುವಾಗ ನನ್ನ ನಂಬಿಕೊಂಡು ನೀನು ನನ್ನ ಕಂದ ಹೇಗೆ ಬದುಕುತ್ತೀರಿ. ಹೋದವನು ಮರಳಿ ಬರುವ ಎಂದು ಎಷ್ಟು ದಿನ ಕಾಯುತ್ತೀರಿ.?ನೋಡು ಜಾನು.. ಹಾಗೆಲ್ಲಾದರೂ ಬರದೇ ಹೋದರೆ ಯುದ್ಧಭೂಮಿಯಲ್ಲಿ ಇರುವನೆಂದು ಭಾವಿಸಿಬಿಡು.. ನನ್ನ ಖಾತೆಯಲ್ಲಿ ಒಂದಿಷ್ಟು ಹಣವಿದೆ.ನಮ್ಮ ಮಗುವಿನ ಭವಿಷ್ಯಕ್ಕೆ ಅಷ್ಟು ಸಾಕು.. ತೋಟ ಗದ್ದೆಗಳು ಹಾಗೇ ಇರಲಿ ಇಲ್ಲಿ ನಮ್ಮಿಬ್ಬರ ಮಧುರ ನೆನಪುಗಳಿವೆ..ಹೊಸ ಕಾರಿನ EMI ಒಂದು ಬಾಕಿ ಇದೆ.ಅದರ ಜವಾಬ್ದಾರಿ ನಿನಗೆ ಹೊರಿಸಿಬಿಡುತ್ತೇನೆ.ತಪ್ಪು ತಿಳಿಯಬೇಡ. ಬದುಕು ಪೂರ್ತಿ ನಾ ದೂರ ಹೋದರೆ, ನನ್ನಿಂದ ನೋವು ತಿಂದರೆ ಕ್ಷಮಿಸುವೆಯಲ್ಲ? “ಎಂದ ಕಣ್ಣು ತುಂಬಿಕೊಂಡು.

“ಯಾಕ್ರೀ ಸುಮ್ನೆ ಏನೇನೋ ಮಾತಾಡ್ತ ಇದ್ದೀರಿ?ಯಾರೂ ಮಿಲಿಟರಿಗೆ ಹೋಗಿಲ್ಲವ? ಕರ್ತವ್ಯ ಮುಗಿಸಿ ಹೆಂಡತಿ ಮಕ್ಕಳ ಜೊತೆ ಖುಷಿಯಾಗಿಲ್ಲವ? ನೋಡಿ ನಿಮಗೇನೂ ಆಗುವುದಿಲ್ಲ. ಯೋಚಿಸಬೇಡಿ… ನೋಡಿ ಆಗಲಿಂದ ನನ್ನ ಜೊತೆ ಈ ಕಾಫಿಯೂ ಕಾಯುತ್ತಿದೆ. ಸುಮ್ಮನೆ ಕುಡಿದು ಸ್ನಾನಕ್ಕೆ ಹೋಗಿ”ಎನ್ನುವಷ್ಟರಲ್ಲಿ ಮತ್ತೆ ಕರೆಗಂಟೆ ಭಾರಿಸಿತ್ತು..ಬಾಗಿಲು ತೆಗೆಯಲು ಜಗುಲಿಯತ್ತ ಬಂದವಳಿಗೆ “ನಾನು ಗರ್ಭಿಣಿ ಎಂಬ ವಿಷಯ ಇವರಿಗೆ ಹೇಗೆ ತಿಳಿಯಿತು.. ನಾನಿನ್ನೂ ಯಾರಿಗೂ ಹೇಳಲಿಲ್ಲವಲ್ಲ”ಎಂದು ತಿರುಗಿದವಳಿಗೆ ಅವನು ಕಾಣಿಸಲಿಲ್ಲ. ಸ್ನಾನದಿಂದ ಬಂದ ಮೇಲೆ ಕೇಳುವ ಎಂದುಕೊಂಡು ಬಾಗಿಲು ತೆರೆದಳು.ಇಬ್ಬರು ಯೋಧರು ಎದುರಲ್ಲಿ ನಿಂತಿದ್ದರು. ಇವಳಿಗೆ ನಮಸ್ಕರಿಸಿ “ಮೇಡಂ..ನಾವು ನಿಮ್ಮ ಪತಿಯ ಜೊತೆಗೆ ಕಾರ್ಯ ನಿರ್ವಹಿಸುತ್ತಿರುವುದು.ನಿಮ್ಮ ಪತಿ ಇಂಡಿಯಾ-ಪಾಕ್ ಯುದ್ಧದಲ್ಲಿ ಇಪ್ಪತ್ತು ಉಗ್ರಗಾಮಿಗಳನ್ನು ಹೊಡೆದುರುಳಿಸಿ ವೀರಮರಣ ಹೊಂದಿದ್ದಾರೆ.ನಿಮ್ಮ ಮೊಬೈಲ್ಗೆ ಆಗಲಿನಿಂದ ಕರೆ ಮಾಡುತ್ತಿದ್ದೇವೆ. ನೀವು ಪ್ರತಿಕ್ರಿಯಿಸಲಿಲ್ಲ..ಉಳಿಸಿಕೊಳ್ಳಲು ಪ್ರಯತ್ನಪಟ್ಟೆವು. ಆಗಲಿಲ್ಲ. ಕ್ಷಮಿಸಿ.ಇದನ್ನು ನಿಮಗೆ ನೀಡುವಂತೆ ಕಡೆ ಕ್ಷಣದಲ್ಲಿ ಅವರೇ ಹೇಳಿದ್ದರು. “ಎಂದರು. ಜಾನಕಿಗೆ ನೆಲ ಸೀಳಿದಂತೆ ಅನಿಸಿತು..

ಎಲ್ಲವೂ ಅಯೋಮಯ “ಬಹುಶಃ ತಪ್ಪು ತಿಳಿದಿದ್ದೀರಿ. ಅವರು ಆಗಲೇ ಮನೆಗೆ ಬಂದರು.ಇಲ್ಲೇ ಇದ್ದಾರೆ ಇರಿ ಕರೆಯುತ್ತೇನೆ ಎಂದು ಒಳ ಓಡಿದಳು.. ಅಡುಗೆ ಕೋಣೆಯಲ್ಲಿ ಅವನಿಲ್ಲ.. ಬಚ್ಚಲಿನಲ್ಲೂ ಅವನ ಸುಳಿವಿಲ್ಲ..ಅವನು ಮೆತ್ತಿಕೊಂಡು ಬಂದ ಕೆಸರ ಹೆಜ್ಜೆಗಳ ಗುರುತೂ ಇಲ್ಲ ಕಣ್ಣು ತುಂಬಿಕೊಂಡಿತು.. “ರೀ…. ರೀ…… “ಎಂದು ಮನೆ ತುಂಬಾ ಹುಚ್ಚಿಯಂತೆ ಕೂಗಿದಳು..ಅವನು ನನ್ನನ್ನು ಮುಟ್ಟಬೇಡ ಎಂದದ್ದೂ, ಮಗುವಿನ ಕುರಿತು ಮಾತಾಡಿದ್ದೂ,ಹಣದ ವಿಚಾರ ತೆಗೆದದ್ದೂ ಎಲ್ಲಾ ಈಗ ಅವಳಿಗೆ ನಡುಕ ಹುಟ್ಟಿಸಿತ್ತು. ಟಿ. ವಿ ಕೋಣೆಗೆ ಬಂದಾಗ ಟಿ. ವಿ ಪರದೆಯ ಮೇಲೆ ವಾರ್ತೆ ಇನ್ನೂ ಮುಗಿದಿರಲಿಲ್ಲ… “ಶ್ರೀರಾಮ”ನ ಭಾವಚಿತ್ರ ಈಗ ಅಲ್ಲಿ ತಳುಕು ಹಾಕಿ ಕೊಂಡಿತ್ತು.ಸಂಜೆಯಷ್ಟರಲ್ಲಿ ಶ್ರೀರಾಮನ ಪಾರ್ಥೀವ ಶರೀರ ಹುಟ್ಟೂರಿಗೆ. ಎಂದು ವರದಿ ನೀಡಿತ್ತು..ಕೈ ಕಾಲಿನ ಶಕ್ತಿ ಕುಂದಿದಾಗ ಮತ್ತೆ ಬಾಗಿಲ ಬಳಿ ಓಡಿದಳು. ಯೋಧರಿನ್ನೂ ಅಲ್ಲೇ ನಿಂತಿದ್ದರು.ಅವಳಿಗೆ ಸಲಾಂ ಹೊಡೆದು ಶ್ರೀರಾಮ ಕೊಡಲು ಹೇಳಿದ್ದ ಕಾಗದಪತ್ರಗಳನ್ನು ಅವಳ ಕೈಗೆ ಇರಿಸಿ ಅಲ್ಲಿಂದ ತೆರಳಿದರು.ದೂರದಲ್ಲಿ ಆಕೆಯ ಅಪ್ಪ ಅಮ್ಮ ಬರುತ್ತಿರುವ ಸೂಚನೆ ಕಂಡಿತು.ಆಕೆ ಅವರು ಕೊಟ್ಟಿದ್ದ ಚೀಲ ಬಿಡಿಸಿದಳು. ಅವನ ಬ್ಯಾಂಕ್ ಖಾತೆಪತ್ರಗಳು ಅಲ್ಲಿದ್ದದ್ದು.. ದುಃಖ ಬಿರಿಯಿತು… ಕೂಗಿದಳು.. ಅಲ್ಲೇ ಕುಸಿದಳು. ಟಿವಿಯಲ್ಲಿ ‘ವಂದೇ ಮಾತರಮ್ ‘ಹಾಡು ಜೋರಾಗಿ ಕೇಳಿತ್ತು..ಗರ್ಭದಲ್ಲಿ ಅವನ ಕುಡಿ ಹೊರಳಾಡಿತ್ತು.. ಮನೆ ತುಂಬಾ ಜನರು ಸೇರಿದರು.. ಅವಳು ನಿರ್ಲಿಪ್ತಳಾಗಿ ಕೂತೇ ಇದ್ದಳು.. ಅಡುಗೆ ಮನೆಯ ಕಾಫಿ ಕಾಯುವಿಕೆಗೆ ಅಂತಿಮ ವಿದಾಯ ಹೇಳಿತ್ತು….

ಶಿಲ್ಪಾ ಪೂಜಾರಿ
BA 3rd year
ಪತ್ರಿಕೋದ್ಯಮ ವಿಭಾಗ
ಎಂ. ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ. ಶಿರಸಿ

Share12Tweet7SendShareShare
Next Post
ಒಂದು ನಾಣ್ಯದ ಕಥೆ …

ಒಂದು ನಾಣ್ಯದ ಕಥೆ ...

Leave a Reply Cancel reply

Your email address will not be published. Required fields are marked *

Recommended

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಕಾಶಿಯ ಡೋಮ್‌ ಜನರು; ಅಂತ್ಯ ಸಂಸ್ಕಾರವೇ ಬದುಕು

ತಾಯ್ನೆಲದಲ್ಲೇ ನಿರಾಶ್ರಿತರಾದ ಕಾಶ್ಮೀರಿ ಪಂಡಿತರ ಕಥೆ-ವ್ಯಥೆ!

ತಾಯ್ನೆಲದಲ್ಲೇ ನಿರಾಶ್ರಿತರಾದ ಕಾಶ್ಮೀರಿ ಪಂಡಿತರ ಕಥೆ-ವ್ಯಥೆ!

ಶ್ರಾವಣ ಬಂತು…

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಹೂ ಮತ್ತು ಹುಡುಗಿ

ಹೂ ಮತ್ತು ಹುಡುಗಿ

ಕಚ್ಚುವ ನಾಯಿಗೆ ಬಿರಿಯಾನಿ, ಹಾಲು ಕೊಡುವ ದನಗಳಿಗೆ ಹುಲ್ಲಿಲ್ಲ!

ಕಚ್ಚುವ ನಾಯಿಗೆ ಬಿರಿಯಾನಿ, ಹಾಲು ಕೊಡುವ ದನಗಳಿಗೆ ಹುಲ್ಲಿಲ್ಲ!

ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು

ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು

Translate »
No Result
View All Result
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ

© 2026 JNews - Premium WordPress news & magazine theme by Jegtheme.