ಟೆಕ್ಕಿ ಅತುಲ್ ಆತ್ಮಹತ್ಯೆ ಪ್ರಕರಣ ವಿಚ್ಛೇದನದ ಬಗೆಗೆ ಹೊಸ ಚರ್ಚೆಯನ್ನೇ ಹುಟ್ಟುಹಾಕಿದೆ. ಕಾನೂನು ದುರುಪಯೋಗಪಡಿಸಿಕೊಂಡು ಭಾರೀ ಮೊತ್ತದ ಜೀವನಾಂಶ ಕೇಳುವುದು ಫ್ಯಾಶನ್ ಆಗಿಹೋಗಿದೆ. ವಿಚ್ಛೇದನವೇ ಇದಕ್ಕೆಲ್ಲ ಮೂಲಕಾರಣ. ಈ ಮನೋರೋಗಕ್ಕೆ ಮದ್ದಿಲ್ಲವೇ?
***
ಇತ್ತೀಚೆಗೆ ಬಿಗ್‌ಬಾಸ್‌ಮೂಲಕ ಪರಿಚಯವಾಗಿ, ಮದುವೆಯೂ ಆಗಿದ್ದ ಸೆಲೆಬ್ರಿಟಿ ದಂಪತಿ ವಿಚ್ಛೇದನ ಪಡೆದುಕೊಂಡರು. ದೊಡ್ಡ ಕುಟುಂಬದ ಯುವ ದಂಪತಿಯ ವಿಚ್ಛೇದನ ಸುದ್ದಿ ಸುಳಿದಾಡಿತು. ವಿವಾದಿತ ಸ್ಟಾರ್‌ನಟನ ಪತ್ನಿ ಇತ್ತೀಚೆಗೆ ವಿಚ್ಛೇದನ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಸೆಲೆಬ್ರಿಟಿಗಳ ವಿಚ್ಛೇದನ ಸುದ್ದಿ. ಆದರೆ ಸಾಮಾನ್ಯ ಮನುಷ್ಯರ ಜೀವನದಲ್ಲೂ ಅಂಥ ಕಲ್ಲೋಲದ ಅಲೆಗಳು ಸರ್ವೇಸಾಮಾನ್ಯವಾಗುತ್ತಿದೆ. ನಗರಜೀವನದಲ್ಲಂತೂ ದೂರಾಗುವ ಹೇರಳ ಅವಕಾಶಗಳು ಸೆಳೆಯುವುದರಿಂದ ಮಧ್ಯಮವರ್ಗ ಅದರ ಸುಳಿಗೆ ಸಿಲುಕಿದೆ.
ಅಮೆರಿಕದಲ್ಲಿ ೧೦೦೦ ಮದುವೆಗಳಲ್ಲಿ ೫೦೦ ಮದುವೆಗಳು ವಿಚ್ಛೇದನದಲ್ಲಿ ಕೊನೆಗೊಳ್ಳುವುದು ಸಾಮಾನ್ಯ. ಆದರೆ ಕೌಟುಂಬಿಕ ವ್ಯವಸ್ಥೆ ಭದ್ರವಾಗಿದೆ ಎನ್ನಲಾದ ಭಾರತದಲ್ಲಿ ೧೦೦೦ ಮದುವೆಗಳಲ್ಲಿ ೧೧ ಮದುವೆ ವಿಚ್ಛೇದನವಾಗುತ್ತಿದೆ. ಬೆಂಗಳೂರಿನಲ್ಲಿ ಪ್ರತಿವರ್ಷ ೨೦೦೦ ದಿಂದ ೩೦೦೦ ವಿಚ್ಛೇದನಗಳು ಆಗುತ್ತಿವೆ. ಅಷ್ಟೇ ಸಂಖ್ಯೆಯ ವಿಚ್ಛೇದನದ ಹೊಸ ಅರ್ಜಿಗಳು ಕೌಟುಂಬಿಕ ನ್ಯಾಯಾಲಯದಲ್ಲಿ ದಾಖಲಾಗುತ್ತಿವೆ. ಈ ಕುರಿತು ಅಧ್ಯಯನ ನಡೆಸಿರುವ ಬೆಂಗಳೂರು ವಿಶ್ವವಿದ್ಯಾಲಯ ಸಮಾಜಶಾಸ್ತ್ರ ವಿಭಾಗದ ಸಂಶೋಧಕ ರಾಮಚಂದ್ರಪ್ಪ ಎಸ್. ಕೈಗಾರಿಕೀಕರಣ, ನಗರೀಕರಣ, ವಲಸೆ ಹಾಗೂ ಸಮೂಹ ಮಾಧ್ಯಮಗಳ ಕ್ರಾಂತಿ ಮದುವೆ ಹಾಗೂ ವಿಚ್ಛೇದನ ಎಂಬ ಪರಿಕಲ್ಪನೆಯ ಮೇಲೆ ಅಗಾಧ ಪ್ರಭಾವ ಬೀರಿವೆ. ಸ್ವಯಂ ಕೇಂದ್ರಿತ ದೃಷ್ಟಿಕೋನ, ಪಾಶ್ಚಾತ್ಯ ಶೈಲಿಯ ಕುರುಡು ಅನುಕರಣೆ ಸಲೀಸಾಗಿ ಯುವ ಜೋಡಿಗಳನ್ನು ವಿಚ್ಛೇದನದೆಡೆಗೆ ಕೊಂಡೊಯ್ಯುತ್ತಿವೆ. ಋಣಾನುಬಂಧ, ಬಿಡಿಸಲಾಗದ ಅನುಬಂಧ, ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂದೆಲ್ಲ ನಂಬಿದ್ದ ಸಮಾಜದಲ್ಲಿ ಮದುವೆ ಕೇವಲ ಒಂದು ಒಪ್ಪಂದದ ಹಂತಕ್ಕೆ ಬಂದು ನಿಲ್ಲುತ್ತಿದೆ ಎಂದು ದಾಖಲಿಸಿದ್ದಾರೆ.
ಮೂರ್ನಾಲ್ಕು ದಶಕಗಳ ಹಿಂದೆ ಜನಸಂಖ್ಯಾ ನಿಯಂತ್ರಣ ಆಂದೋಲನ ವ್ಯಾಪಕವಾಯಿತು. ಅಂದಿನಿಂದ ದಂಪತಿಗಳು ಬಹುತೇಕ ಒಂದು ಮಗು ಅಥವಾ ಎರಡು ಮಗು ಮಾತ್ರ ಪಡೆಯುವುದಕ್ಕೆ ಸೀಮಿತಗೊಳಿಸಿಕೊಳ್ಳತೊಡಗಿದರು. ಆ ಮಕ್ಕಳನ್ನು ಬೆಳೆಸುವಾಗ ಸಹಬಾಳ್ವೆ ಕಲಿಸಲು ಬಹುತೇಕರು ಮರೆತರು. ತಾನು, ತನ್ನ ಮನೆ, ತನ್ನ ಗಂಡ, ತನ್ನ ಹೆಂಡತಿ ಮಕ್ಕಳು ಎಂಬ ಛಿದ್ರ ಕುಟುಂಬದ ಮನಸ್ಥಿತಿ ಹೋಗಿ ತಾನು, ತನ್ನ ಇಷ್ಟ, ತನ್ನ ಆಕಾಂಕ್ಷೆ, ತನ್ನ ಮರ್ಜಿ ಎಂಬ ಸ್ವಯಂಕೇಂದ್ರಿತ ಅತಿಚ್ಛಿದ್ರ ಹಂತಕ್ಕೆ ಇಳಿದಿದೆ.
ಕೆಲವೆಡೆ ಆಸ್ತಿಗೋಸ್ಕರ ಮದುವೆಯಾಗಿ ವಿಚ್ಛೇದನ–ಪರಿಹಾರ ಪಡೆದ ಪ್ರಕರಣವೂ ಉಂಟು. ಪ್ರೀತಿಸಿ ಮದುವೆಯಾದ ದಂಪತಿಗಳು ಬೇಗ ವಿಚ್ಛೇದನಕ್ಕೆ ಒಳಗಾಗುತ್ತಿರುವುದು ಅಚ್ಚರಿಯಾದರೂ ಸತ್ಯ. ಕಾರ್ಪೊರೇಟ್ ಹಾಗೂ ಐಟಿ ಕ್ಷೇತ್ರದಲ್ಲಿ ಊಹಿಸಲಾಗದ ಸರಳ ಕಾರಣಗಳಿಗೆ ವಿಚ್ಛೇದನಗಳು ಹೆಚ್ಚುತ್ತಿವೆ. ಇತ್ತೀಚೆಗೆ ಹಳ್ಳಿಗಳಲ್ಲೂ ʻಡೈವರ್ಸಂತೆʼ ಕೇಳಿಬರುತ್ತಿದೆ. ವಿಚ್ಛೇದನ ಮನೋರೋಗವಾಗಿ ಹಬ್ಬುತ್ತಿದೆ.
ವಿಚ್ಛೇದನವನ್ನು ಕಾನೂನಿನಿಂದ ನಿಯಂತ್ರಿಸಲು ಸಾಧ್ಯವಿಲ್ಲ. ಮಠಮಾನ್ಯಗಳು ಆಯಾ ಸಮುದಾಯದ ಕೌಟುಂಬಿಕ ಬಂಧವನ್ನು ಕಾಯಲು ಉಪಕ್ರಮ ತೆಗೆದುಕೊಂಡರೆ ಒಂದಿಷ್ಟು ಪ್ರಯೋಜನವಾದೀತು. ಈ ನಿಟ್ಟಿನಲ್ಲಿ ಶಿರಸಿಯ ಸೋಂದಾ–ಸ್ವರ್ಣವಲ್ಲಿ ಮಹಾಸಂಸ್ಥಾನದ ʻಹಸಿರು ಸ್ವಾಮೀಜಿʼ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹಲವು ವರ್ಷಗಳಿಂದ ʻಧನ್ಯೋ ಗೃಹಸ್ಥಾಶ್ರಮʼ ಶಿಬಿರ ಹಮ್ಮಿಕೊಳ್ಳುತ್ತ ಬಂದಿದ್ದಾರೆ. ಹೊಂದಿಕೊಳ್ಳಲಾಗದ ಪರಿಸ್ಥಿತಿ ಬಂದರೂ ಒಂದು ಸಣ್ಣ ವಿವೇಚನೆ ಹಾಗೂ ತ್ಯಾಗಬುದ್ಧಿ ವಿಚ್ಛೇದನವನ್ನು ತಡೆಯಬಹುದು ಎಂದು ಪ್ರತಿಪಾದಿಸುತ್ತಾರೆ ಸ್ವಾಮೀಜಿ. ವಿಚ್ಛೇದನ ಪ್ರಕರಣ ಹೆಚ್ಚುತ್ತಿರುವುದರಿಂದ ಸಮಾಜ ಶಿಥಿಲವಾಗುತ್ತ ಹೋಗಿ ಮುಂದೆ ದೊಡ್ಡ ಅಪಾಯದಲ್ಲಿ ಭಾರತೀಯ ಸಮಾಜ ಸಿಲುಕುತ್ತದೆ ಎಂಬ ಮುನ್ನೆಚ್ಚರಿಕೆ ನೀಡುತ್ತಾರವರು. ಸಮುದಾಯದ ಗಣ್ಯರು ಈ ಕಾರ್ಯಕ್ರಮಕ್ಕೆ ಬೆಂಬಲ ನೀಡುತ್ತ ಬಂದಿದ್ದು, ಸಮಾಜದ ಬಂಧ ಗಟ್ಟಿಗೊಳಿಸುವ ಕಾರ್ಯ ಇತರರಿಗೂ ಮಾದರಿಯಾಗಿದೆ ಎನ್ನಬಹುದು.
- ನರಸಿಂಹ ಎನ್. ಹೆಗಡೆ ಆರೆಕಟ್ಟು









